ನಾಡ ಕುದುರೆ ದಾರಿ ತಪ್ಪಿ
ಕಾಡದಾರಿ ಹಿಡಿಯಿತು

ಊರದಾರಿ ಕಾಣದಾಗ
ಭಾರಿದಿಗಿಲು ಗೊಂಡಿತು

ದೂರದಲ್ಲಿ ಕಾಡು ಕುದುರೆ
ಇದನು ನೋಡಿ ನಕ್ಕಿತು

ನಕ್ಕ ಕುದುರೆ ಕಂಡು
ತಾನು ಧೈರ್ಯವನ್ನು ತಾಳಿತು

ನಾಡಕುದುರೆ ಬಂದ ಸುದ್ದಿ
ಪ್ರಾಣಿಗಳಿಗೂ ತಿಳಿಯಿತು

ಹೊಸಬನನ್ನು ನೋಡಲೆಂದು
ತವಕದಿಂದ ಬಂದವು

ಕುಂಟ ಕೋತಿ, ತುಂಟ ಜಿಂಕೆ
ಸೊಂಟ ಹಿಡಿದು ಕುಣಿದವು

ಆನೆ, ಒಂಟೆ, ಕರಡಿ, ಹುಲಿಯು
ಕೈ ಕೈ ಹಿಡಿದು ನಲಿದವು

ಕೋಗಿಲೆಯೊಂದು ಹಾರಿಬಂದು
ರಾಗದಿಂದ ಹಾಡಿತು

ಮೊಲವು ನರಿಯು ಕೂಡಿ ಬಂದು
ತಿಂಡಿ ಊಟ ತಂದವು

ನಾಡ ಕುದುರೆ ಎಲ್ಲರೊಡನೆ
ಪ್ರೀತಿಯಿಂದ ಬೆರೆಯಿತು

ಪ್ರೀತಿ, ಸ್ನೇಹ ಸಿಕ್ಕಲು
ತನ್ನ ಊರೆ ಮರೆಯಿತು.
*****