ವಿ-ನಿಯೋಗ

ಕಾಮಂ ಕ್ರೋಧಂ ಪಿರಿದಾ ಧರೆಯೊಳು
ವ್ಯಾಮೋಹಂ ಪಿರಿದವನೀತದೊಳು ||
ವಂಚನೆಯುಂ ಡಂಬುಂ ಪುಸಿಯವರೊಳು
ಸಂಚಿತ ಪಾಪಂಗಳು ಮುಂಟುನರೊಳು ||
ದೇವಾ ಬಳಿಕಿಲ್ಲಿಗೆ ಬರಲುಂಟೇ
ದೇವಾ ಚರಣಮನೀಕ್ಷಿಪುದುಂಟೇ ‘
(ಹರಿಹರನ ರಗಳೆಯಿಂದ)
ಎನ್ನುವ ನೀನಾದವು, ತೆರೆತೆರೆಯಾಗಿ ತೇಲಿ ಆಕಾಶವನ್ನೆಲ್ಲ ದುಮು ದುಮಿಸಿಬಿಟ್ಟಿತು. ಗಿರಿ-ಶಿಖರ ಗಳನ್ನೇರಿ ಆ ಮೊಳಗು ಪ್ರತಿಧ್ವನಿಸಿತ್ತು ಆ ಆರ್ತನಾದವು ದರಿ-ಕೊಳ್ಳಗಳಿಗೂ ಇಳಿದು ನಿನಾದಿಸಿತು. ಅದರಿಂದ ವೇದ ಸಮಾಧಿಯಲ್ಲಿದ್ಧ ಬ್ರಹ್ಮನು ಎಚ್ಚತ್ತು ತಲೆ ಕೊಡಹಿದನು. ಕ್ಷೀರಸಾಗರದಲ್ಲಿ ಪವಡಿಸಿದ ವಿಷ್ಣುವಿನ ಸಕ್ಕರೆನಿದ್ದೆಯು ಕರಗಿ ತಿಳಿಯಾಗಲು ಆಕಳಿಸಿ ಚುಟಿಕೆಹಾಕಿದನು. ಶಿವನು ಮಾತ್ರ ತನ್ನ ಡಮರುವಿನ ತಾಳವಲ್ಲಿ ಹೆಜ್ಜೆಯಿಟ್ಟು ಕುಣಿಯುತ್ತ ಏನೂ ಕೇಳಿಸದಂತೆ ನಾಟ್ಯದಲ್ಲಿ ತಲ್ಲೀನನಾಗಿದ್ದನು. ಶಿವನ ನಾಟ್ಯವನ್ನು ನೋಡುವುದರಲ್ಲಿ ಮೈಮರೆತ ಪಾರ್ವತಿಯು ಬೊಬ್ಬಿರಿವ ಆ ಆರ್ತ ನಾದವನ್ನು ಕೇಳಿ ಎದೆಗರಗಿದಳು; ಕಕ್ಕಾವಿಕ್ಕಿಯಾಗಿ ಸುತ್ತಲು ನೋಡಿದಳು. ಗಾಬರಿಯಿಂದ ಆಕೆಯ ಮುಖವು ಬಿಳುಪಿಟ್ಟಿತು; ಕಂಗೆಟ್ಟಳು. ಆಕೆಗೆ ಏನೂ ತಿಳಿಯದಾಯಿತು. “ಪ್ರಭೋ” ಎಂದು ಹಲುಬಿದಳು; ‘ಶಂಕರಾ ‘ ಎಂದು ಗೋಳಿಟ್ಟಳು. ನಟರಾಜನ ಭಾವಸಮಾಧಿಯು ಒಂದಿಷ್ಟು ತಮ್ಮಣಿಗೊಂಡ ಬಳಿಕ ನಸು ಕಣ್ತೆರೆದು ನಿಟ್ಟಿಸಿದರೆ ಮುಂದೆ ನಿಂತ ಗೌರಿ ಮೊರೆಯಿಡುತ್ತಿದ್ಧಾಳೆ ! ಮಾಯೆಗೂ ಮಹಾಜನನಿಯಾದ ಗೌರಿಗೆ ಇನ್ನಾವ ಮಾಯೆ ಮುಸುಕಿತೆಂದು ಮೆಲ್ಲಡಿಯಿಡುತ್ತ್ತ ಆಕೆಯನ್ನು ಸಮೀಪಿಸಿ ಕೂಗಿದನು-” ಗೌರೀ ! ” “ಪ್ರ…ಭೋ”   ಎಂದಳು ಗೌರಿ ಮೆಲುದನಿಯಲ್ಲಿ. ” ಏನಾಯಿತು ? ಹೀಗೇಕೆ ವಿಕಾರವಶಳಾಗಿರುವಿ ? ” ” ಕೇಳಿಸಲೊಲ್ಲದೇ ನಿಮಗೆ? ತುಸು ಕಿವಿಗೊಟ್ಟು ಆಲಿಸಿರಿ. ” ಶಿವನು ಒಂದರೆ ನಿಮಿಷ ಕಿವಿನಿಮಿರಿಸಿ ಕೇಳಿದನು-
ಕಾಮಂ ಕ್ರೋಧಂ ಪಿರಿದಾ ಧರೆಯೊಳು
ವ್ಯಾಮೋಹಂ ಪಿರಿದವನೀತದೊಳು ||
” ಅಹುದು ! ಗೌರೀ! ಇದು ಭೂತಳದೊಳಗಿನ ನಿನ್ನ ಕೀರ್ತಿಭೇರಿ ! ”
“ಛೀ! ಆದೆಂಥ ಕೀರ್ತಿಭೇರಿ?” ಶೋಕಾರ್ತರ ಆರ್ತನಾದ! ತಿಳಿಯದೇ?”
” ಅಹುದು! ಅದೇ ನಿನಗೆ ಜಯಪತ್ರವಿದ್ದಂತೆ !! “

