ಟೋರಿಕೋ ಮನೆಯವರು ನನಗೆ ತುಂಬ ಸ್ನೇಹಿತರು, ಬೇಕಾದವರು. ಝಪೋತ್ಲಾನ್ ಊರಿನಲ್ಲಿ ಅವರನ್ನು ಕಂಡರೆ ಯಾರಿಗೂ ಆಗತಿರಲಿಲ್ಲ ಅನ್ನಿಸತದೆ. ನನ್ನ ಮಟ್ಟಿಗೆ ಹೇಳುವುದಾದರೆ ತುಂಬ ಒಳ್ಳೆಯ ಸ್ನೇಹಿತರು, ಅವರೆಲ್ಲ ಸಾಯವುದಕ್ಕೆ ಸ್ವಲ ಮುಂಚಿನವರೆಗೂ ಹಾಗೇ ಇದ್ದರು. ಝಪೋತ್ಲಾನ್ನಲ್ಲಿ ಅವರನ್ನು ಕಂಡರೆ ಆಗತಿರಲಿಲ್ಲ ಅನ್ನುವುದು ದೊಡ್ಡ ವಿಷಯ ಅಲ್ಲ. ನನ್ನ ಕಂಡರೂ ಆ ಊರಲ್ಲಿ ಯಾರಿಗೂ ಆಗತಿರಲಿಲ್ಲ. ಕೊಮಾದ್ರೆ ಬೆಟ್ತದ ಮೇಲಿದ್ದ ನಮ್ಮನ್ನು ಯಾರನ್ನು ಕಂಡರೂ ಝಪೋತ್ತಾನ್‍ನಲ್ಲಿದ್ದವರಿಗೆ ಆಗತಿರಲಿಲ್ಲ. ಬಹಳ ಹಿಂದಿನಿಂದಲೂ ಹೀಗೇ.

ಇತ್ತ ಕೊಮಾದ್ರೆ ಬೆಟ್ಟದಲ್ಲಿದ್ದ ಯಾರನ್ನು ಕಂಡರೂ ಟೋರಿಕೋ ಮನೆಯವರಿಗೆ ಆಗತಿರಲಿಲ್ಲ. ಯಾವಾಗಲೂ ಜಗಳ ಇದ್ದೇ ಇರತಿತ್ತು. ಬೆಟ್ಟದ ಎಲ್ಲಾ ಜಮೀನಿನ ಒಡೆಯರು ಅವರೇ, ಜಮೀನಿನಲ್ಲಿದ್ದ ಮನೆಗಳೂ ಅವರಿಗೇ ಸೇರಿದ್ದವು ಅಂದರೆ ಏನೂ ಹೇಳಿದ ಹಾಗಾಗಲಿಲ್ಲ. ಜಮೀನು ಹಂಚಿಕೊಟ್ಟಾಗ ಬೆಟ್ಟದ ಮೇಲಿದ್ದ ಜಮೀನೆಲ್ಲವನ್ನೂ ಅಲ್ಲಿದ್ದ ನಾವು ಅರುವತ್ತು ಜನಕ್ಕೂ ಸಮವಾಗಿ ಪಾಲು ಮಾಡಿಕೊಟ್ಟಿದ್ದರು. ಟೋರಿಕೋ ಮನೆಯವರಿಗೂ ನಮಗೆಲ್ಲ ಸಿಕ್ಕಷ್ಟೇ ಜಮೀನು ಸಿಕ್ಕಿತ್ತು. ಅದು ಬರೀ ಕತ್ತಾಳೆ ಬಯಲು. ಎಲ್ಲೋ ಅಲ್ಲೊಂದು ಇಲ್ಲೊಂದು ಮನೆ ಇದ್ದವು. ಹಾಗಾದರೂ ಇಡೀ ಕೊಮಾದ್ರೆ ಬೆಟ್ಟ ಟೋರಿಕೋ ಮನೆಯವರಿಗೆ ಸೇರಿತ್ತು. ನಾನು ಬೇಸಾಯ ಮಾಡುತಿದ್ದ ಜಮೀನು ಕೂಡ ಅವರಿಗೇ ಸೇರಿತ್ತು-ಓಡಿಲಾನ್ ಟೋರಿಕೋ ಮತ್ತೆ ರೆಮಿಜ್ಯೋ ಟೊರಿಕೋ ಅಣ್ಣ ತಮ್ಮಂದಿರಿಗೆ. ಅಲ್ಲಿಂದ ಕಾಣುತಿದ್ದ ಹತ್ತು ಹನ್ನೆರಡು ಪುಟ್ಟ ಗುಡ್ಡಗಳು ಕೂಡ ಅವರ ಜಂಟಿ ಒಡೆತನದ್ದೇ, ಅದನ್ನೆಲ್ಲ ಒತ್ತಿ ಹೇಳಬೇಕಾಗಿಲ್ಲ. ಇದು ಹೀಗೇನೇ ಅಂತ ಎಲ್ಲರಿಗೂ ಗೊತ್ತಿತ್ತು.

ಆ ಹೊತ್ತಿನಿಂದ ಒಬ್ಬೊಬ್ದರಾಗಿ ಹೋಗಿಬಿಡುತಿದ್ದರು. ಬೆಟ್ಟದ ತುದಿಯಲ್ಲಿ ದನಕರುಗಳು ಮುಂದೆ ಹೋಗಿ ಬೀಳದಿರಲೆಂದು ಹಾಕಿದ್ದ ಬೇಲಿಯನ್ನು ದಾಟಿ ಓಕ್ ಮರಗಳ ನಡುವೆ ಮಾಯವಾಗುತಿದ್ದರು. ಮತ್ತೆಂದೂ ಕಾಣುತಿರಲಿಲ್ಲ. ಹೋಗುತಿದ್ದರು, ಅಷ್ಟೇ.

ಒಬ್ಬರೂ ವಾಪಸು ಬರುವುದಕ್ಕೆ ಬಿಡದೆ ಇರುವಂಥದ್ದು ಬೆಟ್ಟದಾಚೆ ಏನಿದೆ ನೋಡಲು ಖುಷಿಯಾಗಿಯೇ ಹೋಗಿಬಿಡುತಿದ್ದೆ ನಾನೂ. ಆದರೆ ಬೆಟ್ಟದ ಮೇಲೆ ನನ್ನದಾಗಿ ಇದ್ದ ಜಮೀನಿನ ಮೇಲೆ ನನಗೆ ತುಂಬ ಪೀತಿ ಇತ್ತು. ಅಲ್ಲದೇನೇ ಟೋರಿಕೋ ಮನೆಯವರಿಗೆ ಒಳ್ಳೆಯ ಸ್ನೇಹಿತ ನಾನು.

ಪ್ರತಿ ವರ್ಷವೂ ನಾನು ಕಾಳು, ಮತ್ತೆ ಒಂದಿಷ್ಟು ಬೀನ್ಸು ಬೆಳೆಯುವ ಜಮೀನು ಬೆಟ್ಟದ ಮೇಲು ಭಾಗದಲ್ಲಿತ್ತು. ಅಲ್ಲಿಂದ ಮುಂದೆ ಇಳಿಜಾರು ಶುರುವಾಗಿ ಗೂಳಿ ತಲೆ ಅನ್ನುವ ಹೆಸರಿರುವ ಜಾಗದವರೆಗೂ ದೊಡ್ಡದೊಂದು ಕೊರಕಲು ಕಮರಿ ಇತ್ತು.

