ಎಂದಿನಂತೆ ಹೂವಯ್ಯ ಸಮಯಕ್ಕ ಸರಿಯಾಗಿ ತಮ್ಮ ಮನೀಂದ ಹೊರಗ ಬಿದ್ದರು. ಬರತಾ ದಾರಾಗ ದಣೀ ಮನಿ ಹೊಸ್ತಿಲಾ ಮುಟ್ಟಿ ಸಣ್ ಮಾಡೀನಽ ದಿನಾ ಕಚೇರಿಗೆ ಎಡತಾಕೋದು. ಹಂಗಂತ ಸ್ವಾತಂತ್ರ್ಯ ಸಿಕ್ಕು ಏಸ್ ವರ್‍ಷಾಗಿರಬಹುದು ಅನ್ನಾ ಲೆಕ್ಕಾ ಹಾಕಾಂಗಿಲ್ಲ. ಮುಂಜಾನಿಗೇ ಖಾರವಾದ ಎಳೆ ಬಿಸಿಲು ಆಫೀಸ ಗೇಟಿನ ನಡುವ ತೂರಿ ಬರಾಕಾರ ಒಳಗಿಂದ ಕಸ ಸಾಗಿಸೋ ಲಾರಿ ಬರ್ದಂಡು ರಸ್ತೆಗಿಳೀತು. ಆವಾಗಲೇ ಹೂವಯ್ಯ ಆಫೀಸ ಒಳಗ ಕಾಲಿಟ್ಟಿದ್ದರು.
ಪುರಸಭಾ ಮುಖ್ಯಾಧಿಕಾರಿಯಾಗಿ ಯಾವತ್ತೂ ಅವರು ವ್ಯಾಳ್ಯಾಕ್ಕ ತಪ್ಪಿಸಿದವರಲ್ಲ. ಆಫೀಸಿಗಂತೂ ಸೂಟು ಬೂಟುಗಳಿಲ್ಲದಾ ಬರೂದ ಇಲ್ಲ. ಇನ್ನಾ ಎಂಟ್ವರ್ಷ ಅಧಿಕಾರದಲ್ಲಿರಾಕ ಅವಕಾಶ ಇರೋ ಹೂವಯ್ಯಂದು ಐದಡಿ ಹತ್ತಂಗುಲಕ್ಕೆ ತಕ್ಕ ಕಾಯ.
ಬಂದು ಕುರ್ಚೇದ ಮ್ಯಾಲ ಕುಂಡ್ರತಾನಽ ಸಹಿಗಾಗಿ ಕಾದುಕುಳಿತ ಕಡತದಾಗ ಕಣ್ಣು ಹಾಯಿಸಿದರು. ಚೆಕ್ಕುಗಳಿಗೆ ರುಜು ಹಾಕುತ್ತಾ ಅವರು, ಹುಲಗಪ್ಪ ಮಾಮೂಲು ಸರೀಗೆ ಕೊಡಾದಿಲ್ಲ. ನಗದಿ ಇಟ್ಟ ಮ್ಯಾಲೆ ಆತನ ಚೆಕ್ಕು ವಿಲೇವಾರಿ ಮಾಡಾಕ ಗುಮಾಸ್ತಗ ತಿಳಿಹೇಳಿದರು.
ಪರಕಾಯ ಪ್ರವೇಶ ಮಾಡಿ, ಆ ಕುರ್ಚೇದ ಮ್ಯಾಲ ಕುಂತ್ರು ಅಂದ್ರೆ ಇಡೀ ಊರಾಗಳ ನಾಡಿ ಬಡಿತ ಅವರೊಳಗ ಸಮಾವೇಶ ಅಕ್ಕಿತ್ತು. ಕಾನೂನಿನ ತಳದಾಗ ತಮ್ಮ ಅಧಿಕಾರಾನ ಎಲ್ಲೆಲ್ಲಿ ಹೆಂಗೆಂಗ ಚಲಾಯಿಸಬೇಕು ಅಂಬೋದನ್ನ ಅರದು ಕುಡದವರು ಹೂವಯ್ಯ ಯಾರನೂ ಎದುರು ಹಾಕ್ಕೊಳ್ದಾಂಗ ಬೆಣ್ಣಾಗಿನ ಕೂದಲ ತೆಗೆಯೋ ಹಾಂಗಿನ ಮಾತಿನ ಒಳಗುಟ್ಟು ಬಲ್ಲೋರೆ ಬಲ್ಲರು. ಈ ಹೂವಯ್ಯ ನಸುಗುನ್ನಿಯಂಥವರು ಅನ್ನೋದು ದ್ಯಾಸಿಟ್ಟು ಅವರ ಕೆಲಸ ತಗೊಳ್ಳೋರು ಶಾಣ್ಯಾರಪ್ಪ! ಪಕ್ಕಾ ಅನುಭವಸ್ಥರಾಗಿ ದರವೊಂದು ಮಾತಿಗೂ ಎದುರಿದ್ದವರ ಬೆವರು ಇಳಿಸೊ ತಾಕತ್ತು ಅವರ ಹಂತೇಲಿ ಐತಿ, ಹಂಗಂತ ಮಾತಿನಾಗ ವೇಷ ಕಟ್ಟೋ ತರದೂದು ಇಲ್ಲೇ ಇಲ್ಲ. ಅದು ಅನಾಯಾಸ ರೊಕ್ಕಾ ತರೋ ವಿಚಾರ ಇರೋದ್ರಿಂದ ಮೂಗಿಗೆ ಕವಡೆ ಕಟಗೊಂಡು ಕೆಲಸ ನಿಭಾಯಿಸ್ತಿದ್ರು. ಖರೆ ಹೇಳಬೇಕಂದ್ರ ಹೂವಯ್ಯನೇರು ಹೆದರುಪುಕ್ಕಲು. ಆದರೂ ಅಧಿಕಾರಿಗಿರಬೇಕಾದ ನಿರ್ದಾಕ್ಷಿಣ್ಯತನದಿಂದ ಬಿಗುವಾದ ಆಡಳಿತ ಸಾಧ್ಯ ಆಗೇತಿ. ಕೆಲಸಕ್ಕೆ ಸೇರಿದ ಮೊದಲು ಸಣ್ಣಪುಟ್ಟ ತಪ್ಪುಗಳಿದ್ರೂ ಉರಿದು ಬೀಳ್ತಿದ್ದವರು. ಈಗೀಗ ರಾಜಕೀಯ ಬೀಸೋ ದಿಕ್ಕನ್ನ ಗುರುತಿಸಿ, ತೀರಾ ಬಣಜಿಗರಾಗಿ ಪಳಗ್ಯಾರ.
ಕಾಯೋ ಕೆಲಸದ ರಾಡಿ ಹಚ್ಚಿಕೊಳ್ಳಾಕ ಒಲ್ಲದ ಮಂದಿ ರೊಕ್ಕಾ ಚೆಲ್ಲಿ ತಕ್ಷಣ ಕೆಲಸ ಆಗಾಂಗ ನೋಡಿಕೊಳ್ತಾರ. ಅಂಥವರ ಜೋಡಿ ನಿಕ್ಕಿ ಮಾತಾಡಿ ಕೈ ಬೆಚ್ಚಗ ಆತಂದ್ರ ದೂಸರಾ ಮಾತಿಲ್ಲದಾ ಕೆಲಸ ನಡದು ಬಿಡತತಿ. ಮಂದಿ ಸಮಾಧಾನಕ್ಕ ಇದಕಿಂತ ಹೆಚಗೀ ಇನ್ನೇನು ಬೇಕು? ರೊಕ್ಕ ಬಿಚ್ಚಲಾರದ ಜನರನ್ನ ಕಾಯಿಸೋದು ಅಧಿಕಾರ ಚಲಾಯಿಸೋ ಹೂವಯ್ಯನವರ ಹಕ್ಕಾಗಿ ಬದಲಾಗ್ತದ.
ಹೂವಯ್ಯ ಮುಂಜಾನಿ ಮನಿಬಿಟ್ರ ಹೊಳ್ಳಿ ರಾತ್ರಿನ ಮನಿ ಕಾಣಾದು. ಇದರ ನಡಬರಕ ಬ್ಯಾರೆ ಬ್ಯಾರೆ ವ್ಯಕ್ತಿತ್ವಾ ಸಲೀಸಾಗಿ ತಮ್ಮ ಮ್ಯಾಲ ಆರೋಪಿಸಿಕೊಂಡು ಹಲವು ಆಯಾಮದಾಗ ಕೆಲಸ ಮಾಡಾ ಹಿಕಮತ್ತು ಗೊತ್ತಿತ್ತು. ತಾವು ಹಗಲು ಮಾಡಿದ್ದು ತಪ್ಪು ಅಂತ ರಾತ್ರಿ ಅನಸ್ತಿತ್ತು. ಹಂಗ ಅನಿಸೀನೂ ನಂಬಕಿ ಉಳಿಸಿಕೊಳ್ಳೋ ಭಂಡತನ ಅವರಲ್ಲಿತ್ತು. ಇವತ್ತು ಮುಂಜಾನಿಂದ ಮಂದಿಯ ಗಿಂಜು ಬಗಿಹರಿಸದ್ರಾಗ ಬೆಂವರಿಳಿದು ಹೋಗಿತ್ತು. ಪೌರಸಮಸ್ಯೆಗಳ ಮಿತಿ ಒಳಗ ಅಧಿಕಾರ-ಗೆಣತನದ ಬಣ್ಣಗಳು ತಾನತಾನ ಬದಲಿ ಆಗಿ ಆಗಿ, ಒಂದೀಟು ಹೊತ್ತು ಪತ್ರಿಕೆ ಹಿಡಿದು ಕುಂತಿದ್ದರು.
ನಡುಮಾರನಹಳ್ಳಿ ಶಿವಾನಂದಪ್ಪ ಮುಖಾಮುಖಿಯಾದಾಗ ಹನ್ನೊಂದಾಗಿರಬಹುದು. ಅವ್ರನ್ನ ಸಮಾಧಾನಿಸಿ ಸಾಗಹಾಕಾಕಾರ ಹೂವಯ್ಯನವರು ಎರಡು ನೂರು ಪೀಕಿಸಿಕೊಂಡಿದ್ದರು. ಬಡತನದ ಬಾಲ್ಯ; ಕಂತೀ ಭಿಕ್ಷಾ ಎತ್ತಿ ಜೀವಿಸಬೇಕಿದ್ದ ತಂದೆ ಇವನ್ನೆಲ್ಲಾ ಮೆಟ್ಟಿನಿಂತ ಈಗಿನ ಅಧಿಕಾರದಾಗ ಅಸೀಮ ಬದುಕಿಗೆ ಹಂಬಲಿಸಿದ್ದು ಹೂವಯ್ಯನವರ ತಪ್ಪಲ್ಲ. ತಮ್ಮ ನಗುಮುಖದ ಹಿಂದಕ ಸದಾ ಲಂಚದ ರೊಕ್ಕಾ ಕುಣಿಯೋದನ್ನ ಬಯಸ್ತಿದ್ದರು. ಯಾದ್ರಾಗ ಕೈ ಹಾಕಿದರೂ ಅವರದು ‘ಮೂರು ಕೊಟ್ರ ಆ ಕಡೀಗೆ, ಆರು ಕೊಟ್ರ ಈ ಕಡೀಗೆ’.
ಈಗ ಆರಾಮ ಸಿಗತು ಅನ್ನದ್ರಾಗ, ಹಲ್ಲುಗಿಂಜುತ್ತಾ ಬಂದ ಭಂಗಿ ಮುತ್ಯಾಲಪ್ಪ ಒಂದು ವಾರದ ರಜಾಕ್ಕ ಅರ್‍ಜಿ ಹಾಕ್ಕೊಂಡ. ಈ ಹೊತ್ತಿನ ಮುತ್ಯಾಲಪ್ಪನ ಹೊಟ್ಟ್ಯಾನ ಮಾತು ಹೂವಯ್ಯನೇರಿಗೆ ತಿಳೀಲಾರದ್ದೇನಲ್ಲ. ಅದೇ ಆಗ ತಿಂಗಳ ಪಗಾರ ಆಗಿತ್ತು. ಪಗಾರ ಖಾಲಿ ಆಗಬೇಕಂದ್ರ ಕುಡೀಬೇಕಿತ್ತು. ಕುಡೀಬೇಕಂದ್ರ ರಜಾ ಬೇಕಿತ್ತು ಅಷ್ಟಽ.
‘ಉಶ್ಶ್’ ಎನ್ನುತ್ತಾ ಮ್ಯಾಕೆದ್ದ ಹೂವಯ್ಯನವರು ನಡದಿಂದ ಇಳ್ಯಾಕ ಹತ್ತಿದ ಪ್ಯಾಂಟ ಏರಿಸಿಗ್ಯಂತ, ಆಫೀಸ ಪಾವಟಿಗಿ ಇಳಿದವರು ಎಂಕಣ್ಣನ ಗಾಡ್ಯಾಗ ಕುಂತರು. ಮರೀದಾಂಗ ಶಾಲಾ ಊಟದ ದೇಖರೇಖಿಗೆ ಹೊಂಟಾಗ ಮಟಮಟ ಮದ್ಯಾಣದ ಸೂರ್‍ಯ ನೆತ್ತಿ ಸುಡಾಕ ಹತ್ತಿದ್ದ.
ಊರಾಗಳ ಸರ್‍ಕಾರಿ ಶಾಲಾ ಮಕ್ಕಳ ಬಿಸಿಯೂಟದ ಉಸ್ತುವಾರಿ ಹೂವಯ್ಯನವರದೆ. ಮಾಲು ಜೋಡಿಸಿ ಅಡಿಗೆ ಮಾಡಿಸೋದ್ರಾಗ, ಉಣ್ಣೋ ಆಟಕ್ಕ ಹುಡುಗೂರನ ಅಣಿಮಾಡಿ ಸುಧಾರಿಸಾದ್ರಾಗ ಏಳು ಹನ್ನೊಂದಾಕ್ಕಿತ್ತು. ಈಟೆಲ್ಲಾ ತ್ರಾಸ ತಗೊಂಡ್ರೂ ದಿನದ ಸಾದಿಲ್ವಾರು ಬಾಬತ್ತು ನಿಕ್ಕಿ ಉಳಿಯಾದ್ರಿಂದ ಚಕಾರ ಇಲ್ಲದಾ ನಿಭಾಯಿಸುತ್ತಿದ್ದರು. ಅಡಿಗೆ ಮಾಡೋತಾವ ಅಡ್ಡಾಡಿ ಬರೋದ್ರಾಗ ಯಾಕಽ ಸುಸ್ತಾಗಿ ಹೋಗಿತ್ತು. ಮೂಡುಗಾಳಿ ಬ್ಯಾರೆ ಸುಂಯ್ ಅಂತ ಬೀಸಿತ್ತು. ಮೈಯೆಲ್ಲಾ ಬಿರುತು ಬಿರುಬಿಸಲಕ್ಕ ಉರಿಯಾಕ ಹತ್ತಿತ್ತು.
ಹಸಿದಿದ್ದ ಹೂವಯ್ಯ ನಡೂಕ ಪುರಸತ್ತು ಮಾಡಿಕೊಂಡು ತಂದಿರಿಸಿದ್ದ ಊಟ ಕತ್ತರಿಸಿ ಡೇಗಿದರು. ಈಗ ಅಳಾರು ಅನಿಸಿತು. ಜರದಾ ಬೀಡಾ ಜಕ್ಕೋಂತ ಯಾವುದೋ ಲೋಕದಾಗ ವಿಹರಿಸಾಕ ಹತ್ತಿದ್ದರು…
ಹೇಳದಾ ಕೇಳದಾ ಛೇಂಬರಿಗೆ ನುಗ್ಗಿದ ಉಸ್ಮಾನಸಾಬರು ತಾವು ರಿವೈಂಡ ಮಾಡಿದ ಸಬ್‌ಮರ್‍ಸಿಬಲ್ ಮೋಟಾರಿನ ಬಿಲ್ಲಿನ ಮ್ಯಾಲೆ ಪ್ರತಿಶತ ನಲ್ವತ್ತರ ತೂಕ ಇಳಿಸಿ ಚಕ್ಕು ಪಡೆದು ಹೊಂಟು ಹ್ವಾದರು. ಅದರ ಬೆನ್ನಿಗೇ ಶಬ್ದ ಮಾಡಿದ ಮೊಬೈಲ್‌ಗೆ ಹೂವಯ್ಯ ಕಿವಿಗಾವಲು ಇಟಗೊಂತಾನಽ ಪೀಕದಾನ್ಯಾಗ ಪಿಚಕ್ಕಂತ ಉಗುಳಿದರು. ಅತ್ತಾಗಿಂದ ಅಧ್ಯಕ್ಷರು ಆಫೀಸಿಗೆ ಬರೋದಾಗಿ ತಿಳಿಸಿ, ಅಲ್ಲೇ ಇರಾಕ ಹೇಳಿದರು.
ಈಗೀಗ ಹೂವಯ್ಯನವರು ಪ್ರಸಿಡೆಂಟರ ನೆರಳಿನಾಗ ಬಾಳುವೆ ಮಾಡಬೇಕಿತ್ತು. ಶಾಸಕರ ಅನುದಾನ, ಗ್ರಾಮೀಣ ಅಭಿವೃದ್ಧಿ, ಕೂಲಿಗಾಗಿ ಕಾಳು… ಒಂದ… ಎರಡಽ ಎಲ್ಲಾ ನಿಂತಿದ್ದು ಸ್ಯಾಂಕ್ಷನ್ ಮಾಡಿಸೋದು ಅಧ್ಯಕ್ಷರೇ. ಒಬ್ಬರ ಮುಲಾಜಿನಾಗ ಇನ್ನೊಬ್ಬರು ಇರಾಕ ಬೇಕಿತ್ತು.
ನೀನು ಶುದ್ಧ ಮನುಷಾ ಅನಿಸಿಗೋ ಬೇಕಾದರ ಊರ ಜನರಿಂದ ಒಂದು ಪೈಸಾನೂ ಮುಟ್ಟಬಾರದು. ನಾ ಹೀಂಗಂತೀನಿ ಅಂತ ಬೇಜಾರಾಗಬೇಡ ಸ್ವಾಮಿ’ ಎಂಬ ಗಂಭೀರ ಹೇಳಕಿ ಮುಂದುವರಿಸಿ ಅಧ್ಯಕ್ಷರು,
‘ನಾವು ಮಂದಿ ಮುಲಾಜಿನಾಗ ಬದುಕೋರು, ನಮಗ ಅವರ ಓಟು ಬೇಕು. ನೀವೇನಿದ್ದರೂ ಅಭಿವೃದ್ಧಿ ಯೋಜನೆ, ಸರ್ಕಾರಿ ಅನುದಾನದಾಗ ನೋಡಾಬೇಕು’ ಎಂದು ತಾಕೀತು ಮಾಡಿದ್ದರು. ಆದರ ಘನ.. ಸರ್ಕಾರದಾಗಿದ್ದೂ ಕಳ್ಳಗಂಟು ಮಾಡಲಿಲ್ಲಾಂದ್ರ ಮಂದಿ ‘ಸೂಗ’ ಅಂದಾರು. ಯಾರಿಗೂ ತಮ್ಮ ಜಾಡು ಹತ್ತಗೊಡದಾಂಗ ತುಡುಗುಣಿ ಮಾಡೋದು ಹೂವಯ್ಯಗ ಯಾರೂ ಕಲಿಸಿಕೊಡಬೇಕಾಗಿರಲಿಲ್ಲ. ಮೌನದಾಗ ಅಧ್ಯಕ್ಷರ ಮಾತಿಗೆ ಗೋಣು ಆಡಿಸಿದ್ದರು.
ಒಳಗಡಿಗೆ ಅಧ್ಯಕ್ಷರು ಇರಾಗಂಟ ಯಾರನೂ ಬಿಟ್ಟಿರಲಿಲ್ಲ. ಅಲ್ಲಿ ಯಾವ್ಯಾವ ಮಸಲತ್ತು ನಡೀತು ಅನ್ನೋದು ರಾಜಕೀಯದ ಒಳಗುಟ್ಟು… ಗಟ್ಟಿಸಿ ಆಡಾಂಗಿಲ್ಲ. ಅನ್ನಾಂಗಿಲ್ಲ! ಅವರು ಹೊಂಟು ಹೋಗುತ್ತಲೇ ನಾನು, ನಮ್ಮಕ್ಕ ಒಳಗೆ ಪಾದ ಇಟ್ಟೆವು.
ನಮ್ಮಕ್ಕ ಭಾವ ಬಹಳ ಹಿಂದಕ್ಕೆ ಸ್ವಂತ ಮನಿ ಕಟ್ಟಿಸಿದ್ದರು. ಈಗ ನಾಕಾರು ವರ್ಷದ ಹಿಂದೆ ಭಾವ ಲಿಂಗೈಕ್ಯರಾಗಿದ್ದರು. ಅವರ ಮನೆ ಮುಂದಲ ಐದಡಿ ಮೂವತ್ತಡಿ ಖಾಲಿ ಜಾಗ ಸರ್‍ಕಾರಕ್ಕೆ ಸೇರಿದ್ದು ಇತ್ತು. ಅದಕ್ಕೆ ಇಪ್ಪತ್ತು ಸಾವಿರ ತಳ್ಳಿದರ ನಿಮ್ಮ ಹೆಸರೀಲೆ ಮಾಡಿಕೊಡ್ತೀವಿ ಅಂತ ಹೂವಯ್ಯ ಹೇಳಿಕಳಿಸಿದ್ದರು. ಅಕ್ಕನ ಮನೆಯವರು ಅಷ್ಟು ಹಣ ತುಂಬಿಕೊಡೋ ಸ್ಥಿತಿಯಾಗ ಇರಲಿಲ್ಲ.
ಕೈಮುಗಿದು ಬಂದ ಕಾರಣ ಹೇಳಿದೆ. ಹೂವಯ್ಯ ಕುಂಡ್ರಾಕ ಹೇಳಿದರು. ‘ನೋಡ್ರಿ, ಒಂದು ವಾರದಾಗ ಹಣ ತರಬೇಕು. ನಿಮ್ಮ ಆಜೂಬಾಜೂ ಮನೆಯವರು ಆಗಲೇ ಕೊಟ್ಟಾರ. ನೀವೂ ಕಟ್ಟಿದರ ಮೂವರಿಗೂ ಒಂದೇ ದಿನದಾಗ ಮಾಡಿಸಿಕೊಡ್ತೀವಿ’ ಎಂದು ಅಪ್ಪಣೆ ಮಾಡಿದರು.
ನನಗ ಚಿಂತಿ ಇಟಗೊಂತು. ಏನು ಹೇಳಾಕೂ ತೋಚಲಿಲ್ಲ. ಇಬ್ಬರಿಗೂ ಚಹ ತರಿಸಿಕೊಡುವಲ್ಲಿ ವ್ಯಾಪಾರಿ ಹಿಕಮತ್ತು ಅಡಗಿತ್ತು. ನಾವಲ್ಲ ಕೂತಾಂಗನ ಹೂವಯ್ಯ ನಾಕಾರು ಬಾರಿ ಮೊಬೈಲದಾಗ ಮಾತಾಡಿದ್ದರು, ನಡನಡುವ ನಮಗೂ ಉತ್ತರಾ ಕೊಡತಿದ್ದರು. ಒಂದು ಸಲಕ್ಕೆ ಎರಡೂ ಕಡಿಗೆ ನಿಭಾಯಿಸೋ ಛಾತಿ ಅವರಿಗಿತ್ತು.
‘ಅಷ್ಟೊಂದು ಹಣ ತುಂಬಾ ತಾಕತ್ತು ನಮಗೆಲ್ಲೈತ್ರಿ ಸರ್. ಸರ್ಕಾರ ನಿಗದಿ ಮಾಡಿದ ಆರು ಸಾವಿರ ತುಂಬಾಕ ತಯಾರದೀವಿ. ಇಲ್ಲಾಂದ್ರ ಹಂಗಽ ಬಿದ್ದಿರ್‍ಲಿ ಬಿಡಿ’ ಎಂದು ಕೈ ಕೊಡವಿ ಸುಮ್ಮಕಾದೆ.
ಒಪ್ಪಾರಿ ಮಕ ಗಡಸು ಮಾಡಿಕ್ಯಂಡ ಹೂವಯ್ಯ ಉತ್ತರಿಸಾಕ ಹೋಗಲಿಲ್ಲ. ನಾನು ಹೇಳಿದ್ದು ಕೇಳದಾಂಗ ಇರಲಾರದು. ಮಾತಿನ ದರದು ಇಲ್ಲ ಅನಕಂಡಿರಬೇಕು.
ಆಗಲೆ ಸಂಜೀ ಮಬ್ಬು ಮೂಡಾಕ ಹತ್ತಿತ್ತು. ‘ನೀವು ನಾಳೆ ಬಂದು ಕಾಣರಿ’ ಎಂದವರಿಗೆ ‘ಬರ್‍ತೀವಿ’ ಎಂದು ಕೈಮಗದೆ. ಹೂವಯ್ಯ ಚೆಂಡು ಆಡಿಸಾಕಾರ ನಮ್ಮಕ್ಕನ ಕಡೀಗೆ ಮೂಳನಾಂಗ ನೋಡಾಕ ಹತ್ತಿದ್ದರು.
ಹೂವಯ್ಯಾಗ ಕೆಲವೊಮ್ಮೆ ರಾತ್ರೆಲ್ಲಾ ಸಮಸ್ಯೆಗಳು ಕಾಡೋದದ. ಗವ್ವನ್ನೊ ಕತ್ಲಾಗ ಕಣ್ಣು ಬಿಟಗಂಡು ಬೆಳಕು ಹರಿಯೋದ್ರಾಗ ಯಾವುದೆ ಸಮಸ್ಯೆನ ನಿಚ್ಚಳಾ ಇಟಗೊಂತಿದ್ದರು.
ನಾನು ಮರುದಿನ ಅದೇ ಪದ ಹಾಡಿದೆ. ಅವರಿಗೆ ಆಗಬಂದಾಂಗ ಕಾಣಲಿಲ್ಲ. ಒಮ್ಮೆಕಲೆ ಹೊಳ್ಳಿಕ್ಯಂಡು ‘ನೀನೇನು ಪೋತಪ್ಪಲ್ಲ ಹೋಗು. ಬೇರೆಯವರು ಕಟ್ಟಿದಾಂಗ ನೀನೂ ಕಟ್ಟಿ ಶಾಣ್ಯಾ ಅನಿಸಿಗ್ಯ ತಿಳಿತೇನ?’ ಎಂದು ಜಲಮಿಲೆ ಗದರಿಸಿದರು… ಇಲ್ಲದ ಹುರುಪು ತೋರಿದವರು, ರೊಕ್ಕಾ ಬಿಚೊ ಆಸಾಮಿಯಲ್ಲ ಅನಿಸುತ್ಲೆ ಎದ್ದು ಹೋಗು ಅನ್ನೋದೊಂದಽ ಬಾಕಿ, ಹಾಂಗಿತ್ತು ಗಂಟಿಕ್ಕಿದ ಅವರ ಮುಖ.
