ಹೆಣ್ಣು ಜೀವಕ್ಕೆ ಏನೂ ಅನ್ನಿಸೋದಿಲ್ವೆ?

ಹೆಣ್ಣು ಜೀವಕ್ಕೆ ಏನೂ ಅನ್ನಿಸೋದಿಲ್ವೆ?

ನಮ್ಮ ದೇಶದ ಸಂಸ್ಕೃತಿ ಬಗ್ಗೆ ಬೊಬ್ಬೆ ಹೊಡೆದ ನಾವು ಧರ್ಮದಲ್ಲಿ ರಾಜಕಾರಣ ಬೆರೆಸಿದ್ದೇವೆ, ರಾಜಕಾರಣದಲ್ಲಿ ಧರ್ಮನ್ನು ಬೆರೆಸಿದ್ದೇವೆ. ದರ್ಮದ ಹೆಸರಿನಲ್ಲಿ ದೇಶದ ಏಕತೆಗೆ ಭಂಗ ತರುತ್ತಾ ಮನಸ್ಸು ಮನಸ್ಸುಗಳ ಮಧ್ಯೆ ಬಿರುಕು ಮೂಡಿಸುತ್ತಾ ಬಾಂಬುಗಳೊಂದಿಗೆ ಚೆಲ್ಲಾಟವಾಡುತ್ತಾ ಸಾವು-ನೋವುಗಳ ಮಧ್ಯೆಯೇ ವಿವಿಧತೆಯಲ್ಲಿ ಏಕತೆ ಎಂದು ನಕಲಿ ಘೋಷಣೆ ಮಾಡುತ್ತಲಿದ್ದೇವೆ. ಶಾಂತಿಸ್ಥಾಪನೆಯೇ ನಮ್ಮ ಗುರಿ. ಬುದ್ಧ, ಬಸವ, ಗಾಂಧಿಯ ನಾಡಿದು; ಅಹಿಂಸೆಯೇ ನಮ್ಮ ಧರ್ಮ ಎಂದು ತುತ್ತೂರಿ ಊದುತ್ತಲೆ ಬಂದಿದ್ದೇವೆ. ನಮ್ಮ ಸಂಸ್ಕೃತಿ ದೊಡ್ಡದು, ಧರ್ಮ ಇನ್ನೂ ದೊಡ್ಡದು. ಆಚಾರ – ವಿಚಾರಗಳಂತೂ ಅತಿ ದೊಡ್ಡವು ಅನ್ನುವ ನಾವು ಹೆಣ್ಣಿನ ವಿಷಯಕ್ಕೆ ಬಂದರಂತೂ ದೇಶಕ್ಕೆ ಕೊಟ್ಟಷ್ಟೇ ಮಹತ್ವ ಕೊಡುವುದಲ್ಲದೆ ಮತ್ತಷ್ಟು ಭಾವುಕರಾಗಿ ಬಿಡುತ್ತೇವೆ. ಹೆಣ್ಣು ಮಾತೃದೇವತೆ, ಮಾತೃದೇವೋಭವ, ಹೆಣ್ಣು ಹೆಣ್ಣೆಂದೇಕೆ ಬೀಳುಗಳೆವರು ಕಣ್ಣುಕಾಣದ ಗಾವಿಲರು? ಯೆತ್ತ ನಾರ್‍ಯಂತು ಪೂಜ್ಯಂತೆ ತತ್ರ ದೇವತಾಃ ಎಂದು ಭಕ್ತಿಭಾವ ಸೂಸುನ ನಾವು; ಹೆಣ್ಣಿನ ನಾಮಾಂಕಿತವನ್ನೇ ಜೀವನದಿಗಳಿಗೂ ಇಟ್ಟುಬಿಟ್ಟವರು. ಕಾವೇರಿ, ಕೃಷ್ಣೆ, ತುಂಗೆ, ಭದ್ರೆ, ಕಪಿಲಾ, ನರ್ಮದಾ, ವೇದಾವತಿ, ನೇತ್ರಾವತಿ, ಸೀತಾ ಇತ್ಯಾದಿ. ಯಾಕೆ ನಮ್ಮೆದೇಶೆವನ್ನೇ ಭಾರತ ಮಾತೆ ಎಂದೇ ಕರೆವ ಉದಾರಿಗಳು ನಾವು. ಇಷ್ಟೆಲ್ಲಾ ಪರಾಕು ಹೇಳುವ ನಾವು ಹೆಣ್ಣನ್ನು ಯಾವ ರೀತಿ ಗೌರವಿಸುತ್ತೇವೆ ಬಳಸುತ್ತೇವೆ ಎಂಬ ಮಾತಿಗೆ ಇಷ್ಟೊಂದು ಪೀಠಿಕೆ ಹಾಕಬೇಕಾಯಿತು ನೋಡಿ.

ಬದಲಾದ ಅಭಿರುಚಿ

ಮನೆಯಿಂದಾಚೆಗೆ ಹೊರಡುವಾಗ ಮುಖ್ಯವಾಗಿ ಮೈಮುಚ್ಚುವಂತೆ ದಿರಿಸು ತೊಟ್ಟುಕೊಂಡು ಹೋಗಲು ನಿರ್ಬಂಧಿಸುತ್ತೇವೆ. ಮೈತುಂಬಾ ಸೆರಗು ಹೊದಿಬೇಕು ತಲೆ ತುಂಬಾ ಹೊದ್ದರಂತು ಬಲು ಭೇಷು. ತೆಳ್ಳನೆ ಬಟ್ಟೆಗಳೆಂದರೇನೆ ನಮಗೆ ಅಲರ್ಜಿ ಸೆಲ್ವಾರ್‌ ಮೇಲೆ ಇರಲಿ. ಮಿಡಿಸ್ಕರ್ಟ್ ಎಂದರೆ ಸಿಡಿಮಿಡಿ. ಇದೆಲ್ಲಾ ನಮ್ಮ ಮನೆ ಹೆಣ್ಣು ಮಕ್ಕಳಿಗಲ್ಲ. ಅಕ್ಕ-ಪಕ್ಕದವರು ಏನಾದರೂ ಹಾಕ್ಕೊಂಡು ಹಾಳಾಗಲಿ ಬೇಕಾದರೆ ನೋಡೊಣವಂತೆ. ಸೌಂದರ್ಯ ಇರೋದು ಮುಚ್ಚಿಡೋಕ್ಕಲ್ಲ. ಹೊಕ್ಕಳ ಕೆಳಗೆ ಉಟ್ಟ ಸೆರಗು ಸರಿದರೆ ಜೊಲ್ಲು ಸುರಿಸುತ್ತೇವಲ್ಲವೆ. ಇದೆಲ್ಲಾ ತಿಳಿದೋ ಏನೋ ಸಿನಿಮಾದವರು, ಹಂಗೆ ಜಾಹೀರಾತುದಾರರು ಕೂಡ ಹೆಣ್ಣಿಗೆ ಹೆಚ್ಚು ಪ್ರಾಶಸ್ತ್ಯ ಕೊಟ್ಟು ತಮ್ಮ ವ್ಯಾಪಾರವನ್ನು ದ್ವಿಗುಣಿಸಲು ಹಲವು ಗಿಮಿಕ್‌ಗಳನ್ನು ಮಾಡ ಹತ್ತಿದ್ದಾರೆ. ಇದಕ್ಕೆ ನಮ್ಮವರ ಖಯಾಲಿಯೇ ಕಾರಣ, ಈಗೀಗ ಸಿನಿಮಾದ ಪಾಲಿಗಂತೂ ‘ಹೆಣ್ಣು’ ಬಿಕರಿಗಿಟ್ಟ ವಸ್ತುವಾಗಿಬಿಟ್ಟಿದ್ದಾಳೆ. ೧೯೭ಂ-೮ಂರ ದಶಕದ ಸಿನಿಮಾಗಳಲ್ಲಿ ಒಂದು ಕ್ಲಬ್ ಡಾನ್ಸ್ ಇರಲೇಬೇಕೆಂಬುದು ಅಲಿಖಿತ ಒಪ್ಪಂದವಾಗಿ ಬಿಟ್ಟಿತ್ತು. ಅದಕ್ಕೇಂದೇ ಹೆಲನ್‌, ಜ್ಯೋತಿಲಕ್ಷ್ಮಿ, ಜಯಮಾಲಿನಿ, ಸಿಲ್ಕ್‌ಸ್ಮಿತಾ, ಅನುರಾಧ, ಹಲಂ, ಡಿಸ್ಕೋಶಾಂತಿಯರಂತಹ ದಪ್ಪ ಮೊಲೆಯ ಬಾಳೆದಿಂಡಿನಂತಹ ಕಾಲುಗಳ, ಸಿಡಿಲ ತೊಡೆಗಳ, ಬಾದಾಮಿ ಹೊಕ್ಕಳ ಏನೆಲಾ ತೋರುವ ಕ್ಯಾಬರೆ ನರ್ತಕಿಯರು ಸೃಷ್ಟಿಗೊಂಡರು.

