‘ಪಂಪಭಾರತ’ದ ರಾಜನೀತಿ

‘ಪಂಪಭಾರತ’ದ ರಾಜನೀತಿ

ಚಿತ್ರ: ಬಿಷ್ಣು ಸಾರಂಗಿ

ಪಂಪ ಮಹಾಭಾರತದ ಕಥೆಗೆ ಸಮಕಾಲೀನ ಜೀವನ ದೃಷ್ಟಿ ಕೊಟ್ಟು. ಪಾತ್ರಗಳಲ್ಲಿ down to earth ಸ್ವಭಾವಗಳನ್ನು ತುಂಬಿ ಹೆಚ್ಚು ಲೋಕಪ್ರಿಯಗೊಳಿಸಿದ. ತನ್ನ ಕಾಲದ ಇತಿಹಾಸದ ಹಿನ್ನೆಲೆಯಲ್ಲಿ ಮಹಾಭಾರತ ವನ್ನು ಬಣ್ಣಿಸಿದ. ತನ್ನ ಆಶ್ರಯದಾತ ಮಿತ್ರನನ್ನು ಅನನ್ಯವಾಗಿ ಹೊಗಳಿ ಕಾವ್ಯ ರಚನೆಯ ಒಂದು ಹೊಸ ಸಂಪ್ರದಾಯದ ನಿರ್ಮಾಣ ಮಾಡಿದ. ಮುಂದೆ ಇದು ರನ್ನನಿಗೂ ಆದರ್ಶವಾಯಿತು. ಹಿತ-ಮಿತ ಮೃದು ವಚನದಲ್ಲಿ ಗಾಂಭೀರ್ಯ, ಪೆಂಪು ತುಂಬಿದ. ತನ್ನ ಮೊದಲಿನ ಊರಾದ ‘ಚಾಗದ ಭೋಗದ ಗೇಯದ ಗೊಟ್ಟಿಯ ಅಲಂಪಿನ ಇಂಪಿಗೆ ಆಗರ’ವಾದ ಬನವಾಸಿಗೆ ಅರ್ಜುನನ್ನು (ಅರಿಕೇಸರಿಯನ್ನು) ಕರಕೊಂಡು ಹೋಗಿ ಅಲ್ಲಿಯ ನೆಲದ ಸಂಪತ್ತನ್ನು ಅಭಿಮಾನದಿಂದ ತೋರಿಸಿದ.

ಅರಿಕೇಸರಿಯನ್ನು ಕಿರೀಟಿಗೆ ತಗುಳ್ಜಿದ ತೊಡಕು

ಜಿನದೇವರನ್ನು ಬಿಟ್ಟು ಬೇರೆ ಯಾರೂ ಏನನ್ನೂ ಕೊಡಲು ಸಮರ್ಥರಲ್ಲ ಎಂದು ನಿರ್ದಿಷ್ಟವಾಗಿ ಹೇಳಿದ ಮಾತು ಪಂಪನ ಜೈನನಿಷ್ಠೆಯನ್ನು ಸ್ಪಷ್ಟಪಡಿಸುತ್ತದೆ. ‘ಪೆರರೀವುದೇಂ ಪೆರರು ಮಾಡುವುದೇಂ ಪೆರರಿಂದಮಾಪ್ಪುದೇಂ’, ಆದಿ ಪುರಾಣವನ್ನು ಬರೆದ ಕವಿ ರಾಜಾಶ್ರಯದಲ್ಲಿರಲಿಲ್ಲ. ಅರಿಕೇಸರಿಯ ಪರಿಚಯವೂ ಅವನಿಗಿರಲಿಲ್ಲ. ಆದರೆ ‘ಭೂಭುಜನಂ ಕಿರೀಟಿಯೊಳ್‌ ತಗುಳ್ಚಿ ಪೋಲಿಪೊಡೆ ಎನಗೆ ಅಳ್ತಿಯಾದುದು’ ಎಂದವನು ಹೇಳಬೇಕಾದರೆ ಈ ‘ಅಳ್ತಿ’ ಏಕಾಯಿತು ಎಂದು ತಿಳಿಯುವ ಅಗತ್ಯ ಕಾಣುತ್ತದೆ.

ಪಂಪನ ಕವಿಪ್ರತಿಭೆಯ ಕುರಿತು ಅರಿಕೇಸರಿ ಕೇಳಿರಬೇಕು (ವಿವರ ಸಿಗುವುದಿಲ್ಲ). ಅವನು ಕಲಿಯೂ ಆಗಿದ್ದನೆಂದು ಒಂದು ಪದ್ಯ ಹೇಳುತ್ತದೆ. ಕವಿಯಾಗಿ ಅವನು ಅರಸನ ‘ನೆಗಳ್ತೆ’ಯನ್ನು ಮೆರೆಸಿದ. ಕಲಿಯಾಗಿ ‘ಜೋಳವಾಳಿ’ಯನ್ನು ತೀರಿಸಿದ. ಆದಿ ಪುರಾಣದಿಂದ ಪಂಪನ ಕೀರ್ತಿ ಎಲ್ಲೆಡೆಯಲ್ಲಿ ಹರಡಿದ್ದು, ಅಂಥ ಕವಿ, ಪ್ರತಿಭೆಗೆ ಕೊರತೆಯಿದ್ದ ತನ್ನ ಆಸ್ಥಾನದಲ್ಲಿ ಇರುವುದು ಶೋಭೆ ಎಂಬ ಸಹಜವಾದ ಅಪೇಕ್ಷೆ ಅರಿಕೇಸರಿಯದಾಗಿರಬಹುದು. ಪ್ರತಿಭಾವಂತರನ್ನು ಆಸ್ಥಾನದಲ್ಲಿಟ್ಟುಕೊಂಡು ‘ನೆಗಳ್ತೆ’ ಪಡೆಯುವ ಅಭಿಲಾಶೆ ನಮ್ಮ ದೇಶದ ಅರಸರ ಪರಂಪರೆ. ಅದಕ್ಕಾಗಿ ಅರಿಕೇಸರಿ ಪಂಪನನ್ನು ತನ್ನ ರಾಜ್ಯಕ್ಕೆ ಆಹ್ವಾನಿಸಿದನು, ಆಮಂತ್ರಿಸಿದನು, ಅಥವಾ ಯಾವುದೋ ಕವಿಗೋಷ್ಠಿಯಲ್ಲಿ ಸಮರದಲ್ಲಿ ಪಂಪನ ಪರಿಚಯವಾಗಿರಬಹುದು. ಪಂಪನು ಜೈನನಾಗಿ, ಕವಿತಾಗುಣಾರ್ಣವನಾಗಿದ್ದರೂ, ಸುಖ ಭೋಗ, ಕೀರ್ತಿ ಆದರಗಳಿಂದ ಬಹುಶಃ ವಂಚಿತನಾಗಿದ್ದನು. ಇವೆಲ್ಲದರ ಸಹಜವಾದ ಅಪೇಕ್ಷೆ ಪಂಪನಲ್ಲಿಯೂ ಇದ್ದು ಅವನು ಅರಿಕೇಸರಿಯ ಆಮಂತ್ರಣಗಳನ್ನು ಕೃತಜ್ಞತಾಭಾವದಿಂದ ಸ್ವೀಕರಿಸಿದನು. ಅಲ್ಲದೆ ಪಂಪ ಭಾರತದಲ್ಲಿ ವರ್ಣಿಸಿದಂತೆ ಅರಿಕೇಸರಿಯ ‘ಸಾಮಂತ ಚೂಡಾಮಣಿ’ ಗುಣಾರ್ಣವ, ದಾನ, ಪರಾಕ್ರಮಗಳಿಗೆ ಪ್ರಸಿದ್ಧ. ಕಾವ್ಯಪ್ರಿಯ ಎಂಬ ಬಿರುದುಗಳನ್ನು ಹೊರಗಿನಿಂದಲೆ ಪಂಪ ಕೇಳಿರಬೇಕು. ಚಕ್ರವರ್ತಿಯನ್ನು ಸೋಲಿಸಿ ಸಾಮಂತನಾಗಿಯೇ ಉಳಿಯ ಬಯಸಿದ ಆತನ ಹಿರಿಮೆಯನ್ನು ಮೆಚ್ಚಿಕೊಂಡಿರಬೇಕು. ಇಷ್ಟು ಸಂಪನ್ನ ಅರಸನ ಆಸ್ಥಾನದಲ್ಲಿ ಒಂದನೇ ನಂಬರಿನ ಕವಿಯಾಗಿ, ಮಿತ್ರನಾಗಿ, ಎಲ್ಲಾ ಸವಲತ್ತುಗಳಿಗೆ ಪಾತ್ರನಾಗಿರಲು ಯಾರು ತಾನೇ ಬಯಸುವುದಿಲ್ಲ? ಹಾಗೆ ಪಂಪ ಸುಖಾಭಿಲಾಶಿಯೂ, ರಸಿಕನೂ ಆಗಿದ್ದನೆಂದು ಕೆಲವು ಪದ್ಯದಿಂದ ತಿಳಿಯುತ್ತದೆ.

ಪಂಪನನ್ನು ಅರಿಕೇಸರಿ ತನ್ನ ಸಭೆಗೆ ಸ್ವಾಗತಿಸಿದ ಸನ್ನಿವೇಶ ‘ವಿದ್ಯಾ ಪ್ರದರ್ಶನ’ದ ವರ್ಣನೆಯಲ್ಲಿ ಚಿತ್ರವತ್ತಾಗಿ ಬಂದಿದೆ. ಆ ಸಭೆಗೆ ಕರ್ಣಬರುವ ಠೀವಿ, ಅವನ ತೇಜಸ್ಸು. ಅದಕ್ಕೆ ಮಂತ್ರ ಮುಗ್ಧ ವಾದ ಮಹಾಸಭೆ. ಅರ್ಜುನ ಮಾಡಿದ್ದನ್ನೆಲ್ಲ ಕರ್ಣ ಸುಲಭವಾಗಿ ಮಾಡಿತೋರಿಸಿದ ಬಗೆ. ಸತ್ಕುಲಜರು ‘ಆವುದು ಸಮಕಟ್ಟು ನಿನಗಂ ಅರಿಕೇಸರಿಗಂ’ ಎಂದು ವಿರೋಧ ತೋರಿಸಿದ್ದು ಇತ್ಯಾದಿ ಅರಿಕೇಸರಿಯ ಪ್ರಬುದ್ಧರ ಸಭೆಯನ್ನು ಪಂಪ ಪ್ರವೇಶಿಸಿದ ಸನ್ನಿವೇಶವನ್ನು ಧ್ವನಿಸುತ್ತದೆ. ಆಗ ಅರಿಕೇಸರಿ ಕ್ಷಣಕಾಲ ದುರ್ಯೋಧನನ ಪಾತ್ರವನ್ನು ನಾಟಕೀಯವಾಗಿ ವಹಿಸಿ ಪ್ರತಿಭಾಶಾಲಿ ಕರ್ಣನನ್ನು = ಪಂಪನನ್ನು ‘ಕವಿತಾ ಗುಣಾರ್ಣವ’ನೆಂದು ಬಿರುದು ಕೊಟ್ಟು ಸತ್ಕರಿಸುತ್ತಾನೆ. ಇದೊಂದು ಸಾಧ್ಯತೆ ಮಾತ್ರ.