ಅಮಾಸಿದಾನ ಪಡೆದವರಾಂಗ ಎದ್ದು ಹೊರಗೆ ಬಂದಿದ್ದೆ. ನಾನು ಮತ್ತೆ ಆ ಕಡೀಗೆ ತಲೀ ಹಾಕಲಿಲ್ಲ.
ಒಂದು ವಾರ ಕಳದ ಮ್ಯಾಲ, ಬೆಳಕು ಹರಿಯಾಕ ಮೊದಲು ಎರಡೆರಡು ಶೆಡ್ಡುಗಳು ಅಕ್ಕನ ಮನಿ ಮುಂದಕ ಬಂದು ಕುಂತವು. ನಮ್ಮಕ್ಕ ಆಗಲೆ ಶಾಪಳಿಸಿ ನೆಟಗಿ ಮುರಿದಿದ್ದಲ್ದಾ, ‘ಬಾಡ್ಯಾರಾ… ಹಾಟಗಳ್ಳರಾ…’ ಎಂದು ಎಗರಾಡಿ ಎರಡು ಹನಿ ಕಣ್ಣೀರು ಇಳಿಸಿ ಸುಮ್ಮಕಾಗಿದ್ದಳು. ಅದನ್ನ ನೋಡಿದ ನನಗೂ ತಳಗ ಮ್ಯಾಲ ಆತು.
ಈಗೇನು ತಲಿ ಹೋಗಂತಾದ್ದು ಆಗಿಲ್ಲ. ನೋಡಾನು: ‘ತಾಳಿದವಗ ಕಣಕ ಹೂರಣ’ ಎಂದು ಆಕೆಗೆ ಒಣ ಸಮಾಧಾನ ಹೇಳಿದ್ದೆ. ಎರಡು ಮೂರು ದಿನ ಕಳೆಯುತ್ತೆ. ಅಕ್ಕನ ಮನೀಗೆ ನೀರು ಬರೋದು ನಿಂತೋತು.. ನನಗ ತುಸ ಭಿನ್ನ ಯೋಚನೀ ಹತ್ತಿತು. ನಾನೂ ಉಪ್ಪು ಹುಳಿ ತಿನ್ನಾವ ಸಿಟ್ಟು ನೆತ್ತಿಗೇರಿತು. ಹಲ್ಕಟ್ ನನ್ಮಗ… ಈತಗೇನು ಮುಕಳಾಗ ಕೊಂಬು ಮೂಡ್ಯಾವೇನು ನಾನೂ ನೋಡೇಬಿಡ್ತೀನಿ ಅನಕೋತಾ ಚಾವಡಿಗೆ ಬಂದೆ.
….ಊರಾಗಿಲ್ಲದ ಹೂವಯ್ಯನ ನಸೀಬು ನೆಟ್ಟಗಿತ್ತು. ನನ್ನೇನ ಕಾಡಾಕ ಹತ್ಯಾನ ಈ ಭಂಡ ಅಂತ ಮನಸಿನಾಗ ಬುಸಗುಡತಾ’ ಮಾಡಾದು ಮಾಡಿ, ಮಳ್ಳನಾಂಗ ಊರು ಬಿಟ್ಟು ಹೋಗ್ಯಾನೇನ ಖೋಡಿ? ಗಂಡ ಸತ್ತಾಕಿಗೆ ಹೀಂಗ ತೊಂದರೀ ಕೊಟ್ರ ನಾನು ಸುಮ್ಮಕಿರಾ ಅಸಾಮಿಯಲ್ಲ. ಬಡಬಗ್ಗರನ್ನ ಸ್ವಲ್ಪ ನೋಡಿ, ಮೊದಲು ಹ್ಯಾಂಗಿತ್ತೋ ಹಾಂಗ ಬಯಲು ಬಿಟ್ರ ನಿಮ್ಮದೇನು ಗಂಟು ಹೋಕ್ಕತೀ? ಹರ್‍ಕೊಂಡು ತಿನ್ನೋದು ಚಲೋ ಅಲ್ಲ. ನಿಮ್ಮ ಉರುವಣಗಿ ನಿಮಗಽ ಮೂಲ ಆದೀತು. ನೆನಪಿಟ್ಟುಕೊಳ್ಳಿ’ ಎಂದೆಲ್ಲಾ ಗಾಳ್ಯಾಗ ಭೇಷಿ ಕೊಡವಿದೆ.
ಊರವರು ಹೀಂಗೆಲ್ಲಾ ಒದರಾಡೋದು ಇಲ್ಲಿ ಮಾಮೂಲು. ಅದಕಿದ್ದು ಅಲ್ಲಿದ್ದವರ ಭಾವನಿನೂ ನಿಗರಗಡ್ಡಿ ಹಿಡದಿರಬೇಕು. ನಾ ಒದರಾಡಿದ್ದು ತಮಗಲ್ಲ ಅನಕೊಂಡು ಯಾರೂ ಜಪ್ಪೆಂದಿರಲಿಲ್ಲ. ಜವಾನ ಇದ್ದು ‘ಸಾಹೇಬರು ಮೀಟಿಂಗ್‌ಗೆ ಹೋಗ್ಯಾರ ನಾಳೆ ಬರ್ರಿ’ ಅಂದ. ಮತ್ತೆ ಹೂವಯ್ಯನ್ನ ಕಾಣಾ ಮನಸು ಬರಲಿಲ್ಲ.
ದಿನ ಕಳದಾಂಗೆಲ್ಲಾ ಪರಿಸ್ಥಿತಿ ಹದಗೆಡತಾ ಹೋಗಿತ್ತು. ಈಗ ತಮಣಿ ಮಾಡೋದು ಕಷ್ಟದ ಮಾತಾತು. ತಲಿಕೆಟ್ಟು ಮೊಸರು ಗಡಗಿ ಆಗಿ ಕುಂದ್ರತು. ಸುಕಾಸುಮ್ಮನ ಗಿಂಜು ಮಾಡತಿರವಗ ಬಿಸಿ ಮುಟ್ಟಿಸೋ ಹಟಕ್ಕೆ ಬಿದ್ದೆ. ಹ್ಯಾಂಗ ನಿಭಾಯಿಸಲಿ ಎಂದು ಸಂದು ಕಾಯಾಕ ಹತ್ತಿದೆ.
ಇದರ ನಡೂವ ಸೆರಗಿನಾಗ ಕಟಗೊಂಡ ಅಕ್ಕನ ಬವಣೆ ನೋಡಾಕ ಆಕ್ಕಿದ್ದಿಲ್ಲ. ಅಯ್ಯನೇರ ಕಾಲಿಗೆರಾ ಬಿದ್ದು, ಒಂದು ಹದಕ್ಕೆ ಮುಟ್ಟಿಸಬೇಕು ಅನ್ನೋ ಯೋಚನೀ ಇತ್ತು. ಅದರ ಅದರ ಜತೀಗೆ ‘ಮನಿ’ ಬಗಲಾಗಿನ ಜಾಗಕ್ಕ ನಮ್ಮಕ್ಕ ಹಕ್ಕುದಾರಳದಾಳ. ಅಯ್ಯಪ್ಪಗ ಡೊಗ್ಗಿ ಸಲಾಮು ಹೊಡೆಯಾದೇನೈತಿ? ಜಕ್ಕಸ್ತ ಪಡೀಬೇಕನ್ನೋ’ ಹಟ ಮನದ ಮೂಲ್ಯಾಗ ಮೂಡಿ ಕೇಕಿ ಹೊಡ್ಯಾಕ ಹತ್ತಿತು.
ಆಫೀಸಿಗೆ ಹೋದ್ರ ‘ಒಳಗ ಮಂದಿ ಅದಾರ ಕುಂದರ್ರೀ’ ಅಂದ ಜವಾನ. ನನ್ನ ಸರದಿ ಬಂದ ಕೂಡಲೇ ನಮಸ್ಕರಸ್ತಾ ಹೋಗಿ ಎದುರು ಕುಂತೆ.
