ಅವರೆಲ್ಲಿದ್ದಾರೆ ಈಗ? ಕಾಲ ಕಾಲಕ್ಕೆ ನನ್ನೆದೆಯ
ತಿದಿಯೊತ್ತಿ ಜೀವಕ್ಕೆ ಜೀವ ಕೊಡುತಿದ್ದವರು?
ಕೆಲವರಿದ್ದರು ಕಾಸರಗೋಡಿನ ಹಳೆಮನೆಗಳಲ್ಲಿ
ದೀಪಗಳಂತೆ ಉರಿಯುತ್ತ-ಇನ್ನು ಕೆಲವರು
ತಿರುವನಂತಪುರದಲ್ಲಿ, ತೀರ ಕೊನೆಯವಳು
ಬಾರ್ಸಿಲೋನಾದ ಯಾವುದೋ ಬೀದಿಯಲ್ಲಿ

ಈಗೆಲ್ಲಿಯೆಂದು ಹೇಳುವುದು ಹೇಗೆ-ಒಬೊಬ್ಬರಿಗು
ಕೊನೆಯ ಪತ್ರ ಬರೆದು ಎಷ್ಟೋ ಕಾಲವಾಗಿದೆ.
ಅವರ ವಿಳಾಸಗಳನ್ನೂ ಹರಿದು ಹಾಕಿದ್ದೇನೆ-
ಅಚಾನಕವಾಗಿ ಎಂದಾದರೂ ಎದುರು ಸಿಕ್ಕಿದರೆ
ಅವರ ಮುಖ ಕೆಂಪಾಗುತ್ತದೆ, ಹೆಜ್ಜೆ ತಡವುತ್ತದೆ,
ಕೈಚೀಲ ಕೆಳಗೆ ಬೀಳುತ್ತದೆ-ಎಂಬ ಭ್ರಮೆ ನನಗಿಲ್ಲ.

ಒಬ್ಬಳಿದ್ದಳು ದೈವವಿಶ್ವಾಸಿ-ಪ್ರೇಮದಲ್ಲಿ ತನ್ನ
ದೈವವನ್ನು ಕಾಣಬೇಕೆನ್ನುತ್ತಿದ್ದಳು, ಇನ್ನೊಬ್ಬಾಕೆ
ಕ್ರಾಂತಿಕಾರಿಣಿ ಇಡಿಯ ಸಮುದಾಯವನ್ನೆ ತಿದ್ದಲೆಳಸಿದ್ದಳು;
ಮಗದೊಬ್ಬಳು ಕನಸುಗಾರ್ತಿ, ಎಲ್ಲ ಕಡೆಯೂ ತನ್ನ
ಪ್ರತಿಬಿಂಬಗಳನ್ನೆ ಕಾಣುತಿದ್ದಳು-ನನ್ನ ಮಾನಸದಲ್ಲಿ
ಒಬ್ಬರ ಮೇಲೊಬ್ಬರಂತೆ ಅಲೆಯೆಬ್ಬಿಸಿ ಹೋದರು

ಕೈಗೊಳ್ಳಲೆ ನಾನೊಂದು ತೀರ್ಥಯಾತ್ರೆ. ಒಬ್ಬೊಬ್ಬರನು
ಹುಡುಕುತ್ತ ಅರಿಯದ ಪ್ರದೇಶಗಳಲ್ಲಿ ಅಪರಿಚಿತ ದೇಶಗಳಲ್ಲಿ
ಅವರಿವರ ಕೇಳುತ್ತ ತೋಚಿದ ಕಾರಣಗಳ ಕೊಡುತ್ತ
ಸಂತೆ ಸೇರಿದಲ್ಲಿ ಸೇರಿ ರಾತ್ರಿಗೆ ಮೊದಲೆ ಹರದಾರಿ ಸಾಗಿ
ಕತ್ತಲಾದಲ್ಲಿ ಮಲಗಿ ಮುಂಜಾವದ ಬೆಳಕಿನಲ್ಲಿ ನಡೆದು
ಕಾಣುವೆನೆ ನಾನು ಕಾಣಬೇಕೆಂದು ಬಯಸಿದವರ?

ಗುರುತು ಬದಲಾಗಿರಬಹುದೆ? ಮಕ್ಕಳಾಗಿರಬಹುದೆ?
ಮೈಮನಸ್ಸಿನ ಬಿಗಿತ ಸಡಿಲಗೊಂಡಿರಬಹುದೆ?
ಹಳೆಯ ಹಟಗಳನೀಗ ಬಿಟ್ಟುಕೊಟ್ಟಿರಬಹುದೆ ?
ಗತಕಾಲದ ನೆನಪು-ಹೂವಿನಂತಹ ಕದಪು
ಜರ್ಜರಿತವಾಗಿರಬಹುದೆ ಇನ್ನೆಂದು ಮರುಕಳಿಸದಂತೆ
ಬೇರೆ ಗಂಡಸರ ನಿರಂಕುಶ ಪ್ರಭುತ್ವಕ್ಕೆ ಸಿಕ್ಕು?

ಹೀಗೊಂದು ಬೀದಿಯಲಿ ಕಂಡೆನೊಬ್ಬಳನೆನಿಸಿ
ಬದಿಯ ಹೋಟೆಲ ಹೊಕ್ಕು ದಿಕ್ಕು ತೋಚದೆ ಕುಳಿತೆ.
ಕುಳಿತಿದ್ದನೊಬ್ಬಾತ ಇಳಿವಯಸ್ಕ ಅನ್ಯಮನಸ್ಕ
ಗುಳಿಬಿದ್ದ ಕಣ್ಣುಗಳ ಹಾಯಿಸಿ ಬೀದಿಯ ಕಡೆಗೆ
ಹಾಯುತಿದ್ದುವು ಅವನ ಮುಖದ ಸುಕ್ಕುಗಳ ಮೇಲೆ
ಎಷ್ಟೋ ಚಿತ್ರಗಳ ಸರಮಾಲೆ ಎಷ್ಟೋ ಸಮುದ್ರಗಳ ಅಲೆ
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)