ಬಳ್ಳಾರಿ ರೆಡ್ಡಿ ಹೊಡೆತ ಕೋಲ್ಟು ಉಗಿತ ಕೆರಳಿದ ಗೋಡ್ರ ಕುಣಿತ

ಬಳ್ಳಾರಿ ರೆಡ್ಡಿ ಒದೆತ ತಾಳಲಾತದೆ ಮಿಕ್ಸ್ಚರ್ ಸರ್ಕಾರ ಅದರಿ ಅಲ್ಲಾಡ್ತಾ ಇರೋವಾಗ್ಲೆ ಸೂಪ್ರೀಂ ಕೋಲ್ಟು ಬ್ಯಾರೆ ಸರ್ಕಾರದ ಮಕ್ಕೆ ಕ್ಯಾಕರ್ಸಿ ಉಗಿದೈತೆ. ಕಾಂಗ್ರೆಸ್ ಸರ್ಕಾರ ಇದ್ದಾಗ್ಲೂ ಇದೇ ಗತಿ ಜೆಡಿ‌ಎಸ್ ನೋದೂ ಇದೇ ಸ್ಥಿತಿ. ಕೋಲ್ಟ್ ಛೀಮಾರಿ ಹಾಕಾದು ಸಿ‌ಎಂ ಸಾರಿ ಕೇಳಾದು ನಡ್ದೆ ಐತಿ. ಗ್ರಾಮೀಣ ಕೃಪಾಂಕ ಅಂತ ಹಳ್ಳಿ ಹೈಕಳ ಮ್ಯಾಗೆ ಸರ್ಕಾರ ಕಟಸಿ ತೋರಿಸಿದ್ನೆ ಕೋಲ್ಟು ರಾಂಗ್ ಆಗಿ ಮೆರಿಟ್ ಪಡೆದ ಹೈಕ್ಳುಗುಳ್ಗೆ ಮೆರಿಟ್ಟೇ ಬ್ಯಾಡವೇನ್ರಿ? ಅವೆಲ್ಲಿಗೆ ಹೋಗಬೇಕ್ರಿ ಅಂತ ಸರ್ಕಾರಕ್ಕೆ ಉಗೀತು. ಸರ್ಕಾರ ಖಾಸಗಿ ಶಿಕ್ಷಣದ ಮ್ಯಾಗೆ ಹಿಡಿತ ಹಾಕ್ಲಿಕ್ಕೆ ಹೊಂಟಾಗ್ಲೂ ‘ನೋ ಪರ್ಮಿಟ್’ ಅಂತ ಮತ್ತೆ ಉಗೀತು. ಪಿಡಬ್ಲ್ಯುಡಿ ಇಲಾಖೆ ಬಡ್ತಿ ವಿಷಯದಾಗೂ ಕೋಲ್ಟು ಅಡ್ಡಬಾಯಿ ಹಾಕ್ತು. ವರನಟ ರಾಜಣ್ಣನ್ನ ಈರಪ್ಪ ಕಾಡ್ನಾಗಿಟ್ಕಂಡಾಗ ಈರಪ್ಪನ ರಿಲೇಶನ್ಸ್‍ನ ರಿಲೀಸ್ ಮಾಡಲೊಪ್ಪದ ಕೋಲ್ಟು ‘ಧರಂ ಇದರೆ ಈರಪ್ಪನ ಹಿಡ್ದು ಹಾಕಿ ಇಲ್ಲದಿದ್ರೆ ರಾಜೀನಾಮೆ ಬರ್ದಾಕಿ ಅಂತ ಉಗ್ದು ಉಪ್ಪು ಹಾಕ್ತು.’ ಈರಪ್ಪ ನೆಂಟರಿಗೆ ಕ್ಷಮಾದಾನ ಕೇಳಿದಾಗ್ಲೂ ಕೋಲ್ಟು ಒಪ್ಕಳ್ನಿಲ್ಲ. ಕಾವೇರಿ ನೀರು ಕೊಂಗಾಟಿಗಳಿಗೆ ಬಿಡೋ ಮ್ಯಾಟನಾಗೂ ಅದು ಕೂಂಗಾಟಿಗಳ ವಕಾಲತ್ತು ವಹಿಸೇ ಆಲ್ಡರ್ ಮಾಡ್ತು. ಎಸ್‌ಎಂ ಕಿಸ್ಣ ತನ್ನ ನೆಗ್ಲೆಕ್ಟ್ ಮಾಡ್ದ ಅಂತ ಕ್ರಮ ತಗಾತೀನಿ ಅನ್ನುತ್ಲು ವಿಗ್ ತೆಗೆದಿಟ್ಟ ಕಿಸ್ಣ ಸಾರಿ ಕೇಳಿದ್ದೂ ಆತು. ಇದೆಲ್ಲಾ, ಓಲ್ಡ್ ಇನ್ಸಿಡೆಂಟ್ ಅನ್ಕಂಡ್ರೆ ಈಗಿನ ಸರ್ಕಾರಕ್ಕೂ ಕೋಲ್ಟು ತಾಂಬೂಲ ಹಾಕ್ಕಂಡು ಉಗೀಲಿಕತ್ತದೆ. ಕಾರಿಡಾರ್ ಯೋಜ್ನೆ ಬಗ್ಗೆ ಕೋಲ್ಟು ನೈಸ್ ಆಗಿ ನೈಸ್ ಪರವಾಗಿ ನಿತ್ಕಂಬುಡ್ತು. ನ್ಯಾಯಾಂಗ ತನಿಖೆ ಮಾಡಿಸ್ತೀನಿ ಅಂತ ಸಿ‌ಎಂ ನೈಸ್ ಮಾಡೋಕೆ ಹೋದ್ರೆ ಕ್ಯಾರೆ ಅನ್ಲಿಲ್ಲ. ಯಾಕಿಂಗೆ ಸರ್ಕಾರ ಎಗೇನ್ ಅಂಡ್ ಎಗೇನ್ ಆಪಾಟಿ ಮಕ್ಕೆ ಉಗಿಸ್ಕಂಡು
ವರಸ್ಕೋತೇತಲ್ಲ! ಸರ್ಕಾರದ ಪರ ವಕೀಲರು ಕತ್ತೆ ಕಾಯ್ತಾರಾ? ಸರಿಯಾಗಿ ಕೇಸು ಬ್ಯುಲ್ಡಪ್ ಮಾಡಾಕಿಲ್ವ? ಎವಿಡೆನ್ಸ್ ಇಟ್ಕಂಡು ಮಾತಾಡ್ಲಿಕಿಲ್ವ? ಅಧಿಕಾರಿಗಳು ದಾಖಲೆ ನೆಟ್ಟಗೆ ಒದಗಿಸ್ತಿಲ್ವ? ಕೋಲ್ಟು ನೀಡಿದ ಗಡುವು ಹತ್ತಿರ ಬಂದಾಗ ಅವಸರ್ದಾಗೆ ಮಾವ ಸೊಸಿನಾ ಹಿಡ್ಕಂಡಾ ಅನ್ನಂಗೆ ಯಾವುದೋ ಮಾಹಿತಿ ಕೊಟ್ಟು ಉಗಿಸ್ಕೋತದಾ? ಹಿಂಗಾದ್ರೆ ಸೋಲ್ದೆ ಇನ್ನೇನಾಯ್ತದೆ. ಸರ್ಕಾರಕ್ಕೆ ಕಾನೂನು ಸಂವಿಧಾನದ ನಿರ್ಣಯದ ಮ್ಯಾಗೆ ರೆಸ್ಪೆಕ್ಟೇ ಇಲ್ಲ, ಕುರ್ಚಿ ಉಳಿಸಿಕೊಳ್ಳೋದ್ರಾಗಷ್ಟೇ ಪರ್‌ಫೆಕ್ಟ್. ಕಾನೂನ್ನ ತಿಕದ ಅಡಿಗೆ ಹಾಕ್ಕೊಂಡು ಕೂರೋದಿಂದ್ರೆ ಕೋಲ್ಟುತಾವ ಉಗಿಸ್ಕಂತದೆ ಅಂಬೋದು ಕಾನೂನು ತಜ್ಞರ ಅಂಬೋಣ. ಇದೆಲ್ಲಾ ಸರ್ಕಾರನೇ ತಿಂದು ತೇಗೋ ಉಂಬಣ್ಣಗಳಿಗೆ ಹೆಂಗೆ ಗೊತ್ತಾದಾತು ಅಂತ ನಗಲಿಕತ್ತಾರೆ. ಅವರು ೧೫೦ ಕೋಟಿ ಉಂಡು ಕೈ ಬಾಯ್ನ ನೆಟ್ಟಗೆ ತೊಳ್ಕಂಡಿಲ್ಲ. ಸಿ‌ಎಂನ ಕೈ ಬಾಯೆಲ್ಲ ವಾಸ್ನೆ ಹೊಡಿಲಿಕತ್ತವೆ ಅಂತ ಬಳ್ಳಾರಿ ರೆಡ್ಡಿ ಬಾಯಿ ಬಡ್ಕೊತಿದ್ರೂ ಮಾನನಷ್ಟದ ಕೇಸು ಜಡಿತೀವಿ ಅಂತ ಮುಲುಗೋ ಕೊಮಾಸಾಮಿ ‘ಈಗದರ ನೆಸೆಸಿಟಿನೇ ನನಗಿಲ್ಲ’ ಅಂತ ಹೊಸ ಸಾಂಗ್ ಹಾಡ್ಲಿಕತ್ಯಾನೆ. ಜನತಾ ದರ್ಶನ ಮಾಡೋ ನಾಟ್ಕ ಮುಂದುವರೆಸ್ಯಾನೆ. ಆದ್ರೆ ಬಳ್ಳಾರಿ ರೆಡ್ಡಿ ಹುಚ್ನಂಗೆ ರೇಗಾಡಿ ಕೂಗಾಡಿ ಎದೆ‌ಎದೆ ಬಡ್ಕೊಂಡು ಬಟ್ಟೆ ಹರ್ಕಂಡು ಹಾರಾಡ್ತಾ ‘ನನ್ನ ಮೆಂಟ್ಲು ಅಂದ ಸಿ‌ಎಂನ ಡಿಸಿ‌ಎಂನ ಕಾಡು ಮಂತ್ರಿನಾ ಸುಮ್ಗೆ ಬಿಡಂಗಿಲ್ಲ’ ಅಂತ ಬ್ರೇಕ್ ಡ್ಯಾನ್ಸ್ ಮಾಡ್ತಾ ಕೊಮಾಸಾಮಿಗಿಂತ ಮೊದ್ಲೆ ಮಾನನಷ್ಟದ ಕೇಸ್ನ ಜಡ್ದು ಕುಂತು ಬಿಟ್ಟವ್ನೆ. ಈ ರೆಡ್ಡಿ ಏನು ಕಡಿಮಿ ಅಸಾಮ್ಯಲ್ಲ ಬುಡ್ರಿ. ಈವಯ್ಯ ಹಾಕಿದ ಕೇಸ್ನ ಕೋಲ್ಟು ಎಲ್ಲಿ ತಗಂಡಾತು. ಅದ್ರಾಗೂ ಸಿ‌ಎಂ ಡಿಸಿ‌ಎಂ ಮಿನಿಸ್ಪರ್ ಬ್ಯಾರೆ ಅವರೆ ಅಂತ ಸರ್ಕಾರ ಅನ್ಕಂಡಿತ್ತೇನೋ. ಅದ್ಕೆ ಗಾಲಿರೆಡ್ಡಿ ಬರಿ ಅವರ ಹೆಸರುಗುಳ್ನ ಮಾತ್ರ ಅರ್ಜಿನಾಗೆ ಗುಜರಾಯಿಸಿದ್ನೆ ಹೊರ್ತು ಅವರ ಅಧಿಕಾರ ಏಟು ಎತ್ತ ಅಂತ ಬರೀನೆ ಇಲ್ಲ. ಹಿಂಗಾಗಿ ಕೊಮಾಸಾಮಿ, ಪ್ರಕಾಸು, ಚೆನ್ನಿಗ ಅಂದ್ರೆ ಯಾರೋ ಅಬ್ಬೇಪಾರಿಗಳು ಇರ್ಬೋದೂಂತ ತೀರ್ಮಾನಕ್ಕೆ ಬಂದ ಕೋಲ್ಟು ಕೇಸ್ ಎತ್ಕಂಡದೆ. ಹೆಂಗೈತೆ ನೋಡ್ರಿ ಮುಂಗಾರಿನಾಗೂ ಬಳ್ಳಾರಿ ಬಿಸಿಲಿನ ಹೊಡೆತ! ರಾಜ್ಯಪಾಲನೆಂಬೋ ಮಹಾಚತುರವೇದಿ ತಾತ, ಸ್ಪೀಕರ್ ಗ್ರೇಹೇರ್ ಕಿಸ್ಣ ಒಳ‌ಒಳ್ಗೆ ಸರ್ಕಾರಕ್ಕೇನೇ ಸಪೋಲ್ಟ್ ಮಾಡ್ತಾ ಅವರೆ ಅಂಬೋದು ವಿಲೇಜ್ ಪೀಪಲ್ಗೂ ತಿಳಿದೋಗೇತೆ. ಗಣಿಕೇಸ್ನ ಸಿಬಿ‌ಐಗೆ ಒಪ್ಪಿಸೋಕೆ ಆಲ್ಡರ್ ಮಾಡಿ ನ್ಯಾಯಾಂಗ ತನಿಖೆನಾಗ ನ್ಯಾಯ ಸಿಗಲ್ಲ ಅಂತ ಕಾಂಗ್ರೆಸ್ ಬಾಯ ಬಡ್ಕೊಂಡ್ರೂ ಕೇಳಂಗಿಲ್ಲ. ಮಹಾಚತುರವೇದಿ ತಾತ ಮೊದ್ಲೆ ಚಡ್ಡಿ ಪಾಲ್ಟಿ. ಕಳ್ಳತನ ಮಾಡಿದೋನ್ನೇ ಮಾಡಿದಿಯೋ ಇಲ್ಲೋ ಅಂತ ವಿವರಣೆ ಕೇಳ್ತಾ ಐತೆ! ಕಳ್ಳ ಎಲ್ಲಾರ ಒಪ್ಕಂಡಾನಾ ಅಂಬೋದು ಕಾಂಗ್ರಸ್ಸೋರ ಗೋಳು. ಅತ್ತ ಡೆಲ್ಲಿನಾಗೆ ಬಿಜೆಪಿನೋರ ಗೋಳೇ ಬ್ಯಾರೆ. ಯುಪಿ‌ಎ ಸರ್ಕಾರ ಮೋಸ್ಟ್ ಹೋಪ್ಲೆಸ್. ಬೆಲೆ ಏರಿಸೈತೆ ದೇಸಕ್ಕೆ ಸೆಕ್ಯುರಿಟಿನೇ ಇಲ್ದಂಗಾಗೇತೆ ಸಾಬರ ತಿಕ ತೊಳಿತಾ ಕುಂತೇತೆ ಮಂಬೈ ಸ್ಫೋಟದ ಮ್ಯಾಗೆ ನೆಟ್ಟಗೆ ಕ್ರಮಾನೇ ತಗಂಡಿಲ್ಲ ಅಂತ ದಾಸಯ್ಯಗುಳಂಗೆ ಶಂಖ ಉತ್ತಾ ಚಾಗಟೆ ಬಾರಿಸ್ಲಕತ್ತದೆ.

ಈಟು ದಿನ ಬಾಯಿಗೆ ಬೀಗ ಜಡ್ಕಂಡಿದ್ದ ದೊಡ್ಡ ಗೋಡ ಈಗ ಬಾಯಿ ತೆಗೆದವ್ನೆ, ಸತ್ಯಹರಿಶ್ಚಂದ್ರನಂತ ನನ್ನ ಮಗನ ತೆಲಿಮ್ಯಾಗೆ ಗಣಿಮಣ್ಣನ್ನ ಎರಚ್ತಿರೋ ಬಿಜೆಪಿ ನೀ ಕಡುಪಾಪಿ. ಪಕ್ಕದಾಗೆ ಇದ್ದು ಜೊತೆನಾಗೆ ಒಂದೇ ತಾಟ್ಯಾಗೆ ಉಣ್ಣಾಕೆ ಕುಂತಿರೋ ನೀನೇ ಬಗಲ್ಮೆ ದುಶ್ಮನ್ ಆಗೋದ್ರೆ ಸುಮ್ಗಿರೋದೆಂಗೆ ಅಂತ ಸ್ವಾಟೆ ಓರೆ ಮಾಡಿ ಹೆಗಲ ಮ್ಯಾಲಿನ ಶಲ್ಯ ಕೊಡವಿಕೊಂಡೆದ್ದು ನಿಂತ ಗೋಡ ಸಾಯೋ ತನ್ಕ ಹೋರಾಡ್ತೀನ್ರಿ. ನನ್ನ ಮಗ ಯಾರು? ಕಾವಲು ನಾಯಿ ಅಂಥೋನ್ನ ಹುಚ್ಚು ನಾಯಿ ಮಾಡಿ ಕಲ್ಲಿನಾಗೆ ಹೊಡ್ದು ಸಾಯಿಸಬೇಕಂತ ಮಾಡಿರೇನು? ಆಗ ನನ್ನ ಪಟ ರೋಡ್ ರೋಡ್ನಾಗೆ ಸುಟ್ಟು ಗಿನ್ನಿಸ್ ರೆಕಾಲ್ಡ್ ಮಾಡಿದ್ರಿ. ಈಗ ನನ್ನ ಹಸುಗೂಸಿನ ಪಟ ರೋಡ್ನಾಗೆ ಸುಟ್ಟು ಹಾಕ್ಲಿಕತ್ತಿರೇನು. ನನ್ನೇ ಸುಟ್ಟು ಹಾಕಿದ್ರೂ ಸೈರಿಸ್ಕೋತೀನಿ. ಸುಟ್ಟು