ಪಂಪನಿಗೆ ಅರಿಕೇಸರಿಯ ಮೇಲೆ ವಿಶೇಷವಾದ ಅಭಿಮಾನ. ತನ್ನ ಪ್ರತಿಭೆಗೆ ಮೆಚ್ಚಿ ಅಲ್ಲಿ ಆಗಲೇ ಇದ್ದ ವಿದ್ವಾಂಸರ ವಿರೋಧವನ್ನು ಲೆಕ್ಕಿಸದೆ ಕರೆದು ಸನ್ಮಾನಿಸಿದನೆಂಬ ಆದರ. ಇವು ಅರಸನ ಕುರಿತಾದ ಭಾವನೆಯನ್ನು ಪುಷ್ಟೀಕರಿಸಿರಬೇಕು. ಪರಸ್ಪರ ಆದರ ಭಾವದ ಈ ಹಿನ್ನೆಲೆಯಲ್ಲಿ ಅವರ ನಡುವೆ ಬಂಧುರವಾದ ಸ್ನೇಹ ಬೆಳೆದುದು ಬಗೆಬಗೆಯಾಗಿ ಕಾವ್ಯದಲ್ಲಿ ವ್ಯಕ್ತವಾಗಿದೆ. ಅರಸನು ತನ್ನ ಕುರಿತು ಕಾವ್ಯ ಬರೆಯಲು ಹೇಳಿರಲಾರ. ಆದಿಪುರಾಣಾದಂತೆಯೆ ಒಂದು ವೈದಿಕ ಕಾವ್ಯ ರಚನೆಯ ಪ್ರಸ್ತಾಪ ಮಾಡಿರಬಹುದು. ತಾನು ಎಲ್ಲ ಬಗೆಯಲ್ಲಿಯೂ ಮೆಚ್ಚಿಕೊಂಡಿದ್ದ, ತನ್ನ ದೃಷ್ಟಿಯಲ್ಲಿ ‘ಹೀರೋ’ನಂತಿದ್ದ (ಹೀರೋವರ್ಶಿಪ್ಪು ನಮ್ಮ ಪ್ರಾಚೀನ ಪರಂಪರೆ) ಅರಿಕೇಸರಿಯನ್ನು ಕಾವ್ಯ ನಾಯಕನನ್ನಾಗಿ ಚಿತ್ರಿಸುವ ಕಾವ್ಯ ವಸ್ತು ಹೊಳೆಯದೆ. ವ್ಯಾಸ ಭಾರತವನ್ನು ಸಮಗ್ರವಾಗಿ ಸಂಗ್ರಹಿಸಿ ಬರೆಯುವ ಯೋಚನೆ ಮಾಡಿದ. ತನ್ನ ಜನಪ್ರಿಯ ಹೀರೋಲೈಕ್ ಅರಿಕೇಸರಿಯನ್ನು ಅದೇ ನಿಲುವಿನ ಅರ್ಜುನನಿಗೆ ಹೋಲಿಸಿ ಬರೆಯ ತೊಡಗಿದ. ಅರಸನು ಮಾಡಿದ ಉಪಕಾರಗಳ ಋಣ ತೀರಿಸುವ ಉದ್ದೇಶವೂ ಇದರಲಿತ್ತು. ಈ ಜೋಳದಪಾಳಿಯ ಭಾವನೆ ಪಂಪನಲ್ಲಿ ತೀವ್ರವಾಗಿತ್ತೆಂದು ಅವನ ಕೆಲವು ಪ್ರಮುಖ ಪಾತ್ರಗಳ ನಡವಳಿಕೆಯಿಂದ ತಿಳಿಯುತ್ತದೆ. ಪಂಪನ ಮಟ್ಟಿಗೆ ದುರ್ಯೋಧನ ಅರಿಕೇಸರಿ. ಕರ್ಣ ತಾನು. ಕರ್ಣ ಕೊನೆಯವರೆಗೂ ದುರ್ಯೋಧನನ ಜೊತೆಯಲ್ಲಿದ್ದುದು ಋಣಮುಕ್ತಿಯ ಸಲುವಾಗಿಯೇ.

ಭಾರತದ ಕತೆ ಹಿರಿದಾದರೂ ಅದರ ‘ಮೈಗೆಡಲೀಯದೆ’ ಬರೆಯಲು ತನ್ನಿಂದ ಮಾತ್ರ ಸಾಧ್ಯವೆಂದು ಅವನಿಗೆ ತಿಳಿದಿತ್ತು. ಅಲ್ಲದೆ ‘ಸಮಸ್ತ ಭಾರತಮನ್ ಅಪೂರ್ವಮಾಗೆ ಪೇಳ್ದ ಕವೀಶ್ವರರಿಲ್ಲ-ಪೇಳ್ದೊಡೆ ಪಂಪನೆ ಪೇಳ್ಗುಂ’ ಎಂದು ಪಂಡಿತರು ‘ತಗುಳ್ದು ಬಿಚ್ಚಳಿಸೆ ಒಡರ್ಚಿದನ್ ಈ ಪ್ರಬಂಧಮಂ’. ಭವ್ಯವಾದ ಒಂದು ಪುರಾಣ ಕತೆಯನ್ನು ಸಮಕಾಲೀನ ರಾಜಕೀಯ ಇತಿಹಾಸಕ್ಕೆ ಅಳವಡಿಸುವಾಗ ಪಂಪನಿಗೆ ಕೆಲವೊಂದು Compromiseಗಳನ್ನು ಮಾಡಿಕೊಳ್ಳಬೇಕಾಯಿತು.

– ಅರ್ಜುನನ್ನು ಅರಿಕೇಸರಿಗೆ ಹೋಲಿಸುವುದು.
– ಅರ್ಜುನನ ಬಿಂದುಗಳನ್ನು ಅರಿಕೇಸರಿಗೂ, ಅರಿಕೇಸರಿಯ ಬಿಂದುಗಳನ್ನು ಅರ್ಜುನನಿಗೂ ಕೊಟ್ಟು ವರ್ಣಿಸುವುದು.
– ಅರ್ಜುನನ ಸ್ವಭಾವದಲ್ಲಿದ್ದ ಅಹಂಕಾರ, ದ್ವೇಷಗಳ ಪ್ರಮಾಣವನ್ನು ಕಡಿಮೆ ಮಾಡುವುದು.
– ಅರಿಕೇಸರಿ ಮಾಡದ ಮೂಲ ಕತೆಯಲ್ಲಿ ಮಾಡಿದ ಅನ್ಯಾಯ, ಉಲೂಪಿ, ಚಿತ್ರಾಂಗದೆಯರ ಜೊತೆ ವಿವಾಹ, ನಿರಾಯುಧನಾದ ಕರ್ಣನ ಕೊಲೆ ಇತ್ಯಾದಿಯನ್ನು ಉಪಾಯವಿಲ್ಲದೆ ಮಾಡಿಸುವುದು.
– ಸುಭದ್ರೆಯನ್ನು ತಂದು ಪಟ್ಟಕ್ಕೇರಿಸುವುದು. ಇಂಥ ಕೆಲವು ಪರಿಸ್ಥಿತಿಯಲ್ಲಿ ಪಂಪ ಅರಿಕೇಸರಿಯನ್ನು ಕರ್ಣನಲ್ಲಿ, ದುರ್ಯೋಧನನಲ್ಲಿ ಕಾಣುವಷ್ಟು ವಿವಶನಾಗುತ್ತಾನೆ.

ದಿಬ್ಯಂಬಿಡಿವಂತೆವೋಲ್ ಪಿಡಿದುದರ ಗೊಂದಲ

ರಾಜಾ ಶಂತನು ಸತ್ಯವತಿಯ ಮೋಹದ ಬಲೆಯಲ್ಲಿ ಬಿದ್ದ ಸಂದರ್ಭವನ್ನು ವಿವರಿಸುವ ಪದ್ಯ ಪಂಪಭಾರತದಲ್ಲಿಯೆ ರೋಚಕವಾದುದು.

‘ಮೃಗಯಾ ವ್ಯಾಜದಿನೊರ್ಮೆ ಶಂತನು
‘ತೊವಿಲ್ತರ್ಪಂ ಪಳಂಚಲ್ಕಿತ |
ನ್ಮೃಗಶಾಬಾಕ್ಷಿಯ ಕಂಪು ತಟ್ಟಿ ಮಧುಪಂ
ಬೋಲ್ ಸೋಲ್ತು ಕಂಡೊಲ್ದು ನ
ಲ್ಮೆಗೆ ದಿಬ್ಯಂಪಿಡಿವಂತೆವೋಲ್ ಪಿಡಿದು ನೀಂ ಬಾ
ಪೋಪಮೆಂದಂಗೆ ಮೆ |
ಲ್ಲಗೆ ತತ್ಕನ್ಯಕೆ ನಾಣ್ಚೆ ಬೇಡುವೊಡೆ
ನೀವೆಮ್ಮಯ್ಯನಂ ಬೇಡಿರೇ’

