ಹರಕೆಯ ಬಲದ ಶಿಷ್ಯ

‘ತರಗತಿಗಳಲ್ಲಿ ಕುವೆಂಪು’ (ತೌಲನಿಕ ಸಾಹಿತ್ಯ ಮೀಮಾಂಸೆ) ಕೃತಿಯಲ್ಲಿ ‘ಹರಕೆಯ ಬಲದ ಶಿಷ್ಯ’ ಎಂದು ಡಾ.ಎಸ್.ಎಂ.ವೃಷಭೇಂದ್ರ ಸ್ವಾಮಿ
ತಮ್ಮನ್ನು ಕೆರೆದುಕೊಂಡಿದ್ದಾರೆ. ತಮ್ಮ ಕೃತಿಯನ್ನು ಪ್ರಿಯಗುರುವಿನ ಜನ್ಮ ಶತಮಾನೋತ್ಸವದ ಕಿರು ಕಾಣಕೆ- ಗುರು ಕಾಣಿಕೆ ಎಂದೂ ಅವರು ಹೇಳಿಕೊಂಡಿದ್ದಾರೆ. ಪುಸ್ತಕವನ್ನು ಓದಿದ ಯಾರಿಗಾದರೂ ಈ ಮಾತಿನಲ್ಲಿನ ಔಚಿತ್ಯ ಸ್ಪಷ್ಟವಾಗುತ್ತದೆ. ಆದರೆ ವೃಷಭೇಂದ್ರ ಸ್ವಾಮಿ ಅವರು ಒಳ್ಳೆಯ ಶಿಷ್ಯ ಮಾತ್ರವಲ್ಲ ಒಳ್ಳೆಯ ಮೇಷ್ಟ್ರೂ ಹೌದು.

ಮಹಾರಾಜ ಕಾಲೇಜಿನಲ್ಲಿ ