ಮರವೊಂದು ಬಿದ್ದಿದೆ ಬಿರುಗಾಳಿಗೆ
ಅದು ದೊಪ್ಪೆಂದು ಬಿದ್ದಿತೊ ಸದ್ದಿಲ್ಲದೆ ಬಿದ್ದಿತೊ
ಕೇಳಿದವರು ಇಲ್ಲ
ಮುಂಜಾನೆಯೆದ್ದರೆ ಮರ ಬಿದ್ದಿದೆ ಉದ್ದಕೆ
ಬುಡ ಮಗುಚಿ ಬಿದ್ದಿದೆ ಇನ್ನೆಂದು ಏಳದಂತೆ ಬಿದ್ದಿದೆ

ಎಷ್ಟು ವರ್ಷದ ಮರ ಎಷ್ಟು ಯುಗ ಕಂಡ ಮರ
ಮರವೆ ಇದು ಮರವಲ್ಲ
ಎಷ್ಟೊಂದು ಹಕ್ಕಿಗಳು ಹುಟ್ಟಿದ ಮನೆ ತಾಯ್ಮನೆ
ಎಷ್ಟೊಂದು ಮಕ್ಕಳು ಆಡಿದ ಮನೆ ಆಟದ ಮನೆ
ಎಷ್ಟೊಂದು ಅಳಿಲುಗಳು ಏರಿದ ಮಹಡಿ ಮನೆ
ನೀಡಿದೆಲೆ ಕಾಯಿ ಬಿತ್ತುಗಳಿಗೆ ಲೆಕ್ಕವಿಲ್ಲ

ಮಹಾವತಾರವೊಂದು ಮುಗಿದಂತೆ
ಮರವೀಗ ಮಲಗಿರುವುದು

ಆಷಾಢ ರಾತ್ರಿಗಳಲ್ಲಿ ಬೆಂಕಿಹುಳಗಳ ಕಿರೀಟ ಧರಿಸಿ
ಪ್ರತಿ ಮುಂಜಾನೆ ಪಕ್ಷಿಕುಲದ ಸಂಭ್ರಮ ವಹಿಸಿ
ಆಲಸಿ ಮಂಜಿಗೂ ಇದು ಆಶ್ರಯಧಾಮ
ಹಾರುವ ಮುಗಿಲುಗಳಿಗೆ ತಂಗುದಾಣ
ಹೊಸ ಪ್ರೇಮಿಗಳಿಗೂ ಛತ್ರಿ ಹಿಡಿಯಿತು
ಆಕಾಶಕಿದುವೆ ಏಣಿಯಾಯಿತು
ಮನೆಗೆ ಮರಳುವ ದನಗಳೂ ದಣಿವಾರಿಸಿಕೊಂಡುವು
ದೂರದೂರಿನ ಪಥಿಕರೂ ಇಲ್ಲಿ ತುಸು ತಂಗಿದರು.

ತಲೆಮಾರುಗಳೇ ಮುಗಿದಂತೆ
ಮರವೀಗ ಮಲಗಿರುವುದು
*****