ರಂಗಣ್ಣನ ಕನಸಿನ ದಿನಗಳು – ೧೭

ರಂಗಣ್ಣನ ಕನಸಿನ ದಿನಗಳು – ೧೭

ಪರಾಶಕ್ತಿ ದರ್‍ಶನ

ರಂಗಣ್ಣ ಮನೆಯನ್ನು ಸೇರಿದಾಗ ಬೆಳಗ್ಗೆ ಹನ್ನೊಂದೂವರೆ ಗಂಟೆಯಾಗಿತ್ತು. ಆ ಬೈಸ್ಕಲ್ ಪ್ರಯಾಣದಿಂದ ಮೈಯೆಲ್ಲ ಬೆವರುತ್ತಿತ್ತು. ಬೆಳಗ್ಗೆ ತಾನು ಸ್ನಾನ ಮಾಡಿದವನಾಗಿದ್ದರೂ ಮತ್ತೊಮ್ಮೆ ಸ್ನಾನ ಮಾಡಬೇಕೆಂಬ ಅಪೇಕ್ಷೆ ಅವನಿಗುಂಟಾಯಿತು. ತನ್ನ ಉಡುಪುಗಳನ್ನು ಬಿಚ್ಚಿ ಪಂಚೆಯನ್ನುಟ್ಟು ಟವಲುಗಳನ್ನು ಕೈಗೆ ತೆಗೆದುಕೊಳ್ಳುತ್ತಿದ್ದಾಗ ಅವನ ಹೆಂಡತಿ ಕೊಟಡಿಯೊಳಕ್ಕೆ ಬಂದಳು. ಆಕೆ ಬೆಳ್ಳಗೂ ತೆಳ್ಳಗೂ ಇದ್ದ ಚೆಲುವೆ. ಅಡಿಗೆಯ ಮನೆಯಿಂದ ಬಂದವಳಾದ್ದರಿಂದ ಒಲೆಯ ಕಾವಿನಿಂದ ಮುಖ ಕೆಂಪುವರ್ಣಕ್ಕೆ ಸಹಜವಾಗಿ ತಿರುಗಿತ್ತು. ಆದರೆ ಆ ಕೆಂಪು ಬಣ್ಣ ಎಂದಿಗಿಂತಲೂ ಆಗ ಹೆಚ್ಚಾಗಿದ್ದುದು ರಂಗಣ್ಣನ ದೃಷ್ಟಿಗೆ ಬಿತ್ತು.

‘ಆ ಟವಲ್ ಕೆಳಗಿಟ್ಟು ನನ್ನ ಮಾತಿಗೆ ಮೊದಲು ಉತ್ತರ ಕೊಡಿ! ನಿಮ್ಮ ಇನ್ಸ್‌‍ಪೆಕ್ಟರ್ ಗಿರಿ ಹಾಳಾಗ!’ ಎಂದು ಆಕೆ ಕೋಪದಿಂದ ಹೇಳಿದಳು.

ರಂಗಣ್ಣನಿಗೆ ತನ್ನ ಹೆಂಡತಿಯ ನಡೆವಳಿಕೆ ಅರ್‍ಥವಾಗಲಿಲ್ಲ. ಆಕೆ ಸಾಮಾನ್ಯವಾಗಿ ಕೋಪ ಮಾಡಿಕೊಂಡಿದ್ದೆ ಇಲ್ಲ ; ಒರಟಾಗಿ ಮಾತ ನಾಡಿದವಳೂ ಅಲ್ಲ. ಈ ದಿನ ತಾನು ಶ್ರಮಪಟ್ಟು ಕೊಂಡು ಮನೆಗೆ ಬಂದರೆ ತನ್ನನ್ನು ಆದರಿಸುವುದಕ್ಕೆ ಬದಲು ಹೀಗೇಕೆ ಜಗಳಕ್ಕೆ ನಿಂತಿದ್ದಾಳೆ? ಎಂದು ಆಲೋಚಿಸಿದನು. ಆದರೆ ಸಮಸ್ಯೆ ಪರಿಹಾರವಾಗಲಿಲ್ಲ. ರಂಗಣ್ಣ ಟವಲನ್ನು ಕುರ್‍ಚಿಯಮೇಲಿಟ್ಟು, ‘ಇದೇತಕ್ಕೆ ಹೀಗೆ ಗದರಿಸುತ್ತೀಯೆ ? ನಾನೇನು ತಪ್ಪು ಮಾಡಿದೆ?’ ಎಂದು ಕೇಳಿದನು.

‘ಏನು ಮಾಡಿದಿರಾ? ಕೈಯಲ್ಲಿ ಅಧಿಕಾರ ಇದೆಯೆಂದು ಹೆಣ್ಣು ಮೇಷ್ಟ್ರು ಗಳಿಗೆಲ್ಲ ಹುಚ್ಚು ಹುಚ್ಚಾಗಿ ಜುಲ್ಮಾನೆ ಹಾಕುವುದೇ ನೀವು?’