ರಸಿಕರಿಗೆ ಔತಣ

ಮೈಯೆಲಾ ಕುಣಿಸುತ್ತ ಉದರ ಕುಲುಕುವ ನೃತ್ಯ ಮಾಡುವ ಎಕ್ಸ್‌ಪರ್ಟ್‌ಗಳಿವರು. ಅದಕ್ಕೆ ತಕ್ಕುದಾದ ಕಾಮ ಪ್ರಚೋದಕ ಹಾಡು ಡ್ರಮ್ ಜಾಸ್ ಟ್ರಂಪೆಟ್ ಸ್ಯಾಕ್ಸೊಫೋನ್‌ಗಳ ಮಾದಕ ಸಂಗೀತ ಬೇರೆ. ಇಂತಹ ಒಂದು ನೃತ್ಯ ನೊಡಲಿಕ್ಕಾಗಿಯೇ ಥಿಯೇಟರಿಗೆ ಬರುವ ಉಸಿರು ಬಿಗಿ ಹಿಡಿದು ಕಾದು ಕೂತು ಶೀಟೆ ಚಪ್ಪಾಳೆ ಹೊಡೆವ ಪಡ್ಡೆಗಳು ಅವರೊಂದಿಗೆ ವೃದ್ದ ರಸಿಕರ ಸಮೂಹವೂ ಇತ್ತು. ಇದನ್ನೆಲ್ಲಾ ಹೆಣ್ಣು ಮಕ್ಕಳು ನೋಡುತ್ತಾ ಅಸಹ್ಯಪಡುತ್ತಾ ಹೇಗೋ ಸೈರಿಸಿಕೊಳ್ಳುತ್ತಿದ್ದರು. ಈ ತುಂಡು ಬಟ್ಟೆಯ ಲಲನೆಯರ ಎದೆ ಸೀಳು ಆಳವಾದ ನಾಭಿ ಕಂಡು ಪುಳಕಿತನಾಗುತ್ತಿದ್ದ ಪ್ರೇಕ್ಷಕ ಮಹಾಶಯ ಬರುಬರುತಾ ಬೇಸತ್ತ. ಅವನಿಗೆ ಈ ನರ್ತಕಿ ಯರನ್ನೆಲ್ಲಾ ಪದೇ ಪದೇ ನೋಡುವಾಗ ಮನೆಯಲ್ಲಿನ ಹೆಂಡತಿಯನ್ನೇ ನೋಡಿದಷ್ಟು ಜಿಗುಪ್ಸೆ ಕಾಡಲಾರಂಭಿಸಿತು. ಶಿಳ್ಳೆಗಳು ತಣ್ಣಗಾದವು. ಈ ಮುದಿ ಹೆಂಗಸರು ತೊಪ್ಪೆ ಮೈ ಕುಲುಕಿಸಿ ಕುಣಿವಾಗ, ರಸಿಕರು ಅಸಹ್ಯ ಪಟ್ಟುಕೊಂಡರು. ಆಗ ನಿರ್ಮಾಪಕ ಭಯಭೀತನಾದ, ಪ್ರೇಕ್ಷಕ ದೊರೆ ಏನನ್ನೋ ಹೊಸದನ್ನು ಬಯಸುತ್ತಿದ್ದಾನೆಂದು ತಲೆ ತುರಿಸಿಕೊಂಡ ಪಂಡರಿಬಾಯಿ, ಎಂ.ವಿ. ರಾಜಮ್ಮ, ಜಾನಕಿ, ಲೀಲಾವತಿ, ಕಲ್ಪನಾ ಇವರ ಹೀರೋಯಿನ್ ಪಟ್ಟ ಮುಗಿದ ದಿನಗಳವು.

