ತಂದೆಗೆ ಪುಟ್ಟನು ಕೇಳಿದನು
ಕಲಿಸು ತನಗೆ ಈಜೆಂದನು
ಹಳ್ಳದ ದಂಡೆಯ ಬಾವಿಗೆ
ಹೋದರಿಬ್ಬರು ಜೊತೆ ಜೊತೆಗೆ
ತಂದೆಯು ಧುಮುಕಿ ಈಜಿದನು
ಪುಟ್ಟನು ಕುಳಿತು ನೋಡಿದನು
ತಂದೆಯು ಕೈಯ ಹಿಡಿದೆಳೆದು
ಸೊಂಟವ ಬಳಸಿ ನಡೆಸಿದನು
ಪುಟ್ಟನು ಮೊದಲು ಚೀರಿದನು
ಕೈ-ಕಾಲು ಬಡಿಯುತ ಆಡಿದನು
ಬಟ್ಟೆಯ ಒಣಗಿಸುತ ಕುಳಿತಿರಲು
ಬಂದಳು ನಾರಿ ನೀರು ಒಯ್ಯಲು
ಕೊಡವನು ತುಂಬಿಸುತ್ತಿರುವಾಗ
ಜಾರಿ ಬಿದ್ದಳು ಬಾವಿಯೊಳಗೆ
ಪುಟ್ಟು ಕೂಗಿ ಹೇಳಿದ ತಂದೆಗೆ
ಹೇಳು ಅವಳ ಬದುಕಿಸೊ ಬಗೆ
ಧುಮುಕಿ ಮೇಲೆ ತಾರೋ ತಂದೆ
ಇಲ್ಲ ನಾನೇ ಜಿಗಿವೆನು ಎಂದ
ನಿನಗೆ ಈಜು ಬಾರದು ಕಂದ
ನಸುನಗು ಬೀರಿ ಪಂಚೆಯ ತಂದ
ಬಾವಿಗೆ ಎಸೆದು ಹಿಡಿ ಹಿಡಿ ಎಂದ
ಮೇಲಕೆ ಎಳೆದು ಬದುಕಿಸಿ ನಿಂದ
ಮನೆಗೆ ಬರುವಾ ದಾರಿಯಲಿ
ಮುಟ್ಟು ಕೇಳಿದ ಅಪ್ಪನಲಿ
ನೀರಿಗೆ ಏತಕೆ ಹಾರದೆ ನೀನು?
ಪಂಚೆಯನೆಸೆದ ಕಾರಣವೇನು?
ಮುಳುಗುವರ ರಕ್ಷಣೆಗೆ ಹಾರಿದರೆ
ಜೀವ ಭಯದಿ ನಮ್ಮನು ಅಪ್ಪುವರು
ಅವರೊಂದಿಗೆ ನಾವೂ ಸಾಯುವೆವು
ಅದಕೀ ವಿಧಾನವನು ಬಳಸುವೆವು
ಅಪ್ಪನ ಮಾತನು ಕೇಳಿದ ಪುಟ್ಟು
ತಿಳಿದನು ಇದುವೆ ಅನುಭವದ ಗುಟ್ಟು
ಇಂತಹ ಕಥೆಗಳ ಹೇಳಿಸಿಕೊಳ್ಳುವೆನು
ಜೀವನ ಸಾರ್ಥಕಪಡಿಸಿಕೊಳ್ಳುವೆನು.
*****