ವಿಜಯ ವಿಲಾಸ – ಸಪ್ತಮ ತರಂಗ

ವಿಜಯ ವಿಲಾಸ – ಸಪ್ತಮ ತರಂಗ

ಇತ್ತ ರತ್ನಾವತಿಯ ಅರಮನೆಯಲ್ಲಿ ಮಾರನೆಯ ದಿನ ಅಗ್ನಿಶಿಖ ರಾಕ್ಷಸೇಂದ್ರನು ತನ್ನ ಪತ್ರದಂತೆ ಈವರೆಗೆ ವೀರಭೈರವನು ವಿಜಯನನ್ನು ದುರ್ಗಿಗೆ ಬಲಿಗೊಟ್ಟೇ ಇರುವನೆಂಬ ದೃಢವಾದ ನಂಬಿಕೆಯಿಂದ ಶತ್ರು ನಿವಾರಣೆಯಾಯಿತೆಂದು ತನ್ನಲ್ಲಿ ತಾನು ಸಂತೋಷಪಟ್ಟು ಕೊಂಡಿದ್ದನು. ಆ ದಿನ ಶುಕ್ರವಾರವಾದುದರಿಂದ ಪದ್ಧತಿಯಂತೆ ತಾನು ಆ ಊರಿಗೆ ಸ್ವಲ್ಪ ದೂರದಲ್ಲಿ ಸುವರ್ಣಾದ್ರಿಯ ಮೇಲೆ ಇದ್ದ ತಮ್ಮ ಕುಲದೈವವಾದ ಮಹಾಕಾಳಿಯ ದರ್ಶನಕ್ಕೆ ಮಂತ್ರಿ ಪರಿವಾರಸಹಿತನಾಗಿ ಹೋಗಿ ಬರಬೇಕಾಗಿತ್ತು. ಇದರಿಂದ ಎಲ್ಲವನ್ನೂ ಸಿದ್ದ ಪಡಿಸಿಕೊಂಡು, ಪುತ್ರಿಯಾದ ಚಂದ್ರಲೇಖೆಗೆ ಎಚ್ಚರಿಕೆಯನ್ನು ಹೇಳಿ, ತಾನು ಬೆಟ್ಟದ ಮೇಲೆಯೇ ಆ ದಿನವೆಲ್ಲವೂ ವಿನೋದವಾಗಿದ್ದು ಮಾರನೆಯ ದಿನ ಪ್ರಾತಃಕಾಲಕ್ಕೆ ಮನೆಗೆ ಬರುವುದಾಗಿ ತಿಳಿಸಿ ಪರಿವಾರದೊಡನೆ ಹೊರಟು ನಿಂತಿದ್ದನು. ಆ ಸಮಯಕ್ಕೆ ಸರಿಯಾಗಿ ಪತ್ರಹಸ್ತನಾದ ವಿಜಯನು ಬಂದು ನಮ್ಮಸ್ಕರಿಸಿದನು. ಅವನ ಮುಖವನ್ನು ನೋಡಿದೊಡನೆಯೇ ಅಗ್ನಿಶಿಖನಿಗೆ ಆಶ್ಚರ್ಯಕ್ರೋಧಗಳು ಮಿತಿಮೀರಿದವು. ಇವನು ನಿಜವಾಗಿಯೂ, ದುರ್ಗಾವತಿಗೆ ಹೋಗದೆ ತನ್ನಾಜ್ಞೆಯನ್ನುಲ್ಲಂಘಿಸಿರಬೇಕೆಂಬ ಸಂದೇಹವು ಮನಸ್ಸಿನಲ್ಲಿ ಉಂಟಾಯಿತು. ಆದರೆ ಪತ್ರವನ್ನು ಬಿಚ್ಚಿ ನೋಡುವಲ್ಲಿ, ಅದರಲ್ಲಿ ತನ್ನ ಅಣ್ಣನಾದ ವೀರಭೈರವನ ಲಿಖಿತವೇ ಇತ್ತು. ಮತ್ತು ತಾನು ಬರೆದಿದ್ದ ವಿಷಯಗಳಿಗೆ ತಕ್ಕಂತೆ “ವಿಜಯನನ್ನು ದುರ್ಗಿಯ ಬಲಿಗಾಗಿ ನೆಲಮಾಳಿಗೆಗೆ ಸೇರಿಸು” ಎಂದು ಬರೆದಿತ್ತಲ್ಲದೆ ಮತ್ತೇನೂ ಇರಲಿಲ್ಲ. ಇದರಿಂದ ವೀರಭೈರವನು ತನ್ನ ದೂತನಿಗೆ ಬರೆದ ಪತ್ರವನ್ನು ಇವನು ಅಪಹರಿಸಿ ಅವರ ಕೈಯಿಂದ ತಪ್ಪಿಸಿಕೊಂಡು ಕಳ್ಳತನದಿಂದ ಓಡಿಬಂದಿರುವ ನೆಂಬುದೇ ಅಗ್ನಿಶಿಖನ ಮನಸ್ಸಿನಲ್ಲಿ ನಿರ್ಧರವಾಯಿತು. ಆಗ ತನ್ನ ಪ್ರಯತ್ನವು ಈ ಸಲವೂ ವ್ಯರ್ಥವಾಯಿತೆಂಬ ಕ್ರೋಧದಿಂದ ಹುಬ್ಬು ಗಂಟಿಕ್ಕಿ, ಕಣ್ಣುಗಳಲ್ಲಿ ಬೆಂಕಿಯನ್ನು ಸುರಿಸುವನಂತೆ ದುರುದುರನೆ ನೋಡಿ, “ಎಲವೋ, ಈ ಪತ್ರವನ್ನು ನಿನಗೆ ಕೊಟ್ಟವರು ಯಾರು? ನಿಜವಾದ ಸಮಾಚಾರವೆಲ್ಲವನ್ನೂ ವಿವರವಾಗಿ ತಿಳಿಸು” ಎಂದು ಗರ್ಜಿಸಿ ಕೇಳಿದನು. ಅದಕ್ಕೆ ವಿಜಯನು ದುರ್ಗಾವತಿಯ ಗವಿಯಲ್ಲಿ ನಡೆದ ವಿಷಯಗಳನ್ನು ಮಾತ್ರ ತಿಳಿಸಿ, ಆ ಪತ್ರವನ್ನು ರಾಕ್ಷಸನೊಬ್ಬನು ತಂದು ತನ್ನ ಕೈಗೆ ಕೊಟ್ಟನೆಂತಲೂ, ಅದನ್ನು ತೆಗೆದುಕೊಂಡು ತಾನು ಕೂಡಲೆ ಹೊರಟು ಬಂದೆನೆಂತಲೂ ಮತ್ತು ತನ್ನನ್ನು ರಾಕ್ಷಸರು ಅಟ್ಟಿ ಬಂದು ಹಿಡಿಯಲಾರದೆ ವಿಫಲರಾಗಿ ಹಿಂದಿರುಗಿದರೆಂತಲೂ ಮಾತ್ರ ತಿಳಿಸಿದನೇ ಹೊರತು, ಚಂದ್ರಲೇಖೆಯು ತನಗೆ ಉಪದೇಶಮಾಡಿದ ಮಂತ್ರ ಮಾಯಾಶಕ್ತಿ ಸಾಧನಗಳಿಂದ ತಾನು ರಾಕ್ಷಸರಿಂದ ತಪ್ಪಿಸಿಕೊಂಡು ಬಂದೆನೆಂಬ ವಿಚಾರವನ್ನು ಮಾತ್ರ ಅವನು ತಿಳಿಸಲಿಲ್ಲ. ವೀರಭೈರವನ ಭಟರಕೈಗೆ ಸಿಕ್ಕದೆ ಇವನು ತಪ್ಪಿಸಿ ಕೊಂಡ ವಿಚಾರವನ್ನು ಕೇಳಿ ಅಗ್ನಿಶಿಖನಿಗೆ ಪರಮಾಶ್ಚರ್ಯವೂ, ಇವನ ವಿಷಯದಲ್ಲಿ ತಾನು ಮಾಡಿದ ಎರಡು ಪ್ರಯತ್ನಗಳೂ ಭಗ್ನ ವಾದುವಾದುದರಿಂದ ಮಹಾಕ್ರೋಧವೂ ಉಕ್ಕಿ ಬಂದರೂ, ತನ್ನ ಅಂತರಂಗಭಾವವು ತನ್ನ ಪುತ್ರಿಗೆ ತಿಳಿಯಬಾರದೆಂದು ಮುಖದಲ್ಲಿ ಮಾತ್ರ ಸೌಮ್ಯಭಾವವನ್ನೇ ತೋರಿಸುತ್ತ, ಅಲ್ಲಿದ್ದ ಕೆಲವು ಮಂದಿ ಸೇವಕರನ್ನು ಕರೆದು, “ಚಂದ್ರಲೇಖೆಗೆ ತಿಳಿಯದಂತೆ ಇವನನ್ನು ಕಾರಾಗೃಹದಲ್ಲಿ ಸೇರಿಸಿ ಚಿತ್ರಹಿಂಸೆ ಮಾಡುತ್ತಿರಿ. ನಾಳೆ ಪ್ರಾತಃಕಾಲಕ್ಕೆ ನಾನು ಬಂದು ಇವನ ವಿಷಯವಾಗಿ ಬೇರೆ ಆಜ್ಞೆ ಮಾಡುವೆನು” ಎಂದು ರಾಕ್ಷಸಭಾಷೆಯಿಂದ ಹೇಳಿ, ವಿಜಯನನ್ನು ಬಳಿಗೆ ಕರೆದು ವಿನಯದಿಂದ, “ವಿಜಯಕುಮಾರಾ, ನಿನ್ನ ಸಾಹಸಕ್ಕೂ ಚಾತುರ್ಯಕ್ಕೂ ನಾನು ಮೆಚ್ಚಿದೆನು. ನಿನ್ನಂತಹವರನು ನನ್ನ ಕುಮಾರಿಗೆ ದೊರೆತುದರಿಂದ ನನಗೆ ಬಹಳ ಸಂತೋಷವಾಯಿತು. ನೀನು ಬಹಳ ಆಯಾಸಪಟ್ಟು ಬಂದಿರುವಂತೆ ಕಾಣುವೆ; ಹೋಗು, ನಮ್ಮ ಪರಿಚಾರಕರು ನಿನ್ನನ್ನುಪಚರಿಸುವರು, ನಾನು ಸುವರ್ಣಗಿರಿಗೆ ಹೋಗಿ ಸಂಧ್ಯಾಕಾಲಕ್ಕೆ ಬಂದು ಮತ್ತೆ ನಿನ್ನನ್ನು ಕಾಣುವೆನು” ಎಂದು ಹೇಳಿ ಪರಿವಾರ ಸಹಿತನಾಗಿ ಸುವರ್ಣಗಿರಿಗೆ ಹೊರಟುಹೋದನು. ಇಷ್ಟೆಲ್ಲವೂ ನಡೆಯುವಾಗ ಮಾಯಾವಿನಿಯಾದ ಮಾಧುರಿಯು ಯಾರಿಗೂ ಕಾಣದಂತೆ ಬಾಗಿಲ ಹಿಂಭಾಗದಲ್ಲಿ ನಿಂತು ಎಲ್ಲ ವಿಷಯಗಳನ್ನೂ ಗ್ರಹಿಸಿದ್ದಳು. ಆದುದರಿಂದ ಅಗ್ನಿಶಿಖನು ಹೊರಟುಹೋದ ಕೂಡಲೇ ಅವಳು ವಿಜಯನಿಗೆ ಗೋಚರಳಾಗಿ, ಆ ಸೇವಕರ ಹಿಂದೆ ಹೋಗಬೇಡವೆಂದು ಸಂಜ್ಞೆಮಾಡಿ ಹೇಳಿ ಆ ಕ್ಷಣವೇ ಹೋಗಿ ನಡೆದ ವೃತ್ತಾಂತವೆಲ್ಲವನ್ನೂ ಚಂದ್ರಲೇಖೆಗೆ ತಿಳಿಸಿದಳು. ವಿಜಯನು ದುರ್ಗಾವತಿಯಿಂದ ಸುರಕ್ಷಿತವಾಗಿ ಬಂದನೆಂದವಳಿಗೆ ಸಂತೋಷವಾದರೂ ಮುಂದೆ ತಮ್ಮ ತಂದೆಯಿಂದ ಅವನಿಗೆ ನಾಶವೇ ಸಂಭವಿಸುವುದೆಂಬುದು ಅವಳ ಮನಸ್ಸಿಗೆ ನಿರ್ಧರವಾಯಿತು. ಅಲ್ಲದೆ ತಾನು ಈ ಕಾಲದಲ್ಲಿ ಸುಮ್ಮನಿರುವುದಾದರೆ ಮುಂದೆ ತನಗೂ ಇದರಿಂದ ಅನರ್ಥಗಳೇ ಉಂಟಾಗುವುವೆಂಬ ಭೀತಿಯೂ ಸಹ ಪ್ರಬಲವಾಗಿ ತೋರಿತು. ಆದುದರಿಂದ ಕಾತುರಳಾಗಿ ಮಾಧುರಿಯನ್ನು ಕರೆದು, ಯಕ್ಷಿಣೀ ವಸ್ತುಗಳನ್ನು ಸಿದ್ಧ ಪಡಿಸಿಕೊಂಡು ಬರುವಂತೆ ಹೇಳಿ, ತಾನೂ ತನ್ನ ಯಕ್ಷಿಣೀ ಸಾಮಗ್ರಿಗಳೊಡನೆ ವಿಜಯನನ್ನು ಕಾಪಾಡಲು ಹೊರಟಳು.

ಈವರೆಗೆ ರಾಕ್ಷಸ ಭಟರು ಹಿರಿದ ಕತ್ತಿಗಳಿಂದ ವಿಜಯನನ್ನು ಬಳಸಿ, ಬೇರೆ ಮಾರ್ಗದಿಂದ ಕಾರಾಗೃಹಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಮಾಧುರಿಯ ಸಂಜ್ಞೆಯಂತೆ ವಿಜಯನಿಗೆ ಅಪಾಯವು ಪ್ರತ್ಯಕ್ಷವಾಗಿಯೇ ಕಂಡು ಬಂದಿತು. ಆದರೂ ಬುದ್ಧಿಶಾಲಿಯಾದ ಅವನು ಧೈರ್ಯಗೆಡದೆ ಆ ವೀರಭಟರನ್ನು ಬಹು ವಿನಯವಾಗಿ ಮಾತನಾಡಿಸುತ್ತ, ಕಾರಾಗೃಹವನ್ನು ಸೇರುವುದರೊಳಗಾಗಿ ತನ್ನ ಎಡಬಲದಲ್ಲಿದ್ದ ಇಬ್ಬರು ವೀರರ ಕೈಗಳಲ್ಲಿದ್ದ ಎರಡು ಖಡ್ಗಗಳನ್ನು ತನ್ನ ಎರಡು ಕೈಗಳಿಂದಲೂ ಫಕ್ಕನೆ ಸೆಳೆದುಕೊಂಡು, ಆ ಭಟರ ಮೇಲೆಯೇ ಪ್ರಯೋಗಿಸಲಾರಂಭಿಸಿದನು. ದೈತ್ಯ ಭಟರಿಗೂ ವಿಜಯನಿಗೂ ಪ್ರಬಲವಾದ ಖಡ್ಡ ಯುದ್ಧವೇ ನಡೆದು ನಾಲ್ಕಾರು ಮಂದಿ ಭಟರು ನೆಲಕ್ಕುರುಳಿದರು. ಇದನ್ನು ನೋಡಿ ರಾಕ್ಷಸರನೇಕರು ವಿಜಯನ ಮೇಲೆ ಬೀಳಲು ಬಂದರು. ಆ ಕೂಡಲೇ ವಿಜಯನು ತನ್ನಲ್ಲಿದ್ದ ಸ್ವಲ್ಪ ಭಸ್ಮವನ್ನು ತೆಗೆದು ಮಂತ್ರಿಸಿ ಅವರ ಮೇಲೆ ಎರಚಲು ಅವರೆಲ್ಲರೂ ಧಗ್ಗನೆ ಉರಿದು ಬೂದಿಯಾದರು.