ಬೂದಿಯಾಗಿಂದ ಮತ್ತೆ ಫೀನಿಕ್ಸ್ ಟೈಪ್ ಎದ್ದು ಬರೋ ತಾಕತ್ ನನ್ನ ೫೦ ವರ್ಷದ ಸರ್ವೀಸ್ ಗೈತಿ ಆದ್ರೆ ನನ್ನ ಮಗೀನ ತಂಟೆಗೋದ್ರೆ ಒಬ್ಬೊಬ್ಬನ್ನ ರಾಗಿ ಬಾಲ್ಸ್ ಮಾಡಿ ನುಂಗಿ ಬಿಡ್ತೇನ್ರೋ. ಆಗಸ್ಟ್ ತಿಂಗ್ಳಿಂದ ೨೭ ಜಿಲ್ಲೆನಾಗೂ ಕುಣ್ಕಂತ ರೌಂಡ್ ಹೊಡಿತೀನಿ. ಕದಡಿದ ವಾಟನಾಗೆ ಫಿಶ್ ಹಿಡಿಯೋಕೆ ಗಾಳ ಹಾಕ್ಕೊಂಡು ಕಾಂಗ್ರಸ್ನೋರು ಕುಂತವೆ. ಅವರ ಸಂಗಡ ಕೆಲವು ಬಿಜೆಪಿಗಳು ಹಾಥ್ ಮಿಲಾಯ್ಸಿ ಮೀರ್ ಸಾಧಕ್ನಂಗೆ ಆಡ್ತಾ ಅವೆ. ಹಿಂದಿದ್ದ ಮಿಕ್ಸಚರ್ ಸರ್ಕಾರ ಈಗಿಂದೂ ಎಲ್ಡೂ ನನ್ಗೆ ಶ್ಯಾನೆ ನೋವು ಕೊಟ್ಟವೆ. ಬ್ರದರ್ ಅಂತ ಕಣ್ಣೀರು ಹಾಕೋ ಗೋಡ್ರು ಅದೆಂಗಾರ ಆಗಿರ್ಲಿ ಪಕ್ಷವನ್ನ ನಾ ಅಗ್ದಿ ಸ್ಟ್ರಾಂಗ್ ಮಾಡಬೇಕಂತ ಫೈಟಿಂಗ್‍ಗೆ ಇಳಿದೇನಿ. ಅದು ಹೊರ್ತು ಮಗನ ಸೇವು ಮಾಡ್ಲಿಕಲ್ಲ. ಪಕ್ಷದ ಸೇಫು ಸೇವು ನನಗೆ ಮುಖ್ಯ. ಬಿಜೆಪಿ ಕಾಂಗ್ರೆಸ್ ಯಾಗೂ ನನ್ನ ಪಕ್ಷನ ರೇಪ್ ಮಾಡಾಕೆ ಬಿಡೋನಲ್ಲ. ಈ ಗೋಡನನ್ನ ನಂಬಿ. ನನಗೆ ಮಗ ಮುಖ್ಯಲ್ಲ. ಪಕ್ಷ್ ಅದರ ಡೆಪಲಪ್ಮೆಂಟ್ಸೇ ಮುಖ್ಯ ಅಂತ ನಂಬಿಸ್ಲಿಕತ್ತಾರೆ. ಯಾರಾರ ನಂಬೋ ಮಾತೇನ್ರಿ ಇದು?
*****
( ದಿ. ೧೦-೦೮-೨೦೦೬)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೂರ್ಯನೂ ಮಾಗಬಹುದಲ್ಲಾ?
Next post ಬೇರುಗಳು

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

cheap jordans|wholesale air max|wholesale jordans|wholesale jewelry|wholesale jerseys