ಇನ್ನೂ ಹತ್ತಿರ
ಇನ್ನೂ ಹತ್ತಿರ
ಬರುತ್ತಿರುವೆ
ಕಾಣಲಾರಂಭಿಸಿರುವೆ
ಇನ್ನೂ ಎತ್ತರ
ಇನ್ನೂ ಎತ್ತರ

ಆದ್ದರಿಂದ ಸ್ವಲ್ಪ ದೂರ ಹೋಗು
ಅಥವಾ ಸ್ಥಲ್ಪ ಬಾಗು
ಅಯ್ಯೋ
ನನ್ನ ಭುಜಕ್ಕೆ ತಾಗುತ್ತಿದೆ
ನಿನ್ನ ಕಮಂಡಲ ಮೂಗು

ನಿನ್ನ ಎತ್ತಿರಕ್ಕಿಂತ ನನ್ನ ತಗ್ಗಿನ ಭೀತಿ
ಕಾಡುತ್ತಿದೆ ನನ್ನ
ಕಡೆಗೂ
ನಾವಿರುವ ಬಗೆಯೇ
ನಮಗೆ ಬಲು ಪ್ರೀತಿ
ಅಥವಾ
ಅದೇ ಜಗತ್ತಿನ ರೀತಿ

ಇರಬಹುದು ಅದಕ್ಕೇ
ಇತ್ತೀಚೆಗೆ ಜಗತ್ತು
ಆಕಾಶ ಪ್ರಕೃತಿ ಹಿಮಾಲಯ ಮರೆತುಬಿಟ್ಟು
ಕುಳಿತುಕೊಂಡಿದೆ ತನ್ನ
ದಿನನಿತ್ಯದ ವಹಿವಾಟಿನ
ನೂರಾರು ಗೊಂದಲದಲ್ಲಿ ತಲೆಗೆ ಕೈ ಕೊಟ್ಟು
*****