ಹೀರೋಯಿನ್‌ಳ ಬಟ್ಟೆಯನ್ನೇ ಬಿಚ್ಚಿಸಿದರೆ ಪ್ರೇಕ್ಷಕ ಖುಷಿಯಾದಾನಲ್ಲವೆ ಎಂದು ಯೋಚಿಸಿತು ಜಾಣ ಸಿನೆಮಾ ಮಂದಿ, ಭಾರತಿ, ಜಯಮಾಲ, ಜಯಂತಿ, ಮಂಜುಳಾರಂತವರಿಗೂ ಬಟ್ಟೆ ಬಿಚ್ಚುವ ದುರ್ಗತಿ ಬಂತು. ಹೀರೋಯಿನ್‌ಗಳೇ ಕ್ಲಬ್ ಡಾನ್ಸ್‌ಗೆ ಇಳಿದರು. ಸ್ವಿಮಿಂಗ್ ಡ್ರೆಸ್ ತೊಟ್ಟು ನೀರಿಗೆ ಬಿದ್ದರು. ಬಿಳಿಸೀರೆಯುಟ್ಟು ಮಳೆಯಲ್ಲಿ ನೆನೆಯುತ್ತಾ ಕೆಸರಲ್ಲಿ ಉರುಳಾಡುವುದೇ ಪ್ರೇಮದ (ಕಾಮದ) ಸಂಕೇತವಾಯಿತು. ಆಗಲೇ ನಮ್ಮ ನೆರೆಮನೆಯ ಹುಡುಗಿಯರ ಧಿರಿಸುಗಳೂ ಬದಲಾದವು. ಹುಡುಗಿಯರು ಭಾರತಿ, ಜಯಮಾಲರಂತೆ ಸೀರೆಯನ್ನು ಹೊಕ್ಕಳ ಕೆಳಗೆ ಜಾರಿಸಿದರು. ದಿನಗಳೆದಂತೆ ಆಂಟಿಯರ ಸೀರೆಗಳೂ ಕೆಳಗೆ ಸರಿದವಲ್ಲದೆ ಹೊಕ್ಕಳನ್ನು ಅಲಂಕರಿಸುವ ಜಾಡ್ಯವೂ ಶುರುವಾಯಿತು.

ಬೆತ್ತಲಾದ ಸಂಸ್ಕೃತಿ

ಸಿನೆಮಾದವರನ್ನು ವಿಮರ್ಶಕರು ಸಮಾಜವಾದಿಗಳು ಒಟ್ಟಿಗೆ ಸೇರಿ ಟೀಕಿಸಿದಾಗ ಅವರೇನು ಬಗ್ಗಲಿಲ್ಲ. ಮಳೆ ಡ್ಯಾನ್ಸ್ ನೋಡಲೆಂದೇ (ಚಳಿ ಚಳಿ ತಾಳೆನು ಈ ಚಳಿಯ) ಜನ ಮುಗಿ ಬೀಳುವಾಗ ಸಿನಿಮಾ ಮಂದಿ ಕಾಸಿಗೆ ಸೋತು ಸಂಸ್ಕೃತಿಯನ್ನು ಬೆತ್ತಲೆ ಮಾಡಿ ಮಾರಾಟಕ್ಕಿಳಿದರು. ನಮ್ಮ ಸಂಸ್ಕೃತಿ ಎಂದು ಸಮರ್ಥಿಸಿಕೊಳ್ಳುವಷ್ಟು ಉಡಾಫೆಗಿಳಿದರು. ಬೇಲೂರಿನ ಶಿಲಾ ಬಾಲಿಕೆಯರನ್ನು ಸಂಸ್ಕೃತಿಯ ಪ್ರತೀಕ ಅನ್ನುತ್ತೀರಾ? ನಮ್ಮ ದೇವಾನುದೇವತೆಗಳ ಮೈಮೇಲಿನ ಬಟ್ಟೆಯೂ ಒಟ್ಟಾರೆ ಕಡಿಮೆಯೆ. ಅರೆಬೆತ್ತಲೆ ದೇವರ ಪಟಗಳನ್ನು ನಾವು ಪೂಜಿಸುತ್ತಿಲ್ಲವ? ವಾದ ಮಂಡಿಸಿದರು. ಇದನ್ನೆಲಾ ನಮ್ಮ ಮಹಿಳಾ ಸಂಘಗಳು ಸಮಾಜಗಳು ಪ್ರತಿಭಟಿಸಬೇಕಿತ್ತು. ಆದರೇನಾಯಿತು! ಪ್ರತಿಭಟಿಸುವ ಮಾತಿರಲಿ ಇದೇ ಹೆಣ್ಣು ಮಕ್ಕಳೇ ಅನುಕರೆಣೆಗಿಳಿದು ಬೀದಿ ಹೈಕಳ ತಲೆರಾಡಿ ಮಾಡಿದ್ದು ವಿಪರ್ಯಾಸ. ಪಾರದರ್ಶಕ ಸೀರೆ ಉಡುವ ಹೆಣ್ಣಿನ ಮೇಲೆ ಕಾಮಾಂಧರು ಕಣ್ಣು ಕೀಲಿಸಿದರು ಹಿಂದೆ ಬಿದ್ದರು ಛೇಡಿಸಿದರು ಕೈಗೆ ಎಟುಕದಿದ್ದಾಗ ಅವಿತಿಟ್ಟ ಕಾಮ ಸೇಡಿನ ರೂಪ ಪಡೆಯಿತು. ಆಗಲೆ ರೇಪ್, ಗಾಂಗ್ ರೇಪ್, ಆಸಿಡ್ ಪ್ರಕರಣಗಳು ಹುಟ್ಟಿಕೊಂಡವು.