” ನಗೆಚಾಟಿಕೆಗೆ ಇದು ಸಮಯವಲ್ಲ. ಅಗೋ! ಅದೇ ಆರ್ತನಾದವನ್ನು ಮೊರೆಯುತ್ತ ಜೀವಜಂಗುಳಿಯೆಲ್ಲ ಕೈಲಾಸದ ಬಾಗಿಲಿಗೇ ಬಂದಿತು ! ನೋಡಿರಿ! ಆ ಜಂಗುಳಿಯಲ್ಲಿ ಹೆಣ್ಣು-ಗಂಡು, ಹುಡುಗರು, ಹಳೆಯರು ಎಲ್ಲರೂ ಇದ್ದಾರೆ. ಏನು ಸಮಾಚಾರ ? ಕೇಳಿಕೊಳ್ಳಿರಿ”

ಜೀವಜಂಗುಳಿಯು .ಕೈಲಾಸದ ಬಾಗಿಲನ್ನು ಸೇರುತ್ತಲೇ ಗೋಗರಿಯುವ ಹಾಡು ನಿಲ್ಲಿಸಿ, ” ಜಯಜಯ ನಮಃ ಪಾರ್ವತೀಪತೇ ಶಿವಹರಹರ ಮಹಾದೇವ” ಎಂದು ಉಗ್ಗಡಿಸಿ, ಶಿರಬಾಗಿ ನಿಂತುಕೊಂಡಿತು.

ಶಿವನು ಮೌನವಾಗಿಯೇ ತನ್ನ ಎರಡೂ ಕೈಗಳನ್ನೆತ್ತಿ ಎಲ್ಲರನ್ನೂ ಹರಿಸಿದನು. “

” ಈ ಜೀವಜಂಗುಳಿಯೆಲ್ಲ ಎತ್ತ ಸಾಗಬೇಕು ? ” ಎಂದು ಗೌರಿ ಕುತೂಹಲದಿಂದ ಕೇಳಿದಳು.

ಜೀವಜಂಗುಳಿಯೊಳಗಿನ ಒಬ್ಬ ಹಿರಿಯ ಮನುಷ್ಯನು ತನ್ನವರಿಗೆಲ್ಲ ಕುಳಿತುಕೊಳ್ಳುವುದಕ್ಕೆ  ಕೈಯೆತ್ತಿ ಸನ್ನೆಮಾಡಲು,  ಅವರು ಹಿರಿಯನ ಅಪ್ಪಣೆ ಯಂತೆ ನಿಂತಲ್ಲಿಯೆ ಕುಳಿತುಬಿಟ್ಟರು. ಬಳಿಕ ಹಿರಿಯ ಮನುಷ್ಯನು ಮುಗಿದ ಕೈಗಳೆರಡನ್ನೂ ಮುಂದೆ ಚಾಚಿ ತಲೆತಗ್ಗಿಸಿ ನಿಂತು, -” ಜನನೀ, ಈ ಜೀವ ಜಂಗುಳಿಯೆಲ್ಲ ಭೂಲೋಕದಲ್ಲಿ ಜನ್ಮತಾಳಬೇಕೆಂದು ವ್ರಭುವಿನ ಅಪ್ಪಣೆಯಾಗಿದೆ. ” .
” ಸಂತೋಷದ ವಿಷಯ. “