ಈ ವೃತ್ತದಲ್ಲಿಯ ‘ದಿವ್ಯಂಬಿಡಿವಂತೆ ವೋಲ್’ ಅನೇಕ ವಿದ್ವಾಂಸರ ಟಿಪ್ಪಣೆಗೆ ಪಾತ್ರವಾಗಿದೆ. ತಮ ತಮಗೆ ಅನಿಸಿದ ರೀತಿಯಲ್ಲಿ ಅರ್ಥೈಸುವ ಪ್ರಯತ್ನ ಮಾಡಿದ್ದಾರೆ. (ಅದರ ವಿವರ ಇಲ್ಲಿ ಬೇಡ). ‘ದಿಬ್ಯಂ’ ಎಂಬ ಶಬ್ದಕ್ಕೆ Trail of ordeal, ಧೂಮಕೇತು, ಸಂಕಟ, ಮಾರಿ ಎಂಬ ಅರ್ಥ ಏಕೋ ಸಮರ್ಪಕವೆಂದು ನನಗೆ ತೋರುವುದಿಲ್ಲ. ‘ದಿಬ್ಯಂ’ ದಿವ್ಯವೇ ಆಗಿದೆ. ‘ಅಂ’ ಪ್ರತ್ಯಯದಿಂದ ದಿವ್ಯವಾದುದು ಎಂಬ ಸರಳ ಅರ್ಥವೇ ಹೊರಡುತ್ತದೆ. ದಿವ್ಯವಾದುದು, ಸ್ವರ್ಗೀಯವಾದುದು, ಅಲೌಕಿಕವಾದುದು (Celestial) ಪರಾಶರರಿಂದ ಕನ್ಯತ್ವವನ್ನು ಮರಳಿ ಪಡೆದು ಯೋಜನಗಂಧಿಯಾದ ಸತ್ಯವತಿ, ಗಂಗೆ ತ್ಯಜಿಸಿ ಹೋದ ನಂತರ ಸ್ತ್ರೀ ಸುಖದ ಉತ್ಕಟೇಚ್ಛೆಯನ್ನು ಹೊಂದಿದ ಶಂತನುಮಹಾರಾಜನಿಗೆ ಸ್ವರ್ಗದ ಅಪ್ಸರೆಯಂತೆ ದಿವ್ಯವಾಗಿ ಕಂಡಳು. ಅಪೂರ್ವವಾದ ಸೌಂದರ್ಯ, ಮೈ-ಮನಸ್ಸನ್ನು ಉದ್ರೇಕಿಸುವ ಮೈಸೊಬಗು, ಕಂಪು ಅವನಿಗೆ ತಟ್ಟಿತು. ಅವನು ಕೂಡಲೇ ದಿವ್ಯ ವಸ್ತುವನ್ನು ಪಡೆಯುವ ಇಚ್ಛೆಗೆ ಶರಣಾದ. ಅವಳ ಪ್ರೇಮದಲ್ಲಿ ಬಿದ್ದ Falls in love. ಹಿಡಿಯ ಬಯಸಿ ಹಿಡಿದು ಬರಹೇಳಿದ. ದಿವ್ಯ ಸ್ವರ್ಗೀಯ ವಸ್ತು ಮಾಯಾಜಾಲವಾಗಿರುತ್ತದೆ (deceptive). ಅದನ್ನು ಪಡೆಯಲು ಹೋದವನು ಮೋಸ ಹೋಗುತ್ತಾನೆ. ಇದು ನಮ್ಮ ಪುರಾಣ ಪರಂಪರೆಯಾಗಿದೆ. ವಿಶ್ವಾಮಿತ್ರನೇ ಮೊದಲಾದ ಋಷಿ ಮುನಿ, ದಿವ್ಯ ವ್ಯಕ್ತಿಗಳು ಸ್ವರ್ಗ-ಸುಂದರಿಯರಿಂದ ಕೆಟ್ಟಿದ್ದಾರೆ. ಪರಾಶರ ಮುನಿಯೇ ಮತ್ಸ್ಯಗಂಧಿಯ ಮೋಹಕ್ಕೊಳಗಾಗಿ ಋಷಿತ್ವವನ್ನು ಕೆಡಿಸಿಕೊಂಡ ಉದಾಹರಣೆ ಪಂಪನ ಎದುರಿಗಿದೆ. ಇಲ್ಲಿಯೂ ಅಂತಹ ಶಬ್ದಕ್ಕೆ ಸಿಗದ, ವಿಪತ್ತು ತರಬಹುದಾದ, ಮೋಸದ ‘ದಿವ್ಯ’ವನ್ನು. ಕಂಡು, ಹಿಡಿಯಲು ಹೋದ. ಇಲಿ ಸತ್ಯವತಿಯೆ ಆ ದಿವ್ಯ-ಮೋಸ. ಶಂತನುವನ್ನು ದಿಬ್ಯ ಎಂದು ಹೇಳುವುದು ಸರಿಯಲ್ಲ. ಅವನು ಪ್ರೀತಿಯ ಪ್ರಮಾಣಕ್ಕೆ ಸಾಕ್ಷಿಯಾಗಿ ದಿವ್ಯವಾದ ಅವಳ ಕೈಯನ್ನು ಹಿಡಿದನೆಂದರೂ ಆ ಗಳಿಗೆಯಲ್ಲಿ ಹುಟ್ಟಿದ ಪ್ರೀತಿ ಅಷ್ಟು ಗಾಢವಾದುದೇ ಎಂಬ ಸಂಶಯ ಬರುತ್ತದೆ. ದಿಬ್ಯ(ವ್ಯ)ವಾದ ಇನ್ನೊಂದು ವಸ್ತುವನ್ನು ಹಿಡಿಯುವಂತೆ ಅವಳ ಕೈ ಹಿಡಿದನು ಎನ್ನುವಲ್ಲಿ ಹೆಚ್ಚು ಗೊಂದಲ ಕಾಣಿಸುತ್ತದೆ. ಅಗ್ನಿ ಸ್ವರೂಪದಕೇತುಗಳೇ ದಿವ್ಯ ಎಂಬ ರೇವಣ ಶಾಸ್ತ್ರಿಗಳ ಅರ್ಥ ಸಂದರ್ಭೋಚಿತವಾಗುವುದಿಲ್ಲ. ಅದನ್ನ ಹಿಡಿಯುವವರು ಬೀಳುತ್ತಾರೆ ಎಂಬ ‘ಅನಿಷ್ಟ’ ಸೂಚಕವಾಗಿದೆ ‘ದಿಬ್ಯ’. ಪಂಪನಿಗೆ ಶಂತನುವಿನ ಈ ಪ್ರೇಮಪತನ ಮುಂದಿನ ಎಲ್ಲಾ ವಿನಾಶ, ದುರಂತಗಳಿಗೆ ಕಾರಣವಾಗಲಿದೆ ಎಂದು ಸ್ಪಷ್ಟ ಕಲ್ಪನೆ ಇತ್ತು. ಅದಕ್ಕಾಗಿಯೆ ಈ ಇಡೀ ಪದ್ಯವನ್ನು ಸಂಕೇತವಾಗಿ ರಚಿಸಿದ್ದಾನೆ. `Coming events cast their shadows before’ ಎಂಬ ಹಾಗೆ. ಶೇಕ್ಸ್‌ಪೀಯರನ ಸೋಲಿಲೊಕ್ಕಿಗಳು ನಾಟಕ ಕ್ರಿಯೆಯಲ್ಲಿ ಮುಂದೆ ಆಗಲಿರುವ ದುರಂತವನ್ನು ಸೂಚಿಸುತ್ತವೆ. ಈ ಪದ್ಯವೂ ನಾಟಕೀಯವಾಗಿದೆ. ಇಲ್ಲಿಯ ಪ್ರತಿಯೊಂದು ಶಬ್ಧಗಳನ್ನು ಅತ್ಯಂತ ಚಾಕ-ಚಕ್ಯತೆಯಿಂದ ಪಂಪ ಉಪಯೋಗಿಸಿ ಕೊಂಡಿದ್ದಾನೆ. ಸತ್ಯವತಿಯ ಕಂಪಿಗೆ ಶಂತನು ‘ಮಧುಪಂಬೋಲ್’ ಸೋಲ್ತನು, ನಲ್ಲೆಗೆ-ಮೋಹಕ್ಕೆ, ಮೋಹವೇ ಕಾರಣವಾಗಿ, ದಿವ್ಯಕನ್ನೆಯಾದ ಅವಳನ್ನು- ಆ ಆಪತ್ತನ್ನು ಹಿಡಿದು ‘ನೀನ್ ಬಾ ಪೋಪಂ’ ಎಂದು ಕೈಹಿಡಿದು ಕರೆದನು. ಈಗಾಗಲೇ ದಿವ್ಯ ಮುನಿಯೊಬ್ಬನಿಂದ (ದಿವ್ಯಮುನಿಗಳ್ಗೆ ಪಗೆಯ್ದೊಡಂ ತೀರದೇ’ – ಎಂದು ಪರಾಶರ ಮುನಿಯ ವ್ಯವಹಾರವನ್ನು ಪ್ರಶ್ನಿಸುವಲ್ಲಿಯೂ ‘ದಿವ್ಯ’ ಶಬ್ದವನ್ನು ಕವಿ ಯುಕ್ತವಾಗಿ ಉಪಯೋಗಿಸಿದ್ದಾನೆ). ಶರೀರ ಸುಖ ಪಡೆದು ಕನ್ಯತ್ವದ ವರವನ್ನು ಪಡೆದ ಸತ್ಯವತಿಗೆ ಶಂತನು ಮಹಾರಾಜನ ಪರಿಚಯವಿತ್ತು. ಅವನು ತನ್ನ ಮೋಹದಲ್ಲಿ ಪರವಶನಾಗಿರುವ ಪರಿಸ್ಥಿತಿಯನ್ನು ಅವಳು ಸರಿಯಾಗಿ ಅರ್ಥಮಾಡಿಕೊಂಡಳು. ಪರಾಶರ ಮುನಿಯೊಂದಿಗೆ ಸುಖಿಸುವಾಗ ‘ನಾಣ್ಚದ’, ತಂದೆಯ ನೆನಪು ಮಾಡಿಕೊಳ್ಳದ ಸತ್ಯವತಿ ಈಗ ಮಹತ್ವಾಕಾಂಕ್ಷಿಯಾದಳು. ಅವನಿಂದ ಹಸ್ತಿನಾಪುರದ ಮಹಾರಾಣಿಯಾಗುವ ಯೋಗ ತನ್ನಂಥ ಬೆಸ್ತರವಳಿಗೆ ಬಂದಿದೆ ಎಂದು ಅವಳಿಗೆ ಹೊಳೆದು ಹೋಯಿತು. ಅವಳು ಶಂತನುವಿನ ಸ್ತ್ರೀ ಮೋಹಕ್ಕೆ ಮರುಳಾಗದೆ ಅರಸನ ಬೇಡಿಕೆಯನ್ನು ಮನ್ನಿಸದೆ ‘ಮೆಲ್ಲಗೆ ನಾಣ್ಚಿ ತತ್ಕನ್ಯಕ್ಕೆ (ಕನ್ಯತ್ವ ಪಡೆದವಳು)’ ‘ಬೇಡುವೊಡೆ ನೀವೆಮ್ಮ ಅಯ್ಯನಂ ಬೇಡಿರಿ’ ಎಂದು ಹೇಳುವಳು. ಶಂತನು-ಸತ್ಯವತಿ ಪ್ರಣಯ ಕತೆ ಮಹಾಭಾರತದ ಅತ್ಯಂತ ಮಹತ್ವದ ಪ್ರಕರಣ. ಮುಂದಿನ ಕತೆಯನ್ನು ಸಾಗಿಸಿಕೊಂಡು ಹೋಗುವ ದೃಢಭೂಮಿಕೆಯಿರುವ ಪ್ರಸಂಗ. ಪಂಪ ಇದರ ಸಮಗ್ರತೆ, ಅವಶ್ಯಕತೆಯನ್ನು ಅದ್ಭುತವಾಗಿ ಅರ್ಥಮಾಡಿಕೊಂಡಿದ್ದಾನೆ. ಈ ಪದ್ಯವನ್ನು ಪಂಪಭಾರತದ ‘ಕೇಂದ್ರ ಕ್ರಿಯಾ ಸೂಚೀ’ ಪದ್ಯವನ್ನಾಗಿ ರಚಿಸಿ ಕಾವ್ಯ ಪ್ರತಿಭೆಯನ್ನು ತೋರಿಸಿದ್ದಾನೆ. ಮಹಾಭಾರತದ ಮಟ್ಟಿಗೆ ಇದೊಂದು ಸುಂದರ, ಸಂವೇದನಶೀಲ ಪ್ರೇಮಕತೆಯೂ ಆಗಿದೆ. ಸುಖದಿನಗಳನ್ನು ಕಳೆಯುತ್ತಿದ್ದಂತೆ ಶಂತನು-ಸತ್ಯವತಿ ಇಬ್ಬರೂ ತಮ್ಮ ತಪ್ಪಿನ ಅರಿವಾಗಿ ನಿರಂತರ ಪಶ್ಚಾತ್ತಾಪಕ್ಕೆ ಒಳಗಾಗುತ್ತಾರೆ. ಭೀಷ್ಮನಿಗಾದ ಅನ್ಯಾಯಕ್ಕೆ ತಾವೇ ಕಾರಣೀಭೂತರೆಂಬ ಪಾಪಪ್ರಜ್ಞೆ ಇಬ್ಬರಲ್ಲಿಯೂ ಬೆಳೆದು ಅಸಹ್ಯ ಕೊರಗಿಗೆ ಕಾರಣವಾಗುತ್ತದೆ. ಶಂತನು ನಿಷ್ಕ್ರಿಯನಾಗಿ, ಮನೋರೋಗಿಯಾಗಿ ಹಾಸಿಗೆ ಹಿಡಿದು ಸಾಯುತ್ತಾನೆ. ಭೀಷ್ಮ ಉತ್ತರೋತ್ತರ ಪ್ರತಿಜ್ಞೆಯ ಬಂಧನದಲ್ಲಿ ಬಿಗಿದುಕೊಳ್ಳುತ್ತ ಕ್ರಮಶ ದುರ್ಬಲನಾಗುತ್ತಾನೆ. ಮುಂದಕ್ಕೆ ಶಂತನುವಿನ ವಂಶದಲ್ಲಿ ಉದ್ಭವಿಸಲಿರುವ ಇದೆಲ್ಲ ವಿಪತ್ತುಗಳನ್ನು ‘ದಿಬ್ಯಂ ಬಿಡಿವಂತೆ ವೋಲ್’ ಎಂಬ ಸಾಲು ಧ್ವನಿಸುತ್ತದೆ.

