ಕೊಳಕು ಕಥೆ ನನ್ನ ಮೋರೆಗೆ ಬಳಿದ ಮಸಿಯನ್ನು
ಒರೆಸಿ ತೊಳೆಯುತ್ತಲಿದೆ ನಿನ್ನೊಲುಮೆ ಕರುಣೆ ಜಲ;
ತಪ್ಪ ಬದಿಗೊತ್ತಿ ಒಪ್ಪಿರಲು ನೀ ಗುಣವನ್ನು
ಲಕ್ಷ್ಯ ಮಾಡುವೆನೆ ಯಾರದೊ ನಿಂದೆ ಸ್ತೋತ್ರಗಳ?
ನನ್ನೆಲ್ಲ ಲೋಕ ನೀನೇ, ನಿನ್ನ ಮುಖದಿಂದ
ಬಂದುದಷ್ಟೇ ನನ್ನ ನಿಜದ ನಿಂದೆ ಪ್ರಶಂಸೆ,
ಯಾರು ನನಗಿನ್ನು? ಬದಲಿಸಬರದು ಪರರಿಂದ
ಸರಿಯೊ ತಪ್ಪೋ ನನ್ನ ನಿರ್ಧಾರ ಆಕಾಂಕ್ಷೆ.
ಅನ್ಯರಾಡಿದ್ದಕ್ಕೆ ಅನ್ನಿಸಿದ್ದನ್ನೆಲ್ಲ
ಆಳಬಾವಿಗೆ ಹಾಕಿ ಹೂಳುವೆನು. ಕಹಿಮಾತು
ಸಿಹಿಮಾತು ಎರಡಕ್ಕು ನನಗಿನ್ನು ಕಿವಿಯಿಲ್ಲ,
ಈ ಎಲ್ಲ ಮಾತಿಗೂ ನೀನೊಬ್ಬನೇ ಹೊರತು.
ನನ್ನ ಚಿಂತನೆಯಾಳದಲ್ಲಿ ಬೇರಿಳಿಸಿರುವೆ
ನಿನ್ನುಳಿದು ನನಗೆ ಇಡಿ ಲೋಕವೇ ಸತ್ತಿದೆ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 112
Your love and pity doth the impression fill