” ಯಾರಿಗೆ ತಾಯಿ ಸಂತೋಷದ ವಿಷಯ? ಭೂಲೋಕವೆಂದರೆ ನಮ್ಮೆದೆ ನಡುಗುತ್ತವೆ. ಅದರ ನೆನಪಾದರೆ ಚರಣ ಹಾರುತ್ತವೆ. ಬೇಡ ! ತಾಯೀ ಬೇಡ! ಆ ಕತ್ತಲೆಯಲ್ಲಿ ನಿನ್ನ ಈ ಕಂದಮ್ಮಗಳನ್ನು ಇಳಿಸಬೇಡ. ಆ ಕೊಳಚೆಯಲ್ಲಿ ನಿನ್ನ ಈ ಕೂಸುಗಳನ್ನು ತಳ್ಳಬೇಡ. ನೆಲವು ನರಕವಾಗಿದೆ. ಅಲ್ಲಿ ದುರ್ಗಂಧವಡಗಿದೆ. ಮನುಕುಲವೆಲ್ಲ ದನುಕುಲದಂತೆ ಒಬ್ಬರನ್ನೊಬ್ಬರು ತುಳಿಯುತ್ತಾರೆ. ಅಲ್ಲಿ ಕನಿಕರ ವೆಲ್ಲ ಕಾಣೆಯಾಗಿರುವದು. ಕೋಲಾಹಲವೇ ಜೀವನಾಧಾರನಾಗಿ ನಿಂತಿರುವದು. ಹೇಳುವವರಿಲ್ಲ, ಕೇಳುವವರಿಲ್ಲ. ಹೆರವರನ್ನು ಹಾಳುಗೆಡಹುವುದೇ ಬಾಳುವೆಯ ಬಿರುದಾಗಿದೆ. ಭೂಮಿ ಬರಡಾಗಿದೆ. ಮುಗಿಲು ಕಣ್ಣು ಕಿಸಿದಿದೆ. ಆಕಳು ಗೊಡ್ಡಾಗಿದೆ. ಸಜ್ಜನಿಕೆಯು ಹೇಳಹೆಸರಿಲ್ಲದಾಗಿದೆ. ರಸಿಕರು ತಲೆ ಮರೆಸಿಕೊಂಡಿದ್ದಾರೆ. ವಿಷ್ಣುವಿನ ಅಂಶದವರಾವ ರಾಜರು ಕಥೆಗಳಲ್ಲಿ ಮಾತ್ರ ಕೇಳ ಸಿಕ್ಕುತ್ತಾರೆ. ದ್ವೇಷಾಸೂಯೆಗಳಿಂದ ವಾತಾವರಣವು ದೂಸರಗೊಂಡಿವೆ. ಉಸಿರಾಟವು ಸಹ ದುಸ್ತರಗೊಳ್ಳುತ್ತಿದೆ. ದೀನ.ದರಿದ್ರರ ಕಣ್ಣೀರೇ ಕುಡಿನೀರು. ಸ್ವತಂತ್ರ್ರತೆಯು–ಸುಅತಂತ್ರ್ರತೆಗೆ ಕಾರಣ ವಾಗಿದೆ. ದೇವರ ಅವತಾರಕ್ಕೂ ಭೂತಳದವರು ದೊಡ್ಡ ಆತಂಕವನ್ನೊಡ್ಡಿ ದ್ದಾರೆ. ಪ್ರಭೋ, ನಮ್ಮ ಗತಿಯೇನು ? “

” ಕುಣಿಯಬಾರದವನು ಅಂಗಳ ಡೊಂಕು ಎಂದಂತೆ ” ಎಂದು ಶಿವನು ಮುಗುಳುನಗುತ್ತ ಕೊಂಕು ನುಡಿದನು.

” ಅದೇನು ತಂದೆ? ನೀನು ಬೇಕಾದಷ್ಟು ಸಾಕಾದಷ್ಟು ಕುಣಿಸು. ದ್ವಿಗುಣ-ಚೌಗುಣದಲ್ಲಿ ಕುಣಿಸು. ತಾಳಬಡಿದು ಹೆಜ್ಜೆಯಿಡಿಸು. ನೂರು ವರುಷದ ಆಯುಷ್ಯವನ್ನು ಒಂದು ಕ್ಷಣದಲ್ಲಿ; ಕಳೆದು ಬಂದೇವು; ಆದರೆ “ತಾಳ್ಯಾಕ ತಂತ್ಯಾಕ, ಹೆಜ್ಯಾಕ ಗೆಜ್ಯಾಕ’ ಎಂದು ಬಿಡದೆ, ಹಿಗ್ಗೀರೆ ನಡಿಸಾಕ ಕುಣಿಯೋಣ’ ಎಂದು ಗಂಟುಬಿದ್ಧರೆ ನಾವೇನು ಮಾಡೋಣ? ಒಂದಲ್ಲ, ಎರಡಲ್ಲ; ನೂರುವರುಷದ ಆಯುಷ್ಯವನ್ನು ಭೂಮಿಯ ಮೇಲೆ ಕಳೆಯಬೇಕಂತೆ! ಅದು ಹೇಗೆ ಸಾಧ್ಯ ದೇವಾ ? “

” ಕೊನೆಯದಾಗಿ ನಿಮ್ಮ ಅಭಿಪ್ರಾಯವೇನು: ಮಕ್ಕಳೇ?” ಎಂದು ಗೌರಿಯು ಕಕ್ಕುಲತೆಯಿಂದ ಕೇಳಿದಳು.

“ಕೈಲಾಸಬಿಟ್ಟು ನಮ್ಮನ್ನು ಒಂದು ಕ್ಷಣ ಸಹ ಕದಲಿಸಬೇಡಿರಿ! ಅಹುದು ತಾಯೀ, ಈ ಕೈಲಾಸಬಿಟ್ಟು ಒಂದು ಕ್ಷಣ ಸಹ ನಮ್ಮನ್ನು ಕದಲಿಸ ಬೇಡಿರಿ” ಎಂದು ಜೀವಜಂಗುಳಿಯೆಲ್ಲ ಏಕಕಾಲಕ್ಕೆ ಒಕ್ಕೊರಲಿನಿಂದ ಕೂಗಿ ಹೇಳಿತು.