ಭೂಮಿ ಚೆನ್ನಾಗಿರಲಿಲ್ಲ ಅಂತಲ್ಲ. ಆದರೂ ಒಂದು ಮಳೆ ಬಂದರೆ ಮಣ್ಣು ಕೆದರಿ ಕೊಚ್ಚಿಹೋಗಿ ಗಲೀಜೆದ್ದು ಕಣ್ಣಿಗೆ ಬೀಳುತಿದ್ದ ಕಲ್ಲುಗಳು ಕಾಲಕ್ರಮದಲ್ಲಿ ಮರದ ಕಾಂಡಗಳ ಹಾಗೆ ಬೆಳೆದು ದೊಡ್ಡವಾಗುತ್ತಿವೆ ಅನಿಸುತಿತ್ತು. ಆದರೂ ಅಲ್ಲಿ ಬೆಳೆದ ಕಾಳಿಗೆ ಒಳ್ಳೆಯ ರುಚಿ ಇರುತಿತ್ತು. ಕಾಳು ಚೆನ್ನಾಗಿ ತೆನೆಕಟ್ಟುತಿದ್ದವು. ಟೊರಿಕೋ ಮನೆಯವರು ತಾವು ತಿನ್ನುವ ಧಾನ್ಯಕ್ಕೆಲ್ಲ ಮೆಕ್ಸಿಕನ್ ಸೌಳುಪ್ಪು ಸೇರಿಸುತಿದ್ದರು. ಗೂಳಿ ತಲೆ ಜಮೀನಿನಲ್ಲಿ ನಾನು ಬೆಳೆದ ಕಾಳಿಗೆ ಏನೂ ಹಾಕುತಿರಲಿಲ್ಲ. ಅಲ್ಲಿರುವ ತೆನೆಗೆ ಕೂಡ ಸೌಳುಪ್ಪು ಸೇರಿಸುವ ಮಾತು ಆಡುತ್ತಿರಲಿಲ್ಲ.

ಇದೆಲ್ಲ ಏನೇ ಇರಲಿ, ಅಲ್ಲಿ ಕೆಳಗೆ ಇರುವ ಹಸಿರು ಬೆಟ್ಟಗಳು ಇನ್ನೂ ಉತ್ತಮ. ಜನ ಮಾಯವಾಗುತ್ತಲೇ ಇದ್ದರು. ಅವರು ಯಾರೂ ಝಪೋತ್ಲಾನ್ ದಿಕ್ಕಿಗೆ ಹೋಗತಿರಲಿಲ್ಲ. ಓಕ್ ಮರಗಳ ಪರಿಮಳವನ್ನೂ ಬೆಟ್ಟಗಳ ಸದ್ದನ್ನೂ ಗಾಳಿ ಹೊತ್ತು ಬರುತ್ತದಲ್ಲ ಆ ದಿಕ್ಕಿಗೆ ಹೋಗುತಿದ್ದರು. ಸುಮ್ಮನೆ ಬಾಯಿ ಮುಚ್ಚಿಕೊಂಡು ಹೋಗಿಬಿಡುತಿದ್ದರು. ಏನು ಹೇಳದೆ ಯಾರ ಜೊತೆಗೂ ಜಗಳವಾಡದೆ ಸುಮ್ಮನೆ ಹೋಗಿಬಿಡುತಿದ್ದರು. ಟೆರಿಕೋಗಳು ಮಾಡುವ ಅನ್ಯಾಯವನ್ನ ವಿರೋಧ ಮಾಡಬೇಕು, ಹೋರಾಡಬೇಕು ಅನ್ನುವ ಆಸೆಯೇನೋ ಜನಕ್ಕೆ ಇತ್ತು. ಮನಸ್ಸಿರಲಿಲ್ಲ.

ಹಾಗೇ ಆಗಿದು.

ಟೆರಿಕೋ ಮನೆಯವರೆಲ್ಲ ಸತ್ತಮೇಲೆ ಕೂಡ ಜನ ವಾಪಸ್ಸು ಬರಲಿಲ್ಲ. ಕಾಯುತಲೇ ಇದ್ದೆ. ಒಬ್ಬರೂ ವಾಪಸ್ಸು ಬರಲಿಲ್ಲ. ಮೊದಲು ಅವರ ಮನೆಗಳನ್ನ ನೋಡಿಕೊಂಡೆ. ಸೂರು ರಿಪೇರಿ ಮಾಡಿ. ಗೋಡೆ ಎಲ್ಲೆಲ್ಲಿ ಹಾಳಾಗಿತ್ತೋ ಅಲ್ಲೆಲ್ಲ ಹೊಸ ಹಲಗೆ ಕೂರಿಸಿದೆ. ಯಾಕೋ ಬರಲಿಲ್ಲ, ಬಹಳ ತಡ ಮಾಡುತಾ ಇದ್ದಾರೆ ಅನ್ನಿಸಿ ಸುಮ್ಮನಾದೆ. ವರ್ಷದ ಮಧ್ಯೆ ಬರುತಿದ್ದ ಬಿರುಸು ಮಳೆ ಗಾಳಿ ಮಾತ್ರ ತಪ್ಪದೆ ಬರುತಿದ್ದವು. ಫೆಬ್ರವರಿ ತಿಂಗಳಲ್ಲಿ ಬೀಸುವ ಗಾಳಿ ಹಾಸಿಗೆ ಹೊದಿಕೆಗಳನ್ನೆಲ್ಲ ಹಾರಿಸಿಕೊಂಡು ಹೋಗುತಿತ್ತು. ಒಂದೊಂದು ಸಾರಿ ಅಂಬಾಗರೆಯುತಿದ್ದ ಹಸುಗಳನ್ನೂ ಗಾಳಿ ಹಾರಿಸಿಕೊಂಡು ಬರುತಿತ್ತು. ನಿರ್ಜನವಾದ ಪ್ರದೇಶಕ್ಕೆ ಬಂದೆವೇನೋ ಅನ್ನುವ ಹಾಗೆ ಹಸುಗಳು ಗೋಳುಕರೆಯುತಿದ್ದವು.

ಟೋರಿಕೋ ಮನೆಯವರು ಸತ್ತಮೇಲೆ ಹೀಗಿತ್ತು.

ಮೊದಲೆಲ್ಲ ಇಲ್ಲಿ, ಈಗ ನಾನೆಲ್ಲಿ ಇದೇನೋ ಅಲ್ಲಿ, ಕೂತರೆ ಝಪೋತ್ಲಾನ್ ಊರು ಕಾಣುತಿತ್ತು. ದಿನದ ಯಾವ ಹೊತ್ತಿನಲ್ಲಿ ಇಲ್ಲಿಗೆ ಬಂದರೂ ಅಗೋ ದೂರದಲ್ಲಿ ಚುಕ್ಕೆಯ ಹಾಗೆ ಕಾಣುತಿತ್ತು ಊರು. ಈಗ ಜಾರಿಲ್ಲಾ ಗಿಡ ದಟ್ಟವಾಗಿ ಬೆಳೆದಿವೆ. ಜೋರಾಗಿ ಗಾಳಿ ಬೀಸಿ ಗಿಡ ಅತ್ತ ಇತ್ತ ಹೊಯ್ದಾಡಿದರೂ ಆಚೆಗೆ ಇರುವ ಏನೂ ಕಾಣುವುದೇ ಇಲ್ಲ.

