ಸಿಸಿಲಿಯ ಮಾದಾಳ ಹಣ್ಣುಗಳು“ಟೆರೇಸಿನಾ ಇದ್ದಾಳೆಯೇ?” ಯುವಕ ಕೇಳಿದ.

ಒಳಗಿನಿಂದ ಬಂದ ಆಳು, ಮೆಟ್ಟಿಲ ಮೇಲೆ ನಿಂತಿದ್ದ ಯುವಕನನ್ನು ಅಡಿಯಿಂದ ಮುಡಿಯವರೆಗೂ ಪರೀಕ್ಷಿಸುವವನಂತೆ ನೋಡಿದ. ಇನ್ನೂ ಅಂಗಿಯ ಒಂದು ಭಾಗವನ್ನಷ್ಟೇ ಧರಿಸಿಕೊಂಡಿದ್ದ ಆಳು ಅಲ್ಪಸ್ವಲ್ಪ ಉಳಿದ ತಲೆಗೂದಲನ್ನು ಜಾಗರೂಕತೆಯಿಂದ ಬಾಚಿಕೊಂಡಿದ್ದ. ಅವನ ಕುತ್ತಿಗೆಯಂತೂ ಕಾಲರಿನೊಳಗಡೆ ತೂರಿಕೊಂಡಂತೆ ಕಾಣುತ್ತಿತ್ತು. ತನ್ನ ದಪ್ಪ ಹುಬ್ಬುಗಳನ್ನೇರಿಸುವಾಗ ಯಾರೋ ಮೀಸೆಯನ್ನೇ ಕಿತ್ತು ಹುಬ್ಬಿನ ಜಾಗದಲ್ಲಿ ಅಂಟಿಸಿದಂತೆ ಕಾಣುತ್ತಿತ್ತು. ಯುವಕ ತನ್ನ ದೊರಗು ಓವರ್ ಕೋಟ್‌ನ ಕಾಲರನ್ನು ಕಿವಿಗಳ ತನಕ ಏರಿಸಿಕೊಂಡಿದ್ದರಿಂದ ಆಳಿಗೆ ಅವನು ಹಳ್ಳಿಗಮಾರನಂತೆ ಕಂಡ. ಚಳಿಗೆ ಅವನ ಕೈಗಳು ನೀಲಿಗೆ ತಿರುಗಿ, ಕೊರಡಾಗಿದ್ದವು. ಯುವಕನ ಒಂದು ಕೈಯಲ್ಲಿ ಕೊಳೆಯಾಗಿದ್ದ ಪುಟ್ಟ ಚೀಲವಿತ್ತು. ಅದನ್ನು ಸರಿತೂಗಿಸಲೋ ಎಂಬಂತೆ ಇನ್ನೊಂದು ಕೈಯಲ್ಲಿ ಹಳೆಯದಾದ ಚಿಕ್ಕ ಸೂಟ್‌ಕೇಸ್ ಇತ್ತು.

‘ಟೆರೇಸಿನಾ ಎಂದರೆ ಯಾರು?’ ಆಳು ಕೇಳಿದ.

ಯುವಕ ತಲೆಯಾಡಿಸುತ್ತ ಮೂಗಿನ ತುದಿಯ ಮೇಲೆ ಮೂಡಿದ್ದ ಬೆವರಹನಿಗಳನ್ನು ಕೊಡವಿಕೊಂಡ.

“ಟೆರೇಸಿನಾ-ಆ ಹಾಡುಗಾರ್ತಿ” ಯುವಕ ಉತ್ತರಿಸಿದ.

ಆಳು, ‘ಓಹೋ…. ಅವಳ ಹೆಸರು ಬರೇ ಟೆರೇಸಿನಾ ತಾನೆ? ಹಾಗಾದರೆ ನೀನ್ಯಾರು?’ ವ್ಯಂಗ್ಯವಾಗಿ ನಕ್ಕು ಕೇಳಿದ.

“ಅವಳು ಇಲ್ಲಿ ಇದ್ದಾಳೋ ಇಲ್ಲವೋ? ಹೋಗಿ ಅವಳಿಗೆ ಮಿಕಶಿಯೋ ಬಂದಿದ್ದಾನೆ ಅಂತ ತಿಳಿಸು” ಎಂದು ಯುವಕ ತುಸು ಸಿಟ್ಟಿನಲ್ಲೇ ಹುಬ್ಬುಗಳನ್ನು ಹೆಣೆದುಕೊಂಡು ಹೇಳಿದ.

ನಂತರ ತುಟಿಗಳಲ್ಲೇ ಸಣ್ಣಗೆ ಮುಗುಳ್ನಕ್ಕ ಆತ, “ಇಲ್ಲಿ ಯಾರೂ ಇಲ್ಲ ವಲ್ಲ… ಮೇಡಂ ಸಿನಾಮಾರ್ನಿಸ್ ಇನ್ನೂ ನಾಟಕಶಾಲೆಯಿಂದ ಬಂದಿಲ್ಲ ಮತ್ತು….”

“ಮಾರ್ತಾ ಆಂಟಿನೂ ಬಂದಿಲ್ಲವೆ?” ಮಿಕಶಿಯೋ ನಡುವೆ ಬಾಯಿಹಾಕಿದ.

‘ಓಹ್…. ನೀವು ಅವರ ಸಂಬಂಧೀಕರೆ? ಹಾಗಾದರೆ ದಯವಿಟ್ಟು ಒಳಬನ್ನಿ…. ನೇರ ಹೀಗೆ ಬನ್ನಿ…. ಮನೆಯಲ್ಲಿ ಯಾರೂ ಇಲ್ಲ…. ನಿಮ್ಮ ಆಂಟಿಯೂ ನಾಟಕಶಾಲೆಗೆ ಹೋಗಿದ್ದಾಳೆ…. ರಾತ್ರೆ ಒಂದು ಗಂಟೆಗಿಂತ ಮುಂಚೆಯಂತೂ ಅವರ್ಯಾರೂ ಬರುವುದಿಲ್ಲ…. ಯಾರದೋ ಸಹಾಯಾರ್ಥಕ್ಕೆ ಆಡಿಸುವ ನಾಟಕ ಅದು…. ಅಂದಹಾಗೆ ಆ ಹುಡುಗಿ ವಿಮಗೇನಾಗಬೇಕು? ತಂಗಿಯಿರಬೇಕು ಬಹುಶಃ ?’

ಒಂದು ಕ್ಷಣ ಸಂಕೋಚಗೊಂಡ ಮಿಕಶಿಯೋ ಅಲ್ಲೇ ನಿಂತ.

‘ನಾನವಳ ಸಂಬಂಧಿಯಲ್ಲ …. ನಾನು ಮಿಕಶಿಯೋ ಬೋನಾವಿನೋ ಅಂತ…. ಅವಳಿಗ್ಗೊತ್ತು…. ನಾನು ಊರಿನಿಂದ ಒಂದು ಕೆಲಸದ ನಿಮಿತ್ತ ಬಂದಿದ್ದೇನೆ.’

ಈ ಉತ್ತರ ಸಿಕ್ಕಿದ್ದೇ, ಆಳು ತನ್ನ ಎಂದಿನ ವಿನಯತೆ ಬಿಟ್ಟು, ಬಂದಾತ ತೀರಾ ಸಾಮಾನ್ಯ ಅತಿಥಿ ಎಂಬಂತೆ ಅಡಿಗೆಮನೆ ಹತ್ತಿರವಿದ್ದ ಚೆಕ್ಕ ಕತ್ತಲಕೋಣೆಗೆ ಅವನನ್ನು ಕರಕೊಂಡು ಹೋದ. ಅಲ್ಲಿ ಯಾರೋ ಗೊರಕೆ ಹೊಡೆಯುತ್ತಿದ್ದರು.

“ಇಲ್ಲೇ ಕೂತಿರಿ. ನಾನು ಹೋಗಿ ದೀಪ ತರುವೆ.”

ಮಿಕಶಿಯೋ ಮೊದಲು ಗೊರಕೆಯ ಸದ್ದು ಬರುತ್ತಿರುವ ದಿಕ್ಕನ್ನು ನೋಡಿದ. ಏನೂ ಗುರುತಿಸಲಾಗಲಿಲ್ಲ. ಆಮೇಲೆ ಅಡಿಗೆಮುನೆಯತ್ತ ಕಣ್ಣುಹಾಯಿಸಿದ. ಅಲ್ಲಿ ಮುಸುರೆ ತೊಳೆಯುವ ಹುಡುಗನೊಂದಿಗೆ ಸೇರಿ, ಬಾಣಸಿಗ ರಾತ್ರಿಯೂಟದ ತಯಾರಿಯಲ್ಲಿದ್ದ. ಆ ಬಗೆಬಗೆಯ ಭಕ್ಷ್ಯಗಳ ಮಸಾಲೆಯ ಪರಿಮಳ ಅವನನ್ನು ಆವರಿಸಿಕೊಂಡು ಸಣ್ಣಗೆ ಅಮಲೆರಿಸಿಬಿಟ್ಟಿತ್ತು. ರೆಗ್ಗಿಯೋ ಡಿ ಕಾಲಾಬ್ರಿಯಾದಿಂದ ಒಂದು ರಾತ್ರಿ ಒಂದು ಹಗಲು ನಿರಂತರ ರೈಲು ಪ್ರಯಾಣ ಮಾಡಿದ್ದರಿಂದ ಬೆಳಿಗ್ಗಿನಿಂದ ಆತ ಏನನ್ನೂ ತಿಂದಿರಲಿಲ್ಲ.

ಆಳು ದೀಪ ತಂದಿಟ್ಟ. ಎರಡು ಗೋಡೆಗಳ ನಡುವೆ ತೂಗುಹಾಕಿದ್ದ ಪರದೆಯ ಆಚೆ ಗೊರಕೆ ಹೊಡೆಯುತ್ತಿದ್ದ ವ್ಯಕ್ತಿ ನಿದ್ದೆ ಗಣ್ಣಿನಲ್ಲೇ ಗೊಣಗಿತು: “ಯಾರದು?”

“ಏ…. ಡೊರಿನಾ…. ಏಳು! ನೋಡಿಲ್ಲಿ ಮಿಸ್ಟರ್ ಬೊನ್‌ವಿಶಿನೊ ಬಂದಿದ್ದಾರೆ….” ಆಳು ಹೇಳಿದ.

“ಬೊನಾವಿನೋ….” ಮಿಕಶಿಯೋ ಆಳನ್ನು ಸರಿಪಡಿಸಿದ.

‘ಹೌದೌದು…. ಬೊನಾವಿನೋ…. ಯಜಮಾನಿಯ ಪರಿಚಯದವನು. ನೀನು ಚೆನ್ನಾಗಿ ನಿದ್ದೆ ಮಾಡ್ತೀಯ…. ಅಲ್ಲಿ ಹೊರಗಡೆ ಬೆಲ್ ಸದ್ದಾದರೂ ನಿನಗೆ ಕೇಳಿಸೋದಿಲ್ಲ…. ಎಲ್ಲ ನನಗೊಬ್ಬನಿಗೇ ಮಾಡಕ್ಕಾಗಲ್ಲ…. ತಿಳೀತಾ…. ಆ ಬಾಣಸಿಗನ ಮೇಲೊಂದು ಕಣ್ಣಿಟ್ಟಿರು. ಅವನಿಗೆ ಏನೂ ಗೊತ್ತಿಲ್ಲ. ಮನೆಗೆ ಬರುವವರ ಮೇಲೂ ನಿಗಾ ಇಡು….’

