book-283246_960_720‘ಐವತ್ತು ವರ್ಷಗಳ ಕಾಲ ರದ್ದಿ ಕಾಗದದ ಚೂರುಗಳನ್ನು ಸಂಗ್ರಹಿಸಿದಲ್ಲಿ ನೀವೊಂದು ಸಾರ್ವಜನಿಕ ಗ್ರಂಥಾಲಯ ಹೊಂದುತ್ತಿದ್ದಿರಿ’. ಇಂಗ್ಗೆಂಡ್‍ನ ರಾಜಕಾರಣಿ ಟೋನಿ ಬ್ಲೆರ್‌ರ ಈ ಮಾತು ನಮ್ಮಲ್ಲಿನ ಸಾರ್ವಜನಿಕ ಗ್ರಂಥಾಲಯಗಳಿಗೆ ಚೆನ್ನಾಗಿ ಹೊಂದುತ್ತದೆ. ಹಾಗೆ ನೋಡಿದರೆ ನಮ್ಮ ಗ್ರಂಧಾಲಯಗಳು ರದ್ದಿ ಕಾಗದದ ಚೂರುಗಳ ಸಂಗ್ರಹಗಳಷ್ಟೇ; ಅಲ್ಲ ಧೂಳು, ಕ್ರಿಮಿಕೀಟಗಳಿಗೆ ಆವಾಸಸ್ಥಾನವೂ ಹೌದು. ಅಲ್ಲಿನ ಪುಸ್ತಕಗಳು ಹಾಗೂ ಅವುಗಳೊಳಗಿನ ವಿಷಯದಲ್ಲಿ ಜೀವವಿದೆಯೋ ಇಲ್ಲವೋ ಹೇಳುವುದು ಕಷ್ಟ. ಆದರೆ ಆ ಪುಸ್ತಕಗಳು ಸಹಸ್ರಾರು ಕ್ರಿಮಿಕೀಟಗಳಿಗೆ ಜೀವದಾಯಿನಿಯಾಗಿರುವುದಂತೂ ಸತ್ಯ. ಅಷ್ಪರಮಟ್ಟಿಗೆ ಸಾರ್ವಜನಿಕ ಗ್ರಂಥಾಲಯಗಳ ಉಪಯುಕ್ತತೆ ತಳ್ಳಿಹಾಕುವಂತಿಲ್ಲ.

ನಿಮ್ಮೂರಿನ ಸಾರ್ವಜನಿಕ ಗ್ರಂಥಾಲಂರುಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದೀರಾ? ‘ಎಲ್ಲಿದೆ ಟೈಮು’ ಎಂದಿರಾ? ನಿಮ್ಮ ಪ್ರಶ್ನೆಯಲ್ಲೂ ಅರ್ಥವಿದೆ. ಗಡಿಯಾರಕ್ಕೆ ಮುಖ ಮಾಡಿ ನಿಂತ ವರ್ತಮಾನದ ಬದುಕಿನಲ್ಲಿ ಗ್ರಂಥಾಲಯಕ್ಕೆ ಹೋಗುವಷ್ಟು ಪುರುಸೊತ್ತು ಸಿಗುವುದು ಕಷ್ಟ. ಬಿಡುವು ಮಾಡಿಕೊಳ್ಳುವಷ್ಟು ಆಕರ್ಷಣೆಯೂ ಪುಸ್ತಕ ಭಂಡಾರಗಳಲ್ಲಿಲ್ಲ.

‘ಇದು ಸರಸ್ವತಿ ಮಂದಿರ; ಕೈಮುಗಿದು ಒಳಗೆ ಬಾ’ ಎಂದರು ಹಿರಿಯರು. ‘ಗ್ರಂಥಾಲಯಗಳು ಹೃದಯದ ಪಾಲಿಗೆ ಅಮೃತವಿದ್ದಂತೆ; ಮೆದುಳಿಗೆ ಮೇವಿದ್ದಂತೆ’ ಎಂದರು ಗ್ರಂಥಾಲಯ ಮೀಮಾಂಸಕರು. ಈ ಎಲ್ಲ ಮಾತು ನಿಜ. ಆದರೆ ಅಂಥ ಆದರ್ಶಗ್ರಂಥಾಲಯಗಳು ಎಲ್ಲಿವೆ? ನಮ್ಮಲ್ಲಿನ ಬಹುತೇಕ ಸಾರ್ವಜನಿಕ ಗ್ರಂಥಾಲಯಗಳು ಗ್ರಂಥಾಲಯಗಳಾಗಿ ಉಳಿದಿಲ್ಲ; ಅವು ಗತಾಲಯಗಳಾಗಿ ಬದಲಾಗಿವೆ.

