ಸ್ತಬ್ಧರಾತ್ರಿಯಲ್ಲಿ ಕ್ಲೇಷಗೊಂಡಿದೆ
ಗೋರಿಯಾಚೆಗಿನ ಮರ.
ಎಲೆಗಳಲ್ಲಿ ರೌರವ ಮರ್‍ಮರ
ಹುದುಗಿಸಿಟ್ಟ ಎದೆಯ ಹಾಡನ್ನು
ನಿರ್ಜನ ನೆಲೆಯಲ್ಲಿ
ಆಗಾಗ ಗುನುಗುತ್ತಾ, ನಿರುಮ್ಮಳ
ನಗ್ನತೆಯ ಧರಿಸಿ ಬಯಲಾಗಬೇಕು.
ವಿಷಣ್ಣತೆಯ ಹಿಂಡು ಹಿಂಡು ಕುರಿಗಳು
ದಾರಿಯುದ್ದಕ್ಕೂ ಸಾಗುತ್ತಿವೆ.
ಅಲ್ಲೆಲ್ಲೋ ಪ್ರಪಾತದಂಚಿಗೆ
ಮಿಂಚುವ ಮಿರುಪ ಹಸಿರ ಬಲೆಯ
ಹುಚ್ಚು ಕೈ ಬೀಸಿ ಕರೆದಂತೆ
ಒಳಗೆ ಪುಳಕವಿಟ್ಟುಕೊಳ್ಳುತ್ತದೆ,
ಅಪರೂಪಕ್ಕೆ
ಯಕ್ಷಿಣಿ ಕುಣಿತ ಪ್ರೇತ ಕುಣಿತ,
ಜುಗಲಬಂಧಿಗಳು,
ಅವುಗಳ ಶೀತಲ ಕಪ್ಪು ಕಣ್ಣುಗಳು..
ಗುಡ್ಡೆಯ ಕಿಟಕಿ
ರಪರಪನೇ ಬಡಿವ ಸದ್ದು..
ಕೀಟ ಕೊರೆದ ತೂತುಗಳ
ಹೊದ್ದ ನಾಸಿಕದ ಹೊಳ್ಳೆಗಳು..
ಅಬ್ಬಾ.. ರೌಧ್ರ ನಾಟಕದ ಅಂಕಪರದೆ,
ನಾಂದಿಹಾಡು,
ಕೋಡಂಗಿ ವೇಷ, ವಿದೂಷಕ
ನೋಡಲು ಎತ್ತಿದ ತಲೆಗಳು
ಸಾಗರನ ಹಾಸಿಗೆಯ ತುಂಬಾ
ಅದೇ ಸುತ್ತು ಸುರುಳಿ
ಸೊರಗಿ ನರಳಿ ಸತ್ತು ಮರಳಿ
ಅಣುಗಳ ಕಣಗಳ ನಿರತ ರೂಪಾಂತರ
ಕೂಡು ಜೀವದೊಳಗಿನ ಮಾತು.
ಮರದ ಮೌನ.
ಹೊಡೆಮರಳಿ ಸೂಸುವ ಗಾಳಿ
ಹಣ್ಣೆಲೆಯ ಗೊಬ್ಬರ ತಿಂದು
ಮತ್ತೆ ಚಿಗುರು ಬಸಿರ ಹೊತ್ತ ಮರ
ಹಳೇ ರಾಗಕ್ಕೆ ಹೊಸ ಶಬ್ದ ಹೊಸ ಭಾವ
ಸೂಸಿದ ಅದೇ ಹಳೇ ಹಾಡು
ಮತ್ತೆ ತಿಕ್ಕಿದ ಎಲೆಗಳ ನಡುವಿನ
ಅದೇ ಮರ್‍ಮರ.
*****