ರಂಗಣ್ಣನಿಗೆ ಪ್ರಕರಣವೆಲ್ಲ ಅರ್ಥವಾಯಿತು. ‘ಸೀತಮ್ಮನವರು ಬಂದು ನಿನ್ನ ಹತ್ತಿರ ಹೇಳಿಕೊಂಡರೋ?’

‘ಏಕ ಹೇಳಿಕೊಳ್ಳಬಾರದು? ನೀವು ಅವಿವೇಕ ಮಾಡಬಹುದು, ಆಕ ಬಂದು ಹೇಳಿ ಕೊಳ್ಳಕೂಡದೇ? ಆಕೆ ಮಾಡಿದ ಅಂತಹ ಅಪರಾಧವೇನು? ಹೆಂಗಸು, ಅನಾಥೆ, ವಿಧವೆ, ದಿಕ್ಕಿಲ್ಲದವಳು! ಹೊಟ್ಟೆ ಪಾಡಿಗೆ ನಿಮ್ಮ ಇಲಾಖೆಗೆ ಸೇರಿಕೊಂಡು ಮಕ್ಕಳಿಗೆ ಯಥಾಶಕ್ತಿ ಪಾಠ ಹೇಳಿ ಕೊಡುತ್ತಿದ್ದರೆ ನೀವು ಹೋಗಿ ಜುಲ್ಮಾನೆ ಹಾಕುವುದೇ? ಆಕೆ ಹೇಳಿ ಕೊಂಡು ಅತ್ತಾಗ ನಾನು ನಂಬಲಿಲ್ಲ. ನೀವು ಅಂಥಾವರು ಅಲ್ಲವಲ್ಲ; ಯಾರಿಗೂ ಸಾಮಾನ್ಯವಾಗಿ ಜುಲ್ಮಾನೆ ಹಾಕುವುದಿಲ್ಲವಲ್ಲ; ರೇಂಜಿನಲ್ಲಿ ಮೇಷ್ಟರುಗಳೆಲ್ಲ ನಿಮ್ಮನ್ನು ಕೊಂಡಾಡುತ್ತಿದ್ದಾರಲ್ಲ; ಹೀಗಿರುವಲ್ಲಿ ಹೆಂಗಸಿಗೆ, ಅದರಲ್ಲೂ ವಿಧವೆಗೆ ನೀವು ದಂಡನೆ ಮಾಡಿರಲಾರಿರಿ ಎಂದು ನಾನು ಹೇಳಿದೆ. ಆಕೆ ನಿಮ್ಮ ಆರ್ಡರನ್ನು, ನೀವೇ ರುಜು ಮಾಡಿರುವ ಆರ್ಡರನ್ನು ನನಗೆ ತೋರಿಸಿದಳು. ಇನ್ನು ನಂಬದೆ ಹೇಗಿರಲಿ? ಮೊದಲು ಆ ಜುಲ್ಮಾನೆ ವಜಾ ಮಾಡಿ ಆಮೇಲೆ ಸ್ನಾನಕ್ಕೆ ಟವಲುಗಳನ್ನು ತೆಗೆದು ಕೊಳ್ಳಿ!’

‘ಕಚೇರಿಯ ವಿಷಯಗಳಲ್ಲಿ ಮನೆಯ ಹೆಂಗಸರು ಕೈ ಹಾಕಬಾರದು!’

‘ಅದಕ್ಕೋಸ್ಕರವೇ ನೀವು ಅವಿವೇಕ ಮಾಡಿದ್ದು! ನಿಮ್ಮ ಅವಿವೇಕ ತಿದ್ದುವುದಕ್ಕೆ ನಾನು ಬಾರದೆ ಬೀದಿಯ ಹೆಂಗಸು ಬರಬೇಕೇ? ಹೆಂಗಸರು! ಎಂದು ಏಕೆ ಹಳಿಯುತ್ತಿದ್ದೀರಿ? ಹೆಂಗಸಿಗಿರುವ ಸೈರಣೆ, ವಿವೇಕ, ಬುದ್ಧಿ ಶಕ್ತಿ ಗಂಡಸಿಗೆಲ್ಲಿದೆ? ನೀವು ನಿಮ್ಮ ಈ ಕಚೇರಿಯ ವಿಷಯಕ್ಕೆ ನನ್ನನ್ನು ಆಲೋಚನೆ ಕೇಳಿದ್ದಿದ್ದರೆ ನಾನು ಸರಿಯಾಗಿ ಸಲಹೆ ಕೊಡುತ್ತಿದ್ದೆ, ಹೆಂಗಸರು ಕೈಹಾಕಬಾರದಂತೆ! ನಿಮ್ಮ ಮಕ್ಕಳನ್ನು ನೀವು ಎರಡು ದಿನ ಸುಧಾರಿಸಬಲ್ಲಿರಾ? ನಾನು ಕಣ್ಮುಚ್ಚಿ ಕೊಂಡರೆ ಆಗ ಗೊತ್ತಾಗುತ್ತೆ ಗಂಡಸಿನ ಬಾಳು!’

