ಅವಳೊಂದು ಕತೆ

ಅವಳೊಂದು ಕತೆ

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಅವಳನ್ನು ನಾನು ಭೇಟಿಯಾದದ್ದು ಫೀಲ್ಡ್ ಸ್ಟಡಿಗೆ ಹೋಗಿದ್ದಾಗ. ಹೆಚ್ಚೆಂದರೆ ಮೂವತ್ತರ ಹರೆಯ. ದೃಡಕಾಯದ ಯಾರನ್ನೂ ಆಕರ್ಷಿಸಬಲ್ಲ ಮೈಕಟ್ಟಿನ ಕೃಷ್ಣ ವರ್ಣದ ಸುಂದರಿ. ರಿಸರ್ಚ್ ಗೈಡ್ ಏಕಾಕಿ ವಿಧವೆಯರನ್ನು ಸಂದರ್ಶಿಸಿ ಡೆಸರ್ಟೇಶನ್ ಸಿದ್ಧಪಡಿಸಬೇಕೆಂದು ಹೇಳಿದ್ದಕ್ಕೆ ಅಂಥವರನ್ನು ಹುಡುಕುವುದೇ ನನಗೆ ದೊಡ್ಡ ಸಮಸ್ಯೆ ಯಾಗಿತ್ತು. ಬ್ಲಾಕ್ ಆಫೀಸ್ ನಲ್ಲಿ ಸಮಾಜ ವಿಸ್ತರಣಾಧಿಕಾರಿಗಳು ಹದಿನೈದು ಮಂದಿಗಳ ಪಟ್ಟಿಯೊಂದನ್ನು ಕೊಟ್ಟರು. ಇವಳ ಹೆಸರು ಮೊದಲಲ್ಲಿತ್ತು. ಅವಳ ಬಗ್ಗೆ ಹೇಳುವಾಗ ನಗುತ್ತಾ “ಬಹುಳ ಜಾಗ್ರತೆ ಮಾರಾಯ್ರೇ. ಇವಳನ್ನು ನೀವು ನಿಭಾಯಿಸಿದ್ದೀರಿ ಎಂದಾದರೆ ಪ್ರಪಂಚವನ್ನೇ ನಿಭಾಯಿಸಬಹುದು. ನನ್ನನ್ನು ಕೇಳುವುದಾದರೆ ಇವಳನ್ನು ಬಿಟ್ಟು ಯಾರನ್ನಾದರೂ ಹತ್ತು ಮಂದಿಯನ್ನು ಆರಿಸಿಕೊಳ್ಳಿ ಎಂದಿದ್ದರು.

ಅವರು ಹಾಗೆ ಹೇಳಿದ್ದೇ ನನಗೆ ಅವಳಲ್ಲಿ ಕುತೂಹಲ ಕೆರಳಲು ಕಾರಣ. ಯೌವನವತಿ ವಿಧವೆಯೆಂದು ಆತ ಯಾಕೆ ಪರಿಹಾಸ್ಯ ಮಾಡಿರ ಬಾರದು ಎಂದುಕೊಂಡು ಅವಳನ್ನೇ ಮೊದಲಿಗೆ ಭೇಟಿ ಮಾಡುವುದೆಂದು ನಿಶ್ಚಯಿಸಿದೆ. ಅವಳು ಇರುವುದು ತಾಲೂಕು ಕೇಂದ್ರ ದಿಂದ ಸುಮಾರು ಹದಿನೈದು ಕಿಲೋಮೀಟರು ದೂರದಲ್ಲಿ. ಕೊನೆಯ ಐದು ಕಿ.ಮೀ. ದೂರವನ್ನು ರಿಕ್ಷಾದಲ್ಲೇ ಕ್ರಮಿಸ ಬೇಕಾಯ್ತು. ಗಮ್ಯಸ್ಥಾನವನ್ನು ಡ್ರೈವರ್ ನಲ್ಲಿ ಹೇಳಿದಾಗ ಅವನ ಮುಖದಲ್ಲಿ ಒಂದು ಕುಹಕನಗೆ ಇತ್ತು. ನನಗಾಗ ಕ್ಷೇತ್ರ ವಿಸ್ತರಣಾಧಿಕಾರಿಯ ನೆನಪಾಯ್ತು. ಅವಳ ಹಿಂದೆ ಏನೋ ಒಂದು ದೊಡ್ಡ ಕತೆಯಿದೆ ಎನ್ನುವುದು ಖಚಿತವಾಯ್ತು.

ರಿಕ್ಷಾದವ ಅಶ್ವಥ ಕಟ್ಟೆಯ ಬಳಿಯಲ್ಲಿ ನನ್ನನ್ನು ಇಳಿಸಿ. “ಅಲ್ಲಿರುವ ಒಂಟಿ ಮನೆ ಅವಳದ್ದು. ಇನ್ನು ನೀವುಂಟು ಅವಳುಂಟು. ಬೇಕೆಂದಾದರೆ ನಿಮಗಾಗಿ ಕಾಯುತ್ತೇನೆ. ಅದಕ್ಕೆ ನೀವು ವೈಯಿಟಿಂಗ್ ಚಾರ್ಜ್ ಐವತ್ತು ಕೊಡಬೇಕಾಗುತ್ತದೆ.”ಎಂದ. ಅದು ತೀರಾ  ಹೆಚ್ಚಾಯಿತೆನಿಸಿ ಅವನನ್ನು ಕಳಿಸಿಕೊಟ್ಟೆ.

ಆ ಒಂಟಿ ಮನೆ ದೂರಕ್ಕೆ ದೆವ್ವದ ಮನೆಯಂತೆ ಕಾಣುತ್ತಿತ್ತು. ಅದರ ಬಲಭಾಗಕ್ಕೆ ಸುಮಾರು ನೂರು ಗಜ ದೂರದಲ್ಲಿ ಒತ್ತಾಗಿ ಕೆಲವು ಮನೆಗಳಿದ್ದವು. ಅಲ್ಲಿಂದ ಮಕ್ಕಳ ಅಳು, ನಾಯಿಗಳ ಬೊಗಳಾಟ, ಕೋಳಿಗಳ ಕೂಗು ಕೇಳಿ ಬರುತ್ತಿತ್ತು. ಇವಳ ಮನೆಯಿಂದ ಯಾವ ಸ್ವರವೂ ಹೊರಡುತ್ತಿಲ್ಲ. ಇವಳು ನಿಜಕ್ಕೂ ಒಂದು ನಿಗೂಢ ಎಂದುಕೊಂಡು ಮನೆಯ ಅಂಗಳಕ್ಕೆ ಕಾಲಿರಿಸಿದೆ. ಬಾಗಿಲು ಹಾಕಿತ್ತು. ಬಾಗಿಲನ್ನು ಬಡಿಯುವ ಬದಲು ಕರೆಯುವುದೇ ಒಳಿತೆಂದು ಭಾವಿಸಿ,”ಯಾರಿದ್ದೀರಿ ಮನೆಯಲ್ಲಿ”ಎಂದು  ಪ್ರಶ್ನಿಸಿದೆ. ಮೂರು ಬಾರಿ ಹಾಗೆ ಕೇಳಿದಾಗ ಮನೆಯ ಬಾಗಿಲು ಅರ್ಧತೆಗೆದುಕೊಂಡಿತು. ಎಣ್ಣೆ ಮತ್ತು ಬಾಚಣಿಗೆ ಕಾಣದ ಹೆಣ್ಣು ತಲೆಯೊಂದು ಹೊರಗೆ ಹಣಕಿ ಹಾಕಿತ್ತು ಅವಳ ಕಣ್ಣುಗಳು ಕೆಂಡದಂತಿದ್ದವು. ನೀನ್ಯಾಕೆ ಇಲ್ಲಿಗೆ ಬಂದೆ ಎಂದು ಅವು ಪ್ರಶ್ನಿಸುವಂತಿದ್ದವು. ಒಂದು ಕ್ಷಣ ನನಗೆ ಏನು ಹೇಳಬೇಕೆಂದೇ ಗೊತ್ತಾಗಲಿಲ್ಲ. ಅಂಥವಳಿಗೆ ನಾನು ಹೇಳುವ ಫೀಲ್ಡ್ ಸ್ಟಡಿ, ಡೆಸರ್ಟೇಶನ್ ಒಂದು ಚೂರು ಅರ್ಥವಾಗದೆಂದು ನನಗೆ ಭಾಸವಾಯ್ತು. ಸಭ್ಯರಂತೆ ಕಾಣುವ ವಿದ್ಯಾವಂತರೂ ಫೀಲ್ಡ್ ಸ್ಟಡಿಗೆ ಪೂರ್ತಿ ಸಹಕಾರ ನೀಡುವುದಿಲ್ಲ. ಇನ್ನು ಇವಳು ಹೇಗೆ ಸ್ಪಂದಿಸಿಯಾಳು? ನನ್ನ ಉದ್ದೇಶವನ್ನು ಇವಳಿಗೆ ಹೇಗೆ ತಿಳಿಯ ಪಡಿಸುವುದು?

ನಾನು ಕೈಯಲ್ಲಿದ್ದ ಲಿಸ್ಟನೊಮ್ಮೆ ನೋಡಿಕೊಂಡೆ. ಮನದ ಅಳುಕನ್ನು ಧ್ವನಿ ಯಲ್ಲಿ ತೋರ್ಪಡಿಸದೆ ಹೇಳಿದೆ. “ನಾನು ಗವರ್ಮೆಂಟ್ ಕಡೆಯಿಂದ ಬಂದಿದ್ದೇನೆ. ನಿಮ್ಮ ಮನೆಗೆ ನೀರಿನ ಸಂಪರ್ಕ ಇಲ್ಲ ಎಂದು ಗೊತ್ತಾಯ್ತು. ಅದಕ್ಕೆ ಸರ್ವೇ ಮಾಡಲು ಗವರ್ಮೆಂಟ್ ನನ್ನನ್ನು ಇಲ್ಲಿಗೆ ಕಳುಹಿಸಿದೆ.”

ಈಗವಳು ಬಾಗಿಲನ್ನು ಪೂರ್ತಿ ತೆರೆದಳು. ನನ್ನ ಸುಳ್ಳು, ಕೆಲಸಮಾಡಿದ್ದಕ್ಕೆ ನನಗೆ ಖುಷಿಯಾಯ್ತು. ಮುಂದೆ ನಾನಾಡಬೇಕಾಗಿದ್ದ ಮಾತುಗಳನ್ನು ಮನದಲ್ಲಿಯೇ, ರಿಹರ್ಸಲ್ ಮಾಡಿಕೊಂಡೆ. ಆದರೂ ಮನೆಯೊಳಗೆ ಹೋಗಲು ನನಗೆ ಪೂರ್ತಿ ಧೈರ್ಯ ಬರಲಿಲ್ಲ. ಹೊರಗೆ ಜಗಲಿ ಇತ್ತು. ಕರಚೀಪನ್ನು ಹರಡಿಕೊಂಡು ಜಗಲಿಯ ಮೇಲೆ ಕೂತೆ.”ನಿಮ್ಮ ಅಭ್ಯಂತರ ಇಲ್ಲದಿದ್ದರೆ ನಾನು ಒಂದೆರಡು ಪ್ರಶ್ನೆ ಕೇಳುತ್ತೇನೆ. ನೀವು ಏನನ್ನೊ ಬಚ್ಚಿಡದೆ ಉತ್ತರಿಸಬೇಕು. ನಿಮ್ಮ ಉತ್ತರ ಸರಿಯೆಂದು ಸರಕಾರಕ್ಕೆ ಮನದಟ್ಟಾದರೆ ನಿಮ್ಮ ಮನೆಗೆ ನೀರಿನ ಪೈಪು ಬಹಳ ಬೇಗ ಬರುತ್ತದೆ. ಎಲ್ಲವೂ ನಿಮ್ಮ ಉತ್ತರವನ್ನು ಅವಲಂಬಿಸಿ ಕೊಂಡಿದೆ ” ಎಂದು ಹೇಳಿದ.

