ಸಮುದ್ರವಿಲ್ಲದ ಹೈದರಾಬಾದಿಗೆ ನಾನೇ ಸಮುದ್ರ-
ವೆಂದು ಹರಡಿದೆ ಆ ಮಹಾನಗರದ ಉದ್ದಗಲ
ತುಂಬಿ ಬೀದಿಗಳ ತುಂಬಿ ಕೇರಿಗಳ
ಒಳಗೊಳುವೆನೆಂದು ನನ್ನ ತಳಮಳದಲ್ಲಿ
ಅದರ ಕಳವಳ

ತಲ್ಲಣಗೊಳ್ಳುತ್ತ
ಕರೆದು ಕೈ ಚಾಚಿ
ತೆರೆದು ತೆರೆಬಿಚ್ಚಿ
ತೆರೆದರೂ ತೆರೆಯದ ಪ್ರಕ್ಷುಬ್ಧ ಚಿತ್ತ
ಗುಡಿ ಗೋಪುರ ಮಿನಾರಗಳ ಸುತ್ತ

ಸುತ್ತಿದೆನು ಮುತ್ತಿದೆನು
ಎಟುಕದ ಎತ್ತರದಲ್ಲಿ
ಮೋಡಗಳ ಬಿತ್ತಿದೆನು
ಅಂಗಡಿ ಜಗಲಿಗಳಲ್ಲಿ
ಮಸೀದಿ ಮೆಟ್ಟಿಲುಗಳಲ್ಲಿ
ಯಾರ ಮನೆಯಂಗಳದಲ್ಲಿ
ಎಲ್ಲೆಂದರಲ್ಲಿ
ನನ್ನ ಕನಸುಗಳ ಕೆತ್ತಿದೆನು
ಒಳಗೇ ಬತ್ತಿದೆನು

ಮುಸ್ಸಂಜೆಯ ಕತ್ತಲಲ್ಲಿ
ಹೆಕ್ಕಿದವರು ಯಾರು ಒಡೆದ ಚಿಪ್ಪಿಗಳ?
ಯಾರಿಗೂ ಕೇಳಿಸಬಾರದೆಂದು
ಬಿಕ್ಕಿದವರು ಯಾರು ಏಕಾಂತದಲ್ಲಿ ದುಃಖಗಳ?
ಅಳಿಸಿ ಹಾಕುತ್ತ ಹೋದವರು ಯಾರು
ತಮ್ಮ ಎಲ್ಲ ಗುರುತುಗಳ?

ಗಾಳಿಯಾದರೋ ಈಗ ತಣ್ಣಗಾಗಿದೆ
ಬೇರೆ ಸಮುದ್ರಗಳ ಬೇರೆ
ಆಘಾತಗಳ ನೆನಪು ತರುತ್ತಿದೆ
ಯುಗಗಳಾಗಿವೆ ನಿದ್ರಿಸಿದೆ-
ನಿದ್ರಿಸುವುದಿದೆ
ನನ್ನ ಮೇರೆಗಳ ತಬ್ಬವುದಿದೆ.
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)