ಬೇರಿಳಿಸಲು
ಕುಡಿಯೊಡೆಯಲು
ಹೂ ಅರಳಿಸಲು
ಸೂರ್ಯನೇನು ಒಂದು ಕಾಳೇ?

ಜೀವ ತುಂಬಲು
ಚೈತನ್ಯ ನೀಡಲು
ಬಿಡದಂತೆ ಹಿಡಿದಿಡಲು
ಆಗಸವೇನು ಮಣ್ಣೇ ?

ಅನಾದಿಯಿಂದ ಆಗಸಕ್ಕೆ ಅದೇ ದೂರು
ಸೂರ್ಯನ ಆತ್ಮಸಾಂಗತ್ಯವಿಲ್ಲದ ಬೇಜಾರು
ಸೂರ್ಯನಿಗೋ ಅವನದೇ ಹಾದಿ
ನಡೆದದ್ದೆಲ್ಲ ಬೀದಿ!

ಹೊತ್ತು ಹುಟ್ಟಿದರೆ ಉಷೆಯಾಗುವ
ಹೊತ್ತೇರಿದಂತೆ ರವಿಯಾಗುವ
ಯಾವುದೂ ಕಟ್ಟುಪಾಡಿಲ್ಲದ
ಯಾವುದೂ ಅಂಕೆಯಿಲ್ಲದ
ಸೂರ್ಯನಿಗೆ ಅವನದ್ದೇ ಆಟ!

ಬರಿದೇ ತುಂಟಾಟದ ಚಪಲ ಸೂರ್ಯನಿಗೆ
ಮನದಾಳಗಳಿಗಿಳಿಯುವ ಹುಚ್ಚು ಆಗಸಕ್ಕೆ!
ಆಗಸಕ್ಕೆ ಸೂರ್ಯನೇ ಎಲ್ಲ
ಸೂರ್ಯನಿಗೆ ಹಾಗೇನೂ ಇಲ್ಲ!

ಆದರೂ ಅವನ ಆತ್ಮ ಸಂಗಾತದ
ಹೊತ್ತಿಗಾಗಿ ಕಾಯುವ ಕಾಯಕ
ಆಗಸಕ್ಕೆ ತಪ್ಪಿಲ್ಲ
ಆಗಸದ್ದೂ ತಪ್ಪಿಲ್ಲ!

ಇಂದಲ್ಲ ನಾಳೆ ಉರಿವ
ಸೂರ್ಯನೂ ಮಾಗಬಹುದಲ್ಲ!
*****