‘ಸರ್…’ ಅನ್ನತಿರಕಲೇ ಹೂವಯ್ಯ ಕೈಯಾಗ ಹಿಡದಿದ್ದ ಬಿಳಿ ಲಕೋಟೆ ಒಂದನ್ನ ಟ್ರೇದಾಗಿಟ್ಟಾತ, ನನ್ನ ಕಡೀಗೆ ನೋಡಕ್ಯಂತ ‘ಮೊದ್ಲು ರೊಕ್ಕಾ ತತ್ತಾ. ಹಿಂದಾಗಡೆ ಮಾತಾಡ್ವಂತಿ’ ಅಂದು ನನಗ ಕಣ್ಣಳತೆ ಮಾಡಾಕ ಹತ್ತಿದ. ಅಸಹಾಯಕ ನೋಟದಾಗ ನಾನು ಸಂಕೋಚದಿಂದ ಇದ್ದೆ. ಆತಗ ನೆಪಕ್ಕ ಕಾದಾಂಗ ಕಂಡಿರಬೇಕು. ತುಸ ಹೊತ್ತು ಕಳೆದು ‘ಇ…ಇಲ್ಲಪಾ ಅಂದ್ರ ತಮ್ಮಾ, ನಿಮ್ಮಕ್ಕನ್ನ ಗುಟ್ಟಾಗಿ ಕಳಿಸಲ್ಲ. ಎಲ್ಲಾ ವ್ಯವಸ್ಥೆ ನಿಸೂರ ಆಕ್ಕಾವ….’ ಅವಸರಕ್ಕೆ ನಾಲಗಿ ತಡವರಿಸಿದರೂ ಎಲ್ಲಾ ಯೋಚಿಸಿ ಆಡಿದಾಂಗಿತ್ತು. ನನಗ ಮೈಯಾಗೆಲ್ಲಾ ಬೆಂಕಿ ಅಡರಿಕೋಂತು. ಹಲ್ಲು ಕಟಗುಡಸಾದು ನೋಡಿದಾತ, ನನ್ನೊಳಗಿನ ಸಿಟ್ಟು ಮಾತಾಗಾಕ ಮೊದಲೆ ಎದ್ದು, ಬಗಲಾಗಿಂದ ತಟಾಯ್ದ. ಮುಜುಗರಕ್ಕೆ ಸಿಕ್ಕೊಳ್ಳಾಕ ಒಲ್ಲದಾ ಹೊಂಟು ಹೋಗಿರಬೇಕು.
ಇಂವ ಎಂಥಾ ಮಾನಗೇಡಿ ಅದಾನ… ಮಕಾ ಮಾರಿ ನೋಡದಾ ಜಾಡಿಸಿ ಬಿಡಬೇಕಿತ್ತು… ತುಟಿಕಚ್ಚಿ ಹಿಡಿದು ಈತನ್ನ ತುಳೀಲಿಲ್ಲಾಂದ್ರೆ ನಾನು ನಮ್ಮಪ್ಪಗ ಹುಟ್ಟಿಲ್ಲ ಅನಕೊಂಡೆ. ಅವಮಾನಕ್ಕೆ ಮನಸು ಕೊತಕೊತ ಕುದೀತಿತ್ತು.
ಎದ್ದು ನಿಂತು ಇನ್ನೇನು ಹೊಂಡಬೇಕು ಅನ್ನದಾಗ ಮೇಜಿನ ಮ್ಯಾಲಿನ ಬಿಳಿ ಲಕೋಟೆ ನನ್ನನ್ನ ಸೆಳೀತು, ಏನನ್ನಿಸಿತೋ ನಿನೋ ಗಬಕ್ಕನ ಅದನ್ನ ಎತ್ತಿ ಕಿಸಕ ಇಳಿಸಿದೆ. ಬೆಕ್ಕು ಕಣ್ಮುಚ್ಚಿ ಹಾಲು ಕುಡಿಯೋ ಹಾಂಗ ಮೆತ್ತಗ ಅಲ್ಲಿಂದ ಕಂಬ ಕಿತ್ತೆ ಹಿಂದಿಂದ ಒಂದು ಕೈ ನೋಡೋಣಾಕ ಬೇಕು ಅನಕೋತಾ ಲಕೋಟೆ ತೆರಿಯಾಕಾರ ನಾ ಯಾವತ್ತೂ ಮಾಡದ ಇಂಥಾ ಕೆಲಸಕ್ಕೊ, ಒಳಗೇನೈತಿ ನೋಡೋ ಅವಸರಕ್ಕೊ ಕೈ ನಡುಗಾಕಹತ್ತಿತ್ತು.
….ಹೂವಯ್ಯ ತಾ ಕಟ್ಟಾಕ ಹತ್ತಿದ ಅರಮನೀಗೆ ಬೇಕಾದ ಕರೆಂಟಿ ಸಾಮಾನಿನ ಪಟ್ಟಿ ಬರೆದು ಈ ಚೀಟಿ ತಂದಾತನ ಹಸ್ತೆ ಕೊಟ್ಟು ಕಳಿಸಾಕ ಕೇಳಿಕೊಂಡಿದ್ದ. ‘ಜ್ಯೋತಿ ಎಲೆಕ್ಟ್ರಿಕಲ್ಸ್’ ಹೆಸರಿಗೆ ಚೀಟಿ ಬರೆದಿತ್ತು. ಅದರ ಸಮಸ್ತ ಬಿಲ್ಲನ್ನು ಪುರಸಭಾದ ಬಾಕಿ ಬಿಲ್ಲಿಗೆ ಆಡ್ಜಸ್ಟ ಮಾಡಬೇಕು. ಮುಂದಲ ತಿಂಗಳು ಬಂದರ ಚುಕ್ತಾ ಚೆಕ್ಕು ಒಯ್ಯಬಹುದು…’ ಅಂತ ಪರಸಭಾದ ಲೆಟರ ಹೆಡ್ಡಿನಾಗ ಬರೆದು, ತನ್ನ ಸಹಿ ಹಾಕಿದ್ದಲ್ಲಾ ಆಫೀಸ ಸಿಕ್ಕಾ ಒತ್ತಿದ್ದ.
ನನಗ ಓದಿಕೋಂತ ಹೋದಾಂಗೆಲ್ಲಾ ನಂಬಕೀ ಹುಟ್ಟಿರಲಿಲ್ಲ… ಆಮ್ಯಾಲೆ ಒಮ್ಮಕಲೆ ‘ಎಲೆಲೆ… ಇದೆಂಥಾ ಸುವರ್‍ಣಾವಕಾಶಾಲೇ… ಇವನೌವನ ತಂದು’ ಎಂದನಕೋತಾ ಹಲ್ಲು ಕಡಿಯಾಕಾರ ಮನದಾಗಿನ ಹಕ್ಕಿಗಳು ಹಂಗಾ ಹಾರಾಡಾಕ ಹತ್ತಿದ್ವು.
ಅರಸಾಕ ಹತ್ತಿದ ಬಳ್ಳಿ ಕಾಲಿಗೆ ತೊಡರಿಕ್ಯಂಡಿತ್ತು.
ಹೂವಯ್ಯನ ಹೆಚ್ಚಿನ ಸಂಪರ್ಕ ಇರದ ನನಗೆ ಅವರಿವರ ಹೇಳಕೀ ಅಷ್ಟಽ ಕಂಡಿದ್ದವು. ಈಗ ಖುದ್ದು ಆ ಆಯದಿಂದ ಹೊರಗ ನಿಂತು ಆತನ ಹಲ್ಕಟ್ಟತನ ತಿಳಿಯೋ ಕಾಲ ಒದಗಿತು. ಮೈಯೆಲ್ಲಾ ಕಣ್ಣಾಗಿದ್ದಾತ ಸಿಗೇ ಬೀಳಾಕಾಗೇ ಬರೆದಾಂಗ ಆಗಿತ್ತು. ಇದಕಾ ಇದ್ದೀತು ‘ಕೆಟ್ ಗಳಿಗೆ’ ಅನ್ನೋದು. ಈಗ ಈ ಹೊತ್ತಾಗ ನಾ ಕಂಡ ಸತ್ಯಾನ ಬಯಲು ಮಾಡ್ಲಿಲ್ಲಾಂದ್ರ ನಾ ಇದ್ದೂ ಸತ್ತಾಂಗ ಆದೀನು.
ಸರ್ಕಾರ ಕೈತುಂಬಾ ಇಕ್ಕೋ ಸಂಬಳಾ ಅಲ್ಲದಾ ತೊಂಬಲಾನೂ ತಿಂತಾನ. ಇಂಥಾ ನೇಮ ತಪ್ಪೋ ಅಧಿಕಾರೀನ ಒಪ್ಪಿ ಸುಮ್ಮಕ ಬಿಟ್ಟರಾದಕ್ಕ ಅದನ್ನ ದಂಧೆ ಮಾಡಕ್ಯಂಡಾನ. ಈ ನಾಯಿ ಬಾಲದಂಥಂವಗ ಕನಿಕರಿಸೋದು ತಪ್ಪಾದೀತು. ಹಂಗಂತ ಸಿಟ್ಟಿಗೆ ಬದ್ದಿ ಹರಕಂಡ್ರ ನೋಯೋದು ನಂದಽ. ಈ ಅಧಿಕಾರಶಾಹಿ ಬದುಕಿದ ತಪ್ಪು ದಾರೀನ ದ್ವೇಷಿಸಾಕ ಈಗ ನೆವ ಸಿಕ್ಕೇತಿ, ಉಪಾಯದಿಂದ ಆತನ್ನ ಮಟ್ಟ ಹಾಕೋ ಜರೂರನ್ನ ನಿಕ್ಕಿ ಮಾಡಿಕೊಂಡೆ.
