ಪತ್ರ – ೫

ಪತ್ರ – ೫

ಪ್ರೀತಿಯ ಗೆಳೆಯಾ,

ಆಶಾಢದ ಜೋರಾದ ಗಾಳಿ, ಮಳೆ ಇಲ್ಲ. ಆದರೆ ರಾಜ್ಯದ ಎಲ್ಲಾ ಡ್ಯಾಮ್ಗಳು ತುಂಬಿ ಹರಿದು ಪಕ್ಕದಲ್ಲಿದ್ದವರನ್ನು ಅಸ್ತವ್ಯಸ್ಥೆ ಮಾಡಿದೆ. ಚಿಕೂನಗುನ್ಯಾದ ಕಪಿ ಮುಷ್ಠಿಯಲ್ಲಿ ಇಡೀ ಊರು ಮುಳಗಿದೆ. ಶಾಲೆಯ ಮಕ್ಕಳ ಹಾಜರಾತಿ ಕೂಡಾ ಕಡಿಮೆ ಆಗಿದೆ. ಸರದಿ ಮೇಲೆ ಟೀಚರ್ ರಜೆ ತೆಗೆದುಕೊಂಡಿದ್ದಾರೆ. ನಮ್ಮೂರ ದಾವಾಖನೆಯಲ್ಲಿ ನರ್ಸಿಂಗ ಹೋಮಿನಲ್ಲಿ ರೋಗಿಗಳನ್ನು ಮಲಗಿಸಲು ಜಾಗಾಸಾಲದೇ, ಲಾಜಿಂಗ ಹಿಡಿದು ರೋಗಿಗಳನ್ನು ದಾಖಲು ಮಾಡಿದ್ದಾರೆ. ಮಜಾ ಅಂದರೆ ಎಲ್ಲರ ಮುಖದಲ್ಲೂ ಪ್ರೇತಕಳೆ. ಡಾಕ್ಟರ್ಗಳಿಗೆ ಸುಗ್ಗಿ ಹಿಗ್ಗು. ಎಲ್ಲರಿಗೂ ಪ್ರಾಣ ಸಂಕಟ. ಆದರೆ ಯಾರೂ ಈ ಜಡ್ಡಿನಿಂದ ಸತ್ತಿಲ್ಲ. ನಡೆಯಲು ಆಗುವುದೇ ಇಲ್ಲದಂತೆ. ಚಲನೆಯ ಗತಿ ನಿಂತರೆ ಹೇಗೆ ಗೆಳೆಯಾ?

ನಾನು ಮಾತ್ರ ಮಲಗಿದಲ್ಲಿಂದಲೇ ನೀಲಿ ಆಕಾಶದ ತುಂಬ ತಾರಾಮಂಡಲದ ತುಂಬ, ಹಕ್ಕಿಹಾಡುಗಳ ಒಡಗೂಡಿ ಹಾರುತ್ತೇನೆ. ಹಾರುತ್ತೇನೆ, ನಿಧಾನವಾಗಿ ಪ್ರತಿದಿನ ಚಲಿಸುವ ವಿಮಾನಗಳ ರೆಕ್ಕೆಯ ಮೇಲೆ ಕುಳಿತು, ಹಾರುತ್ತೇನೆ ಮೆಲುವಾಗಿ ಸ್ಪಟಿಕದ ಬೆಚ್ಚನೆಯ ಕಿರಣಗಳ ಮಧ್ಯೆ, ನಾನು ಹಾರುತ್ತಲೇ ಇದ್ದೇನೆ ಏಕಾಂತದಲ್ಲಿ, ಲೋಕದ ಎಲ್ಲಾ ಜಂಝಡಗಳ ದಾಟಿ ಮೆಲ್ಲಗೆ ಬಟ್ಟ ಬಯಲಿನಲ್ಲಿ ಚಿಟ್ಟೆಯಂತೆ ಹಾರಲು ಆಗದಿದ್ದರೆ ಏನಂತೆ. ನನಗೆ ಹಾರಲು ಬರುತ್ತದೆ. ದೋಸ್ತ.

ಕನಸುಗಳು ಹೆಚ್ಚಿದ ರಾತ್ರಿ
ಕಪ್ಪು ಕಾಡಿಗೆ ಕಣ್ಣುಗಳಿಗೆ
ಮರದಲ್ಲಿ ಸದ್ದಿಲ್ಲದೇ ಅರಳಿದ
ಹಸಿರು ಸೇರಿ ಅರಸುತ್ತ ಅಲೆಯುತ್ತ
ಹೊರಳಾಡಿ ಮೂಕ ಮರ್ಮದ ಹಾಸಿಗೆಯಲ್ಲಿ
ದಪ್ಪಗಾಜಿನ ಕಿಟಕಿಯಾಚೆಯ
ಚಿಕ್ಕಿಗಳು ಗೋಚರಿಸುತ್ತವೆ ಗೊಂದಲದಲಿ.

ಜಡ್ಡಿಗೆ ಬಿದ್ದಾಗ ಮಲಗಿದಾಗ ಎಷ್ಟೊಂದು ನೆನಪುಗಳು ಎದೆಗೆ ಅಮರತ್ತವೆ. ಜ್ವರದ ಅಮಲಿಗೆ ತೇಲುವ ಕಣ್ಣುಗಳಿಗೆ ಎಷ್ಟೊಂದು Visions. ಬಚ್ಚಲ ಮನೆಯ ಹಿಂದೆ ಸರಿಗೆ ಮೇಲಿದ್ದ ಸೀರೆ ಜಂಪರುಗಳು, ತೊಳೆಯಬೇಕಾದ ತಾಟು ಲೋಟಗಳು, ಸಂತೆಯಲ್ಲಿ ಕಾಣಿಯಾದ ಗೆಳತಿಯರ ಮುಖಗಳು, ಆತನೋ ಈತನೋ ದಯಪಾಲಿಸಿದ ಪ್ರೇಮ ಚಿತ್ರಗಳು, ಸಂದಿಯಲ್ಲಿ ಓಡಿಹೋದ ಮಕ್ಕಳು, ಯಾವ ರಾಜಕುಮಾರನ ಗಲ್ಲದ ಗುಳಿಯಲ್ಲಿ ನಲುಗಿದ ಒಲವು, ಬಾಯಿರುಚಿ ಹಾಳು ಮಾಡಿಕೊಂಡು ಮನಸ್ಸಿಗೆ ಬೆಂಕಿಹಚ್ಚಿಕೊಂಡು ಉರಿಯುವ ಕ್ಷಣ, ಮಡಿವಂತಿಕೆ ಗೊಡ್ಡುತನ ಎಲ್ಲವೂ ಕಾಡುತ್ತವೆ. ಆದರೆ ಇತರರಿಗೆ ಕಾಣುವದಿಲ್ಲ. ಮನೆಯಲ್ಲಿ ಎಲ್ಲರೂ ಇದ್ದು ಇಲ್ಲದವರಂತೆ ಅನಾಮಿಕತೆ ಈ ರೋಗದ ಪರ್ವದಲ್ಲಿ ಮತ್ತೆ ಯಾರದೋ ಕೈ ಮೆಲ್ಲಗೆ ತಲೆ ನೇವರಿಸಿದಾಗ

ಹೂವು ತುಂಬಿದ ಮರದ ಅಡಿ
ಹಾಸಿವೆ ಉದುರಿದ ಫಲಕುಗಳು
ನೆನಪುಗಳ ದಿವ್ಯತೆ ಗಂಧವಾಗಿ
ಎದೆಯ ಕೊಳದ ಅಲೆಗಳು ತೀಡಿದಕ್ಷಣ
ಬೆವರು ಹರಡಿ ಅಂಟಿಕೊಳ್ಳತ್ತವೆ ಕ್ಷಣಗಳು
ಸರಿಗೆಯ ಮೇಲೆ ಹಾರಾಡುವ ಬಟ್ಟೆ
ಚಿಟ್ಟೆಗಳು ಸುರಿಯುತ್ತವೆ ಬಣ್ಣಗಳ ಓಕುಳಿ.