ಅವಳ ಮುಖದಲ್ಲಿ ಈಗ ಮೊದಲಿನ ಕ್ರೂರತೆ ಇರಲಿಲ್ಲ. ನನ್ನನ್ನು ಆಪಾದಮಸ್ತಕ ವೀಕ್ಷಿಸಿ ಬಾಯಿತೆರೆದಳು.”ನಿಮ್ಮನ್ನು, ಸರಕಾರದ ಮಂದಿಗಳನ್ನು ನಾನು ನಂಬುವುದಿಲ್ಲ. ಈ ಮನೆಗೆ ಹದಿನೈದು ಸಾವಿರ ಕೊಡಿಸುತ್ತೇನೆಂದು ಮೊನ್ನೆ ಬಂದಿದ್ದ ಒಬ್ಬ ಅಧಿಕಾರಿ ಸುಳ್ಳು ಬೊಗಳಿದ. ಆ ಹಣ ಬೇಕಿದ್ದರೆ ಅವನು ಕರೆದಲ್ಲಿಗೆ ನಾನು ಹೋಗಬೇಕಿತ್ತು. ಇಂಥವರನ್ನು ಎಷ್ಟು ನೋಡಿಲ್ಲ ನಾನು. ನಿನಗೆ ಹದಿನೈದು ಸಾವಿರ ನಾನೇ ಕೊಡುತ್ತೇನೆಂದು ಮೂಲೆಯಲ್ಲಿದ್ದ ಪೂರಕೆ ಎತ್ತುಕೊಂಡು ನಾಲ್ಕು ಬಿಟ್ಟೆ ನೋಡಿ. ಅವ ಓಡಿದ ದಾರಿಯಲ್ಲಿ ಹುಲ್ಲೂ ಹುಟ್ಟಲಿಕ್ಕಿಲ್ಲ.”

ನನ್ನ ಎದೆ ಧಸಕ್ಕೆಂದಿತು. ಯಾವಾಗ ನನಗೆ ಪೊರಕೆ ಸೇವೆ ಆಗುತ್ತದೋ ಎಂದು ಗಾಬರಿಯಾಯ್ತು. ನನ್ನ ತಳಮಳ ಅರ್ಥ ಮಾಡಿಕೊಂಡುವಳಂತೆ ಅವಳೆಂದಳು. “ನೀವು ಯಾರೋ ನನಗೆ ಗೊತ್ತಿಲ್ಲ.ಆದರೆ ನನ್ನ ಇಷ್ಟು ವರ್ಷದ ಸರ್ವೀಸ್ ನಲ್ಲಿ ಮುಖ ನೋಡಿ ವ್ಯಕ್ತಿಗಳನ್ನು ಅರ್ಥಮಾಡಿ ಕೊಳ್ಳಲು ನನಗೆ ಸಾಧ್ಯವಾಗುತ್ತದೆ. ನಿಮ್ಮ ಮುಖ ನೋಡಿದಾಗ ಕೆಟ್ಟ ಉದ್ದೇಶಗಳು ನನಗೆ ಕಾಣಲಿಲ್ಲ. ಹಾಗಾಗಿ ನೀವು ಕೇಳಿದ್ದಕ್ಕೆ ಉತ್ತರಿಸುತ್ತೇನೆ ಎಂದು ಜಗಲಿಯ ಇನ್ನೊಂದು ತುದಿಯಲ್ಲಿ ಕೂತಳು.

ಅಬ್ಬಾ ಬಚಾವಾದೆ ಎಂದುಕೊಂಡೆ. ಮೆಲ್ಲನೆ ನನ್ನ ಕ್ವಶ್ಚನೇರ್ ಹೊರತೆಗೆದೆ. ತಕ್ಷಣ ಅವಳೆಂದಳು. “ನಿಮ್ಮ ಕಡತ ಎಲ್ಲಿ ಒಳಗಿಡಿ. ಏನೇನೋ ಕೇಳಿ ಇನ್ನೇನೇನೋ ಬರೆದು ಮತ್ತೇನೇನೋ ಆಗುವುದು ಬೇಡ. ನಿಮಗೆ ನಿಜವಾಗಿಯೂ ಬೇಕಾದದ್ದು ಏನೆಂದು ಕೇಳಿ.”

ನಾನು ಕ್ವಶ್ಚನೇರನ್ನು ಮತ್ತೆ ಚೀಲ ದೊಳಗೆ ತುರುಕಿದೆ. ಡೆಸರ್ಟೇಶನ್ನಗಿಂತ ಇವಳ ಬದುಕು ತುಂಬಾ ಆಸಕ್ತಿಯನ್ನು ನನ್ನಲ್ಲಿ ಮೂಡಿಸಿತ್ತು. ಯಾವುದೇ ಅಳುಕಿಲ್ಲದೆ ತರುಣ ನೊಬ್ಬನಲ್ಲಿ ಹೀಗೆಲ್ಲಾ ಹೇಳಬೇಕಾದರೆ ಇವಳು ಜೀವನದಲ್ಲಿ ಅದೇನೇನು ಅನುಭವಿಸಿದ್ದಾಳೋ ಏನೋ? ಅದನ್ನೆಲ್ಲ ಹೊರಗೆ ತೆಗೆಯುವುದು ಹೇಗೆ? ಕಳೆದು ಹೋದುದನ್ನು ಹೇಳುವ ಉತ್ಸಾಹ ಇವಳಿಗೆ ಇರಲಾರದು. ನಾವಾದರೂ ಅಷ್ಟೆ. ನಮ್ಮ ಜೀವನದ ಗೆಲುವುಗಳ ಬಗ್ಗೆ ಗಂಟಿಗಟ್ಟಲೆ ಹೇಳಿಕೊಳ್ಳುತ್ತೇವೆ. ಸೋಲುಗಳನ್ನು ಯಾರಿಗೂ ಗೊತ್ತಾಗದಂತೆ ಮುಚ್ಚಿಡುತ್ತೇವೆ.

ತುಂಬಾ ಯೋಚಿಸಿ ಹೇಳಿದೆ.”ನಿಜವನ್ನು ಹೇಳುತ್ತಿದ್ದೇನೆ. ನನಗೊಬ್ಬಳು ಅಕ್ಕ ಇದ್ದಳು. ನನ್ನನ್ನು ಎತ್ತು ಆಡಿಸಿ ಬೆಳೆಸಿದವಳು.ಯಾರನ್ನೋ ಮದುವೆಯಾದಳು. ಮತ್ತೆ ಒಮ್ಮೆಯೂ ತವರಿಗೆ ಬರಲಿಲ್ಲ. ಏನಾಯಿತೋ, ಆಗ ನಾನು ಎಳೆಯವ. ನನ್ನಲ್ಲಿ ಯಾರೂ ಹೇಳಲಿಲ್ಲ. ಈಗ ಕೇಳೋಣವೆಂದರೆ ತಂದೆ ತಾಯಿ ಬದುಕಿ ಉಳಿದಿಲ್ಲ. ನಿಮ್ಮನ್ನು ನೋಡುವಾಗ ಅವಳ ನೆನಪಾಯ್ತು.”ನನ್ನ ಕಣ್ಣುಗಳು ನಿಜಕ್ಕೂ ತುಂಬಿಕೊಂಡವು.

ಈಗ ಅವಳ ಮುಖಭಾವ ಬದಲಾಯ್ತು. “ನಿಮ್ಮ ಮಾತುಗಳೂ ಸಹಜವಾಗಿವೆ. ನನಗದನ್ನು ಕೇಳುವಾಗ ಹಳೆಯದೆಲ್ಲವೂ ನೆನಪಾಗುತ್ತದೆ. ನನಗೂ ನಿಮ್ಮಂಥ ತಮ್ಮಂದಿರಿದ್ದರು. ಪ್ರೀತಿಸುವ ತಂದೆ-ತಾಯಿ ಇದ್ದರು. ಒಂದುದಿನ ಅವರು ನನ್ನನ್ನು, ತಮ್ಮಂದಿರನ್ನು ಅನಾಥರನ್ನಾಗಿ ಮಾಡಿ ಹೊರಟು ಹೋದರು. ಈಗ ಅದೆಲ್ಲ ಪುರಾಣ ಯಾಕೆ? ನಿಮಗೆ ಬೇರೆ ಏನು ಬೇಕೋ ಕೇಳಿಕೊಳ್ಳಿ.”

ನನಗೀಗ ನಾನು ಬಂದ ಉದ್ದೇಶವೇ ಮರೆತು ಹೋಯ್ತು. ಈ ಹೆಂಗಸಿನ ಹಿಂದೆ ದೊಡ್ಡದೊಂದು ಕತೆಯಿದೆ ಎನ್ನುವುದು ಗೊತ್ತಾಯ್ತು. ಸಹಜವಾದ ದನಿಯಲ್ಲಿ ನಾನೆಂದೆ. “ಅವೆಲ್ಲ ಹಾಗೆ ಇರಲಿ. ನನಗೆ ನಿಮ್ಮ ಕತೆಯನ್ನು ಕೇಳಬೇಕೆನಿಸಿದೆ. ಅದನ್ನು ನನ್ನ ಅಕ್ಕನ ಕತೆಯೆಂದೇ ಭಾವಿಸುತ್ತೇನೆ. ದಯವಿಟ್ಟು ಹೇಳಿ. ಇಲ್ಲವೆನ್ನಬೇಡಿ.”

ಅವಳೀಗ ಪೂರ್ತಿಯಾಗಿ ಕರಗಿದಳು. ಸಹಜ ಪ್ರೀತಿಗೆ ಒಲಿಯದ ಜೀವಿ ಇರಲು ಸಾಧ್ಯವೇ? ಪೂರ್ತಿ ಬದಲಾಗಿ ಹೋದ ಅವಳು ಪ್ರೀತಿಯ ಸ್ವರದಲ್ಲಿ ಹೇಳಿದಳು. “ನೀವು ಎಷ್ಟೋ ದೂರದಿಂದ ಬಂದಿದ್ದೀರಿ. ಕುಡಿಯಲು ನಾನೇನನ್ನೂ ಕೊಟ್ಟಿಲ್ಲ. ನಾನು ಮಾಡಿ ಕೊಟ್ಟರೆ ನೀವು ಕುಡಿಯುತ್ತಿರೋ ಇಲ್ಲವೋ? ಚಹಾ ಮಾಡಿ ಕೊಡಲೇ” ಎಂದು ಕೇಳಿದಳು.

“ನನಗೇನೊ ಬೇಕಾಗಿಲ್ಲ. ನಿಮ್ಮ ಕತೆಯನ್ನು ಹೇಳಿದರೆ ಸಾಕು. ಯಾಕೋ ನನಗೆ ನನ್ನ ಎಳವೆಯದ್ದೇ ನೆನಪಾಗುತ್ತಿದೆ.”

ಅವಳು ಹೇಳ ತೊಡಗಿದಳು.”ಎಳವೆಯಲ್ಲೇ ತಂದೆ-ತಾಯಿ ಸತ್ತು ಹೋದರೆಂದು ಹೇಳಿದೆನೆಲ್ಲ? ನಮಗೊಬ್ಬಳು ಅಜ್ಜಿ ಇದ್ದಳು. ಅವಳ ಆಸರೆಯಲ್ಲಿ ಸ್ವಲ್ಪ ಕಾಲ ಬೆಳೆದೆ. ತಿನ್ನಲು, ಉಡಲು ಸಾಕಷ್ಟು ಇಲ್ಲದ ಕಾಲವದು. ಮುದಿ ಅಜ್ಜಿ ತಾನೇ ಏನು ಮಾಡೀತು? ನಮ್ಮೂರಲ್ಲಿ ಒಬ್ಬರು ತಹಶೀಲ್ದಾರರ ಕಛೇರಿಯಲ್ಲಿ ಗುಮಾಸ್ತರಾಗಿದ್ದರು. ಅವರು ಮಂಗಳೂರು ಕಡೆಯವರು. ಅವರ ಮನೆಯಲ್ಲಿ ಕೆಲಸಕ್ಕೆಂದು ಅಜ್ಜಿ ನನ್ನನ್ನು ಸೇರಿಸಿದರು. ಅವರಿಗೆ ವರ್ಗವಾಗುವಾಗ ಅವರೊಡನೆ ನಾನು ಮಂಗಳೂರಿಗೆ ಬಂದುಬಿಟ್ಟೆ.”