” ನಿಮಗೆ ಬರಿಯ ಕೈಲಾಸವಾದರೆ ಸಾಕಲ್ಲವೇ ” ಎಂದು ಶಿವನು ಸಮಾಧಾನದಿಂದ ಕೇಳಿದನು.

ತಮ್ಮ ಪ್ರಾರ್ಥನೆಯನ್ನು ಸಾಂಬನು ಸಫಲಗೊಳಿಸುವನೆಂಬ ಹಿಗ್ಗಿನಿಂದ ಜೀನಜಂಗುಳಿಯು-“ಅಹುದು! ತಂದೇ! ನಮಗೆ ಕೈಲಾಸದ ಹೊರತು ಇನ್ನೇನೂ ಬೇಡ ” ಎಂಮ ಕೈಯೊಡ್ಡಿ ಮರು ನುಡಿಯಿತು.

ಗೌರಿಯು ಅವಸರದಿಂದ-” ಮಕ್ಕಳೇ, ಮೋಸಹೋಗುವಿರಿ. ಎಚ್ಚರ ದಿಂದ ಮರು ನುಡಿಯಿರಿ! ಇಲ್ಲಿ ಕೇಳಿರಿ – ನಿಮಗೆ ಕೈಲಾಸ ಬೇಕೆಂದಿರಿ, ಒಳ್ಳೆಯದಾಯಿತು. ಸಾಂಬನುಳ್ಳ ಕೈಲಾಸವೋ – ಬರಿಯ ಕೈಲಾಸವೋ ತಿಳಿಯಲಿಲ್ಲ;” ಎಂವಳು.

“ಜೀನಜಂಗುಳಿಯು ತಟ್ಟನೆ ತನ್ನ ತಪ್ಪು ತಿದ್ಧಿಕೊಳ್ಳುತ್ತ ಮರುನುಡಿಯಿತು. ಏನಂದರೆ-” ಸಾಂಬನುಳ್ಳ .ಕೈಲಾಸಬೇಕು ತಾಯೀ ! ಸಾಂಬನಿಲ್ಲದೆ ಬರಿಯ ಕೈಲಾಸವಿರಬಹುದೇ? ಸಾಂಬನಿರುವಲ್ಲೆಲ್ಲ ಕೈಲಾಸವೇ ಇರುತ್ತದೆ !”

” ಅಲ್ಲಿ ಸಲ್ಲುವವರು ಇಲ್ಲಿ ಸಲ್ಲುವರು, ಗೊತ್ತಿಲ್ಲವೇ?” ಎಂದು ಶಿವನು ತುಸು ಗಟ್ಟಿಸಿ ನುಡಿದನು.

” ಮಕ್ಶಳೇ! ಜೀನನವೆಲ್ಲವೂ ಶಿವನು ಹೂಡಿದ ಆಟ. ಆ ಆಟದಲ್ಲಿ ಶಿನನೂ ಇದ್ದಾನೆ. ನಾನೂ ಇದ್ದೇನೆ. ನೀವೂ ಇರಬೇಕು. ಆಟವೆಂದರೆ ಅಳುವ ಮಕ್ಕಳಿರಬೇಕೇ ? ” ಎಂದಳು ಪಾರ್ವತಿ.

ನಗಿಸುನ ಹಿಗ್ಗಿಸುವ ಆಟ ಯಾರಿಗೆ ಬೇಡ ? ಹಾಡಿಸುವ ಕುಣಿಸುವ ಆಟ ಯಾರಿಗೆ ಒಲ್ಲಾಗಿದೆ ? ಆದರೆ ” ದೆವ್ವ ಬಂತು ಓಡು ! ಗುಮ್ಮ ಬಂತು ಆಡಗು !! ” ಎನ್ನುವುದೊಂದೇ ಆಟವಾದರೆ ಅರಿಯದ ಮಕ್ಕಳು ಅದನ್ನು ತಾಳಬೇಕೆಂತು ?

“ತಾಯಿಯ ಮಡಿಲಲ್ಲಿ ಮಲಗಿದರೂ ಅಂಜಿ ಅಡ್ಡರಾಸುವ ಕೂಸಿನ ಆರೋಗ್ಯ ಸರಿಯಾಗಿಲ್ಲವೆಂದು ಧಾರಾಳವಾಗಿ ಹೇಳಲಿಕ್ಕೆ ಬರುತ್ತದೆ. ತಾಯಿ ಮುದ್ದಿಡುವಾಗ ರಕ್ಕಸಿ ನುಂಗುವಳೆಂದು ಬೊಬ್ಬರಿದರೆ ಗತಿಯೇನು ? ತಾಯಿ ಮೈದಡವ ಬಂದರೆ ಏಟುಕೊಟ್ಟು ಪಿಶಾಚಿ ಕೊಲ್ಲುವದೆಂದು ಅರಚಿದರೆ ಏನು ಮಾಡುವದು? ಕೂಸಿನ ಪ್ರಕೃತಿಯೇ ಸರಿಯಾಗಿಲ್ಲವೆನ್ನ್ವಬೇಕಾಗುವುದು.” ” ಅಹುದು ತಾಯೀ, ನಮ್ಮ ಪ್ರಕೃತಿಯನ್ನು ಸರಿಪಡಿಸಿ, ನಿಮ್ಮೊಡನೆ ಭೂತಳಕ್ಕೆ ಕರೆದೊಯ್ದರೂ ಬರುವೆವು. ಪಾತಾಳಕ್ಕೆ ಕರೆದೊಯ್ದರೂ ಬರುವೆವು. “