ಇಷ್ಟು ಹೊತ್ತಿಗೆ ಚಂದ್ರಲೇಖೆಯೂ ಮಾಧುರಿಯೂ ಸಹ ತಮ್ಮ ಯಕ್ಷಿಣೀ ಸಾಮಗ್ರಿಗಳೊಡನೆ ಆ ಸ್ಥಳಕ್ಕೆ ಬಂದು ನಡೆದಿದ್ದ ಅನರ್ಥಗಳನ್ನು ನೋಡಿ, ಇನ್ನು ದಾನವೇಂದ್ರನಿಗೆ ಈ ವಿಚಾರವು ತಿಳಿಯವುದಾದರೆ ವಿಜಯನನ್ನು ಪ್ರಾಣದಿಂದ ಬಿಡಲೇ ಬಿಡನೆಂದು ನಿರ್ಧರಿಸಿದರು. ಇದರಿಂದ ಚಂದ್ರಲೇಖೆಗೆ “ಪಲಾಯನವೇ ಪರಮೋಪಾಯ” ವೆಂದು ತೋರಿತು. ಆಗ ಮಾಧುರಿಯ ಮೂಲಕ ತಮ್ಮ ಪ್ರಯಾಣಕ್ಕೆ ಸಮಸ್ತವನ್ನೂ ರಹಸ್ಯವಾಗಿ ಸಿದ್ಧಪಡಿಸಿ, ಚಂದ್ರಲೇಖೆಯು ಅಲ್ಲಿದ್ದ ಕಾವಲುಗಾರರನ್ನು ಲಂಚದಿಂದ ತನ್ನಂತೆ ತಿರುಗಿಸಿಕೊಂಡು ವಿಜಯನನ್ನು ಕರೆದುಕೊಂಡು ಅಂತಃಪುರಕ್ಕೆ ಹೋದಳು. ವಿಜಯನು ರಹಸ್ಯವಾಗಿ ಸರೋಜನಿಯ ಮನೆಯನ್ನು ಸೇರಿ, ಆಕೆಗೆ ನಡೆದ ವೃತ್ತಾಂತವೆಲ್ಲವನ್ನೂ ತಿಳಿಸಿ, ಮಾರನೆಯ ದಿನ ಉಷಃಕಾಲಕ್ಕೆ ತಾನು ರಾಜಕುಮಾರಿಯೊಡನೆ ಪ್ರಯಾಣಮಾಡುವುದಾಗಿ ತಿಳಿಸಿದನು. ಅರ್ಧರಾತ್ರಿ ಯಾದಮೇಲೆ ಚಂದ್ರಲೇಖೆಯು ಮಾಧುರಿಯ ಸಹಾಯದಿಂದ ಪುರುಷ ವೇಷವನ್ನು ಧರಿಸಿ, ರತ್ನ ಬಾಣವನ್ನೂ ತನ್ನ ಯಕ್ಷಿಣೀ ವಸ್ತುಗಳನ್ನೂ ತೆಗೆದುಕೊಂಡು ಮೊದಲೇ ನಿಶ್ಚಿತವಾಗಿದ್ದಂತೆ ರಹಸ್ಯವಾಗಿ ಸರೋಜಿನಿಯ ಮನೆಗೆ ಬಂದು ನಿಂತಳು. ರಾಜಕುಮಾರನೂ, ಚಂದ್ರಲೇಖೆಯೂ ಸಹ ಸರೋಜಿನಿಯು ತಮಗೆ ಮಾಡಿದ ಸಹಾಯಕ್ಕಾಗಿ ಆಕೆಗೆ ಆಭರಣಗಳನ್ನೂ ಧನವನ್ನೂ ಬಹುಮಾನವಾಗಿ ಕೊಟ್ಟು ಮರುದಿನ ಉಷಃಕಾಲಕ್ಕೆ ಕಾಮಗಾಮಿಯಾದ ಅಶ್ವವನ್ನೇರಿ ಪ್ರಯಾಣಮಾಡಿದರು. ಮಾಧುರಿಯು ಅರಮನೆಗೆ ಬಂದು ಏನೂ ತಿಳಿಯದವಳಂತೆ ಇದ್ದಳು.