ತಿಪ್ಪೇನಹಳ್ಳಿಯ ದೃಶ್ಯ ಸ್ಮರಣೆಗೆ ಬಂದು ರಂಗಣ್ಣನಿಗೆ ಎದೆ ಝಲ್ಲೆಂದಿತು ! ‘ಕೆಟ್ಟ ಮಾತನಾಡಬೇಡ! ಬೇಡ! ದಾರಿಯಲ್ಲಿ ಹೋಗುವ ಮಾರಿ ಮನೆ ಹೊಕ್ಕಂತೆ ಆಯಿತು. ನನಗೂ ನಿನಗೂ ಸಂಬಂಧವಿಲ್ಲದ ವ್ಯವಹಾರದಿಂದ ಈ ಮಾತು ಬೆಳೆಯುತ್ತಿದೆ’ ಎಂದನು. ವಿಷಗಳಿಗೆಯಲ್ಲಿ ಕೆಟ್ಟ ಮಾತು ಹೊರಟುಬಿಟ್ಟಿತಲ್ಲ!-ಎಂದು ರಂಗಣ್ಣ ಒಂದು ನಿಮಿಷ ಪೇಚಾಡಿದನು. ‘ಕೇಳು. ನಾನು ಜುಲ್ಮಾನೆ ಹಾಕಿದವನಲ್ಲ. ಸಾಹೇಬರು ಹಾಕಿದ್ದು, ಆರ್ಡರನ್ನು ಆಕೆಗೆ ಕಳಿಸಿದೆ; ಅಷ್ಟೇ. ಆ ದಿನ- ಸಾಹೇಬರೊಡನೆ ಸರ್‍ಕಿಟು ಹೋಗಿದ್ದು ಹಿಂದಿರುಗಿದ ದಿನ-ನಾನು ಸರಿಯಾಗಿ ಏಕೆ ಊಟ ಮಾಡಲಿಲ್ಲ ಎಂದು ನೀನು ಕೇಳಿದ್ದು ಜ್ಞಾಪಕವುಂಟೋ ಇಲ್ಲವೋ? ಆಗ ನಡೆದದ್ದನ್ನೆಲ್ಲ ಆ ಸಾಯಂಕಾಲ ನಿನಗೆ ತಿಳಿಸಲಿಲ್ಲವೇ? ಸಾಹೇಬರು ಜುಲ್ಮಾನೆ ಹಾಕಲಾರರೆಂದು ನಾನು ನಂಬಿದ್ದೆ, ಏನು ಮಾಡುವುದು? ಒಬ್ಬೊಬ್ಬರು ವಕ್ರಗಳು ಹೀಗೆ ಅಧಿಕಾರಕ್ಕೆ ಬಂದುಬಿಡುತ್ತಾರೆ. ಆಗ ಕೈ ಕೆಳಗಿನವರಿಗೆ ಕಷ್ಟ. ಹಿಂದೆ ಇದ್ದ ಸಾಹೇಬರು ಒಳ್ಳೆಯವರಾಗಿದ್ದರು; ಮುಂದೆ ಒಳ್ಳೆಯವರು ಬರಬಹುದು. ಸದ್ಯಕ್ಕೆ ಕಷ್ಟ ಅನುಭವಿಸಬೇಕು. ಈಗಿನ ಸಾಹೇಬರು ದುಡುಕು; ಅವರದು ಕಠಿನ ಮನಸ್ಸು; ಎತ್ತು ಈಯಿತು ಎಂದರೆ ಕೊಟ್ಟಿಗೆಯಲ್ಲಿ ಕಟ್ಟು – ಎಂದು ಆರ್ಡರ್ ಮಾಡುವ ಮಹಾನುಭಾವರು ! ಏನು ಮಾಡಬೇಕು ? ಹೇಳು.’

‘ನೀವು ಜುಲ್ಮಾನೆ ಹಾಕಿದ್ದೇನೂ ಅಲ್ಲವಲ್ಲ? ನೀವು ಅವಿವೇಕ ಮಾಡಿದ್ದೇನೂ ಅಲ್ಲವಲ್ಲ? ನನ್ನ ಮನಸ್ಸಿಗೀಗ ನೆಮ್ಮದಿಯಾಯಿತು! ನೀವು ಅಂಥವರಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡಬಲ್ಲೆ! ಹೀಗಿರುವಲ್ಲಿ, ಆ ಹೆಂಗಸು ಬಂದು ಆರ್ಡರ್ ತೋರಿಸಿದಾಗ ಮನಸ್ಸು ಮುರಿದು ಹೋಯಿತು. ನಿಮ್ಮನ್ನು ನಂಬುವುದು ಹೇಗೆ? ಹೊರಕ್ಕೆ ನುಣ್ಣನೆ ಇದ್ದು ಒಳಗೆ ಮಿಣ್ಣನೆ ಕತ್ತು ಕುಯ್ಯುವ ಗಂಡನೊಡನೆ ಮನಸ್ಸು ಕೊಟ್ಟು ಮನಸ್ಸು ಪಡೆಯುವುದು ಹೇಗಮ್ಮ? ಹೇಗೆ? ಅದು ಹೇಗೆ ಸಂಸಾರ ಮಾಡುವುದು?-ಎಂದೆಲ್ಲ ಬಹಳ ಆಲೋಚನೆ ಮಾಡಿದೆ. ಈಗ ನನಗೆ ಸಮಾಧಾನವಾಯಿತು! ಹಾಗೆ ಅವಿವೇಕ ಮುಚ್ಚಿಕೊಂಡಿರುವ ನಿಮ್ಮ ಸಾಹೇಬರು ಯಾರು? ನಾನು ಡೈರೆಕ್ಟರ್ ಆದರೆ ಮೊದಲು ಅವರನ್ನು ಕೆಲಸದಿಂದ ಡಿಸ್ಮಿಸ್ ಮಾಡಿಬಿಡುತ್ತೇನೆ!’