“ಓ! ಜನಜಂಗುಳಿಯೇ ಇಲ್ಲಿ ಕೇಳಿರಿ. ರಾಮೇಶ್ವರಕ್ಕೆ ಹೋದರೂ ಶನೀಶ್ವರ ಬಿಡುವದಿಲ್ಲ. ಈ ಗೌರಿ ಹೂಡಿದ ಮಾಟದಿಂದಲೇ ಭೂಲೋಕದಲ್ಲಿ ನಿಮಗೆ ಸಂಕಟ, ನೋವು, ಕಳವಳವುಂಟಾಗುತ್ತಿರುವದೆಂಬುದನ್ನು ಅರಿಯಿರಿ. ಮಂತ್ರಮಾಟದಿಂದ ಉಳಿದುಕೊಳ್ಳುನ ಉಪಾಯ- ವನ್ನು ಪಾರ್ವತಿಗೆ ಕೇಳುವ ದೆಂದರೆ ಕಳ್ಳನಿಗೆ ಹಾದಿ ಕೇಳಿದಂತೆ. ! ಮೋಸಕ್ಕೆ ಬೀಳುವಿರಿ. ಎಚ್ಚರದಿಂದ ವರ್ತಿಸಿರಿ ” ಎಂದು ಶಿವನು ಹುಸಿನಗೆಯೊಡನೆ ಪಿಸುನುಡಿದನು.

ಜೀವಜಂಗುಳಿಯ ಹಿರಿಯನು ಮುಂದುಗಾಣದೆ- ” ತಂದೇ! ಅಂಜು ವವರ ಮೇಲೆ ಕಪ್ಪೆ ಒಗೆಯುವಂತೆ ಮಾಡಬೇಡಿರಿ. ಹಾದಿತೋಚದೆ ಕಾಲಾಡಿ ಸುತ್ತ ನಿಂತ ನಮಗೆ ಸರಿಯಾದ ದಾರಿತೋರುವವರು ನೀವಲ್ಲದೆ ಇನ್ನಾರು ಗತಿ? ಅಡಿಗಡಿಗೂ ನಮಗೊದಗುವ ಅನೇಕ ಅಡೆ-ತಡೆಗಳನ್ನು ದಾಟುತ್ತ ಭೂಲೋಕದ ಬಾಳುವೆಯು ಹಿಗ್ಗಿನಾಟವಾಗಬೇಕಾದರೆ ನಾವು ಅದಾವ ಉಪಾಯ ಹೂಡಬೇಕಾ- ಗಿದೆಯೆಂಬುದನ್ನು ವಿವರಿಸಿರಿ” ಎಂದು ಸೆರಗೊಡ್ಡಿ ಕೇಳಿಕೊಂಡನು.

“ಹಾದಿಯನ್ನು ತಸ್ಬಿಸುವವರೇ ಹಾದಿತೋರಿಸಬಲ್ಲರು” ಎಂದು ನಕ್ಕನು ಶಿವನು.

“ನನ್ನ ಹಾದಿ ತಪ್ಪಿಸುವ “ನೀವು ನನಗೆ ಹಾದಿ ತೋರಿಸಿದರೆ, ನಾನು ಇವರಿಗೆ ಸರಿಯಾದ ದಾರಿತೋರಿಸಬಲ್ಲೆನು” ಎಂವಳು ಪರಮೇಶ್ವರಿ.

“ತಥಾಸ್ತು !” ಎಂದು ಶಿವನು ಹರಿಸಿದನು.

