Home / ಲೇಖನ / ಇತರೆ / ಜೀವನದ ಪಾಠ

ಜೀವನದ ಪಾಠ

ಜೀವನದ ದಾರಿ ನಾವು ಯೋಚಿಸಿದ ಹಾಗೆ ಯಾವಾಗಲೂ ಸುಖಕರವಾಗಿ ಇರುವುದಿಲ್ಲ. ಅದು ಹೂಗಳ ಹಾಸಿಗೆಯಲ್ಲ. ಕಲ್ಲು, ಮುಳ್ಳು, ಏರು, ತಗ್ಗು, ಪ್ರಪಾತ ಎಲ್ಲವೂ ಜೀವನದ ದಾರಿಯಲ್ಲಿದೆ. ಏನೇನೋ ತಿರುವುಗಳು, ಅನಿರೀಕ್ಷಿತ ಆಘಾತಗಳು, ಅಪಘಾತಗಳು, ಮನನೋಯಿಸುವ ಪ್ರತಿಕೂಲ ಪರಿಸ್ಥಿತಿಗಳು, ಮುಂದಿನ ದಾರಿಯನ್ನೇ ಕೊಚ್ಚಿಕೊಂಡು ಹೋಗುವ ಬಿರುಗಾಳಿಗಳು, ಪ್ರತೀ ಕ್ಷಣದಲ್ಲೂ ಏಟುಗಳು, ಎದ್ದು ನಿಲ್ಲುವುದೇ ಸಾಧ್ಯವಾಗದ ಕುಸಿತಗಳು, ಇಳಿಸಲಾಗದ ಭಾರಗಳು. ಇವು ಜೀವನದ ರೀತಿ, ಇಂತಹ ಕಷ್ಟಕರ ಘಳಿಗೆಗಳಲ್ಲಿ ಹುಚ್ಚೇ ಹಿಡಿದಂತಾಗುವುದು ಸಹಜ. ಜೀವನ ಬೇಡವೆನಿಸಿದರೂ ವಿಚಿತ್ರವಲ್ಲ.

ಆದರೆ ಯಾವ ಘಳಿಗೆಯಲ್ಲೂ ಜೀವನ ಬೇಡವೆನಿಸಬಾರದು. ಬೇಡವೆನಿಸಿದ ಕೂಡಲೇ ಮಾನಸಿಕ ಕುಸಿತ ಕಾಣಿಸಿಕೊಳ್ಳುತ್ತದೆ. ಜೀವನದ ಸೋಲು ಇರುವುದೇ ಮಾನಸಿಕವಾಗಿ ಕುಸಿಯುವುದರಲ್ಲಿ. ಜೀವನ ಸೋತು ಕುಸಿಯುವುದಕ್ಕೆ ಅಲ್ಲ. ಇದ್ದಷ್ಟು ದಿನ ಗೆದ್ದು ಬಾಳುವುದಕ್ಕೆ. ಇದಕ್ಕೆ ಜೀವನವನ್ನು ಬಂದ ಹಾಗೆ ಎದುರಿಸುವ ಎದೆಗಾರಿಕೆ ಬೆಳೆಸಿಕೊಳ್ಳುವ ಛಲ ಮುಖ್ಯ.