ಒಡಕು ತುಂಬಿದ ದುರ್ಯೋಧನ ಪಕ್ಷ :

ಆಧುನಿಕ ಸಂದರ್ಭಕ್ಕೆ ಅನ್ವಯಿಸಿ ಹೇಳುವುದಾದರೆ ಮಹಾಭಾರತ ಯುದ್ಧದ ಕೌರವ ಪಕ್ಷವನ್ನು ಮೊರಾರಜಿ ದೇಸಾಯಿಯ ‘ಯುನೈಟೆಡ್ ಫ್ರಂಟ್’ಗೆ ಹೋಲಿಸಬಹುದು. ಅದರಲ್ಲಿರುವ ಮಹಾತ್ವಾಕಾಂಕ್ಷೀ ನಾಯಕರೇ ಈ ಪಕ್ಷವನ್ನು ಒಡೆದು ಸತ್ತೆಯ ಅವನತಿಗೆ ಕಾರಣವಾದಂತೆ ದುರ್ಯೋಧನನ ಪಕ್ಷದ ಪ್ರತಿಯೊಬ್ಬ ನಾಯಕರೂ ವ್ಯಕ್ತಿಗತ ಸ್ವಾರ್ಥ, ಅಹಂಕಾರ, ಸ್ವಾಭಿಮಾನಗಳಿಂದ ಅವನ ಪತನಕ್ಕೆ ಕಾರಣವಾದರು. ದೇಶಭಕ್ತಿ, ಸ್ವಾಮಿಭಕ್ತಿ, ಕರ್ತವ್ಯನಿಷ್ಠೆಯಿಂದ ಯಾರೂ ಕೌರವನಿಗಾಗಿ ಹೋರಾಡಲಿಲ್ಲ. ಭೀಷ್ಮ, ದ್ರೋಣ, ಕರ್ಣ, ಶಲ್ಯ, ಕೃಪ, ಅಶ್ವತ್ಥಾಮ ಇವರೆಲ್ಲ ದೇವಿಲಾಲ್, ಚರಣಸಿಂಗ್, ಚಂದ್ರಶೇಖರ, ಲಿಮಯೆ, ಫೆರ್ನಾಂಡಿಸ್, ಚೌತಾಲರಿಗೆ ಹೂಬಹೂ ಹೋಲುತ್ತಾರೆ. ಪ್ರತಿಯೊಬ್ಬ ಮಹಾರಥಿಗೂ ಒಡೆಯನ ಕಾರ್ಯಕ್ಕಿಂತ ಮಿಗಿಲಾದ ವೈಯಕ್ತಿಕ ಮಹತ್ವಾಕಾಂಕ್ಷೆಗಳಿದ್ದುವು. ಭೀಷ್ಮ ಮೊದಲಿನಿಂದಲೂ ತಾನು ಬ್ರಹ್ಮಚರ್ಯಕ್ಕೆ ಒಳಗಾಗಿ, ಹಸ್ತಿನಾಪುರದ ಸಿಂಹಾಸನದಿಂದ ವಂಚಿತನಾಗಿ, ಪಾಂಡವ ಪಕ್ಷಪಾತಿಯಾಗಿ ಡಬಲ್ ಸ್ಟ್ಯಾಂಡರ್ಡ್ ಜೀವನ ನಡೆಸುತ್ತಾ ನಿರ್ವೀರ್ಯನಾಗಿದ್ದಾನೆ. ವಿವಶನಾಗಿದ್ದಾನೆ. ಧೃತರಾಷ್ಟ್ರ, ದುರ್ಯೋಧನರನ್ನು ತನ್ನ ಅಂಕಿತದಲ್ಲಿ ಇಟ್ಟುಕೊಳ್ಳಲಾರದೆ ಅವರ ದುಷ್ಕೃತ್ಯಗಳಿಗೆ ಜೀವಂತ ಸಾಕ್ಷಿಯಾಗುತ್ತಾನೆ. ತುಂಬಿದ ಸಭೆಯಲ್ಲಿ ಜೂಜಿನಿಂದಾಗುವ ಅನಾಹುತ. ದ್ರೌಪದಿಯ ಮಾನಭಂಗವನ್ನು ತಡೆಯಲಾರದೆ ಕೈಲಾಗದವನಂತೆ ದಿಗ್ಮೂಢನಾಗಿ ಮೂಕನಾಗುತ್ತಾನೆ. ಅವನ ಸಂರಕ್ಷಣೆಯಲ್ಲಿರುವ ಕೌರವ ರಾಜ್ಯದಲ್ಲಿ ಪಾಂಡವರ ಕುಲವಧುವೇ ಈ ಬಗೆಯ ಮಾನಹಾನಿಗೆ ಒಳಗಾದರೆ ದೇಶದ ಉಳಿದೆಡೆಯಲ್ಲಿ ಸಾಮಾನ್ಯ ಸ್ತ್ರೀಯರ ಗತಿಯೇನು? ದುರ್ಯೋಧನ ನೀತಿವಂತ, ಜನ ಮಾನ್ಯನೆಂಬ ಕಾರಣದಿಂದ ಅವನ ರಾಜ್ಯದಲ್ಲಿ ಈ ಬಗೆಯ ದುರ್ಘಟನೆಯ ವಿವರ ಸಿಗುವುದಿಲ್ಲ. ಕುಮಾರವ್ಯಾಸನೂ ದುರ್ಯೋಧನ ಪ್ರಜಾರಕ್ಷಕನೆಂಬ ಮಾತನ್ನು ಹೇಳಿದ್ದಾನೆ. ದಾನ ಪುಣ್ಯ ಕಾರ್ಯದಲ್ಲಿ ದುರ್ಯೋಧನ ಹಸ್ತಿನಾಪುರದ ಸಂಪತ್ತನ್ನು ಲುಟಾಯಿಸುತ್ತಿದ್ದಾನೆಂದು ಪಾಂಡವರೇ ಆರೋಪಿಸುತ್ತಾರೆ. ಪಾಂಡವರನ್ನು ಕರೆಸಿ ಅರ್ಧ ರಾಜ್ಯವನ್ನು ಕೊಡೆಂದು ಭೀಷ್ಮ ದುರ್ಯೋಧನನಿಗೆ ಹೇಳುವ ಅಗತ್ಯವೇನಿತ್ತು. ತಾನೇ ಅಧಿಕಾರವಾಣಿಯಿಂದ ಕೊಡೆಂದು ಆಜ್ಞಾಪಿಸಬಹುದಿತ್ತು. ಅವನು ವಿರೋಧಿಸಿದ್ದರೆ ಅವನನ್ನು ದಂಡಿಸಬಹುದಿತ್ತು. ವನವಾಸವನ್ನು ತಪ್ಪಿಸಬಹುದಿತ್ತು. ಶಕುನಿಯನ್ನು ಗಂಧಾರಕ್ಕೆ ವಾಪಸ್ ಅಟ್ಟಬಹುದಿತ್ತು. ‘ಸೂಳ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್’ ಎಂದು ಕರ್ಣನಿಗೆ ಎಚ್ಚರ ನೀಡುವಾಗ ಕೌರವನ ಪತನ ಭೀಷ್ಮನ ಕಣ್ಣೆದುರಿಗೇ ಇತ್ತು. ತನ್ನ ಪಕ್ಷದ ವಿನಾಶದಿಂದ ಕೂಡಿದ ಇಂಥ ಯುದ್ಧವನ್ನು ತಪ್ಪಿಸಲು ‘ಮಹೋನ್ನತಿಗೆ ನಿಲ್ಲುವ ಚಾರಿತ್ರ್ಯ, ವ್ಯಕ್ತಿತ್ವವಿದ್ದ ಭೀಷ್ಮ ಏನು ಮಾಡಿದ? ಅವನಿಗೆ ಹಿರಿಯನೆಂದು ಅನುಪಮ ಶೂರನೆಂದು ಆದರ ಸನ್ಮಾನವಿತ್ತು. ಅವನ ಮಾತನ್ನೂ, ಆಜ್ಞೆಯನ್ನೂ ಮೀರಿ ನಡೆಯುವವರಿರಲಿಲ್ಲ. ಆದರೂ ತನ್ನ ಅಧಿಕಾರ ಬಲವನ್ನು ಕೌರವನ ರಕ್ಷಣೆಗಾಗಿ ಉಪಯೋಗಿಸದ ವಿವಶತೆ ಯಾವುದು, ಭೀಷ್ಮ ಪ್ರತಿಜ್ಞೆಯ ನಂತರ ಆಯುಷ್ಯದೊಂದಿಗೆ ಉದ್ದಕ್ಕೂ ಬೆಳೆದ ನಿರ್ಲಿಪ್ತತೆಯೆ, ಹಸ್ತಿನಾಪುರದಲ್ಲಿ ಪಾಂಡವರೇ ಆಳಬೇಕೆಂಬ ಮನದ ಸುಪ್ತ ಆಶೆಯೆ? ಕರ್ಣನಲ್ಲಿ ಸೂತಪುತ್ರನೆಂಬ ಭೇದ ಭಾವವಿದ್ದುದು ಅವನು ಅರ್ಜುನ ವಿರೋಧಿಯೆಂಬ ಕಾರಣದಿಂದ ಇರಬಹುದು. ಶಿಷ್ಟ ಸಮರ್ಥರ ಗುಂಪಿಗೆ ಶೂದ್ರನೊಬ್ಬ ಪ್ರವೇಶ ಮಾಡಿ ಒಡೆಯನ ನೆಚ್ಚಿಗೆ ಪಾತ್ರನಾದುದೂ ಪಕ್ಷ ಒಡೆಯಲು ಒಂದು ಕಾರಣ ಎಂದು ಕೆದಕುತ್ತಾನೆ. ಗಾಯಗೊಂಡು ಶರಶಯ್ಯೆಯಲ್ಲಿ ಮಲಗಿರುವಾಗ ‘ಅಲ್ಲದೆಯಂ ನೀನೆಮಗೆ ಕುಂತಿಯ ಗಾಂಧಾರಿಯ ಲೆಕ್ಕದೆ ಮೊಮ್ಮನೈ ನಿನ್ನನ್ನೇ ನಚ್ಚಿದ್ದಾನೆ ಕುರುಮಹೀಪತಿ’ ಎಂದು ಎಂದೋ ಹೇಳ ಬೇಕಾದುದನ್ನು ಹೇಳುತ್ತಾನೆ. ಭೀಷ್ಮ ಪಾಂಡವರ ಪರವಾಗಿರುವುದು ಪಾಂಡವರಿಗೆ ಅನ್ಯಾಯವಾಗಿದೆ ಎಂದೋ, ಕೃಷ್ಣ ಆ ಕಡೆಗಿದ್ದಾನೆ ಎಂದೋ ಊಹಿಸುವುದು ಸುಲಭವಲ್ಲ. ‘ಇಳಾಚಕ್ರ ಭಯಗೊಳ್ವಿನಂ ಚಕ್ರಿಯಂ ಪಿಡಿಯಿಪ್ಪೆಂ ಕರಚಕ್ರಮಂ’ ಎಂಬಲ್ಲಿ ಕೃಷ್ಣನ ದೈವಿಕತೆಯನು ಭೀಷ್ಮ ಒಪ್ಪುವುದು, ಕುರುಪತಿಗೆ ದೈವಬಲವಿಲ್ಲವೆಂದು ಅಸಡ್ಡೆ ತೋರುವುದು ಕಾಣುತ್ತದೆ. ಅವನು ದುರ್ಯೋಧನನನ್ನು ಹಚ್ಚಿಕೊಂಡದ್ದೇ ಇಲ್ಲ. ಇದಕ್ಕೆ ದುರ್ಯೋಧನನ ದುಷ್ಟತನ ಕಾರಣವಾಗಿರಲಾರದು. ಶರಶಯ್ಯೆಯಲ್ಲಿ ಅವನು ಜಲ ಬೇಡಿದಾಗ ದುರ್ಯೋಧನನು ಹೊನ್ನ ಪಾತ್ರೆಯಲ್ಲಿ ತಂದು ಕೊಟ್ಟ. ಅದನ್ನು ನಿರಾಕರಿಸಿ ಅರ್ಜುನನ ಶರದ ಭೂಜಲವನ್ನೇ ಸೇವಿಸಿದ್ದು ಕೌರವನಿಗಾಗಿ ಅವನು ಅಷ್ಟೊಂದು ಯುದ್ಧ ಮಾಡಿದ್ದೇ ನಿರರ್ಥಕವೆನ್ನುವುದನ್ನು ತೋರಿಸುತ್ತದೆ.