‘ಆ ಸಾಹೇಬರ ಚರಿತ್ರೆಯನ್ನೆಲ್ಲ ಕಟ್ಟಿಕೊಂಡು ನಮಗೇನು? ಅಲ್ಪನಿಗೆ ಐಶ್ವರ್‍ಯ ಬಂದರೆ ಮೆರೆಯುವ ಹಾಗೆ, ಎರಡು ದಿನ ಅಧಿಕಾರದಲ್ಲಿ ಮೆರೆಯುತ್ತಾರೆ. ಕೈ ಕೆಳಗಿನವರ ಕಷ್ಟಗಳನ್ನೂ ಬಡತನವನ್ನೂ ನೋಡುವುದಿಲ್ಲ’

‘ಅಂಥ ಅವಿವೇಕಿಗಳಿಗೆ ಜವಾಬ್ದಾರಿಯ ಕೆಲಸ ಏತಕ್ಕೆ ಕೊಡಬೇಕು? ಸರಕಾರದವರು ಆಲೋಚನೆ ಮಾಡಬೇಡವೇ? ಒಬ್ಬ ಅವಿವೇಕಿಯಿಂದ ಎಷ್ಟು ಜನರಿಗೆ ಈ ಕಷ್ಟ!’

‘ಹಾಗೆಲ್ಲ ಸರಕಾರದವರನ್ನು ಟೀಕಿಸಬೇಡ. ಈ ನಮ್ಮ ಮಾತು ಹೊರಗಿನವರ ಕಿವಿಗೆ ಬಿದ್ದರೆ ನಮಗೆ ತೊಂದರೆಯಾಗುತ್ತೆ? ನಿನಗೆ ಈ ದಿನ ಬಹಳ ಕೋಪ ಬಂದಿದೆ. ಇಷ್ಟು ಕೋಪ ನಿನ್ನಲ್ಲಿದೆ ಎಂದು ನಾನು ತಿಳಿದಿರಲಿಲ್ಲ.’

‘ನಿಮಗೇನು ತೊಂದರೆಯಾದೀತು? ಹೇಳಿ, ಕೆಲಸದಿಂದ ತೆಗೆದು ಬಿಡುತ್ತಾರೆಯೆ? ತೆಗೆದುಬಿಡಲಿ! ಬುದ್ದಿ ಯಿದ್ದವರು ಹೇಗಾದರೂ ಜೀವನ ನಡೆಸುತ್ತಾರೆ. ನಿಮಗಿರುವ ಬುದ್ಧಿಯಲ್ಲಿ ಇದಕ್ಕೆ ನಾಲ್ಕರಷ್ಟು ಸಂಪಾದಿಸ ಬಹುದು! ಅವರು ಅವಿವೇಕ ಮಾಡಬಹುದು; ಯಾರೂ ಟೀಕಿಸಕೂಡದು – ಎಂದು ಹೇಳುತ್ತೀರಲ್ಲ! ಸರಿಯೇ ? ಬರಿಯ ಗಂಡಸರ ಆಡಳಿತ! ಕಡೆಗೆ ಒಬ್ಬಳೇ ಒಬ್ಬಳು ಹೆಂಗಸು ಸರಕಾರದಲ್ಲಿದ್ದಿದ್ದರೆ ಎಷ್ಟೋ ವಿವೇಕ ಇರುತ್ತಿತ್ತು!’

‘ಸ್ತ್ರೀ ಬುದ್ಧಿಃ ಪ್ರಳಯಾಂತಿಕಾ ಎಂದು ಕೇಳಿಲ್ಲವೇ ನೀನು’ ಹೆಂಗಸರು ಆಡಳಿತ, ಸರಕಾರ ನಡೆಸುವುದಕ್ಕಾಗುತ್ತದೆಯೇ?’

