ಮಹಮ್ಮದ ಪೈಗಂಬರರು ತಮ್ಮ ಸಮಸ್ತ ಜೀವನವನ್ನೇ ಅರಬಿ ಜನರ ಶಿಕ್ಷಣ ಹಾಗೂ ಅಭ್ಯುದಯಗಳಲ್ಲಿ ತೊಡಗಿಸಿದ್ದರು ಅವರು ಧನಿಕರೂ ಅಲ್ಲ. ಅವರಲ್ಲಿ ಸುಖಸಮೃದ್ಧಿಗಳ ಯಾವ ಸಾಧನವೂ ಇರಲಿಲ್ಲ. ಒಂದು ರಾತ್ರಿ ಅವರು ಒಂದು ಬಿರುಸಿದ ಚಾಪೆಯ ಮೇಲೆ ಮಲಗಿಕೊಂಡಿದ್ದರು ಅವರ ದೇಹದ ಮೇಲೆ ಚಾಪೆಯ ಹಗ್ಗ ಹಾಗೂ ಗಂಟು ಇವುಗಳ ಗುರುತು ಮೂಡಿಬಿಟ್ಟಿತು. ಒಬ್ಬ ಮಿತ್ರನಿಗೆ ಸುಮ್ಮನಿರುವದಕ್ಕೆ ಆಗಲಿಲ್ಲ. ನುಡಿದನು- “ಓ ಈಶ್ವರದೂತರೇ ಈ ಹಾಸಿಗೆ ನಿಮಗೆ ಅತ್ಯಂತ ಬಿರುಸಾಗಿದೆ. ನನಗೆ ತಾವು ಅಪ್ಪಣೆ ಕೊಟ್ಟಿರಾದರೆ ನಾನು ನಿಮ್ಮ ಸಲುವಾಗಿ ಬಹು ಸಂತೋಷಪೂರ್ವಕವಾಗಿ ಒಂದು ಮೆತ್ತಗಿನ ಹಾಸಿಗೆಯನ್ನು ಅಣಿಗೊಳಿಸಿ ಕೊಡುವೆನು ಅದರಿಂದ ತಮಗೆ ವಿಶ್ರಾಂತಿಯು ಹೆಚ್ಚು ಸುಖಕರವಾಗಿ ಬಿಡುತ್ತದೆ.”

ಪೈಗಂಬರರು ಮರುನುಡಿದದ್ದೇನಂದರೆ- “ಬಂಧುವೇ ಮೆತ್ತಗಿನ ಹಾಸಿಗೆಯು ನನ್ನ ಸಲುವಾಗಿ ಅಲ್ಲ. ಈ ಜಗತ್ತಿನಲ್ಲಿ ನಾನು ಒಂದಿಷ್ಟು ಕೆಲಸ ಮಾಡುವುದಿರುತ್ತದೆ ಯಾವಾಗ ನನ್ನ ಶರೀರಕ್ಕೆ ವಿಶ್ರಾಂತಿಯ ಅವಶ್ಯಕತೆಯುಂಟಾಗುವದೋ ಆವಾಗ ನಾನದನ್ನು ಅದಕ್ಕೆ ಕೊಟ್ಟ ಬಿಡುತ್ತೇನೆ.

ಆದರೆ ಆ ಕುದುರೆ ಸ್ವಾರರು ತಮ್ಮ ಕುದುರೆಯನ್ನು ಬಿಸಿಲಿನ ತೀವ್ರತೆಯಿಂದ ಉಳಿಸುವ ಸಲುವಾಗಿ ಕ್ಷಣಹೊತ್ತು ಯಾವುದಾದರೂ ಗಿಡದ ನೆರಳಿನಲ್ಲಿ ಕಟ್ಟಿಹಾಕುತ್ತಾರೆ. ಬಳಿಕ ಮತ್ತೆ ಮುಂದೆ ಸಾಗುತ್ತಾರೆ.”

ಜಗತ್ತಿನಲ್ಲಿ ಏನಾದರೂ ಕಾರ್ಯ ಮಾಡುವುದಿದೆಯೆಂದು ಪೈಗಂಬರರ ಹೇಳಿಕೆಯಿತ್ತು. ಅದಕ್ಕಾಗಿಯೆ ಅವರ ಉಚ್ಛ ಜೀವನವು ಒಂದು ಸಾದಾ ಜೀವನವ ಅಗಿಬಿಟ್ಟಿತ್ತು. ತಮ್ಮ ಧ್ಯೇಯದಲ್ಲಿ ವಿಶಾಸವಿಡುತ್ತ ಅವರು ಸರ್ವ ಅರಬೀ ಜನರಿಗೆ ಶಿಕ್ಷಣ ಕೊಡಬೇಕೆನುತ್ತಿದ್ದರು ಆಟನೋಟಗಳ ಸಾಧನಗಳಲ್ಲಿ ಅವರಿಗೆ ಎಷ್ಟೂ ಆಸಕ್ತಿಯಿರಲಿಲ್ಲ ಅವರ ಹೃದಯವು ಉಚ್ಚ ವಿಚಾರಗಳ ಕಡೆಗೆ ಹರಿಯುತ್ತಿತ್ತು.
******

ಕೆಳಗೆ ಬರೆದ ಅರಬಿ ಕಥೆಯಿಂದ ನಮಗೆ ಕಂಡುಬರುವುದೇನಂದರೆ- ಒಂದು ಸ್ವಸ್ಥ ಆತ್ಮವನ್ನು ಸಾದಾ ಜೀವನವನ್ನು ಸಂತೋಷಪಡಿಸುವಷ್ಟು
ಇನ್ನಾವ ವಸ್ತುವೂ ಸಂತೋಷ ಪಡಿಸಲಾರದು.

ಮೈಜೂ ಎಂಬವಳು ಖಲ್ಬ ವಂಶದ ಬಾಲಿಕೆಯಾಗಿದ್ದಳು. ಅವಳು ತನ್ನ ಜೀವನದ ಪಾರಂಭಿಕ ವರ್ಷಗಳನ್ನು ಮರುಭೂಮಿಯ ನಡುವೆ ಗುಡಾರದಲ್ಲಿ ಕಳೆದಿದ್ದಳು.