ಆಳಿನ ಈ ಗೊಣಗಾಟಕ್ಕೆ ಪ್ರತಿಕ್ರಿಯೆಯೆಂಬಂತೆ ದಾದಿ, ಮೈಕೈಯನ್ನು ಉದ್ದಕ್ಕೆ ಚಾಚುತ್ತ ದೊಡ್ಡದನಿಯಲ್ಲಿ ಆಕಳಿಸಿದಳು.

ಮಿಕಶಿಯೋ ಮುಗುಳ್ನಕ್ಕ. ಆ ಅರೆಕತ್ತಲಕೋಣೆಯನ್ನು ಹಾದು ಆಳು ಇನ್ನೊಂದು ತುದಿಯಲ್ಲಿ ಬೆಳಗುತ್ತಿದ್ದ ವಿಶಾಲ ದಿವಾನಖಾನೆಯನ್ನು ತಲುಪುವತನಕ ಅವನನ್ನೇ ನೋಡುತ್ತಿದ್ದ. ಅಲ್ಲೊಂದು ಭರ್ಜರಿ ಡೈನಿಂಗ್ ಟೇಬಲ್ಲನ್ನು ಇಡಲಾಗಿತ್ತು. ಅದನ್ನೇ ಆಶ್ಚರ್ಯದಿಂದ ನೋಡುತ್ತಿದ್ದನಾದರೂ ಇತ್ತ ಗೊರಕೆಯ ಸದ್ದು ಪುನಃ ಅವನನ್ನು ಪರದೆಯತ್ತ ನೋಡುವಂತೆ ಮಾಡಿತು.

ತನ್ನ ಕರವಸ್ತ್ರವನ್ನು ಅತ್ತಿಂದಿತ್ತ ಹಾರಿಸುತ್ತ ಕೆಲಸದಾಳು, ಒಮ್ಮೆ ದಿನವಿಡೀ ನಿದ್ದೆ ಮಾಡುವ ಡೊರೀನಾಳ ಬಗ್ಗೆ, ಮತ್ತೊಮ್ಮೆ ಆ ಸಂಜೆಯ ಕಾರ್ಯಕ್ರಮಕ್ಕೆ೦ದೇ ಕರೆಸಲಾಗಿದ್ದ – ಬಹುಶಃ ಹೊಸಬನಾಗಿದ್ದ – ಬಾಣಸಿಗನ ಬಗ್ಗೆ, ಆತ ಸತತ ಕೇಳುತ್ತಿದ್ದ ವಿವರಣೆಗಳ ಬಗ್ಗೆ ವಟಗುಟ್ಟುತ್ತಲೇ ಇದ್ದ. ಈಗ ಮತ್ತೊಂದಿಷ್ಟು ಪ್ರಶ್ನೆಗಳನ್ನು ಕೇಳಿ ಅವನನ್ನು ಕೆಣಕುವುದು ವಿವೇಕವಲ್ಲ ಎಂದು ಮಿಕಶಿಯೋನಿಗೆ ಅನ್ನಿಸಿ ಸುಮ್ಮನಾದ. ಮನಸ್ಸು ಮಾಡಿದಲ್ಲಿ, ಆತ ತಾನು ಟೆರೇಸಿನಾಳನ್ನು ಮದುವೆಯಾಗುವವ ಎಂದು ಹೇಳಬಹುದಿತ್ತು. ಯಾಕೋ ಆತ ಹೇಳಲಿಲ್ಲ. ಬಹುಶಃ ಆಳಿಗೆ ಈ ಸಂಗತಿ ಗೊತ್ತಾದರೆ ತನ್ನನ್ನು ಯಜಮಾನನಂತೆ ಸತ್ಕರಿಸಬೇಕಾಗಬಹುದು. ಖುಷಿಯಾದ ಪುಂಡನಂತೆ ಇನ್ನೂ ಟೈಲ್ಕೋಟನ್ನೂ ಧರಿಸದೆ ಓಡಾಡಿಕೊಂಡಿರುವ ಇವನಿಗೆ ಮತ್ತಷ್ಟು ಮುಜುಗರವಾಗಬಹುದು ಎಂದೆನಿಸಿತು. ಆದರೂ ಒಂದು ಸಂದರ್ಭದಲ್ಲಿ ಆತ ಆಚೆ ಹೋಗಿದ್ದೇ, ಕೇಳಲೇಬೇಕೆನಿಸಿತು:

“ಅಂದ ಹಾಗೆ…. ಯಾರ ಮನೆ ಇದು?”

“ನಾವಿಲ್ಲಿ ಇರುವತನಕ ನಮೃದೇ….” ಆಳು ಗಡಿಬಿಡಿಯಲ್ಲಿ ಉತ್ತರಿಸಿದ.

ಮಿಕಶಿಯೋ ತಲೆಯಾಡಿಸುತ್ತ ಅಲ್ಲೇ ಕೂತ.

ಓಹ್ ದೇವರೇ…. ಹಾಗಾದರೆ ಅವಳ ಕನಸು ನನಸಾಗಿರಲೇಬೇಕು! ಸಂಪಾದನೆ ಚೆನ್ನಾಗಿರಲೇಬೇಕು. ಆ ಆಳಂತೂ ದಿವ್ಯಪುರುಷನ ಹಾಗೆ ಕಾಣಿಸುತ್ತಾನೆ. ಆ ಬಾಣಸಿಗ, ಆ ಮುಸುರೆ ತೊಳೆಯುವ ಹುಡುಗ, ಗೊರಕೆ ಹೊಡೆಯುತ್ತಿರುವ ಈ ಡೊರೀನಾ, ಎಲ್ಲ ನೌಕರರೂ ಟೆರೇಸಿನಾಳ ಬರೇ ಒಂದು ಇಷಾರೆಗೇ ಬರುವವರು… ಇದನ್ನೆಲ್ಲ ಯಾರು ತಾನೆ ನಿರೀಕ್ಷಿಸಿದ್ದರು!

ಅವನಿಗೆ ಮೆಸ್ಸಿನಾದಲ್ಲಿ ಹಾಳುಸುರಿಯುತ್ತಿದ್ದ ಮನೆಯ ಅಟ್ಟವೊಂದರಲ್ಲಿ ತನ್ನ ತಾಯಿಯ ಜತೆ ವಾಸಿಸುತ್ತಿದ್ದ ಟೆರೇಸಿನಾಳ ನೆನಪಾಯಿತು. ಐದು ವರ್ಷಗಳ ಹಿಂದೆ-ಬಹುಶಃ ಅವನಿಲ್ಲದೆ ಹೋಗಿದ್ದರೆ – ತಾಯಿ-ಮಗಳಿಬ್ಬರೂ ಹಸಿವಿನಿಂದ ಸತ್ತೇ ಹೋಗುತ್ತಿದ್ದರೇನೋ! ಹಾಗೆ ನೋಡಿದರೆ ಟೆರೇಸಿನಾಳ ಕೊರಳಿನಿಂದ ಹೊರಹೊಮ್ಮುವ ನಿಧಿಯನ್ನು ಮೊಟ್ಟಮೊದಲು ಕಂಡುಹುಡುಕಿದವನು ಅವನೇ! ಮೇಲ್ಛಾವಣಿಯಲ್ಲಿದ್ದ ಗುಬ್ಬಿಗಳ ಹಾಗೆ ತನ್ನ ಸ್ವರದ ಇಂಪಿನ ಮಹತ್ವವನ್ನೆ ಅರಿಯದೆ ಆಕೆ ಸದಾಕಾಲ ಹಾಡುತ್ತ ಕೂರುತ್ತಿದ್ದಳು. ತನ್ನ ಬಡತನ ಮರೆಸಲು ಹಾಡುತ್ತಿದ್ದಳು. ಆತ ತನ್ನ ಹೆತ್ತವರ ಜತೆ-ಅದರಲ್ಲೂ ಅಮ್ಮನೊಂದಿಗಿನ ಜಗಳದ ನಡುವೆಯೂ ಬಂದು ಟೆರೇಸಿನಾಳ ಹಾಡುಗಾರಿಕೆಯನ್ನು ಪ್ರೋತ್ಸಾಹಿಸುವುದಿತ್ತು. ಟೆರೇಸಿನಾಳ ಅಪ್ತ ತೀರಿಕೊಂಡ ನಂತರ ಏನೂ ಇಲ್ಲದ ಪರಿಸ್ಥಿತಿಯಲ್ಲಿ ಅವಳನ್ನು ಏಕಾ‌ಏಕಿ ತೊರೆಯುವುದೆಂದರೆ? ಅದೂ ತನಗೆ ಸ್ಥಳೀಯ ಆರ್ಕೆಸ್ಟ್ರಾದಲ್ಲಿ ಕೊಳಲು ವಾದಕನ ನೌಕರಿ ಸಿಕ್ಕಿರುವಾಗ ತನ್ನ ಪ್ರೇಮದಗತಿ ಏನು? ಎಂದೆಲ್ಲ ಅನಿಸುತ್ತಿತ್ತು.

ಏಪ್ರಿಲ್‌ನ ಒಂದು ದಿನ ಅಟ್ಟದ ಕೋಣೆಯ ಕಿಟಕಿಯ ಹತ್ತಿರ ಕೂತು ಟೆರೇಸಿನಾ ಆಕಾಶದ ನೀಲಿಯನ್ನೇ ನೋಡುತ್ತ ಬಹಳ ಚೆನ್ನಾಗಿ ಹಾಡುತ್ತಿದ್ದಳು. ಯಾರೂ ಅದರತ್ತ ಗಮನ ಹರಿಸದೆ ಇದ್ದಾಗ ಮಿಕಶಿಯೋ ಅವಳ ಸ್ವರವನ್ನು ಗಮನವಿಟ್ಟು ಆಲಿಸಿದ.

ಅವಳ ಬದುಕಿನ ಭಾಗ್ಯದ ಬಾಗಿಲು ಇನ್ನೇನು ತೆರೆದೇಬಿಟ್ಟಿತು ಎನಿಸಿತವನಿಗೆ. ಸಿಸಿಲಿಯನ್ ಮಾದಕರಾಗವೊಂದನ್ನು ಟೆರೇಸಿನಾ ಮೆಲ್ಲನೆ ಹಾಡುತ್ತಿದ್ದಳು. ಅದರ ಸೊಲ್ಲು ಮಿಕಶಿಯೋನಿಗೆ ಇನ್ನೂ ನೆನಪಿತ್ತು. ಟೆರೇಸಿನಾ ಈಚೆಗಷ್ಟೆ ತೀರಿಕೊಂಡ ತಂದೆಯಿಂದಾಗಿ ಮತ್ತು ತನ್ನ ಮೇಲೆ ಅವನ ಕುಟುಂಬಕ್ಕಿದ್ದ ಕಟುವಿರೋಧಗಳಿಂದಾಗಿ ಆ ದಿವಸ ದುಃಖದಲ್ಲಿದ್ದಳು. ಅವಳು ಹಾಡಲು ಶುರುಮಾಡಿದ್ದೇ ಅವನ ಕಣ್ಣುಗಳಲ್ಲಿ ನೀರು ಬಂದುಬಿಟ್ಟಿತು. ಹಿಂದೆ ಅದೇ ರಾಗವನ್ನು ಹಲವು ಸಲ ಅವಳಿಂದಲೇ ಕೇಳಿದ್ದರೂ ಈ ರೀತಿ ಹಾಡಿದ್ದನ್ನು ಯಾವತ್ತೂ ಕೇಳಿದ್ದಿಲ್ಲ. ಇದು ಅವನನ್ನು ಅದೆಷ್ಟು ತಟ್ಟಿತೆಂದರೆ ಮಾರನೇ ದಿವಸವೆ ತಾಯಿ-ಮಗಳಿಬ್ಬರಿಗೂ ಸುಳಿವೇ ಕೊಡದೆ ಆತ ತನ್ನ ಆರ್ಕೆಸ್ಟ್ರಾದ ನಿರ್ವಾಹಕನನ್ನು ಅಟ್ಟದಕೋಣೆಗೆ ಕರೆತಂದಿದ್ದ. ಈ ರೀತಿ ಅವಳ ಸಂಗೀತದ ಮೊದಲಪಾಠ ಶುರುವಾಗಿತ್ತು. ಎರಡು ವರ್ಷ ಓಡಾಡಿ ತನ್ನೆಲ್ಲ ಸಂಬಳವನ್ನು ಅವಳ ಮೇಲೆ ಸುರಿದ. ಅವಳಿಗಾಗಿ ಬಾಡಿಗೆ ಪಿಯಾನೋವನ್ನು ತಂದುಕೊಟ್ಟ. ಅವಳ ಸಂಗೀತದ ಪುಸ್ತಕಗಳನ್ನು ಖರೀದಿಸಿದ. ಕಲಿಸುತ್ತಿದ್ದ ಟೀಚರ್‌ಗೆ ಪುಟ್ಟ ಸಂಭಾವನೆಯನ್ನೂ ಕೊಟ್ಟ. ಭವಿಷ್ಯದತ್ತ ಗರಿಗೆದರಿ ಹಾರಾಡಬಲ್ಲೆ; ತಾನೋರ್ವ ಪ್ರತಿಭಾಶಾಲಿ ಹಾಡುಗಾರ್ತಿಯಾಗಬಲ್ಲೆ ಎಂದ ಟೀಚರಳ ಮಾತಿಗೆ ಟೆರೇಸಿನಾ ಶ್ರಮವಹಿಸಿ ಸಂಗೀತ ಕಲಿತಳು. ಈ ಮೂಲಕ ಮಿಕಶಿಯೋನ ಮೇಲಿನ ತನ್ನ ಕೃತಜ್ಞತೆಯನ್ನು, ಪ್ರೀತಿಯನ್ನು ರುಜುವಾತುಪಡಿಸಿದಳು.

ಅತ್ತ, ಮಾರ್ತಾ ಆಂಟಿ ಇದನ್ನೆಲ್ಲ ಕಟುವಾಗಿ ವಿರೋಧಿಸುತ್ತಿದ್ದಳು. ಬದುಕಿನಲ್ಲಿ ಬಹಳಷ್ಟು ಏಳುಬೀಳುಗಳನ್ನು ಕಂಡ ಹೆಂಗಸಾದ್ದರಿಂದ ಈಗಂತೂ ಭವಿಷ್ಯದಲ್ಲಿ ಅವಳಿಗೆ ಎಳ್ಳಷ್ಟೂ ನಂಬಿಕೆ ಉಳಿದಿರಲಿಲ್ಲ. ಅವಳು, ಬಡತನಕ್ಕೆ ತನ್ನ ಬದುಕು ಅಧೀನವಾಗಿದೆ ಎಂದು ನಂಬಿದವಳು. ಅದರಿಂದ ಪಾರಾಗಿ ಹೊರಬರುವ ಸಾಧ್ಯತೆಗಳ ಬಗ್ಗೆ ಚಿಂತಿಸುತ್ತಿರುವ ತನ್ನ ಮಗಳನ್ನು ಕಂಡು ಹೆದರುತ್ತಿದ್ದಳು. ಅಲ್ಲದೆ, ಇಂಥ ಕೆಟ್ಟ ಕನಸುಗಳಿಗೆ ಅವನು ಆಗಲೇ ಹಣ ಸುರಿಯುತ್ತಿದ್ದರ ಅರಿವೂ ಅವಳಿಗಿತ್ತು.

ಆದರೆ, ಅವನಾಗಲೀ, ಟೆರೇಸಿನಾಳಾಗಲೀ, ಮುದುಕಿಯ ಮಾತಿಗೆ ಕಿವಿಗೊಡುತ್ತಿರಲಿಲ್ಲ. ಒಮ್ಮೆ ಟೆರೇಸಿನಾ ಸಂಗೀತ ಕಛೇರಿಯಲ್ಲಿ ಹಾಡುವುದನ್ನು ಕೇಳಿಸಿಕೊಂಡ ಯುವಸಂಗೀತ ನಿರ್ದೇಶಕನೊಬ್ಬ ಅವಳಿಗೆ ಇನ್ನೂ ಉತ್ತಮ ಟೀಚರುಗಳನ್ನೂ, ಸಂಗೀತದ ಸೂಕ್ಷ್ಮಗಳನ್ನೂ ಕಲಿಸದಿದ್ದರೆ ತಪ್ಪಾಗುತ್ತದೆಂದೂ, ಅದೆಷ್ಟು ಖರ್ಚಾದರೂ ಅವಳನ್ನು ನೇಪಲ್ಸ್‍ನಲ್ಲಿರುವ ಸಂಗೀತ ಶಾಲೆಗೆ ಕಳಿಸಬೇಕೆಂದೂ ಘೋಷಿಸಿದ. ಆಗ ಮಾರ್ತಾ ಎಷ್ಟು ಪ್ರತಿಭಟಿಸಿದರೂ ಪ್ರಯೋಜನವಾಗಲಿಲ್ಲ.

ನಂತರದ ದಿನಗಳಲ್ಲಿ, ಮಿಕಶಿಯೋ ತನ್ನ ಹೆತ್ತವರಿಂದ ಶಾಶ್ವತವಾಗಿ ಬೇರ್ಪಟ್ಟ ಪಾದ್ರಿಯಾಗಿದ್ದ ತನ್ನ ಮಾವನಿಂದ ಸಿಕ್ಕಿದ್ದ ಚಿಕ್ಕತೋಟವನ್ನು ಮಾರಿದ. ಈ ರೀತಿ ಟೆರೇಸಿನಾ ಹೆಚ್ಚಿನ ವ್ಯಾಸಂಗಕ್ಕೆ ನೇಪಲ್ಸ್ ಗೆ ಹೋಗುವಂತಾಯಿತು.

ಮತ್ತೆ ಅವಳನ್ನು ನೋಡಿರಲಿಲ್ಲವಾದರೂ ಸಂಗೀತ ಶಾಲೆಯಿಂದ ಅವನಿಗೆ ಅವಳ ಪತ್ರಗಳು ಬರುತ್ತಿದ್ದವು. ‘ಸ್ಯಾನ್‌ಕಾರ್ಲೋ’ದಲ್ಲಿ ಆಶ್ಚರ್ಯಕರ ರೀತಿಯಲ್ಲಿ ತನ್ನ ಪ್ರಥಮ ಪ್ರವೇಶ ಪಡೆದದ್ದೇ ಟೆರೇಸಿನಾಳ ಹಾಡುಗಳಿಗೆ ಊರಿನ ಮುಖ್ಯ ನಾಟಕಶಾಲೆಗಳು ನಾ ಮುಂದು ತಾ ಮುಂದು ಎಂದು ಮುಗಿಬಿದ್ದವು. ಅವಳ ಕಲಾಬದುಕು ಆರಂಭವಾದ ನಂತರ, ಈಗ ಮಾರ್ತಾ ಆಂಟಿಯರ ಪತ್ರಗಳು ಬರತೊಡಗಿದವು. ತನ್ನಿಂದ ಸಾಧ್ಯವಾದಷ್ಟು ಅಂದವಾಗಿ, ಅವಸರವಸರದಲ್ಲಿ ಗೀಚಿದ ಮುದುಕಿಯ ಆ ಪತ್ರದ ತೀರ ಕೆಳಗಡೆ ಟೆರೇಸಿನಾಳ ಕೆಲವೇ ಕೆಲ ಪದಗಳಿರುತ್ತಿದ್ದವು. ಬರೆಯಲು ಪುರುಸೊತ್ತೇ ಇಲ್ಲದೆ, “ಪ್ರೀತಿಯ ಮಿಕಶಿಯೋ, ಅಮ್ಮ ನಿನಗೆ ಹೇಳಿರುವುದನ್ನೇ ನಾನೂ ಹೇಳುತ್ತಿದ್ದೇನೆ. ಆರಾಮವಾಗಿರು ಮತ್ತು ನನ್ನ ಹೀಗೆ ನೋಡಿಕೊಳ್ಳುತ್ತಿರು” ಎಂದಿರುತ್ತಿತ್ತು. ತನ್ನ ಭವಿಷ್ಯವನ್ನು ಅವಳು ಯಾವ ತೊಡಕೂ ಇಲ್ಲದೆ ಚೆನ್ನಾಗಿ ರೂಪಿಸಿಕೊಳ್ಳಲೆಂದು ಸುಮಾರು ಐದಾರು ವರ್ಷಗಳ ಕಾಲ ಮಿಕಶಿಯೋ ಅವಳಿಂದ ದೂರವೇ ಉಳಿದ. ಇಬ್ಬರೂ ಸಣ್ಣ ವಯಸ್ಸಿನವರಾಗಿದ್ದರಿಂದ ಕಾಯಲು ಸಿದ್ದರಿದ್ದರು.

ಈ ಐದು ವರ್ಷದಲ್ಲಿ ಅವನ ಕುಟುಂಬದವರು ಟೆರೇಸಿನಾ ಮತ್ತವಳ ತಾಯಿಯ ಬಾಯಿಗೆ ಬಂದಂತೆ ನಿಂದಿಸಿದ್ದರು. ಇದನ್ನು ಎದುರಿಸುವ ಉಪಾಯವೆಂಬಂತೆ ಆತ ತನಗೆ ಬಂದ ಅವಳ ಪತ್ರಗಳನ್ನು ಸಿಕ್ಕಸಿಕ್ಕವರಿಗೆಲ್ಲ ತೋರಿಸಿದ್ದ. ಒಮ್ಮೊಯಂತೂ ಖಾಯಿಲೆ ಬಿದ್ದು ಸಾಯುವ ಸ್ಥಿತಿಗೆ ಬಂದಿದ್ದ. ಆಗ ಮಾರ್ತಾ ಆಂಟಿ ಮತ್ತು ಟೆರೇಸಿನಾ ಅವನ ವಿಳಾಸಕ್ಕೆ ದೊಡ್ಡ ಮೊತ್ತದ ಹಣವನ್ನು ಅವನಿಗರಿವಿಲ್ಲದೆ ಕಳಿಸಿದ್ದರು. ಇದರ ಒಂದು ಭಾಗವನ್ನಷ್ಟೇ ಅವನ ಖಾಯಿಲೆಗೆ ಖರ್ಚು ಮಾಡಲಾಗಿತು. ಉಳಿದ ಬಾಗವನ್ನು ಆತ ತನ್ನ ಕುಟುಂಬದವರಿಂದ ಬಲವಂತವಾಗಿ ಕಸಿದುಕೊಂಡಿದ್ದ. ಈಗ ಈ ಹಣವನ್ನೇ ಹಿಂದಿರುಗಿಸಲೆಂದು ಟೆರೇಸಿನಾಳನ್ನು ಹುಡುಕಿಕೊಂಡು ಬಂದಿದ್ದು. ನಿಜದಲ್ಲಿ, ಅವನಿಗೆ ಹಣ ಬೇಕಿರಲಿಲ್ಲ. ಅಲ್ಲದೆ, ಅವಳಿಗಾಗಿ ತಾನು ಇಷ್ಟೊಂದು ಖರ್ಚು ಮಾಡಿರುವಾಗ ಅವನಿಗೆ ಈ ಹಣ ಭಿಕ್ಷೆಯ ಹಾಗೂ ಕಂಡಿರಲಿಲ್ಲ. ಹಾಗೆ ನೋಡಿದರೆ ತಾನು ಹಣ ಹಿಂದಿರುಗಿಸಲು ಬಂದ ಕಾರಣವೇನೆಂದು ಅವನಿಗೇ ಸ್ಪಷ್ಟವಿರಲಿಲ್ಲ. ಅದರಲ್ಲೂ ಇಂಥ ಮನೆಯಲ್ಲಿ ಹಣವೇ…. ಇಲ್ಲಪ್ಪ ಇಲ್ಲ! ಇಷ್ಟು ವರ್ಷ ಕಾದಂತೆ ಇನ್ನೂ ಕೆಲ ಕಾಲ ಆತ ಕಾಯಲು ಸಿದ್ಧನಿದ್ದ. ಟೆರೇಸಿನಾಳ ಹತ್ತಿರ ನಿಜವಾಗಿಯೂ ಹಣ ಸಂಗ್ರಹವಾಗಿದೆಯೆಂದರೆ ಅವಳ ಭಾಗ್ಯದ ಬಾಗಿಲು ತೆರೆಯಿತೆಂದೇ ಲೆಕ್ಕ. ಆದ್ದರಿಂದ ಈಗ ಯಾರೇ ನಂಬಲಿ, ಬಿಡಲಿ, ಹಿಂದೆ ಕೊಟ್ಟ ಮಾತನ್ನು ಪಾಲಿಸುವ ಸಮಯ ಬಂದಿದೆ ಎಂದೆನಿಸಿತು.

ಹೀಗೆ. ಇಂಥದೊಂದು ಮುಕ್ತಾಯವನ್ನು ದೃಢಪಡಿಸಿಕೊಂಡವನಂತೆ ಹುಬ್ಬುಗಳನ್ನು ಹೆಣೆಯುತ್ತ ಎದ್ದುನಿಂತ. ಪುನಃ ಚಳಿಯಿಂದ ಕೊರಡಾಗಿರುವ ಕೈಗಳಿಗೆ ಗಾಳಿಯೂದಿ, ನೆಲವನ್ನೊಮ್ಮೆ ಗಟ್ಟಿಯಾಗಿ ಮೆಟ್ಟಿದ.

“ಚಳಿ ಆಗ್ತಿದೆಯಾ? ಇಲ್ಲಿ ಅಡಿಗೆಕೋಣೆಗೆ ಬಾ…. ಆರಾಮವಾಗಿರಬಹುದು” ಎಂದ ಆಳು.

ಆಳಿನ ಈ ಧಿಮಾಕು, ಮಿಕಶಿಯೋಗೆ ಗೊಂದಲ, ಕಿರಿಕಿರಿ ಉಂಟು ಮಾಡುತ್ತಿದ್ದುದರಿಂದ ಅವನ ಸಲಹೆಯನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಪುನಃ ಕೂತು ಯೋಚಿಸಲು ಶುರು ಮಾಡಿದ – ದಿಗಿಲಿನಲ್ಲಿ. ಸ್ವಲ್ಪ ಹೊತ್ತಿಗೆ, ಕರೆಗಂಟೆಯ ದೊಡ್ಡ ಸದ್ದೊಂದು ಅವನನ್ನು ಎಬ್ಬಿಸಿತು.

“ಡೊರೀನಾ…. ಅಂತ ತೋರುತ್ತದೆ!” ಎಂದು ಚೀರಿದ ಆಳು, ಗಡಿಬಿಡಿಯಲ್ಲಿ ಷರಟು ಧರಿಸಿದವನೇ, ಬಾಗಿಲು ತೆರೆಯಲೆಂದು ಓಡಿದ.  ಆದರೆ, ತನ್ನನ್ನು ಮಿಕಶಿಯೋ ಹಿಂಬಾಲಿಸುತ್ತಿರುವುದನ್ನು ನೋಡಿದವನು ಇದ್ದಕ್ಕಿದ್ದಂತೆ ಅಲ್ಲೇ ನಿಂತು, “ನೀವಿಲ್ಲೇ ಇರಿ. ನಾನು ಮೊದಲು ಅವಳಿಗೆ ವಿಷಯ ತಿಳಿಸುತ್ತೇನೆ.” ಎಂದು ಆದೇಶಿಸಿದ.

ಪರದೆಯ ಹಿಂಬದಿಯಿಂದ ಕ್ಷೀಣಸ್ವರವೊಂದು ಕೇಳಿಸಿತು. ಇದ್ದಕ್ಕಿದ್ದಂತೆ ಕುಳ್ಳು ಹೆಂಗಸೊಬ್ಬಳು ಕೆದರಿದ ಬಟ್ಟೆಯಲ್ಲಿ ಒಂದು ಕಾಲನ್ನೆಳಯುತ್ತ ಹಾಜರಾದಳು. ಕಣ್ರೆಪ್ಪೆಯನ್ನು ತೆರೆಯುವುದೇ ಅವಳಿಗೆ ಅಸಾಧ್ಯವಾಗಿತ್ತು. ಉಣ್ಣೆಯ ಶಾಲನ್ನು ಮೂಗಿನತನಕ ಎಳೆದುಕೊಂಡಿದ್ದ ಅವಳು ತನ್ನ ತಲೆಗೂದಲಿಗೆ ಚಿನ್ನದ ಬಣ್ಣದ ಡೈ ಮಾಡಿಕೊಂಡಿದ್ದಳು.

ಮಿಕಶಿಯೋ ಪೆಕರನಂತೆ ಅವಳನ್ನೇ ನೋಡುತ್ತ ನಿಂತುಬಿಟ್ಟ. ಅವಳು ಕೂಡ ಹೊರಗಿನವನನ್ನು ನೋಡಿದ್ದೇ ಆಶ್ಚರ್ಯದಿಂದ ಕಣ್ಣುಗಳನ್ನು ಅಗಲಿಸಿದಳು.

“ಇವಳೇನಾ ಯಜಮಾನಿ?” ಮಿಕಶಿಯೋ ಪುನರುಚ್ಚರಿಸಿದ.

ಡೊರೀನಾ ಹಠಾತ್ತನೆ ಎಚ್ಚರಗೊಂಡವಳಂತೆ, “ನೋಡು…. ಇಲ್ನೋಡು ಬಂದೇಬಿಟ್ಚೆ….” ಎಂದು ಸುತ್ತಿ ಕೊಂಡಿದ್ದ ಶಾಲನ್ನು ಪರದೆಯ ಹಿಂಬದಿಗೆ ಒಗೆಯುತ್ತ, ಪ್ರವೇಶದ್ವಾರದತ್ತ ನಡೆದೇಬಿಟ್ಟಳು.

ಆ ಬಣ್ಣ ಬಳಿದುಕೊಂಡ ಮಾಟಗಾತಿಯ ಉಪಸ್ಥಿತಿ ಮತ್ತು ಆದೇಶ ಕೊಟ್ಟು ಹೋದ ಆಳಿನಿಂದ ಯಾಕೋ ಆಗಲೇ ಖಿನ್ನನಾಗಿದ್ದ ಮಿಕಶಿಯೋಗೆ ಭಯ, ಸಂಶಯ ಎಲ್ಲ ಒಮ್ಮೆಲೆ ಉಂಟಾಯಿತು. ಈಗವನಿಗೆ ಮಾರ್ತಾ ಆಂಟಿಯ ಕೀರಲು ಸ್ವರ ಕೇಳಿಸಿತು.

“ಓ…. ಅಲ್ಲಿ…. ಆ ದಿವಾನಖಾನೆಯಲ್ಲಿ …. ಡೊರೀನಾ!”

ಈಗ, ಪುಷ್ಪ ಗುಚ್ಛ ವನ್ನುಹಿಡಿದ ಆಳು ಮತ್ತು ಡೊರೀನಾ ಅವನನ್ನು ದಾಟಿಹೋದರು. ಆತ ತನ್ನ ತಲೆ ತುಸು ಮುಂದೆ ಬಾಗಿಸಿ ದೂರದಲ್ಲಿ ಬೆಳಗುತ್ತಿದ್ದ ಕೋಣೆಯನ್ನು ನೋಡಿದ. ಅಲ್ಲಿ ಕೋಟು ಧರಿಸಿಕೊಂಡಿದ್ದ ಬಹಳಷ್ಟು ಮಂದಿ ಏನನ್ನೋ ಹರಟುತ್ತಿದ್ದರು. ಅವನ ದೃಷ್ಟಿ ಈಗ ಮಂಜಾಯಿತು. ಅವನಿಗದೆಷ್ಟು ಆಶ್ಚರ್ಯವಾಯಿತೆಂದರೆ ಅವನಿಗೆ ಅರಿವಿಲ್ಲದೆ ಕಣ್ಣಾಲಿಗಳು ತುಂಬಿಬಂದವು. ಟೆರೇಸಿನಾ ಕೋಣೆಯಲ್ಲಿ ನಗುತ್ತಿರುವುದು ಕೇಳಿಸುತ್ತಿತ್ತು. ಆ ನಗುವಿನ ಇರಿತ ನಿಗ್ರಹಿಸಲೆಂಬಂತೆ ಮಿಕಶಿಯೋ ಕಣ್ಣುಮುಚ್ಚಿಕೊಂಡುಬಿಟ್ಪ.

ಸಣ್ಣ ಗುಸುಗುಸು ಶಬ್ದ ಕೇಳಿಬಂದು, ಮತ್ತೆ ಕಣ್ತೆರೆದಾಗ ಅವನೆದುರು ಮಾರ್ತಾ ಆಂಟಿ ನಿಂತಿದ್ದಳು. ಟೋಪಿ ಹಾಕಿಕೊಂಡು, ಬೆಲೆಬಾಳುವ ಮಖಮಲ್ಲಿನ ತೋಳಿಲ್ಲದ ಸಡಿಲವಾದ ಮೋಟು ಮೇಲಂಗಿಯನ್ನು ಧರಿಸಿದ್ದಳು; ಗುರುತು ಹಿಡಿಯಲಾರದಂತಿದ್ದಳು.

“ಅರೆ…. ಮಿಕಶಿಯೋ…. ನೀನಿಲ್ಲಿ ?”

“ಅರೆ…. ಮಾರ್ತಾ ಆಂಟಿ….” ಎಂದು ಉದ್ಗರಿಸಿದ ಮಿಕಶಿಯೋ ನಂತರ ತುಸು ತಡೆದು ಗಾಬರಿಯಿಂದ ಅವಳನ್ನೇ ಸೂಕ್ಷ್ಮವಾಗಿ ಗಮನಿಸಿದ.

“ಯಾವಾಗ ಬಂದೆ? ಅದೂ ನಮಗೊಂದು ಮಾತೂ ಹೇಳದೆ ಬಂದಿದ್ದೀಯಲ್ಲ…. ಅದೂ ಈವತ್ತೇ ಬಂದಿದ್ದೀಯಲ್ಲ…. ಅಯ್ಯೋ ದೇವರೆ!” ಮುದುಕಿ ತುಸು ಸಿಟ್ಟಾಗಿದ್ದಳು.

