ಮರುಳಸಿದ್ಧ ಮತ್ತು ಸಿರಿಗೆರೆ ಬೃಹನ್ಮಠ – ಒಂದು ವಿವೇಚನೆ

‘ಮರುಳಸಿದ್ಧ’ ಒಬ್ಬ ಕ್ರಾಂತಿಯೋಗಿ, ವಿಶ್ವ-ಬಂಧು ಎಂದೆಲ್ಲಾ ಅಭಿಮಾನಿಸುವ ಭಕ್ತರಿದ್ದಾರೆ. ಕರ್ನಾಟಕದ ಪ್ರಮುಖ ಮಠವೆಂದೇ ಹೆಗ್ಗಳಿಕೆಗೆ ಪಾತ್ರವಾದ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠವು ನಾಡಿನಾದ್ಯಂತ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ತನ್ನದೇ ಆದ ಪ್ರಭಾವವನ್ನು ಹೆಚ್ಚಿಸಿಕೊಂಡಿದೆ. ಮುಖ್ಯವಾಗಿ ಸಮಪಾಲು, ಸಮಬಾಳಿಗೆ ಒತ್ತು ನೀಡುವ, ಮೌಢ್ಯ ಕಂದಾಚಾರಗಳನ್ನು ಮೆಟ್ಟಿನಿಲ್ಲುವ ವೈಚಾರಿಕತೆಯನ್ನು ಬಡಿದೆಬ್ಬಿಸುವಂತಹ ಜನಪರ ಕಾಳಜಿಯಿಂದಾಗಿ ಕರ್ನಾಟಕದಲ್ಲಿರುವ ಮಠಮಾನ್ಯಗಳ ಪರಂಪರೆಯಲ್ಲಿ ತನ್ನದೇ ಆದ ದಿಟ್ಟದೃಢ ಹೆಜ್ಜೆಗಳನ್ನು ಪಡಿಮೂಡಿಸುವಲ್ಲಿಯೂ ಮುಂದಾದ ಮೊಟ್ಟಮೊದಲ ಮಠವೆಂಬ ಖ್ಯಾತಿಗೂ ಭಾಜನವಾಗಿದೆ.

ಇಂತಹ ವಿಚಾರಪರತೆ, ದಿಟ್ಟತನ ಸಿರಿಗೆರೆಯ ಮಠದಲ್ಲೇ ಮೊದಲಿಗೆ ಪ್ರತಿಧ್ವನಿಸಲು ಕಾರಣವೂ ಇದೆ. ಸಿರಿಗೆರೆ ಬೃಹನ್ಮಠದ ಮೂಲಪುರುಷ ಮರುಳಸಿದ್ಧ ಹುಟ್ಟಿನಿಂದ ಮಾದಿಗನೆಂಬುದನ್ನು ಸದಾ ಸ್ಮರಣೆಯಲ್ಲಿಟ್ಟುಕೊಂಡೇ ಸಿರಿಗೆರೆ ಮಠದ ಕಾರ್ಯವೈಖರಿಯನ್ನು ಪ್ರಗತಿಪರ ಧೋರಣೆಗಳನ್ನು ಗಮನಿಸಬೇಕಾಗುತ್ತದೆ. ೧೨ನೇ ಶತಮಾನದ ಆದಿ ಭಾಗದಲ್ಲಿ ಕಂಡುಬರುವ ಮರುಳಸಿದ್ಧ ಮಾದಿಗನಾದರೂ ತನ್ನ ಸಾಧನೆಗಳಿಂದಾಗಿ ಸಾಧಕರ ಪರಂಪರೆಯನ್ನೇ (ಸಾದಲಿಂಗಾಯಿತರು) ಸೃಷ್ಟಿಸಿದ ಮಹಾನ್ ಸಾಧಕ-ಚಿಂತಕ, ಕೆಳವರ್ಗದಲ್ಲಿ ಹುಟ್ಟಿದರೂ ಮಹಾಯೋಗಿ ರೇವಣಸಿದ್ದರಿಂದ ವಿದ್ಯೆ, ವಿಚಾರ ಬದ್ದತೆ ವೈಚಾರಿಕತೆಗಳಿಂದ ಸಂಸ್ಕರಿಸಲ್ಪಟ್ಟು ಅಪ್ಪಟ ಚಿನ್ನದಂತಹ ಹೊಳಪು ಪಡೆದ ಮರುಳ ನಾಮಾಂಕಿತ ವ್ಯಕ್ತಿಯೊಬ್ಬ ಮರುಳ ‘ಸಿದ್ದ’ ನಾಗಿ ಪ್ರಸಿದ್ದನಾದುದರ ಹಿನ್ನೆಲೆಯಲ್ಲಿ ರೇವಣಸಿದ್ದರ ದಿಟ್ಟಪ್ರಭಾವವಿದೆ, ದುರ್ಗದ ಬಂಡೆಗಳ ಅಚಲತೆ ಅಡಗಿದೆ. ಮರುಳಸಿದ್ಧ ರೇವಣಸಿದ್ದರಿಂದ ಹೊಸ ಆವಿಷ್ಕಾರವನ್ನು ಪಡೆದದ್ದೇ ಚಿನ್ಮೂಲಾದ್ರಿ ಎಂಬ ಪ್ರಸಿದ್ಧಿಪಡೆದ ಐತಿಹಾಸಿಕ ಚಿತ್ರದುರ್ಗದಲ್ಲಿ ಎಂಬುದು ಇಲ್ಲಿ ಉಲ್ಲೇಖನಾರ್ಹ.