ಬಿಚ್ಚಮ್ಮಗಳು

ಕಾಲ ಸರಿದಂತೆ ಪರಭಾಷಾ ನಟೀಮಣಿಯರೂ ಅವರ ಚಿತ್ರಗಳೂ ಬಂದವು. ಬಟ್ಟೆ ಬಿಚ್ಚುವುದೇ ಕಲೆ ಎನ್ನುವಂತಾಗಿ ಅಭಿನಯಕ್ಕಿಂತ ಅಂಗಾಂಗ ಪ್ರದರ್ಶನವೇ ಬಂಡವಾಳವಾಯಿತು. ತೆರೆಯಲ್ಲಿ ಗಂಡು ಹೆಣ್ಣು ಬಲವಾಗಿ ಅಪ್ಪುವುದು ಚುಂಬಿಸುವುದು, ಉರುಳು ಸೇವೆ ಮಾಡುವಂತ ಬೆಡ್ರೂಮ್ ಸೀನ್‌ಗಳೂ ರಾರಾಜಿಸ ಹತ್ತಿದವು. ಮಲೆಯಾಳಿ ಸಿನೆಮಾಗಳೂ ಧಾಳಿಯಿಟ್ಟವು. ಬೇರೆ ಭಾಷೆಗಳಲ್ಲಿ ಡಿಂಪಲ್, ಮಾಧುರಿ, ರವೀನಾ, ಮಮತಾ, ಶಿಲ್ಪಶೆಟ್ಟಿ, ರಂಭಾ ಮುಂತಾದವರು ಸೀರೆ ಉಡಲೇ ನಾಚಿದರು. ಕನ್ನಡದಲ್ಲೂ ಈ ಟ್ರೆಂಡ್ ಬೆಳೆಯಿತು. ವನಿತಾವಾಸು, ಸುಮನ್ ನಗರಕರ್, ದುರ್ಗಾಶೆಟ್ಟಿ, ಭಾವನಾ, ಪ್ರಿಯಾಂಕ, ರಮ್ಯಕೃಷ್ಣ ಇತ್ಯಾದಿ ಬಿಚ್ಚಮ್ಮಗಳ ದಂಡು ದಂಡನ್ನೇ ನಿರ್ಮಾಪಕ ಕರೆತಂದು, ತನ್ನ ತಿಜೋರಿ ತುಂಬಿಕೊಂಡ. ಹೆಣ್ಣಿನ ಮಾನ ಹರಾಜಿಗಿಟ್ಟ ರವಿಚಂದ್ರನ್ ರಂತಹ ಅಭಿನಯದ ಗಾಳಿ ಗಂಧ ತಿಳಿಯದ ನಾಯಕರು ನಾಯಕಿಯರನ್ನು ಅರೆನಗ್ನ ಮಾಡಿ ತುಂಬಿದೆದೆಯ ಮೇಲೆ ತಲೆಯಿಟ್ಟು ವಿರಮಿಸಿದರು.

ಹಣದಾಸೆಗಾಗಿ ಎಲ್ಲಾ ಬಿಚ್ಚಿ ಬಿಸಾಡಲು ಸಿದ್ದಳಾದ ಹೆಣ್ಣಿನ ಇಂದಿನ ಸ್ಥಿತಿಗೆ, ನಿರ್ಲಜ್ಜತೆಗೆ ಹೇಸಿಗೆ ಪಡೋಣವೆ? ಅಂಗಾಂಗ ಪ್ರದರ್ಶನ ಮಾಡಿಯೇ ವಿಶ್ವ ಸುಂದರಿಯರ ಪಟ್ಟ ಏರಿ ಲಕ್ಷಾಂತರ ಡಾಲರ್ ದುಡಿವ ಹೆಣ್ಣ ಸಾಮರ್ಥ್ಯದ ಬಗ್ಗೆ ಹೆಮ್ಮೆ ಪಡೋಣವೆ? ಶಿಲಾಬಾಲಿಕೆಯರನ್ನು ಕಲೆಯ ಮೂಲ ಸೆಲೆ ಎಂದೇ ಬೀಗುವ ನಾವು ಜೀವಂತ ಬಾಲೆಯರ ಬೆತ್ತಲೆಯಾಟವನ್ನು ‘ಕಲೆ’ ಎಂದೇ ಭಾವಿಸಿ ರಾಜಿಯಾಗೋಣವೆ?

