ಸತ್ಯುಳ್ಳ ಸರದಾರ ಸುದ್ದುಳ್ಳ ಸುಗಣೀಯ
ಮುದ್ಮಾಡಿ ಕದ್ಮಾಡಿ ಬಿಡತೀಯಾ ||ಪಲ್ಲ||

ಆಗ್ಮಾಡಿ ಹೋಗ್ಮಾಡಿ ಕತ್ಲಾಗ ಗಿಣಿಮಾಡಿ
ಪತ್ಲಾಗ ಪದುಮಿಟ್ಟು ಓಡ್ತೀಯಾ
ಸುದ್ದೋಕಿ ಸೂರ್‍ಮಾಡಿ ಉದ್ದೋಕ ಊರ್‍ಮಾಡಿ
ಕೇರ್‍ಮಾಡಿ ಕೆರುಮಾಡಿ ಹಾರ್‍ತೀಯಾ ||೧||

ಪುಗಸೆಟ್ಟಿ ಸಿಕ್ಕಾಕಿ ಪುರಮಾಶಿ ಬಂದಾಕಿ
ಪಡಪೋಶಿ ಹುಚರಂಡಿ ಅಂತೀಯಾ
ಹುಚಬೋಳಿ ನಾನಲ್ಲ ಬಿಚಮಗ್ಗಿ ನಾನಲ್ಲ
ಎದಿಗುಂಡು ಒಳಗುಂಡು ನೋಡ್ತೀಯಾ ||೨||

ಖಾರ್‍ಬ್ಯಾಳಿ ಖಾರಲ್ಲಾ ಹುಳಪಲ್ಲೆ ಹುಳಿಯಲ್ಲ
ಹಪ್ಳಲ್ಲ ಚಟ್ನೆಲ್ಲಾ ಚೀಪ್ತೀಯಾ
ಕಾಡಾಕ ಕಪಡೆಲ್ಲ ಬಡಿಯಾಕ ದಪಡೆಲ್ಲ
ಕಟ್ಟಂತ ಕುಂಡೀಯ ಚೂಟ್ತೀಯಾ ||೩||

ಚೋಳಲ್ಲ ಹಾವಲ್ಲ ಮುಂಚೀಯ ಹಲ್ಲೆಲ್ಲ
ಚದುರಂಗ ಚಿಕ್ಕೀಯ ಚಲುನೋಡ
ಮುದಿಕೆಲ್ಲ ತದಿಕೆಲ್ಲ ತಟ್ಟೆಲ್ಲ ಬುಟ್ಟೆಲ್ಲ
ಆತೂಮ ರಾಣೀಯ ರುಚಿನೋಡ ||೪||
*****