ಮೊದಲೆಲ್ಲ ಟೆರಿಕೋ ಅಣ್ಣ ತಮ್ಮ ಇಬ್ಬರೂ ಬಂದು ಇಲ್ಲೇ ಗಂಟೆಗಟ್ಟಲೆ, ಕತ್ತಲಳಿಯುವವರೆಗೆ ದಣಿವಿಲ್ಲದೆ ಸುಮ್ಮನೆ ನೋಡುತ್ತಾ ಕೂರುತ್ತಾ ಇದ್ದರು-ಆ ಬಯಲು ಅವರ ಮನಸ್ಸಿನಲ್ಲಿ ಆಲೋಚನೆಗಳನ್ನು ಹುಟ್ಟಿಸುತಿದೆ ಅನ್ನುವ ಹಾಗೆ, ಅಥವಾ ಝಪತ್ಲಾನ್ಗೆ ಹೋಗಿ ಖುಷಿಯಾಗಿ ಕಾಲ ಕಳೆಯುವ ಯೋಚನೆಯಲ್ಲಿದ್ದಾರೆ ಅನ್ನಿಸುವ ಹಾಗೆ ಇರುತಿದ್ದರು. ಅವರ ಮನಸ್ಸಿನಲ್ಲಿ ಅಂಥ ಯೋಚನೆ ಇರಲಿಲ್ಲ, ಬೇರೆ ಏನೋ ಇತ್ತು ಅನ್ನುವುದು ಆಮೇಲೆ ನನಗೆ ಗೊತ್ತಾಯಿತು. ಇಲ್ಲಿಂದ ಹಿಡಿದು ಪೈನ್ ಮರಗಳಿದ್ದ ಅರ್ಧಚಂದ್ರ ಆಕಾರದ ಬೆಟ್ಟದವರೆಗೂ ಇದ್ದ ಅಗಲವಾದ ಮರಳು ರಸ್ತೆಯನ್ನು ಮಾತ್ರ ದಿಟ್ಟಿಸುತ್ತಾ ಕೂರುತಿದ್ದರು.

ದೂರದಲ್ಲಿರುವುದನ್ನೆಲ್ಲ ರೆಮಿಜ್ಯೋ ಟೋರಿಕೋನಷ್ಟು ಚೆನ್ನಾಗಿ ಕಾಣಬಲ್ಲವರು ಯಾರನ್ನೂ ನಾನು ನೋಡಿಲ್ಲ. ಅವನು ಒಕ್ಕಣ್ಣ. ಉಳಿದುಕೊಂಡಿದ್ದ ಕಪ್ಪಾದ ಅರ್ಧ ಮುಚ್ಚಿದ ಒಂದು ಕಣ್ಣು ಎಷ್ಟು ದೂರದಲ್ಲಿರುವುದನ್ನೂ ಒಂದೇ ಮೊಳದಷ್ಟು ಹತ್ತಿರದಲ್ಲಿದೆಯೇನೋ ಅನ್ನುವ ಹಾಗೆ ಸ್ಪಷ್ಟವಾಗಿ ತೋರಿಸುತಿತ್ತು ಅವನಿಗೆ. ಅಲ್ಲಿ ಕೂತು ರಸ್ತೆಯ ಮೇಲೆ ಏನು ಹೋಗುತ್ತಿದೆ ಅನ್ನುವುದು ನೋಡುವುದು; ಇನ್ನೇನು, ನೋಡುವ ಒಂದು ಕಣ್ಣಿಗೆ ಅಂದವಾದವರು ಯಾರಾದರೂ ಕಂಡಾಗ ಇಬ್ಬರೂ ಅಣ್ಣ ತಮ್ಮಂದಿರು ಕೂತಿದ್ದ ಜಾಗದಿಂದ ಎದ್ದು ಒಂದಷ್ಟು ಕಾಲ ಕೊಮಾದ್ರೆ ಬೆಟ್ಟದಿಂದ ಮಾಯವಾಗುತಿದ್ದರು.

ಈ ಸುತ್ತಮುತ್ತಲಿನಲ್ಲಿ ಇರುವುದೆಲ್ಲವೂ ಮತ್ತಿನ್ನೇನೋ ಆಗಿ ಬದಲಾಗುತಿದ್ದಂಥ ದಿನಗಳು ಅವು. ಬೆಟ್ಟದ ಗುಹೆಗಳಲ್ಲಿ ಅಡಗಿಸಿಟ್ಟಿದ್ದ ತಮ್ಮ ಪ್ರಾಣಿಗಳನ್ನೆಲ್ಲ ಜನ ಕೊಟ್ಟಿಗೆಗೆ ತಂದು ಕಟ್ಟಿಕೊಳ್ಳುತಿದ್ದರು. ಜನದ ಹತ್ತಿರ ಕೋಳಿ ಇವೆ, ಕುರಿ ಇವೆ ಅನ್ನುವುದು ಗೊತ್ತಾಗುತ್ತ ಇದ್ದದ್ದೇ ಆವಾಗ. ಕಾಳಿನ ರಾಶಿ ಎಷ್ಪಿದೆ, ತರಕಾರಿ ಬೆಳಗಿನ ಹೂತ್ತು ಜನಗಳ ಮನೆಯ ಅಂಗಳದಲ್ಲಿ ಎಷ್ಟು ರಾಶಿಯಾಗುತ್ತವೆ ಸುಲಭವಾಗಿ ಗೊತ್ತಾಗುತಿತ್ತು. ಬೆಟ್ಟದ ಮೇಲಿಂದ ಬೀಸುವ ಗಾಳಿ ಮಿಕ್ಕ ದಿನಕ್ಕಿಂತ ತಣ್ಣಗಿರುತಿತ್ತು. ಆದರೂ ಹವಾಮಾನ ತುಂಬ ಚೆನ್ನಾಗಿದೆ ಅಂತ ಅಲ್ಲಿರುವ ಪ್ರತಿಯೊಬ್ಬರೂ ಯಾಕೆ ಅನ್ನುತಿದ್ದರೋ ಗೊತ್ತಾಗುತಿರಲಿಲ್ಲ. ಬೆಳಗಿನ ಜಾವದಲ್ಲಿ ಕೋಳಿ ಕೂಗುತಿದ್ದವು. ನೆಮ್ಮದಿಯಾಗಿರುವ ಎಲ್ಲ ಊರುಗಳ ಹಾಗೇ ಕೊಮಾದ್ರೆ ಕೂಡ ಇದೆ, ಇಲ್ಲಿ ಯಾವಾಗಲೂ ಶಾಂತಿಯೇ ಇತ್ತು ಅನ್ನಿಸುತಿತ್ತು.

ಆಮೇಲೆ ಟೊರಿಕೋ ಅಣ್ಣ, ತಮ್ಮ ವಾಪಸ್ಸು ಬರುತಿದ್ದರು. ಅವರು ಬರುವುದಕ್ಕೂ ಮೊದಲೇ ಗೊತ್ಟಾಗುತಿಟ್ತು. ಯಾಕೆ ಅಂದರೆ ಅವರ ನಾಯಿಗಳು ದಣಿಗಳನ್ನು ನೋಡುವುದಕ್ಕೆ ಓಡಿ ಬರುತಿದ್ದವು, ಅವರು ಕಣ್ಣಿಗೆ ಬೀಳುವವರೆಗೂ ಬೊಗಳುವುದು ನಿಲ್ಲಿಸುತಿರಲಿಲ್ಲ. ನಾಯಿ ಬೊಗಳುವ ಶಬ್ದ ಕೇಳಿಯೇ ಅವರು ಯಾವ ದಿಕ್ಕಿನಿಂದ ಬರುತ್ತಾ ಇದಾರೆ, ಎಷ್ಟು ದೂರ ಇದಾರೆ ಅನ್ನುವುದನ್ನು ಎಲ್ಲರೂ ಲೆಕ್ಕ ಹಾಕುತಿದ್ದರು. ಆಮೇಲೆ ಜನ ತಮ್ಮ ವಸ್ತುಗಳನ್ನೆಲ್ಲ ಮತ್ತೆ ಅಡಗಿಸಿ ಇಡುತಿದ್ದರು.