“ನಾನು ಬಂದದ್ದು….” ಎಂದ ಮಿಕಶಿಯೋ ಮುಂದೆ ಏನು ಹೇಳಬೇಕೋ ಗೊತ್ತಾಗದೆ ತಡವರಿಸಿದ.

ಸ್ವಲ್ಪ ತಡಿ, ಅಲ್ನೋಡು…. ಜನ ಸೇರಿದ್ದಾರೆ. ಈವತ್ತು ರಾತ್ರೆ ಟೆರೇಸಿನಾಳ ಬರ್ತ್ಡೇ ಪಾರ್ಟಿ ಇಟ್ಟುಕೊಂಡಿದ್ದೇವೆ…. ನೀನು ಇಲ್ಲೇ ಸ್ವಲ್ಪ ಕಾಯುತ್ತಿರು….” ಎಂದು ಮಧ್ಯೆ ಮೂಗು ತೂರಿಸಿದಳು.

ಗಂಟಲುಬ್ಬಿ ಬಂದು ಮಿಕಶಿಯೋ, “ನಾನು ಹೊರಟು ಹೋಗಬೇಕೆಂದು ನಿನಗನಿಸಿದರೆ ಹೇಳಿಬಿಡು.” ಎಂದ.

“ಅಯ್ಯೋ…. ಇಲ್ಲ ಇಲ್ಲ…. ಸ್ವಲ್ಪ ತಡಿ….” ಎಂದು ಹಿಂಜರಿಕೆಯಿಂದ ಪ್ರತಿಕ್ರಿಯಿಸಿದ ಮುದುಕಿಗೆ ಈಗ ಪಿಚ್ಚೆನಿಸಿತು.

“ಈ ಹೊತ್ತಿಗೆ ನನಗೆಲ್ಲಿ ಹೋಗಬೇಕೋ ಗೊತ್ತಿಲ್ಲಪ್ಪ” ಎಂದ ಮಿಕಶಿಯೋ.

ಗ್ಲೌವ್ಸ್ ಧರಿಸಿದ್ದ ತನ್ನ ಕೈಯಿಂದ ಇಲ್ಲೇ ನಿಲ್ಲು ಎಂದು ಸನ್ನೆಮಾಡಿದ ಮಾರ್ತಾ ಆಂಟಿ ಅವನನ್ನು ಅಲ್ಲೇ ಬಿಟ್ಟು ಪಾರ್ಟಿ ನಡೆಯುತ್ತಿದ್ದ ಕೋಣೆಗೆ ಹೋದಳು. ಆ ಒಂದು ಕ್ಲಣ ಮಾತ್ರ ಮಿಕಶಿಯೋಗೆ ತಾನು ಪಾತಾಳಕ್ಕೆ ಬಿದ್ದು ಬಿಟ್ಟಂತೆ ಅನಿಸಿತು. ಆ ಕಡೆ ಟೆರೇಸಿನಾ, “ಒಂದು ನಿಮಿಷ” ಎಂದದ್ದು ಅವನಿಗೆ ಸ್ಪಷ್ಟವಾಗಿ ಕೇಳಿಸಿತು.

ಅವಳು, ಇನ್ನೇನು ಕಾಣಿಸಿಕೊಳ್ಳುತ್ತಾಳೆ ಎಂದು ಗೊತ್ತಾಗಿದ್ದೇ, ಅವನ ದೃಷ್ಟಿ ಮಸುಕಾಯಿತು. ಆದರೆ ಯಥಾಪ್ರಕಾರ ಕೋಣೆಯೊಳಗೆ ಸಂಭಾಷಣೆ ಮತ್ತೆ ಮುಂದುವರೆಯಿತು.

ಟೆರೇಸಿನಾ ಬರಲೇ ಇಲ್ಲ. ಬದಲಿಗೆ, ಕೆಲನಿಮಿಷಗಳ ನಂತರ, ಮಾರ್ತಾ ಆಂಟಿ ವಾಪಸಾದಳು. ಈ ಬಾರಿ, ಟೋಪಿ, ಗ್ಲೌವ್ಸ್, ಮೇಲಂಗಿ ಯಾವುದೂ ಇರಲಿಲ್ಲ.

“ಅವರೆಲ್ಲ ಊಟ ಮಾಡ್ತಾ ಇದ್ದಾರೆ…. ನಾವಿಲ್ಲಿ ಸ್ವಲ್ಪ ಹೊತ್ತು ಕಾಯುತ್ತ ನಿಲ್ಲುವ… ಸರಿಯಾ? ಡೊರೀನಾ ನಮಗೆ ಬಡಿಸುತ್ತಾಳೆ…. ಒಟ್ಟಿಗೆ ಕೂತು ಊಟ ಮಾಡುವಾ….. ನಮ್ಮ ಹಳೇ ದಿನಗಳನ್ನು ಸುಮ್ಮನೆ ಮೆಲುಕು ಹಾಕುವಾ, ನಾವಿಬ್ಬರೂ ಹೀಗೇ ಒಟ್ಟಿಗೆ ಇದ್ದೇವೆ ಎಂದರೆ ನನಗಂತೂ ನಂಬುವುದಕ್ಕೆ ಆಗುತ್ತಿಲ್ಲ…. ಪಾಪ ಅಲ್ಲಿ ಅವಳು ಅಷ್ಟು ಜನರಿಂದ ತಪ್ಪಿ ಸಿಕೊಳ್ಳುವಂತಿಲ್ಲ…. ಜೀವನೋಪಾಯದ ಪ್ರಶ್ನೆ ನೋಡು! ನಾನು ಹೇಳುತ್ತಿರುವುದು ನಿನಗೆ ತಿಳಿಯುತ್ತಾ ಇದೆ ತಾನೆ! ಪೇಪರನ್ನು ನೋಡಿದ್ದೀಯಾ? ತುಂಬ ಸಾಧಿಸಿದ್ದಾಳೆ…. ನನಗಂತೂ ಸ್ವರ್ಗಕ್ಕೆ ಮೂರೇ ಗೇಣು! ಇನ್ನು ನೀನಿಲ್ಲಿ ನನ್ನ ಜತೆ ಇದ್ದೀಯ ಎಂದರೆ ನನಗೆ ನಂಬುವುದಕ್ಕೇ ಆಗ್ತಾ ಇಲ್ಲ….”

ಮಿಕಶಿಯೋನಿಗೆ ಯೋಚಿಸಲೂ ಪುರುಸೊತ್ತು ಸಿಗದಂತೆ ನಿರಂತರ ಮಾತಾಡುತ್ತಲೇ ಇದ್ದ ಮುದುಕಿ ಕೊನೆಗೆ ಮುಗುಳ್ನಕ್ಕು ಕೈಗಳನ್ನು ಸಣ್ಣಗೆ ಉಜ್ಜಿ ಅವನತ್ತ ಕರುಣೆಯಿಂದ ನೋಡಿದಳು.

ದಿವಾನಖಾನೆಯಲ್ಲಿ ಆಗಲೇ ಭೋಜನ ಶುರುವಾಗಿದ್ದರಿಂದ ಡೊರೀನಾ ಗಡಿಬಿಡಿಯಲ್ಲಿ ಬಂದು ಮೇಜನ್ನು ಸರಿಪಡಿಸಿದಳು.

“ಅವಳು ಬರ್ತಾಳೆಯೇ? ಅಂದರೆ, ನನಗೊಮ್ಮೆ ಅವಳನ್ನು ನೋಡಬೇಕಿತ್ತು ಅದಕ್ಕೇ ಕೇಳಿದೆ”! ಎಂದ ಮಿಕಶಿಯೋ ಖಿನ್ನನಾಗಿ.

“ಖಂಡಿತವಾಗ್ಲೂ ಬರುತ್ತಾಳೆ ಮಾರಾಯಾ….. ಬಿಡುವು ಸಿಕ್ಕತಕ್ಷಣ ಬರುವೆ ಎಂದು ನನಗೆ ಹೇಳಿಕಳಿಸಿದ್ದಾಳೆ.” ಈಗ ಹುಟ್ಸಿಕೊಂಡ ಒಂಥರಾ ಇಕ್ಕಟ್ಟಿನ ಪರಿಸ್ಥಿತಿಯಿಂದ ಪಾರಾಗಲೆಂಬಂತೆ ಮುದುಕಿ ತಟ್ಟನೆ ಉತ್ತರಿಸಿದಳು.

ಕೊನೆಗೆ, ಗುರುತುಸಿಕ್ಕವರಂತೆ ಇಬ್ಬರೂ ಪರಸ್ಪರ ಮುಖ ನೋಡಿಕೊಂಡು ಸಂಕೋಚವನ್ನು ಮೀರಿ ಮುಗುಳ್ನಗುವಿನಿಂದಲೇ ಪರಸ್ಪರ ಸ್ವಾಗತಿಸಿಕೊಂಡರು. “ಅರೆ…. ನೀನು ಮಾರ್ತಾ ಆಂಟಿ ಅಲ್ಲವೆ?” ಎಂದು ಮಿಕಶಿಯೋ ಕಣ್ಣುಗಳು ಹೇಳುತ್ತಿದ್ದರೆ, ಅತ್ತ ಮಾರ್ತಾ ಆಂಟಿಯ ಕಣ್ಣುಗಳೂ, “ಮಿಕಶಿಯೋ, ಇನ್ನೂ ಹಾಗೇ ಇದ್ದಾನೆ, ಚೂರೂ ಬದಲಾಗಿಲ್ಲ” ಎನ್ನುತ್ತಿದ್ದವು. ಇದ್ದಕ್ಕಿದ್ದಂತೆ ಮುದುಕಿ ಕಣ್ಣುಗಳನ್ನು ಕೆಳತಿರುಗಿಸಿದಳು – ಮಿಕಶಿಯೋನಿಗೆ ಅವುಗಳಿಂದ ಇನ್ನೇನಾದರೂ ಅರ್ಥವಾಗಿಬಿಟ್ಟರೆ ಎಂಬ ಆತಂಕದಲ್ಲಿ.

“ಊಟ ಮಾಡೋಣ…. ಸರೀನಾ?”

“ಹ್ಞೂಂ…. ಬಹಳ ಹಸಿದಿದ್ದೇನೆ.” ಎಂದ ಮಿಕಶಿಯೋ ಸಂತೋಷದಿಂದ. ತುಂಟಿಯಂತೆ ಒಂದು ಕಣ್ಣನ್ನು ಮಿಟುಕಿಸಿದ ಮುದುಕಿ “ಮೊದಲು ಪ್ರಾರ್ಥಿಸೋಣ” ಎಂದು ಹೇಳಿ ಕೈಯಿಂದಲೇ ಶಿಲುಬೆಯ ಚಿಹ್ನೆ ಮಾಡಿದಳು.