“ಮಕ್ಕಳೇ, ನಾನು ಹಾದಿ ತೋರಿಸುವವಳೆಂದರೆ, ಹಾದಿಯಲ್ಲಿ ಹೋದವರನ್ನು ತೋರಿಸಿಕೊಡುವವಳು. ಅದರಿಂದ ಹಾದಿ ಕಿರಿದಾಗಿದ್ದರೂ ವೇಗ ಹೆಚ್ಚಾಗುವದು. ಕಾಲು ದಣಿದರೂ ಬೇಸರವಾಗಲರಿಯದು. ದಿಕ್ಕು ತಪ್ಪಿ ಸುವ ಯಾವ ಬಲೆಯಲ್ಲಿ ನೀವು ಸಿಕ್ಕರೂ ಮೊದಲು “ಅವ್ವಾ!’ ಎನ್ನುವುದನ್ನು ಮರೆಯಬೇಡಿರಿ. ನಾನು ಹೇಳುವುದು ಇಷ್ಟೇ. ಈ ಹಾದಿಯಲ್ಲಿ ಸಾಕಷ್ಟು ನಡೆದು, ಸಾಕಷ್ಟು ಯಶಸ್ವಿಯಾಗಿ ಬಹುಜನರನ್ನು ನಡೆಯಿಸಬಲ್ಲವರು ಇಲ್ಲೇ ಕೈಲಾಸದಲ್ಲಿದ್ದಾರೆ. ಅವರು ಎಷ್ಟೋ ಸಾರೆ ಭೂತಳಕ್ಕೆ ಹೋಗಿಬಂದಿದ್ಧಾರೆ. ಯಾವಾಗ ಯಾವಾಗ ಎಲ್ಲೆಲ್ಲಿ ಜ್ಞಾನದ ಕಿರಣವು ಇಳಿಯಲಿಕ್ಕೆ ಶಕ್ಯವಾಯಿತೋ ಆವಾಗ ಆವಾಗ ಅನರೆಲ್ಲರೂ ನನ್ನೊಡನೆ ಪೃಥ್ವಿಗೆ ಬಂದವರು. ಭೂಮಿ ಹುಟ್ಟಿ ದಂದಿನಿಂದ ಈ ಕೆಲಸದಲ್ಲಿ ಅವರು ಭಾಗವಹಿಸುತ್ತಲೇ ಬಂದಿದ್ದಾರೆ. ಪರಮಾತ್ಮನ ವಿಜಯವನ್ನು ಭೂಮಿಯ ಮೇಲೆ ಸ್ಥಾಪಿಸುವ ಸಲುವಾಗಿ ಯುಗ ಯುಗಗಳಲ್ಲಿ ನಾನೆಲ್ಲರೂ ಅನೇಕಸಾರೆ ಕೂಡಿಕೊಂಡೇ ಹೋಗಿದ್ದೆವು. ಈಗ ಸಹ….”

ಶಿವನು ಗಹಗಹಿಸಿ ನಗುತ್ತ–“ಈಗ ಸಹ ಈ ಅವ್ವನವರು ಭೂಮಿಯ ಮೇಲೆಯೇ ಇಳಿದಿದ್ದಾರೆ. ಅದನ್ನು ಮರೆತರೆ……..” ಎಂದು ಹೇಳುವಷ್ಟರಲ್ಲಿ ಗೌರಿಯು-“ನೀವು ಮೌನ ಮುರಿಯುವ ಅವಶ್ಯಕತೆಯಿಲ್ಲ! ಸ್ವಲ್ಪ ತಡೆ ಯಿರಿ!!” ಎನ್ನುವ ಹೊತ್ತಿಗೆ ಶಿವನು ಬಾಗಿಲಿನಿಂದಾಚೆಗೆ ಹೋಗಿ ನಿಂತಿದ್ದನು. ಮತ್ತು ಪಾರ್ವತಿಗೆ ಹೇಳಿದ್ದೇನೆಂದರೆ-.”ಗೌರೀ, ನನ್ನ ಪಾಲಿನ ಕೆಲಸ ಮುಗಿಯಿತು. ನೀನು ನಿನ್ನ ಪಾಲಿನ ಕೆಲಸ ಮುಗಿಸಿ ಬಂದುಬಿಡು” ಎನ್ನುತ್ತ ತೆರಳಿದನು.