ಯೋಗಾ ಯೋಗ ವಶದಿಂದ ಅವಳ ಮದುವೆಯು ಖಲೀಫಾ ಮು‌ಆವಿ ಯಾನ ಸಂಗಡ ಆಗಿಬಿಟ್ಟಿತು. ಖಲೀಫನ ಬಳಿಯಲ್ಲಿ ಬಹಳಷ್ಟು ದ್ರವ್ಯವಿತ್ತು. ಆಳುತೊತ್ತುಗಳೂ ಹೆಚ್ಚು ಸಂಖ್ಯೆಯಲ್ಲಿದ್ದರು. ಆದರೆ ಅವಳು ಅವನೊಡನಿದ್ದು ಸಂತುಷ್ಟಳಾಗಿರಲಿಲ್ಲ.

ನಾಲ್ಕೂ ನಿಟ್ಟಿಗೂ ತುಂಬ ದ್ರವ್ಯಸಂಪತ್ತಿದ್ದರೂ ಅವಳ ಮನಸ್ಸಿಗೆ ವಿಶಾಂತಿ ಇರಲಿಲ್ಲ. ಎಂದಾದರೂ ಅವಳು ಒಂಟಿಗಳಾಗಿದ್ದಾಗ ಅರಬೀ
ಭಾಷೆಯ ಕೆಲವು ಸ್ವರಚಿತ ಪದಗಳನ್ನು ಮಧುರ ಸ್ವರದಲ್ಲಿ ಹಾಡತೊಡಗುವಳು. ಅವಳು ಹಾಡುವಳು-

“ಒಂಟೆಯ ತೊಗಲಿನಿಂದ ಮಾಡಿದ ಬೂದು ಬಣ್ಣದ ವಸ್ತ್ರಗಳು ನನ್ನ ಕಣ್ಣುಗಳಲ್ಲಿ ಈ ರಾಜಸೀ ವಸ್ತ್ರಗಳಿಗಿಂತ ಎಷ್ಟೋ ಸುಂದರವಾಗಿವೆ.

ಇರುವ ಸಲುವಾಗಿ ಮರುಭೂಮಿಯ ಗುಡಾರವು ಈ ಮಂದಿರದ ವಿಶಾಲವಾದ ಕೋಣೆಗಿಂತ ಹೆಚ್ಚು ಸುಖಕರವಾಗಿದೆ.

ಕೋಳಿಯ ಪಿಳ್ಳೆಗಳು ಅರಬರಲ್ಲಿ ಗುಡಾರದ ಸುತ್ತಲು ನಲಿದಾಡುತ್ತವೆ ಅವು ಪುಷ್ಟವೂ ಬಹು ಮೂಲ್ಯವೂ ಆದ ಅಲಂಕಾರಗಳಿಂದ ಸಜ್ಜುಗೊಂಡ ಹೇಸರಗತ್ತೆಗಳಿಗಿಂತ ಕಾಂತಿಪೂರ್ಣ ಹಾಗೂ ಸುಂದರವಾಗಿವೆ.

ಯಾವ ಹೊಸಬನನ್ನಾದರೂ ನೋಡಿ ಬೊಗಳುತ್ತಿರುವ ಎಚ್ಚರಿಕೆಯ ಮೇಲಿರುವ ನಾಯಿಯು ಉಲಿವು ಮಂದಿರದ ಕಾವಾಲುಗಾರನ ಹಸ್ತಿ ದಂತದಿಂದ ಮಾಡಿದ ತುತ್ತೂರಿಯ ಧ್ವನಿಗಿಂತ ಸುಸ್ವರವುಳ್ಳದ್ದಾಗಿದೆ.

ಈ ಸಾಲುಗಳು ಖಲೀಫನ ಕಿವಿಗೇ ಬಿಳಲು ಅವನು ಸಿಟ್ಟಿಗೇರಿ ತನ್ನ ಹೆಂಡತಿಯನ್ನು ಅರಮನೆಯಿಂದ ಹೊರದೂಡಿದನು. ಆ ಕವಿಯಿತ್ರಿಯು ತನ್ನ ಸಂಬಂಧಿಗಳೊಡನೆ ಮರಳಿ ಬಂದಳು ಆ ಐಶ್ವರ್ಯಯುಕ್ತ ಮಂದಿರದಿಂದ ದೂರಬಂದು ಅವಳು ಸಂತುಷ್ಟಳೇ ಆದಳು ಯಾಕಂದರೆ ಅದು ಅವಳನ್ನು ಯಾವಾಗಲೂ ನಿರುತ್ಸಾಹಿಯನ್ನಾಗಿ ಮಾಡಿಬಿಡುತ್ತಿತ್ತು.
* * * * * * *

ಪ್ರಾಯಶಃ ಸರ್ವ ದೇಶಗಳಲ್ಲಿ ಈಗ ಜನರು ಏನು ತಿಳಿಯತೊಡಗಿದ್ದಾರೆಂದರೆ- ಸಾದಾ ಜೀವನವೂ ವ್ಯರ್ಥ ಖರ್ಚು, ಡಂಭ, ಮಿಥ್ಯಾಭಿಮಾನ ಇವುಗಳನ್ನು ಅವಲಂಬಿಸಿದ ಜೀವನಕ್ಕಿಂತ ಅದೆಷ್ಟೋ ಹೆಚ್ಚಿಗೆ ವಾಂಛನೀಯವಾಗಿದೆ.

