ಬಳಕೆದಾರರ ಸಮಸ್ಯೆ . ಪರಿಹಾರೋಪಾಯ

ಅಡಿಗೆ ಅನಿಲದ ವಿತರಕ ಗ್ಯಾಸ್ ಸಿಲಿಂಡರನ್ನು ಮನೆ ಬಾಗಿಲಿಗೆ ಕಳಿಸುತ್ತಿಲ್ಲ ಎಂಬುದು ಶ್ರೀಮತಿ ಯಮುನಾರ ಸಮಸ್ಯೆ. ಶ್ರೀಮತಿ ಜೇನ್ ಅವರಿಗೆ ಅಡಿಗೆ ಅನಿಲದ ಸಂಪರ್ಕ ಸಿಗದಿರುವ ಸಮಸ್ಯೆ ಅವರು ಅರ್ಜಿ ಹಾಕಿ, ಐದು ವರುಷಗಳು ಕಾದು ಈಗ ಸಂಪರ್ಕ ಪಡೆಯುವ ಸರದಿ ಬಂದಿದೆ. ಆದರೆ ವಿತರಕ ಅವರಿಗೆ ಹೊಸ ಕನೆಕ್ಷನ್ ನೀಡುತ್ತಿಲ್ಲ. ನೀಡಬೇಕಾದರೆ ಗ್ಯಾಸ್ ಸ್ಟವನ್ನು ತನ್ನಿಂದಲೇ ಖರೀದಿಸಬೇಕೆಂಬುದು ಆ ವಿತರಕನ ಕಡ್ಡಾಯ ಶರ್ತ. ಶ್ರೀಮತಿ ಯಮುನಾ ಮತ್ತು ಜೇನ್ ಇಬ್ಬರದ್ದೂ ಒಂದೇ ಪ್ರಶ್ನೆ :ಈ ಸಮಸ್ಯೆ ಪರಿಹರಿಸಲು ಬಳಕೆದಾರರ ಕೋರ್ಟಿಗೇ ದೂರು ಸಲ್ಲಿಸಬೇಕೇ? ಇವರಿಬ್ಟರ ಪ್ರಶ್ನೆಗೂ ಒಂದೇ ಉತ್ತರ : ಬೇಡ, ಬಳಕೆದಾರರ ಕೋರ್ಟಿಗೆ ದೂರು ಸಲ್ಲಿಸದೆ ಇಂಥ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯ. ಆದರೆ ಇಂಥ ಸಮಸ್ಯೆಗಳ ಪರಿಹಾರಕ್ಕಾಗಿ 1966ರ ಬಳಕೆದಾರರ ರಕ್ಷಣಾ ಕಾನೂನಿನವಿಧಿಗಳನ್ನು ಅವಶ್ಕವಾಗಿ ಬಳಸಿಕೊಳ್ಳಬಹುದು.

ಬಳಕೆದಾರ ಯಾರು?
ಬಳಕೆದಾರರ ರಕ್ಷಣಾ ಕಾನೂನಿನ ಪ್ರಕಾರ ವಸ್ತುಗಳನ್ನು ಮತ್ತು ಸೇವೆಗಳನ್ನು ಬಳಸುವವರು ಬಳಕೆದಾರರು. ಆದರೆ ಇದಕ್ಕೆ ಕೆಲವು ವಿನಾಯ್ತಿಗಳಿವೆ. ಉದಾಹರಣೆಗೆ ಎಣ್ಣೆ, ಸಾಬೂನು, ಧಾನ್ಯಗಳು ಇಂಥವನ್ನೆಲ್ಲ ಮಾರಾಟದ ಉದ್ದೇಶಕ್ಕಾಗಿ ಖರೀದಿಸುವ ಡೀಲರ್‌ಗಳು ಮತ್ತು ಅಂಗಡಿಗಳ ಮಾಲೀಕರು ಇನ್ನೋರ್ವರಿಂದ ಆ ವಸ್ತುಗಳನ್ನು ಖರೀದಿಸಿದ್ದರೂ ಬಳಕೆದಾರರು ಎನಿಸಿಕೊಳ್ಳುವುದಿಲ್ಲ. ಬಳಕೆದಾರರ ರಕ್ಷಣಾ ಕಾಯಿದೆಯಡಿಯಲ್ಲಿ ಅವರಿಗೆ ರಕ್ಷಣೆ ಸಿಗಲಾರದು. ಏಕೆಂದರೆ ಅವರು ಮಾರಾಟಗಾರರು ಅಥವಾ ಪೂರೈಕೆದಾರರು. ಅವರಿಂದ ವೈಯುಕ್ತಿಕ ಬಳಕೆಗಾಗಿ ವಸ್ತುಗಳನ್ನು ಖರೀದಿಸುವ ವ್ಕಕ್ತಿಗಳೇ ಬಳಕೆದಾರರು.