ಆಳು ಊಟ ತಂದಿರಿಸಿ ಹೋದ. ಮಾರ್ತಾ ಆಂಟಿ ಬಡಿಸುವುದನ್ನು ಮಿಕಶಿಯೋ ಸೂಕ್ಷ್ಮವಾಗಿ ಗಮನಿಸಿದ. ಈಗ, ತಾನು ಬಡಿಸಿಕೊಳ್ಳುವ ಸರದಿ ಬಂದಾಗ ದೂರ ಪ್ರಯಾಣದಿಂದಾಗಿ ಕೈಗಳು ಬಹಳ ಕೊಳೆಯಾಗಿರುವುದು ಗಮನಕ್ಕೆ ಬಂತು. ನಾಚಿಕೆಯುಂಟಾಗಿ ಒಮ್ಮೆ ಆಳನ್ನು ಕಣ್ಣೆತ್ತಿ ಕದ್ದು ನೋಡಿದ. ಆತ ಈ ವಿಷಯವೆಲ್ಲವನ್ನು ಬಲ್ಲೆ ಎಂಬ ಠೀವಿಯಲ್ಲಿ ತಲೆಯಾಡಿಸುತ್ತ, ಸಣ್ಣಗೆ ನಕ್ಕು ತಾನೇ ಬಡಿಸುವೆ ಎಂಬಂತೆ ಹತ್ತಿರ ಬಂದ. ಪುಣ್ಯಕ್ಕೆ ಮಾರ್ತಾ ಆಂಟಿ, “ಮಿಕಶಿಯೋ ನಾನು…. ಬಡಿಸ್ತೀನಿ…. ಆಯಿತಾ” ಎನ್ನುತ್ತ ಈ ಸಂಕಷ್ಟದಿಂದ ಪಾರುಮಾಡಿದಳು.

ಕೃತಜ್ಞತೆ ಉಕ್ಕಿಬಂದು ಅವಳ ಕೈಗಳನ್ನು ಚುಂಬಿಸಬಹುದಿತ್ತು. ಆದರೆ ಒಮ್ಮೆ ಆಕೆ ಬಡಿಸಿದ್ದೇ, ಗಡಿಬಿಡಿಯಲ್ಲಿ ಕೈಗಳನ್ನು ಶಿಲುಬೆಯ ಚಿಹ್ನೆಯಂತೆ ಮಾಡಿ ಪ್ರಾರ್ಥಿಸಿದ.

ಮಾರ್ತಾ ಆಂಟಿಗೆ ಸಂತೋಷವಾಗಿ, “ಶಾಭಾಷ್” ಎಂದಳು.

ಈಗವನಿಗೆ ತುಸು ಆರಾಮವೆನಿಸಿತು. ಆಳಿನ ಬಗ್ಗೆ, ಕೈಗಳ ಬಗ್ಗೆ ಲೆಕ್ಕಿಸದೆ ತೃಪ್ತಿಯಿಂದ ಯಾವತ್ತೂ ಊಟ ಮಾಡದವನಂತೆ ಶುರುಮಾಡಿಬಿಟ್ಟ.

ಪ್ರತಿಬಾರಿ ದಿವಾನಖಾನೆಯನ್ನು ಯಾರಾದರೂ ಹೊಕ್ಕಾಗ, ಅಥವಾ ಹೊರಬಂದಾಗ, ಅದರ ಗಾಜಿನ ಬಾಗಿಲನ್ನು ಯಾರಾದರೂ ತೆರೆದಾಗ, ಗಹಗಹಿಸಿ ನಗುವ, ಗುಸುಗುಸು ಮಾತಾಡುವ ಶಬ್ದದ ಅಲೆಗಳು ಆ ದಿಕ್ಕಿನಿಂದ ಬಂದಂತೆ ಅನಿಸಿ ಮಿಕಶಿಯೋ ತುಸು ಆತಂಕದಲ್ಲೇ ಅತ್ತ ತಿರುಗಿನೋಡುತ್ತಿದ್ದ. ನಂತರ ಪುನಃ ತಿರುಗಿ ಮುದುಕಿಯ ದುಃಖ ಸೂಸುವ ಕಣ್ಣುಗಳಲ್ಲಿ ಏನಾದರೂ ವಿವರಣೆ ದೊರಕುವುದೋ ಎಂದು ಹುಡುಕುತ್ತಿದ್ದ. “ಎಲ್ಲ ಆಮೇಲೆ…. ಸದ್ಯ ಈಗೇನೂ ಕೇಳಬೇಡ” ಎಂಬಂಥ ವಿನಂತಿ ಆ ಕಂಗಳಲ್ಲಿತ್ತು. ಮತ್ತೆ ಮುಂಚಿನಂತೆ ಪರಸ್ಪರ ಮುಗುಳ್ನಕ್ಕು ಊಟ ಮುಂದುವರೆಸುತ್ತಿದ್ದರು. ಊರಿನ ಗೆಳೆಯರ ಬಗ್ಗೆ ಪರಿಚಿತರ ಬಗ್ಗೆ, ಮಾರ್ತಾ ಆಂಟಿ ನಿರರ್ಗಳ ಕೇಳುತ್ತಿದ್ದಳು.

“ನೀನೀಗ ಕುಡಿಯುವುದಿಲ್ಲವೆ?” ಕೇಳಿದಳು.

ಬಾಟಲಿಗಾಗಿ ಮಿಕಶಿಯೋ ಕೈಚಾಚಿದ. ಇದ್ದಕ್ಕಿದ್ದಂತೆ ದಿವಾನಖಾನೆಯ ಬಾಗಿಲು ತೆರೆದುಕೊಂಡು ಅವನಿದ್ದ ಕೋಣೆಯೀಗ ಕಣ್ಣು ಕೋರೈಸುವ ಬೆಳಕಿನಿಂದ ಝಗಮಗಿಸಿತು.

“ಓಹ್…. ಟೆರೇಸಿನಾ!”

ಆಶ್ಚರ್ಯದಿಂದ ಸ್ವರ ಗಂಟಲಲ್ಲೇ ಉಳಿಯಿತು.

“ವಾಹ್… ರಾಣಿಯಂತಿದ್ದಾಳೆ! ಮುಖ ಕೆಂಪಾಗಿ ಅವನ ಕಣ್ಣುಗಳು ಅಗಲವಾದವು. ಬಾಯಿ ತೆರೆದೇ ಇತ್ತು. ಅವಳನ್ನು ನೋಡಿದ್ದೇ ಮೂಕನಾದ. ಈಕೆ ಹೀಗಾಗಿದ್ದಾದರೂ ಹೇಗೆ? ಅವಳ ಎದೆ, ಭುಜ-ತೋಳುಗಳೆಲ್ಲ ತೆರೆದಿದ್ದವು…. ಮೈಮೇಲೆಲ್ಲ ವಸ್ತ್ರಾಭರಣಗಳು…. ಹಾಗೆ ಯಾವತ್ತೂ ಅವಳನ್ನು ನೋಡಿದವನಲ್ಲ. ಅವಳು ಏನು ಹೇಳಬಯಸುತ್ತಿದ್ದಾಳೆ? ಅವಳ ಕಣ್ಣು, ಆ ಸ್ವರ, ಅಷ್ಟೇ ಯಾಕೆ, ಆ ನಗುವನ್ನೂ ಅವನಿಗೆ ಗುರುತು ಹಿಡಿಯಲಾಗಲಿಲ್ಲ.

“ಎಲ್ಲರೂ ಆರಾಮ ತಾನೆ? ಒಳ್ಳೇದು…. ಹ್ಞಾ ನಿನಗೆ ಹುಷಾರಿರಲಿಲ್ಲ…. ಅಲ್ಲವಾ, ಹೇಗಿದ್ದೀ ಮಿಕಶಿಯೋ?…. ನಾವೆಲ್ಲ ಸ್ವಲ್ಪ ಹೊತ್ತಿಗೆ ಸೇರಿಕೊಂಡು ಪಟ್ಟಾಂಗ ಹೊಡೆಯೋಣ. ಅಲ್ಲೀತನಕ ಹೇಗೂ ಅಮ್ಮ ಇದ್ದಾಳಲ್ಲವಾ?”

ಇಷ್ಟು ಹೇಳಿದ್ದೇ, ಟೆರೇಸಿನಾ ಮತ್ತೆ ದಿವಾನಖಾನೆಯೊಳಗೆ ಹೋಗಿ ಮಾಯವಾದಳು. ಮಿಕಶಿಯೋ ಆಶ್ಚರ್ಯದಿಂದ ತೆಪ್ಪಗಿದ್ದುದನ್ನು ಗಮನಿಸಿದ ಮಾರ್ತಾ ಆಂಟಿ ತುಸು ತಡೆದು ಗಾಬರಿಯಿಂದ, “ಯಾಕೋ, ಏನಾಯ್ತು? ನೀನ್ಯಾಕೆ ತಿನ್ನುತ್ತಿಲ್ಲ?” ಎಂದು ಕೇಳಿದಳು.

ಆತ ತಬ್ಬಿಬ್ಬಾಗಿ ಅವಳನ್ನೇ ನೋಡಿದ.

ಮುದುಕಿ “ತಿನ್ನೋ ಮಾರಾಯಾ” ಎಂದು ಪ್ಲೇಟನ್ನು ತೋರಿಸುತ್ತ ಹೇಳಿದಳು.

ಮಿಕಶಿಯೋ ಎರಡೂ ಬೆರಳುಗಳನ್ನೆತ್ತಿ, ಕೊಳೆಯಾಗಿ ಮಡಚಿಹೋಗಿದ್ದ ತನ್ನ ಕಾಲರನ್ನು ಸರಿಪಡಿಸಿಕೊಳ್ಳುತ್ತ ದೀರ್ಘ ಉಸಿರನ್ನೆಳೆದುಕೊಂಡ.

“ಊಟ ಮಾಡಬೇಕಾ?”

ಗದ್ದದ ಮೇಲೆ ಬೆರಳಾಡಿಸುತ್ತ, ತಿನ್ನಲು ಸಾವ್ಯವೇ ಇಲ್ಲ ಎಂಬಂತೆ ಕೂತುಬಿಟ್ಟ. ಇನ್ನೂ ಕೆಲಹೊತ್ತು ಮೌನವಾಗಿ, ಈಗಷ್ಟೇ ಕಂಡ ದೃಶ್ಯವನ್ನು ನೆನೆಯುತ್ತ ಮ್ಲಾನನಾದ.

“ಹೇಗಿದ್ದವಳು…. ಹೇಗಾಗಿಬಿಟ್ಟಳು” ಸಣ್ಣಗೆ ಪಿಸುಗುಟ್ಟಿದ.

ಅತ್ತ ನೋಡಿದರೆ, ಮಾರ್ತಾ ಆಂಟಿಯೂ ಊಟ ನಿಲ್ಲಿಸಿ ತಲೆಯಲ್ಲಾಡಿಸುತ್ತ ಬಹಳ ವ್ಯಥೆ ಪಡುವವಳಂತೆ ಕಂಡಳು.

“ಛೆ…. ಇದನ್ನೆಲ್ಲ ಯೋಚಿಸಲೂ ಕೂಡ ಸಾಧ್ಯವಿಲ್ಲ” ಎಂದ – ಕಣ್ಣುಮುಚ್ಚಿ ಕೊಂಡು ತನ್ನೊಂದಿಗೆ ಮಾತಾಡುವವನಂತೆ.

