ಇಂದು,
ನೀ ಬರೆದ ಪತ್ರವದು
ಬಂದು ತಲುಪಿತು ಇಂದು
ಸಂತಸದ ನೆನಪನ್ನು
ಅಗಲಿಕೆಯ ಅಳಲನ್ನು
ತುಂಬಿ ತಂದಿತು ಇಂದು.
ವಿದ್ಯೆಗೆ ಬುದ್ಧಿಗೆ ಪುರಸ್ಕಾರ
ಕೊಟ್ಟ ಬ್ಯಾಂಕಿಗೆ ನಮಸ್ಕಾರ
ಎಂದು ಹೇಳುತ್ತಾ ನಾನು, ಒಳ ಬಂದೆನಂದು
ಅಕ್ಟೋಬರ್ ತಿಂಗಳ ಹದಿನೆಂಟರಂದು.
ತವರೂರ ತೊರೆದು ಬಹು ದೂರ ಬಂದಿಹೆನು
ದೂರದ ಸುರಪುರದಲ್ಲಿ ಹೊಸ ಬಾಳ ಕಂಡಿಹೆನು.
ಎಲ್ಲೆಡೆ ಹರಡಿಹುದಿಲ್ಲಿ ಬರಡುಗಿರಿ ಪಂಕ್ತಿಗಳು
ಊರ ಚರಿತೆಯ ಸಾರುವ ಭಗ್ನಾವಶೇಷಗಳು.
ಹಸುರಿಲ್ಲ, ಚಿಗುರಿಲ್ಲ, ಹರಿವ ನೀರಿಲ್ಲ
ನನಗಾಗಿ ಮಿಡಿವ ಮನವಿಲ್ಲವಲ್ಲ
ಎಂದು ನೊಂದೆ ನಾನು ದುಃಖದಿಂದ
ಎನ್ನಧಿಕಾರಿ ಕರೆದರೆನ್ನನು ಸ್ನೇಹದಿಂದ.
ದಿಬ್ಬದ ಮೇಲಿನ ಮಹಲಿನ ಮಹಡಿಯಲಿ
ನೋವು ನಲಿವಿಲ್ಲದ ಮೌನದರಮನೆಯಲ್ಲಿ
ಸುಸಜ್ಜಿತ ಕೋಣೆಯಲಿ ಈಗೆನ್ನ ವಾಸ
ಬ್ಯಾಂಕಿನ ಹೊಸ ಶಾಖೆಯಲ್ಲಿ ಈಗೆನ್ನ ಕೆಲಸ.
ಮಾತೆಯ ಮಮತೆಯ ಸಿಹಿಯೂಟ ಈಗಿಲ್ಲ,
ಖಾನಾವಳಿಯ ಖಾರದ ಊಟವೇ ಈಗೆಲ್ಲ!
ಸಾಗುತಿದೆ ಬಾಳು ಹೊಸ ಹಾದಿ ಹಿಡಿದು
ಮಿಡಿಯುತಿದೆ ಮನವು ನನ್ನವರ ನೆನೆದು.
*****
೨೪-೧೧-೧೯೭೯