ಅಧಿಕಾಧಿಕ ಸಂಖ್ಯೆಯಲ್ಲಿ ಈಗ ಪುರುಷರೂ ಸ್ತ್ರೀಯರೂ ಬಹು ಬೆಲೆಯ ವಸ್ತುಗಳನು ಕೊಂಡುಕೊಳ್ಳಬಲ್ಲ ಆಸಕ್ತಿಯನ್ನಿಟ್ಟಕೊಂಡಿದ್ದರೂ ತಮ್ಮ ಧನದ ಸದುಪಯೋಗ ಹೇಗಾಗಬಲ್ಲದೆಂಬುದನ್ನು ವಿಚಾರಿಸತೊಡಗಿದ್ದಾರೆ. ಅವರು ಸುಗ್ರಾಸ ಭೋಜನದ ಚಿಕ್ಕ ತಟ್ಟೆಗಳ ಬದಲು ಸ್ವಾಸ್ಥ್ಯ ಪ್ರದವಾದ ಭೋಜನದ ವ್ಯವಹಾರವನ್ನು ಒಪ್ಪಿಕೊಳ್ಳಹತ್ತಿದ್ದಾರೆ. ದೊಡ್ಡ ದೊಡ್ಡ ಬೆಲೆಯುಳ್ಳ ಥಳುಬೆಳಕಿನ ಸಾಮಾನುಗಳ ಬದಲು ಅವರು ತಮ್ಮ ಮನೆಗಳನ್ನು ಅಗ್ಗವಾದ ತಾಳಿಕೆಯ ಸಾಮಾನುಗಳಿಂದ ಸಜ್ಜುಗೊಳಿಸುವುದು ಹೆಚ್ಚು ಒಳ್ಳೆಯದೆಂದು ತಿಳಿಯತೊಡಗಿದ್ದಾರೆ. ಯಾಕೆಂದರೆ ಅದು ಮೇಲಿನ ಅಂದಚಂದಕ್ಕೆ ನೋಟಕ್ಕೆ ಅಲ್ಲದೆ ಇನ್ನಾವ ಕೆಲಸಕ್ಕೂ ಬಾರದು.

ಜಗತ್ತಿನ ಉನ್ನತಿಯಲ್ಲಿ ನಮ್ಮ ಜೀವನವನ್ನು ತ್ಯಾಗಮಾಡುವ ಶ್ರೇಷ್ಟನೂ ಉತ್ಸಾಹಿಯೂ ಆದ ಮನುಷ್ಯನು ಯೂವಾಗಲೂ ಶಾಂತಿ ಹಾಗೂ ಮಿತವ್ಯಯಗಳಿಂದ ಇರುವುದನ್ನು ಬಲ್ಲನು. ಅಂಥ ಜೀವನವು ಶರೀರವನ್ನು ಸಹ ಸ್ವಸ್ಥವಾಗಿರಿಸುತ್ತದೆ ಹಾಗೂ ಮನುಷ್ಯನನ್ನು ಸರ್ವ ಹಿತದ ಕಾರ್ಯಗಳಲ್ಲಿ ಹೆಚ್ಚು ಹೆಚ್ಚು ಭಾಗ ತೆಗೆದುಕೊಳ್ಳಲು ಯೋಗ್ಯನನ್ನಾಗಿ ಮಾಡುತ್ತದೆ ಇಂಥ ಉದಾಹರಣೆಗಳಿಂದ ಜನರ ತಲೆಯು ಲಜ್ಜೆಯಿಂದ ಬಾಗಿಬಿಡುವುದು.  ಅವರು ತಮ್ಮ ಸುತ್ತುಮುತ್ತಲು ನಿರರ್ಥಕ ವಸ್ತುಗಳನ್ನು ನೆರೆಯಿಸಿಕೊಂಡಿರುವರು ಹಾಗೂ ಅವರ ಸ್ವಂತದ ಉಡುತೊಡಿಗೆ ಮನೆ ಇವುಗಳ ಸಜ್ಜು ವಣಿಯು ಆಳುಹೋಳುಗಳಿಲ್ಲದೆ ತೊತ್ತುಗಳಿಲ್ಲದೆ ಇನ್ನೆಷ್ಟೂ ಆಗಲಾರದು.

ಅಗಿದು ಕೆತ್ತಿ ತಿದ್ದದಿದ್ದರೆ ಯಾವ ದಿನ್ನೆಯೂ ಸಮವಾಗಲಾರದು. ಒಬ್ಬರ ಧನ ಐಶ್ವರ್ಯವು ಪ್ರಾಯಶಃ ಇನ್ನೊಬ್ಬರ ದುರ್ದೆಶೆಗೆ ಕಾರಣವಾಗುತ್ತ ಇದೆ. ಈ ಜಗತ್ತಿನಲ್ಲಿ ಸುಂದರವೂ ಶ್ರೇಷ್ಟವೂ ಉಪಯುಕ್ತವೂ ಆದ ಬಹಳಷ್ಟು ಕೆಲಸವು ಮಾಡುವುದಕ್ಕಾಗಿ ಬಿದ್ದುಕೊಂಡಿದೆ. ಯಾರಲ್ಲಿ ಬುದ್ದಿಯ ಅಭಾವವು ಎಷ್ಟೂ ಇಲ್ಲವೋ ಅಂಥ ಜನರು ತಮ್ಮ ಸಮಯವನ್ನೂ ಹಣ ಹಾಗೂ ವಿಚಾರಗಳನ್ನೂ ನಿರುಪಯುಕ್ತ ಕಾರ್ಯದಲ್ಲಿ ಖರ್ಚುಗೊಳಿಸಿ ಬಿಡುವ ಸಂಭವವೆಲ್ಲಿ?
*   *   *   *

ಸಾಧು ಫರಾಸ್ವಾ ಅವರ ಮುಖ್ಯ ಕಾರ್ಯವೆಂದರೆ ಸತ್ಯ ಜೀವನದ ಪ್ರಚಾರ. ಆ ಕೆಲಸವನ್ನು ಅವರು ಧನದ ಲಾಲಸೆಯಿಂದ ಮಾಡುತ್ತಿದ್ದಿಲ್ಲ. ಅವರ ಸ್ವಂತದ ಜೀವನವು ಸರಳವಾಗಿತ್ತು ಹಾಗೂ ತಮ್ಮ ಉದಾಹರಣ ಹಾಗೂ ಉಪದೇಶಗಳಿಂದ ಜನರಿಗೆ ಶಿಕ್ಷಣ ಕೊಡುವುದರಲ್ಲಿ ಅವರಿಗೆ ಎಲ್ಲಕ್ಕಿಂತ ಹೆಚ್ಚು ಸಂತುಷ್ಟಿಯಿತ್ತು. ಅವರಿಗೆ ತಿನ್ನಲಿಕ್ಕೆ ಏನು ಸಿಕ್ಕರೂ ಅದರಲ್ಲಿ ಸಂತುಷ್ಟರಾಗಿಬಿಡುತ್ತಿದ್ದರು.
*   *   *   *