ಯಾರನ್ನಾದರೂ ಒಮ್ಮೆ ಕೇಳಿನೋಡಿ ಅಥವಾ ನಿಮ್ಮನ್ನು ನೀವೇ ಕೇಳಿಕೊಳ್ಳಿ ಜೀವನದ ಕೆಲವು ಸಂತಸದ ಕ್ಷಣಗಳನ್ನು ನೆನಸಿಕೊಳ್ಳಿ ಎಂದು. ತತ್‌ಕ್ಷಣಕ್ಕೆ ಒಂದೂ ನೆನಪಿಗೆ ಬರುವುದಿಲ್ಲ. ಆದರೆ, ಪ್ರತಿ ಯೊಂದು ದುಃಖದ ಕ್ಷಣಗಳು ನೆನಪಿನಲ್ಲಿರುತ್ತವೆ. ಹೃದಯಕ್ಕೆ ಅದರಿಂದಾದ ನೋವುಗಳು ಆ ನೆನಪುಗಳೊಂದಿಗೆ ನುಗ್ಗಿ ಬರುತ್ತವೆ. ಕಣ್ಣುಗಳು ಒದ್ದೆಯಾಗುತ್ತವೆ. ಯಾಕೆಂದರೆ ಸಂತಸದ ಅನುಭವಗಳು ಆ ಕ್ಷಣಕ್ಕೆ ಸೀಮಿತವಾಗಿರುತ್ತವೆ. ಯಾವ ಪಾಠವನ್ನೂ ಕಲಿಸಿರುವುದಿಲ್ಲ. ದುಃಖದ ಅನುಭವಗಳು ಮನದಾಳದಲ್ಲಿ ಗೂಡು ಕಟ್ಟಿರುತ್ತವೆ. ನಾವದನ್ನು ನೆನಪಿನ ಬುತ್ತಿಯಲ್ಲಿ ಜೋಪಾನವಾಗಿ ಕಟ್ಟಿ ಇಡುತ್ತೇವೆ. ಮರೆಯ ಬೇಕೆಂದರೂ ಮರೆಯುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಸುಖ ನಮಗೆ ಯಾವ ಪಾಠವನ್ನೂ ಕಲಿಸಿರುವುದಿಲ್ಲ. ಬದಲಾಗಿ ಅಹಂಕಾರಿಗಳನ್ನಾಗಿ ಮಾಡಿರುತ್ತವೆ. ಕುರುಡರನ್ನಾಗಿ ಮಾಡಿರುತ್ತವೆ. ಆದರೆ ಕಷ್ಟಗಳು ಹಲವಾರು ಪಾಠಗಳನ್ನು ಕಲಿಸಿರುತ್ತವೆ. ನಮ್ಮಲ್ಲಿರುವ ಹಲವಾರು ವೀಕ್‌ನೆಸ್‌ಗಳನ್ನು ತೋರಿಸಿಕೊಟ್ಟಿರುತ್ತವೆ. ಯಾವಾಗಲೂ ಎಚ್ಚರಿಕೆಯಿಂದ ಇರುವುದನ್ನು ಕಲಿಸಿರುತ್ತವೆ. ಜೀವನವನ್ನು ಎದುರಿಸಲು ಬೇಕಾದ ಎದೆಗಾರಿಕೆಯನ್ನು, ಏನನ್ನಾದರೂ ಎದುರಿಸುವ ಸಹನೆಯನ್ನು ಕಲಿಸಿರುತ್ತವೆ. ನಮ್ರವಾಗಿರಲು ಕಲಿಸಿರುತ್ತವೆ. ಮಾನವೀಯವಾಗಿರಲು ಕಲಿಸಿರುತ್ತವೆ. ಅದಕ್ಕೇ ಹೇಳುವುದು ಜೀವನದಲ್ಲಿ ಎದುರಾಗುವ ಪ್ರತಿಕೂಲ ಪರಿಸ್ಥಿತಿಗಳು ಯಾವತ್ತೂ ಸಂತಸಕರವಾಗಿರುವುದಿಲ್ಲ. ಆದರೆ, ಆ ಪ್ರತಿಕೂಲ ಪರಿಸ್ಥಿತಿಗಳು ನಮಗೆ ಕಲಿಸುವ ಪಾಠಗಳನ್ನು ಬೇರೆಲ್ಲಿಯೂ ಕಲಿಯಲಾಗದು.