ಆಗ ನನ್ನಲ್ಲಿ ಯೌವನ್ನ ಉದಯಿಸುತ್ತಿದ್ದ ಕಾಲ. ಶರೀರದಲ್ಲಿ ಏನೆಲ್ಲ ಬದಲಾವಣೆಗಳಾಗುತ್ತಿದ್ದವು. ಒಮ್ಮೊಮ್ಮೆ ನನಗೆ ಗಂಡಸರನ್ನು ನೋಡುತ್ತಾ ನಿಲ್ಲುವ ಎಂದಾಗುತ್ತಿತ್ತು. ನನ್ನ ಮನದ ಭಾವನೆಗಳನ್ನು ಮನೆಯ ಒಡತಿ ಗುರುತಿಸಿ ಬಿಟ್ಟಳು. ಅವಳ ಗಂಡನಲ್ಲಿ ನಾನು ಏನು ಮಾತಾಡಿದರೂ ಅದಕ್ಕೆ ತಪ್ಪು ಅರ್ಥ ಕಲ್ಪಿಸತೊಡಗಿದಳು. ಒಮ್ಮೊಮ್ಮೆ ಏಟುಗಳು ಬೀಳತೊಡಗಿದವು. ಹರೆಯಕ್ಕೆ ಕಾಲಿಡುತ್ತಿದ್ದ ನಾನು ಅವಳನ್ನು ಮನಸಾರೆ ದ್ವೇಷಿಸತೊಡಗಿದೆ. ಅವಳೆ ಅಜ್ಜೆಯನ್ನು ಉಲ್ಲಂಘಿಸುವುದೆಂದರೆ ನನಗೆ ಪರಮಾನಂದವಾಗುತ್ತಿತ್ತು. ಒಂದು ದಿನ ಅವಳ ಗಂಡ ಎಲ್ಲಿಗೋ ದೂರ ಹೋಗಿದ್ದಾಗ ನಾನು ಆ ಚಾತುರ್ಯದಿಂದ ಶರಬತ್ತು ಲೋ ಟವನ್ನು ಒಡೆದು ಹಾಕಿದೆ. ಅವಳಿಗೆ ವಿಪರೀತ ಸಿಟ್ಟು ಬಂದು ಕಾದ ಸೌಟಿನಿಂದ ಎರದು ಕಡೆ ಬರೆ ಎಳೆದು ಬಿಟ್ಟಳು. ಹಸಿ ಮಾಂಸ ಸುಟ್ಟ ವಾಸನೆಯೊಂದಿಗೆ ತಡೆಯಲು ಅಸಾಧ್ಯವಾದ ನೋವಾಗಿ ನಾನು ಕಿರುಚುತ್ತಾ ಆ  ಮನೆಯಿಂದ ಓಡಿಬಿಟ್ಟೆ.”

“ಹಾಗೆ ಅಳುತ್ತಾ ಹೋಗುತ್ತಿದ್ದ ನನ್ನನ್ನು ಇಳಿಪ್ರಾಯದವರೊಬ್ಬರು ತಡೆದು ವಿಷಯವೇನೆಂದು ಕೇಳಿದರು. ಬರೆಯಿಂದ ಸುಟ್ಟು ಹೋಗಿದ್ದ ಜಾಗವನ್ನು ಅವರಿಗೆ ತೋರಿಸಿ ನಾನು ಬಿಕ್ಕಿ ಬಿಕ್ಕಿ ಅತ್ತೆ. ಅವರಿಗೆ ಏನೆನ್ನಿಸಿತೋ? ಅಲ್ಲೇ ಸಮೀಪದಲ್ಲಿದ್ದ ಪೋಲಿಸ್ ಸ್ಟೇಷನ್ನಿಗೆ ನನ್ನನ್ನು ಕರೆದುಕೊಂದು ಹೋದರು. ವಿಷಯ ವಿಚಾರಿಸಿದ ಎಸ್ಸೈ ನನ್ನ ಅಜ್ಜಿಯ ವಿಳಾಸ ಕೇಳಿದ. ನನಗದು ನೆನಪೇ ಇರಲಿಲ್ಲ. ಕೊನೆಗೆ ಈ ರಾದ್ಧಾಂತವೇ ಬೇಡವೆಂದು ರಿಮಾಂಡ್ ಹೋಮಿಗೆ ನನ್ನನ್ನು ಸೇರಿಸಿ ಬಿಟ್ಟ.”

ಅವಳು ಸ್ವಲ್ಪ ಹೊತ್ತು ಮಾತು ನಿಲ್ಲಿಸಿದಳು. ನಾನು ಅವಳ ಮುಖವನ್ನು ನೋಡಿದೆ. ಅವಳ ಮುಖದಲ್ಲಿ ನೋವಿತ್ತು. ಎಲ್ಲರಿಗೂ ಬಾಲ್ಯದ ನೆನಪು ಅತ್ಯಂತ ಸಂತೋಷಕೊಡುತ್ತದೆ. ಕತೆಗಾರರಿಗೆ ಕಲಾವಿದರಿಗೆ ಅದು ಮೂಲ ದ್ರವ್ಯ. ಇವಳಿಗೆ ಎಳವೆಯಲ್ಲಿಯೇ ಸಿಕ್ಕಿದ್ದುನೋವು. ಕೆಲವರಿಗೆ ಯೌವನದ ಬಳಿಕವಾದರೂ ಸುಖ ಸಿಗುತ್ತದೆ. ಇವಳ ದುರಾದೃಷ್ಟಕ್ಕೆ ಅದೂ ಸಿಗಲಿಲ್ಲ. ಒಬ್ಬ ವ್ಯಕ್ತಿಯ ಯಾವುದೇ ವರ್ತನೆಗೆ ಒಂದು ಕಾರಣ ವಿರುತ್ತದೆ. ಇವಳ ವರ್ತನೆಯ ಕಾರಣವನ್ನು ಯಾರೂ ಕಂಡು ಹಿಡಿಯಲು ಹೋಗಿಲ್ಲ. ಇವಳನ್ನು ಎಷ್ಟುದೂರ ಸಾಧ್ಯವೋ ಅಷ್ಟು ದೂರ ಇರಿಸಿ ಬಿಟ್ಟಿದ್ದಾರೆ.

ತಗ್ಗಿದ ದನಿಯಲ್ಲಿ ನಾನೆಂದೆ.”ಅಕ್ಕಾ. ನಿಮ್ಮ ಬಾಲ್ಯದ ಕತೆಯನ್ನು ಕೇಳಿ ನನಗೂ ಬೇಸರ ಉಂಟಾಗಿದೆ. ಆದರೆ ವಿಷಯವನ್ನು ಅಲ್ಲಿಗೆ ನಿಲ್ಲಿಸಬೇಡಿ. ನಿಮ್ಮ ನೋವನ್ನೆಲ್ಲ ಹೃದಯಬಿಚ್ಚಿ ಹೇಳಿಕೊಳ್ಳಿ. ಮನಸ್ಸು ಹಗುರವಾಗುತ್ತದೆ. ಒಮ್ಮೊಮ್ಮೆ ನಮಗೆ ನಮ್ಮ ನೋವುಗಳನ್ನು ಹೇಳಿಕೊಳ್ಳಲೂ ಜನರು ಸಿಗುವುದಿಲ್ಲ. ನನ್ನನ್ನು ತಮ್ಮನೆಂದೇ ತಿಳಿದುಕೊಳ್ಳಿ. ನೀವು ಮುಂದುವರಿಸಿ.”