ಈ ಕಾಗದದ ನೀಲಿ ಅಕ್ಷರಗಳಲ್ಲಿ ಮೋಹದ ಮಾನವಿದೆ. ಎಲ್ಲವನ್ನೂ ಹೀರಿಕೊಳ್ಳುವ ಬಿಮ್ಮು ಈ ಒಂಟಿಧ್ವನಿಯಲ್ಲಿದೆ. ನೀನು ಆಗಾಗ ಹೇಳುತ್ತಿ ಇಷ್ಟೊಂದು ಸೂಕ್ಷ್ಮ ಇರಬಾರದು. ಬಹಳಷ್ಟು ವಾಸ್ತವಾಗಿರಬೇಕು ಎಂದು. ಯಾಕೋ ದೋಸ್ತ ನನಗೆ ನಿನ್ನ ಹಾಗೆ ವ್ಯಾಪಾರ ಬುದ್ದೀ ಬಂದಿಲ್ಲ. ಮತ್ತೆ ನಿನ್ನ ಹಾಗೆ ಇತರರನ್ನು ಓಲೈಸಲೂ ನನಗೆ ಬರುವದಿಲ್ಲ. ನಿನಗೆ ನಿನ್ನ ಕೈಕೆಳಗಿನವರನ್ನು ಹೇಗೆ ಸಮತೋಲನದಲ್ಲಿ ಇಡಬೇಕೆಂಬ ನ್ಯಾಕ್ ಇದೆ. ನನಗೋ ಸುಡುಗಾಡು ಬಣ್ಣದ ಮಾತುಗಳಿಗೆ, ಪೆದ್ದು ಪೆದ್ದಾಗಿ ಒಪ್ಪಿಕೊಂಡು ಬಿಟ್ಟಿರುತ್ತೇನೆ. ಮತ್ತೆ ಇಡೀ ದಿನ ಹಳಹಳಿಸುತ್ತ ಇರುತ್ತೇನೆ. ನನಗೆ ಡಾಮಿನೇಟ ಮಾಡುವ ಸ್ವಭಾವವೇ ಇಲ್ಲ. ಯಾರಾದ್ರು ನನಗೆ ಎರಡು ದಿನ ಜೋರು ಧ್ವನಿಯಲ್ಲಿ ಮಾತನಾಡಿದರೆ ನನಗೆ ತಿರುಗಿ ಉತ್ತರಿಸಲು ಬರುವುದೇ ಇಲ್ಲ. ನಾನು ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡಾಗಲೇ ನನ್ನ ಪ್ರತಿಭಟಿಸುವ ಧ್ವನಿಯನ್ನು ಕಳೆದುಕೊಂಡು ಬಿಟ್ಟಿದ್ದೇನೆ. ತಾಯಿ ಸತ್ತ ಮಕ್ಕಳು ಪೂಟ್ಬಾಲ್ ಚೆಂಡು, ಎತ್ತಕಡೆಗೆ ಬಿದ್ದರೂ ಒದಿಸಿಕೊಳ್ಳುತ್ತ ಉರುಳಾಡಬೇಕು. ಎಲ್ಲೆಲ್ಲೂ ಕಾವಲುಗಾರರು. ಅಂತಃಪುರದ ಮೆಟ್ಟಿಲುಗಳನ್ನು ಏರಲು ನನ್ನ ಕಾಲುಗಳಿಗೆ ಕಸು ಬರಲೇ ಇಲ್ಲ ಗೆಳೆಯ. ಒಮ್ಮೊಮ್ಮೆ ಅನಿಸುತ್ತದೆ ತಾಯಿತಂದೆಯ ಪ್ರೀತಿಯಲ್ಲಿ ಬೆಳೆದ ಮಕ್ಕಳು ಎಷ್ಟೊಂದು ಗಟ್ಟಿಯಾಗಿ ಈ ಜೀವನದ ಮಜಲುಗಳನ್ನು ಹಾಯ್ದ ಬರುತ್ತಾರೆ. ಅಮ್ಮ ನಮ್ಮ ಕಷ್ಟದ ದಿನಗಳಲ್ಲಿ ನಮ್ಮಿಂದ ದೂರ ಇದ್ದಳು. ಹಸಿವು ಒಂಟಿತನ ಏನು ಮಾಡಬೇಕು. ಯಾರ ಮುಂದೆ ತೋಡಿಕೊಳ್ಳಬೇಕು. ಏನೊಂದು ತಿಳಿಯದ ಅಮಾಯಕ ವಯಸ್ಸು, ಮನಸ್ಸು ನಮ್ಮದಾಗಿತ್ತು. ಈಗಿನ ಮಕ್ಕಳಿಗೆ ಹುಟ್ಟು ಹುಟ್ಟುತ್ತಲೇ ಹತ್ತಾರು ಜೊತೆ ಸ್ಯಾರ್ಫ್ ಸೈಟರ್ ಬಣ್ಣದ ಉಡುಗೆಗಳು ತೊಡಗೆಗಳು. ಹರಿದ ಸೀರೆಯ ಅಂಗಿಯಲ್ಲಿ ತಂಗಿ ತತ್ವಶಾಸ್ತ್ರದ ಬಂಗಾರದ ಪದಕಗಳನ್ನು ಪಡೆದಳು. ಆ ದಿನ ಅಮ್ಮ ಅಪ್ಪ ಇಬ್ಬರೂ ಇರಲಿಲ್ಲ. ಆದರೆ ನೀನು ಅಪ್ಪ ಅಮ್ಮ ಇಬ್ಬರನ್ನು ಎದುರಿಗೆ ಇರಿಸಿಕೊಂಡು ಚಿನ್ನದ ಪದಕಗಳನ್ನು ಪಡೆದುಕೊಂಡೆಯಲ್ಲ, ಎಲ್ಲೊ ನೀನು ಬರವಣಿಗೆಯಲ್ಲಿ ಬರೆದ ನೆನಪು. ಪ್ರತಿಭೆಗಳು ಚಿಗುರಬೇಕು ನಿಜ, ಅದಕ್ಕೆ ಸರಿಯಾದ ನೀರುಣಿಸುವವರು ಬೇಕಲ್ಲ. ಸಂವೇದನೆ ಇದ್ದರೆ ಸಾಲದು. ಅದು ಮುಂದುವರಿದು ಬರವಣಿಗೆಗೆ ಆಗಬೇಕಲ್ಲ. ಪ್ರತಿ ಜೀವನವೂ ಅದ್ಭುತ ಚಿತ್ರವಾಗುವುದು ತಾಯ ಸ್ಪರ್ಶದಿಂದ ಮಾತ್ರ. ಆ ನೆಮ್ಮದಿ ಸಿಗುವುದು ಅವಳ ಮಡಿಲಲ್ಲಿ ಇದ್ದಾಗ, ಆದರೆ ನನ್ನ ಅಮ್ಮ ಬರೀ ನನ್ನ ಕವಿತೆಗಳಲ್ಲಿ ಮಾತ್ರ ಉಳಿದಳು.