ಯಾವ ಸಾರ್ವಜನಿಕ ಗ್ರಂಥಾಲಯಕ್ಕಾದರೂ ಹೋಗಿ. ಅಲ್ಲಿನ ಯಾವ ಮೂಲೆಯಲ್ಲಾದರೂ ಕನ್ನಡಕದ ಹಿಂದಿನ ಹೊಳಪು ಕಣ್ಣುಗಳ ವ್ಯಕ್ತಿಯೊಬ್ಬನ ಚಿತ್ರ ನಿಮ್ಮ ಕಣ್ಣಿಗೆ ಕಾಣಬಹುದು. ಆ ವ್ಯಕ್ತಿಯ ಹೆಸರು ಎಸ್.ಆರ್. ರಂಗನಾಥನ್. ಫೋಟೊ ಇಲ್ಲದಿದ್ದರೂ ಅವರು ಪ್ರತಿಪಾದಿಸಿದ ಐದು ತತ್ವಗಳನ್ನು ನಮೂದಿಸಿದ ಫಲಕವಾದರೂ ಅಲ್ಲೆಲ್ಲಾದರು ಇರಬಹುದು (ಗ್ರಂಥಪಾಲಕನ ನೆನಪಿನಲ್ಲಾದರೂ) ಭಾರತೀಯ ಗ್ರಂಥಾಲಯ ವಿಜ್ಞಾನ ಕ್ಷೇತ್ರದ ಪಾಲಿಗೆ ರಂಗನಾಥನ್ ಪಿತಾಮಹರಿದ್ದಂತೆ. ಆ ಗ್ರಂಥಾಲಯ ವಿಜ್ಞಾನಿ ಪ್ರತಿಪಾದಿಸಿದ ಐದು ತತ್ವಗಳು ಗ್ರಂಥಾಲಯಗಳ ಪಾಲಿಗೆ ಭಗವದ್ಗೀತೆ ಇದ್ದಂತೆ. ಆ ಪಂಚಶೀಲ ತತ್ವಗಳು ಹೀಗಿವೆ:

೧. ಪುಸ್ತಕಗಳು ಇರುವುದು ಬಳಕೆಗಾಗಿ
೨. ಪ್ರತಿಯೊಬ್ಬ ಒದುಗನಿಗೂ ಅವನದೇ ಪುಸ್ತಕ
೩. ಪ್ರತಿ ಪುಸ್ತಕಕ್ಕೂ ಓದುಗ
೪. ಓದುಗನ ಸಮಯ ಉಳಿಸಿ
೫. ಗ್ರಂಥಾಲಯ ನಿರಂತರವಾಗಿ ಬೆಳೆಯುವ ಜೀವಂತ ಸಂಸ್ಥೆ

ಮೇಲಿನ ತತ್ವಗಳು ಸಾರ್ವಜನಿಕ ಗ್ರಂಥಾಲಯಗಳಲ್ಲಿ ಎಷ್ಟರಮಟ್ಟಿಗೆ ನಿಜವಾಗಿವೆ? ‘ಪುಸ್ತಕಗಳಿರುವುದು ಬಳಕೆಗಾಗಿ’ ಎನ್ನುವ ಮೊದಲ ಮಾತನ್ನೇ ನೋಡಿ. ನಮಗೆ ಬೇಕಾದ ಪುಸ್ತಕ ಗ್ರಂಥಾಲಯದಲ್ಲಿ ಎಲ್ಲಿ ಸಿಗುತ್ತದೆ? ಅಚ್ಚುಕಟ್ಟು ವರ್ಗೀಕರಣ, ಸೂಚೀಕರಣ ಹೊಂದಿರುವ ಗ್ರಂಥ ಭಂಡಾರಗಳಾದರೂ ಎಲ್ಲಿವೆ? ಪುಸ್ತಕಗಳ ರಾಶಿಯಲ್ಲಿ ನಮಗೆ ಬೇಕಾದ ಪುಸ್ತಕ ಎಲ್ಲಿಯೋ ಅವಿತು, ಅದನ್ನು ಹುಡುಕುವ ವೇಳೆಗೆ ಓದುವ ತಾಳ್ಮೆಯೇ ಕರಗಿಹೋಗಿರುತ್ತದೆ. ಎರಡನೆಯ, ಮೂರನೆಯ ಮಂತ್ರದ ಗತಿಯೂ ಅಷ್ಟೇ. ಓದುಗರೆಲ್ಲೋ ಪುಸ್ತಕವೆಲ್ಲೋ ಗ್ರಂಥಪಾಲಕ ಇನ್ನೆಲ್ಲೋ? ಒದುಗನ ಸಮಯ ಉಳಿಸಿ ಎನ್ನುವ ಮಾತಿಗಂತೂ ಕವಡೆ ಕಿಮ್ಮತ್ತೂ ಇಲ್ಲ. ಹಾಗಾಗಿ ನಿರಂತರವಾಗಿ ಬೆಳೆಯಬೇಕಾದ ಗ್ರಂಥಾಲಯಗಳು ನಿಂತನೀರಾಗಿ ಗತಾಲಯಗಳಾಗುತ್ತಿವೆ.

ಗ್ರಂಥಪಾಲಕ ತನ್ನ ಸುತ್ತಮುತ್ತಲಿನ ಪರಿಸರದ ವಕ್ತಾರನಂತೆ ಕೆಲಸ ಮಾಡಬೇಕು. ಗ್ರಂಥಾಲಯ ತನ್ನ ಬಳಕೆಯ ಪ್ರದೇಶದ ಚಟುವಟಿಕೆಗಳ ಮಾಹಿತಿ ಕೇಂದ್ರವಾಗಬೇಕು ಎನುತ್ತದೆ ಗ್ರಂಥಾಲಯ ವಿಜ್ಞಾನ. ‘ಎಲೆ ಓದುಗ ನನ್ನನ್ನು ಕೈಗೆತ್ತಿಕೋ. ಸ್ಪರ್ಶಿಸು, ಪುಟ ತೆರೆ; ನನ್ನಲ್ಲಿನ ಜ್ಞಾನದ ಸಂಪತ್ತನ್ನು ಸೂರೆಗೊಳ್ಳು’ ಎಂದು ತನ್ನ ಮುಂದೆ ಹಾದುಹೋಗುವ ಓದುಗನನ್ನು ಕುರಿತು ಪುಸ್ತಕ ಪಿಸುಗುಡುತ್ತದೆ. ಎನ್ನುತ್ತಾರೆ ರಂಗನಾಥನ್. ಈ  ಪಿಸುಗುಟ್ಟುವಿಕೆ ಓದುಗನಿಗಿಂತ ಮೊದಲು ಕೇಳಿಸಬೇಕಾದದ್ದು ಗ್ರಂರ್ಥಪಾಲಕನಿಗೆ. ಆತ ಓದುಗ ಮತ್ತು ಪುಸ್ತಕದ ನಡುವೆ ಸೇತುವಾಗಬೇಕು. ವಿಪರ್ಯಾಸ ನೋಡಿ, ನಮ್ಮ ಬಹುತೇಕ ಗ್ರಂಥಪಾಲಕರ ಕರ್ತವ್ಯ ಬೆಳಗ್ಗೆ ಗ್ರಂಥಭಂಡಾರದ ಬಾಗಿಲು ತೆರೆಯುವುದು ಹಾಗೂ ಹೊತ್ತು ಕಂತಿದ ಮೇಲೆ ಬಾಗಿಲು ಮುಚ್ಚುವುದಷ್ಟಕ್ಕೇ ಸೀಮಿತ. ಠಾಣೆಯಲ್ಲಿ ಜಡ್ಡುಗಟ್ಟಿ ಕೂತ ಪೇದೆಯಂತೆ ಗ್ರಂಥಾಲಯದಲ್ಲಿ ಮಂಕಾಗಿ ಕೂರುವ ಗ್ರಂಥಪಾಲಕನಿಂದ ಓದುಗ ಸೃಜನಶೀಲವಾದ ಏನನ್ನು ತಾನೆ ನಿರೀಕ್ಷಿಸಬಹುದು?