ಸತ್ತ ಟೋರಿಕೋ ಅಣ್ಣ ತಮ್ಮ ಒಂದೊಂದು ಸಾರಿ ಕೊಮಾದ್ರೆ ಬೆಟ್ಟಕ್ಕೆ ವಾಪಸ್ಸು ಬಂದಾಗಲೂ ಹೀಗೆ ಭಯ ಹುಟ್ಟಿಕೊಳ್ಳುತಿತ್ತು.

ನನಗೆ ಮಾತ್ರ ಅವರ ಬಗ್ಗೆ ಯಾವತ್ತೂ ಭಯ ಇರಲಿಲ್ಲ. ಇಬ್ಬರ ಜೊತೆಗೂ ನನಗೆ ಗೆಳೆತನ ಇತ್ತು. ಅವರು ಮಾಡುವ ಕೆಲಸದಲ್ಲಿ ನಾನೂ ಸೇರಿಕೊಳ್ಳುವುದಕ್ಕೆ ಆಗುವ ಹಾಗೆ ನನ್ನ ವಯಸ್ಸು ಸ್ವಲ್ಪ ಕಡಮೆ ಆಗಿದ್ದಿದ್ದರೆ ಚೆನ್ನಾಗಿರುತಿತ್ತು. ಅಂತ ಒಂದೊಂದು ಸಾರಿ ಅನ್ನಿಸುತಿತ್ತು. ನನ್ನಿಂದ ಅವರಿಗಂತೂ ಏನೂ ಉಪಯೋಗವಿರಲಿಲ್ಲ. ಕತ್ತೆಯ ಯಜಮಾನನನ್ನು ದರೋಡೆ ಮಾಡಲು ಅವರಿಗೆ ಸಹಾಯ ಮಾಡಲು ಹೋಗಿದ್ದೆನಲ್ಲ ಅವತ್ತು ಇದು ನನಗೆ ಗೊತ್ತಾಯಿತು. ನನ್ನಲ್ಲಿ ಏನೋ ಇಲ್ಲ ಅನ್ನುವುದು ತಿಳಿಯಿತು. ನನ್ನ ಬದುಕನ್ನೆಲ್ಲ ಆಗಲೇ ಮುಗಿಸಿಬಿಟ್ಟಿದೇನೆ ಅದನ್ನ ಇನ್ನೊಂದಷ್ಟು ಹಿಗ್ಗಿಸಿ ಎಳಯುವುದಕ್ಕೆ ಆಗದು-ಅದು ನನಗೆ ಗೊತ್ತಾಯಿತು.

ಮಳೆಗಾಲದ ಮಧ್ಯದಲ್ಲಿ ಒಂದು ಸಾರಿ ಟೋರಿಕೋ ಅಣ್ಣ ತಮ್ಮಂದಿರು ಸಕ್ಕರೆ ಮೂಟೆ ಸಾಗಿಸಲು ಸಹಾಯ ಮಾಡು ಅಂತ ನನ್ನ ಕರೆದರು. ನನಗೆ ಸ್ವಲ್ಪ ಭಯ. ಮೊದಲನೆಯದು, ಮಳೆ. ಕಾಲ ಕೆಳಗೆ ಹಳ್ಳ ತೋಡುತ್ತಿದೆ ಅನ್ನುವ ಹಾಗೆ ಮಳೆ ಸುರಿಯುತಿತ್ತು. ಮತ್ತೇನೂ ಅಂದರೆ ನಾನು ಎಲ್ಲಿಗೆ ಹೋಗುತ್ತಿದ್ದೇನೋ ಅದು ಗೊತ್ತಿರಲಿಲ್ಲ. ಅಂದುಕೊಂಡ ಹಾಗೆ ನಡೆಯುವುದಕ್ಕೆ ಆಗದು ಅನ್ನುವುದು ಆಗ ಗೊತ್ತಾಯಿತು.

ನಾವು ಹೋಗುತಿರುವ ಜಾಗ ದೂರವಿಲ್ಲ ಅಂದಿದ್ದರು. ‘ಇನ್ನೊಂದು ಕಾಲುಗಂಟೆ, ಅಲ್ಲಿರತೇವೆ,’ ಅಂದಿದ್ದರು. ನಾವು ಅರ್ಧ ಚಂದ್ರ ಆಕಾರದ ಬೆಟ್ಟದ ರಸ್ತೆ ತಲುಪಿದಾಗ ಕತ್ತಲಾಗುತಿತ್ತು. ಕತ್ತೆಯವನು ಇದ್ದ ಜಾಗಕ್ಕೆ ಹೋಗುವ ಹೊತ್ತಿಗೆ ರಾತ್ರಿ ಬಹಳ ಹೊತೇ ಆಗಿತ್ತು.

ಯಾರು ಬರುತ್ತಾರೆ ಅಂತ ಕತ್ತೆಯವನು ಕಾಯುತ್ತಿರಲಿಲ್ಲ. ಟೋರಿಕೋ ಅಣ್ಣ ತಮ್ಮ ಬರುವುದು ಅವನಿಗೆ ಗೊತ್ತಿತ್ತು ಅಂತ ಕಾಣತದೆ. ಅದಕ್ಕೇ ನಮ್ಮನ್ನು ಕಂಡು ಅವನಿಗೆ ಆಶ್ಚರ್ಯ ಆಗಲಿಲ್ಲ. ಹಾಗಂದುಕೊಂಡೆ ನಾನು. ನಾವು ಸಕ್ಕರೆ ಚೇಲಗಳನ್ನ ಸಾಗಿಸುತ್ತ ಇರುವಾಗ ಕತ್ತೆಯವನು ಹುಲ್ಲಿನ ಮೇಲೆ ಮೈ ಚೆಲ್ಲಿ ಅಲ್ಲಾಡದೆ ಮಲಗಿದ್ದ. ಅದಕ್ಕೇ ನಾನು ಅವರಿಗೆ ಅಂದೆ-

‘ಅಗೋ ಅಲ್ಲಿದಾನಲ್ಲ ಅವನು, ಸತ್ತು ಹೋಗಿದಾನೋ ಏನೋ ಅನ್ನಿಸತದೆ.’
‘ಇಲ್ಲಾ. ಮಲಗಿರಬೇಕು. ಇಲ್ಲೇ ಕಾದಿರು ಅಂತ ಅಂದಿದ್ದೆವು, ಕಾದು ಕಾದು ಬೇಜಾರಾಗಿ ಹಾಗೇ ಮಲಗಿ ನಿದ್ದೆ ಮಾಡಿರಬೇಕು,’ ಅಂದರು ಅವರು.

ನಾನು ಹತ್ತಿರ ಹೋಗಿ ಅವನನ್ನು ಎಬ್ಬಿಸುವುದಕ್ಕೆ ಪಕ್ಕೆಗೆ ಒದ್ದೆ. ಅವನು ಅಲ್ಲಾಡಲಿಲ್ಲ.
‘ಸತ್ತು ಹೋಗಿದಾನೆ,’ ಅಂತ ಮತ್ತೆ ಅಂದೆ.

‘ಇಲ್ಲಾ. ಆಟ ಕಟ್ಟತಾ ಇದಾನೆ. ಮರದ ತುಂಡು ತಗೊಂಡು ಓಡಿಲಾನ್ ಅವನ ತಲೆಗೆ ಹೊಡೆದ ಅಷ್ಟೆ, ಅವನಿಗೆ ಎಚ್ಚರ ತಪ್ಪಿರಬೇಕು. ಆಮೇಲೆ ಏಳತಾನೆ. ಸೂರ್ಯ ಹುಟ್ಟಿ ಸ್ವಲ್ಪ ಮೇಲೆ ಬಂದು ಬಿಸಿಲು ಬಿದ್ದರೆ ದಡಬಡ ಎದ್ದು ಮನೇಗೆ ಹೋಗತಾನೆ, ನೋಡತಿರು. ಈಗ ಆ ಚೀಲ ತಗೋ, ಹೋಗೋಣ,’ ಅಂತ ಅಂದರು.