ಬೆಳಗಾದ ಮೇಲೆ ಅಗ್ನಿಶಿಖ ರಾಕ್ಷಸೇಂದ್ರನು ದೇವಿಯ ದರ್ಶನ ಮಾಡಿಕೊಂಡು ಸುವರ್ಣಾದ್ರಿಯಿಂದ ಹೊರಟು ಅರಮನೆಗೆ ಬಂದು, ಪದ್ಧತಿಯಂತೆ ಪುತ್ರಿಯಾದ ಚಂದ್ರಲೇಖೆಯನ್ನು ಕೂಗಲು, ಆಕೆಯಿರಲಿಲ್ಲ. ಬಹಳ ಹೊತ್ತಾದರೂ ಬರಲಿಲ್ಲ; ಎಲ್ಲೆಲ್ಲಿ ಹುಡುಕಿದರೂ ಸಿಕ್ಕಲಿಲ್ಲ. ಇಷ್ಟು ಹೊತ್ತಿಗೆ ವಿಜಯನು ಹಿಂದಿನ ದಿನ ನಡೆಯಿಸಿದ ರಾಕ್ಷಸ ವಧೆಯ ಅನರ್ಥವೂ ಸಹ ಅಗ್ನಿ ಶಿಖನಿಗೆ ತಿಳಿಯಬಂತು. ಇದೆಲ್ಲವನ್ನೂ ಕೇಳಿದಕೂಡಲೇ ಪ್ರಳಯ ಕಾಲ ರುದ್ರನಂತೆ ಕೆರಳಿ, ಅಗ್ನಿ ಶಿಖನು ಅಗ್ನಿ ನೇತ್ರನಾಗಿ ದಿಕ್ತಟಗಳೊಡೆಯುವಂತೆ ಆರ್ಭಟಿಸಿ, ಆ ನೀಚನಾದ ವಿಜಯನೇ ತನ್ನ ಪುತ್ರಿಯನ್ನೂ ಅಪಹರಿಸಿ ಕೊಂಡು ಹೋಗಿರುವನೆಂದು ನಿರ್ಧರಿಸಿ, ದ್ರೋಹಿಗಳಾದ ಅವರಿಬ್ಬರನ್ನೂ ಎಲ್ಲಿದ್ದರೂ ಹುಡುಕಿ ಹಿಡಿದು ತಂದು ತಕ್ಕ ಶಿಕ್ಷೆಯನ್ನು ಮಾಡಲೇ ಮಾಡುವೆನೆಂದು ಶಪಥಮಾಡಿಕೊಂಡು ದಿಕ್ಕು ದಿಕ್ಕುಗಳಿಗೂ ಭಟರನ್ನು ಕಳುಹಿಸಿ, ತಾನೂ ಸಹ ಅಶ್ವಾರೂಢನಾಗಿ ಉತ್ತರದಿಕ್ಕನ್ನು ಕುರಿತು ಆ ವಿಜಯನ ತಂದೆಯ ರಾಜಧಾನಿಯಾದ ವೇದವತೀ ನಗರದ ಮಾರ್ಗವನ್ನು ಹಿಡಿದು ಹೊರಟನು.