ಅವಳು ಮುಂದುವರಿಸಿದಳು.”ರಿಮಾಂಡ್ ಹೋಮಿನಲ್ಲಿ ನಾನು ಎರಡು ವರ್ಷ ಇದ್ದೆ. ಅಲ್ಲಿದ್ದ ಬೇರೆಯವರನ್ನು ನೋಡಲೆಂದು ಯಾರ್ಯಾರೋ ಬಂದು ಹೋಗುತ್ತಿದ್ದರು. ಕೆಲವರನ್ನು ಅವರ ಸಂಬಂಧೀಕರು ಕರೆದುಕೊಂಡು ಹೋಗುತ್ತಿದ್ದರು. ನನ್ನನ್ನು ನೋಡಲು ಯಾವ ಭೂತ ಬರುತ್ತದೆ? ಒಂದು ದಿನ ರಿಮಾಂಡ್ ಹೋಮಿನ ಮುಖ್ಯಸ್ಥರು ನನ್ನನ್ನು ಕರೆದು ಹೇಳಿದರು.”ಹಾಸ್ಟಲ್ ನಲ್ಲಿ ಅಡುಗೆಗೆ ಒಬ್ಬರು ಬೇಕಾಗಿದ್ದಾರೆ. ಅದು ಸರಕಾರಿ ಹಾಸ್ಟಲ್. ಸರಕಾರದ ಸಂಬಳ ಸಿಗುತ್ತದೆ. ಈಗಾಗಲೇ ನಿನ್ನನ್ನು ನಾವು ಇಲ್ಲಿಂದ ಎಲ್ಲಿಗಾದರೂ ಕಳಿಸಬೇಕಿತ್ತು. ಆದರೆ ಕಳಿಸುವುದೆಲ್ಲಿಗೆ? ಈಗ ನಿನಗೆ ಜೀವನಕ್ಕೊಂದು ದಾರಿ ಸಿಕ್ಕಿದೆ. ಹೋಗಿ ಕೆಲಸಕ್ಕೆ ಸೇರಿಕೋ.”

ನಾನು ಸೇರಿದ ಹಾಸ್ಟಲಲ್ಲಿ ಆರಂಭದಲ್ಲಿ ಜೀವನ ಕಷ್ಟಕರವಾಗಿತ್ತು. ಅಡುಗೆಯ ದೊಡ್ಡ ದೊಡ್ಡ ಪಾತ್ರೆಗಳನ್ನು ತೊಳೆಯುವುದೇ ಒಂದು ದೊಡ್ಡ ಸಮಸ್ಯೆ ಆಗಿತ್ತು. ಬೆಳಿಗ್ಗೆ ಅರವತ್ತು ಜನಕ್ಕೆ ತಿಂಡಿ ಮಾಡಿ ಹಾಕಬೇಕು. ಅಷ್ಟೇ ಮಂದಿಗೆ ಮಧ್ಯಾಹ್ನ, ಸಂಜಿಗೆ ಒಟ್ಟಿಗೆ ಬೇಯಿಸಿ ಹಾಕಬೇಕು. ಮೊದ ಮೊದಲಿಗೆ ನನಗೆ ಸಾಕಾಗಿ ಹೋಗುತ್ತಿತ್ತು. ಆದರೆ ಅಲ್ಲಿದ್ದ ಎಳೆ ಹುಡುಗರ ಆಟೋಟ ನೋಡುವಾಗ, ಅವರ ನಿಷ್ಕಲ್ಮಶ ಪ್ರೀತಿ ಸಿಗುವಾಗ ಬದುಕಿಗೊಂದು ಅರ್ಥ ಇದೆ ಎನ್ನಿಸತೊಡಗಿತು.

ಹಾಸ್ಟೆಲಿನ ಎದುರು ಪುಟ್ಟದೊಂದು ಹೂತೋಟವಿತ್ತು. ಅದರ ಕೆಲಸಕ್ಕೆಂದು ಒಬ್ಬ ತರುಣ ಬರುತ್ತಿದ್ದ. ಅವನನ್ನು ಮಾಲಿಂಗ ಎಂದು ಎಲ್ಲರೂ ಕರೆಯುತ್ತಿದ್ದರು. ಹಾಸ್ಟೆಲಿನ ಮಕ್ಕಳು ಅವನ ಸುತ್ತಮುತ್ತ ನೆರೆದು ಅವನು ಹೇಳುತ್ತಿದ್ದ ಕತೆಗಳನ್ನು ಕೇಳುತ್ತಿದ್ದರು. ಅವನಿಗೆ ನಾನೇ ಊಟವಿಕ್ಕುತ್ತಿದ್ದೆ. ನನ್ನನ್ನು ಅವನು ಆಸೆ ಗಣ್ಣುಗಳಿಂದ ನೋಡುತ್ತಿದ್ದ. ಹರೆಯದವರಿಗೆ ಹೃದಯದ ಭಾಷೆ ಬಹಳ ಬೇಗ ಅರ್ಥವಾಗುತ್ತದೆ. ಅನಾಥಗಳಾಗಿದ್ದ ನಾನು ಅವನ ಆಸೆಗಳಿಗೆ ಸ್ಪಂದಿಸಿದೆ. ಬೆಳ್ತಂಗಡಿಯ ಬಳಿಯಲ್ಲಿ ಅವನಿಗೆ ಸ್ವಲ್ಪಜಾಗವಿತ್ತು. ಒಂದು ದಿನ ಮದುವೆಯಾಗೋಣವಾ ಎಂದು ಕೇಳಿದ. ನನಗೆ ನಿರಾಕರಿಸಲು ಮನಸ್ಸು ಬರಲಿಲ್ಲ. ಹಾಗೆ ಅವನ ಕೈ ಹಿಡಿದು ಬೆಳ್ತಂಗಡಿಗೆ ಹೋದೆ.

ಅವನ ಊರು ತೀರಾ ಹಳ್ಳಿ. ಅವರಾಡುತ್ತಿದ್ದ ಭಾಷೆ ನನಗೆ ಸರಿಯಾಗಿ ಬರುತ್ತಿರಲಿಲ್ಲ. ಆದರೆ ಸಂಸಾರಕ್ಕೇನೂ ತೊಂದರೆಯಾಗಲಿಲ್ಲ. ಬೇರೆ ಗತಿಯೇ ಇಲ್ಲದ ನಾನು ಅವನನ್ನು ತುಂಬಾ ಪ್ರೀತಿಸುತ್ತಿದ್ದೆ. ಅವನಿಗೆ ದೂರದ ಸಂಬಂಧಿಕರು ಕೆಲವರಿದ್ದರು. ಅವರು ಒಮ್ಮೊಮ್ಮೆ ಬಂದು ಮನೆಯಲ್ಲಿ ತಂಗುತ್ತಿದ್ದರು.ಅವರಲ್ಲಿ ಕೆಲವರು ನನ್ನನ್ನು ಬಯಕೆಯ ಕಣ್ಣುಗಳಿಂದ ನೋಡುತ್ತಿದ್ದರು. ನನಗೆ ಹೇಳಲಾಗದ, ಹೇಳದೇ ಉಳಿಯಲಾಗದ ಸಂಕಟ. ಒಬ್ಬನಂತೂ ಮಾಲಿಂಗನಿಲ್ಲದ ಒಂದು ದಿನ ನನ್ನ ಸೆರಗಿಗೆ ಕೈ ಹಾಕಿದ. ಬಂತು ನೋಡಿ ಸಿಟ್ಟು. ಎಕ್ಕಡ ತೆಗೊಂಡು ಅವನ ಮೂತಿ ಮುಖ ನೋಡದೇ ಬಾರಿಸಿದೆ. ಮರ್ಯಾದೆಗೆಟ್ಟವ ಓಡಿಹೋದ. ಮತ್ತೆ ಅವನು ಇಲ್ಲಿಗೆ ಬರಲಿಲ್ಲ. ಆದರೆ ಮಾಲಿಂಗನಿಗೆ ಎಲ್ಲೋ ಕಾಣಸಿಕ್ಕಿ ಏನೋ ಹೇಳಿರಬೇಕು. ಅಂದಿನಿಂದ ಮಾಲಿಂಗನ ವರ್ತನೆಯಲ್ಲಿ ಬದಲಾವಣೆ ಕಂಡು ಬಂತು. ಒಮ್ಮೊಮ್ಮೆ ವಿನಾಕಾರಣ ನನ್ನ ಮೇಲೆ ಸಿಡುಕುತ್ತಿದ್ದ. ವ್ಯಂಗ್ಯ ಮಾತುಗಳಿಂದ ಚುಚ್ಚುತ್ತಿದ್ದ. ಒಂದು ಸಲ ಅವನು ಅಸಹ್ಯವಾಗಿ ಬೈದಾಗ ನಾನು ಎದುರುತ್ತರ ಕೊಟ್ಟೆ. ನಮ್ಮ ನಡುವೆ ಆಗಾಗ ಜಗಳಗಳು ನಡೆಯತೊಡಗಿದವು. ಮಾಲಿಂಗನ ವಿಚಿತ್ರ ವರ್ತನೆಯಿಂದಾಗಿ ಅಕ್ಕಪಕ್ಕದ ತರುಣರು ಅಸಾಧ್ಯ ಸಂಜ್ಞೆಗಳಿಂದ ನನ್ನನ್ನು ಕರೆಯ ತೊಡಗಿದರು. ಮಾಲಿಂಗನಲ್ಲಿ ಹೇಳಿದರೆ ಕರೆದರೆ ಹೋಗು ಎಂದು ಬಿಟ್ಟ. ಅಂದು ಅವನಲ್ಲಿ ಸಿಕ್ಕಾಬಟ್ಟೆ ರೇಗಿದೆ. ತುಂಬಾ ಹೊತ್ತು ಜಗಳವಾಯ್ತು. ಅವನು ಕೋಪದಿಂದ ನನಗೆ ಹಿಡಿಶಾಪ ಹಾಕಿ ಕತ್ತಲಲ್ಲಿ ಮನೆ ಯಿಂದ ಹೊರಬಿದ್ದ.

ಮರುದಿನ ಸಿಕ್ಕಿದ್ದು ಅವನ ಹೆಣ. ಮೈಯಿಡೀ ನೀಲಿ ಬಣ್ಣವಾಗಿತ್ತು. ರಾತ್ರಿ ಅವನು ಯಾವುದೋ ವಿಷದ ಹಾವನ್ನು ತುಳಿದಿರಬೇಕು. ಅದು ಕಚ್ಚಿದ್ದಕ್ಕೆ ಸತ್ತೇ ಹೋಗಿದ್ದ. ಪೋಲಿಸರು ಬಂದರು. ಹೆಣವನ್ನು ಸರಕಾರಿ ಆಸ್ಪತ್ರೆಗೆ ಕೊಂಡು ಹೋಗಿ ಪೋಸ್ಟ್ ಮಾರ್ಟಮ್ ಮಾಡಿದರು. ಹಾವಿನ ವಿಷದಿಂದ ಸತ್ತ ಎಂದು ರಿಪೋರ್ಟ್ ಕೊಟ್ಟರು. ಆದರೂ ಊರವರು ಇವಳು ವಿಷ ಹಾಕಿ ಕೊಂದಳು ಎಂದು ಕತೆ ಹಬ್ಬಿಸಿದರು. ರಾತ್ರೆ ಯಾರ್ಯಾರೋ ಬಂದು ಬಾಗಿಲು ಬಡಿಯತೊಡಗಿದರು. ಇನ್ನು ಅಲ್ಲಿ ಉಳಿದರೆ ಮರ್ಯಾದೆ ಯಿಂದ ಬಾಳಲು ಸಾಧ್ಯವಿಲ್ಲವೆಂದು ನನಗೆ ಖಚಿತವಾಯ್ತು. ಅಲ್ಲಿಂದ ಒಂದು ದಿನ ನೇರವಾಗಿ ಉಪ್ಪಿನಂಗಡಿಗೆ ಬಂದಿಳಿದೆ. ಎಲ್ಲಿಗೆ ಹೋಗಬೇಕೆಂದು ತೋಚಲಿಲ್ಲ. ನಾನು ಬಸ್ ಸ್ಟಾಂಡಿನಲ್ಲಿ ಮುದುಡಿ ಕುಳಿತದ್ದಲ್ಲಿಗೆ ನಲವತ್ತು ದಾಟಿದ ವ್ಯಕ್ತಿ ಯೊಬ್ಬ ಬಂದು ನನ್ನಬಗ್ಗೆ ವಿಚಾರಿಸಿದ. ಕೊನೆಗೆ ನನ್ನ ಜೊತೆ ಬರುವುದಾದರೆ ನಿನಗೆ ಬದುಕು ಕೊಡುತ್ತೇನೆ ಎಂದ. ಆ ಬಸ್ ಸ್ಟಾಂಡಿನಲ್ಲಿ ರಾತ್ರೆ ನೆಮ್ಮದಿಯಿಂದ ಕಳೆಯಲು ಸಾಧ್ಯವಾಗಲಾರದೆಂದು ಅವನೊಡನೆ ಹೊರಟು ಬಿಟ್ಟೆ.

