ಒಂದು ದಂಡೆಗೆ ಸಿಸಿಲಿಯ ದೀಪಮಾಲೆ,
ಇನ್ನೊಂದು ದಂಡೆಗೆ ಇಟಲಿಯ ದೀಪಾವಳಿ;
ಒ೦ದು ದಂಡೆಗೆ ಹರಿತಶಿಲಾಪ್ರಕಾಶಸ್ತ೦ಭ,
ಇನ್ನೊಂದು ದಂಡೆಗೆ ಮಿಂಚಿನ ಮಂಗಳಾರತಿ;
ಬೆಳಕು ಬಂದು ಕಡಲ-ಹಕ್ಕಿಗೆ ತೋರಣ ಕಟ್ಟಿತಿಲ್ಲಿ,
ಅನಂತರೂಪಗಳ ಧರಿಸಿತಿಲ್ಲಿ!
ದಿನ್ನೆಯಿಂದ ಶರಧಿಗೆ ಹಬ್ಬಿದ ದೀಪಗಳಿವು ಸುರಪುರಗಳೇನು?
ಬೀಡು ಬಿಟ್ಟ ಉಜ್ವಲ ಸ್ವಪ್ನಗಳೇನು?
ಕೆಳಗಿಳಿದು ಬಂದ ತಾರೆಗಳ ನಿಬ್ಬಣವೇನು?
ಬೆಳಕು ಹುಟ್ಟಿನಲ್ಲಿ ಚಕಮಕಿಸುವ ರಾಜಭೃಂಗಗಳೇನು?
ಒ೦ದು ದಂಡೆಗೆ ಸಿಸಿಲಿ, ಇನ್ನೊಂದು ದಂಡೆಗೆ ಇಟಿಲಿ,
ಸಿಸಿಲಿಯ ಕವಿಗಳು ನಿರ್ಮಿಸಿದ ಕಣ್ಣುಕಟ್ಟೇನಿದೆಲ್ಲ?
ಬೀದಿಗಳಿಹವು ನೋಡು ದೀಪಗಳೆರಡು ರೇಖೆಗಳ ನಡುವೆ.
ಒಂದೊಂದು ದೀಪಕೊಂದೊಂದು ಮನೆ. ಬಿದಿಗೆಯ ಚಂದ್ರಮನಂತೆ
ಪುರವಿದನು ರೇಖಿಸಿದೆ ದಿವ್ಯ ವಿದ್ಯುಲ್ಲತೆಯು!
ಪಟ್ಟಣದ ಪಡಿನೆಳಲಲ್ಲವಿದು, ಬೆಳಕಿನಲೊಗೆದ ಪ್ರತಿಮೆ!
ಅಲ್ಲಲ್ಲ! ಒಣ್ಣನೆಗೆ ಮೋಹಗೊಳದಿರು! ಜೋಕೆ!
ಅನ್ಯಾಯದ ದೀಪೋತ್ಸವವಿದು! ಮುಸಲೀನಿಯ ಪ್ರಾಣಪ್ರತಿಷ್ಠೆ!
*****

