ಇದೇ ವೇಳೆ ಒಂದು ಹೊಲಿಗೆ ಯಂತ್ರ ಅಥವಾ ಇನ್ನಾವುದೇ ಯಂತ್ರ / ಸಾಧನ ಖರೀದಿಸಿ, ಆದರಿಂದ ತನ್ನ ಜೀರ್ಣೋಪಾಯಕ್ಕಾಗಿ ಆದಾಯ ಗಳಿಸುವ ವ್ಯಕ್ತಿ ಕಾನೂನಿನ ಪ್ರಕಾರ ಬಳಕೆದಾರ. ಅದೇ ರೀತಿ, ಒಬ್ಬ ವ್ಯಕ್ತಿ ಖರೀದಿಸಿದ ವಸ್ತುವನ್ನು ಅವರ ಅನುಮತಿ ಪಡೆದು ಉಪಯೋಗಿಸುವ ಇನ್ನೊಬ್ಬನೂ ಬಳಕೆದಾರ.

ಸೇವೆಗಳ ಬಳಕೆದಾರರು
ನೀವು ಬ್ಯಾಂಕಿಗೆ ಕಮಿಷನ್ ತೆತ್ತು ಡಿಮಾಂಡ್ ಡ್ರಾಫ್ಟ್‌ ಖರೀದಿಸಿದರೆ, ಬ್ಯಾಂಕಿನ ಆ ‘ಸೇವೆ’ಯ ಬಳಕೆದಾರ ಆಗುತ್ತೀರಿ. ‘ಸೇವೆ ಎಂದರೆ ಹಣ ತೆತ್ತು ಪಡೆಯುವ ಯಾವುದೇ ರೀತಿಯ ಸೇವೆ’ ಎಂಬುದು ಕಾನೂನಿನ ವಿವರಣೆ. ಬ್ಯಾಂಕಿಂಗ್, ಆರ್ಥಿಕ ನೆರವು, ವಿಮೆ, ಸಾಗಾಟ, ಸಂಸ್ಕರಣೆ, ವಿದ್ಯುತ್ ಮತ್ತು ಇತರ ಶಕ್ತಿಗಳ ಪೂರೈಕೆ, ಹೊಟೇಲು, ಗೃಹನಿರ್ಮಾಣ, ಮನೋರಂಜನೆ ಇವನ್ನೂ `ಸೇವೆಗಳು’ ಎಂದು ನಿರ್ದಿಷ್ಟವಾಗಿ ಆ ಕಾನೂನಿನಲ್ಲಿ ಹೆಸರಿಸಲಾಗಿದೆ. ಆದರೆ ‘ಸೇವೆ’ಗೆ ಎರಡು ವಿನಾಯ್ತಿಗಳನ್ನು ಕಾನೂನಿನಲ್ಲಿ ಹೇಳಲಾಗಿದೆ. ಮೊದಲನೆಯದು ಪುಕ್ಕಟೆ ಸೇವೆ. ಆದ್ದರಿಂದಲೇ ಸರಕಾರಿ ಆಸ್ಪತ್ತೆಗಳ ಸೇವೆ ಈ ಕಾನೂನಿನ ವ್ಯಾಪ್ತಿಯೊಳಗೆ ಬರುವುದಿಲ್ಲ. ಅದರಲ್ಲಿ ನ್ಯೂನತೆ ಸಾಬೀತಾದರೂ ಬಳಕೆದಾರರ ಕೋರ್ಟಿನಿಂದ ಪರಿಹಾರ ಪಡೆಯಲು ಸಾಧ್ಯವಿಲ್ಲ ಅದಕ್ಕಾಗಿ ಸಿವಿಲ್ ಕೋರ್ಟಿನಲ್ಲಿ ದಾವೆ ಹೂಡಬೇಕಾಗುತ್ತದೆ!. ಒಂದು ಧರ್ಮಾಸ್ಪತ್ರೆಯಲ್ಲಿ ದಾಖಲಾತಿ ಶುಲ್ಕ ಅಂತ ಒಂದು ರೂಪಾಯಿ ಶುಲ್ಕ ವಸೂಲಿ ಮಾಡಿದರೂ ಅಲ್ಲಿನ ಸೇವೆ ‘ಪುಕ್ಕಟೆ ಸೇವೆ’ ಆಗುವುದಿಲ್ಲ ಆದ್ದರಿಂದ ಆ ಸೇವೆಯ ನ್ಯೂನತೆಗೆ ಬಳಕೆದಾರರ ಕೋರ್ಟಿನಿಂದ ಪರಿಹಾರ ಪಡೆಯಲು ಸಾಧ್ಯ.