ಒಂದು ದಿನ ಅವರು ಹಾಗೂ ಅವರ ಸಂಗಡಿಗ ಮಾತೇವೋ ಇಬ್ಬರೂ ಒಂದು ನಗರದ ಹತ್ತಿರದಿಂದ ಸಾಗಿದರು. ಮಾತೇವೊ ಭಿಕ್ಷೆಯ ಸಲುವಾಗಿ ಒಂದು ಬೀದಿಯನ್ನೂ ಫರಾಸ್ವಾ ಇನ್ನೊಂದು ಬೀದಿಯನ್ನೂ ಹಿಡಿದು ನಡೆದರು ಫರಾಸ್ವಾ ಕಿರಿಯ ಗಾತ್ರದವರಾಗಿ ನೋಡುವುದಕ್ಕೆ ಅಷ್ಟಕ್ಕಷ್ಟೇ ಇದ್ದರು. ಅವರ ಸಂಗಡಿಗನು ಎತ್ತರವಾದ ನಿಲುಕಟ್ಟಿನವನಾಗಿದ್ದು ಪ್ರಭಾವ ಶಾಲಿಯೂ ಸುಂದರನೂ ಆಗಿದ್ದನು. ಜನರು ಆತನಿಗೆ ಭಿಕ್ಷೆಯನ್ನು ತುಂಬ ಹಾಕಿದರು. ಆದರೆ ಬಡಪಾಯಿಯಾದ ಫರಾಸ್ವಾನಿಗೆ ಸ್ವಲ್ಪವೇ ಅನ್ನದ ಹೊರತು ಇನ್ನೇನೂ ಸಂಗ್ರಹಿಸಲಿಕ್ಕೆ ಆಗಲಿಲ್ಲ.

ಸಂಜೆಗೆ ನಗರದ ಅಗಸೆಯ ಹೊರಗೆ ಇಬ್ಬರೂ ಕೂಡಿದರು. ಹತ್ತಿರವೇ ಹರಿಯುವ ಹೊಳೆಯ ದಂಡೆಯಲ್ಲಿದ್ದ ಒಂದು ದೊಡ್ಡ ಬಂಡೆಗಲ್ಲಿನ ಮೇಲೆ ಕುಳಿತುಕೊಂಡು ಅವರು ತಮ್ಮ ಇಡಿಯ ದಿವಸದ ಹುಟ್ಟುವಳಿಯ ಮೇಲೆ ದೃಷ್ಟಿ ಹಾಕಿದರು. ಫರಾಸ್ವಾ ಪ್ರಫುಲ್ಲಿತ ಮುಖದಿಂದ ಮಾತೆತ್ತಿದನು-

“ಬಂಧು ಮಾತಾವೋ ನಮಗೆ ಇಂಥ ಮಹಾಭೋಜನದ ಭರವಸೆಯಿರಲಿಲ್ಲ.” ಅದಕ್ಕೆ ಮಾತೇವೋ ಮರುನುಡಿದಿದ್ದೆಂದರೆ – “ರೊಟ್ಟಿಯ ಇಷ್ಟು ಸ್ವಲ್ಪ ತುಣುಕುಗಳಲ್ಲಿ ನಿಮಗೆ ಮಹಾ ಭೋಜನವು ಕಾಣಿಸಿಕೊಳ್ಳುತ್ತಿದೆಯೇ? ನಮ್ಮಲ್ಲಿ ಯಾವ ಮೇಜೂ ಇಲ್ಲ ಚೂರಿ ಇಲ್ಲ; ಮುಳ್ಳು ಚಮಚೆ ಇಲ್ಲ; ಯಾವ ನೌಕರನೂ ಇಲ್ಲ.”

“ಹಸಿವೆಯಾದ ಮೇಲೆ ಸುಂದರವಾದ ಬಂಡೆಗಲ್ಲೇ ಮೇಜು. ಈ ಮೇಜಿನ ಮೇಲೆ ಇಟ್ಟ ರೊಟ್ಟಿ ಅವೆ. ನೀರಡಿಕೆಯಾದಾಗ ಕುಡಿಯುಲಿಕ್ಕೆ ನದಿಯ ನಿರ್ಮಲ ನೀರು ಅದೆ. ಇದು ಔತಣವಲ್ಲವೇ? ಎಂದು ಫರಾಸ್ವಾ ಉತ್ತರ ಕೊಟ್ಟರು.

ಬಡವರು ಯಾವಾಗಲೂ ತಮ್ಮ ದೀನಾವಸ್ಥೆಯಲ್ಲಿಯೇ ಸಂತೋಷವನ್ನು ಭಾವಿಸಿ ಅದರಲ್ಲಿಯೇ ಬಿದ್ದುಕೊಂಡಿರಬೇಕೆಂದು ಇದರರ್ಥವಲ್ಲ. ಆದರೆ ಇದರಿಂದ ಹೊರಪಡುವದೇನಂದರೆ ಯಾವ ಬಾಹ್ಯ ಧನ ಹಾಗೂ ಸಾಮಗ್ರಿಗಳ ಅಭಾವದಲ್ಲಿ ಸುಂದರವಾದ ಆತ್ಮದೊಳಗಿರುವವನ ಸಂತೋಷವು ಹಾಗೂ ಪ್ರಸನ್ನತಾರೂಪೀ ಧನ ಇವು ಆ ಸ್ಥೂಲ ಧನದ ಸ್ಥಳವನ್ನು ತೆಗೆದು ಕೊಳ್ಳುತ್ತವೆ.
*   *   *   *

ಸರಳ ಜೀವನವು ಯಾವ ವ್ಯಕ್ತಿಗೂ ಹಾನಿಯನ್ನುಂಟು ಮಾಡುವದಿಲ್ಲವೆನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ಧನ ಐಶ್ವರ್ಯದ ಬಾಹುಲ್ಯದ ವಿಷಯದಲ್ಲಿ ಹೀಗೆ ಹೇಳಲಿಕಾಗುವುದಿಲ್ಲ. ನಿರರ್ಥಕ ವಸ್ತುಗಳ ಸಂಗ್ರಹವು ಪ್ರಾಯಶಃ ಮನುಷ್ಯನ ಮಟ್ಟಿಗೆ ಕ್ಲೇಶಕ್ಕೆ ಕಾರಣವಾಗಿ ಬಿಡುತ್ತದೆ.

ಪ್ರಸಿದ್ನ ಬಾದಶಹನಾದ ಅಕಬರನ ರಾಜ್ಯಕಾಲದಲ್ಲಿ ಆಗ್ರದೊಳಗೆ ಬನಾರಸೀದಾಸ ಎಂಬ ಒಬ್ಬ ಜೈನ ಸಾಧು ಇರುತ್ತಿದ್ದನು. ಒಂದು ದಿನ ಬಾದಶಹನು ಅವನನ್ನು ತನ್ನ ಮಂದಿರಕ್ಕೆ ಕರೆಯಿಸಿ ಅವನಿಗೇ ಹೇಳಿದನು “ನಿಮಗೆ ಬೇಕಾದುದನ್ನು ನನಗೆ ಬೇಡಿ ಇಸಗೊಳ್ಳಿರಿ ನಿಮ್ಮ ಧರ್ಮ ಪೂರ್ಣ ಜೀವನದ ಫಲಸ್ವರೂಪವಾಗಿ ನಿಮ್ಮ ಸರ್ವ ಇಚ್ಛೆಗಳನ್ನು ಪೂರ್ತಿ ಗೊಳಿಸಲಾಗುವದು.”

“ಪರಬ್ರಹ್ಮನು ನನಗೆ ಆವಶ್ಯಕತೆಗಿಂತ ಹೆಚ್ಚಿಗೆ ಕೊಟ್ಟಿದ್ದಾನೆ” ಎಂದು ಆ ಸಾಧುವು ಉತ್ತರ ಕೊಟ್ಟನು.

ಅಕಬರನ್ನು ಆಗ್ರಹಪಡಿಸಿದನು- “ಏನಾದರೂ ಬೇಡಿರಿ”

“ಹಾಗಾದರೆ ರಾಜರೇ ನಾನು ಬೇಡುವುದು ಇದನ್ನೇ. ಏನೆಂದರೆ-ನೀವು ನನ್ನನ್ನು ಇನ್ನೆಂದೂ ನಿಮ್ಮ ಮಂದಿರಕ್ಕೆ ಕರೆಯಿಸಬೇಡಿರಿ ನನ್ನ ಸರ್ವ ಸಮಯವೂ ಸ್ವಾಮಿಯ ಕಾರ್ಯದ ಸಲುವಾಗಿಯೇ ಅದೆ.”

“ಒಳ್ಳೆದು ಹಾಗೂ ಆಗಲಿ ಆದರೆ ಮಹಾರಾಜರೇ ಈಗ ನಿಮ್ಮಲ್ಲಿ ನನ್ನದೂ ಒಂದು ಪ್ರಾರ್ಥನೆ ಅದೆ.”

“ಹೇಳಿರಿ ರಾಜರೇ”

“ಯಾವುದನ್ನು ನಾನು ಸದಾ ನೆನಪಿಡಬಲ್ಲೆ; ಹಾಗೂ ಯಾವುದರ ಮೇಲೆ ಪೂರ್ಣ ಆಧಿಕಾರ ನಡೆಸಬಲ್ಲೆ- ಈ ಬಗ್ಗೆ ನನಗೊಂದು ಸಲಹೆ ಕೊಡಿರಿ.”

ಬನಾರಸೀದಾಸಸು ಒಂದು ಕ್ಷಣ ಯೋಚಿಸಿ ಮರುನುಡಿದನು “ಯಾವ ಮಾತನ್ನು ಸದಾ ಲಕ್ಷದಲ್ಲಿಡಬೇಕೆಂದರೆ ನಿಮ್ಮ ಭೋಜನವು ಯಾವಾಗಲೂ ಶುದ್ಧವೂ ಪವಿತ್ರವೂ ಆಗಿರಲಿ. ರಾತ್ರಿಯಲ್ಲಿ ಮಾಂಸ ಹಾಗೂ ಪೇಯ ಪದಾರ್ಥಗಳ ಬಗ್ಗೆ ವಿಶೇಷವಾಗಿ ಲಕ್ಷದಲ್ಲಿಡತಕ್ಕದ್ದು.”

“ನಾನು ತಮ್ಮ ಸಲಹೆಯನ್ನು ಎಂದಿಗೂ ಮರೆಯುವದಿಲ್ಲ” ಎಂದು ಬಾದಶಹನು ಸಾಧುವಿಗೆ ಭರವಸೆ ಕೊಟ್ಟನು.

ನಿಜವಾಗಿಯೂ ಆ ಸಲಹೆಗಳು ಉತ್ತಮವಾಗಿವೆ ಯಾಕಂದರೆ ಶುದ್ದ ಸಾತ್ವಿಕ ಭೋಜನ ಹಾಗೂ ಪೇಯ ಪದಾರ್ಥಗಳು ಶರೀರವನ್ನು ಸ್ವಸ್ಥಗೊಳಿಸುತ್ತವೆ ಅಂಧ ಶರೀರವೇ ಶುದ್ಧ ವಿಚಾರ ಹಾಗೂ ಪವಿತ್ರ ಜೀವನಗಳ ಕ್ಷೇತ್ರವಾಗಲಿಕ್ಕೆ ಯೋಗ್ಯವಾಗಬಲ್ಲದು.

ಆ ಸಾಧುವು ಅಕಬರನ ಹತ್ತಿರ ಬಂದ ದಿವಸವು ರೋಜಾದ ದಿವಸ ವಾಗಿತ್ತು. ಅಂದು ರಾತ್ರಿ ಮುಂದಿನ ಪ್ರಹರದಲ್ಲಿ ಅಕಬರನು ಭೋಜನ ಮಾಡುವುದಿತ್ತು. ಅಡಿಗೆಯವನು ಸಂಜೆಗೇ ಅಡಿಗೆಯನ್ನೇ ಸಿದ್ದಪಡಿಸಿ ಇಟ್ಟನು. ಚಿನ್ನ ಬೆಳ್ಳಿಗಳ ತಟ್ಟೆಗಳಲ್ಲಿ ಸರ್ವ ಸಾಮಗ್ರಿಗಳನ್ನು ಬಡಿಸಿ ಅವನು ರೋಜಾ ಮುಗಿಸುವ ಸಮಯವನ್ನು ಪ್ರತೀಕ್ಷಿಸುತ್ತ ಕುಳಿತಿದ್ದನು.

ಇನ್ನು ಕೆಲವೊಂದು ರಾತ್ರಿ ಉಳಿದಿತ್ತು. ಆಗ ಅಕಬರನು ಊಟಕ್ಕೆ ತರಲು ಅಪ್ಪಣೆ ಕೊಟ್ಟನು ಅವನು ಗಡಿಬಿಡಿಯಲ್ಲಿದ್ದರೂ ಅವನಿಗೆ ಒಮ್ಮೆಲೆ ಬನಾರಸೀದಾಸನ ವಚನವು ನೆನಪಿಗೆ ಬಂದಿತು. – ಮಾಂಸ ಹಾಗೂ ಪೇಯ ಪದಾರ್ಥಗಳ ಬಗ್ಗೆ ವಿಶೇಷ ಲಕ್ಷ ಕೊಡು. ಅವನು ತನ್ನ ಮುಂದೆ ಇರಿಸಿದ ತಟ್ಟೆಗಳನ್ನು ಲಕ್ಷ ಪೂರ್ವಕವಾಗಿ ನೋಡಿದನು. ನೂರಾರು ದೊಡ್ಡ ಇರುವೆಗಳು ಅವುಗಳ ಮೇಲೆ ಹಾದು ಹೊರಟಿದ್ದವು. ಆಳುಗಳು ತುಂಬ ಜಾಗರೂಕತೆ ವಹಿಸಿದ್ದರೂ ಇರುವೆಗಳು ಆ ಆಡಿಗೆಯ ಮೇಲೆ ಏರಿ ಹೋಗಿದ್ದವು. ಹಾಗೂ ಅವು ಇನ್ನು ತಿನ್ನುವ ಕೆಲಸ ಉಳಿಸಿದ್ದಿಲ್ಲ.

ಆಕ್ಬರನು ತಟ್ಟೆಗಳನ್ನು ಮರಳಿ ಕಳಿಸಿದನು ಆದರೆ ಆ ಘಟನೆಯಿಂದ ಅವನ ಮನದಲ್ಲಿ ಬನಾರಸೀದಾಸನ ಸಲಹೆಯ ಮಹತ್ವವು ಇನ್ನೂ ಹೆಚ್ಚಾಗಿ ಬಿಂಬಿಸಿತು.

ಬನಾರಸೀದಾಸನು ಅಕಬರನಿಗೆ ಕೇವಲ ಇರುವೆಗಳ ಸಲುವಾಗಿ ಮಾತ್ರ ಜಾಗರೂಕವಾಗಿರಲು ಹೇಳಿಲ್ಲವೆಂದೂ ಶರೀರ ಹಾಗೂ ಮನಗಳಿಗೆ ಅಹಿತಕರವಾಗಿರುವ ಎಲ್ಲ ಭೋಜನಗಳ ಸಲುವಾಗಿ ಹೇಳಿದನೆಂದೂ ನಿಮಗೆ ತಿಳಿದು ಬಿಟ್ಟಿರಬಹುದು.

ಅಪಥ್ಯ ಭೋಜನದಿಂದ ಅನೇಕ ವ್ಯಾಧಿಗಳು ಉತ್ಪನ್ನವಾಗುತ್ತವೆ.

ಯಾರು ಹೇಳಿಕೇಳಿ ದೂಷಿತವಾದ ಭೋಜ್ಯ ಪದಾರ್ಥಗಳನ್ನು ಮಾರು ತ್ತಾರೆಯೊ ಅವರು ನಾಗರಿಕರ ವಿಷಯದಲ್ಲಿ ಮಾಡಲಾಗುವ ಅಪರಾಧವು ಅಕ್ಷಮ್ಯವಾಗಿದೆ. ಬರಿಯ ಹಳಿಸಿ ಹಾಗೂ ಕೊಳೆತು ನಾರುವ ಪದಾರ್ಥವೇ ಅಹಿತಕರವೆಂದಲ್ಲ. ಆದರೆ ಏನನ್ನು ತಿನ್ನುವದರಿಂದ ಮನದಲಾಗಲಿ  ಶರೀರದಲ್ಲಾಗಲಿ ಯಾವುದೇ ಪ್ರಕಾರದ ದೋಷ ಉತ್ಪನ್ನವಾಗಿಬಿಡುವದೋ ಆ ಎಲ್ಲ ಪದಾರ್ಥಗಳೂ  ಆವಾಂಛನೀಯವೇ ಆಗಿವೆ.
*   *   *   *

ಅಕಬರನ ತಟ್ಟೆಯಲ್ಲಿ ಸಹ ಇರುವೆಗಳಿದ್ದವಾದರೂ ಬನಾರಸೀದಾಸನು ಆ ಪೇಯ ಪದಾರ್ಥಗಳ ಬಗ್ಗೆಯೂ ಜಾಗರೂಕವಾಗಿರುವುದಕ್ಕೆ ಹೇಳಿದ್ದ ನೆಂಬುದನ್ನು ಮೇಲೆ ಕಾಣಿಸಿದ ಕಥೆಯಲ್ಲಿ ಹೇಳಲಾಗಿಲ್ಲ.

ಹೊಳೆಯುತ್ತಿರುವ ತಟ್ಟೆಯು ಕಣ್ಣಗಳಿಗೆ ಮೋಹಗೊಳಿಸುವುದು ನಿಜ ಅವುಗಳೊಳಗಿನ ತರಲ ಪದಾರ್ಥವು ಸಾದಿಷ್ಟ ಹಾಗೂ ನವೀನತೆಯನ್ನು ಕೊಡುವಂಥದೆಂದು ಕಂಡುಬರುತ್ತದೆ. ಆದರೆ ನಿಜವಾಗಿ ಆದು ಮನುಷ್ಯನಿಗೆ ಹಾನಿಕಾರಕವಾಗಿರುತ್ತದೆ ಆದರೆ ಅವುಗಳಲ್ಲಿಯೂ ಎಲ್ಲಕ್ಕಿಂತ ಹೆಚ್ಚಾಗಿ ಹಾನಿಕಾರಕವಾಗಿರುವುದು ಸುಧಾಪಾತ್ರ.