ಕರ್ನಾಟಕದಲ್ಲಂತೂ ಗ್ರಂಥಾಲಯ ಕ್ಷೇತ್ರ ಆತ್ಯಂತ ನಿರ್ಲಕ್ಷಿತ ಕ್ಷೇತ್ರ. ಇಲ್ಲಿನ ಪ್ರತಿ ವರ್ಷದ ಪುಸ್ತಕ ಮಾರಾಟದ ಅವ್ಯವಹಾರ ಎಲ್ಲರಿಗೂ ಗೊತ್ತಿದ್ದದ್ದೇ. ಪುಸ್ತಕಗಳನ್ನು ಕೊಳ್ಳುವುದಕ್ಕಿಂತ ಪೀಠೋಪಕರಣಗಳನ್ನು ಕೊಳ್ಳುವುದಕ್ಕೇ ಮೊದಲ ಆದ್ಯತೆ. ಏಕೆಂದರೆ ಪೀಠೋಪಕರಣಗಳ ವ್ಯವಹಾರ ಹೆಚ್ಚಿನ ಲಾಭದ ಬಾಬತ್ತು. ಓದುಗರಿಗೆ ಅಗತ್ಯವಾದ ಮೂಲಭೂತ ಸೌಕರ್ಯ ಎಂದರೆ ಪೀಠೋಕರಣಗಳಷ್ಟೇ ಎಂದು ಗ್ರಂಥಾಲಯ ಇಲಾಖೆ ತಿಳಿದಂತಿದೆ.

ಹಳ್ಳಿಗಳಲ್ಲಿನ ಗ್ರಂಥಾಲಯಗಳಲ್ಲಂತೂ ಪರಿಸ್ಥಿತಿ ಇನ್ನಷ್ಟು ಹೀನಾಯ. ಪುಟ್ಟ ಕೋಣೆ, ಒಂದೆರಡು ಕಪಾಟುಗಳಲ್ಲಿ ಪುಸ್ತಕಗಳು ಹಾಗೂ ಕೆಲವು ದಿನಪತ್ರಿಕೆಗಳು, ಕೋಣೆಯ ಮೂಲೆಯೊಂದರಲ್ಲಿ ಕುಳಿತ ಓರ್ವ ಗ್ರಂಥಪಾಲಕ- ಇಷ್ಟಕ್ಕೆ ಹಳ್ಳಗಳಲ್ಲಿನ ಗ್ರಂಥಾಲಯದ ಚಿತ್ರ ಸೀಮಿತ.  ನಿರಂತರವಾಗಿ ಬೆಳೆಯುವ ಜೀವಂತ ಸಂಸ್ಥೆ ಎನ್ನಿಸಿಕೊಳ್ಳುವ ಮಾತನ್ನು ಈ ಘಟಕಗಳಿಗೆ ಆನ್ವಯಿಸುವುದು ಹೇಗೆ? ಇನ್ನು ಅಲ್ಲಿನ ಗ್ರಂಥಪಾಲಕರ ಸ್ಥಿತಿಯಂತೂ ದೇವರಿಗೇ ಪ್ರೀತಿ. ತಿಂಗಳಿಗೆ ಸಾವಿರ ರೊಪಾಯಿ ಸಂಭಾವನೆಯಲ್ಲಿ ಅವರು ಕೆಲಸದ ಬಗ್ಗೆ ಪ್ರೀತಿ ಉಳಿಸಿಕೊಳ್ಳುವುದು ಹೇಗೆ ಸಾಧ್ಯ? ಹತ್ತು ಹದಿನೈದು ವರ್ಷಗಳಿಂದ ಕೆಲಸ ಖಾಯಂ ಆಗುವ ನಿರೀಕ್ಷೆಯಲ್ಲಿ ಹಣ್ಣಾಗುತ್ತಿರುವ ಅವರಲ್ಲಿ ಉತ್ಸಾಹ ಉಳಿಯುವುದಾದರೂ ಹೇಗೆ? ಹಾಗೆಂದು ಗ್ರಂಥಾಲಯ ಇಲಾಖೆಯ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದರ್ಥವಲ್ಲ. ನಾವು ಕಟ್ಟುವ ತೆರಿಗೆಯಲ್ಲಿ ನೂರಕ್ಕೆ ಆರು ರೂಪಾಯಿಯನ್ನು ಗ್ರಂಥಾಲಯ ಇಲಾಖೆಗೆಂದೇ ವಸೂಲು ಮಾಡಲಾಗುತ್ತದೆ. ಆ ರೊಕ್ಕವೆಲ್ಲ ಹೋಗುವುದು ಎಲ್ಲಿಗೆ? ಉತ್ತರ ಹುಡುಕುತ್ತಾ ಹೋಗುವುದು ವ್ಯರ್ಥ! ಏಕೆಂದರೆ ಆ ಉತ್ತರ ಇನ್ನೊಂದು ಪುಸ್ತಕಕ್ಕೆ ಕಾರಣವಾಗಿ, ಆ ಪುಸ್ತಕವೂ ಗ್ರಂಥಾಲಯಗಳಲ್ಲಿ ದೂಳು ಹಿಡಿದೀತು?