ಪಾರ್ವತಿಯು ಜೀವಜಂಗುಳಿಯನ್ನೆಲ್ಲ -“ಮಕ್ಕಳೇ, ಬಾಳ ಬಟ್ಟೆಯಲ್ಲಿ ಅತಿಶಯವಾದ ಅನುಭವ ಪಡೆದ ಕನ್ನಡ ನಾಡಿನ ಶರಣರು ಇಲ್ಲಿಯೇ ಇದ್ದಾರೆ. ಅಗೋ ಅಲ್ಲಿರುವ ಸಂಗನಬಸವನೇ ಅವರಿಗೆಲ್ಲ ಮುಂದು ಮುಖ. ಅವನಿಗೆ ಇನ್ನೂ ನಾಲ್ಕು ಮುಖಗಳಿವೆ. ಚೆನ್ನವಾವ ಒಂದು ಮುಖವಾದರೆ, ವ್ರಭುಮುಖ ಇನ್ನೊಂದು; ಸಿದ್ಧ ಮುಖ ಬೇರೊಂದು; ಅಕ್ಕನ ಮುಖ ಮಗುದೊಂದು. ಹೀಗೆ ಪಂಚಮುಖದ ಪರಮೇಶ್ವರನಂತೆ, ಅರ್ಧನಾರೀ ನಟೇಶ್ವರನಂತೆ ಒಪ್ಪುವ ಸಂಗಮಶರಣನು ಇಲ್ಲಿಯೇ ಇದ್ದಾನೆ. ಅವನು ಏಳುನೂರಾ ಎಪ್ಪತ್ತು ಅಮರಗಣಂಗಳ ಪ್ರತೀಕ- ನಾಗಿದ್ದಾನೆ. ಅವನು ಲಕ್ಷದ ಮೇಲೆ ತೊಂಬತ್ತಾರು ಸಾವಿರ ಗಣಾಧೀಶರಿಗೆ ಪ್ರತಿನಿಧಿಯಾಗಿದ್ದಾನೆ. ಸಂಗಮಶರಣನು ಭೂಮಿಯನ್ನು ಸ್ವರ್ಗಮಾಡುವ ವ್ರಯೋಗದಲ್ಲಿ ಯಶಸ್ವಿಯಾದವನು. ಕಾಯಕದಿಂದ ಭೂಮಿಯ ಮೇಲೆಯೇ ಕೈಲಾಸ ಕಟ್ಟಿದವನು. ಜೀವನನ್ನು ಶಿವನನ್ನಾಗಿ ಮಾರ್ಪಡಿಸಬಲ್ಲವನು. ಆ ಸಂಗಮಶರಣನಲ್ಲಿ ಬಸವನ ಭಕ್ತಿ ಅಳವಟ್ಟಿದೆಯಲ್ಲದೆ, ಚೆನ್ನಬಸವನ ಅರಿವು-ಆಚಾರವೂ, ಸಿದ್ಧರಾಮನ ಸಮತೆಯೂ ನೆಲೆಗೊಂಡಿವೆ. ಅದರಲ್ಲಿ ವ್ರಭುನಿನ ಅದ್ದೈತವೂ ಅಕ್ಕನ ವೈರಾಗ್ಯವೂ ಸಮನ್ವಯ ಗೊಂಡಿವೆ. ಅವನ ಹೆಸರು ಸಂಗಮಶರಣ. ಅವನು ಮಹಾನುಭಾವಿ; ಶರಣರ ಸಮಷ್ಟಿ ಪುರುಷನು. ಅವನನ್ನು ಕಂಡರೆ ನೀವು ನಿಮ್ಮ ಸರ್ವ ಸಂದೇಹಗಳನ್ನು ನಿವಾರಣೆ ಮಾಡಿಕೊಳ್ಳಬಲ್ಲಿರಿ. ಭೂಮಿಯ ಮೇಲೆ ಹೂಡಿದ ಶಿವನ ಆಟಕ್ಕೆ ನೀವೆ ಲ್ಲರೂ ಹಿಗ್ಗಿನಿಂದ ಹಾರುತ್ತ ಜಿಗಿಯುತ್ತ ಸೇರಿಕೊಳ್ಳಬಲ್ಲಿರಿ.

“ಸಂಗನಬಸವನೇ ಆ ಶರಣರಿಗೆಲ್ಲ ಮುಂದಾಳುವೆಂದು ಹೇಳಿದಿರಿ. ಅವನು ಎಂಥವನಿದ್ಧನು? ಅವನ ರೀತಿ-ನೀತಿಗಳಿಂತು? ತಮ್ಮ ಬಾಯಿಂದಲೇ ಕೇಳಬೇಕೆಂದು ಆಶಿಸುವೆನು. ದಯೆಯಿಟ್ಟು ಅದನ್ನು ಹೇಳಿಕೊಡಬೇಕು’ ಎಂದು ಜೀವಜಂಗುಳಿಯಿಂದ ಒಂದು ದನಿಯು  ಕೇಳ ಬಂದಿತು.

ಅದಕ್ಕೆ ಜಗಜ್ಜನನಿಯಾದ ಪರಮೇಶ್ವರಿಯು ಪಡಿನುಡಿದುದೇನಂದರೆ- ನನ್ನ ಭಾಷೆಯಿಂದ ಆ ಭಕ್ತಿಭಾಂಡಾರಿಯಾದ ಬಸವನನ್ನು ಏನೆಂದು ವರ್ಣಿಸಬಲ್ಲೆ? ಅಕ್ಕ ಮಹಾದೇವಿಯ ಶಬ್ಬಗಳನ್ನೇ ಬಳಸಿ, ಆತನನ್ನು ಈ ರೀತಿ ರೇಖಿಸಬಲ್ಲೆನು. ಹೇಗೆಂದರೆ-

      “ಬಸನಣ್ಣನು ಜಗಹಿತಾರ್ಥನಾಗಿ, ಬಾವನ್ನ ವಿವರವನೊಳಕೊಂಡು ಚರಿ
ಸಿದನದೆಂತೆಂದೊಡೆ ಗುರು ಕಾರುಣ್ಯವೇದ್ಯನು, ವಿಭೂತಿರುದ್ರಾಕ್ಷಿಧಾರಕನು,                                                                       ಪಂಚಾಕ್ಷರಿ ಭಾಷಾ  ಸಮೇತನು,