೨೦೦೨ರಲ್ಲಿ ಪಡ್ಡೆ ಹುಡುಗರ ಲವ್ ಸ್ಟೋರಿಗಳು ಶುರುವಾದ ಮೇಲಂತೂ ವೇಷಭೂಷಣಗಳ ಜೊತೆಗೆ ಸಾಹಿತ್ಯಿಕವಾಗಿ ಹೆಣ್ಣನ್ನು ಸಾಂಗ್ ಮತ್ತು ಡೈಲಾಗ್ಗಳಲ್ಲಿ ‘ಏನೆಲೆ, ಬಾರೆಲೆ’ ಎಂದೇ ಛೇಡಿಸುತ್ತಾ ಬಿತ್ತರಿ, ಚತ್ತರಿ ಎಂದು ಹಾಡಿ ಕುಣಿಯುವುದು, ಕೊಡೆ ಕಿಸ್ಸು, ಸೊಂಟ, ಎದೆ, ನಿತಂಬಗಳ ಮೇಲಿನ ಹಾಡುಗಳು ಮಾಮೂಲಾಗಿ ಬಿಟ್ಟವು. ಬೀದಿ ವೇಶ್ಯೆಯರಿಗಿಂತಲೂ ಕೀಳಾಗಿ ಹೀರೋಯಿನ್ಗಳನ್ನು ಬಳಸಿ ದುಡ್ಡು ಬಾಚುವ ನಿರ್ಮಾಪಕ, ನಿರ್ದೇಶಕ ಖಯಾಲಿಗೆ ಸೆನ್ಸಾರ್ ನವರ ಕತ್ತರಿಯೂ ಮೊಂಡಾಯಿತು.

ಸಿನಿಮಾದ ಗತಿ ಇಷ್ಟಾಯಿತಲ್ಲ. ಟಿ.ವಿ. ಯವರೇನು ಕಡಿಮೆ ಉಪಕಾರ ಮಾಡಿದರೆ? ರಾತ್ರಿ ಒಂಬತ್ತೂವರೆಗೆಲ್ಲಾ ಮಿಡ್‌ನೈಟ್ ಮಸಾಲಾ ಗರಾಂ ಗರಂಗಳಲ್ಲಿ ಹೆಣ್ಣನ್ನು ತೆರೆದಿಟ್ಟರು. ಅದನ್ನು ನೋಡುವ ದೊಡ್ಡವರ ಗತಿಯಿರಲಿ ಮಕ್ಕಳ ಮಾನಸಿಕ ಸ್ಥಿತಿ ಏನಾದೀತು ಹೇಳಿ?