‘ಏನು? ಸ್ತ್ರೀ ಬುದ್ಧಿ, ಪ್ರಳಯ ಗಿಳಯ ಎಂದು ಆಡುತ್ತಿದ್ದೀರಿ? ಕೈ ಹಿಡಿದ ಹೆಂಡತಿಯನ್ನು ಜೂಜಿನಲ್ಲಿ ಸೋತುಬಿಡುವ ಗಂಡಸು, ಕೈ ಹಿಡಿದ ಹೆಂಡತಿಯನ್ನು – ಏಳು ತಿಂಗಳ ಗರ್ಭಿಣಿಯನ್ನು – ಕಾಡುಪಾಲು ಮಾಡುವ ಗಂಡಸು, ದೊಡ್ಡ ವಿವೇಕಿಗಳು! ರಾಜರ್‍ಷಿಗಳು! ಅಲ್ಲವೇ? ಇದಕ್ಕಿಂತ ಅವಿವೇಕ ಲೋಕದಲ್ಲುಂಟೇ? ಗಂಡಸು ಮಾಡುವ ಅವಿವೇಕ ಅನ್ಯಾಯಗಳನ್ನೆಲ್ಲ ಹೊಟ್ಟೆಯಲ್ಲಿಟ್ಟು ಕೊಂಡು ಸೈರಣೆಯಿಂದ ಸಂಸಾರ ನಡೆಸುವ ನಮ್ಮಂಥ ಪತಿವ್ರತೆಯರ ಪ್ರಭಾವದಿಂದ ಒಂದಿಷ್ಟು ಮಳೆ ಬೆಳೆ ಗಳನ್ನಾದರೂ ಕಾಣುತ್ತಿದ್ದೀರಿ ! ಸ್ತ್ರೀ ಬುದ್ದಿ! ಎಂದು ಹಳಿಯುತ್ತೀರಾ ನೀವು? ಗಂಡಸರದೇ ಯಾವಾಗಲೂ ವಕ್ರಬುದ್ದಿ! ಅವರನ್ನು ತಿದ್ದುವುದಕ್ಕೆ ಎಳತನದಲ್ಲಿ ತಾಯಿಯಿರಬೇಕು, ಯೌವನದಲ್ಲಿ ಹೆಂಡತಿ ಇರಬೇಕು, ಮುಪ್ಪಿನಲ್ಲಿ ಸೊಸೆಯಿರಬೇಕು! ನಿಮ್ಮನ್ನೊಂದು ಪ್ರಶ್ನೆ ಕೇಳುತ್ತೇನೆ. ಉತ್ತರ ಕೊಡಿ, ನಿಮ್ಮ ಸಾಹೇಬರುಗಳೆಲ್ಲ ಬರಿಯ ಗಂಡಸರೇ ಏಕಿರಬೇಕು? ಹೇಳಿ ನನಗೆ.’

‘ಸ್ವಲ್ಪ ಸಮಾಧಾನಮಾಡಿಕೋ. ಗದರಿಸಿ ಕೇಳಬೇಡ. ನಿನಗೆ ಉತ್ತರ ನಾನು ಹೇಳಲಾರೆ. ಹೆಂಗಸರೂ ತಕ್ಕಷ್ಟು ವಿದ್ಯಾವತಿಯರಾಗಿ ಹೆಚ್ಚು ಸಂಖ್ಯೆಯಲ್ಲಿ ದೊರೆತರೆ ಅವರೂ ಸಾಹೇಬರುಗಳಾಗಿ ಬರಬಹುದು. ಆ ಕಾಲವೂ ಬರಬಹುದು ಎಂದು ಕಾಣುತ್ತೆ.’

‘ಮುಖ್ಯ ಕಾರಣ ನಾನು ಹೇಳುತ್ತೇನೆ ಕೇಳಿ : ಗಂಡಸರಿಗೆ ಹೆಂಗಸನ್ನು ಮರ್‍ಯಾದೆಯಿಂದ ಕಾಣುವ ಸಭ್ಯತೆ ಹುಟ್ಟೊಡನೆ ಬರಲಿಲ್ಲ; ಓದೊಡನೆ ಬರಲಿಲ್ಲ. ನಿಮ್ಮ ಬಿ.ಎ., ಎಂ.ಎ. ಡಿಗ್ರಿಗಳೇಕೆ? ಸುಡೋದಕ್ಕೆ!’

‘ಈ ದಿನ ನಾನು ಎಡಮಗ್ಗುಲಲ್ಲಿ ಎದ್ದೆನೋ ಏನೋ? ನನ್ನ ಗ್ರಹಚಾರ ಬಿಡಿಸುತ್ತಾ ಇದ್ದೀಯ? ಈಗ ನಾನು ಸ್ನಾನಕ್ಕೆ ಹೊರಡಲೋ ಬೇಡವೋ? ಹೊಟ್ಟೆಯಲ್ಲಿ ಹಸಿವು. ಹೊತ್ತು ಮಧ್ಯಾಹ್ನವಾಗಿ ಹೋಯಿತು.’

‘ಆ ಬಡ ಹೆಂಗಸು ನಿನ್ನೆಯಿಂದ ಅನ್ನವಿಲ್ಲದೆ ಸಾಯುತ್ತಿದಾಳಲ್ಲ! ಆ ಹೆಣ್ಣು ಹೆಂಗಸು ಹನ್ನೆರಡು ಮೈಲಿ ನಡೆದು ಕೊಂಡು ಬಂದಿದ್ದಾಳಲ್ಲ! ಅವಳ ಕಷ್ಟಕ್ಕೆ ಮೊದಲು ಪರಿಹಾರ ಹೇಳಿ, ಆಮೇಲೆ ನಿಮ್ಮ ಸ್ನಾನ, ಊಟ!’