ಬಯಲು ಗಾಳಿಗೆ ರೆಕ್ಕೆ ಬಿಚ್ಚಿದ ಹಾರಿದಹಕ್ಕಿ
ಮರದ ಹಸಿರಲ್ಲಿ ತೇಲಿಹಾಯ್ದ ಪ್ರಭೆ
ಬೆಳಕಿನ ಕಿರಣಗಳು ಭಾವವಾಗಿ ರಾಗ
ಎದೆಗಿಳಿದು ಎಲ್ಲೆಲ್ಲೂ ಚಂದ್ರ ಬಿಂಬ
ಹೂವು ಹಾಸಿಗೆ ಚಿಲಿಪಿಲಿದಾರಿ ಬೆಚ್ಚಗೆ
ಗುನುಗುಣಿಸುವ ಜೋಗುಳ ಹಿಡಿದ ಕೈ
ಬಳೆಗಳ ತುಂಬ ನೀಲಿ ಚಿಕ್ಕಿ ತೇಲಿ
ತೂಗಿ ತೂಗಿ ಜಗದ ಅಮೃತಮಯಿ
ಸ್ಪರ್ಶಕ್ಕೆ ಸಾವಿರ ಚಿಗುರುಗಳ ಹುಟ್ಟು

ಬೇಕಾದಾಗ ಹೇಗೆ ಬೇಕಾದರೂ ಬಳಸಬಹುದು ಪದತಾಯಿ. ಎಲ್ಲ ಒಳತೋಟಿಯ ತುಡಿತಗಳಿಗೆ, ಚೆಕ್‍ಡ್ಯಾಮ್ ಹಾಕುವವರು ಅವಳೇ. ಮುಂಬೈ ರೇಲ್ವೆ ಸರಣಿಯಲ್ಲಿ ಸತ್ತವರ ತಾಯಂದಿರ ಹೊಟ್ಟೆಕಿಚ್ಚಿನ ಅಳಲು, ಯಾವ ಭಯೋತ್ಪಾದನೆಯನ್ನು ತಲುಪಿ ಕದಡೀತು? ಯಾವು ರಾಜಕಾರಣಿಯ ಹೊಲಸು ಮನಸ್ಸಿಗೆ ತಾಕೀತು? ಯಾವ ಸರಳ ಪ್ರೀತಿ ವಿಶ್ವದ ಎಲ್ಲಾ ಜನರ ಮನಸ್ಸಿಗೆ ಸಮಾನ ಸೂತ್ರವಾದೀತು. ರಾತ್ರಿಯಲ್ಲಾ ನಿದ್ದೇನೇ ಬರೋದಿಲ್ಲ. ಬೆಳಿಗ್ಗೆ ಎದ್ದಾಗ, ಉರಿಯುವ ಕಣ್ಣಿನಿಂದ ಪೇಪರ ನೋಡಲೂ ಕೂಡ ಭಯ. ಎಂತಹ ವಿಹಲ್ಹತೆ ನಮ್ಮನ್ನು ಸುತ್ತುವರಿದಿದೆ. ಸರಳವಾದ ಮುಂಜಾನೆಯ ಸೂರ್ಯನ ಕಿರಣಗಳು ನಮ್ಮನ್ನು ಸ್ಪರ್ಶಿಸುವದಿಲ್ಲ ಈಗೀಗ. ಇದು ಯಾವ ಯುಗದ ಪರಿಕಲ್ಪನೆ. ಮನಸ್ಸಿನಲ್ಲಿ ತುಂಬ ಭಯ ಹಾಗೂ ಕತ್ತಲೆ ತುಂಬಿಕೊಂಡಿದೆ. ನಿನ್ನ ಅಕ್ಷರಗಳು ಇಬ್ಬನಿ ಸುರಿಸುತ್ತವೆ ಆಗಾಗ, ಈಗೀನ ಭೂಮಿಯ, ಗಾಳಿಯ, ಹಕ್ಕಿಯ, ಬೆಂಕಿಯ, ಮನುಷ್ಯರ, ಮನಸ್ಸಿನ ಎಲ್ಲರ ಚಲನೆಯಗತಿ ಎಷ್ಟೊಂದು ವೇಗವಾಗಿ ಚಲಿಸುತ್ತವೆ. ನ್ಯಾನೋ ಸೆಕೆಂಡುಗಳಲ್ಲಿ ಡಿಕ್ಕಿ ಹೊಡೆದುಕೊಂಡು ಚಚ್ಚಿದ ಬದುಕು! ಗಿಡಮರ ಹಕ್ಕಿಗಳು ಹುಟ್ಟುವುದು ಯಾವಾಗ? ಮನುಷ್ಯನ ಅಂತರ್ಗತ ಆಲೋಚನ ಶಕ್ತಿ, ಸ್ವರೂಪ ಎಲ್ಲಿಂದ ಹುಟ್ಟಿತು? ಅಂತರಂಗವನ್ನು ಬಹಿರಂಗಪಡಿಸಿ ಬಯಲುಗೆಳೆಯುವ ಕಸು, ಯಾವ ಆಲೋಚನೆ, ಶಕ್ತಿ ಕಲ್ಪನೆಯಿಂದ ಹುಟ್ಟಿಕೊಳ್ಳುತ್ತದೆ. ನಮ್ಮ ಮಿದುಳಿಗೆ ವಿದ್ಯುನ್ಮಾನ ಚಲನೆ ನಮ್ಮ ಹುಟ್ಟಿನಲ್ಲಿ ಇದೆಯೋ. ಯಾವುದು ತೋರಿಕೆಯಲ್ಲಾ ಗೆಳೆಯಾ, ಎಲ್ಲೋ ಮಿಡಿತ ತುಡಿತ ಅಹಂಕಾರ ಸೆಡವು ಮೇಲೈಸಿದ ಮನಸ್ಸುಗಳಿವೆ. ಮನುಷ್ಯನಾಗಿದ್ದಾನೆ. ಮೆದುಳಿನ ಗತಿ ಬದಲಾವಣೆಗಳನ್ನು ಗುರುತಿಸಬಹುದು ಆದರೆ ಮಾನಸಿಕ ಗುಣಗಳನ್ನು ಗುರುತಿಸಲಾಗುವುದಿಲ್ಲ. ಸೂರ್ಯನ ಬಂಗಾರದ ಬಣ್ಣದ ಕಿರಣಗಳು ಎಲ್ಲರನ್ನೂ ಸಮಾನವಾಗಿ ಸ್ಪರ್ಶಿಸುತ್ತವೆ. ಮತ್ತೇಕೆ ನಾವು ವಿಮುಖರಾಗಿ ಹಾರಾಡುತ್ತೇವೆ ಯೋಚಿಸುತ್ತೇವೆ ಭಿನ್ನವಾಗಿ?