ದ್ರೋಣಾಚಾರ್ಯರು ಅರ್ಜುನಪ್ರಿಯರು. ಅವನೇ ಅವರ ಪರಮಶಿಷ್ಯ. ದುರ್ಯೋಧನ ಮಾಡಿದ ‘ಲೇಸು’ (Favours)ಗಳ ಭಾರದಲ್ಲಿ ದಬ್ಬಿ ಹೋಗಿ, ತನ್ನ ಬಡತನವನ್ನೇ ನೆನೆಯುತ್ತ ‘ಪತಿಸೇವೆ’ಯೆಂದು ಮಾತ್ರ ಯುದ್ಧ ಮಾಡಿದರು. ಅವರು ಆ ಯುದ್ಧದಲ್ಲಿ ನಿಷ್ಠೆಯನ್ನು ಆಸ್ಥೆಯನ್ನು ತೋರಿಸಲೇ ಇಲ್ಲ. ತನ್ನ ಸೇಡನ್ನು ತೀರಿಸಿಕೊಟ್ಟ ಅರ್ಜುನನನ್ನು ಅವರು ಎದುರಿಸುವಂತಿರಲಿಲ್ಲ. ‘ಚಾಪವಿದ್ಯಾ ಬಲದೊಳ್’ ಅವನನ್ನು ಮೂರು ಲೋಕದಲ್ಲಿ ಯಾರೂ ಮೀರಿಸಬಾರದೆಂದು ಏಕಲವ್ಯನಲ್ಲಿ ಗುರುದಕ್ಷಿಣೆ ಬೇಡಿದರು. ಕರ್ಣನನ್ನು ಕುಲಹೀನನೆಂದು ತಿರಸ್ಕರಿಸಿದರು. ಅವರು ತನ್ನ ಪಕ್ಷದ ಜಯಕ್ಕಾಗಿ ಯುದ್ಧ ಮಾಡಿದ್ದೇ ಇಲ್ಲ. ಅವರ ಮಗ ಕರ್ಣನನ್ನು ಸಹಿಸಲಾರದೆ ಜಗಳಾಡಿದ. ಶಲ್ಯ ಗಮಂಡಿಯೂ, ದುರಹಂಕಾರಿಯೂ ಆಗಿದ್ದು ಕರ್ಣನನ್ನು ಸಹಿಸುತ್ತಿರಲಿಲ್ಲ. ಅವನ ಸಾರಥಿಯಾಗಲು ಒತ್ತಾಯದಿಂದ ಒಪ್ಪಿಕೊಂಡು ಕರ್ಣಸಂಪೂರ್ಣವಾಗಿ ನಿರಾಯುಧನಾಗಿ ಸಾಯುವುದಕ್ಕೆ ಕಾರಣನಾದ.

ಕರ್ಣ ಮೊದಲು ಅರ್ಜುನನ ಸ್ಪರ್ಧೆಯಲ್ಲಿ, ತನ್ನ ಮಿತ್ರನಿಗಾಗಿ ಜೀವ ತೆರುವ ಸಂಕಲ್ಪ ಮಾಡಿದ್ದ. ಆದರೆ ಅವನು ತನ್ನ ಅಸ್ತಿತ್ವ(Identity)ವನ್ನೆ ಶೋಧಿಸುವುದರಲ್ಲಿ ಕಳೆದು ಹೋದ. ಎಲ್ಲರ ಅವಹೇಳನಕ್ಕೆ, ಸುಲಿಗೆಗೆ ಬಲಿಯಾಗಿ ಅಂತಃಕ್ಷತಿಗೆ ಒಳಗಾದ. ಹುಟ್ಟಿನ ರಹಸ್ಯವನ್ನು ಕೃಷ್ಣ ಕಿವಿಗೆ ಹಾಕಿ ಅವನ ನೈತಿಕ ಬಲವನ್ನು ಸಂಪೂರ್ಣವಾಗಿ ಕೆಡಿಸಿದ. ಅಲ್ಲದೆ ಅವನು ಯುದ್ಧಕ್ಕೆ ಇಳಿದಾಗ ಕೌರವ ಪಕ್ಷ ಮುಕ್ಕಾಲು ಪಾಲು ನಾಶಗೊಂಡಿತ್ತು. ನಂತರ ಯುದ್ಧವನ್ನು ಜಯಿಸಿಕೊಡುವಷ್ಟು ಕರ್ಣನಲ್ಲಿ ಆತ್ಮಬಲ ಉಳಿದಿರಲಿಲ್ಲ. ಹೀಗೆ ದುರ್ಯೋಧನ ಪಕ್ಷವು ಪ್ರಬಲರಿಂದ ಕೂಡಿದ ‘ಯುನಾಯಿಟೆಡ್ ಫ್ರಂಟ’ ಆಗಿಯೂ ದುರ್ಯೋಧನನ ದುರ್ಬಲ ಒಂಟಿ ಪಕ್ಷವಾಗಿ ಅಳಿಯಿತು. ಕೃಷ್ಣ ಕುಂತಿಗೆ ಹೇಳುವ ಒಂದು ಪದ್ಯದಲ್ಲಿ ಪಂಪ ಇದನ್ನು ಪುಷ್ಟಿಗೊಳಿಸಿದ್ದಾನೆ.

ಗುರುಕೃಪಶಲ್ಯ ಸಿಂಧುಸುತರಪ್ಪೊಡೆ ನಮ್ಮಯ ಪಕ್ಷ
ಗುರು ಸುತನೂ ನಮ್ಮ ಕಡೆಯೆ – ಗೆಲ
ಲ್ಕರಿಯನುಂ ಒಂದಿ ಬಾರದನುಂ ಅಂಕದ ಕರ್ಣನೆ
ಬೀರ ಚಾಗಂ ಅವನಿಂದ ಎಸೆದತ್ತು ಧಾತ್ರಿಯೊಳ್

‘ದ್ರೋಣ, ಕೃಪ, ಶಲ್ಯ, ಭೀಷ್ಮ ಇವರೆಲ್ಲರು ನಮ್ಮ ಪಕ್ಷ, ಅಶ್ವತ್ಥಾಮನೂ ನಮ್ಮ ಕಡೆಯೇ, ಗೆಲ್ಲಲಿಕ್ಕೆ ಆಗದ, ನಮ್ಮ ಕಡೆಗೆ ಒಲಿಸಲು ಬಾರದ ಸಮರ ಶೂರನೆಂದರೆ ಕರ್ಣ ಮಾತ್ರ.

ಶೌರ್ಯ ತ್ಯಾಗಗಳು ಧಾತ್ರಿಯಲ್ಲಿ ಅವನಿಂದ ಮೆರೆಯುತ್ತಿದೆ.

ಕೌರವರ ಪಕ್ಷದ ದೌರ್ಬಲ್ಯ ಮತ್ತು ಆಂತರಿಕ ಒಡಕನ್ನು ಸ್ಪಷ್ಟವಾಗಿ ಕೃಷ್ಣ ಕುಂತಿಗೆ ಹೇಳುತ್ತಾನೆ. ವಿದುರನ ಒಲವೇ ಆ ಕಡೆಗೆ. ವಿಚಾರ ಮಾಡದೆ ದುರ್ಯೋಧನನ ರಕ್ಷಣೆಗೆ ಇಟ್ಟಿದ್ದ ಬಾಣವನ್ನು ಅವನು ಮುರಿದು ಹಾಕುತ್ತಾನೆ.

ಅಸ್ವಸ್ಥ ಮನಸ್ಸಿನ ಕರ್ಣ
‘ಪಂಪ ತನ್ನ ಕೃತಿಯಲ್ಲಿ ತನ್ನ ಕಾಲದ ಆದರ್ಶವೀರನೊಬ್ಬನನ್ನು ಉಜ್ವಲೀಕರಿಸಿದ್ದಾನೆ. ಶಾಶ್ವತೀಕರಿಸಿದ್ದಾನೆ’. – ಡಾ. ಚಿದಾನಂದ ಮೂರ್ತಿಯವರು ‘ಕರ್ಣಂಗೊಡ್ಡಿತ್ತು ದಲ್ ಭಾರತಂ’ ಎಂದು ಪಂಪ ಹೇಳಿದ್ದನ್ನು ಸಮರ್ಥಿಸಿದ್ದಾರೆ. ಪಂಪಭಾರತದಲ್ಲಿ ಕರ್ಣನೆ ಪಂಪನ ಅರಿಕೇಸರಿ. ಸಂಪ್ರದಾಯ ಅಡ್ಡಬಾರದೇ ಇದ್ದರೆ ಕರ್ಣನಿಗೇ ತನ್ನರಸನನ್ನು ‘ತಗುಳ್ಚಿ’ ಕಾವ್ಯ ಬರೆಯುತ್ತಿದ್ದನೇನೋ. ಕುರುಕ್ಷೇತ್ರ ಯುದ್ಧವನ್ನು ಪಕ್ಷದ ನಾಯಕನಂತಿರುವ ಕಿರೀಟಿಗೆ ಅರಿಕೇಸರಿಯನ್ನು ಹೋಲಿಸುವುದು ಅನಿವಾರ್ಯವಾಗಿತ್ತು. ಆದರೆ ಸಂದರ್ಭ ಸಿಕ್ಕಾಗಲೆಲ್ಲ ಹುಚ್ಚೆದ್ದು ಕರ್ಣನನ್ನು ಹೊಗಳಿದ. ‘ನೆನೆಯದಿರಣ್ಣ ಭಾರತದೊಳಿಂ ಪೆರರಾರುಮನ್ ಒಂದೆ ಚಿತ್ತದಿ ನೆನೆವೊಡೆ ಕರ್ಣನಂ ನೆನೆಯ…’ ಎಂಬ ಬಹು ಪ್ರಸಿದ್ಧ ವೃತ್ತದಲ್ಲಿ ಕರ್ಣನ ಒಂದೊಂದೇ ಗುಣಗಳನ್ನು ಹೇಳಿ ‘ಕರ್ಣನೊಳ್ ಅರ್‌ದೊರೆ’ ಎನ್ನುತ್ತ ಅವನನ್ನು ಹೋಲಿಕೆಯ ಪರಿಧಿಯಿಂದ ಹೊರಗೆ ತರುತ್ತಾನೆ. ಆಗ ನಮಗೆ ‘ಅರಿಕೇಸರಿಯೊಳಾರ್ ದೊರೆ’ ಎಂದೇ ಪಂಪ ಕೇಳಿದಂತಾಗುತ್ತದೆ. ತನ್ನರಸನ ಹಿರಿಮೆ-ಗರಿಮೆಗಳನ್ನೆಲ್ಲ ಅರ್ಜುನನಿಗಿಂತಲೂ ಕರ್ಣನಲ್ಲಿ ಪಂಪ ಕಂಡಿದ್ದಾನೆ. ಗುಣಗಾನದಲ್ಲಿ ಮೈಮರೆತು ‘ಕರ್ಣ ರಸಾಯನ ಮಲ್ತೆ ಭಾರತಂ’ ಎಂದು ನಿರ್ಣಯ ಹೇಳುತ್ತಾನೆ. ಅದು ಪ್ರತಿನಾಯಕರನ್ನು ನಾಯಕರನ್ನಾಗಿ ಚಿತ್ರಿಸುವ ಕಾಲವಾಗಿದ್ದರೆ ಕರ್ಣನೇ ಪಂಪಭಾರತದ ನಾಯಕ ಪಟ್ಟವನ್ನೇರುತ್ತಿದ್ದ. ಆದರೂ ಪಂಪ ಕರ್ಣನನ್ನು ವ್ಯಾಸಭಾರತದ ಮಿತಿಯಿಂದ ಹೊರತೆಗೆದಿದ್ದಾನೆ. ‘ದುಷ್ಟಚತುಷ್ಟಯ’ರಲ್ಲಿ ಸೇರಿಸಿಕೊಂಡರೂ ಅವನ ಅಂತರಾತ್ಮದ ಕೂಗನ್ನು ಕೇಳಿ ಅವನ ಆತ್ಮ ಶೋಧನೆಯ ಕಾರ್ಯಕ್ಕೆ ತೊಡಗಿಸುತ್ತಾನೆ. ಠಾಗೋರರ ಕರ್ಣ, ಇರಾವತಿ ಕರ್ವೆಯ ಕರ್ಣ, ಶಿವಾಜಿ ಸಾವಂತರ ‘ಮೃತ್ಯುಂಜಯ’ ದಿನಕರರ ‘ರಶ್ಮಿರಥಿ’ ಕುಮಾರವ್ಯಾಸನ ಕರ್ಣ, ಬೆನೆಗಲ್ ಕರ್ಣ, ದ್ರೌಪದಿಯ ಕರ್ಣ, ಭೈರಪ್ಪರ ಕರ್ಣ ಇವರೆಲ್ಲ ಕವಿಗಳ ಮಾನವೀಯ ಅಂತಃಕರಣವನ್ನು ಸ್ಪಂದಿಸಿ ಸ್ಫುರಿಸಿದ ಕರ್ಣರು. ಈ ಕಾರ್ಯವನ್ನು ಪಂಪ ಸಾವಿರ ವರ್ಷದ ಹಿಂದೆಯೇ ಮಾಡಿ ಕನ್ನಡಕ್ಕೆ ಅದ್ವಿತೀಯನಾಗಿದ್ದಾನೆ.