    ಲಿಂಗಾಂಗ ಸಂಬಂಧಿ. ನಿತ್ಯ ಲಿಂಗಾರ್ಚಕನು. ಅರ್ಪಿತದಲ್ಲಿ ಅವಧಾನಿ.
ಪಾದೋದಕ ಪ್ರಸಾದ ಗ್ರಾಹಕನು. ಗುರುಭಕ್ತಿ ಸಂಪನ್ನನು. ಏಕಲಿಂಗ ನಿಷ್ಠಾಪರನು.
ಚರಲಿಂಗ ಲೋಲುಪ್ತನು. ಶರಣಸಂಗಮೇಶ್ವರನು. ತ್ರಿವಿಧಕ್ಕಾಯತನು.
ತ್ರಿಕರಣ ಶುದ್ಧನು. ತ್ರಿವಿಧಲಿಂಗಾಂಗ ಸಂಬಂಧಿ. ಅನ್ಯದೈವಸ್ಮರಣೆಯ ಹೊದ್ದ,
ಭವಿಯ ಸಂಗವ ಮಾಡ. ಭವಿಪಾಕವ ಮುಟ್ಟ. ಪರಸ್ತ್ರೀಯರ ಬೆರಸ.
ಪರಧನವನೊಲ್ಲ ಪರೆನಿಂದೆಯನಾಡ, ಅನೃತವ ನುಡಿಯ. ತಾಮಸಭಕ್ತರ ಸಂಗವ ಮಾಡ.
ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನ ಮುಂತಾದೆಲ್ಲವ ಸಮರ್ಪಿಸಿ,

                                                                    ಪ್ರಸಾದ ಮುಂತಾಗಿ ಭೋಗಿಸುವ,
ಜಂಗನು ನಿಂದೆಯ ಸಹಿಸ ಪ್ರಸಾದ ನಿಂದೆಯ ಕೇಳ. ಅನ್ಯರನಾಶೆಗೆಯ್ಯ.
ಪಾತ್ರಸತ್ಪಾತ್ರವನರಿಯ. ಚತುರ್ವಿಧ ಪದ‌ವಿಯ ಹಾರ. ಅರಿಷಡ್ವರ್ಗಕ್ಕೆ ಅಳುಕ.
ಕುಲಾದಿಮದಂಗಳ ಬಗೆಗೊಳ್ಳ. ದ್ವೈತಾದ್ವೈತವ ನುಡಿವನಲ್ಲ,
ಸಂಕಲ್ಪ ವಿಕಲ್ಪವ ಮಾಡುವವನಲ್ಲ. ಕಾಲೋಚಿತವ ಬಲ್ಲ.
ಕ್ರಮಾಯುಕ್ತನಾಗಿ ಷಟ್‍‍ಸ್ಥಲ ಭರಿತ. ಸರ್ವಾಂಗಲಿಂಗ, ದಾಸೋಹ ಸಂಪನ್ನ.
ಇಂತೀ ಐವತ್ತೆರಡು ವಿಧದಲ್ಲಿ ನಿಪುಣನಾಗಿ ಮೆರೆವೆ ನಮ್ಮ ಬಸವಣ್ಣನು.”

“ಜಗಜ್ಞನನಿಯೇ, ತಮ್ಮ ಮುಂದೆ ತಮ್ಮ ಮಕ್ಕಳ ಹಿರಿಮೆ ಅದೆಂಥದು? ಶರಣರ ಮೇಲ್ಮೆ ಅದೆಂತು?”

ಪರಮೇಶ್ವರಿ ನಕ್ಕು ನುಡಿದಳು–
“ಸಮುದ್ರ ಫನನೆಂಬೆನೇ? ಧರೆಯ ಮೇಲಡಗಿತ್ತು.
ಧರೆ ಫನನೆಂಬೆನೇ? ನಾಗೇಂದ್ರನ ಫಣಾಮಣಿಯ ಮೇಲೆ ಅಡಗಿತ್ತು.
ನಾಗೇಂದ್ರ ಫನನೆಂಬೆನೇ? ಪಾರ್ವತಿಯ ಕಿರುಕುಣಿಯ ಮುದ್ರಿಕೆಯಾಗಿತ್ತು.
ಅಂಥ ಪಾರ್ವತಿ ಫನನೆಂಬೆನೇ? ಪರಮೇಶ್ವರನ ಅರ್ಧಾಂಯಾದಳು.
ಅಂಥ ಪರಮೇಶ್ವರ ಘನನೆಂಬೆನೇ? ನಮ್ಮ ಕೂಡಲ ಸಂಗನ ಶರಣರ ಮನದ ಕೊನೆಯ ಮೊನೆಯ

                                                                                                                ಮೇಲಡಗಿದನು.”

ಜೀವಜಂಗುಳಿಯೆಲ್ಲ ಅವನ್ನು ಕೇಳಿ,–“”ಜಯ! ಜಯ!! ಮಹಾ ತಾಯಿ!!! ನಿಮ್ಮ ಶರಣರಿಗೆ ಜಯವಾಗಲಿ” ಎಂದು ಒಕ್ಕೊರಲಿನಿಂದ ಉಗ್ಗಡಿಸಿ, ತಮ್ಮ ಸಂದೇಹಗಳನ್ನು ಒಬ್ಬೊಬ್ಬರಾಗಿ ಸಂಗಮಶರಣನ ಮುಂದಿಟ್ಟು ಮರುನುಡಿಯನ್ನಾಲಿಸುವುದಕ್ಕೆ ಸಜ್ಜುಗೊಂಡು ಕುಳಿತರು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭೂತ
Next post ನಗೆಡಂಗುರ-೧೪೧

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

cheap jordans|wholesale air max|wholesale jordans|wholesale jewelry|wholesale jerseys