‘ಈಗ ಆಕೆ ಎಲ್ಲಿದ್ದಾಳೆ?’
‘ಅಡಿಗೆಯ ಮನೆಯಲ್ಲಿದ್ದಾಳೆ.’

‘ಏನು ಕೆಲಸ ಮಾಡಿದೆ! ಈ ನಮ್ಮ ಮಾತುಗಳನ್ನೆಲ್ಲ ಆಕೆ ಕಿವಿಯಲ್ಲಿ ಕೇಳಿದಳೋ ಏನೋ? ನಮ್ಮ ಮಾನ ಹೋಯಿತಲ್ಲ! ಮೊದಲೇ ನೀನು ಹೇಳಬಾರದಾಗಿತ್ತೇ?

‘ಆಕೆ ಒಳಗಡೆ ಇದ್ದಾಳೆ. ಕೇಳಿದರೆ ಏನು ದೋಷ? ಇದರಲ್ಲಿ ಗುಟ್ಟೇನಿದೆ?’

ಈಗ ಆಕೆಗೆ ಹಾಕಿರುವ ಜುಲ್ಮಾನೆಯನ್ನು ನಾನು ವಜಾ ಮಾಡುವ ಹಾಗಿಲ್ಲ. ಸಾಹೇಬರು ಹಾಕಿದ್ದು; ಅವರೇ ವಜಾ ಮಾಡಬೇಕು. ಅವರಿಗೆ ಶಿಫಾರಸು ಮಾಡುತ್ತೇನೆ. ಶಿಫಾರಸು ಮಾಡಬೇಕಾದ್ದು ಇನ್ನೂ ಒಂದು ಇದೆ. ಸಾಹೇಬರಿಗೆ ಕರುಣೆ ಹುಟ್ಟಿ ಜುಲ್ಮಾನೆ ವಜಾ ಮಾಡಿದರೆ ಆಗಬಹುದು. ಆದರೆ ನಾನು ಏನೆಂದು ಭರವಸೆಯನ್ನೂ ಕೂಡುವಹಾಗಿಲ್ಲ. ಆಕೆ ಅರ್‍ಜಿ ಕೊಡಲಿ ; ನೋಡೋಣ. ಆ ದಿನ ಆಕೆಯ ಪರವಾಗಿ ನಾನು ಮಾತನಾಡಿದ್ದಕ್ಕೆ ಸಾಹೇಬರು ನನ್ನನ್ನು ಗದರಿಸಿಬಿಟ್ಟರು. ಅದೆಲ್ಲ ನಿನಗೆ ತಿಳಿದಿದೆಯಲ್ಲ.’

‘ನೀವೇ ಆ ಕೆಗೆ ಸ್ವಲ್ಪ ಧೈರ್‍ಯ ಹೇಳಿ, ಹೆಂಗಸು, ಭಯಸ್ಥಳು; ಜೀವನದಲ್ಲಿ ಬಹಳ ಕಷ್ಟಗಳನ್ನನುಭವಿಸಿದ್ದಾಳೆ. ತನ್ನ ಕಥೆಯನ್ನೆಲ್ಲ ಆಕೆ ಹೇಳಿ ಕೊಂಡಳು. ನನಗೆ ಬಹಳ ದುಃಖವಾಯಿತು. ಲೋಕದಲ್ಲಿ ಹೀಗೂ ಅನ್ಯಾಯ ಉಂಟೆ! ಸಮೀಪ ಬಂಧುಗಳೇ ಹೀಗೆ ಮೋಸ ಮಾಡುವುದುಂಟೇ! ಆಕೆಯಿಂದ ರುಜು ಹಾಕಿಸಿಕೊಂಡು ಗಂಡನ ಪಾಲನ್ನೆಲ್ಲ ಕ್ರಯ ಮಾಡಿಸಿಕೊಂಡು, ಕೈಗೆ ಏನೊಂದು ಹಣವನ್ನೂ ಕೊಡದೆ ಬೀದಿಗೆ ಅಟ್ಟುವುದುಂಟೇ! ಲೋಕದಲ್ಲಿ ಕೆಟ್ಟರೆ ಕೆಳೆಯಿಲ್ಲ; ಹೆಂಗಸಿಗೆ ಬಂಧುವಿಲ್ಲ. ನಿಮ್ಮ ದೃಷ್ಟಿಯಲ್ಲಿ ಅವಳು ಒಂದೋ ದಾಸಿ, ಇಲ್ಲ, ವೇಶ್ಯ!’

‘ಯಾರೋ ಕೆಲವರು ಮಾಡುವ ಪಾಪಕ್ಕೆ ಗಂಡಸರನ್ನೆಲ್ಲ ಹಳಿಯುತಿದ್ದೀಯೆ! ಈಗ ನಿನ್ನೊಡನೆ ವಾದಿಸಿ ಪ್ರಯೋಜನವಿಲ್ಲ. ಹೋಗು, ಆಕೆಯನ್ನು ಕರೆ. ಆಕೆಯನ್ನು ಊಟಕ್ಕೆ ಇಲ್ಲಿಯೇ ನಿಲ್ಲುವಂತೆ ಹೇಳಿದೀಯೋ? ಇಲ್ಲವೇ ಆಕೆ ತನ್ನ ನೆಂಟರ ಮನೆಗೆ ಹೋಗುತ್ತಾಳೆಯೋ?’

