ದಿನವು ಸಂಧಿಸಿ ಹೋಗುತದೆ ಮರುಳೆ
ಘನಮೂರ್ತಿನಾಮವನು ನೆನಹಿಕೋ ಮೂರ್ಖಾ
ಕನಸಿನಂತೆ ಶರೀರ ಮನವೆಂಬ ಆಲಯದಿ
ಅನುದಿನ ಜೀವನೇಶ್ವರನಿರುವತನಕಾ ||ಪ||

ಧರೆಯೊಳಗೆ ನರದೇಹ ಸ್ಥಿರವಲ್ಲ ಸಹಜವಿದು
ಇರುತಿಹುದು ನೀರಮೇಲಿನ ಗುಳ್ಳೆಯಂತೆ
ಕರಗಿಹೋದರೆ ಬರುವದು ಈ ಪರಿ ಕಷ್ಟ
ಕರುಣಬಲದಿಂದ ಅರಿತುಕೊಳ್ಳಯ್ಯಾ ||೧||

ಪೊಡವಿಯೊಳಗೆ ಛಂದ ಮೃಡನ ತಂತ್ರದ ಗೊಂಬೆ
ಹಿಡಿದಾಡಿಸುತ್ತಲಿಹ ಗುರುಸೂತ್ರದಿಂದ
ಒಡೆಯನಂತಃಕರುಣ ತಪ್ಪಿದರೆ ಯಮಗಾಳಿ
ಬಡಿದು ಹೋಗಿಹ ಸೊಡರಿನ ತೆರನಂತೆ ||೨||

ಕೆಸರೊಳಗೆ ಕಮಲ ಉದ್ಭವಿಸಿ ಸುವಾಸನೆಯು
ಹಸನಾಗಿ ದೆಸೆದೆಸೆಗೆ ಎಸಗುತಿಹುದು
ಮುಸುಕಿರ್ದ ಮಾಯಾಂಧಕಾರವನು ಬೆಳಗಿಸುವ
ಶಿಶುರೇಶನ ಹೊಂದಿ ಪರಮಸುಖವ ಬಯಸೋ ||೩||

*****

: