ಈಗಷ್ಟೆ ಪತ್ರ ಬಂತು
ಮಿ. ಪ್ಯಾಟ್ರಿಕ್‌ನ ಬರವಣಿಗೆ
ಕತ್ತೆ ಕಾಲು ನಾಯಿಕಾಲು ಆನೆಕಾಲು
ಎಲ್ಲಿಂದ ಓದುವುದು ಎಲ್ಲಿ ನಿಲ್ಲಿಸುವುದು – ಛೇ-
ಅರ್ಥವಾಗುವುದೇ ಇಲ್ಲ ಬೇಗ ಅಮೆರಿಕದವ
ಮಾತುಗಳು ಸ್ಪಷ್ಟ ಸಾಕಷ್ಟು ಮಾತನಾಡಬಹುದು
ಜೋಕ್ಸು ಮಾತುಕತೆಗಳೇನೇ ಇರಲಿ ದೊಡ್ಡ ಬಾಯಿಯವ

ಬರೆದಿದ್ದಾನೆ
೫೦ ಡಿಗ್ರಿ ಬಿಸಿಲಿನ ಹೊಡೆತಕ್ಕೂ
ತೆಂಗಿನ ಮರ ಬೆಳೆದುನಿಂತಿದೆ ಆಕಾಶದೆತ್ತರ
ಹಣ್ಣುಗಳು ಬಿಡುತಿವೆ ಪಪಾಯಿ ಗಿಡದಲಿ
ಸೊಂಪಾಗಿ ಹಬ್ಬಿದೆ ಮಲ್ಲಿಗೆ ಬಳ್ಳಿ
ಅದೇಕೋ ಮುನಿಸಿಕೊಂಡಿದೆ ಮಾವಿನಗಿಡ
ಮೇಲೆಳುತ್ತಲೇ ಇಲ್ಲ ಸಲಹೆ ಏನಾದರೂ….
ಸ್ಯಾಂಡಲ್‌ವುಡ್ ಆನೆಗಳ ಹಿಂಡು
ಹೆಂಡತಿಗೆ ಕೊಟ್ಟ ಬಿಂದಿ ಪೊಟ್ಟಣ
ರೇಶ್ಮೆ ಸೀರೆ ನಿಮ್ಮೂರಿಗೆ ಏಳೆಯುತ್ತವೆ.
ಜೊತೆಗೆ ಕಳಿಸಿದ್ದಾನೆ ಇವುಗಳೆಲ್ಲದರ ಫೋಟೋ.

ಭಾವಪರವಶಳಾಗಿ ಹೃದಯ ತುಂಬಿತು
ವಿದೇಶಕ್ಕೆ ಹೊರಟ ಅಂದು
ನೆಲದಿಂದ ಹೆಜ್ಜೆ ಕೀಳುವಾಗ
ನೆಲ-ಜಲದ ಋಣ ನೆನಪಿಗಿರಲೆಂದು
ಬೊಗಸೆ ಮಣ್ಣು ನಾಲ್ಕಾರು ಬೇರುಗಳು
ನನ್ನೊಂದಿಗಿರಲೆಂದು ನೀರಿನಲ್ಲೆದ್ದೆದ್ದಿ ಒಯ್ದಿದ್ದೆ

ಕಿಡಕಿಯಾಚೆ ಸೊಂಪಾದ ಗಿಡಬಳ್ಳಿಗಳು
ಕೈತೋಟದ ತುಂಬ ಹೂವುಗಳು
ವರ್ಷಗಳುರುಳುರುಳಿ ಬೆಳೆಯತೊಡಗಿದವು
ಮನೆಗೆ ಹೊಸದಾಗಿ ಬರುತ್ತಿರುವ
ಮಿ. ಪ್ಯಾಟ್ರಿಕ್‌ನಿಗೆ ಹಸಿರು ಹಸ್ತಾಂತರಿಸಿ
ಇವು ನಮ್ಮ ಮಕ್ಕಳೆಂದು ಹೇಳಿ ಬಂದಾಗಿತ್ತು.

ಮತ್ತೆ ಮುಂದುವರೆಸಿದ್ದಾನೆ-
ಹಾಲೆಂಡಿನ ಫರ್ಟಿಲೈಸರ್
ಅಮೆರಿಕದ ಇನ್‌ಸೆಕ್ಟಿಸೈಡ್
ಫಿಲಿಪೈನಿನ ಗಾರ್ಡನರ್
ಇಲ್ಲಿಯ ಡಿಸ್ಟಿಲ್ಡ್ ವಾಟರ್
ನಿಮ್ಮ ಬೇರುಗಳು ಇನ್ನೂ ಇನ್ನೂ ನೆಲದಾಳಕ್ಕಿಳಿಯುತ್ತಿವೆ
ಟೊಂಗೆಗಳೆಲ್ಲ ದಿಕ್ಕು ದಿಕ್ಕಿಗೂ ಚಾಚಿ
ಕೊಡುತಿವೆ ಚಿಗುರು ಹೂವು ಕಾಯಿ ಹಣ್ಣು
ಸುಂದರ ಅತೀ ಸುಂದರ

ಈ ನೆಲದ ಮಣ್ಣು ಬೇರು ಆ ನೆಲದ ನೀರು ಗಾಳಿ
ಬಾಯಿಪಾಠವಾಗಿ ಹೋಗಿದೆ ಪತ್ರ
ದೂರದೇಶಕೆ ಹೊರಡುವ ಮಕ್ಕಳಿಗೂ
ಭಾರವಾದರೂ ಇರಲೆಂದು
ಬೊಗಸೆಮಣ್ಣು ನಾಲ್ಕಾರು ಬೇರು ಕಳಿಸಿಬಿಡುತ್ತೇನೆ.
*****
ಪುಸ್ತಕ: ಇರುವಿಕೆ

ಲತಾ ಗುತ್ತಿ
Latest posts by ಲತಾ ಗುತ್ತಿ (see all)