ಶತಮಾನಗಳ ಹಿಂದೆ
ಲಜ್ಜೆಯ ಮುದ್ದೆಯಾಗಿ
ಸಹನೆಗೆ ಸಾಗರವಾಗಿ,
ಕ್ಷಮೆಗೆ ಭೂಮಿಯಾಗಿ,
ತಾಳ್ಮೆಯ ಕೊಳ ತೊಟ್ಟು
ದೇವಿಯ ಪಟ್ಟ ಪಡೆದು,
ದಿನದಿನವೂ ಕತ್ತಲೆಯಲಿ
ಅಸ್ತಿತ್ವ ಅಳಿಸಿಕೊಂಡು
ಕನಸುಗಳ ಶೂಲಕ್ಕೇರಿಸಿ
ಹೊಟ್ಟೆಯಲ್ಲಿ ಕೆಂಡದುಂಡೆಗಳ
ಗಟ್ಟಿಯಾಗಿ ಕಟ್ಟಿಕೊಂಡಿದ್ದೆ.
ನಿಶ್ಯಬ್ದ ಮನದಲ್ಲಿ
ನೋಟವಿಲ್ಲದೇ ಕಲ್ಲಾದ
ಗಾಜಿನಂತಹ ಕಣ್ಣುಗಳಲಿ
ಶೂಲಕ್ಕೇರುತ್ತಿರುವ ಕನಸುಗಳು,
ನೀಲಿ ಆಕಾಶದಡಿಯಲ್ಲಿ
ಒತ್ತೆಯಿಟ್ಟಿರುವ ಹೂನಗೆ,
ಕಾಂತಿಯುಕ್ತ ಕಣ್ಣುಗಳನ್ನು
ಎಲ್ಲಿ ಹುಡುಕಲಿ?
ಬನ್ನಿ ನನ್ನ ಕಳೆದ ಸ್ವಾತಂತ್ರ
ಹುಡುಕಿ ಕೊಡ ಬನ್ನಿ.
ನನ್ನ ಮಾತುಗಳನ್ನು
ಯಾರು ನುಂಗಿದರು?
ನೇಣು ಹಾಕಿದರು ಹೇಳಬನ್ನಿ.
*****