ಕರ್ಣ ಒಬ್ಬ ಹತಭಾಗ್ಯ. ಅನಾಥ. ಸಾಕು ತಂದೆ-ತಾಯಿಗಳಿದ್ದೂ ಅವನು ಬೇವಾರಸಿ. ಇದರ ಸಂಪೂರ್ಣ ಅರಿವು ಅವನಿಗೆ ಬಾಲ್ಯ ಕಾಲದಿಂದಲೇ ಉಂಟಾಗ ತೊಡಗಿತ್ತು. ಪಾಂಡವರ ಜೊತೆಯಲ್ಲಿ ಕಲಿಯುವಾಗಲೂ ಅವನನ್ನು ಎಲ್ಲರೂ ದೂರವಿಟ್ಟರು. ಬಾಲ್ಯದಲ್ಲಿಯೇ ಅವನು ಅನಾಥ ಪ್ರಜ್ಞೆಯ ಗೊಂದಲದಲ್ಲಿ ಅಂತರ್ಮುಖಿಯಾಗಿದ್ದ. ಸೂತಪುತ್ರನೆಂಬ ಹಣೆ ಪಟ್ಟಿಯನ್ನು ಹಚ್ಚಿ ವರಿಷ್ಟರು ಅಂಬೇಡ್ಕರರನ್ನೋ, ಜಗಜೀವನರಾಮರನ್ನೋ ತುಚ್ಚೀಕರಿಸಿದ ಹಾಗೆ ಮನ ನೋಯಿಸಿದರು. ಈ ತುಚ್ಚೀಕಾರ ಅವನ ಮನಸ್ಸನ್ನು ರೋಗಗ್ರಸ್ತಗೊಳಿಸಿತು. ಅವನು ಮುಂದೆ ಉದ್ದಕ್ಕೂ ಮನೋರೋಗಿಯಾಗಿಯೇ ಕಾಲಕಳೆದ. ಇದರಿಂದ ಅವನ ಸ್ವಭಾವದಲ್ಲಿ ದುಡುಕು, ಸಿಡುಕುಗಳು ಕಾಣಿಸಿಕೊಂಡವು. ದುರ್ಯೋಧನನನ್ನು ಬಿಟ್ಟರೆ ಅವನನ್ನು ಆದರಿಸುವವರು ಯಾರೂ ಇರಲಿಲ್ಲ. ‘ಕೌರವೇಶ್ವರನೊಲವು ತಪ್ಪಿಸೆ ಭುವನದೊಳೆನಗಾಪ್ತ ಜನವಿಲ್ಲ’ – ಕುಮಾರವ್ಯಾಸ. ಇಡೀ ಪ್ರಪಂಚದಲ್ಲಿ ಒಬ್ಬನೇ ಮಿತ್ರನನ್ನು ಪಡೆದು ಅವನು ಧನ್ಯನಾಗದೆ ಋಣಿಯಾದನು. ಆ ಮೈತ್ರಿಯೂ ಸ್ವಾರ್ಥದ ನೆರಳಿನಲ್ಲಿ ಬದುಕಿರುವುದರ ಸುಳಿವು ಅವನಿಗೆ ಸಿಕ್ಕಿದಾಗ ಗಾಯದ ಮೇಲೆ ಬರೆ ಎಳೆದಂತಾಯಿತು. ‘ನನಗೆ, ಸಹದೇವನಿಗೆ, ಉರಗಪತಾಕನಿಗೆ, ಕುಂತಿಗೆ, ಸೂರ್ಯನಿಗೆ ನೀನು ಕುಂತಿಯ ಮಗನೆಂದು ತಿಳಿದಿದೆ’ ಎಂದು ಕೃಷ್ಣ ಭೇದದ ಬೀಜವನ್ನು ಬಿತ್ತಿದಾಗ ‘ಕುರುಪತಿಗಿಲ್ಲ ದೈವಬಲ’ ಗುರು, ಗುರುಪುತ್ರ ಸಿಂಧುಸುತರು ಅರ್ಧ ಮನಸ್ಸಿನವರೆಂದು ಗೊತ್ತಿದ್ದು ‘ಎನ್ನನೆ ನಚ್ಚಿ ಪೆರ್ಚಿಪೊರೆದನ್’ ಎಂದು ಕೌರವನಿಗಾಗಿ ತನ್ನಲ್ಲಿಯೆ ಮರುಗಿದ. ‘ನೀವೆನಗೆ ಇದನೇಕೆ ಪೇಳ್ದಿರೋ’ ಎಂಬಂತೆ ಪ್ರಕಟವಾಗಿ ಸಂಕಟಪಟ್ಟ.