ಇನ್ನು ಟಿ.ವಿ. ಜಾಹೀರಾತುಗಳತ್ತ ಓರೆನೋಟ ಬೀರಿದರೆ ಅಲ್ಲಿ ವಕ್ರ ವಾಕರಿಕೆ ತರುವ ನೋಟವೇ ಆಟ, ಬ್ಲೇಡಿನ ಜಾಹೀರಾತಿನಲ್ಲಿ ಗಂಡಸಿನ ನುಣ್ಣನೆ ಗಲ್ಲ ಸವರುವ ಅರೆಬರೆ ವಸ್ತ್ರಧಾರಿ ಹೆಣ್ಣು ಕಾಣುತ್ತಾಳೆ, ಬ್ಲೇಡಿಗೂ ಬಿಕಿನಿಗೂ ಏನಕೇನ ಸಂಬಂಧವಯ್ಯಾ! ಗಂಡಿನ ಅಂಡರ್ ವೇರ್ ಬನಿಯನ್‌ಗಳ ಸಾಮರ್ಥ್ಯ ಪ್ರದರ್ಶಿಸಲು ಹೊಡೆದಾಡುವ ಗಂಡು ಕೊನೆಗೆ ಹೆಣ್ಣೊಂದನ್ನು ಅಪ್ಪುತ್ತಾನೆ. ಕಾಂಡೋಮ್‌ಗಳ ಪ್ರಚಾರಕ್ಕೆ ಮೈಮೇಲೆ ನೆಟ್ಟಗೆ ಬಟ್ಟೆ ತೊಡದ ಕಟ್ಟು ಮಸ್ತಾದ ಹೆಣ್ಣು ಗಂಡು ಅಪ್ಪಿ ಲಲ್ಲೆಗರೆಯುವುದರ ಮೇಲೆ ಕಾಂಡೋಮ್ ಜಾಹಿರಾತು ಪಲ್ಪಿ ಹೊಡೆಯುತ್ತದೆ! ಕಾರಿಗೆ ಬಳಸುವ ಆಯಿಲ್‌ನಿಂದ ಮಾಕ್ ಡವಲ್ ವಿಸ್ಕಿಯಂತಹ ಲಿಕ್ಕರ್ ಗುಟುಕರಿಸಲೂ ತುಂಬಿದೆದೆಯ ರೂಪದರ್ಶಿಯೇ ಬೇಕೆಂದರೇನರ್ಥ. ಸೋಪುಗಳದ್ದು ಬೇರೆಯೇ ಕತೆ. ಸುಂದರಿಯೋರ್ವಳು ಪಬ್ ನಲ್ಲೋ ಸರೋವರದಲ್ಲೋ ಜಲಪಾತದ ಬುಡದಲ್ಲೋ ಶವರ್ ನ ಅಡಿಯಲ್ಲೋ ಎದೆ ಕಾಣುವಂತೆ ಟರ್ಕಿ ಟವೆಲ್ ಸುತ್ತಿ ಮೀಯದಿರಲು ಸಾಧ್ಯವೆ? ಟೀ, ಕಾಫಿ, ಪೌಡರ್, ಶಾಂಪು, ಲಿಪ್‌ಸ್ಟಿಕ್, ಕೋಲಾ, ಪೆಪ್ಸಿ, ಅಯೋಡೆಕ್ಸ್, ಮೂವ್, ಡನಲಪ್ ಹಾಸಿಗೆ, ಬೀಡಿ, ಸಿಗರೇಟು, ಸೀಮೆಂಟು ಎಲ್ಲೆಡೆ ಅರೆನಗ್ನ ಹೆಣ್ಣು ಹೆಣ್ಣು ಹೆಣ್ಣು. ಎಲ್ಲಿ ಬಂತಪ್ಪಾ ನಮ್ಮ ಸಂಸ್ಕೃತಿ? ಮಡಿ ಸೀರೆ ಉಟ್ಟ ದೇವಸ್ಥಾನ ಸುತ್ತುವ, ದೇವರ ಕೋಣೆಯಲ್ಲಿ ಕೂತು ಭಕ್ತಿಗೀತೆ ಹಾಡುವ ಹೆಣ್ಣುಗಳನ್ನಿಂದು ಸಿನಿಮಾದಲ್ಲಿ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಈಗೆಲ್ಲಾ ಬರಿ ಓಳು.

ಟಿ.ವಿ. ಧಾರಾವಾಹಿಯವರೂ ಲವ್ ಸಾಂಗ್ ಹಾಡಿಸುವ ನೆಪದಲ್ಲಿ ಹೆಣ್ಣಿನ ಮೈತೋರುವ ಮಂಗಚೇಷ್ಟೆಗಿಳಿದಿದ್ದಾರೆ. ಅದನ್ನೇ ಕೂತು ನೋಡುತ್ತವೆ ನಮ್ಮ ನಿಮ್ಮ ಮನೆ ಹೆಣ್ಣು ಮಕ್ಕಳು. ತಂದೆ -ತಾಯಿಯರ ಜೊತೆ ಮಕ್ಕಳು ಕೂತು ಟಿವಿ ನೋಡಲೀಗ ಅಂಜಿಕೆ ಹುಟ್ಟುತ್ತಿಲ್ಲವೆ ಸ್ವಾಮಿ? ಇದನ್ನೆಲ್ಲಾ ನೋಡುವ ಹೆಣ್ಣು ಜೀವಕ್ಕೆ ಏನೂ ಅನ್ನಿಸುವುದಿಲ್ಲವೆ!

