ರಾವಣಾಂತರಂಗ – ೧

ರಾವಣಾಂತರಂಗ – ೧

ಅಕ್ಷಯತದಿಗೆ

ಅಕ್ಷಯತದಿಗೆಯ ಪವಿತ್ರದಿನದಂದು ಲಂಕೆಯ ದೇವಾಲಯಗಳಲ್ಲಿ ವಿಶೇಷ ಪೂಜೆ, ಲಂಗೇಶ್ವರನಾದ ರಾವಣನ ಹೆಸರಿನಲ್ಲಿ ಹವನ, ಹೋಮ ಅರ್ಚನೆಗಳು ನಡೆದವು. ಅರಮನೆಗೆ ಅಂಟಿಕೊಂಡಿದ್ದ ಶಿವಮಂದಿರದಲ್ಲಿ ಶಿವಭಕ್ತರಾವಣೇಶ್ವರನು ಶ್ರದ್ಧಾಭಕ್ತಿಯಿಂದ ಪರಮೇಶ್ವರನ ಪಾದಕಮಲಗಳನ್ನು ಪೂಜಿಸಿ ಉಪಹಾರವನ್ನು ಸೇವಿಸಲು ಬರುವಷ್ಟರಲ್ಲಿ ಮಹಾದೇವನ ಪ್ರಸಾದವನ್ನು ಭೋಜನ ಕೋಣೆಯಲ್ಲಿ ತಂದಿಟ್ಟರು. ಶಿವನಿಗೆ ನೈವೇದ್ಯವಾದ ಪ್ರಸಾದವು ಲಂಕಾಧಿಪನ ದಾರಿ ಕಾಯುತ್ತಿತ್ತು. ಮೊದಲಿಗೆ ಭಯಭಕ್ತಿಯಿಂದ ಪ್ರಸಾದವನ್ನು ಕಣ್ಣಿಗೊತ್ತಿಕೊಂಡು ಸೇವಿಸಿ ಉಪಹಾರವನ್ನು ಸ್ವೀಕರಿಸಿ ಅರಮನೆಯ ಓಡ್ಡೋಲಗಕ್ಕೆ ಹೋಗಲು ಅಣಿಯಾದನು. ಕೆಲವು ದಿನಗಳಿಂದ ಈ ರೀತಿಯ ದಿನಚರಿಯು ಅಭ್ಯಾಸವಾಗಿತ್ತು. ಮಂಗಳಾಂಗಿ ಮಂಡೋದರಿಯ ಇರವು ಅಲ್ಲಿ ಕಾಣದೆ ಮನಸ್ಸಿಗೇನೋ ಮುಜುಗರ, ಸೀತಾಪಹರಣದ ಸುದ್ದಿ ಕೇಳಿದ ಮೇಲೆ ಮಂಡೋದರಿ ನನ್ನೊಂದಿಗೆ ಹೆಚ್ಚು ಬೆರೆಯುತ್ತಿರಲಿಲ್ಲ. ಎಷ್ಟು ಬೇಕೋ ಅಷ್ಟೆ, ಸಹಧರ್ಮಿಣಿಯಾದ ಪತ್ನಿ ನನ್ನ ಸಹವಾಸವೇ ಬೇಡವೆಂದು ದೂರವಿದ್ದಾಳೆ. ಅದು ನ್ಯಾಯವೇ! ಪತಿಯಾದವನು ಧರ್ಮಮಾರ್ಗದಲ್ಲಿ ನಡೆಯಬೇಕು, ಸತಿಯಾದವಳು ಹಿಂಬಾಲಿಸಬೇಕು, ಧರ್ಮಕ್ಕೆ ವಿಮುಖನಾದರೆ ಎಚ್ಚರಿಸಿ ಸನ್ಮಾರ್ಗದಲ್ಲಿ ನಡೆಯುವಂತೆ ಪೇರೇಪಿಸಬೇಕು; ಆದರೆ ನನ್ನನ್ನು ಖಂಡಿಸಿ ಮಾತನಾಡುವ ಧೈರ್ಯ ಸಾಹಸ ಯಾರಿಗೂ ಇಲ್ಲ. ಅವಳನ್ನು ಕಂಡು ಮಾತನಾಡಿಸಬೇಕು, ಸಮಾಧಾನ ಮಾಡಬೇಕು, ತಾನೇಕೆ ಈ ಅಲ್ಪಕಾರ್ಯವನ್ನು ಮಾಡಿದೆ ಎಂದು ಅವಳ ಪ್ರಶ್ನೆಗಳಿಗೆ ತಕ್ಕ ಉತ್ತರ ನೀಡಬೇಕೆಂದು ನನ್ನ ಮನಸ್ಸು ತುಡಿಯುತ್ತಿದೆ. ಆದರೆ ಅವಳನ್ನು ಮುಖಾಮುಖಿಯಾಗಿ ಎದುರಿಸುವ ಧೈರ್ಯವಾಗುತ್ತಿಲ್ಲ. ತನಗೇಕೆ ಈ ಅಂಜಿಕೆ! ಹಿಂದೆಗೆತ ತಪ್ಪು ಮಾಡಿದ ಮೇಲೆ ಅದನ್ನು ಧೈರ್ಯವಾಗಿ ಒಪ್ಪಿಕೊಳ್ಳಬೇಕು ಪಶ್ಚಾತ್ತಾಪ ಪಡಬೇಕು. ಅದು ಬಿಟ್ಟು ಹೇಡಿಯಂತೆ ಕುಳಿತುಕೊಳ್ಳುವುದು, ವೀರಾಧಿವೀರನಾದ ನನಗೆ ಶೋಭಿಸುವುದಿಲ್ಲ. ಇಂದು ಹೇಗಾದರೂ ಸರಿ, ಮಂಡೋದರಿಯನ್ನು ಎದುರಿಸಿ ಮಾತಾಡಲೇಬೇಕು. ನಿರ್ಧಾರಗಟ್ಟಿಯಾದಂತೆ ನನ್ನ ಮನಸ್ಸು ಹಗುರವಾಯಿತು. ರಾಜಕಾರ್ಯಗಳನ್ನು ಬದಿಗಿಟ್ಟು, ಸೇವಕರ ಕೈಲಿ ತಾನು ಬರುತ್ತಿದ್ದೇನೆಂದು ಮಹಾರಾಣಿ ಮಂಡೋದರಿಗೆ ಹೇಳಿಕಳುಹಿಸಿದೆ.

ಅಂತಃಪುರಕ್ಕೆ ಕಾಲಿಟ್ಟಾಗ ದಾಸಿಯರು ನಮಸ್ಕರಿಸಿದರು. ರಾಣಿಯ ಆಪ್ತಸಖಿ ಬಂದು “ಪ್ರಭು ಮಹಾರಾಣಿಯವರು ಪೂಜಾ ಕೈಂಕರ್‍ಯದಲ್ಲಿ ಮಗ್ನರಾಗಿದ್ದಾರೆ. ಮುಗಿದ ಕೂಡಲೇ ತಾವು ಬಂದಿರುವ ಸಮಾಚಾರವನ್ನು ಭಿನ್ನವಿಸುತ್ತೇನೆ ಕುಳಿತುಕೊಳ್ಳಿ” ಅಲ್ಲೇ ಇದ್ದ ರಜತಪೀಠದ ಮೇಲೆ ಆಸೀನನಾಗಿ ಮಂಡೋದರಿಯ ಮನವೊಲಿಸುವ ಮಾತುಗಳಿಗಾಗಿ ಮೆಲುಕು ಹಾಕುತ್ತಿರುವಾಗ ದಾಸಿಯೊಬ್ಬಳು ಚಿನ್ನದ ಹರಿವಾಣದಲ್ಲಿ ಹಾಲು ತುಂಬಿದ ಬಟ್ಟಲನ್ನಿಟ್ಟು ಕುಡಿಯಬೇಕೆಂದು ಬೇಡಿಕೊಂಡಳು. ಬೇಡವೆಂದು ತಲೆಯಾಡಿಸಿ ಕಣ್ಣುಮುಚ್ಚಿ ಪೀಠಕ್ಕೊರಗಿ ದೇವಿಯ ಬರವನ್ನು ಕಾಯತೊಡಗಿದೆ. ಕೆಲವು ದಿನಗಳ ಹಿಂದೆ ಈ ಅಂತಃಪುರದಲ್ಲಿ ನಗು, ಮಾತು, ಸಂತೋಷದ ಹೊಳೆಯೇ ಹರಿಯುತ್ತಿತ್ತು. ಈಗ ಸ್ಮಶಾನ ಮೌನ ತುಂಬಿ ಕತ್ತು ಹಿಡಿದು ಹೊರನೂಕುವಂತಾಗಿದೆ. ಇದಕ್ಕೆಲ್ಲಾ ನಾನೇ ಕಾರಣ! ನನ್ನ ಅವಿವೇಕವೇ ಕಾರಣ! ನಾನು ಮಾಡಿದ ತಪ್ಪಿನಿಂದ ನನ್ನ ಜೀವನವೇ ದಿಕ್ಕು ತಪ್ಪಿದ ನೌಕೆಯಂತಾಗಿದೆ. ಇಡೀ, ಲಂಕಾನಗರವೇ ತಲ್ಲಣಿಸುತ್ತಿದೆ. ಹಿರಿಯ ಕಿರಿಯರೆಲ್ಲರೂ ನನಗೆ ಉಪದೇಶ ಮಾಡುತ್ತಿದ್ದಾರೆ. ಯಾರ ಹೆಸರು ಕೇಳಿದರೆ ಇಡೀ ಭೂಮಂಡಲವೇ ನಡುಗುತ್ತಿತ್ತೋ ಯಾರನ್ನು ಕಂಡು ದೇವಾಧಿದೇವತೆಗಳು ಅಷ್ಟದಿಕ್ಪಾಲಕರು ತಲೆಮರೆಸಿಕೊಳ್ಳುತ್ತಿದ್ದರೋ ಅಂತಹ ರಾವಣನಿಂದು ತನ್ನ ಮನೆಯಲ್ಲಿ ಅಸಹಾಯಕನಾಗಿ ಕುಳಿತಿದ್ದಾನೆ, ಯಾರೂ ಈ ರಾವಣನನ್ನು ಸರಿಯಾಗಿ ಅರ್ಥಮಾಡಿಕೊಳ್ಳಲೇ ಇಲ್ಲ. ತನ್ನ ಪ್ರೀತಿಯ ಪತ್ನಿಯೂ ತನ್ನನ್ನು ಸರಿಯಾಗಿ ಅರ್‍ಥೈಸದೆ ಅಸಮಾಧಾನದಿಂದ ದೂರ ಹೋಗುತ್ತಿದ್ದಾಳೆ. ತನ್ನ ಕಷ್ಟಸುಖಗಳಲ್ಲಿ ಭಾಗಿಯಾಗಬೇಕಿದ್ದ ಅರ್ಧಾಂಗಿ ಅನುಮಾನದ ಕಣ್ಣಿನಿಂದ ನೋಡಿ ಎಲ್ಲರ ಅಪಹಾಸ್ಯಕ್ಕೆ ಗುರಿಮಾಡುತ್ತಿದ್ದಾಳೆ. ಇಲ್ಲ ಈ ದಿನ ಸರಿಯಾದ ದಿನ. ಇಂತಹ ಅವಕಾಶ ಸಿಗಲಾರದು. ಯಾವಾಗ ಬಂದರೂ ಕಣ್ತಪ್ಪಿಸಿಕೊಳ್ಳೂತ್ತಾಳೆ ಮುಖಕೊಟ್ಟು ಮಾತಾಡದೆ ಸಾಗಹಾಕುತ್ತಾಳೆ. ಎಷ್ಟೊತ್ತಾದರೂ ಸರಿ! ಇಲ್ಲೇ ಇದ್ದು, ಅವಳನ್ನು ಕಂಡು ಹೃದಯ ಬಿಚ್ಚಿ ಮಾತಾಡಬೇಕು, ಮಂಡೋದರಿ ಎಲ್ಲರಂತಹವಳಲ್ಲ, ಪರಮ ಸಾದ್ವೀಮಣಿ ಮಹಾಪತಿವ್ರತೆ. ಪತಿಯ ಮನಸ್ಸಿಗೆ ಕಿಂಚಿತ್ತು ನೋವಾದರೂ ತಡೆದುಕೊಳ್ಳದ, ಪತಿಯ ಸುಖವೇ ತನ್ನ ಸುಖವೆಂದು ನಂಬಿ ನಡೆಯುವವಳು. ಇಷ್ಟು ವರ್ಷಗಳ ಸಂಸಾರದಲ್ಲಿ ಒಂದು ದಿನವಾದರೂ ಬೇಸರಿಸದ, ಜಗಳವಾಡದ, ಮನ, ಮನೆ ತುಂಬಿದ ಹೆಣ್ಣು. ಅವಳ ಪ್ರೀತಿಯಲ್ಲಿ, ನಡೆನುಡಿಯಲ್ಲಿ, ಸರಸ ಸಾಮರಸ್ಯದಲ್ಲಿ ಗುಲಗಂಜಿಯಷ್ಟು ಬೇಧವಿಲ್ಲ. ಕಪಟಮೋಸಗಳಿಲ್ಲ, ಸಾವಿರಾರು, ಸುರಾಸುರ ಅಪ್ಪರಗಂಧರ್ವ ಕನ್ಯೆಯರನ್ನು ನೋಡಿದ್ದೇನೆ, ಮೋಹಿಸಿದ್ದೇನೆ, ವರಿಸಿದ್ದೇನೆ, ಅವರಾರು ಮಂಡೋದರಿಗೆ ಸಮರಲ್ಲ. ಅಪ್ಸರಕಸ್ಯೆ ಧ್ಯಾನಮಾಲಿನಿಯೂ ತನ್ನ ಹೃದಯಕ್ಕೆ ಹತ್ತಿರವಾಗಲಿಲ್ಲ. ಅತಿಕಾಯನೆಂಬ ಬಲಶಾಲಿಯಾದ ಮಗನನ್ನು ಪಡೆದದ್ದಷ್ಟೆ, ಅವಳಿಂದ ಲಾಭ! ಮಂಡೋದರಿ ಮೈಮನಗಳಲ್ಲಿ ತುಂಬಿದ್ದಾಳೆ. ಕಣಕಣದಲ್ಲೂ ಬೆರೆತು ಹೋಗಿದ್ದಾಳೆ. ಅವಳನ್ನು ಮರೆತು ಒಂದು ದಿನವೇನು? ಕ್ಷಣಗಳನ್ನು ಕಳೆಯಲಾರೆ. ಅವಳನ್ನು ನೋಡದೆ ಮಾತಾಡದೆ ಹೇಗಿರುವುದು. ಈ ಜೀವನವೇ ವ್ಯರ್ಥವೆನಿಸುತ್ತಿದೆ. ಮನೋನ್ಮಣಿ ಮಂಡೋದರಿಯೊಂದಿಗೆ ಕಳೆದ ರಸನಿಮಿಷಗಳು, ಸವೆದ ಸವಿನೆನಪುಗಳ ಚಿತ್ರಣ ಕಣ್ಣುಮುಂದೆ ನರ್ತಿಸಿದವು.
*****

ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಭುಲೋಕ
Next post ಸತ್ತಾಗ ನಾನು ಜಗಕೆಚ್ಚರವ ಸಾರುವುದು

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…