ಕೊನೇಗೆ ಒಂದು ಸಾರಿ ನೋಡೋಣ ಅಂತ ಬಿದ್ದಿದ್ದವನನ್ನು ಮತ್ತೆ ಒದ್ದ. ಮರದ ಬೊಡ್ಡೆಗೆ ಒದ್ದ ಹಾಗೆ ಅನ್ನಿಸಿತು. ಮೂಟೆ ಬೆನ್ನ ಮೇಲೆ ಹೊತ್ತು ನಡೆದೆ. ಟೋರಿಕೋ ಅಣ್ಣ ತಮ್ಮ ನನ್ನ ಹಿಂದೆ ಬರುತಿದ್ದರು. ಬಹಳ ಹೊತ್ತು, ಬೆಳಗಿನ ಜಾವದವರೆಗೂ ಅವರು ಹಾಡುವುದು ಕೇಳುತಿತ್ತು. ಸೂರ್ಯ ಹುಟ್ಟುವ ಹೊತ್ತಿಗೆ ಅವರ ಹಾಡು ಕೇಳಿಸಲಿಲ್ಲ. ಬೆಳಗಿನ ಜಾವದ ಗಾಳಿ ಅವರು ಕಿರುಚುತಿದ್ದ ಹಾಡನ್ನು ಬೀಸಿಕೊಂದು ಹೋಗಿತ್ತು. ಎಲ್ಲಾ ದಿಕ್ಕುಗಳಿಂದಲೂ ನಾಯಿ ಬೊಗಳುವ ಸದ್ದು ಕೇಳುವ ತನಕ ಅವರು ನನ್ನ ಹಿಂದೆ ಬರುತಿದ್ದಾರೋ ಇಲ್ಲವೋ ಗೊತ್ತೇ ಆಗಿರಲಿಲ್ಲ.

ಕೊಮಾದ್ರೆ ಬೆಟ್ಟದ ಮೇಲಿದ್ದ ನನ್ನ ಮನೆಯ ಪಕ್ಕದಲ್ಲಿ ಕೂತು ಟೆರಿಕೋ ಅಣ್ಣ ತಮ್ಮಂದಿರು ದಿನವೂ ಅದೇನು ನೋಡುತಿದ್ದರು ಅನ್ನುವುದು ಹೀಗೆ ನನಗೆ ತಿಳಿಯಿತು.
* * *

ರೆಮಿಜ್ಯೋ ಟೊರಿಕೋನನ್ನು ಕೊಂದವನು ನಾನೇ.

ಆ ಹೊತ್ತಿಗೆ ಕೊಮಾದ್ರೆ ಬೆಟ್ಟದಲ್ಲಿ ಮುಂಜೂರಾಗಿದ್ದ ಜಮೀನುಗಳಲ್ಲಿ ಎಲ್ಲೋ ಸ್ಪಲ ಜನ ಮಾತ್ರ ಉಳಿದುಕೊಂಡಿದ್ದರು. ಮೊದಲು ಒಬ್ಬೊಬ್ಬರಾಗಿ ಬಿಟ್ಟು ಹೋಗುತಿದ್ದರು, ಆಮೇಲೆ ಗುಂಪು ಗುಂಪಾಗಿ ಹೋದರು. ಒಂದಷ್ಟು ದುಡ್ಡು ಮಾಡಿಕೊಂಡು, ಆಮೇಲೆ ಇಬ್ಬನಿ ಮುಸುಕಿದ ಕಾಲದಲ್ಲಿ ಗೊತ್ತಾಗದ ಹಾಗೆ ಮಾಯವಾಗುತಿದ್ದರು. ಕಳೆದ ಒಂದೆರಡು ವರ್ಷದಲ್ಲಿ ಒಂದೇ ರಾತ್ರಿಯ ಇಬ್ಬನಿ ಕಟಾವು ಮಾಡಿದ ವರ್ಷದ ಬೆಳೆಯನ್ನೆಲ್ಲ ನಾಶಮಾಡುತಿತ್ತು. ಆ ವರ್ಷವೂ ಹಾಗೇ ಆಗಿತ್ತು. ಅದಕ್ಕೇ ಜನ ಹೊರಟು ಹೋಗಿದ್ದರು. ಮುಂದಿನ ವರ್ಷವೂ ಹೀಗೇ ಇರುವುದು ಖಂಡಿತ ಅನ್ನಿಸಿತ್ತು ಜನಕ್ಕೆ. ವರ್ಷ ವರ್ಷವೂ ಹವಾಮಾನದ ಅನಾಹುತ, ಟೋರಿಕೋ ಅಣ್ಣ ತಮ್ಮಂದಿರು ವರ್ಷ ಪೂರ್ತಿ ಮಾಡುವ ಅನಾಹುತ ಇದನ್ನೆಲ್ಲ ಸಹಿಸುವುದಕ್ಕೆ ಆಗುವುದಿಲ್ಲ ಅನ್ನಿಸಿತ್ತು.

ಹೀಗಾಗಿ ನಾನು ರೆಮಿಜ್ಯೋ ಟೊರಿಕೋನನ್ನು ಕೊಂದಾಗ ಕೊಮಾದ್ರೆ ಬೆಟ್ಟ, ಮತ್ತೆ ಸುತ್ತಮುತ್ತಲ ಬೆಟ್ಟಗಳಲ್ಲಿ ಜನ ತೀರ ಇಲ್ಲವೇ ಇಲ್ಲ ಅನ್ನುವಷ್ಟು ಕಡಮೆಯಾಗಿದ್ದರು.

ಇದು ಆಗಿದ್ದು ಸುಮಾರಾಗಿ ಅಕ್ಟೋಬರ್ ತಿಂಗಳಲ್ಲಿ. ಆಕಾಶದಲ್ಲಿ ಚಂದ್ರ ದುಂಡಗೆ ದೊಡ್ಡದಾಗಿ ಕಾಣುತಿದ್ದ, ಪೂರಾ ಬೆಳದಿಂಗಳಿತ್ತು ಅಂತ ಕಾಣತದೆ. ಯಾಕೆ ಅಂದರೆ ಟೋರಿಕೋ ಬಂದಾಗ ನಾನು ಆಚೆ ಕಡೆ ಕೂತು ತೂತು ಬಿದ್ದಿದ್ದ ಗೋಣಿ ಚೀಲ ಹೊಲಿಯುತ್ತಾ ಇದ್ದೆ.

ಅವನು ಕುಡಿದಿರಬೇಕು. ಆ ಕಡೆ ಈ ಕಡೆ ವಾಲಾಡುತ್ತ ನನಗೆ ಬೇಕಾಗಿದ್ದ ಬೆಳದಿಂಗಳಿಗೆ ಅಡ್ಡವಾಗುತ್ತ ಪಕ್ಕಕ್ಕೆ ಸರಿಯುತ್ತ ಇದ್ದ.

ತುಂಬ ಹೊತ್ತಾದಮೇಲೆ ‘ಮೋಸ, ಕಪಟ ಸರಿಯಲ್ಲ. ಏನಿದ್ದರೂ ನೇರ ನೇರ ಇರಬೇಕು ನನಗೆ. ನೇರ ಇರುವುದು ನಿನಗೆ ಸೇರದಿದ್ದರೆ ಹೇಳು. ನಾನು ನಿನ್ನ ನೆಟ್ಟಗೆ ಮಾಡುವುದಕ್ಕೇ ಬಂದಿದೇನೆ,’ ಅಂದ.