ನಿಜ, ‘ಗ್ರಂಥಾಲಯ ಗತಾಲಯ’ ಎನ್ನುವ ಹೇಳಿಕೆ ಬಿಡುಬೀಸಿನದು. ಅಪವಾದವೆನ್ನುವಂತೆ ಯಾವುದೋ ಕುಗ್ರಾಮದಲ್ಲಿ ಯಾವನೋ ಉತ್ಸಾಹಿ ಸೀಮಿತ ಸಂಪನ್ಮೂಲಗಳ ನಡುವೆಯೇ ಉತ್ತಮವಾದ ಗ್ರಂಥಾಲಯ ರೂಪಿಸಿರಬಹುದು. ಆದರೆ ನೂರಕ್ಕೆ ತೊಂಬತ್ತರಷ್ಟು ಗ್ರಂಥಾಲಯಗಳು ಗ್ರಂಥ-ಲಾಯಗಳೆನ್ನುವುದರಲ್ಲಿ ಅನುಮಾನವೇ ಇಲ್ಲ. ಓದುವ ಸಂಸ್ಕೃತಿ ನಶಿಸುತ್ತಿದೆ ಎಂದು ಕೊರಗುತ್ತೇವಲ್ಲ- ಆ ಅಳಲನ್ನು ಜೀವಂತವಾಗಿರಿಸುವಲ್ಲಿ ಪುಸ್ತಕಭಂಡಾರಗಳ ಪಾತ್ರ ದೊಡ್ಡದಿದೆ. ಸಣ್ಣಪುಟ್ಟ ಗ್ರಂಥಾಲಯಗಳ ಮಾತು ಬಿಡಿ; ಜಿಲ್ಲೆಗಳಲ್ಲಿನ- ರಾಜಧಾನಿಯಲ್ಲಿನ ಕೇಂದ್ರ ಗ್ರಂಥಾಲಯಗಳಲ್ಲೇ ಎಲ್ಲವೂ ನೆಟ್ಟಗಿಲ್ಲ. ಔಷಧಿ ಅಂಗಡಿಯಾತ ಯಾವುದೋ ಕಪಾಟಿನಿಂದ ಕ್ಷಣಮಾತ್ರದಲ್ಲಿ ಚೀಟಿಯಲ್ಲಿನ ಔಷಧಿ ತೆಗೆಯುವಂತೆ ಕಪಾಟಿನಿಂದ ಪುಸ್ತಕ ತೆಗೆದುಕೊಡುವ ಗ್ರಂಥಪಾಲಕ- ವ್ಯವಸ್ಥೆ- ಈ ಬೃಹತ್ ಲಾಯಗಳಲ್ಲಿಲ್ಲ. ಒಮ್ಮೆ ಒಳಹೋಗಿ ನೋಡಿ: ಪುಸ್ತಕದಲ್ಲಿ ತಲೆಯುದುಗಿಸಿ ಕೂತ ಗಂಭೀರ ಓದುಗರ ಸಂಖ್ಯೆ ತೀರಾ ಕಡಿಮೆ. ಪತ್ರಿಕೆ ಹರಡಿಕೊಂಡು, ಮತ್ತೊಂದು ಪತ್ರಿಕೆ ತೊಡೆಯ ಕೆಳೆಗೆ ಮುಚ್ಚಿಟ್ಟುಕೊಂಡು, ಪತ್ರಿಕೆಯ ಪುಟಗಳಲ್ಲಿ ಮುಖ ಹುದುಗಿಸಿ ತೂಕಡಿಸುವವರೇ ಹೆಚ್ಚು. ಜ್ಞಾನಾರ್ಜನೆ ಉದ್ದೇಶಕ್ಕಿಂತಲೂ ಸಮಯ ಕೊಲ್ಲಲಿಕ್ಕೆ ಗ್ರಂಥಾಲಯಗಳು ಬಳಕೆಯಾಗುತ್ತಿರುವುದೇ ಹೆಚ್ಚು.

‘ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ…’ ಎಂದು ಸಾರ್ವಜನಿಕ ಗ್ರಂಥಾಲಯಗಳಲ್ಲಿನ ಪುಸ್ತಕಗಳು ಮೊರೆಯಿಡುತ್ತಿವೆ. ಆ ಮೊರೆ ಕೇಳಿಸಿಕೊಳ್ಳಬೇಕಾಗಿದೆ- ಓದುಗ, ಇಲಾಖೆ ಹಾಗೂ ಗ್ರಂಥಪಾಲಕ.
*****