ನಮ್ಮಲ್ಲಿ ಕಾಯ್ದೆ, ಕಾನೂನುಗಳು ಸಾಮಾನ್ಯ ಜನರ ಸಮಾಧಾನಕ್ಕೆ ಆದಾವ. ಆದರಿಂದ ಪರಿಹಾರ ಸಿಕ್ಕೀತು ಅನ್ನೋದು ತಪ್ಪಾದ ತಿಳವಳಿಕೆ. ಇನ್ನು ಸುದ್ದಿ ಮ್ಯಾಲ ಸುದ್ದಿ ಮಾಡಿದರೂ ತೌಡು ಕುಟ್ಟಿದಂಗಾದೀತು. ಈ ಅಡ್ನಾಡೀನ ಅಷ್ಟಟ್ಟ ಮಾನಸಿಕವಾಗಿ ಹಿಂಸಿಸಿದರೆ ನಮ್ಮ ಕೆಲಸಾನೂ ಮಾಡಿಕೊಟ್ಟಾನು, ಪಶ್ಚಾತ್ತಾಪ ಪಟ್ಟು ಪ್ರಾಮಾಣಿಕನೂ ಆದಾನು ಅನ್ನೋ ಹುಸಿ ಭರವಸಿ ಹುಟ್ಟಗ್ಯಂತು.
ಇದಾವುದರ ಪರಿವೆ ಇಲ್ಲದ ಹೂವಯ್ಯ ಮಾಲು ತರಿಸಿಕೊಂಡಿದ್ದನ್ನ ಹೊಂಚು ಹಾಕಿ ಖಾತ್ರಿ ಮಾಡಿಕೊಂಡೆ. ಅದರ ಬಾಕಿ ಹಣ ಪುರಸಭಾದ ಚೆಕ್ಕಿನ ಮೂಲಕ ಪಾವತಿ ಆತು. ಡಿಸಿಸಿ ಬ್ಯಾಂಕಿನಾಗ ಚೆಕ್ಕು ಪಾಸು ಆಗಿರಾದು ನಿಕ್ಕಿ ಆದ ಮ್ಯಾಲೆ ನನಗ ಸಿಕ್ಕ ಪತ್ರಕ್ಕ ಪಟಗಿ ಇಟ್ಟು ಆತನ್ನ ಗೋಳು ಹೊಯ್ದುಕೊಳ್ಳಾಕ ನಿರ್ಧರಿಸಿದೆ. ಹೀಂಗ ಯೋಚನೀ ಬಂದದ್ದ ತಡ, ಪುರಾವೆ ಹಿಡಿದು ಚಾವಡಿ ಕಡೆ ದೌಡಾಯಿಸಿದೆ.
ಮುಖ್ಯಾಧಿಕಾರಿ ಒಬ್ಬಾತ ಒಳಗಿದ್ದ. ಜವಾನ ಸ್ವಲ್ಪ ತಡಿಯಾಕ ಸನ್ನಿ ಮಾಡಿದ. ಆತನ್ನ ಅಲಕ್ಷಿಸಿದ ನಾನು ನನ್ನ ವರಸೆ ನೋಡುವಂತೀ ಅನ್ನೋಹಾಂಗ ಯಮಕಿಲೆ ಖೋಲಿ ಒಳಗ ಕಾಲಿಟ್ಟೆ. ನನ್ನ ಅಹಮಿಕೆಯ ಅರೆನಗು ನೋಡುತ್ಲೆ ಹೂವಯ್ಯಗ ಅವಲಕ್ಷಣದ ಗುಮಾನಿ ಮೂಡಿರಬೇಕು.
‘ನಿಮ್ಮ ಜೋಡಿ ಮಾತಾಡಾದೈತ್ರಿ, ಅದಕ ಮುದ್ದಾಮು ಬಂದೀನಿ’ ಅಂದೆ. ಒಬ್ಬ ಬರಿಗೈಲೆ ಮೊಳಹಾಕಾಕ ಬಂದಿರಾದಕ್ಕೆ ನಿರಾಸೆ ತೋರಿದ ಹೂವಯ್ಯ ಕುಂಡಾಕ ದೇಕಿಲೆ ಹೇಳದಾ ಯಾಕ? ಯಾಕ ಬಂದಿ? ಅಂಬಾಂಗ ಗಂಟಿಕ್ಕಿದ ಮಾರಿ ತಿರುವಿದ. ನಾನು ಕುರ್ಚಿ ಸರಿಸಿ ಕುಂತಾಗ ಚಿನ್ನಾಟ ಆಡ ಬೆಕ್ಕಾಗಿದ್ದೆ.
ಹೂವಯ್ಯ ಬರೆದ ಪತ್ರ ಸಿಕ್ಕಿದ್ದನ್ನ ನಿದಾನಕ ಹೊರಗೆಡವಿದೆ…
ಅರಿವುಗೇಡಿಯಾಗಿ ಬರೆದ ಪತ್ರಾನ ಎಲ್ಲೋ ಕಳಕಂಡಿದ್ದು ನೆನಪಾಗಿ, ತನ್ನ ಅವಾಂತರ ಲಬಕ್ಕಂತ ನಿಚ್ಚಳಾಗಿತ್ತು. ಆ ಕ್ಷಣದ ಸತ್ಯ ಏನೆಂದು ಮನಗಾಣುತ್ತಲೇ ಕೆಟ್ಟ ಸುದ್ದಿ ಕೇಳಿದವರಂತೆ ಮಖ ಹುಳ್ಳುಳಗಾತು. ಆಗ ಉಸಿರಿಗಾಗಿ ಚಡಪಡಕಿ ಇಟ್ಟಾತನ ಉಸುರು ನಿಲ್ಲೋದೊಂದಽ ಬಾಕಿ. ಹಿಂದಽ ತತ್ತರಿಸಿದ ಮನದಾಗ ಗೌಜಿ ಎದ್ದಿತು.
ಗೊಂದಲಕ್ಕ ಇಡೀ ಮೈ ಬೆವತಂತೆಲ್ಲಾ ಹೆದರಿದ್ದು ಖಾತರಿಯಾಗಿತ್ತು. ಆ ತೋರಗೊಡದೆ ‘ಯಾವ ಪತ್ರ, ಎಲೈತಿ ತಮಾಽ? ಅಂತ ಕೇಳಿದಾತ ಕೋಟಿನ ಕಿಸೆದಿಂದ ಕರ್ಚೀಪು ತಗದು ಮಾರಿ ಒರಿಸಿಕ್ಯಂತನಾ ಅಮಾಯಕನಾಂಗ ನಾಟಕ ಮಾಡಿದ.
ಹೂವಯ್ಯಗ ನಿರಾಕರಿಸಾಕ ಜಾಗೇವು ಇದ್ದಿಲ್ಲ. ಅಂದರೂ ಎಮ್ಮಿನ ನೀರಾಗಿಟ್ಟು ಯಾಪಾರ ಮಾಡಾಕ ನಾನೂ ತಯಾರಿರಲಿಲ್ಲ. ನನ್ನ ಮಾತಿಗೆ ಪುಟ ಕೊಡತಾ ಬಕ್ಕಣದಾಗಿಂದ ನಕಲನ್ನ ತೆಗೆದುಕೊಟ್ಟೆ.
ಹಿಂದ್ಽ ಮುಖವಾಡ ಬದಲಾತು.
‘ಬಿಸಲಾಗ ಬಂದೀರಿ.. ಲೇ ಕರೀಮಾ ತಂಡಾ ತಗೊಂಬಾರಲೇ…’ ಅವಸರಿಸಿ ಹೇಳತಾ ಬೆಲ್ ಒತ್ತಿದ ಗತ್ತಿಗೆ ಮನಷ ಲೆಕ್ಕಕ್ಕ ಸಿಗೋನಲ್ಲ ಅನಿಸೋದು ಖರೆ. ಹಂಗಽ ಒಳಗಡೀಗೆ ಯಾರನೂ ಬಿಡಬ್ಯಾಡಂ’ ಅನ್ನಾ ಶಾಣ್ಯಾತನ ಹಚ್ಚಿದ.
ತಂಡಾ ಬರೋತನಕ ಗುಲ್ಲೆಬ್ಬಿಸಿದ ವಿಚಾರ ತುಂಬಿ, ಕಲಕುಬಲಕ ಆಗಿತ್ತು. ಏನೋ ಮಾತಾಡಾಕ ತೆರೆದಾತನ ಬಾಯಿನ ನನ್ನ ನಮೂನಿ ನಗು ಒಳಗ ಇಂಗಿಸಿತ್ತು. ಈಟ ದಿನ ಮಂದೀನ ಮಳ್ಳ ಮಾಡತಿದ್ದವನ ಮೈಯಾಗ ಮತ್ತೊಮ್ಮೆ ಬೆವರು ಕಿತ್ತು ದಂಗ ಬಡಿದವರಂಗ ಸಪ್ಪಗ ಕುಂತಿದ್ದ ಆತನ ಮನದಾಗ, ಬಳಲಿಕೆ ಇರಾದು ಸ್ಪಷ್ಟ ಇತ್ತು.