ಟಿವಿಯಲ್ಲಿ ಫ್ಯಾಷನ್ ಪೆರೇಡ್

ಹಣದಾಸೆಗಾಗಿ ಎಲಾ ಬಿಚ್ಚಿ ಬಿಸಾಡಲು ಸಿದ್ದಳಾದ ಹೆಣ್ಣಿನ ಇಂದಿನ ಸ್ಥಿತಿಗೆ, ನಿರ್ಲಜ್ಜತೆಗೆ ಹೇಸಿಗೆ ಪಡೋಣವೆ? ಅಂಗಾಂಗ ಪ್ರದರ್ಶನ ಮಾಡಿಯೇ ವಿಶ್ವ ಸುಂದರಿಯರ ಪಟ್ಟ ಏರಿ ಲಕ್ಷಾಂತರ ಡಾಲರ್ ದುಡಿವ ಹೆಣ್ಣ ಸಾಮರ್ಥ್ಯದ ಬಗ್ಗೆ ಹೆಮ್ಮೆ ಪಡೋಣವೆ? ಶಿಲಾಬಾಲಿಕೆಯರನ್ನು ಕಲೆಯ ಮೂಲ ಸೆಲೆ ಎಂದೇ ಬೀಗುವ ನಾವು ಜೀವಂತ ಬಾಲೆಯರ ಬೆತ್ತಲೆಯಾಟವನ್ನು ‘ಕಲೆ’ ಎಂದೇ ಭಾವಿಸಿ ರಾಜಿಯಾಗೋಣವೆ ? ಗಂಡೇ ನಾಚಿ ಹೇಸಿಗೆ ಪಡುವಂತ ಬಿಚ್ಚಮ್ಮಗಳ ಐಲಾಟವನ್ನು ನೋಡುವ ಅಮ್ಮ ಅಕ್ಕಂದಿರ ಮೌನದ ಬಗ್ಗೆ ಮರುಗೋಣವೆ. ನಮ್ಮ ಭಾರತೀಯ ನಾರಿಯರು ಸ್ಯಾರಿ ವಾಮೋಹ ತೊರೆದ ಬಗ್ಗೆ ‘ಸಾರಿ’ ಅನ್ನೋಣವೆ! ಹೆಣ್ಣುಗಳೇ ತುಟಿಪಿಟಕ್ ಅನ್ನದೆ ಸುಮ್ಮನಿರುವಾಗ ನಮಗೇಕಪ್ಪಾ ಕಣ್ಣುರಿ ಎಂದು ತಾತ್ಸಾರ ಮಾಡೋಣವೆ? ಹೇಳಿ ಬಾಲೆಯರೆ ನೀವೆ ಹೇಳಿ? ಟವಿಗಳ ಚಾನಲ್ ಒತ್ತಿದರೆ ಮೈಮೇಲೆ ದೆವ್ವ ಹೊಕ್ಕವರಂತೆ ಬೆತ್ತಲೆ ಕುಣಿವ, ಫ್ಯಾಶನ್ ಪೆರೇಡ್ ಮಾಡುವ ಎಂಟಿವಿ, ಎಫ್‌ಟಿವಿ ಚಾನೆಲ್‌ಗಳ ಸ್ವೇಚಾಚಾರದ ಬಗ್ಗೆ ಯಾರಿಗೆ ದೂರು ಸಲ್ಲಿಸೋಣ? ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಎಂಬ ಗರತಿ ಗೌರಮ್ಮ ಅರಿಶಿಣ ಕುಂಕುಮ ಶೋಭಿತೆ ಒಮ್ಮೆ ಇಂತಹ ಚಾನಲ್ಗಳನ್ನೇ ರದ್ದುಪಡಿಸುದಾಗಿ ಗುಡುಗಿದ್ದುಂಟು. ಯಾರಿಂದ ಯಾರಿಗೆ ಎಷ್ಟು ಸಂದಾಯವಾಯಿತೋ! ಅನಂತರ ಸುಷ್ಮಾ ತುಟಿ ಬಿಚ್ಚಲಿಲ್ಲ. ಹೆಣ್ಣು ಮಕ್ಕಳು ಬಟ್ಟೆ ಬಿಚ್ಚುವುದೂ ತಪ್ಪಲಿಲ್ಲ. ಅದನ್ನು ನೋಡುವ ಗ್ರಹಚಾರ ಮಾತ್ರ ನಮ್ಮದಾಯಿತಲ್ಲ. ಹೆಣ್ಣೆ! ನೀನೆಂತಹ ಮಾಯೆ!!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೌರವ
Next post ದುಂಡುಚಿ

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…