‘ಮತ್ತೆ ಮತ್ತೆ ನೀವು ಆ ನೆಂಟರ ಮಾತನ್ನಾಡುತ್ತಿದ್ದೀರಲ್ಲ! ಇದಲ್ಲವೇ ಚೋದ್ಯ! ಆ ಹಾಳು ನೆಂಟರ ಮನೆಗೆ ಆಕೆ ಹೋಗುವುದುಂಟೇ? ತನಗೆ ಜುಲ್ಮಾನೆ ಬಿದ್ದಿದೆಯೆಂದು ಅಲ್ಲಿ ಅಳುವುದುಂಟೇ? ನಿಮಗೇತಕ್ಕೆ ಈ ದಿನ ಹೀಗೆ ಮತಿ ಮುಚ್ಚಿ ಹೋಯಿತು! ನಾನೇ ತಕ್ಕ ರೀತಿಯಲ್ಲಿ ಸಮಾಧಾನ ಮಾಡಿ, ಸ್ನಾನಕ್ಕೆ ನೀರು ಕೊಟ್ಟೆ; ಉಟ್ಟು ಕೊಳ್ಳಲು ನನ್ನ ನಾರು ಮಗುಟ ಕೊಟ್ಟೆ. ನಿನ್ನೆ ಊಟ ಮಾಡಿಲ್ಲವಲ್ಲ ಆ ಹೆಂಗಸು ಎಂದು ವ್ಯಥೆಪಟ್ಟು – ಹಾಲೂ ಹಣ ತೆಗೆದುಕೊಳ್ಳಿರಮ್ಮ – ಎಂದು ಹೇಳಿದೆ. ಆಕೆ-ಅಯ್ಯೋ! ನನಗೇನೂ ಬೇಡಮ್ಮ, ಬೇಡ ತಾಯಿ! ನನ್ನ ಹೊಟ್ಟೆಯೆಲ್ಲ ತುಂಬಿದೆ-ಎಂದು ಬಿಗುಮಾನ ಮಾಡಿದಳು. ಹೀಗೆಲ್ಲ ಮೊಂಡಾಟ ಮಾಡಿದರೆ ಜುಲ್ಮಾನೆ ವಜಾ ಮಾಡಿಸುವುದಿಲ್ಲ-ಎಂದು ನಾನು ಸ್ವಲ್ಪ ಗದರಿಸುತ್ತಲೂ ಆಕೆ, ದಮ್ಮಯ್ಯ! ನಿಮ್ಮ ಕಾಲಿಗೆ ಬೀಳುತ್ತೇನೆ! ಹಾಗೆಲ್ಲ ಹೇಳಬೇಡಿ ಅಮ್ಮ! ನಿಮ್ಮನ್ನೇ ನಂಬಿಕೊಂಡು ಹನ್ನೆರಡು ಮೈಲಿ ನಡೆದುಕೊಂಡು ಬಂದಿದ್ದೇನೆ! ಕಾಲು ನೋಯುತ್ತಿದೆ, ಪಾದಗಳು ಉರಿಯುತ್ತಿವೆ. ನೀವು ಹೇಳಿದ ಹಾಗೆ ಕೇಳುತ್ತೆನಮ್ಮ! ಜುಲ್ಮಾನೆ ವಜಾ ಮಾಡಿಸಿ ಪುಣ್ಯ ಕಟ್ಟಿಕೊಳ್ಳಿ-ಎಂದು ಹೇಳಿ ಹಾಲೂ ಹಣ್ಣನ್ನು ತೆಗೆದು ಕೊಂಡಳು. ಇಷ್ಟೆಲ್ಲ ಮುಗಿಯುವ ಹೊತ್ತಿಗೆ ನೀವೂ ಬೈಸ್ಕಲ್ ಬೆಲ್ ಹೊಡೆದು ಒಳಕ್ಕೆ ಬಂದಿರಿ.’

‘ರಂಗಣ್ಣನ ಹೆಂಡತಿ ಅಡಿಗೆಯ ಮನೆಗೆ ಹೋಗಿ ಸೀತಮ್ಮನನ್ನು ಕರೆದು, ‘ನಿಮ್ಮ ಇನ್ಸ್‌ಪೆಕ್ಟರ್ ಸಾಹೇಬರ ಮುಂದೆ ಹೋಗಿ ಹೇಳಿ ಕೊಳ್ಳಿ. ಆದರೆ ಅವರ ಮುಂದೆ ಅಳುವುದು ಗಿಳುವುದು ಅಮಂಗಳ ಮಾಡ ಬೇಡಿ! ಅರ್ಜಿ ಬರೆದು ಕೊಡ ಬೇಕೆಂದು ಹೇಳುತ್ತಾರೆ. ಆಗಲಿ, ಬರೆದು ಕೊಡುತ್ತೇನೆ, ಜುಲ್ಮಾನೆ ವಜಾ ಮಾಡಿಸಿ ಕಾಪಾಡಬೇಕು-ಎಂದು
ಮಾತ್ರ ಹೇಳಿ.’