ಈ ಗೌಂವ್ ಎನ್ನುವ ಸಂಜೆ ಕವಿತೆಗಳು ನನ್ನಲ್ಲಿ ಹುಟ್ಟಿವೆ, ನಿನ್ನನ್ನು ಸ್ಪರ್ಶಿಸುತ್ತಿವೆ. ಮತ್ತೆ ಮರ ಮೌನ ಹಕ್ಕಿ ಚಿಕ್ಕಿ ಮನಸ್ಸು ಮಳೆ ನೀಲಿ ಅಮ್ಮ, ಆಫೀಸು, ದುಡ್ಡು ಸನ್ಮಾನ ಪುಸ್ತಕ ಪ್ರಶಸ್ತಿ ಎಲ್ಲವೂ “ಹಿಡನ್ ಲೈಫ್ ಇನ್ ಪ್ರೀಮೇಸನರಿ.”

ಸ್ವಪ್ರಜ್ಞೆಯಲ್ಲಿ ನಾವು ನಮ್ಮನ್ನು ಎಷ್ಟು ತಿಳಿದುಕೊಂಡಿದ್ದೇವೆ. ದೋಸ್ತ ನಿನಗಾಗಿ ಈ ಸಂಜೆಯ ಕವಿತೆಯ ಸಾಲುಗಳು.

ಬೇರುಗಳ ಹರವಿ ಹರಡಿ
ಹಾಸಿಬೀಸಿದ ತಂಗಾಳಿ ಬಯಲು
ಬಾನ ತುಂಬ ತೇಲಿ ಅರಳಿದ ಮರ
ಹನಿಸುತ್ತದೆ ವರ್ಷ ವೈಭವ
ನಲಿದು ಒಲಿದ ದುಂಬಿ ಝೇಂಕಾರದ ಹನಿಗಳು
ಗಂಧ ಸುಗಂಧ ಬೀರಿ ಮಂದಸ್ಮಿತ
ಇಳಿದ ಪ್ರೀತಿ ಒಲವು ರೋಮಾಂಚನ
ಹರವು ಚಿಗುರ ಕುಸುಮಿತ ಪುಳಕಿತ
ನನ್ನೊಳಗಿನ ಹಾಡಿಗೆ ನಿನ್ನ ಧಾಟಿ.

ನಿನ್ನ,
ಕಸ್ತೂರಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಾರ್‍ಥನೆ
Next post ನಾನು ಪ್ರೀತಿಸಿದ ಹುಡುಗಿಯರು

ಸಣ್ಣ ಕತೆ

 • ಹನುಮಂತನ ಕಥೆ

  ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

 • ಗೃಹವ್ಯವಸ್ಥೆ

  ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

 • ಪ್ರಥಮ ದರ್ಶನದ ಪ್ರೇಮ

  ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

 • ಕರಾಚಿ ಕಾರಣೋರು

  ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

 • ಹಳ್ಳಿ…

  ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

cheap jordans|wholesale air max|wholesale jordans|wholesale jewelry|wholesale jerseys