ಜೀವನದ ಎಲ್ಲ ಕಷ್ಟಗಳ ಹಿಂದೆ ಒಂದು ದರ್ಶನವಿದೆ. ಮುಂದಿನ ಜೀವನದ ದಾರಿಗೆ ಬೆಳಕು ತೋರುವ ಬೆಳಕಿದೆ. ಅದನ್ನು ನಾವು ಗುರುತಿಸಿಕೊಳ್ಳಬೇಕು.

ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲಿ ಜೀವನವೇ ನಮಗೆ ಕವಲು ದಾರಿಗಳನ್ನು ತೋರಿಸಿಕೊಡುತ್ತದೆ. ಕವಲುದಾರಿಗಳನ್ನು ಆರಿಸಿಕೊಳ್ಳುವಾಗ ಜೀವನಪ್ರೀತಿಯಿಂದ ಆರಿಸಿಕೊಳ್ಳಬೇಕಲ್ಲದೆ ಸೇಡಿನ ಭಾವನೆಯಿಂದ ಖಂಡಿತಾ ಅಲ್ಲ. ಒಂದಂತೂ ನಿಜ. ಜೀವನ ಯಾರನ್ನೂ ಕಾಯುತ್ತಾ ನಿಲ್ಲುವುದಿಲ್ಲ. ಎಲ್ಲರ ನೋವು-ನಲಿವುಗಳನ್ನು ತನ್ನ ಉದರದೊಳಗೆ ಸೇರಿಸಿಕೊಂಡು ಎಲ್ಲರನ್ನೂ ಎಳೆದುಕೊಂಡೇ ಮುಂದೆ ಸಾಗುತ್ತಿರುತ್ತದೆ. ಜೀವನದೊಡನೆ ಓಡಲಾಗದೆ ಕುಸಿದರೆ ಅದೇ ಆತ್ಮಹತ್ಯೆಯಾಗುತ್ತದೆ. ಜೀವನಕ್ಕೆ ಯಾರನ್ನೂ ಕಾಯುವ ವ್ಯವಧಾನವಿಲ್ಲ. ಕುಸಿದವರನ್ನು ಹಿಂದಕ್ಕೆ ಬಿಟ್ಟು ಮುಂದೆ ಸಾಗುವುದೇ ಅದರ ಕಾಯಕ. ಹಾಗಾಗಿ ಯಾವುದೇ ಸಂದರ್ಭದಲ್ಲಿ ಜೀವನದಲ್ಲಿ ಸೋತು ಕುಸಿಯುವುದು ಬೇಡ, ಎದ್ದು ಓಡಬೇಕು. ಇವತ್ತಿನ ಕಷ್ಟದ ಹಿಂದೆ ಮುಂದಿನ ಸುಖವಿದೆ. ಇವತ್ತಿನ ಸುಖದ ಹಿಂದೆ ಮುಂದಿನ ಕಷ್ಟವಿದೆ. ನಮಗದರ ಅರಿವು ಮಾತ್ರ ಇರುವುದಿಲ್ಲ. ಎಲ್ಲ ಸಮಸ್ಯೆಗಳಿಗೂ ಉತ್ತರ ಕಾಲಗರ್ಭದಲ್ಲೇ ಅಡಗಿದೆ ಎನ್ನುವುದನ್ನು ತಿಳಿದುಕೊಂಡರೆ ಜೀವನದಲ್ಲಿ ಕುಸಿಯುವ ಸಂದರ್ಭವೇ ಇಲ್ಲ.

ಆದರೆ, ಒಂದು ಮಾತ್ರ ನಿಜ, ಜೀವನದಲ್ಲಿ ಕಷ್ಟಗಳು ತರುವ ಕಾವನ್ನು ತಗ್ಗಿಸಲು ಆಗಾಗ ಸುಖದ ತಂಪಾದ ಅನುಭವಗಳೂ ಇರಬೇಕು.
*****
(ಚಿಂತನ- ಅಕಾಶವಾಣಿ) (ಮಂತಣಿ)

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...