ಈಗವನಿಗೆ ಇಬ್ಬರ ನಡುವೆ ಹಠಾತ್ತನೆ ಹುಟ್ಟಿಕೊಂಡ ಕಂದಕ ಗೋಚರಿಸತೊಡಗಿತು. ಇಲ್ಲ…. ಈ ಹೆಂಗಸು ತನ್ನ ಟೆರೇಸಿನಾಳಾಗಲು ಸಾಧ್ಯವೇ ಇಲ್ಲ ಅನಿಸಿತು. ಎಲ್ಲ ಮುಗಿದು ಹೋದ ಅಧ್ಯಾಯ! ಈ ಮೂರ್ಖನಿಗೆ, ತಲೆಗೆಟ್ಟವನಿಗೆ, ಈಗಷ್ಟೇ ಅರಿವಾಗುತ್ತಿದೆ, ಅಷ್ಟೆ. ಊರಲ್ಲಿ, ಮನೆಯವರು ಇದನ್ನೆಲ್ಲ ಹೇಳಿದ್ದರೂ ಆತ ಹಟ ಹಿಡಿದವನಂತೆ ಇನ್ನಾವುದನ್ನೂ ನಂಬಲು ತಯಾರಿರಲಿಲ್ಲ. ಈಗ, ಈ ಮನೆಯಲ್ಲಿ ಉಳಿಯಲು ಮನಸ್ಸಾದರೂ ಹೇಗೆ ಬರಬೇಕು? ತನ್ನ ಹೆಸರು ಮಿಕಶಿಯೋ ಬೊನಾವಿನೋ ಎಂದೂ, ತಾನು ಮೂವತ್ತಾರು ಘಂಟೆಗಳ ಸುದೀರ್ಘ ರೈಲು ಪ್ರಯಾಣ ಮುಗಿಸಿ ತನ್ನ ಹೆಂಡತಿಯಾಗುವವಳನ್ನು ಭೆಟ್ಟಿಯಾಗಲು ಬಂದಿರುವೆನೆಂದೂ ಆ ಅತಿಥಿಗಳಿಗೆ, ಆಳುಗಳಿಗೆ ಗೊತ್ತಾದರೆ, ಅದರಲ್ಲೂ ಆ ಮುಸುರೆ ತೊಳೆಯುವ ಹುಡುಗನಿಗೆ, ಆ ಡೊರೀನಾಳಿಗೆ ಗೊತ್ತಾದರೆ ಅವರೆಲ್ಲ ಅದೆಷ್ಟು ನಗಬಹುದು! ಇನ್ನು, ಟೆರೇಸಿನಾ ತನ್ನನ್ನು ಆ ದಿವಾನಖಾನೆಗೆ ಅಲ್ಲಿ ನೆರೆದವರೆದುರು ಎಳೆದುಕೊಂಡು ಹೋಗಿ, “ನೋಡಿ ಈ ದರಿದ್ರ ಕೊಳಲುವಾದಕ ನನ್ನ ಗಂಡನಾಗಲು ಬಂದಿದ್ದಾನೆ….” ಎಂದು ಹೇಳಿದರಂತೂ ಮುಗಿಯಿತು. ಅವರದೆಷ್ಟು ಗಹಗಹಿಸಬಹುದು! ಹೌದು. ಅವಳು ಹಿಂದೊಮ್ಮೆ ಪ್ರಾಮಿಸ್ ಮಾಡಿದ್ದಳೇನೋ ನಿಜ. ಆದರೆ ಮುಂದೊಂದು ದಿನ ತಾನು ಈ ಹಂತ ಏರುವೆನೆಂದು ಸ್ವತಃ ಅವಳಿಗೇ ತಿಳಿದಿರಲಿಲ್ಲ. ಅಲ್ಲದೆ, ಅವಳ ಈ ಪ್ರಯಾಣಕ್ಕೆ ಅವನೇ ದಾರಿ ತೋರಿಸಿರುವುದೂ ಕೂಡ ಅಷ್ಟೇ ನಿಜ. ಆದರೆ ಈಗವಳು ಬಹಳ ದೂರ ಹೋಗಿಬಿಟ್ವಿದ್ದಾಳೆ. ಅವನು ಮಾತ್ರ ಇನ್ನೂ ಭಾನುವಾರಗಳಲ್ಲಿ ಅರೇ ಪೇಟೆ ಚೌಕದಲ್ಲಿ ಕೊಳಲು ಬಾರಿಸುತ್ತ ಅಲ್ಲೇ ಉಳಿದ. ಇದನ್ನೆಲ್ಲ ಯೋಚಿಸಲೂ ಸಾಧ್ಯವಿಲ್ಲ! ತಾನು ಎಂದೋ ಅವಳಿಗಾಗಿ ಕೆಲ ಚಿಲ್ಲರೆ ಹಣ ಖರ್ಚು ಮಾಡಿದ್ದರಿಂದ ಮತ್ತು ಅದರ ಋಣಭಾರದಿಂದಲೇ ಅವಳ ಮೇಲೆ ಹಕ್ಕು ಚಲಾಯಿಸಲು ಈತ ಬಂದಿದ್ದಾನೆ ಎಂದು ಜನ ಸಂಶಯಪಡಬಹುದೆಂದೂ ಅವನಿಗನಿಸಿ ನಾಚಿಕೆಯಾಯಿತು. ಆದರೆ ಯಾಕೋ ತಾನು ಖಾಯಿಲೆ ಬಿದ್ದಾಗ ಟೆರೇಸಿನಾ ಕಳಿಸಿದ್ದ ಹಣ ಈಗ ತನ್ನ ಜೇಬಿನಲ್ಲಿರುವುದು ನೆನಪಾಯಿತು. ತನ ಕೆನ್ನೆ ಕೆಂಪಾಗಿ, ನಾಚಿಕೆಯುಂಟಾಯಿತು. ಹಠಾತ್ತನೆ ಅವನ ಒಂದು ಕೈ ತನ್ನ ಜಾಕೇಟಿನ ಮೇಲು ಜೇಬಿನಲ್ಲಿಟ್ಟಿದ್ದ ಪಾಕೇಟಿನತ್ತ ಹೋಯಿತು.

“ಈ ಹಣ ಹಿಂದಿರುಗಿಸಲಿಕ್ಕೆಂದೇ ನಾನು ಬಂದಿದ್ದು ಮಾರ್ತಾ ಆಂಟಿ…. ಹಣ ಪಾವತಿಯೋ ಸಾಲದ ಮರುಪಾವತಿಯೋ ಅಂತೂ ಏನೋ ಒಂದು…. ಈಗ ಟೆರೇಸಿನಾ ದೊಡ್ಡ ವ್ಯಕ್ತಿ ಯಾಗಿಬಿಟ್ಟಿದ್ದಾಳೆ…. ಇರಲಿ…. ಈಗದನ್ನೆಲ್ಲ ಯೋಚಿಸುತ್ತ ಕೂರುವುದು ಸರಿಯಲ್ಲ! ಇನ್ನು ಹಣದ ವಿಷಯ ಆಕೆ ನನ್ನ ಜತೆ ಈ ರೀತಿ ನಡಕೊಳ್ಳುತ್ತಾಳೆ ಎಂದು ಗೊತ್ತಿರಲಿಲ್ಲ. ಈಗಂತೂ ಎಲ್ಲ ಮುಗಿಯಿತು. ಅದರ ಬಗ್ಗೆ ಯಾವ ಮಾತೂ ಬೇಡ….”

“ಮಗಾ… ಅದೇನು ಹೇಳ್ತಾ ಇದೀಯ? ಮಾರ್ತಾ ಆಂಟಿ ನಡುವೆ ಬಾಯಿ ಹಾಕಿದಳು. ಅವಳು ಸಣ್ಣಗೆ ಕಂಪಿಸುತ್ತಿದ್ದಳು. ನೋವಿನಿಂದ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು.

ಮಿಕಶಿಯೋ ಸುಮ್ಮನಿರುವಂತೆ ಅವಳಿಗೆ ಸೂಚಿಸಿದ.

“ಹಣ ಖರ್ಚು ಮಾಡಿದ್ದು ನಾನಲ್ಲ…. ನಾನು ಖಾಯಿಲೆ ಬಿದ್ದಾಗ ನನ್ನ ಕುಟುಂಬದವರು ಖರ್ಚು ಮಾಡಿದ್ದು – ಅದೂ ನನಗೆ ತಿಳಿಸದೆ. ಹಿಂದೊಮ್ಮೆ ನಾನು ಅವಳಿಗೋಸ್ಕರ ಹಣ ಖರ್ಚು ಮಾಡಿದ್ದೆ…. ನೆನಪಿದೆಯೇ ನಿನಗೆ? ಇರಲಿ…. ಅದರ ಕುರಿತು ಮತ್ತೆ ಚರ್ಚೆ ಬೇಡ. ಉಳಿದ ಹಣ ಇಲ್ಲಿದೆ…. ತಗೋ…. ನಾನು ಹೋಗುತ್ತಿದ್ದೇನೆ.”

“ಏನೋ ಮಾರಾಯಾ… ಹಾಗೇ ಇದ್ದಕ್ಕಿದ್ದಂತೆ ಹೊರಟೇಬಿಟ್ಟೆಯಲ್ಲ!” ಉದ್ಗರಿಸಿದಳು ಮಾರ್ತಾ ಆಂಟಿ – ಅವನನ್ನು ತಡೆದು ನಿಲ್ಲಿಸುವಂತೆ. “ಟೆರೇಸಿನಾ ಬರುವವರೆಗಾದರೂ ನಿಂತುಕೋ ಮಾರಾಯಾ….. ವಿನ್ನನ್ನು ನೋಡಬೇಕು ಎಂದವಳು ಹೇಳಿದ್ದಾಳಲ್ಲವಾ? ತಡಿ. ಅವಳಿಗೆ ತಿಳಿಸಿ ಬರುತ್ತೇನೆ.”

“ಬೇಡ…. ಅದರಿಂದ ಏನೂ ಉಪಯೋಗವಿಲ್ಲ.” ಎಂದ ಮಿಕಶಿಯೋ ದೃಢವಾಗಿ, “ಅವಳು ಅಲ್ಲೇ ಆ ಸಜ್ಜನರ ನಡುವೆಯೇ ಇರಲಿ. ಅಂಥ ಜಾಗ ಅವಳಿಗೆ ಚೆನ್ನಾಗಿ ಹೊಂದುತ್ತೆ…. ಅವಳು ಅಲ್ಲಿಯೇ ಸಲ್ಲುವವಳು…. ನಾನೊಬ್ಬ ದೊಡ್ಡಮೂರ್ಖ…. ಅವಳನ್ನು ನೋಡಿಹೋಗುವಾ ಅಂತ ಬಂದೆ…. ನೋಡಿ ಆಯಿತಲ್ಲ…. ಅಷ್ಟು ಸಾಕು…. ಅವರೆಲ್ಲ ಹೇಗೆ ನಗಾಡ್ತಾ ಇದ್ದಾರೆ ಕೇಳಿಸ್ತಿದೆಯಾ ನಿನಗೆ? ಅವರು ನನ್ನ ನೋಡಿ ನಗದಿರಲಿ ನಾನು ಹೊರಟೆ.”

ಮಿಕಶಿಯೋನ ತತ್‍ಕ್ಷಣದ ಈ ನಿರ್ಧಾರದ ಹಿಂದೆ ಅಸೂಯೆ ಅಥವಾ ಸಿಟ್ಟರಬಹುದು ಎಂದು ಮಾರ್ತಾ ಆಂಟಿ ಊಹಿಸಿದಳು. ಇತ್ತೀಚೆಗಂತೂ, ಅವಳಿಗೆ ಎಲ್ಲರೂ ತನ್ನ ಮಗಳ ಯಶಸ್ಸನ್ನು ಕಂಡು ಕರುಬುವವರೇ ಎಂದನಿಸುತ್ತಿತ್ತು.