ಡಿಮಾಂಡ್ ಢ್ರಾಫ್ಟ್  ಖರೀದಿಗೆ ಕಮಿಷನ್ ಪಡೆದಂತೆ ಯಾವುದೇ ಸೇವೆಗೆ ನೇರವಾಗಿ ಶುಲ್ಕ ವಸೂಲಿ ಮಾಡಿದಾಗ ಅದು ‘ಸೇವೆ’. ಆದರೆ ಯಾವುದೇ ಸೇವೆಗೆ ಅಪ್ರತ್ಯಕ್ಷವಾಗಿ ಶುಲ್ಕ ವಸೂಲಿ ಮಾಡಿದರೆ? ಉದಾಹರಣೆಗೆ ನಿಮ್ಮ ಬ್ಯಾಂಕಿನ ಖಾತೆಗೆ ಸ್ಪಳೀಯ ಚೆಕ್ ಗಳನ್ನು ಜಮೆ ಮಾಡಿದಾಗ, ಅವುಗಳ ಕಲೆಕ್ಷನಿಗೆ ಬ್ಯಾಂಕ್ ಗಳು ಶುಲ್ಕ ವಿಧಿಸುವು- ದಿಲ್ಲ. ಆದರೂ ಅದು ಬಳಕೆದಾರರ ರಕ್ಷಣಾ ಕಾನೂನಿನ ವ್ಯಾಪ್ತಿಗೆ ಬರುತ್ತದೆ ಎಂದು ಬಳಕೆದಾರರ ಕೋರ್ಟುಗಳು ತೀರ್ಪು ನೀಡಿವೆ. ಏಕೆಂದರೆ ಆ ಸೇವೆಗೆ ಬ್ಯಾಂಕ್‌ಗಳು ಅಪ್ರತ್ಯಕ್ಷ ಶುಲ್ಕ ವಿಧಿಸುತ್ತಿವೆ ಎಂದು ಕೋರ್ಟುಗಳು ಅರ್ಥೈಸಿವೆ. ಸಾಲಖಾತೆಗಳಿಗೆ ಬ್ಯಾಂಕುಗಳು ವಸೂಲಿ ಮಾಡುವ ಬಡ್ಡಿ ಮತ್ತು ರೇವಣಿ ಖಾತೆಗಳಿಗೆ ಬ್ಯಾಂಕ್‌ಗಳು ಪಾವತಿಸುವ ಬಡ್ಡಿಯ ವ್ಯತ್ಯಾಸವನ್ನೇ ಇಂಥ ಸೇವೆಗಳಿಗೆ ಬ್ಯಾಂಕ್ ಗಳು ವಿಧಿಸುವ ಅಪ್ರತ್ಯಕ್ಷ ಶುಲ್ಕ ಎಂದು ಬಳಕೆದಾರರ ಕೋರ್ಟ್‌ಗಳು ವಿವರಿಸಿವೆ.

