ಅದೆಷ್ಟೋ ಸಣ್ಣ ದೊಡ್ಡ ಚಿತ್ರ ವಿಚಿತ್ರ
ಆಕಾರದ ಸಂಖ್ಯೆಗಳು ಮುಖಬಲೆಗಳು,
ಸ್ಥಾನಬೆಲೆಗಳು ಗೋಜಲಿನ ಗೂಡನ್ನು
ಕಂಡಾಗಲೆಲ್ಲಾ ವತರ್‍ತುಲಾಕಾರದ ಭೂಮಿತೂಕದ
ಶೂನ್ಯಕ್ಕೆ ಶರಣಾಗುತ್ತದೆ ಮನ.

ಅಸ್ಮಿತೆಯ ಹಂಗೇ ಇಲ್ಲದೇ
ಮನೆಯಂಗಳದ ಮೂಲೆಯಲ್ಲಿ
ಅಡಿಕೆ ಸಿಪ್ಪೆ ಸುಲಿಸುಲಿದು
ಒಟ್ಟುಮಾಡುವ ಪಾರೋತಿ,
ನೆನಪಾಗುತ್ತ ನೆಲದ ಚಿಗುರೇ
ಅವಳಾದಂತೆ ಕನಸು
ಅಪ್ಪಟ ಮುಖವನ್ನೊಮ್ಮೆ ಮುದ್ದಿಸಬಯಸುತ್ತದೆ ಮನ.

ತ್ರಿಕರಣ ಶುದ್ಧತೆ ಪದ ಕೇಳದೆಯೂ
ಅದರ ತಾದ್ಯಾತ್ಮಸ್ವರೂಪಿಯೇ
ಆದ ಮಾದ
ತೆಂಗಿನಕಾಯಿ ಸಿಪ್ಪೆ ಸುಲಿಸುಲಿದು
ತೆಗೆಯುತ್ತಾ ಆಗಾಗ ಹೂಂಕರಿಸುತ್ತಾ
ಕತ್ತಿಯ ಸಿದ್ಧಿಯಲ್ಲಿ ತನ್ಮಯನಾಗುತ್ತಿದ್ದುದು
ನೆನಪಾಗುತ್ತ
ಅವನೆಂದರೆ ಬೆಳಕಿನ ಪುಂಜ ಎನ್ನಿಸುತ್ತದೆ.
ಆ ಕತ್ತಿಯ ಸಿದ್ಧಿಯ ಕರಗತಕ್ಕೆಳೆಸುತ್ತದೆ ಮನ

ಕೊಡಲೇನೂ ಇಲ್ಲ,
ಕಣ್ಣ ಮಧುರ ಮೈತ್ರಿಯ ಕಂಪು ಬಿಟ್ಟು
ಇಲ್ಲದ ಕಡೆಗಳಲ್ಲಿ ಅರಳುವ ಹೃದಯದ ಪರಿಮಳ
ಚಕ್ಷುವಿನ ಕಾಂತಿಗೆ ಬೆರಗಾಗುತ್ತದೆ ಮನ.

ತಳತಳಿಸುವ ಬೂಟು ಶೂಗಳ
ತೊಟ್ಟ ಪಾರಿನ್ ರಿಟರ್ನ್‍ಡ್ಗಳ
ವಿಚಿತ್ರ ಅಕ್ಸೆಂಟ್ಗಳ ಭಯಂಕರ ಹಾವಭಾವದ
ಮೈಕುಣಿತದ ಭಾಷೆಗಳ ನೋಡುತ್ತಾ
ಸುಖಾತೀಸುಖದ ಸಂಭ್ರಮ ಹೊತ್ತ
ಮುಖಗಳ ಒಳಮುಖದ ಅಡಿಯಲ್ಲಿ
ಮೂಡುವ ಜಂಬದ ಬೀಜ
ಬೃಹದಾಕಾರವಾಗುತ್ತ
ಸಹನೆಯ ಕಟ್ಟೆ
ಒಡೆದುಹೋದ ಆಣೆಕಟ್ಟಾಗುತ್ತದೆ.

ಅವರವರ ಭಂಗಿಯ
ಭಂಗಿತನಕ್ಕೆ ಕೆರಳುತ್ತಲೇ
ಅಪ್ಪಟ ದೇಸಿ, ದೈನೇಸಿಗಾಗಿ ಹಂಬಲಿಸುತ್ತದೆ ಮನ
*****