ಚೀಲ ರಿಪೇರಿ ಮಾಡುತ್ತಲೇ ಇದ್ದೆ. ಬೆಳುದಿಂಗಳು ಪೂರಾ ಬೀಳುವಾಗ ದಬ್ಬಳದಲ್ಲಿ ಹೊಲಿಗೆ ಹಾಕುವುದು ಸಲೀಸಾಗುತಿತ್ತು. ತೇಪೆ ಹಾಕುವುದರಲ್ಲೇ ಮುಳುಗಿದ್ದರಿಂದ ಅವನು ಹೇಳಿದ್ದನ್ನು ಕಿವಿಗೆ ಹಾಕಿಕೊಂಡಿರಲಿಲ್ಲ.

ನಿನಗೇ ಹೇಳತಾ ಇದೀನಿ. ಯಾಕೆ ಬಂದಿದೇನೆ ಗೊತ್ತಿಲ್ಲವಾ?’ ಹುಚ್ಚನ ಹಾಗೆ ಚೀರಿದ.

ಅವನು ಇನ್ನೂ ಸ್ವಲ್ಪ ಮುಂದೆ ಬಂದು ನನ್ನ ಮುಖದ ಮುಂದೇನೇ ಮುಖ ಇಟ್ಟು ಕೂಗಿದಾಗ ನನಗೆ ಸ್ವಲ್ಪ ಭಯವಾಯಿತು. ಅವನ ಕೋಪ ಎಷ್ಟಿದೆಯೋ ನೋಡಬೇಕು ಅನ್ನಿಸಿತು. ಯಾಕೆ ಬಂದಿದ್ದೀಯ ಅಂತ ಕೇಳುವ ಹಾಗೆ ಅವನ ಮುಖ ನೇರವಾಗಿ ದಿಟ್ಟಿಸಿದೆ.

ಫಲ ಸಿಕ್ಕಿತು. ಸ್ವಲ್ಪ ತಣ್ಣಗಾದ. ನಿನ್ನಂಥವರ ಹತ್ತಿರ ಗೊತ್ತಾಗದ ಹಾಗೆ ಬಂದು ಹಿಡಿಯಬೇಕು ಅಂದ.

‘ನೀನು ಮಾಡಿದ ಕೆಲಸ ಅಂಥದ್ದು. ಈಗ ನಿನ್ನ ಹತ್ತಿರ ಮಾತಾಡತಾ ಇರುವಾಗ ಬಾಯಿ ಒಣಗತಿದೆ. ನೀನು ನನ್ನ ಸ್ನೇಹಿತ. ಅವನು ನನ್ನ ತಮ್ಮ. ಅದಕ್ಕೇ ನಿನ್ನ ಹತ್ತಿರ ಬಂದಿದೇನೆ. ಓಡಿಲಾನ್ ಹೇಗೆ ಸತ್ತ ಹೇಳು.’ ಅಂದ.

ಅವನ ಮಾತು ಚೆನ್ನಾಗಿ ಕೇಳುತಿತ್ತು. ಚೀಲ ಪಕ್ಕಕ್ಕಿಟ್ಟು ಮತ್ತಿನ್ನೇನೂ ಮಾಡದೆ ಅವನ ಮಾತು ಕೇಳಿಸಿಕೊಂಡೆ.

ಅವನ ತಮ್ಮನನ್ನು ಕೊಂದೆ ಅಂತ ನನ್ನನ್ನು ಬೈಯುತಿದ್ದಾನೆ ಅನ್ನುವುದು ಗೊತ್ತಾಯಿತು. ಅವನನ್ನು ನಾನು ಕೊಂದಿರಲಿಲ್ಲ. ಕೊಂದವರು ಯಾರು ಅನ್ನುವುದು ನನಗೆ ಜ್ಞಾಪಕವಿತ್ತು, ಅವನಿಗೂ ಅದನ್ನ ಹೇಳಬಹುದಾಗಿತ್ತು. ನಾನು ಮಾತಾಡುವುದಕ್ಕೆ ಅವಕಾಶವನ್ನೇ ಕೊಡುವುದಿಲ್ಲ ಅನ್ನಿಸಿತು.

ಟೊರಿಕೋ ಮಾತಾಡುತ್ತಾ ಇದ್ದ: “ಓಡಿಲಾನ್ ಜೊತೆ ನಾನು ಜಗಳ ಆಡುತಿದ್ದೆ. ಅವನಿಗೆ ಯಾವುದೇ ವಿಷಯ ಅರ್ಥವಾಗುವುದು ಕಷ್ಪವಾಗುತಿತ್ತು. ಎಲ್ಲರ ಜೊತೆಯಲ್ಲೂ ಜಗಳಕ್ಕೆ ಇಳಿಯುತಿದ್ದ. ಅಷ್ಟೇನೇ. ಅದರಾಚೆಗೆ ಇನ್ನೇನೂ ಇಲ್ಲ. ಎರಡೇಟು ಕೊಟ್ಟು, ಇಲ್ಲಾ ಎರಡೇಟು ತಿಂದು ಸುಮ್ಮನಾಗುತಿದ್ದ. ನನಗೆ ಗೊತ್ತಾಗಬೇಕಾದದ್ದು ಅದೇನೇ. ನಿನಗೆ ಏನಾದರೂ ಅಂದನಾ? ನಿನ್ನದೇನಾದರೂ ಎತ್ತಿಕೊಂಡನಾ? ಏನಾಯಿತು? ಅವನು ನಿನ್ನ ಹೊಡೆಯುವುದಕ್ಕೆ ಬಂದಿರಬೇಕು, ಇಲ್ಲಾ ನೀನೇ ಮೊದಲು ಅವನನ್ನ ಹೊಡೆದಿರಬಹುದು. ಇಂಥಾದ್ದು ಏನಾದರೂ ಆಗಿರಬೇಕು,’ ಅಂದ.

ಆ ವಿಚಾರಕ್ಕೂ ನನಗೂ ಸಂಬಂಧ ಇಲ್ಲ ಅನ್ನುವ ಹಾಗೆ ತಲೆ ಆಡಿಸಿದೆ.

ನನಗೆ ಮಾತಾಡುವುದಕ್ಕೆ ಬಿಡಲಿಲ್ಲ. ‘ಆವತ್ತು ಓಡಿಲಾನ್ ಅಂಗಿಯ ಜೇಬಿನಲ್ಲಿ ಹದಿನಾಲ್ಕು ಪೆಸೋ ದುಡ್ಡಿತ್ತು. ಅವನನ್ನ ಹೊತ್ತುಕೊಳ್ಳುವಾಗ ನೋಡಿದೆ. ಜೇಬಿನಲ್ಲಿ ದುಡ್ಡು ಇರಲಿಲ್ಲ. ನಿನ್ನೆ ನೀನು ಹೊಸ ಕಂಬಳಿ ಖರೀದಿ ಮಾಡಿದೆ ಅನ್ನುವುದು ಗೊತ್ತಾಯಿತು.’