‘ಸೇವೆ’ಗೆ ಆ ಕಾನೂನಿನಲ್ಲಿ ಎರಡನೆಯ ವಿನಾಯ್ತಿ ಕೂಲಿಯಾಳು ಅಥವಾ ಉದ್ಯೋಗಿಯ ಸೇವೆ (ಕೆಲಸ). ಒಬ್ಬ ಕೂಲಿಯಾಳು ಅಥವಾ ಉದ್ಯೋಗಿ ತನ್ನ ಮಾಲೀಕ ಅಥವಾ ಉದ್ಯೋಗದಾತ ಆಜ್ಞಾಪಿಸಿದಂತೆಯೇ ಕೆಲಸ ಮಾಡಬೇಕಾಗುತ್ತದೆ ವಿನಹಾ ತನಗೆ ಬೇಕಾದಂತೆ ಕೆಲಸ ಮಾಡುವಂತಿಲ್ಲ. ಆದ್ದರಿಂದ ಇವರ ಸೇವೆ /ಕೆಲಸ) ಬಳಕೆದಾರರ ಕಾನೂನಿನ ವ್ಯಾಪ್ತಿಯಿಂದ ಹೊರಗಿದೆ. ಆದರೆ ವೈದ್ಯರು, ಇಂಜಿನಿಯರು, ಅಕೌಂಟೆಂಟರು, ಲಾಯರುಗಳು ಇಂಥವರು ಕಾನೂನಿನ ಪ್ರಕಾರ ತಮ್ಮ ‘ಸೇವೆ’ (ಕೆಲಸ)ಯ ಪೂರೈಕೆದಾರರು (ಆದ್ದರಿಂದ ಇವರಿಗೆ ಪಾವತಿಸಿದ ಸೇವಾ ಶುಲ್ಕಕ್ಕೆ ರಶೀದಿ ಪಡೆಯುವುದು ಅಗತ್ಕ). ಒಬ್ಬರು ಸರ್ಜನ್ ಆಪರೇಷನ್ ನಡೆಸುವಾಗ ಅಥವಾ ವಕೀಲರು ವಾದ ಮಂಡನೆ ಮಾಡುವಾಗ ಅವರ ಮೇಲೆ ಬಳಕೆದಾರರ ನಿಯಂತ್ರಣ ಇರುವುದಿಲ್ಲ. ಆದ್ದರಿಂದಲೇ ಪೂರೈಕೆದಾರರಾದ ಇಂಥವರ ಸೇವಾ ನ್ಯೂನತೆಯನ್ನು ಬಳಕೆದಾರರ ಕೋರ್ಟಿನಲ್ಲಿ ಪ್ರಶ್ನಿಸಿ ಪರಿಹಾರ ಕೇಳಬಹುದು.

ವಸ್ತು / ಸೇವೆಯಲ್ಲಿ ನ್ಯೂನತೆ
ವಸ್ತು ಅಥವಾ ಸೇವೆಯಲ್ಲಿ ನ್ಯೂನತೆ ಇದ್ದಾಗ ಬಳಕೆದಾರ ಅದನ್ನು ಪೂರೈಕೆದಾರನಿಗೆ ಬಾಯ್ಮಾತಿನಲ್ಲಿ ತಿಳಿಸಿ, ನ್ಯೂನತೆ ಸರಿಪಡಿಸಲು ವಿನಂತಿಸಬೇಕು. ಆಗ ಪೂರೈಕೆದಾರ ಸಮಸ್ಯೆ ಪರಿಹರಿಸದಿದ್ದರೆ, ಬಳಕೆದಾರ ಪತ್ರ ಬರೆದು ನ್ಯೂನತೆಯನ್ನು ಪೂರೈಕೆದಾರನಿಗೆ ತಿಳಿಸಬೇಕು. ಈ ಪತ್ರ ಚುಟುಕಾಗಿ, ಸ್ಪಷ್ಟವಾದ ಭಾಷೆಯಲ್ಲಿ ಇರಬೇಕು. ಬಳಕೆದಾರ ತನ್ನ ಪತ್ರದಲ್ಲಿ ನಿರ್ದಿಷ್ಟ ಪರಿಹಾರವನ್ನು ೧೫ ದಿನಗಳ ಮುನ್ನ ನೀಡಬೇಕೆಂದು ಬರೆಯಬೇಕು.