‘ಆಗಲಮ್ಮ!’ ಎಂದು ಹೇಳಿ ಸೀತಮ್ಮ ರಂಗಣ್ಣನ ಕೊಟಡಿಯ ಬಾಗಿಲ ಬಳಿ ಬಂದು ನಮಸ್ಕಾರ ಮಾಡಿದಳು.

‘ಜುಲ್ಮಾನೆ ನಾನು ಹಾಕಿದ್ದಲ್ಲ. ಸಾಹೇಬರು ಹಾಕಿದ್ದು, ನೀವು ಸರಿಯಾಗಿ ಪುಸ್ತಕಗಳನ್ನು ಓದಿಕೊಂಡು ಪಾಠಶಾಲೆಗೆ ಹೋಗುವುದಿಲ್ಲ. ಆದ್ದರಿಂದ ಜುಲ್ಮಾನೆ ಬಿದ್ದಿದೆ.’

‘ಇನ್ನು ಮುಂದೆ ಚೆನ್ನಾಗಿ ಓದಿಕೊಂಡು ಪಾಠಮಾಡುತ್ತೇನೆ. ಈ ಬಾರಿಗೆ ಕ್ಷಮಿಸಿ ಜುಲ್ಮಾನೆ ವಜಾ ಮಾಡಿಸಬೇಕು.’

‘ಆಗಲಿ, ಮಧ್ಯಾಹ್ನ ಒಂದು ಅರ್ಜಿಯನ್ನು ಬರೆದು ಕೊಡಿ, ಶಿಫಾರಸು ಮಾಡಿ ಮೇಲಕ್ಕೆ ಕಳಿಸುತ್ತೇನೆ. ಒಂದು ವೇಳೆ ಸಾಹೇಬರು ಜುಲ್ಮಾನೆಯನ್ನು ವಜಾ ಮಾಡದಿದ್ದರೆ ನನ್ನ ತಪ್ಪಿಲ್ಲ.’

‘ತಾವು ಶಿಫಾರಸು ಮಾಡಿದರೆ ಖಂಡಿತ ವಜಾ ಆಗುತ್ತೆ. ತಮ್ಮನ್ನೇ ನಂಬಿಕೊಂಡು ಬಂದಿದ್ದೇನೆ.’

‘ಅರ್‍ಜಿಯ ಒಕ್ಕಣೆಯನ್ನು ಆಕೆ ಹೇಳುತ್ತಾಳೆ. ಅದರಂತೆ ಬರೆಯಿರಿ. ಈಗ ಮನಸ್ಸಿಗೆ ಸಮಾಧಾನ ಮಾಡಿಕೊಂಡು ಊಟಮಾಡಿ. ಆಷ್ಟು ದೂರದಿಂದ ನಡೆದುಕೊಂಡು ಬಂದಿದ್ದೀರಿ. ಬಹಳ ಶ್ರಮ ಆಗಿರಬೇಕು.’

‘ಶ್ರಮ ಆಗಿದೆ. ಏನು ಮಾಡಲಿ? ನಾನು ಇದುವರೆಗೂ ಒಂದು ಹವ್ಯಾಸಕ್ಕೆ ಹೋಗದೆ ಮಾನದಿಂದ ಇದ್ದ ಹೆಂಗಸು; ಹಿಂದಿನ ಕಾಲದವಳು. ಈಗ ನನ್ನ ಹೆಸರು ಹತ್ತು ಜನರ ಬಾಯಲ್ಲಿ ಬೀಳುವ ಪ್ರಸಂಗ ಬಂತಲ್ಲ! ಮಾನ ಹೋಯಿತಲ್ಲ!- ಎಂದು ಬಹಳವಾಗಿ ದುಃಖವಾಯಿತು. ನನ್ನ ಕಷ್ಟ ದುಃಖ ಎಲ್ಲವನ್ನೂ ಎದುರಿಗೇನೆ ಹೇಳಿಕೊಳ್ಳೋಣ-ಎಂದು ಬಂದೆ.’

‘ಒಳ್ಳೆಯದು. ಒಳಕ್ಕೆ ಹೋಗಿ.’
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳ್ಳಿಗೆ
Next post ಕೊಳಕು ಕಥೆ ನನ್ನ ಮೋರೆಗೆ ಬಳಿದ ಮಸಿಯನ್ನು

ಸಣ್ಣ ಕತೆ

 • ಒಂದು ಹಿಡಿ ಪ್ರೀತಿ

  ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

 • ಸಂಶೋಧನೆ

  ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

 • ವ್ಯವಸ್ಥೆ

  ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

 • ಅಪರೂಪದ ಬಾಂಧವ್ಯ

  ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

 • ಕೇರೀಜಂ…

  ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

cheap jordans|wholesale air max|wholesale jordans|wholesale jewelry|wholesale jerseys