ಮರುಳಸಿದ್ಧ ಬೇತೂರಿನಲ್ಲಿ ವೈದಿಕ ಪಂಡಿತರನ್ನು ತನ್ನ ವಿಚಾರಗಳಿಂದ ಪ್ರತಿಭಟಿಸಿ ಯಜ್ಞ, ಯಾಗ, ಹವನ, ಹೋಮಗಳನ್ನು ತಡೆಗಟ್ಟಿ ಅಲ್ಲಿ ಅಪವ್ಯಯವಾಗುವ ಅಪಾರ ಆಹಾರ ವಸ್ತುಗಳನ್ನು ಬಡಬಗ್ಗರಿಗೆ ದೊರೆಯುವಂತೆ ಮಾಡಿದ್ದು ವೈದಿಕರ ಮನದಲ್ಲಿ ಪಾಚಿಗಟ್ಟಿದ್ದ ಸಹಸ್ರಾರು ವರ್ಷಗಳ ಕಂದಾಚಾರದ ಕೊಳೆಯನ್ನು ತೊಳೆದು ಕತ್ತಲುಗೊಂಡ ಕಪ್ಪು ಹೃದಯಗಳಲ್ಲಿ ವೈಚಾರಿಕ ದೀಪವನ್ನು ಬೆಳಗಿಸಿದ್ದು ಕಡಿಮೆ ಸಾಧನೆಯೇನಲ್ಲ. ಮಹಾನ್ ಪಂಡಿತರನ್ನು ತನ್ನ ವಾದ ವಿವಾದಗಳಿಂದ ಮರುಳಸಿದ್ಧ ಸೋಲಿಸಿದನೆಂದಾಗ ಮರುಳಸಿದ್ಧ ಪ್ರಕಾಂಡ ಪಂಡಿತನಾಗಿದ್ದನಷ್ಟೇ ಅಲ್ಲ, ಕ್ರಾಂತಿಯ ಕಿಡಿಯೂ ಆಗಿದ್ದನೆಂಬುದು ಅಷ್ಟೇ ಕಟು ಸತ್ಯ. ೧೨ನೇ ಶತಮಾನದ ಆದಿಭಾಗದಲ್ಲಿ ಬಸವಣ್ಣನವರಿಗಿಂತಲೂ ಮೊದಲೇ ಬ್ರಾಹ್ಮಣ್ಯ ವಿರೋಧಿ ಭಾವವನ್ನು ಪ್ರಕಟಿಸಿದ್ದ ‘ಕ್ರಾಂತಿಯೋಗಿ’ ಈತ ಎಂಬುದನ್ನು ಸಹ ನಾವು ತಳ್ಳಿ ಹಾಕುವಂತದಲ್ಲ, ಬಸವಣ್ಣನವರ ಪ್ರಭಾವಕ್ಕೆ ಒಳಗಾದ ವೀರಶೈವ ಸಮಾಜ ಸಹಜವಾಗಿ ದಲಿತ ಗುರು ಮರುಳಸಿದ್ಧನನ್ನು ಹಿಂದೆ ಸರಿಸಿದ್ದರಲ್ಲಿ ಅದೆಂತಹ ಸಾಮಾಜಿಕ ಅಸಮಾನತೆ ಒಳಗೆ ಹೊಗೆಯಾಡುತ್ತಿದೆ ಎಂಬುದನ್ನು ಕೂಡ ಕಡೆಗಣಿಸುವಂತಿಲ್ಲ. ವೀರಶೈವ ಸಮಾಜ ಮತ್ತು ಮಠಗಳು ಇತ್ತೀಚೆಗೆ ಹೆಚ್ಚೆನ್ನಿಸುವಷ್ಟು ಬಸವಣ್ಣನವರನ್ನು ಹಾಡಿ ಹೊಗಳುತ್ತಾ ಎಲ್ಲದಕ್ಕೂ ಬಸವಣ್ಣನವರನ್ನೇ ಮುಂದಿಟ್ಟುಕೊಂಡು ಅವರ ತತ್ವಗಳನ್ನು ನಾಲಿಗೆ ತುದಿಯ ಮೇಲೆ ಮಾತ್ರವೇ ಇಟ್ಟುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳದೆ ಧರ್ಮವನ್ನು ಜಾತಿ ಮಾಡಿಕೊಂಡದ್ದೇ ಸಾಕ್ಷಿ . ಯಾವ ಮಠ ಹೇಗೋ ಆ ಮಾತು ಬೇರೆ, ಸಿರಿಗೆರೆ ಬೃಹನ್ಮಠವೂ ಕೂಡ ಮರುಳಸಿದ್ಧನನ್ನು ಮುಂದಿಟ್ಟುಕೊಂಡಿದ್ದು ಆತನನ್ನು ಅರಿತುಕೊಂಡಿದ್ದು ಆತನ ಧ್ಯೇಯ ಧೋರಣೆಗಳನ್ನು ಪ್ರಸ್ತುತಪಡಿಸಿದ್ದು ಪ್ರಚಾರಪಡಿಸಿದ್ದು ಮರುಳಸಿದ್ಧನನ್ನು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ಶ್ರಮಿಸಿದ್ದು ಕಡಿಮೆಯೆ.

ಬಸವಣ್ಣನವರಿಗೆ ಸಿಕ್ಕಷ್ಟು ಪ್ರಾಶಸ್ತ್ಯ ಮರುಳಸಿದ್ಧನಿಗೇಕೆ ಪ್ರಾಪ್ತವಾಗಲಿಲ್ಲ? ಬಸವಣ್ಣನವರು ಹುಟ್ಟಿನಿಂದ ಬ್ರಾಹ್ಮಣರು ಅವರಿಗೆ ಹುಟ್ಟೇ ಭೂಷಣ, ಜೊತೆಗೆ ಪ್ರಧಾನಿಪಟ್ಟದ ಆಭರಣ ; ಅವರ ಸುತ್ತವಂದಿಮಾಗಧರು, ಅವರೊಂದಿಗೆ ಶರಣರೂ ಹುಟ್ಟಿಕೊಂಡರು. ಅಧಿಕಾರ ಖಜಾನೆ ಶರಣರ ಬೆಂಬಲದ ಬೆಂಗಾವಲಿನಲ್ಲಿ ಬಸವಣ್ಣ ಮಿಂಚಿದರು. ಜೊತೆಗೆ ಅವರ ಸರಳ ವಚನಗಳಲ್ಲಿನ ಗಟ್ಟಿತನ ಒಬ್ಬ ಮೇಲ್ಭಾಗದ ವ್ಯಕ್ತಿಯಾಗಿಯೂ ತೋರಿದ ದಲಿತರ ಕಾಳಜಿಗಳೂ ಮೇಳೈಸಿದ್ದವು. ಅವರದ್ದು ಸಾಮೂಹಿಕ ಹೋರಾಟವಾಗಿದ್ದರಿಂದ ಹೆಚ್ಚು ಪ್ರಚಾರವೂ ದೊರೆಯಿತು. ಆದರೆ ಮರುಳಸಿದ್ಧ ಹುಟ್ಟಿನಿಂದ ಅಸ್ಪುರ್ಶ್ಯ, ಆತನದು ಏಕಾಂಗಿ ಹೋರಾಟ. ಆತನ ಜಾತಿ ಅರಿಯುತ್ತಲೆ, ದೂರಸರಿವವರ, ಶಪಿಸುವವರ, ಅಸಹ್ಯಪಟ್ಟುಕೊಳ್ಳುವವರ  ಇಂಥವರ  ನಡುವೆಯೇ ಅವರನ್ನೆಲಾ ವಿರೋಧಿಸಿ, ಕೇವಲ ತನ್ನ ವೈಚಾರಿಕ ನಿಲುವು, ವಾಚಾಳಿತನ, ತನಗಿರುವ ಪ್ರಕಾಂಡ ಪಾಂಡಿತ್ಯದ ಬೆಂಬಲ , ನೈತಿಕ ಧೈರ್ಯದಿಂದ ಮಾತ್ರವೇ ಎಂಥವರನ್ನೂ ಮರುಳು ಮಾಡಿ ತನ್ನತನದಿಂದಲೇ ಆಕರ್ಷಿಸಿ ‘ಜಾತಿಗಿಂತ ಪ್ರೀತಿಮುಖ್ಯ’ ಎಂಬುದನ್ನು ತೋರಗಾಣಿಸುವ ಕ್ಲಿಷ್ಟಕರ ಪರಿಸ್ಥಿತಿಯ ಅನಿವಾರ್ಯತೆ ಮರುಳಸಿದ್ಧನಿಗೆ ಎದುರಾದದ್ದು ಆ ಕಾಲಘಟ್ಟದಲ್ಲಿ ಅಸಹಜವೇನಲ್ಲ. ಮರುಳಸಿದ್ಧ ೧೦೦೮ ವಚನಗಳನ್ನು ಬರೆದಿದ್ದನೆಂದು ಇತಿಹಾಸವಿದ್ದರೂ ಒಂದು ವಚನ ಕೂಡ ಲಭ್ಯವಾಗದಿದ್ದರಿಂದ ಆತನ ಒಲವು ನಿಲುವುಗಳನ್ನು ಅರಿಯಲು ಆರಾಧಿಸಲು ಅಡ್ಡಿಯಾಗಿದ್ದಿರಬಹುದು, ಸಿಗಬೇಕಾದ ಪ್ರಾಶಸ್ತ್ಯಕ್ಕೆ ಕುಂದುಂಟಾಗಿರಲೂ ಬಹುದು. ದಲಿತನೊಬ್ಬನ ಹೋರಾಟವೆಂದು ವೀರಶೈವರಲ್ಲೇ ಅನೇಕರು ಮೂಗು ಮುರಿದಿರಲಿಕ್ಕೂ ಸಾಧ್ಯವಿದೆ.

ವಚನಗಳನ್ನು ನಾಶಪಡಿಸಿರಲೂಬಹುದು
ಬಸವಣ್ಣನನ್ನು ಪರಮೇಶ್ವರನ ವಾಹನ ನಂದಿಗೆ ಹೋಲಿಸಿ ದೈವಸ್ವರೂಪ ಕೊಟ್ಟು ಸಾಮಾನ್ಯರಲ್ಲಿ ಭಕ್ತಿಭಾವವನ್ನುಂಟು ಮಾಡಲು ದಂತಕತೆಗಳನ್ನು ಕಟ್ಟಿದಂತೆ ಮರುಳಸಿದ್ಧನ ವಿಚಾರದಲ್ಲಿಯೂ ನಡೆಯದೇ ಇಲ್ಲ. ಮರುಳಸಿದ್ಧನು ದೇವರ ಪಂಚಮುಖ ಒಂದರಿಂದ ಉದ್ಭವಿಸಿದ ಮರುಳಾರಾಧ್ಯರೆಂದೇ ಪಂಚಾಪೀಠಾಧೀಶರು ಆತನಿಗೆ ದೈವತ್ವಕೊಟ್ಟು ಜನರಿಗೆ ದೂರವಿಟ್ಟರು. ಆದರೆ ಸಿರಿಗೆರೆಮಠದ ಪರಂಪರೆ ಆತನ ಹುಟ್ಟನ್ನು ಮುಚ್ಚಿಡಲಿಲ್ಲ. ಆತ ಮಾದಿಗನಾಗಿಯೂ, ಸಾದಿಗನಾಗಿ ಬೆಳೆದ ಎತ್ತರಕ್ಕೆ ಮನ್ನಣೆ ಕೊಟ್ಟರಷ್ಟೇ ಅಲ್ಲ, ಆತ ತಮ್ಮ ಮಠದ ಮೂಲ ಪುರುಷನೆಂದೇ ಒಪ್ಪಿಕೊಂಡರು-ಅಪ್ಪಿಕೊಂಡರು. ಲಿಂಗೈಕ್ಯ ಜಗದ್ಗುರು ಶ್ರೀ ಶಿವಕುಮಾರ ಮಹಾಸಾಮಿಗಳಂತೂ ಸಿರಿಗೆರೆಯಂತಹ ಕುಗ್ರಾಮದಲ್ಲಿ ಸಮಾನತೆಯ ಬೀಜವನ್ನೇ ಬಿತ್ತಿದರು. ದಲಿತರು ಇತರೆಯವರು ಸಹಪಂಕ್ತಿಭೋಜನ ಮಾಡುವಂತೆ ಏರ್ಪಾಡು ಮಾಡಿದರು. ದಲಿತ ಅಡಿಗೆಯವನನ್ನೇ ನೇಮಿಸಿಕೊಂಡರು. ಅಂತರ್ಜಾತೀಯ ವಿವಾಹಗಳಿಗೆ ಒತ್ತುಕೊಟ್ಟರು. ಮನುಷ್ಯನಲ್ಲಿ ಮಾನವೀಯತೆ, ದಯೆ, ದಾನ, ಧರ್ಮಗಳು ಮೈದೋರಲು, ಯೋಚಿಸಲು, ಬುದ್ಧಿ ಮತ್ತೆ ಚಿಗುರೊಡೆಯಲು ವಿದ್ಯೆ ಅತಿಮುಖ್ಯವೆಂದರಿತ ಅವರು ಸಿರಿಗೆರೆಯನ್ನು ‘ಶಿಕ್ಷಣ ಕಾಶಿ’ಯನ್ನಾಗಿ ಪರಿವರ್ತಿಸಿ ಗ್ರಾಮೀಣರ ಮತ್ತು ದಲಿತರ ಬಳಿಗೇ ಶಿಕ್ಷಣವನ್ನು ಕೊಂಡೊಯ್ದರು. ಶಿಸ್ತು ಎಲ್ಲೆಡೆ ಬೆಳೆಯುಂತೆ ಒಂದಿಷ್ಟು ಶಿಸ್ತುಬದ್ಧರಾಗಿ ಕಠೋರವಾಗಿಯೇ ನಡೆದುಕೊಂಡರು. ಮರುಳಸಿದ್ಧನಂತೆ ತಾವೂ ಅತಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆತು ಉಂಡುಟ್ಟ ಇತರೆ ಜಗದ್ಗುರುಗಳು ಬೆಚ್ಚಿ ಬೀಳುವಂತೆ ಮಾಡಿದರು. ರಾಜಕೀಯ ಬಲವಿಲ್ಲದಿದ್ದರೆ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಲು ಅಸಾಧ್ಯವೆಂದರಿತ ಗುರುಗಳು ರಾಜಕಾರಣಿಗಳನ್ನು ಅಂಕೆಯಲ್ಲಿಟ್ಟುಕೊಂಡೇ ತಮ್ಮ ಇಚ್ಛೆಗೆ ಅನುಗುಣವಾಗಿ ದುಡಿಸಿಕೊಂಡ ನಡೆಸಿಕೊಂಡ ಮಹಂತರೆನಿಸಿದರು. ಗುರುಗಳು ಮರುಳಸಿದ್ಧನ ಬಗ್ಗೆ ನಾಟಕವನ್ನು ಬರೆದು ತಮ್ಮ ಪ್ರೀತಾದರವನ್ನು ತೋರಿಸಿದ್ದಾರೆ. ಶ್ರೀ ಮಹದೇವ ಬಣಕಾರರೂ ‘ಮರುಳಸಿದ್ಧ ಕಾವ್ಯ’ವನ್ನೇ ರಚಿಸಿದ್ದಾರೆ. ಆದರೇನು ಮರುಳಸಿದ್ಧನನ್ನು ನಾವು ಅರಿಯಲು ಪವಾಡಗಳ ಮೊರೆ ಹೋಗಬೇಕಾಗಿ ಬಂದದ್ದು ಶೋಚನೀಯ. ಸಿದ್ದನ ಬಗ್ಗೆ ಲಭ್ಯವಿರುವ ಸಾಹಿತ್ಯವೆಲ್ಲಾ ಪವಾಡದ ದೃಶ್ಯಗಳಿಂದ ತುಂಬಿರುವುದರಿಂದ ಭಕ್ತರಿಗೆ ಪ್ರಿಯವಾದರೂ ಬುದ್ಧಿಜೀವಿಗಳಲ್ಲಿ ಅಪನಂಬಿಕೆಯನ್ನುಂಟು ಮಾಡಿದಲ್ಲದೆ, ಆತನನ್ನು ಲಘುವಾಗಿ ಕಾಣಲು ಕಾರಣವಾಗಿರಬಹುದು. ಇಂತಹ ಅಚಾತುರ್ಯಗಳಿಂದ ಬಸವಣ್ಣ ಪಾರಾಗಿದ್ದಾನೆಂಬುದೇ ಸಂತಸದ ವಿಷಯ. ಬಸವಣ್ಣನ ಸುತ್ತಲೂ ಪವಾಡಗಳ ಬಲೆಯನ್ನು ನೇಯಲು ಅನೇಕರು ಯತ್ನಿಸಿದರೂ ವಿಚಾರವಂತ ಶರಣರು ಅದಕ್ಕೆ ಆಸ್ಪದಕೊಡದೆ, ಬಸವಣ್ಣನನ್ನು ಉಳಿಸಿಕೊಂಡದ್ದು ಹೆಚ್ಚುಗಾರಿಕೆ ಎನ್ನಲೇಬೇಕು. ಮರುಳಸಿದ್ಧನ ವಿಚಾರದಲ್ಲಿ ಹೀಗಾಗಲಿಲ್ಲ. ಆತ ಗುಂಡಬ್ರಹ್ಮಯ್ಯನ ವಿಚಾರದಲ್ಲಿಯೇ ಆಗಲಿ, ಕೆರೆಗೆ ಎಸೆವ, ಸಣ್ಣಗುಮ್ಮಿಯಲ್ಲಿ ಸುಡುವ, ಮಾಯೆಯನ್ನು ಗೆಲುವ, ವಿಚಾರಗಳಲ್ಲಿ ವೈಚಾರಿಕತೆಗಿಂತ ಪವಾಡವೇ ಪ್ರಬಲವಾಗಿ ಆತನ ಪ್ರಗತಿಪರ ಧೋರಣೆಗಳು ದುರ್ಬಲವಾಗಿ ಬಿಡುತ್ತವೆ. ವೈಚಾರಿಕತೆಗೆ ಪಾಮುಖ್ಯತೆ ಕೊಟ್ಟ, ಭಕ್ತರನ್ನು ಬೆಳೆಸುತ್ತಾ ಬೆಳೆಯುತ್ತಾ, ಬಂದ ಶ್ರೀಮಠ, ಮಠದ ಗುರುಗಳು ಹೀಗಾಗಿ ಮರುಳಸಿದ್ಧನಿಗಿಂತ ಜನಮುಟ್ಟಿದ ಮೆಚ್ಚಿದ ಬಸವಣ್ಣನನ್ನೇ ಹೆಚ್ಚಾಗಿ ಅವಲಂಬಿಸಲು ಕಾರಣವಾಗಿದ್ದು ಅಸಹಜವೇನಲ್ಲ.