ತುಸ ಹೊತ್ತು ಕಳೆದ ಮ್ಯಾಲ ತಟಗು ಸಾವರಿಸಿಕೊಂಡು ‘ಅಸಲಿ ಪತ್ರ ನಿಮ್ಮತ್ರ ಇದ್ರ ಕೊಡ್ರಲಾ’ ಎಂದು ದೈನೇಸಿ ಕೇಳಿದ… ಬಗಲಾಗ ಬಡಗಿ ಇಟಗಂಡು ಅಡ್ಯಾಡದನ್ನ ಬಿಟ್ಟು ಕೊಡಾಕ ಆದೀತ?
ತಲಿ ಕೊಡವಿದೆ… ‘ತಪ್ಪಾಗೇತಿ’ ಎಂದು ಗೋಗರೆದ, ಪುಕ್ಕಟ ನಿಮ್ಮ ಹೆಸರೀಲೆ ಮಾಡಿಕೊಡ್ತೀನಿ ಅಂದ, ಕೇಳಿದ್ದು ಕೊಡೋ ಪ್ರಲೋಭನೆ ಒಡ್ಡಿದ. ಮತ್ತ ಮತ್ತ ಬೇಡಿಕ್ಯಂಡೂ ದಡ ಕಾಣದ ಸ್ಥಿತಿಗೆ ತಲುಪಿದ್ದ. ನನ್ನೊಳಗ ಕೆಟ್ಟ ಹಟ ಕೆಲಸಾ ಮಾಡಾಕಹತ್ತಿತ್ತು. ಮಾತು ಮೌನದ ನಡುವ ಹಿಂದಕ ಸರಕಣಾವಲ್ಲ ಅನಿಸಿದಾಗ ಹೂವಯ್ಯನಲ್ಲಿ ಹತಾಶೆ ಮುಕರಿತು. ಚೆಂಡು ಬಗ್ಗಿಸಿ ಕುಂತವ ಚಿಂತೆಯ ಚಿತೆಯಾಗ ಕುದೀತಿದ್ದ.
ಯಾವುದೂ ‘ಹತ್ತಲಿಲ್ಲ, ಹರೀಲಿಲ್ಲ’ ಆದಾಗ ಒಮ್ಮೆ ನಿಟ್ಟುಸಿರು ಬಿಡತಾ ಆದಷ್ಟು ಗುಟ್ಟಾಗಿಡಲು ಕೇಳಿಕೊಂಡ…
ಮತ್ತೂ ಕೇಳಬಹುದಾದ ಹೂವಯ್ಯನ ಮಾತುಗಳು ಕಸುವು ಇಲ್ಲದಾ ಸೋತಿದ್ದವು. ಅಲ್ಲಿ ಮಲೆತ ಮೌನಕ್ಕ ಒಜ್ಜೇ ಅನಿಸಿ ನನಗೆ ಕೂರದಂಗಾತು. ನಕಲನ್ನ ಅಲ್ಲೇ ಬಿಟ್ಟು ಎದ್ದು ನಿಂತೆ. ‘ಹಾಲಲ್ಲಾದ್ರೂ ಹಾಕಿ, ನೀರಲ್ಲಾದ್ರೂ ಹಾಕಿ’ ಅಂದಾತ ಈಗ ಕೈಬಿಟ್ರ ಇಲ್ಲದ ಪಜೀತಿ ಇಟಗೊಂಡೀತು ಅನ್ನಾ ಹಪಾಹಪಿ ಹಚ್ಚಿ, ಕದದ ತನಕ ಹಿಂದಕ ಬಂದ. ಮುಂದಕ ಏನೂ ಹೇಳಾಕಾಗದ, ಹೇಳದಾಂಗ ಇರಾಕಾಗದ ಕೈಕೈ ಹಿಚುಕ್ಕಂತ ನಿಂತಿದ್ದ.
ಹೊರಗಡೀಗೆ ರಸ್ತೆದಾಗ ಸಣ್ಣ ಹುಡುಗೇರು ಗೆರಿ ಕೊರದು. ಕುಂಟಾಬಿಲ್ಲೆ ಆಡತಿದ್ದರು. ‘ಆಯಮ್ ರೈಟ್…. ಆಮ್ ರೈಟ್…’ ಕುಂಟೋ ಹುಡುಗಿಯ ದನೀನ ಒಮ್ಮಕಲೆ ಆಡಗಿಸಿ, ‘ಔಟು… ಔಟು…’ ಅನ್ನೋ ನಾಕಾರು ಮಕ್ಕಳ ಕೇಕಿ, ಚಪ್ಪಾಳೆ ಅಲ್ಲೆಲ್ಲಾ ಅಡರಿ ಮತ್ತೆ ಮತ್ತೆ ಕೇಳಸಿತ್ತು.
ನಾನು ಲೂನಾ ಹತ್ತಿ ಕಾಣದಾದೆ.
ಇದು ಗುಲ್ಲಾದರ ಏನಾದೀತು ಏನಿಲ್ಲ ಅನ್ನೋ ತಾಕಲಾಟದ ನಡುವಿನ ಹೂವಯ್ಯನ ಕಸರತ್ತೆಲ್ಲಾ ಉಪರಾಟೆಯಾದವು. ಧಮಕೀ ಇಟ್ರ ಒಂದೋಗಿ ಮತ್ತೊಂದಾದೀತು ಅನ್ನೋ ಭಯಕ್ಕೆ ಬಿದ್ದ. ಸುಡೋ ಕೆಂಡಾನ ಉಡಿ ಒಳಗ ಕಟ್ಟಿಕೊಂಡಾಂಗ ಆಗಿ, ಯಾವ ಹೊತ್ನಾಗಾದ್ರೂ ಸುಡಬಹುದು ಅಂಬ ಲೆಕ್ಕಾಚಾರಕ್ಕ ಹತ್ತಿದ.
ಸರಹೊತ್ತಿನಾಗ ಹೂವಯ್ಯನ ಸಂತೀ ಮುಗೀತು ಅನ್ನಾಕ ಇನ್ನೂ ಕಾಲ ಕೂಡಿ ಬಂದಿಲ್ಲ.
ತಾನು ಸೋಲೋ ಸಾಧ್ಯತೇನ ಎದುರುಗುಂಬಬಾರದು ಅನಕೊಂಡದ್ದು ದಿನದಿನಕೂ ಕಗ್ಗಂಟಾತು. ಮೊದ್ಲು ದಣೀತಾವ ಮಾತಾಡಿದ. ಆಮ್ಯಾಲ ಅವರಿವರ್‍ನ ‘ಛೂ’ ಬಿಟ್ಟ, ಊಹೂಂ. ಅಭದ್ರತೆಯ ಅಂಜಕಿ ನಿತ್ಯದ ಬದುಕನ್ನ ಮುಕರಿತು. ಅದು ಪ್ರಶ್ನೆಯಾಗಿ ಕಾಡಾಕಹತ್ತಿ ಆವಯ್ಯನ್ನ ಅಷ್ಟಷ್ಟಾ ತಿಂತಾ ಹೋತು. ಇವೆಲ್ಲದರಿಂದ ಮುಕತಿ ಪಡೀಬೇಕಂದ್ರ ರಾಜೀನಾಮೆ ಕೊಡಬೇಕು ಅನಿಸಿದರ ಮರುಕ್ಷಣಕ್ಕೆ ವರತೆ ರೊಕ್ಕಾ ಇಲ್ಲಾಂದ್ರ ತಾನು ಮನುಷ್ಯಾ ಆಗಿರಲ್ಲ ಅನಸ್ತಿತ್ತು. ಮತ್ತೆ ಮತ್ತೆ ಕೆಲಸ ಕಳಕೊಳ್ಳೋ ಶಿಕ್ಷಾದ ಸುತ್ತ ಗಿರಕಿ ಹೊಡೆದು ತನ್ನ ಬೇರನ್ನ ಹಿಡದು ಅಲ್ಲಾಡಿಸದಕ್ಕ ‘ಎಕ್ಕುಟ್ಟಿ ಹೋಗ್ಲಿ’ ಎಂದು ಬೈದು ತೆಪ್ಪಗಿರಾಕೂ ಬಿಡಲಿಲ್ಲ.