ವಸ್ತುಗಳ ನ್ಯೂನತೆಗೆ ಪರಿಹಾರ
ಬಳಕೆದಾರನೊಬ್ಬ ಖರೀದಿಸಿದ ರೇಡಿಯೊದಲ್ಲಿ ಅಪಸ್ವರ ಕೇಳಿ ಬರುತ್ತಿತ್ತು. ಆ ರೇಡಿಯೋ ರಿಪೇರಿ ಮಾಡಬೇಕೆಂದು ಅಥವಾ ಅದನ್ನು ಬದಲಾಯಿಸಬೇಕೆಂದು ಅಥವಾ ಆದರೆ ಹಣ ಹಿಂದಿರುಗಿಸುಬೇಕೆಂದು ಆ ಬಳಕೆದಾರ ಕೇಳಬಹುದು. ಪೂರೈಕೆದಾರ ಇದ್ಯಾವುದನ್ನೂ ಮಾಡದೆ, ಸತಾಯಿಸಿ ಮಾನಸಿಕ ಹಿಂಸೆ ನೀಡಿದ್ದರೆ ಅದಕ್ಕಾಗಿಯೂ ನಿರ್ದಿಷ್ಟ ರೂಪಾಯಿಗಳ ಪರಿಹಾರ ಕೇಳಬಹುದು.

ಸೇವೆಯ ನ್ಯೂನತೆಗೆ ಪರಿಹಾರ
ಡ್ರೈವಾಷಿಗೆ ಕೊಟ್ಟ ಝರಿ ಸೀರೆಯಲ್ಲಿ ಕಲೆಗಳು ಮೂಡಿವೆ ಮತ್ತು ಸೀರೆ ಹರಿದು ಹೋಗಿದೆ ಎಂಬುದು ಬಳಕೆದಾರ- ಳೊಬ್ಬಳ ದೂರು. ಆಗ, ಡ್ರೈವಾಷಿನ ಶುಲ್ಕ ಮರುಪಾವತಿಸಬೇಕು ಮತ್ತು ಆ ಸೀರೆಯ ಈಗಿನ ಬೆಲೆಯನ್ನು ಪರಿಹಾರ ನೀಡಬೇಕು ಎಂದು ಆಕೆ ಕೇಳಬೇಕು. ಡ್ರೈವಾಷಿಗಿತ್ತ ಸೀರೆ ಹಿಂದಿರುಗಿಸಲು ಪೂರೈಕೆದಾರ ಸತಾಯಿಸಿದ್ದರೆ ಅಥವಾ ಅದು ಅವಳ ಮದುವೆಯ ಸೀರೆ ಆಗಿದ್ದು ಭಾವನಾತ್ಮಕ ಮೌಲ್ಯ ಹೊಂದಿದ್ದರೆ, ತನಗಾದ ಮಾನಸಿಕ ಹಿಂಸೆ ಹಾಗೂ ನಷ್ಟಕ್ಕಾಗಿ ಆಕೆ ನಿರ್ದಿಷ್ಟ ರೂಪಾಯಿಗಳ ಪರಿಹಾರ ಕೇಳಬೇಕಾಗುತ್ತದೆ.

ಬಳಕೆದಾರರ ಕೋರ್ಟ್
ಬಳಕೆದಾರ ನ್ಯಾಯಬದ್ಧವಾಗಿ ಕೇಳಿದಂತೆ ಪೂರೈಕೆದಾರ ನ್ಯೂನತೆ ಸರಿಪಡಿಸಿದರೆ ಅಥವಾ ಪರಿಹಾರ ನೀಡಿದರೆ ಸಮ ಅಲ್ಲಿಗೆ ಮುಕ್ತಾಯ. ಇಲ್ಲವಾದರೆ, ಅಂತಿಮವಾಗಿ ಬಳಕೆದಾರ ನ್ಯಾಯ ಪಡೆಯಲಿಕ್ಕಾಗಿ ಬಳಕೆದಾರರ ಕೋರ್ಟಿನ ಮೆಟ್ಟಲೇರಬೇಕಾಗುತ್ತದೆ.

ಜಿಲ್ಲಾಮಟ್ಟದಲ್ಲಿ ಜಿಲ್ಲಾ ಬಳಕೆದಾರರ ದೂರು ಪರಿಹಾರ ವೇದಿಕೆ /ಬಳಕೆದಾರರ ಕೋರ್ಟ್ ಗಳನ್ನು, ರಾಜ್ಯಮಟ್ಟದಲ್ಲಿ ರಾಜ್ಕ ದೂರು ಪರಿಹಾರ ಕಮಿಷನ್ ಗಳನ್ನು ಮತ್ತು ರಾಷ್ಟ ಮಟ್ಟದಲ್ಲಿ ರಾಷ್ಟ್ರೀಯ ದೂರು ಪರಿಹಾರ ಕಮಿಷನನ್ನು ಸ್ಥಾಪಿಸಲಾಗಿದೆ. ಬಳಕೆದಾರನಿಗೆ ಎಲ್ಲಿ ಅನ್ಯಾಯವಾಯಿತೋ ಆ ಜಿಲ್ಲೆಯೆ ಬಳಕೆದಾರರ ಕೋರ್ಟಿಗೆ ದೂರು ನೀಡಬೇಕು. ಆದರೆ ಪರಿಹಾರದ ಕೇಳಿಕೆಯ ಮೊತ್ತ ರೂಪಾಯಿ ಇಪ್ಪತ್ತು ಲಕ್ಷ ತನಕ ಇದ್ದರೆ ಜಿಲ್ಲಾ ಬಳಕೆದಾರರ ಕೋರ್ಟಿಗೂ, ರೂಪಾಯಿ ಇಪ್ಪತ್ತು ಲಕ್ಷ ಮೀರಿದ ಹಾಗೂ ರೂಪಾಯಿ ಒಂದು ಕೋಟಿವರೆಗೆ ಇದ್ದರೆ ಆಯಾ ರಾಜ್ಯ ಕಮಿಷನಿಗೂ, ರೂಪಾಯಿ ಒಂದು ಕೋಟಿ ಮೀರಿದ್ದರೆ ರಾಷ್ಟ್ರೀಯ ಕಮೀಷನಿಗೂ ದೂರು ನೀಡಬೇಕು.

ಇತ್ತೀಚೆಗೆ ಚಂಡೀಘಡದ ಬಳಕೆದಾರರ (ಎರಡನೆಯ) ಕೋರ್ಟ್ , ಶತಾಬ್ದಿ ಎಕ್ಸಪ್ರೆಸ್ ರೈಲಿಯಲ್ಲಿ ಪ್ರಯಾಣಿಸಿದ ಶ್ರೀ ನಿಶ್ಚಲ್ ಗುಪ್ತಾರಿಗೆ 11,000/- ರೂಪಾಯಿಗಳ ಪರಿಹಾರವನ್ನು ಉತ್ತರ ರೈಲ್ವೇ ಪಾವತಿಸಬೇಕೆಂದು ತೀರ್ಪು ನೀಡಿದೆ. ಏಕೆಂದರೆ, ಆ ಶತಾಬ್ದಿ ಎಕ್ಸಪ್ರೆಸ್ ನವದೆಹಲಿಯಿಂದ ಹೊರಡುವಾಗ ಎರಡು ತಾಸುಗಳ ವಿಳಂಬ ಆಗಿತ್ತು. ಅದನ್ನು ರೈಲು ಸೇವೆಯ ನ್ಯೂನತೆ ಎಂದು ಕೋರ್ಟ್ ಪರಿಗಣಿಸಿತು.