ಅವನ ವ್ಯಕ್ತಿತ್ವದ ಮೇಲೆ ‘ಕಾನೀನ’ ಎಂಬ ಕಳಂಕ ಹಚ್ಚಿಕೊಂಡಿತ್ತು. ಅವನ ಪ್ರತಿಭೆಯನ್ನು ಕುಲದ ಪ್ರಶ್ನೆಯನ್ನೆತ್ತಿ ಪ್ರತಿಯೊಬ್ಬರೂ ಹೀನೈಸಿದರು. ಭೀಷ್ಮ ದ್ರೋಣ, ಅಶ್ವತ್ಥಾಮ, ದ್ರೌಪದಿ ಎಲ್ಲರೂ ಮನಸ್ಸನ್ನು ಕ್ಷಣಕ್ಷಣಕ್ಕೂ ಕ್ಷತಿಗೊಳಿಸುವ ಪರಿಸ್ಥಿತಿಯಲ್ಲಿ ಕರ್ಣ ಬದುಕಿ ಪರಿಸ್ಥಿತಿಯ ದಾಸನಾದ. ದುಷ್ಟರ ಸಂಪರ್ಕದಲ್ಲಿ ಅವನೂ ದುಷ್ಟವೆನ್ನಬಹುದಾದ ಕಾರ್ಯಕ್ಕೆ ಕೈ ಹಾಕಿದ. ಮಿತ್ರನ ಸಲುವಾಗಿ ಶಕುನಿಯನ್ನವನು ಎಂದೂ ಸಹಿಸಲಿಲ್ಲ. ‘ಕುಲಂಕುಲಮಲ್ತು’ ಎಂದು ದ್ರೋಣರಿಗೆ ಉತ್ತರಕೊಟ್ಟಿದ್ದು ತರ್ಕಕ್ಕಾಗಿ ಮಾತ್ರ; ಅವನಿಗೆ ಸಮಕಾಲೀನ ವರ್ಣಭೇದದ ಸಂತ್ಯಾಂಶದ ಸರಿಯಾದ ಕಲ್ಪನೆಯಿತ್ತು. ತನ್ನನ್ನು ‘ಸೂತಪುತ್ರ’ನೆಂದೇ ಈ ಸಮಾಜ ಸ್ವೀಕರಿಸಿದ್ದು, ಯಾವ ರಾಜವಂಶದವರೂ ತನಗೆ ಹೆಣ್ಣು ಕೊಡಲು ಮುಂದಾಗದಿದ್ದುದು, ವಿದುರ, ಏಕಲವ್ಯ ಮೊದಲಾದವರು ಸಮಾಜದಲ್ಲಿ ಪಡೆದ ಸ್ಥಾನ-ಮಾನ ಎಲ್ಲವೂ ಅವನ ಕಣ್ಣೆದುರಿಗಿತ್ತು. ಆದರೆ ತನ್ನಲ್ಲಿ ಹುಟ್ಟಿನಿಂದಲೆ ಅಮೋಘವಾಗಿರುವ ಯಾವುದೋ ಪ್ರಭೆ ಅವನನ್ನು ಒಂಟಿಯಾಗಿ ತಾನು ಯಾರೆಂದು ತನ್ನನ್ನೇ ಶೋಧಿಸಲು ಹಚ್ಚಿತ್ತು. ಇದರಿಂದ ಅವನು ಒಂದು ಬಗೆಯ ಅಂತರ ದ್ವಂದ್ವಕ್ಕೆ ಸಿಲುಕಿ ತನ್ನ ಅಸ್ಮಿತೆಯನ್ನು ಕಳಕೊಂಡಿದ್ದ. ಅವನನ್ನು ಎಲ್ಲರು ಸುಲಿಗೆಗೆ ಒಳಪಡಿಸಿ ದುರ್ಬಲಗೊಳಿಸಿದರು. ಅವನಿಂದಾದ ಅನ್ಯಾಯಕ್ಕಿಂತ ಅವನ ಮೇಲಾದ ಅನ್ಯಾಯದ ಪ್ರಮಾಣವೇ ಹೆಚ್ಚೆಂದು (He was more sinned against than sinning) ಭಾಸವಾಗುತ್ತದೆ. ಈ ಸಂದರ್ಭಗಳು ಪಂಪಭಾರತದಲ್ಲಿ ಹಲವಾರೆಡೆ ಬಂದಿವೆ. ವಿದ್ಯಾ ಪರೀಕ್ಷೆಯಲ್ಲಿ ಗುರು ದ್ರೋಣಾಚಾರ್ಯ ಅವನನ್ನು ಕುಲಹೀನ ಎಂದರು. ದ್ರೌಪದಿ ಕುಲಹೀನನೆಂದು ತಿರಸ್ಕರಿಸಿದಳು. ಪರಶುರಾಮ ಅನ್ಯಾಯವಾಗಿ ಶಪಿಸಿದರು. ಕೃಷ್ಣ ಜನ್ಮ ರಹಸ್ಯ ಹೇಳಿ ಅವನ ಸಂಕಲ್ಪವನ್ನು ಒಡೆದ. ತಾಯಿ ಕುಂತಿಯೂ ಬೇಡಿ ‘ಕಾರ್ಯಸಾಧಿಸಿ’ದಳು. ದುರ್ಯೋಧನ ಗೆಳೆತನದಲ್ಲಿ ಮೋಸ ಮಾಡಿದ. ಇಂದ್ರ, ಶಲ್ಯ, ಭೀಷ್ಮ, ಅಶ್ವತ್ಥಾಮ ಎಲ್ಲರೂ ಎಸಗಿದ ಅನ್ಯಾಯದಿಂದ ಅವನು ಜರ್ಜರಿತನಾದ. ಶಕ್ತಿಗುಂದಿದ. ‘ದ್ಯೆವಮನಾರಯ್ಯ ಮೀರಿಬಾಳಲ್ ನೆರೆವರ್’ ಎಂದು ಹತಾಶನಾದ. ‘ಬಿದಿವಸದಿಂದ ಪುಟ್ಟುವುದು, ಪುಟ್ಟಿಸುವಂ ಬಿದಿ. ಬಿದಿ ಸಮಕಟ್ಟಿಕೊಟ್ಟೊಡೆ ಕುಡಿಸಲ್ ಕುಡಿಸಲ್ ಸಮರ್ಥರಾರ್’ ಎಂಬ ಉದ್ಘಾರದಲ್ಲಿ ಅವನ ಅವಸಾನದ ಶಬ್ಧ ಚಿತ್ರ ಕಾಣಿಸುತ್ತದೆ. ಕೃಷ್ಣನನ್ನು ಅವನೆಂದೂ ಅನಾದರಿಸಲಿಲ್ಲ. ಅವನಲ್ಲಿಯ ದೈವಿಕತೆಯನ್ನು ಮನಗಂಡಿರಬೇಕು. ಕೃಷ್ಣನ ನಿಮಿತ್ತದಿಂದಲೆ ಅವನ ಅವಸಾನವಾಯಿತು. ಕರ್ಣನ ಯೋಗ್ಯತೆಯನ್ನು ಕೃಷ್ಣ ಕುಂತಿಗೆ ಹೇಳುತ್ತಾನೆ ‘ಅಖಿಲಾಸ್ತ್ರ ವಿಶಾರದನಪ್ಪುನಂ ಗೆಲಲ್ಕರಿಯನು ಒಂದಿಬಾರದನುಂ ಅಂಕದ ಕರ್ಣನೆ, ಬೀರಂ ಆತನಿಂದ ಉರಿವರಿದತ್ತು. ಚಾಗಂ ಅವನಿಂದ ಎಸೆದತ್ತು ಸಮಸ್ತ ಧಾತ್ರಿಯೊಳ್’ ಆದ್ದರಿಂದ ಕುಂತಿಯನ್ನು ‘ಕಾರ್ಯಸಾಧಿಸಲು’ ನೀನು ಅವನಲ್ಲಿಗೆ ಹೋಗೆಂದು ನೇಮಿಸುತ್ತಾನೆ. ಅವಳು ತಾಯಿಯಾದುದರಿಂದ ಆ ಕೆಲಸ ಸಾಧ್ಯ. ಕರ್ಣ ಅರ್ಜುನದ್ವೇಷಿಯಲ್ಲ. ಅರ್ಜುನನ ಪ್ರತಿದ್ವಂದ್ವಿಯಾಗಿದ್ದ. ಧನುವಿದ್ಯಾ ಪರೀಕ್ಷೆಯ ದಿನ ಅವನಲ್ಲಿ ಪ್ರತಿ ಸ್ಪರ್ಧೆಯ ಭಾವನೆ ಹುಟ್ಟಿತ್ತು. ಮುಂದೆ ಇದು ಪ್ರತಿಕೂಲ ಸಂದರ್ಭಗಳಲ್ಲಿ ಗಾಢವಾಯಿತು. ಅರ್ಜುನನನ್ನು ಎಲ್ಲರ ಸಮಕ್ಷಮದಲ್ಲಿ ಸೋಲಿಸಿ ಅವನ ಅಹಂಕಾರವನ್ನು ಮುರಿಯುವ ಹಂಬಲ ಅವನದಾಗಿತ್ತು. ಆದರೆ ಅವನು ವಿಧಿಯ ಕೈಗೊಂಬೆಯಾದ. ಕವಿ ಮೆಚ್ಚಿದ ಅಸ್ವಸ್ತ ಮನಸ್ಸಿನ ದುರಂತ ಪ್ರತಿನಾಯಕನಾದ.

ಲೋಕಪೂಜ್ಯನಲ್ಲದ ಕೃಷ್ಣ
ಪಂಪಭಾರತದ ನಾಯಕ ಕಿರೀಟಿಗೆ ತಗುಳ್ಚಿದ ಅರಿಕೇಸರಿ. ಆದರೆ ಕವಿಯ ಧ್ಯಾನ ವಿಶೇಷವಾಗಿ ಕರ್ಣನಲ್ಲಿ, ದುರ್ಯೋಧನನಲ್ಲಿ, ಕೃಷ್ಣನಲ್ಲಿ ಸಹ. ಹಲಕೆಲವು ಪದ್ಯಗಳ ಮೂಲಕ ಅರ್ಜುನನ ಹೊಗಳಿಕೆ ಬರುತ್ತದೆ. ಮಹತ್ವದ ಕಾರ್ಯವನ್ನು ಮಾಡುವಲ್ಲಿ ಕೃಷ್ಣನ ಹಾಜರಿ ಅಗತ್ಯವಾಗಿ ಇರುತ್ತದೆ. ಕೊನೆಯಲ್ಲಿ ಕರ್ಣನನ್ನು ಕೊಲ್ಲುವಾಗಲೂ ‘ನೀನ್ ಎನ್ನ ಕಜ್ಜದೊಳ್ ಎಸಗು’ ಎಂದು ‘ಯೋಚಿಸಿದನ್ ಕದನ ತ್ರಿಣೇತ್ರನನ್’. ಸುಭದ್ರೆಯನ್ನು ಹೊರಗಿನಿಂದ ತಂದು ನಾಯಕಿ ಪಟ್ಟಕ್ಕೇರಿಸುವಾಗಲೂ ಅರ್ಜುನ ಪಂಪಭಾರತದ ನಾಯಕನೇ ಎಂಬ ಸಂದೇಹ ಮೂಡುತ್ತದೆ. ತನ್ನ ಅಣ್ಣ ಧರ್ಮರಾಯನ ಕುರಿತಾದ ಅವನ ಅಸಹನೆ ನಾಯಕ ಯೋಗ್ಯವಾಗಿಲ್ಲ. ಇಲ್ಲಿಯೂ ಪಂಪಭಾರತದ ನಾಯಕನೇ ಎಂಬ ಸಂದೇಹ ಮೂಡುತ್ತದೆ. ಪಂಪ ವ್ಯಾಸ ಭಾರತದ ಅರ್ಜುನನಿಗಿಂತ ತನ್ನ ಅರ್ಜುನನನ್ನು ಅರಿಕೇಸರಿಯಾದುದರಿಂದ- ಹೆಚ್ಚು ಸಭ್ಯನನ್ನಾಗಿ ಚಿತ್ರಿಸಿದ್ದಾನೆ. ವ್ಯಾಸ, ಕುಮಾರವ್ಯಾಸರಂತೆ ಕೃಷ್ಣ ಪಂಪನ ಆರಾಧ್ಯ ದೇವತೆಯಲ್ಲ. ಪಂಪ ಮೂಲತಃ ಜೈನ. ಭಾರತದ ಕತೆಯನ್ನು ಅಲೌಕಿಕತೆಯಿಂದ ಲೌಕಿಕಕ್ಕೆ ಇಳಿಸಿ ವರ್ಣಿಸುವಾಗ ಅವನು ವ್ಯಾಸ ಭಾರತದ ಒಳ್ಳೆಯ ವಿಮರ್ಶಕನಾಗುತ್ತಾನೆ. ಉತ್ತಮ ಸಂಗ್ರಾಹಕನಾಗುತ್ತಾನೆ. ‘The greatest genious is the most indebted man’ ಹಾಗೂ ಈ ಕಾವ್ಯವನ್ನವನು ತನ್ನರಸನ ಸಂತೋಷಕ್ಕಾಗಿ ಬರೆದಿದ್ದಾನೆ ಎನ್ನುವುದು ಮುಖ್ಯ. ಕೃಷ್ಣನನ್ನು ಲೋಕಪೂಜ್ಯರ ಪಟ್ಟಿಯಲ್ಲಿ ಸೇರಿಸದಿರಲು ಇವು ಕಾರಣಗಳಾಗಿರಬಹುದು.

ಪಂಪ ಕೃಷ್ಣನನ್ನು ಎರಡು ನೆಲೆಯಲ್ಲಿ ಚಿತ್ರಿಸಿದ್ದಾನೆ. ಒಂದು ದೈವ ಸಂಭೂತನಾದ ಶ್ರೀ ಕೃಷ್ಣ. ಇನ್ನೊಂದು ಕುಟಿಲ ರಾಜಕಾರಣಿ ಕೃಷ್ಣ. ಶ್ರೀಕೃಷ್ಣ ಪಾಂಡವರ ಸಖ ಮಾತ್ರವಲ್ಲ. ಅವರ ಪಕ್ಷದ ದೈವಬಲ ಮತ್ತು ಸಂರಕ್ಷಕ ದೇವರು (Protector). ಅವತಾರ ಪುರುಷ. ಮೂಲಭಾರತದಲ್ಲಿ ಬರುವ ಎಲ್ಲ ಬಿರುದುಗಳನ್ನು ಪಂಪ ಅವನಿಗೆ ಸಲ್ಲಿಸಿದ್ದಾನೆ. ಅವತಾರಗಳನ್ನು ಹೇಳಿದ್ದಾನೆ. ಗೀತಾ ಪ್ರವಚನದಲ್ಲಿ ಕೃಷ್ಣ ಕರ್ಮಯೋಗವನ್ನು ಅರ್ಜುನನಿಗೆ ವಿವರಿಸುತ್ತಾನೆ. ಧೃತರಾಷ್ಟ್ರ ದುರ್ಯೋಧನರಿಗೆ ತನ್ನ ದಿವ್ಯ ಸ್ವರೂಪವನ್ನು ತೋರಿಸಿದ್ದಾನೆ. ಕೃಷ್ಣ ತನ್ನ ಸಭೆಗೆ ಬರುವಾಗ ದುರ್ಯೋಧನ,

‘ಲೋಕಗುರು ಶಂಕಚಕ್ರಗ
ದಾಕರನತಿಶಯ ಚತುರ್ಭುಜಂ ಜನಜನಿತ
ವ್ಯಾಕುಳದೆ ಬಂದನೆಂದೊಡೆ
ಲೋಕದೊಳಿನ್ನೆನದೊರೆಗೆ ಸಿರಿಯರುಮೊಳಲೇ’

ಎಂಬ ಧನ್ಯತೆಯನ್ನು ವ್ಯಕ್ತಮಾಡಿ ಶ್ರೀ ಕೃಷ್ಣನ ದೈವಿಕತೆಯನ್ನು ಒಪ್ಪುತ್ತಾನೆ. ಭೀಷ್ಮ ಅಗ್ರಪೂಜೆಗೆ ಕೃಷ್ಣನೇ ಪಾತ್ರನೆಂದು ಹೇಳುತ್ತಾನೆ. ಪಂಪನ ಮತದಂತೆ ಶ್ರೀ ಕೃಷ್ಣ ‘ಅಜ’ – ಅನಂತ. ಜನ್ಮ ರಹಿತನಾದ ದೇವರು. ಅವನು ಪನ್ನಗ ಶಯನ, ಬಲಿಬಂಧನ, ಮಧುಕೈಟಭಾರಿ. ಇಂಥಾ ‘ಅಲೌಕಿಕ ಪುರುಷೋತ್ತಮ’ನನ್ನು ತಾನು ಅಂತಃಕರಣದಲ್ಲಿ ಜೈನನಾಗಿ ತನ್ನ ಲೌಕಿಕ ಕಾವ್ಯದ ಲೋಕ ಪೂಜ್ಯತೆಯ ಪಟ್ಟಿಗೆ ಸೇರಿಸಿಕೊಳ್ಳುವುದು ಹೇಗೆ?

