ಈ ಹಸಿರು ಹುಲ್ಲು,
ಈ ಹೂವು-ಹಣ್ಣು
ಈ ಬಣ್ಣದ ಹಕ್ಕಿಗಳು
ಈ ಗಂಧಗಾಳಿ
ಈ ಗೂಢ ಶಾಂತಿ
ಈ ತಂಪು ತೋಟದಲ್ಲಿ
ಶ್ವೇತಾಂಬರಿಯ ಹಂಸಗಮನ
ಆಚೀಚೆ ಹಾಲ
ಹಸುಳೆಗಳ ಬೆಳದಿಂಗಳ ನಗು

ಸೂರ್ಯನಿಲ್ಲಿ ಚಂದಿರ
ಚಂದಿರನೋ ಹಾಲೈಸ್ಕ್ರೀಂ

ಇವರೆಲ್ಲ ಬೇಲಿ ಬಿಗಿದಿದ್ದಾರೆ
ಸುತ್ತಲೂ ಎಲುಬಿನ ತಡಿಕೆಗಳಿಂದ
ಗಂಟು ಗಂಟಿನಲ್ಲಿ
ಜಗ್ಗಿ ಹಗ್ಗ ಕಟ್ಟಿದ್ದಾರೆ

ಮೂಡಲ ಮುಂಬಾಗಿಲು
ಪಡುವಲ ಹಿಂಬಾಗಿಲು
ದಿನ ಮೊದಲಿಗೆ ನವಜೀವನ
ರಾತ್ರಿಯಲ್ಲಿ ಮರಣ ಧ್ಯಾನ
ಬಾಗಿಲ ಕಾಯಲಿಕ್ಕಿದೆ
ಬರೀ ಒಂದು ಹೊಟ್ಟೆ

ಹೆಜ್ಜೆ ಹೆಜ್ಜೆಗೂ ಹಲ್ಲು,
ನಾಲಗೆ-ಜೊಲ್ಲು
ಈ ನಡುವಿನ ತೋಟ
ಬದುಕಿ ಉಳಿದಿರುವುದೊಂದು ಗುಲ್ಲು
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)