ಪರ್ಯಾಯ ವಿಧಾನಗಳು
ಅದೇನಿದ್ದರೂ ಶ್ರೀಮತಿ ಯಮುನಾ ಮತ್ತು ಶ್ರೀಮತಿ ಬೇನ್ ಇವರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಬಳಕೆದಾರರ ಕೋರ್ಟಿನ ಕಟಕಟೆ ಏರಬೇಕಾಗಿಲ್ಲ. ಬದಲಾಗಿ, ಪರ್ಯಾಯ ವಿಧಾನಗಳನ್ನು ಅನುಸರಿಸಿ, ಆ ಮೂಲಕ ಸಮಸ್ಯೆ ಪರಿಹಾರವಾಗದಿದ್ದರೆ ಮಾತ್ರ ಇವರು ಬಳಕೆದಾರರ ಕೋರ್ಟ್ ನ ಮೆಟ್ಟಲೇರಬೇಕು. ಪರ್ಯಾಯ ವಿಧಾನಗಳ ಆಯ್ಕೆ ಸಮಸ್ಯೆ ಯಾವುದೆಂಬುದನ್ನು ಅವಲಂಬಿಸಿರುತ್ತದೆ. ಅಡಿಗೆ ಅನಿಲದ ಸಮಸ್ಯೆ ಬಗ್ಗೆ ಎರಡು ಹಂತಗಳಲ್ಲಿ ಪರ್ಯಾಯ ವಿಧಾನಗಳು ಲಭ್ಯವಿವೆ.

ಅಡಿಗೆ ಅನಿಲದ ಸರಬರಾಜಿನ ಮೇಲುಸ್ತುವಾರಿಗೆ ಪ್ರತಿಯೊಂದು ಜಿಲ್ಲೆಗೂ ಅಡಿಗೆ ಅನಿಲ ಕಂಪೆನಿಯ ಒಬ್ಬ ಅಧಿಕಾರಿ ಇರುತ್ತಾರೆ. ಅವರ ವಿಳಾಸ ಟೆಲಿಫೋನ್ ಡೈರೆಕ್ಟರಿಯಲ್ಲಿ ಸಿಗುತ್ತದೆ. ಅವರಿಗೆ ಪತ್ರ ಬರೆದು ದೂರು ನೀಡುವುದು ಸಮಸ್ಯಾ ಪರಿಹಾರದ ಮೊದಲನೆಯ ಹಂತ. ಸಾರ್ವಜನಿಕ ರಂಗ ಹಾಗೂ ಖಾಸಗಿ ರಂಗದ ಅನಿಲ ಪೂರೈಕೆದಾರರ ನಡುವೆ ಸ್ಪರ್ಧೆಯ ಬಿಸಿ ಏರುತ್ತಿರುವುದರಿಂದ, ಈ ಅಧಿಕಾರಿಗಳು ಸಮಸ್ಯಾ ಪರಿಹಾರಕ್ಕಾಗಿ ಮುತುವರ್ಜಿ ವಹಿಸಬೇಕಾದ ಕಾಲ ಬಂದಿದೆ.