ಕೃಷ್ಣನನ್ನು ಒಬ್ಬ ಕುಟಿಲ ರಾಜಕಾರಣಿಯನ್ನಾಗಿ ಪಂಪ ಹೆಚ್ಚು ಸಾವಧಾನದಿಂದ ಚಿತ್ರಿಸಿದ್ದಾನೆ. ಮಹಾಭಾರತ ಮುಖ್ಯವಾಗಿ ಸಮರಗಾಥೆ. ಪಂಪನ ಕಾಲದ ಗುಣ ಧರ್ಮವೂ ಇದೇ ಇದ್ದಿರಬೇಕು. ಅನೇಕ ಯುದ್ಧಗಳನ್ನು ಜಯಿಸಿ ಸಮರಮಲ್ಲನೆಂದು ಬಿರುದಾಂಕಿತನಾದ ಅರಿಕೇಸರಿಯ ಮಿತ್ರನೂ ಕುಶಲ ರಾಜಕಾರಣಿಯಾಗಿರಲೇ ಬೇಕಲ್ಲ. ಸುಭದ್ರೆಯ ಸಂದರ್ಭದಿಂದ ಪ್ರಾರಂಭವಾದ ಕೃಷ್ಣ ಅರ್ಜುನ ಗೆಳೆತನ ಪಾಂಡವ ಪಕ್ಷದ ಸಂಪೂರ್ಣ ರಾಜನೀತಿಯನ್ನು ನಿಯಂತ್ರಿಸುತ್ತದೆ. ಪಂಪನಲ್ಲಿ ಇದು ಸಮರ್ಥವಾಗಿ ಬಂದಿದೆ. ಕುಂತಿ ಕೃಷ್ಣನ ಸೋದರತ್ತೆ ಹಾಗೂ ಅರ್ಜುನ ಅವನ ಭಾವ ಮೈದುನ. ತಮ್ಮಿಬ್ಬರ ನೈತಿಕ ಸಂಬಂಧ ಪುರಾತನವಾದುದೆಂದು ಕೃಷ್ಣ ತಾನೇ ಅರ್ಜುನನಿಗೆ ಹೇಳುತ್ತಾನೆ. ಇಂಥದರಲ್ಲಿ ಯಾದವ ಪ್ರಮುಖನಾದ ಅವನು ತಮ್ಮವರ ಸಂರಕ್ಷಕನೂ ಆಗಿದ್ದ. ಕೌರವರ ಮೇಲೆ ಅವನಿಗೆ ದ್ದೇಷವಿರಲಿಲ್ಲವೆಂದು ಕಾಣುತ್ತದೆ. ಅವರ ವಿನಾಶವನ್ನು ಮಾತ್ರ ಅವನು ಬಯಸಿದ. ಅವರು ಪಾಂಡವರಿಗೆ ಮಾಡಿದ ಅನ್ಯಾಯ ಅಕ್ಷಮ್ಯವೆಂದು ಅವನ ಸಮರ್ಥನೆ. ಮುಂದಕ್ಕೆ ಅರ್ಜುನನ್ನು ಹಸ್ತಿನಾಪುರದ ಚಕ್ರವರ್ತಿಯನ್ನಾಗಿ ಮಾಡುವುದು ಅವನ ಉದ್ದೇಶವಾಗಿದ್ದಿರಬಹುದು. ಇದರಿಂದ ತನ್ನ ರಾಜ್ಯದ ಸಂರಕ್ಷಣೆ ಹಾಗೂ ಕುರುರಾಜ್ಯದ ಮೇಲೆ ತನ್ನ ವರ್ಚಸ್ಸು ಸರ್ವತ್ರ ಸದಾಕಾಲ ಉಳಿಯುವುದೆಂದು ಅವನ ಲೆಕ್ಕಾಚಾರವಿದ್ದಿರಬಹುದು. ಅದಕ್ಕಾಗಿ ಅವನು ಕುರುಕ್ಷೇತ್ರ ಯುದ್ಧವನ್ನು ಪಾಂಡವರ ಪಕ್ಷದ ಕಡೆಗೆ ತಿರುಗಿಸುವುದಕ್ಕಾಗಿ ರಾಜನೀತಿಯನ್ನು ನಡೆಸಿದ. ಇದರ ಸ್ಪಷ್ಟ ಚಿತ್ರಣ ಈ ಪದ್ಯದಲ್ಲಿದೆ.

ಗುರುಕೃಪ ಶಲ್ಯ ಸಿಂಧುಸುತರಪ್ಪೊಡೆ ನಮ್ಮಯ ಪಕ್ಷ
ಗುರು ಸುತನು ನಮಕಡೆಯೆ ಗೆಲ
ಲ್ಕರಿಯನುಂ ಬಂದಿಬಾರದನುಂ ಅಂಕದಕರ್ಣನೆ
ಬೀರಂಚಾಗಂ ಅವನಿಂದ ಎಸೆದತ್ತು ಧಾತ್ರಿಯೊಳ್

ಕೌರವನ ಕಡೆಯಿಂದ ಯುದ್ಧ ಮಾಡುವ ಮಹಾರಥಿಗಳಾದ ದ್ರೋಣ ಕೃಪಾಚಾರ್ಯ, ಶಲ್ಯ, ಭೀಷ್ಮ ಅಶ್ವತ್ಥಾಮ ಇವರೆಲ್ಲ ನಮ್ಮ ಪಕ್ಷ. ಗೆಲ್ಲಲಿಕ್ಕೆ ಲೋಭಿಸಲಿಕ್ಕೆ ಆಗದವನು ಕರ್ಣ ಮಾತ್ರ. ಅವನು ಮಹಾ ತ್ಯಾಗಿ. ನೀನಲ್ಲಿಗೆ ಹೋಗಿ ‘ಕಾರ್ಯ ಸಾಧಿಸು’ ಎಂದು ಕೃಷ್ಣ ಕುಂತಿಗೆ ಹೇಳುತ್ತಾನೆ. ತಾನೇ ಅವನ ಮನೆಗೆ ಮೊದಲ ಬಾರಿಗೆ ಬಂದು ಸಲಿಗೆ ತೋರಿಸುತ್ತಾನೆ. ‘ಭೇದಿಸಲೆಂದೆ ದಲ್‌ನುಡಿದರೆನ್ನದಿರ್’ ಎಂದು ಜನ್ಮ ರಹಸ್ಯ ಬಿತ್ತರಿಸಿ ಒಡಕನ್ನು ಹುಟ್ಟಿಸುತ್ತಾನೆ. ಸ್ವಾಮಿನಿಷ್ಠನೂ, ದುಃಖಿಯೂ ಅದ ಒಬ್ಬ ಆದರ್ಶ ವೀರನ ಆತ್ಮಬಲವನ್ನು ಮುರಿಯುವ ಕುಟಿಲ ರಾಜನೀತಿ ಇದುವೆ. ಸಂಧಾನಕ್ಕೆಂದು ಪಾಂಡವರ ರಾಯಭಾರಿಯಾಗಿ ಬಂದವನು ವಿದುರನ ಮನೆಗೆ ಮೊದಲು ಹೋಗಿ ಕೂಳುಂಡು ಬರುವ ಅಗತ್ಯವಿರಲಿಲ್ಲ. ಕೃಷ್ಣನ ಸಾದರ ಸ್ವಾಗತಕ್ಕೆ ಅಣಿಯಾಗಿದ್ದ ದುರ್ಯೋಧನನನ್ನು ಕೆರಳಿಸಿ ಅವನ ರಕ್ಷಣೆಗಾಗಿ ವಿದುರನಿಟ್ಟಿದ್ದ ಆಯುಧವನ್ನು ನಾಶಗೊಳಿಸುವ ಉದ್ದೇಶ ಅದಾಗಿತ್ತು. ಅಲ್ಲದೆ ಕರ್ಣನನ್ನು ಕೊಲ್ಲುವಲ್ಲಿ ‘ಭೇದದೊಳಲ್ಲದೆ ಗೆಲಲರಿದು ಸಿಂಧುಸತನನ್’ ಎಂದು ಭೀಷ್ಮನ ಪತನದಲ್ಲಿ, ದ್ರೋಣರ ಅವಸಾನದಲ್ಲಿ ಅವನ ರಾಜನೀತಿಯನ್ನು ‘ಡೊಂಬರಾಟ’ವೆಂದು ಕರೆದ ಶಿಶುಪಾಲ ವಧೆಯಲ್ಲಿ, ಅರ್ಜುನನ ಸಾರಥಿಯಾಗುವಲ್ಲಿ ಕೃಷ್ಣ ಕುಶಲ ರಾಜಕಾರಣಿಯಾಗಿ ಕಾಣುತ್ತಾನೆ. ಭೇದದಿಂದ ಪ್ರಬಲ ವಿಪಕ್ಷವನ್ನು ಒಡೆದು ದುರ್ಬಲಗೊಳಿಸಿದ ನಂತರ ದಂಡ ಪ್ರಯೋಗ ಮಾಡುವ ರಾಜನೀತಿ ಅಂದಿನದಾಗಿರಬೇಕು. ಇದೂ ಅಲ್ಲದೆ ಭೀಷ್ಮ ಹೇಳುವ ಹಾಗೆ ‘ಭಾರತಂ ಕಲಹಂ, ಇದಿರ್ಚುವನ್ ಹರಿಗನ್’. ಇದೊಂದು ದಾಯಾದಿಗಳ ರಾಜ್ಯಕಲಹ. ನೇರವಾಗಿ ಇದರೊಳಗಿದ್ದು ತಮ್ಮ ಕರ್ತವ್ಯವನ್ನು ಮೆರೆದವರಿಂದಲೆ ಈ ‘ಯುದ್ದ ವರ್ಣನೆಯ ಕಾವ್ಯ’ ಲೋಕ ಪೂಜ್ಯವಾಯಿತೆಂದು ಹೇಳಿ, ಮಧ್ಯಸ್ತನಾಗಿ ಬೇರೆ ಬೇರೆ ಬಗೆಯಲ್ಲಿ ಒಂದು ಪಕ್ಷಕ್ಕೆ ಸಹಾಯ ಮಾಡಿದ ‘ಹೊರಗಿನವ’ನಾದ ಕೃಷ್ಣನನ್ನು ‘ಲೋಕ ಪೂಜ್ಯತೆಗೆ’ ಕಾರಣರಾದವರ ಪಟ್ಟಿಯಲ್ಲಿ ಸೇರಿಸಿಕೊಳ್ಳುವುದು ಸೂಕ್ತವಲ್ಲವೆಂದೇ ಪಂಪನಿಗೆ ಅನಿಸಿರಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗತಿ
Next post ಹೆಂಡತಿ

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…