ಅದು ನಿಜ. ಹೊಸ ಕಂಬಳಿ ತಂದಿದ್ದೆ. ಚಳಿ ಹೆಚ್ಚುತಿತ್ತು. ನನ್ನ ಕೋಟು ಚಿಂದಿಯಾಗಿತ್ತು. ಝಪೋತ್ಲಾನ್ಗೆ ಹೋಗಿ ಹೊಸ ಕಂಬಳಿ ತಂದಿದ್ದೆ. ಅದಕ್ಕೆ ಎರಡು ಕುರಿ ಮಾರಿದ್ದೆನೇ ಹೊರತು ಓಡಿಲಾನ್‍ನ ದುಡ್ಡು ಕೊಟ್ಟಿರಲಿಲ್ಲ. ಕುರಿಗೆ ನಡೆಯಲು ಆಗುತ್ತಿರಲಿಲ್ಲ ಅಂತ ಚೀಲದಲ್ಲಿ ಹಾಕಿಕೊಂಡು ಹೋಗಿದ್ದೆ, ಅದಕ್ಕೇ ಚೇಲವೆಲ್ಲ ತೂತು ಬಿದ್ದಿತ್ತು. ನೋಡಿದ್ದರೆ ಅವನಿಗೂ ಗೊತ್ತಾಗುತಿತ್ತು.

‘ಹೇಳತೇನೆ ಕೇಳು. ಓಡಿಲಾನ್ನ ಯಾರೇ ಕೊಂದಿರಲಿ, ಸುಮ್ಮನೆ ಬಿಡುವವನಲ್ಲ ನಾನು. ಕೊಂದಿದ್ದು ಯಾರು ಅನ್ನುವುದು ಗೊತ್ತು ನನಗೆ,’ ಅಂದ. ಅವನ ಮಾತು ನನ್ನ ತಲೆಯ ಮೇಲಿನಿಂದ ಕೇಳುತಿತ್ತು.

‘ಕೊಂದಿದ್ದು ನಾನೇ ಅನ್ನುತ್ತೀಯಾ?’

‘ಅಲ್ಲದೆ ಮತ್ತೆ ಇನ್ನು ಯಾರು? ಓಡಿಲಾನ್ ಮತ್ತೆ ನಾನು ಇಬ್ಬರೂ ನಿನಗೆ ಸಾಕಷ್ಟು ತೊಂದರೆ, ಕಷ್ಟ ಕೊಟ್ಟಿದೇವೆ. ನಾವು ಯಾರನ್ನೂ ಕೊಂದಿಲ್ಲ ಅಂತ ಹೇಳುವವನಲ್ಲ ನಾನು. ಇಷ್ಟು ಕಡಮೆ ದುಡ್ಡಿಗೆ ಮಾತ್ರ ಯಾರ ಪ್ರಾಣವನ್ನೂ ತೆಗೆದಿಲ್ಲ. ಅದನ್ನ ಮಾತ್ರ ಸತ್ಯಮಾಡಿ ಹೇಳತೇನೆ.’

ಅಕ್ಟೋಬರ್ ತಿಂಗಳ ದೊಡ್ಡ ಚಂದ್ರ ಕೊಟ್ಟಿಗೆಯ ಮೇಲೆ ಹೊಳೆಯುತಿದ್ದ. ರೆಮಿಜ್ಯೋನ ನೆರಳು ದೊಡ್ಡದಾಗಿ ನನ್ನ ಮನೆಯ ಗೋಡೆಯ ಮೇಲೆ ಬಿದ್ದಿತ್ತು. ಅವನು ಹಾಥೋರ್ನ್ ಪೊದೆಯ ಕಡೆ ಹೆಜ್ಜೆ ಹಾಕಿದ. ನಾನು ಯಾವಾಗಲೂ ಅಲ್ಲಿಟ್ಟಿರುತಿದ್ದ ಮಚ್ಚು ತೆಗೆದುಕೊಂಡ. ಮಚ್ಚು ಹಿಡಿದು ನನ್ನ ಹತ್ತಿರಕ್ಕೆ ಬಂದ.

ಅವನು ನನ್ನೆದುರಿನಿಂದ ಸರಿದಾಗ ಬೆಳದಿಂಗಳು ಜೇಲಕ್ಕೆ ನಾನು ಸಿಕ್ಕಿಸಿದ್ದ ದಬ್ಬಳದ ಮೇಲೆ ಬಿದ್ದು ಹೊಳೆಯಿತು. ಯಾಕೋ ಗೊತಿಲ್ಲ. ಆ ದಬ್ಬಳದ ಮೇಲೆ ತೀರ ವಿಶ್ವಾಸ ಹುಟ್ಟಿಬಿಟ್ಟಿತು. ಅದಕ್ಕೇ ರೆಮಿಜ್ಯೋ ಟೋರಿಕೋ ನನ್ನ ಹತ್ತಿರಕ್ಕೆ ಬರುತಿದ್ದ ಹಾಗೆ ನಾನು ತಡಮಾಡದೆ ಆ ದಬ್ಬಳದಿಂದ ಅವನನ್ನು ಹೊಕ್ಕುಳದ ಹತ್ತಿರ ತಿವಿದುಬಿಟ್ಟ. ಪೂರಾ ಒಳಕ್ಕೆ ಚುಚ್ಚಿಬಿಟ್ಟೆ. ದಬ್ಬಳ ಅಲ್ಲೇ ಉಳಿಯಿತು.

ಕಿಬ್ಬೊಟ್ಟೆ ನೋವು ಬಂದವರ ಹಾಗೆ ಮುಖ ಕಿವುಚಿ ಮುಂದೆ ಬಗ್ಗಿದ. ಇಷ್ಟಿಷ್ಟೆ ಕುಸಿಯುತ್ತ ಕುಕ್ಕರಿಸಿದ. ಮೈಯ ಶಕ್ತಿಯೆಲ್ಲ ಸೋರಿದ ಹಾಗೆ. ಕಣ್ಣಲ್ಲಿ ಭಯ ಕಂಡಿತು.

ಒಂದೇ ಒಂದು ಕ್ಷಣ. ಅವನು ಎದ್ದು ನಿಂತು ನನ್ನನ್ನು ಮಚ್ಚಿನಲ್ಲಿ ಹೊಡೆಯುತ್ತಾನೆ ಅನ್ನಿಸಿತ್ತು. ಮನಸ್ಸು ಬದಲಾಯಿಸಿದನೋ, ಏನು ಮಾಡಬೇಕು ಒತ್ತಾಗಲಿಲ್ಲವೋ ಮಚ್ಚು ಕೈ ಬಿಟ್ಟು ಮತ್ತೆ ಮುಂದಕ್ಕೆ ಬಗ್ಗಿದ. ಅಷ್ಟೇ ಅವನ ಕೈಯಲ್ಲಿ ಆಗಿದ್ದು.

ಅವನ ಮುಖದ ತುಂಬ ದುಃಖವಿತ್ತು. ಉಬ್ಬಳಿಕೆ ಬಂದವರ ಹಾಗೆ ಮುಖ ಮಾಡಿಕೊಂಡ. ಅಷ್ಟೊಂದು ದುಃಖವಿರುವ ಮುಖವನ್ನು ನೋಡಿ ಯಾವುದೋ ಕಾಲವಾಗಿತ್ತು. ನನ್ನ ಮನಸ್ಸಿನಲ್ಲಿ ಕರುಣೆ ಹುಟ್ಟಿತು. ಅದಕ್ಕೇ ಹೊಕ್ಕುಳದ ಹತ್ತಿರ ಚುಚ್ಚಿದ್ದ ದಬ್ಬಳವನ್ನು ಕಿತ್ತು ಸ್ವಲ್ಪ ಮೇಲೆ, ಅವನ ಎದೆ ಇದೆ ಅನ್ನಿಸಿದ ಜಾಗದಲ್ಲಿ ಚುಚ್ಚಿದೆ. ಅಲ್ಲೇ ಉಳಿಯಿತು ಅದು. ತಲೆ ಕತರಿಸಿದ ಕೋಳಿಯ ಹಾಗೆ ಎರಡು ಮೂರು ಸಾರಿ ಮೈ ಒದರಿದ. ತೆಪ್ಪಗಾದ.