ಮದಿರಾಪಾನವೂ ಜೂಜಿನಾಟವೂ ಪಾಪವೆಂದು ಮಹಮ್ಮದ ಪೈಗಂಬ ರರ ಶಿಕ್ಷಣವಿತ್ತು. ಆದಕಾರಣ ಕುರಾನ ವಚನಗಳ ಮೇಲೆ ಶ್ರದ್ಧೆಯಿಡುವವರು ಆ ಎರಡೂ ವಸ್ತುಗಳಿಂದ ದೂರ ಉಳಿಯಬೇಕು.

ಆದರೆ ಮದಿರಾಪಾನವು ಯೋಗ್ಯವೆಂದು ತಿಳಕೊಳ್ಳುವ ಜನರು ಜಗತ್ತಿನಲ್ಲಿ ಎಲ್ಲ ಕಡೆಗೂ ಇದ್ದಾರೆ. ನಾವು ಅವರ ಅಭಿಪ್ರಾಯವನ್ನು ಮನ್ನಿಸುತ್ತೇವೆ. ಆದರೆ ಸೆರೆ ಕುಡಿಯದಿರುವದು ಸಹ ಒಂದು ಅವಗುಣವೆಂದು ಆ ಜನರು ಎಂದಿಗೂ ಹೇಳುವದಿಲ್ಲ.

ಮದ್ಯಪಾನವು ಕೆಟ್ಟದೆಂದು ಕೆಲವರು ತಿಳಿಯುತ್ತಾರೆ ಒಳ್ಳೆಯದೆಂದೂ ಕೆಲವರು ತಿಳಿಯುತ್ತಾರೆ. ಆದರೆ ಅದನ್ನು ಕುಡಿಯದಿರುವುದು ದೋಷವೆನ್ನುವವರು ಯಾರೂ ಇಲ್ಲ. ಅದನ್ನು ಕುಡಿಯುವುದು ಲಾಭದಾಯಕವಿರಲಿ ಅಥವಾ ಬಿಡಲಿ ಈ ಮಾತು ವಿವಾದಾಸ್ಪದವಾಗಬಲ್ಲದು. ಆದರೆ ಅದನ್ನು ಕುಡಿಯದಿರುವದು ಹಾನಿಕರವೆಂಬ ಮಾತು ಯಾರ ಬಾಯಿಂದಲೂ ಹೊರಡಲಾರದು ಹಾಗೂ ಅದನ್ನು ಕುಡಿಯದಿರುವದರಿಂದ ದುಡ್ಡು ಉಳಿಯುತ್ತದೆಂಬ ವಿಶ್ವಾಸವು ಪ್ರತಿಯೊಬ್ಬರಿಗೂ ಅದೆ.

ಪ್ರಾಯಶಃ ಸರ್ವ ದೇಶಗಳಲ್ಲಿ ಇದರಿಂದ ಉಳಿಯುವುದರ ಸಲುವಾಗಿ ಸಮಿತಿಗಳನ್ನು ನಿರ್ಮಿಸಲಾಗಿದೆ. ಅದರ ಸದಸ್ಯರು ಮದ್ಯವನ್ನು ಮುಟ್ಟವದಿಲ್ಲವೆಂದು ಪ್ರತಿಜ್ಞೆ ಮಾಡುತ್ತಾರೆ. ಕೆಲವು ಪಟ್ಟಣಗಳಲ್ಲಿ ಗುತ್ತಿಗೆದಾರರಿಗೆ ಅದನ್ನು ಮಾರುವುದಕ್ಕೂ ಅಡ್ಡಿಗೊಳಿಸಲಾಗಿದೆ.

ಇದಕ್ಕೆ ವಿಪರೀತವಾಗಿ ಕೆಲವು ಕಡೆ ಈ ವರೆಗೂ ಜನರು ಮದ್ಯವನ್ನೇ ಅರಿಯದವರಾಗಿದ್ದಲ್ಲೆಲ್ಲ ಇದರ ವ್ಯವಹಾರ ಆರಂಭವಾಗಿದೆ. ಉದಾಹರಣಾರ್ಥ ಭಾರತ ವರ್ಷದಲ್ಲಿ ಎಲ್ಲಿ ನೂರುನೂರು ವರುಷಗಳಿಂದ ಇದರ ವ್ಯವಹಾರವಾಗುತ್ತಿದ್ದಿಲ್ಲವೋ ಅಲ್ಲಿ ಈಗ ಪ್ರಚಲಿತವಾಗಿ ಬಿಟ್ಟಿದೆ. ಪ್ರಾಚೀನ ಕಥೆಗಳಲ್ಲಿ ವರ್ಣಿತವಾದ ಯಾವ ರಾಕ್ಷಸನಿಗಿಂತಲೂ ಇದು ಕಡಿಮೆ ಭಯಾನಕವಾಗಿಲ್ಲ. ಆ ದುರ್ದಾಂತ ರಾಕ್ಷಸರಾದರೋ ಕೇವಲ ಶರೀರಕ್ಕೆ ಮಾತ್ರ ಹಾನಿಯನ್ನುಂಟು ಮಾಡುತ್ತಿದ್ದರು. ಆದರೆ ಈ ಸೆರೆಯು ವಿಚಾರಶಕ್ತಿಯೊಂದಿಗೆ ಚರಿತ್ರವನ್ನು ಸಹ ನಷ್ಟಭ್ರಷ್ಟಗೊಳಿಸಿಬಿಡುವ ಶಕ್ತಿಯನ್ನಿಡುತ್ತದೆ. ಎಲ್ಲಕ್ಕೂ ಮೊದಲು ಅದು ಶರೀರವನ್ನೇ ಹಾನಿಗೀಡು ಮಾಡುತ್ತದೆ. ಯಾವ ತಾಯಿತಂದೆಗಳು ಇದನ್ನು ಹೆಚ್ಚಾಗಿ ಉಪಯೋಗಿಸುವರೋ ಅವರ ಮಕ್ಕಳ ಸಹ ಅದರ ಕೆಟ್ಟ ಪ್ರಭಾವವು ಬಹಳಷ್ಟು ಬೀಳುತ್ತಿದೆ. ಅದು ಬುದ್ಧಿಯನ್ನು ನಾಶಮಾಡುತ್ತದೆ. ಹಾಗೂ ಯಾರು ಮನುಷ್ಯ ಮಾತ್ರರ ಸೇವಕನಾಗಬೇಕಾಗಿದೆಯೋ ಅವರನ್ನದು ತನ್ನ ದಾಸರನ್ನಾಗಿ ಮಾಡಿಕೊಳ್ಳುತ್ತದೆ. ನಾವು ಸರ್ವರೊಳಗಿನ ಪ್ರತಿ ಒಬ್ಬರೂ ಮನುಷ್ಯ ಮಾತ್ರರ ಸೇವಕರಾಗಬೇಕಾಗಿದೆ. ನಾವು ನಮ್ಮ ತಿಂಡಿತೀರ್ಥಗಳಿಂದ ನಮ್ಮೆ ಮನವನ್ನೂ ಶರೀರವನ್ನೂ ದುರ್ಬಲಗೊಳಿಸಿಕೊಂಡರೆ ನಾವು ಆಯೋಗ್ಯ ಸೇವಕರೇ ಅಗಿಬಿಡುವೆವು. ಇಂಥ ಸೇವಕರು ತಮ್ಮ ಕಾರ್ಯ ಮಾಡುವುದರಲ್ಲಿ ಅಸಮರ್ಥರಾಗುವರು.