“ನನಗೀಗ ಅವಳ ರಕ್ಷಣೆಗೆ ನಿಲ್ಲದೆ ಬೇರೆ ದಾರಿಯೇ ಇಲ್ಲ…. ಮಗಾ”

ಇದ್ದಕ್ಕಿದ್ದ ಹಾಗೆ ಅವಳ ಕಣ್ಣುಗಳಲ್ಲಿ ಸಂಶಯ ಇಣುಕುತ್ತಿರುವುದನ್ನು ಗುರುತಿಸಿದ. ಮಿಕಶಿಯೋನ ಮುಖ ಈಗ ಕಪ್ಪಿಟ್ಟಿತು. “ಯಾಕೆ?” ಎಂದು ಕೇಳಿದ.

ಮುದುಕಿ ದುಃಖದಲ್ಲಿ ಮುಳುಗಿಬಿಟ್ಟಳು. ಕಂಪಿಸುತ್ತಿದ್ದ ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡರೂ ಧಾರಾಕಾರ ನೀರು ಸುರಿಯುವುದನ್ನು ಮಾತ್ರ ತಡೆಹಿಡಿಯಲಾಗಲಿಲ್ಲ.

“ಸರಿಯಪ್ಪ…. ನೀನಿನ್ನು ಹೊರಟುಹೋಗು…. ಅವಳು ನಿನಗೆ ಹೇಳಿಸಿದವಳೇ ಅಲ್ಲ…. ನೀನು ಸರಿಯಾಗಿ ಯೋಚಿಸಿದ್ದೀ…. ನೀವಿಬ್ಬರೂ ನನ್ನ ಮಾತು ಕೇಳಿದ್ದೇ ಆದಲ್ಲಿ….” ಎಂದು ಹೇಳುತ್ತ ಬಿಕ್ಕತೊಡಗಿದಳು.

ಮಿಕಶಿಯೋ ಬಾಗಿ, ಅವಳ ಮುಖದ ಮೇಲಿಂದ ಒಂದು ಕೈಯನ್ನು ರಭಸದಿಂದ ಸರಿಸಿದ. ಅವಳ ನೋಟ, ದುಃಖದಿಂದ, ನೋವಿನಿಂದ ಕಂಡಿತು. ಒಂದು ಬೆರಳನ್ನು ತುಟಿಗಳಿಗೆ ಹಿಡಿದು ಆಕೆ ಕರುಣೆಯಿಂದ ಪ್ರಾರ್ಥಿಸುತ್ತಿರುವಂತಿತ್ತು. ಆತ ಮೃದುವಾದ ದನಿಯಲ್ಲಿ: “ಹೌದು…. ಅವಳು ನನಗಾಗಿ ಹೇಳಿಸಿದವಳೇ ಅಲ್ಲ…. ಸಾಕಪ್ಪಾ ಸಾಕು…. ನಾನೀಗ ತಕ್ಷಣ ಹೊರಟು ಹೋಗುತ್ತೇನೆ…. ಮಾರ್ತಾ ಆಂಟಿ…. ನೀನು ಅಳಬೇಡ…. ಈಗೇನು ಮಾಡಲು ಸಾಧ್ಯ? ಎಲ್ಲ ನಮ್ಮ ನಮ್ಮ ಹಣೆಬರಹ… ಅಲ್ಲವೆ?” ಎಂದ.

ಆತ ಟೇಬಲ್ಲಿನ ಕೆಳಗಿರಿಸಿದ್ದ ತನ್ನ ಚಿಕ್ಕ ಸೂಟ್‌ಕೇಸು ಮತ್ತು ಚಿಕ್ಕಚೀಲವನ್ನು ಕೈಗೆತ್ತಿಕೊಂಡು ಬಾಗಿಲಿನತ್ತ ನಡೆಯತೊಡಗಿದ. ಇದ್ದಕ್ಕಿದ್ದಂತೆ ಚೀಲದಲ್ಲಿ ಊರಿನಿಂದ ಟೆರೇಸಿನಾಗೆಂದು ರುಚಿರುಚಿಯಾದ ಮಾದಳಹಣ್ಣುಗಳನ್ನು ತಂದಿರುವುದು ನೆನಪಾಯಿತು. ಚೀಲವನ್ನು ತೆರೆದು ಟೇಬಲ್ಲಿನ ಮೇಲೆ ಪರಿಮಳ ಬೀರುವ ಆ ತಾಜಾ ಹಣ್ಣುಗಳನ್ನು ಸುರುವಿದ.

“ಮಾರ್ತಾ ಆಂಟಿ… ಅವಳಿಗೋಸ್ಕರ ತಂದ ಈ ಹಣ್ಣುಗಳನ್ನು ಒಂದೊಂದಾಗಿ ನಾನು ಒಳಗೆ ಕೂತ ಆ ಸಜ್ಜನರ ತಲೆಗೆ ಹೊಡೆದರೆ ಹೇಗೆ?” ಎಂದ.

“ದಮ್ಮಯ್ಯ ಅಂತೀನಿ…. ದೇವರಾಣೆಗೂ ಹಾಗೆ ಮಾಡಬೇಡ…” ಎಂದವನಿಗೆ ಪುನಃ ಸುಮ್ಮನಿರುವಂತೆ ಸೂಚಿಸುತ್ತ ಮತ್ತಷ್ಟು ಅತ್ತಳು.

“ಇಲ್ಲ…. ನಾನು ಹಾಗೆಲ್ಲ ಮಾಡುವವನಲ್ಲ….” ಎಂದು ಖಾಲಿ ಚೀಲವನ್ನು ಕಿಸೆಗೆ ತುರುಕುತ್ತ ಮಿಕಶಿಯೋ ಮುಗುಳ್ಳಕ್ಕ. “ನಾನಿದನ್ನು ನಿನಗೋಸ್ಕರ ಬಿಟ್ಟುಹೋಗುತ್ತಿದ್ದೇನೆ ಮಾರ್ತಾ ಆಂಟಿ…. ನಿನಗೋಸ್ಕರ ಮಾತ್ರ…. ನೆನಪಿರಲಿ…. ಅವಳಿಗೆ ನೀನೇ ನನ್ನ ಪರವಾಗಿ ‘ಗುಡ್‌ಲಕ್’ ಹೇಳಿಬಿಡು” ಎಂದ.

ಮತ್ತೆ, ತನ್ನ ಸೂಟ್‌ಕೇಸನ್ನು ಎತ್ತಿ ಕೊಂಡು ಹೊರಟ. ಆದರೆ ಮೆಟ್ಚೆಲುಗಳ ಮೇಲೆ, ಒಂಥರಾ ದಿಕ್ಟೆಟ್ಪವನಂತೆ ಕಂಗಾಲಾದ. ತಾನೀಗ ಒಬ್ಬಂಟಿಯಾಗಿದ್ದೇನೆ – ರಾತ್ರಿಯಲ್ಲಿ ಯಾರೋ ಕ್ಬೆಕೊಟ್ಟ ಹಾಗೆ ಎಂದೆನಿಸಿತು. ಊರಿನಿಂದ ಇಷ್ಟು ದೂರವಿರುವ ಈ ದೊಡ್ಡ ಶಹರದಲ್ಲಿ ಯಾರೋ ತನ್ನನ್ನು ತಿರಸ್ಕರಿಸಿ ಅಪಮಾನಿಸಿದಂತೆ ಅನಿಸಿತು. ಬಾಗಿಲತನಕ ಹೋದವನಿಗೆ ಹೊರಗೆ ಮಳೆ ಸುರಿಯುತ್ತಿರುವುದು ಕಾಣಿಸಿತು. ಆದರೆ ಆತ ತನಗೆ ಅಪರಿಚಿತವಾಗಿರುವ ಬೀದಿಗಳಲ್ಲಿ ಅಂಥ ಮಳೆಯಲ್ಲೂ ಸಹ ನುಗ್ಗುವ ಧೈರ್ಯ ಮಾತ್ರ ಮಾಡಲಿಲ್ಲ. ಮೆಲ್ಲನೆ ಹಿಂದಿರುಗಿ, ಮೆಟ್ಟಿಲತನಕ ನಡೆದು ಮೊದಲ ಪಾವಟಿಗೆಯ ಮೇಲೆ ಕೂತ. ಅಲ್ಲಿ ತನ್ನ ಮೊಣಕೈಗಳನ್ನು ಎರಡೂ ಮಂಡಿಗಳ ಮೇಲಿಟ್ಟು, ತಲೆಯನ್ನು ಕೈಗಳ ಮೇಲೂರಿ ಮೌನವಾಗಿ ಅಳತೊಡಗಿದ.

ಊಟ ಮುಗಿದಿದ್ದೇ ಟೆರೇಸಿನಾ ಮತ್ತೆ ಚಿಕ್ಕಕೋಣೆಯಲ್ಲಿ ಹಾಜರಾದಳು. ಆದರೆ ಈ ಸಲ ತಾಯಿ ಒಬ್ಬಳೇ ಕೂತು ಅಳುತ್ತಿದ್ದಳು. ಅತ್ತ ಊಟಕ್ಕೆ ಕೂತವರ ಗುಂಪು ಗದ್ದಲವೆಬ್ಬಿಸುತ್ತ ಗಹಗಹಿಸುತ್ತಿತ್ತು.

“ಆತ ಹೊರಟುಹೋದನೆ?” ಅವಳು ಆಶ್ಚರ್ಯದಿಂದ ಕೇಳಿದಳು.

ಮಾರ್ತಾ ಆಂಟಿ ಹೌದೆಂಬಂತೆ ತಲೆಯಾಡಿಸಿದಳು. ಟೆರೇಸಿನಾ ಶೂನ್ಯದತ್ತ ಒಮ್ಮೆ ದಿಟ್ಟಿಸಿ ನಿಟ್ಬುಸಿರಿಟ್ಟಳು.

“ಇಲ್ಲಿ ನೋಡು…. ನಿನಗಾಗಿ ಆತ ಮಾದಳಹಣ್ಣುಗಳನ್ನು ತಂದಿದ್ದಾನೆ” ಎಂದಳು ತಾಯಿ.

“ಓಹ್…. ಎಷ್ಟು ಚೆಂದವಾಗಿವೆ!” ಎಂದು ಉಲ್ಲಾಸದಿಂದ ಟೆರೇಸಿನಾ ಉದ್ಗರಿಸುತ್ತ ಒಂದು ಕೈಯನ್ನು ಸೊಂಟದ ಮೇಲಿಟ್ಟು ಇನ್ನೊಂದರಿಂದ ಎಷ್ಟು ಸಾಧ್ಯವೋ ಅಷ್ಟು ಹಣ್ಣುಗಳನ್ನು ಎತ್ತಿ ಕೊಂಡಳು.

“ಬೇಡ…. ಅಲ್ಲಿ ತೆಗೆದುಕೊಂಡು ಹೋಗಬೇಡ” ಎಂದವಳ ತಾಯಿ ಬಲವಾಗಿ ವಿರೋಧಿಸಿದರೂ ಟೆರೇಸಿನಾ ತನ್ನ ಬೆತ್ತಲೆ ಭುಜಗಳನ್ನು ಹಾರಿಸುತ್ತ, “ಸಿಸಿಲಿಯ ಮಾದಳ ಹಣ್ಣು ಗಳು!…. ಸಿಸಿಲಿಯ ಮಾದಳ ಹಣ್ಣುಗಳು!” ಎಂದು ಚೀರುತ್ತಾ ದಿವಾನಖಾನೆಯೊಳಗೆ ಓಡಿಯೇಬಿಟ್ಟಳು.

CITRONS FROM SICILY
*****