ಅವನು ನನ್ನನ್ನು ಕರಕೊಂಡು ಬಂದದ್ದು ಶಿರಾಡಿಗೆ. ಆಗ ಹಾಸನ, ಮಂಗಳೂರು ರೈಲು ಕಾಮಗಾರಿ ನಡೆಯುತ್ತಿತ್ತು. ಅವನು ಅದರಲ್ಲಿ ಕೂಲಿಯಾಳಾಗಿ ದುಡಿಯುತ್ತಿದ್ದ. ನಾನೂ ಕೆಲಸಕ್ಕೆ ಸೇರಿಕೊಂಡೆ. ಆಗಾಗ ಬೀಡಿ ಸೇದುವುದು ಮತ್ತು ಸಂಜೆಯಾದಾಗ ಗಡದಾಗಿ ಕಂಡ್ರಿ ಸಾರಾಯಿ ಕುಡಿಯುವುದನ್ನು ಬಿಟ್ಟರೆ ಅವನಲ್ಲಿ ಕೆಟ್ಟ ಅಭ್ಯಾಸಗಳು ಏನೂ ಇರಲಿಲ್ಲ. ನಾವು ಚೆನ್ನಾಗಿಯೂ ಇದ್ದೆವು. ಆದರೆ ನಮ್ಮ ಮೇಸ್ತ್ರಿಯ ನೋಟ ಚೆನ್ನಾಗಿರಲಿಲ್ಲ. ದಿನಗಳು ಉರುಳಿ ಹೋದವು.

ಒಂದು ದಿನ ನಾವು ಕೆಲಸ ಮಾಡುತ್ತಿರುವಾಗ ಗುಡ್ಡ ಜರಿಯಿತು. ಒಂದಷ್ಟು ಮಂದಿ ಅದರಲ್ಲಿ ಸಿಕ್ಕಿಕೊಂಡರು. ಅವರಲ್ಲಿ ನನ್ನ ಗಂಡನೂ ಒಬ್ಬ. ಅಂದು ನಾನು ತುಂಬಾ ಅತ್ತುಬಿಟ್ಟೆ. ದುರಾದೃಷ್ಟ ಒಬ್ಬರಿಗೇ ಯಾಕೆ ವಕ್ಕರಿಸುತ್ತದೆಂದು ದೇವರಿಗೆ ಬೈದೆ. ಯಾರೋ ಹೆಂಗಸರು ನನ್ನನ್ನು ಕೊಂಡು ಹೋಗಿ ಗುಡಿಸಲಲ್ಲಿ ಹಾಕಿ ಬಂದರು. ನಾನು ಪ್ರಜ್ಞೆ ಕಳಕೊಂಡಿದ್ದೆ. ಬೆಳಿಗ್ಗೆ ಎಚ್ಚರವಾದಾಗ ನನ್ನ ಒಂದೇ ಒಂದು ಉಡುಪು ಮೈ ಮೇಲೆ ಇರಲಿಲ್ಲ. ಇದು ಆ ಮೇಸ್ತ್ರಿಯದ್ದೇ ಕೆಲಸವೆಂದು ನನಗೆ ಖಚಿತವಾಯ್ತು. ಇನ್ನು ಇಲ್ಲಿದ್ದರೆ ದಿನಾ ಅವನಿಗೆ ಆಹಾರವಾಗಬೇಕಾಗುತ್ತದೆಂದು ಅಲ್ಲಿಂದ ನನ್ನ ಉಳಿತಾಯದೊಡನೆ ಹೊರಟು ಬಿಟ್ಟೆ.

“ಇದು ಅಕ್ರಮ-ಸಕ್ರಮದ ಜಾಗ ನೋಡಿ. ಮನೆ ಕಟ್ಟಲು ಸರಕಾರ ಸ್ವಲ್ಪ ಸಹಾಯ ಮಾಡಿದೆ. ಕೆಲವು ಗಂಡಸರು ದೊಡ್ಡ ಸಹಾಯ ಮಾಡುವವರ ಹಾಗೆ ನನ್ನ ಸುಖ ದುಃಖ ವಿಚಾರಿಸತೊಡಗಿದರು. ಅವರಿಗೆ ಬೇಕಿದ್ದದ್ದು ಏನೆಂಬುದು ನನಗೆ ಸ್ಪಷ್ಟವಾಗಿ ಗೊತ್ತಿತ್ತು. ಅವರನ್ನು ದೂರವೇ ಇಟ್ಟೆ. ಗಂಡ ಇಲ್ಲದೆಯೂ ಮರ್ಯಾದೆಯಿಂದ ಬಾಳಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟೆ. ತಮ್ಮ ಲಾಲಸೆ ತೀರಿಸಿಕೊಳ್ಳಲಾಗದ ಗಂಡುಗಳು ನನ್ನ ಬಗ್ಗೆ ಏನೇನೋ ಕತೆ ಕಟ್ಟಿದರು. ಹಿಂದಿನಿಂದ ಅಪಹಾಸ್ಯ ಮಾಡಿ ಎಷ್ಟೋ ಮಂದಿ ನಗುತ್ತಾರೆ. ನಗಲಿ ಬಿಡಿ. ನಾನೇನು ಎಂಬುದು ನನಗೆ ಗೊತ್ತಿದೆ. ಇನ್ನು ಬೇರೊಬ್ಬನ ಹೆಂಡತಿ ಯಾಗಿ ಬದುಕುವ ಮಾತು ಇಲ್ಲ. ಹೇಳಿ, ನಾನು ಕೆಟ್ಟವಳಾ?”

ಈ ಪ್ರಶ್ನೆಗೆ ಇನ್ನೂ ಉತ್ತರ ಕೊಡಲು ನನ್ನಿಂದ ಸಾಧ್ಯವಾಗಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಕ್ಕೀ ಹಾಗೇ ನಾನೂನೂ
Next post ಇಂದ್ರಜಾಲ

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

cheap jordans|wholesale air max|wholesale jordans|wholesale jewelry|wholesale jerseys