ಮಾಡಿದ ತಪ್ಪು ಹಳತಿಗೆ ಬಿದ್ದು ಮರೆಯಾಗ ಲಕ್ಷಣ ಕಾಣಲಿಲ್ಲ. ಹೆಪ್ಪುಗಟ್ಟಿದ ನೋವು ಕರಗೋದು ಒತ್ತಟ್ಟಿಗಿರಲಿ, ಮುಚ್ಚಿಡು ಅಂದದ್ದು ಬಟ್ಟ ಬಯಲಾತು. ಲೋಕಲ್ ಪೇಪರಿನಾಗ ಸುದ್ದಿ ಪ್ರಕಟಮಾಡಿದರು. ತೋಯ್ದ ಚುಂಗನ್ನು ಚುಕ್ಕಾಯಿಸುತ್ತ ಚುಕ್ಕಾಯಿಸುತ್ತಾ ಹಾದಿ ಬೀದಿ ಸಣ್ಣ ಮಂದಿ ಬಾಯಾಗ ಬಿದ್ದು ಚಿನ್ನಾಚಿದ್ರಿಯಾತು. ನನ್ನಲ್ಲಿಟ್ಟ ನಂಬಕೀಗೆ ತನ್ನನ್ನ ಒಡ್ಡಿಕೊಂಡಿದ್ದಕ್ಕೆ ಹೀಂಗ ಅನಾಮತ್ತು ದಾಳಿ ಮಾಡಾಕ ಸಾಧ್ಯ ಆಗಿದ್ದು…
ತನ್ನ ಸುತ್ತ ರುಷುವತ್ತಿನ ಹುತ್ತ ಕಟಗೊಂಡಿದ್ದ ಹೂವಯ್ಯ ಈಗೀಗ ಬಾಯಿ ಬಿಟ್ಟಪಾ ಅಂದ್ರೆ ಎಲ್ಡು ನಾಲಗಿ ಊರವರಿಗೆ ಕಾಣಾಕ ಹತ್ತಿದ್ದವು. ಮಂದೆಲ್ಲಾ ಹಿತ್ತಲದಾಗ ನಿಂತು ಥೂ ಥೂ ಅನ್ನಾಕ ಹತ್ತಿರಾದು ತನಗಲ್ಲ ಅನ್ನಾ ಸ್ಥಿತಿಯಾಗ ಹೂವಯ್ಯ ಇರಲಿಲ್ಲ.
ಗುಲ್ಲೆದ್ದ ಸುದ್ದೀನ ಎದೆ ಒಡ್ಡಿ ಎದುರಿಸಲಾಗದೆ ಒಳಗಽ ಗುದಮುರಗಿ ಇಟ್ಟಿತ್ತು. ಕಜ್ಜಿ ಹತ್ತಿದವಗ ಲಜ್ಜೆ ಇರಲ್ಲ ಅನ್ನೋದನ್ನ ಸುಳ್ಳು ಮಾಡಿ ತುರಿಸಲಾರದ ಒದ್ದಾಡಿದ. ಬದುಕನ್ನ ಇಡಿಯಾಗಿ ಪ್ರೀತಿಸ್ತಿದ್ದಾತ ಒಂಥರಾ ಜಿಗುಪ್ಸೆ ಮೂಡಿಸಿಗಂಡು ತನ್ನ ಗೋರೀನ ತಾನಽ ತೋಡಿಕೊಂಡಿದ್ದ.
ಹಂತ ಹಂತ ಸಂತಪ್ತತೆ ಆತನ್ನ ಕುಸಿಯಾಂಗ ಮಾಡಿತು. ಯಾರತ್ಲೇನೂ ಹೇಳಿಕೊಳ್ಳಾಕಾಗದೇ ಹುದುಗಿ ಹ್ವಾದ. ಪಾಪ! ಹೂವಯ್ಯನನ್ನ ಬದುಕಿದ್ದಾಂಗನ ‘ಮರಣವೇ ಮಾನವಮಿ’ ಮಾಡಾಕ ಹಚ್ಚಿತು. ಇರಕಟ್ಟನಾಗ ದಿನದ ಕೆಲಸ ಕೈಚೆಲ್ಲಿ ಕುಂಡ್ರಾಕ ಹತ್ತಿದ. ಹೆಂಗಿದ್ದವ ಹೆಂಗಾದ ಎಂದು ಆಫೀಸ ಮಂದಿ ಬಾಯಾಗ ನಗೆಶಾಟ್ಲಿಗೆ ಈಡಾದ.
ಉಡುಗಿದ ಎದಿ ಒಳಗ ಮನಸ್ಸನ್ನು ಅವುಡುಗಚ್ಚಿಕೊಂಡರೂ ಒಳಗಿನ ನೂರಾರು ಹೆದರಿಕಿಗಳು ಮತ್ತೆ ಮತ್ತೆ ಗರಿಗೆದರಿ ಯಾವುದು ಖರೆ ಯಾವುದು ಭ್ರಮೆ ಅನ್ನೋ ತಿಳವಳಕಿ ಇಡದಷ್ಟು ಹೈರಾಣಾಗಿದ್ದ…
ಈ ನಡುವ ಲೋಕಾಯುಕ್ತದವರು ಹೂವಯ್ಯನ ಕಚೇರಿಗೆ ಭೇಟಿ ಇತ್ತು ತನಿಖೆ ಕೈಗೊಂಡರು. ನನಗ ಕರಸಿ ಅಸಲಿ ಪತ್ರ ಪಡೆದು ಪರಿಶೀಲಿಸಿದರು. ಹೂವಯ್ಯ ಕಟ್ಟತಿದ್ದ ಅರಮನಿ ನೋಡಿ, ಮನಿ ಮುಂದಲ ಇಂಡಿಕಾ ಕಾರು ನೋಡಿ ಬೆಚ್ಚಿಬಿದ್ದರು… ಎಲ್ಲಾದರ ಸಾಕ್ಷಿ ನಡುವ ಹೂವಯ್ಯ ಅಮಾನತ್ತಿಗೆ ಒಳಗಾದ.
ಈಗ ಹಸಿಗಾಯಕ್ಕ ಉಪ್ಪು ಸವರಿದಂಗಾತು.
ಹೂವಯ್ಯನ ನೊಂದ ಜೀಂವ ಹಿಂದಣ ಬದುಕನ್ನು ನೆನಸತೊಡಗಿತ್ತು. …..ಅವಮಾನದ ಕರಿನೆರಳು ಅಸಹನೀಯ ಆದವು. ಕುಸಿದ ಮನೋಬಲಾನ ಕತ್ತಲದ ಹಾದಿ ಇನ್ನೀಟು ಕಂಗೆಡಿಸಿತು. ಅಪರಾಧಿ ಪ್ರಜ್ಞೆ ಆಳವಾಗಿ ಆವರಿಸಿ ಸದಾ ಕುಟುಕುತ್ತಿತ್ತು. ಒಬ್ಬಂಟಿತನ ರಗಡು ಕಾಡಿಸಾಕ ಹತ್ತಿ ಚಿಪ್ಪಿನಾಗ ಸೇರಿಕೊಂಡ. ಸುಪ್ತ ಮನದಾಗ ಕೊರಗು ಅಂಟಿ ಖಿನ್ನತೆಯ ಆಳಕ್ಕಿಳಿಸಿತು.
ಆಸಕ್ತಿ ಕಳಕಂಡ ಜೀವಕ್ಕೆ ಜಡ್ಡು ಬಿತ್ತು. ಮನೋರೋಗಾ ನಿದಾನ ವಿಷದಾಂಗ ಸದ್ದಿಲ್ಲದಾ ಹೂವಯ್ಯನ ಮನಿ ಕದ ತಟ್ಟಿತ್ತು.
ಮೊದ ಮೊದ್ಲು ವೈದ್ಯರ ಹತ್ರ ಹೋಗೋ ಬ್ಯಾನಿ ಅಲ್ಲ ಎಂದು ಉದಾಸೀನ ಮಾಡಿದ. ಬದುಕೇ ಆತನೊಂದಿಗೆ ನಿಷ್ಟುರವಾದಾಗ ನೆಮ್ಮದಿ ಕೆದರಿ ವೈದ್ಯರನ್ನ ಕಂಡು ಬಂದ, ಮೈಗ ಸಂಬಂಧಿಸಿದ ಜಡ್ಡಾಗಿರಲಿಲ್ಲ ಅದು. ಮಾನಸಿಕ ಒತ್ತರಕ್ಕ ಹಿಂಬಾಲಬಿದ್ದ ಬ್ಯಾನೀನ ತಡೆ ಒಡ್ಡಾಕ ಆಗಲಿಲ್ಲ. ಮನಸ್ಸು ಹಿಡತಕ್ಕ ಸಿಗದೇ, ಬ್ಯಾರೆ ಬ್ಯಾರೆ ತಜ್ಞರನ್ನ ಕಾಣಾಕ ಹತ್ತಿದ. ಮನದ ಅನೈಚ್ಛಿಕ ಕೆಲಸಾ ಅವರಾರಿಗೂ ಪತ್ತೆ ಹತ್ತಿಲ್ಲ… ಮ್ಯಾಕೇಳಾಕ ಬರದಾಂಗ ನೆಲಕಚ್ಚಿದ. ವೇಷ ಕಳಚೋಕು ಮೊದಲು ಹೊತ್ತಲ್ಲದ ಹೊತ್ತಿನಾಗ…
*****