ಪಂಡಿತರೇ ವಿವಿಧ ಕಳಾ ಮಂಡಿತರೇ
ಇದು ನೀವು ಕೇಳತಕ್ಕ ಕೃತಿಯಲ್ಲ
ಇದು ಬೀದಿವರೆ ಬೀರನ ಕತೆ ಒಂಟಿ ವ್ಯಥೆ
ಮುಚ್ಚಿ ಕಿವಿ ಇದು ಬೇರೆಯೇ ಕತೆ
ಬೇಕೆಂದೇ ಹೇಳಿದ್ದು ಸರಸ್ವತಿ ಬರೆಸಿದ್ದಲ್ಲ
ಅವಳ ಸಂಗತಿ ಬೇರೆ
ಸ್ಫೂರ್ತಿ ಸುರಿದದ್ದಲ್ಲ ಕಲೆ ಒಲಿದದ್ದಲ್ಲ
ಅವೆಲ್ಲ ನಿಮ್ಮ ಪೇಟೆಂಟು ಸ್ವತ್ತು
ಆ ಗತ್ತು ಸಾಕು -ಹಳೆಮಾಲು ಜರಿರುಮಾಲು ನಿಮಗೇ ಸಾಕು
ಇಲ್ಲಿ ಬೆಳಗ್ಗೆ ಬಿಲ್ಲಿಯ ಬೇಟೆ ಕೂಗುತ್ತ
ಹೊರಗೆ ಫಸ್ಟ್ ಗೀಯರಿನ ಟ್ರಕ್ಕಿನ ಭರಾಟೆ
ಬಡಿಯುತ್ತ ಹೊಟ್ಟೆಗೆ ತಾಳ ಹಾಕುತ್ತ
ಕೊನೆನಿದ್ದೆ ಹೆಣೆದ ಸ್ವಪ್ನ ಒಡೆಯುತ್ತ ಒಡೆಯುತ್ತ
ಒಡೆದು ಬಿದ್ದವನ ಒಡಕು ತಮ್ಮಟೆ
ನುಚ್ಚು ನೂರಾದ ಅಪಸ್ವರ-ಸಾವಿರ ಸ್ವರ
ನಿಮ್ಮ ನಾಜೂಕು ಕಿವಿಗೆ ತಾಗೀತೆ ಈ ಧ್ವನಿ?
ವೇಷಧಾರಿಗಳೇ ಏಳಿ
ನೀವು ಕುಣಿದದ್ದು ಸಾಕು
ಎಣ್ಣೆ ಹಾಕಿ ತೊಳೆಯಿರಿ ಬಣ್ಣ
ನಿಮ್ಮ ಶ್ರಾದ್ಧಕ್ಕೆ ಈ ಆಪೋಷಣ:
ವಾತಾಪಿ ಜೀರ್ಣೋ ಭವ ! ಹರೋಹರ !
*****



