ವಿಜಯನೂ ಚಂದ್ರಲೇಖೆಯೂ ವೇಗವಾಗಿ ಪ್ರಯಾಣಮಾಡುತ್ತ ದಾಹವಾಗಲು, ಮಾರ್ಗದಲ್ಲಿದ್ದ ಒಂದು ಸರೋವರದಲ್ಲಿ ಜಲಪಾನಮಾಡುವುದಕ್ಕಾಗಿ ಇಳಿದು ಕುದುರೆಯನ್ನೊಂದು ಮರಕ್ಕೆ ಕಟ್ಟಿ ನೀರಿನ ಬಳಿಗೆ ಹೋಗುತ್ತಿದ್ದರು. ಅಷ್ಟರಲ್ಲಿ, ದೂರದಿಂದ ಕುದುರೆಯ ಹೆಜ್ಜೆಗಳ ಸಪ್ಪಳವು ಕೇಳಿ ಬಂದಿತು. ಪ್ರತಿಕ್ಷಣವೂ, ಅಗ್ನಿಶಿಖನ ಕಡೆಯವರು ತಮ್ಮನ್ನು ಹುಡುಕಿಕೊಂಡು ಬರುವರೆಂಬ ಭಯದಿಂದಿದ್ದ ವಿಜಯನಿಗೆ ದೂರದಲ್ಲಿ ಅಶ್ವಾರೂಢನಾಗಿ ಬರುತ್ತಿದ್ದ ಒಂದು ಘೋರಾಕಾರವು ಗೋಚರವಾಯಿತು. ಚಂದ್ರಲೇಖೆಗೆ ಈ ವಿಷಯವನ್ನು ಹೇಳಲು ಅವಳು ದೂರದಿಂದಲೇ, ಅಗ್ನಿಶಿಖನು ಬರುತ್ತಿರುವನೆಂದು ಗುರುತಿಸಿದಳು, ವಿಜಯನು ಭಯದಿಂದ ಮಿಡುಕುತ್ತ ನಿಂತನು. ಚತುರೆಯಾದ ಚಂದ್ರಲೇಖೆಯು ಹೆದರಬೇಡವೆಂದು ಅವನಿಗೆ ಧೈರ್ಯವನ್ನು ಹೇಳಿ, ತನ್ನ ಮಂತ್ರಶಕ್ತಿಯಿಂದ ಕುದುರೆಯನ್ನು ಒಂದು ಬೇಟೆಯ ನಾಯಿಯನ್ನಾಗಿ ಮಾಡಿ ವಿಜಯನನ್ನೊಬ್ಬ ಕಾಡುಬೇಡರವನಂತೆ ಮಾರ್ಪಡಿಸಿ, ತಾನೊಬ್ಬ ಬೇಡಿತಿಯಾಗಿ ನಿಂತು ಅವನೊಡನೆ ಮಾತನಾಡುತ್ತಿದ್ದಳು. ಈವರೆಗೆ ಅಗ್ನಿಶಿಖನು ಸಮೀಪಕ್ಕೆ ಬಂದು ಇವರನ್ನು ನೋಡಿ ನಿಜಾಂಶವನ್ನರಿಯದೆ, “ಎಲೈ ನೀವು ಯಾರು? ಇಲ್ಲಿ ಏನು ಮಾಡುತ್ತಿರುವಿರಿ?” ಎಂದು ಪ್ರಶ್ನೆ ಮಾಡಿದನು. ತಮ್ಮ ನಿಜಾಂಶವು ಎಲ್ಲಿ ಬಯಲಾಗುವುದೋ ಎಂದು ವಿಜಯನ ಎದೆಯು ಡವಡವನೆ ಬಡಿದುಕೊಳ್ಳುತ್ತಿತ್ತು. ಆಗ ಮಾಯಾ ಕಿರಾತಿಯು ರಾಕ್ಷಸನನ್ನು ನೋಡಿ ಧೈರ್ಯದಿಂದ, “ಸ್ವಾಮಿ, ನಾವು ಅಲ್ಲಿ ಕಾಣುವ ಬೆಟ್ಟದ ಪ್ರಾಂತದಲ್ಲಿ ವಾಸಿಸುವ ಕಿರಾತರು; ಸೌದೆಯನ್ನಾರಿಸಿಕೊಂಡು ಹೋಗಲು ಇಲ್ಲಿಗೆ ಬಂದೆವು ತಾವೂ ಯಾರು?” ಎಂದಳು. ಆಗ ಅಗ್ನಿಶಿಖನು ಕುದುರೆಯನ್ನಿಳಿದು, “ನನ್ನ ವಿಚಾರವು ಹಾಗಿರಲಿ, ಈ ಕಡೆ ಯಾವನಾದರೂ ರಾಜಕುಮಾರನು ಒಬ್ಬ ಕನ್ಯೆಯೊಡನೆ ಹೋದುದನ್ನು ನೀವು ನೋಡಿದಿರಾ? ಅದನ್ನು ತಿಳಿಸಿ” ಎಂದು ಕೇಳಿದನು. ಅದಕ್ಕೆ ಆ ಕಿರಾತಿಯು, “ಅಹುದು ಸ್ವಾಮಿ, ಈಗ ಸ್ವಲ್ಪ ಹೊತ್ತಿನ ಮುಂಚೆ ಒಬ್ಬ ಸುಂದರನಾದ ತರುಣನು ಒಂದು ಹೆಣ್ಣನ್ನು ಕುದುರೆಯ ಮೇಲೆ ಕುಳ್ಳಿರಿಸಿ ಕೊಂಡು, ತಾವು ಬಂದ ಮಾರ್ಗದಿಂದಲೇ ಬಂದು ಇದೇ ಸರೋವರದಲ್ಲಿ ಜಲಪಾನಮಾಡಿ ಈ ಕಡೆ ಪೂರ್ವದಿಕ್ಕಿಗೆ ಪ್ರಯಾಣಮಾಡಿದರು. ನಾವು ದೂರದಲ್ಲಿದ್ದುದರಿಂದ ಅವರೊಡನೆ ಮಾತನಾಡಲು ಸಂಧಿಸಲಿಲ್ಲ” ಎಂದಳು. ಆಗ ಅವನೇ ವಿಜಯನು, ಅವಳೇ ಚಂದ್ರಲೇಖೆಯು, ಎಂದು ಅಗ್ನಿಶಿಖನು ಮನಸ್ಸಿನಲ್ಲಿ ನಿರ್ಧರಮಾಡಿಕೊಂಡು ಆ ಕಿರಾತಿಯು ತೋರಿಸಿದ ಅರಣ್ಯ ಪ್ರಾಂತವನ್ನು ಕುರಿತು ಆತುರದಿಂದ ಪ್ರಯಾಣಮಾಡಿದನು.

ಸದ್ಯಕ್ಕೆ ವಿಪತ್ತಿನಿಂದ ಪಾರಾದೆವೆಂದು ಸಂತೋಷಪಡುತ್ತಲೂ ತಾವು ಅಗ್ನಿಶಿಖನಿಗೆ ತಕ್ಕ ಮೋಸಮಾಡಿದೆವೆಂದು ನಗುತ್ತಲೂ ಅವರಿಬ್ಬರೂ, ಆ ರಾಕ್ಷಸನು ಹೋದ ಮಾರ್ಗವನ್ನೇ ನೋಡುತ್ತಿದ್ದು ಅವನು ಕಣ್ಮರೆಯಾದ ಮೇಲೆ ತಮ್ಮ ನಿಜರೂಪಗಳನ್ನು ಧರಿಸಿ, ನಾಯಿಯನ್ನು ಮತ್ತೆ ಕುದುರೆಯನ್ನಾಗಿ ಮಾಡಿ, ಅದನ್ನೇರಿ ವೇದವತೀ ನಗರವನ್ನು ಕುರಿತು ಪ್ರಯಾಣಮಾಡಿದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೋರಿಯಾಚೆಗಿನ ಮರ
Next post ಪುಟ್ಟ ಕೆಂಚವ್ವ

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

cheap jordans|wholesale air max|wholesale jordans|wholesale jewelry|wholesale jerseys