ತೋಳು ಕತ್ತರಿಸಿ ಹೋದರೆ ಆ ಸೈನಿಕನು ಏನಾಗುವನು? ನಾವೆಯ ನಡುಗಂಬವೇ ಮುರಿದಲ್ಲಿ ನಾವಿಕನು ಯಾವ ಕೆಲಸದವನು. ಕುದುರೆ ಕುಂಟಾದರೆ ಸ್ವಾರನು ಏನು ಮಾಡಬಲ್ಲನು? ತನ್ನ ಅಮೂಲ್ಯ ಶಕ್ತಿಗಳ ಮೇಲಿನ ಅಧಿಕಾರವು ಹಾರಿಹೋದಲ್ಲಿ ಆ ಮನುಷ್ಯನು ಏನಾಗುವನು? ಅವನು ಪಶುವಿಗಿಂತಲೂ ಕಡೆಯಾಗುವನು. ಪಶುವು ಸಹ ತನಗೆ ಹಿತಕರವಾದುದನ್ನೇ ತಿನ್ನುತ್ತದೆ, ಕುಡಿಯುತ್ತದೆ.

ರೋಮನ್ ಕವಿಯಾದ ವರಜಿಲ್‌ನಿಗೆ ಹೊಲಗಳಲ್ಲಿರುವುದು ತೀರ ಒಲುಮೆಯ ವಿಷಯ. ಪುಷ್ಟ ಹಾಗೂ ಬಲಶಾಲಿಯಾದ ಎತ್ತುಗಳೆಂದರೆ ಅವನಿಗೆ ವಿಶೇಷ ಪ್ರಿಯವಾದವುಗಳು. ಯಾಕಂದರೆ ಅವು ಹೊಲದಲ್ಲಿ ನೇಗಿಲು ಎಳೆದು ಅದನ್ನು ಸುಫಲವಾಗುವಂತೆ ಸಿಧ್ದಸಡಿಸುವವು. ಎತ್ತಿನ ಶರೀರವು ತುಂಬ ಗಟ್ಟಿಮುಟ್ಟಾಗಿರುತ್ತದೆ. ಅದರ ತಾರುಣ್ಯವು ಬಹು ಪುಷ್ಟವಾಗಿರುತ್ತದೆ. ಇಡಿಯ ವರುಷವೂ ಅದು ಕಠಿಣವಾದ ಕೆಲಸ ಮಾಡುವ ಅಭ್ಯಾಸಿಯಾಗಿರುತ್ತದೆ.

ವರೆಜಿಲ್‌ನು ಹೇಳುವದೇನೆಂದರೆ-

“ಅದು ಮಧ್ಯದಿಂದ ಹಾಗೂ ಔತಣದಿಂದ ಯಾವಾಗಲೂ ದೂರವಾಗಿರುತ್ತದೆ, ಹುಲ್ಲು ಕಡ್ಡಿಗಳನ್ನು ತಿನ್ನುತ್ತದೆ. ಹಾಗೂ ಹರಿಯುವ ನದಿಗಳ ಹಾಗೂ ನಿರ್ಮಲ ಝರಿಗಳ ನೀರಿನಿಂದ ತನ್ನ ನೀರಡಿಕೆಯನ್ನು ಹಿಂಗಿಸುತ್ತದೆ. ಯಾವ ಚಿಂತೆಯೂ ಅದರ ಸುಖನಿದ್ರೆಯಲ್ಲಿ ತಡೆ ಯೊಡುವದಿಲ್ಲ.”

ಬಲಶಾಲಿಯಾಗಬೇಕಾದರೆ ಸಂಯಮಿಯಾಗು.

ದುರ್ಬಲನಾದರೆ ನೀನದರಿಂದ ರೋಸಿ ಹೋಗುವದಿಲ್ಲವೇ – ಎಂದು ನಿಮ್ಮನ್ನು ಯಾರಾದರೂ ಕೇಳುವರು.

ತಿಂಡಿತೀರ್ಥಗಳ ಸಂಯಮವು ಎಲ್ಲಿ ಬಲಶಾಲಿಗಳ ಶಕ್ತಿಯನ್ನು ವೃದ್ಧಿಗೊಳಿಸುತ್ತದೆಯೋ ಅಲ್ಲಿ ದುರ್ಬಲರ ಶಕ್ತಿಯ ರಕ್ಷಣೆಯನ್ನೂ ಮಾಡುತ್ತದೆ.

ಬನಾರಸೀದಾಸನ ಸಲಹೆಯೇನಂದರೆ-
“ಲಕ್ಷ್ಯವಿರಲಿ ತಿನ್ನುವಲ್ಲಿ”
“ಲಕ್ಷ್ಯವಿರಲಿ ಕುಡಿಯುವಲ್ಲಿ”

ಹಿಂದಿ ಮೂಲ: ಶ್ರೀ ತಾಯಿ
*****

ಸಿಂಪಿ ಲಿಂಗಣ್ಣ
Latest posts by ಸಿಂಪಿ ಲಿಂಗಣ್ಣ (see all)