ಅಂದು ಬದುಕಿದ್ದೆ ನಾನು
ಕಾಬೂಲ್ ಖಂದಹಾರ್‌ನ
ಖರ್‍ಜೂರದ ಗಿಡದಂತೆ
ಸಿಹಿ ಹುಳಿಯ ಸಂಗಮ
ಅಂಗೂರದ ಬಳ್ಳಿಯಂತೆ
ಶಾಂತಿ ಕಾಲವೇ ಇರಲಿ
ಯುದ್ಧ ಕಾಲವೇ ಬರಲಿ
ಬಂದೂಕಿಲ್ಲದ ಬರಿಗೈಯಲಿ
ಕಂಡಿಲ್ಲ ಅವನ
ಸದಾ ಭಯದ ನೆರಳಿನಲೇ
ನನ್ನ ಬದುಕಿನ ಪಯಣ
ವಿಶ್ವವನ್ನೇ ನಿಯಂತ್ರಿಸಲು
ಹಿರಿಯಣ್ಣನ ಹಿಂಸೆಯಾದರೆ
ಒಳಗೆ ಮೀಸೆ ತಿರುಗಿಸುವ
ಪೌರುಷದ ಅಟ್ಟಹಾಸ
ಮಿದುಳಿನಲಿ ಗನ್ನುಗಳ ಸ್ಫೋಟ
ವ್ಯಾಪಕ ಭಯದ ನೋಟ
ಬಿಸಿ ತಟ್ಟಿದೆ ನನಗೆ
ಯುದ್ಧ ಕಾಲದಲೂ –
ಶಾಂತಿ ಸಮಯದಲೂ
ನನ್ನ ಹಕ್ಕುಗಳ ದಮನ
ಕ್ರೂರ ವ್ಯಾಘ್ರರ ನರ್‍ತನ.
ಭೀತಿಯಿಂದ ಧರ್‍ಮ ಪ್ರಶ್ನಿಸಲಿಲ್ಲ
ಹಕ್ಕಿನ ಅಧಿಕಾರ ಕೇಳಲಿಲ್ಲ
ದುಷ್ಟ ಶಿಕ್ಷೆಯ ಸಂದರ್‍ಭವಿರಲಿ
ರಾಷ್ಟ್ರ ರಕ್ಷಣೆಯ ಕಾವಲಿರಲಿ
ಧರ್‍ಮ ಯುದ್ಧದ ಜೇಹಾದೇ ಆಗಿರಲಿ
ಕಪಟ ನಾಟಕದ ಆಟದಲಿ
ಬಲಿಯಾದರು ನನ್ನವರು
ಹಿಂಸೆ-ಅಹಿಂಸೆ ಎರಡೂ ಶಬ್ದಗಳಿಗೂ
ಇಲ್ಲಿ ಒಂದೇ ಅರ್‍ಥ ಅನ್ವಯ
ಮನೆಯಿಂದ ರಣರಂಗದವರೆಗೂ
ಬಲಿಯಾದ ನನ್ನ ಕುಡಿಗಳು.
ನೋವಿನ ತೆಂಗಿನ ಮರದಲಿ
ಯಾತನೆಯ ಕೆಂಪು ರಕ್ತದ ಎಳನೀರು
ಮುಗ್ಧ ಮಕ್ಕಳ ಮಾರಣಹೋಮ
ಧರ್‍ಮ-ರಾಜಕೀಯದ ಸಾವು ನೋವುಗಳ
ಅನುಭವಿಸಿರುವೆ ನಾನು ಬಹಳ
ಸಹಿಸಲಾರೆ ಸಾವಿನಾಟವನು
ಸಾಕು ಮಾಡಿ ಮುಂಡಾಟಿಕೆ
ಬೇಕು ನನಗೆ ನೆಮ್ಮದಿಯ ನೆಲೆ
ಪುಟ್ಟ ಮನೆಯಂಗಳದಲಿ ತೆಂಗಿನಮರ
ನೆಮ್ಮದಿಯ ಶುದ್ಧ ಗಾಳಿ, ನೀರು
ಸಮವಸ್ತ್ರವಿಲ್ಲದ ಪುರುಷರು
ಬಂದೂಕಿಲ್ಲದ ಕೈಗಳು
ಜೀವಪೋಷಕ ಸಂಗಾತಿಗಳು
ಮನುಕುಲವನು ಪ್ರೀತಿಸುವ
ಕಾಬೂಲಿವಾಲಾಗಳು.
*****