ನನ್ನ ‘ಕ್ರಾಂತಿಯೋಗಿ ಮರುಳಸಿದ್ಧ’ ಕಾದಂಬರಿಯಲ್ಲಿ ಪವಾಡಗಳ ಹೊರತಾಗಿಯೂ ಮರುಳಸಿದ್ಧ ಹೇಗೆ ಪ್ರಸ್ತುತ ಪುರುಷನಾಗುತ್ತಾನೆ, ತನ್ನ ಜಾಣ್ಮೆ ತಾಳ್ಮೆ, ಪಾಂಡಿತ್ಯ, ಮಾನವೀಯ ಗುಣಗಳಿಂದ ಜನ ಸಾಮಾನ್ಯರನ್ನು ಮೇಲ್ವರ್ಗದ ಮತಾಂಧರನ್ನೂ ಗೆದ್ದು ಸಮಾನತೆ ತರುವಲ್ಲಿ ಜೊತೆ ಜೊತೆಗೆ ದಲಿತರ ದನಿಯಾಗಿ ಕ್ರಾಂತಿಯ ಕಿಡಿಯಾಗಿ ಮನದಲ್ಲಿ ಹೇಗೆ ಬೆಚ್ಚನೆಯ ಭಾವನೆಗಳನ್ನು ಬಿತುತ್ತಾನೆಂಬುದಕ್ಕೆ ಹೆಚ್ಚು ಒತ್ತುಕೊಟ್ಟಿರುವುದನ್ನು ಓದುಗರು ಕಾಣಬಹುದಾಗಿದೆ. ಕಾದಂಬರಿಯನ್ನು ವಿಮರ್ಶಕರಷ್ಟೇ ಅಲ್ಲ ವೀರಶೈವರು ಮೆಚ್ಚಿಕೊಂಡಂತೆಯೇ ದಲಿತರೂ ಮೆಚ್ಚಿಕೊಳ್ಳುತ್ತಿರುವ ಬಗ್ಗೆ ಸಂತೋಷವಿದೆ. ‘ನೀವು ಬರೆದಿದ್ದರಿಂದ ಮರುಳಸಿದ್ಧನ ಮಹತ್ವ ಹೆಚ್ಚಿದೆ. ಆತನ ಧೋರಣೆ, ಪಾತ್ರಚಿತ್ರಣ ಸಡಿಲವಾಗದೆ ಗಟ್ಟಿರೂಪ ತಾಳಿದೆ’ ಎಂದು ದಲಿತ ಬುದ್ಧಿಜೀವಿಗಳೂ ಬಿಚ್ಚುಮನಸ್ಸಿನಿಂದ ನುಡಿದಾಗ ಶ್ರಮ ಸಾರ್ಥಕವೆನ್ನಿಸಿದೆ.

ಆದರೆ ‘ಮಠದವರು ಮರುಳಸಿದ್ಧನನ್ನು ಚುನಾವಣೆ ನಿಮಿತ್ತ ಬಳಸಿಕೊಳ್ಳುತಾರಷ್ಟೇ, ಉಳಿದಂತೆ ಪ್ರಾಶಸ್ತ್ಯ ಸಿಗುವುದಷ್ಟರಲ್ಲೇ ಇದೆ ಎಂಬ ಮುನಿಸೂ ಹಲವು ದಲಿತರಲ್ಲಿದೆ. ನನ್ನಿಂದ ಮರುಳಸಿದ್ಧರನ್ನು ಕುರಿತು ಕಾದಂಬರಿಯನ್ನು ಬರೆಸಿರುವುದೇ ಮಠದ ದಲಿತ ಕಾಳಜಿಯವರ ದ್ಯೋತಕವಾಗಿದೆ ಎಂಬುದನ್ನು ನಾನು ಚೆನ್ನಾಗಿ ಬಲ್ಲೆ. ಆದರೆ ಕಾದಂಬರಿ ವ್ಯಾಪಕವಾಗಿ ಸಾಮಾನ್ಯ ಜನರಿಗೆ, ಅದರಲ್ಲೂ ದಲಿತ ವರ್ಗದ ಬುದ್ಧಿಜೀವಿಗಳಿಗೆ ಇನ್ನೂ ತಲುಪದಿರುವುದು ಪ್ರಾಯಶಃ ಈ ಮುನಿಸಿಗೆ ಕಾರಣವೆಂಬುದು ನನ್ನ ಭಾವನೆ. ಮರುಳಸಿದ್ಧನನ್ನು ಆತನ ಭಕ್ತರು ಮತ್ತು ಶ್ರೀಸಾಮಾನ್ಯರು ಚೆನ್ನಾಗಿ ಅರಿಯುವಂತೆ ಇನ್ನೂ ಹೆಚ್ಚು ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ. ಮಾದಿಗ ಮರುಳಸಿದ್ಧನನ್ನು ತನ್ನ ಮೂಲಪುರುಷನೆಂದು ಅಭಿಮಾನದಿಂದ ಒಪ್ಪಿಕೊಂಡಿರುವ ಸಿರಿಗೆರೆ ಬೃಹನ್ಮಠ ಮಾತ್ರ ಈ ಕೆಲಸವನ್ನು ಮಾಡಬಲ್ಲುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಾಹಿರಾತು
Next post ಸರ್ವಜ್ಞ

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

cheap jordans|wholesale air max|wholesale jordans|wholesale jewelry|wholesale jerseys