ಅವರು ಕ್ರಮ ಕ್ಕೆಗೂಳ್ಳದಿದ್ದರೆ, ಎರಡನೆಯ ಹಂತದಲ್ಲಿ ಜಿಲ್ಲಾಧಿಕಾರಿಯವರಿಗೆ ದೂರು ನೀಡಬೇಕು. ಏಕೆಂದರೆ ಜೀವನಾವಶ್ಕಕ ವಸ್ತುಗಳ ಕಾಯಿದೆ ಅನುಸಾರ ಜಿಲ್ಲಾಧಿಕಾರಿ ಈ ಬಗ್ಗೆ ಅಧಿಕಾರ ಹೊಂದಿದ್ದಾರೆ. ಜಿಲ್ಲಾಧಿಕಾರಿ ತಮ್ಮ ಕಛೇರಿಯ ‘ಆಹಾರ ಸೆಲ್’ನ ಉಪನಿರ್ದೇಶಕರಿಗೆ ಸಮಸ್ಯೆಯ ಬಗ್ಗೆ ತನಿಖೆ ನಡೆಸಲು ಆದೇಶಿಸಬಹುದು. ಅವರು ತನಿಖೆ ನಡೆಸಿ, ಪತ್ರದ ಮೂಲಕ ಪೂರೈಕೆದಾರರಿಗೆ ನಿರ್ದಿಷ್ಟ ಆದೇಶ ನೀಡಬಹುದು ಅಥವಾ ಸುತ್ತೋಲೆ ಹೊರಡಿಸಬಹುದು. ಅಗತ್ಯವೆನಿಸಿದರೆ, ಜಿಲ್ಲಾಧಿಕಾರಿಯವರು ವಿತರಕರ ಮತ್ತು ಅಡಿಗೆ ಅನಿಲ ಕಂಪೆನಿಗಳ ಅಧಿಕಾರಿಗಳ ಸಭೆ ನಡೆಸಿ, ಇಂಥ ಸಮಗಳ ಪರಿಹಾರಕ್ಕೆ ಸಭೆಯಲ್ಲೇ ಸೂಕ್ತ ನಿರ್ದೇಶನ ನೀಡಬಹುದು. ಎರಡು ವರುಷಗಳ ಮುನ್ನ, ಮಂಗಳೂರಿನ ಬಳಕೆದಾರರ ವೇದಿಕೆ (ರಿ.) ಅಡಿಗೆ ಅನಿಲ ಸಿಲಿಂಡರುಗಳ ಬಟವಾಡೆಯಲ್ಲಿ ವಿಳಂಬದ ಸಮಸ್ಯೆಯ ಬಗ್ಗೆ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಾಗ, ಅವರು ಎರಡು ಬಾರಿ ಇಂಥ ಸಭೆ ನಡೆಸಿ, ಸಭೆಯಲ್ಲೇ ನಿರ್ದೇಶನ ನೀಡಿ, ನೂರಾರು ಬಳಕೆದಾರರ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಪರಿಹರಿಸಿದ್ದರು.

ಪೂರೈಕೆದಾರರು ‘ಒಡೆಯರಲ್ಲ, ಸೇವಕರು’ ಎಂಬುದನ್ನು ಅವರಿಗೆ ಮನಗಾಣಿಸಿ, ತನ್ನ ಹಕ್ಕುಗಳ ರಕ್ಷಣೆ ಮಾಡಿಕೊಳ್ಳಲಿಕ್ಕಾಗಿ ಬಳಕೆದಾರನು ಕಾನೂನಿನ ಚೌಕಟ್ಟಿನೊಳಗೆ ಶಿಸ್ತುಬದ್ದವಾಗಿ ಹಾಗೂ ಫಲಿತಾಂಶ ನಿರ್ದೇಶಿತ ಕಾರ್ಯವಿಧಾನ ಅನುಸರಿಸಿ ಹಕ್ಕು ಸಾಧನೆ ಮಾಡಲೇಬೇಕು. ಇಲ್ಲವಾದರೆ, ಬಳಸದ ಬ್ಲೇಡಿನಂತೆ ನಮ್ಮ  ಕ್ಕುಗಳಿಗೂ ಹಿಡಿದೀತು ತುಕ್ಕು.

ಉದಯವಾಣ.27.6.2007

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಡುವಿನವರಿಗೆ
Next post ನಗೆಡಂಗುರ – ೧೨೦

ಸಣ್ಣ ಕತೆ

 • ಬಾಳ ಚಕ್ರ ನಿಲ್ಲಲಿಲ್ಲ

  ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

 • ಉಪ್ಪು

  ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

 • ಹಳ್ಳಿ…

  ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

 • ಯಿದು ನಿಜದಿ ಕತೀ…

  ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

 • ಕತೆಗಾಗಿ ಜತೆ

  ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

cheap jordans|wholesale air max|wholesale jordans|wholesale jewelry|wholesale jerseys