ನಾನು ಮಾತಾಡುವ ಹೊತ್ತಿಗೆ ಅವನು ಸತ್ತಿದ್ದ ಅಂತ ಕಾಣುತ್ತದೆ:

‘ನೋಡು, ರೆಮಿಜ್ಯೋ-ನನ್ನ ಕ್ಷಮಿಸಿಬಿಡು. ಓದಿಲೋನ ನಾನು ಕೊಲ್ಲಲಿಲ್ಲ. ಕೊಂದಿದ್ದು ಅಲ್ಕಾರೆಸೆಸ್. ಓದಿಲೋ ಸತ್ತಾಗ ಅಲ್ಲೇ ಇದ್ದೆ. ಅವನನ್ನ ನಾನು ಕೊಲ್ಲಲಿಲ್ಲ. ಚೆನ್ನಾಗಿ ಜ್ಞಾಪಕ ಇದೆ. ಅಲ್ಕರಾಸ್ ಮನೆಯವರೆಲ್ಲ ಒಟ್ಟಾಗಿ ಸೇರಿ ಕೊಂದರು. ನನಗೆ ಅದು ಗೊತ್ತಾಗುವ ಹೊತ್ತಿಗೆ ಆಗಲೇ ಅವನು ಸಾಯತಿದ್ದ. ಯಾಕೆ ಗೊತ್ತ? ಓದಿಲಾನ್ ಝಪೋತ್ಲಾನ್ ಊರಿಗೆ ಹೋಗಬಾರದಾಗಿತ್ತು. ನಿನಗೂ ಅದು ಗೊತ್ತು. ಇವತಲ್ಲ ನಾಳೆ ಇಂಥದೇನಾದರೂ ಅವನಿಗೆ ಆ ಊರಲ್ಲಿ ಆಗುವುದಿತ್ತು. ನಿನ್ನ ತಮ್ಮ ಮಾಡಿದ ಎಷ್ಟೊಂದು ಕೆಟ್ಟ ಕೆಲಸಗಳನ್ನ ಎಷ್ಟೊಂದು ಜನ ಜ್ಞಾಪಕ ಇಟ್ಟುಕೊಂಡಿದ್ದರು ಅಲ್ಲಿ. ಅಲ್ಕಾರೆಸೆಸ್ ಮನೆಯವರಿಗೂ ಅವನನ್ನು ಕಂಡರೆ ಆಗತಿರಲಿಲ್ಲ. ಅವರ ವಿಚಾರಕ್ಕೆ ಅವನು ಯಾಕೆ ತಲೆ ಹಾಕಿದನೋ ನಿನಗೂ ಗೊತ್ತಿಲ್ಲ, ನನಗೂ ಗೊತ್ತಿಲ್ಲ.

‘ಎಲ್ಲಾ ದಿಢೀರಂತ ನಡೆದು ಹೋಯಿತು. ನಾನು ಹೊಸ ಕಂಬಳಿ ಖರೀದಿ ಮಾಡಿ ಹೊರಟಿದ್ದೆ. ಆಗ ನಿನ್ನ ತಮ್ಮ ಓದಿಲೋ ಬಾಯಿ ತುಂಬ ಮೆಸ್ಕಲಾ ಹೆಂಡ ತುಂಬಿಕೊಂಡು ಅಲ್ಕಾರೆಸಸ್ ಮೈ ಮೇಲೆ ಉಗುಳಿದ. ಅವನು ತಮಾಷೆಗೆ ಹಾಗೆ ಮಾಡಿದ್ದ. ಅಲ್ಲಿದ್ದವರೆಲ್ಲ ನಕ್ಕರು. ಎಲ್ಲಾರೂ ಕುಡಿದಿದ್ದರು-ಅಲ್ಕಾರೆಸ್, ಓದಿಲೋನ್, ಮತ್ತೆ ಎಲ್ಲರೂ. ಅವನ ಮೇಲೆ ಬಿದ್ದರು. ಚಾಕು ತೆಗೆದು ಚುಚ್ಚಿದರು. ಹೊಡೆದರು. ಓದಿಲೋ ಹಾಗೆ ಸತ್ತು ಹೋದ.

‘ನೋಡು. ಅವನನ್ನು ಕೊಂದಿದ್ದು ನಾನಲ್ಲ. ಅದು ನಿನ್ನ ಮನಸ್ಸಿಗೆ ಹೋಗಬೇಕು ನೋಡು.’

ಸತ್ತ ರೆಮಿಜ್ಯೋಗೆ ಇದೆಲ್ಲಾ ಹೇಳಿದೆ.

ಕಾಳು ತುಂಬವ ಹೆಡಿಗೆ ಹೊತ್ತುಕೊಂಡು ಮತ್ತೆ ಕೊಮಾದ್ರೆ ಬೆಟ್ಟಕ್ಕೆ ವಾಪಸ್ಸು ಬರುವ ಹೊತ್ತಿಗೆ ಚಂದ್ರ ಪೈನ್ ಮರಗಳ ಹಿಂದೆ ಮರೆಯಾಗಿದ್ದ. ಹೆಡಿಗೆಯನ್ನು ಎತ್ತಿಡುವ ಮೊದಲು ಅದಕ್ಕೆ ಮೆತ್ತಿದ್ದ ರಕ್ತ ಹೋಗಲಿ ಅಂದುಕೊಂಡು ಹೊಳೆಯ ನೀರಲ್ಲಿ ಅದ್ದಿ ಅದ್ದಿ ತಗೆದೆ. ಆ ಹಡಿಗೆಯನ್ನ ನಾನು ಬಳಸುವಾಗಲೆಲ್ಲ ಅದಕ್ಕೆ ಮೆತ್ತಿಕೊಂಡಿದ್ದ ರೆಮಿಜ್ಯೋನ ರಕ್ತ ನೋಡುವುದಕ್ಕೆ ಇಷ್ಟ ಇರಲಿಲ್ಲ.

ಇದೆಲ್ಲ ಆಗಿದ್ದು ಸುಮಾರಾಗಿ ಅಕ್ಟೋಬರ್ ತಿಂಗಳಲ್ಲಿ, ಝಪತ್ಲಾನ್ ಊರಿನ ಹಬ್ದದ ಹೊತ್ತಿನಲ್ಲಿ. ಅದು ಯಾಕೆ ಜ್ಞಾಪಕ ಇದೆ ಅಂದರೆ ಆ ಹೊತ್ತಿನಲ್ಲಿ ಝಪತ್ಲಾನ್‍ನಲ್ಲಿ ಪಟಾಕಿ ಹಚ್ಚುತಿದ್ದರು. ರೆಮಿಜ್ಯೋನ ಹೆಣ ಎಲ್ಲಿ ಎಸೆದೆನೋ ಅಲ್ಲಿ. ಒಂದೊಂದು ಪಟಾಕಿ ಶಬ್ಬ ಕೇಳಿದಾಗಲೂ ರಣ ಹದ್ದುಗಳ ಗುಂಪು ತಟ್ಟನೆ ಮೇಲೆ ಹಾರುತಿತ್ತು, ಮತ್ತೆ ಇಳಿಯುತಿತ್ತು.
*****
ಸ್ಪಾನಿಷ್ ಮೂಲ: ಹ್ವಾನ್ ರುಲ್ಫೋ Juan Rulfo
ಕಥೆ ಹೆಸರು : La cuesta de las comadres The Hill of the Mothers-in-law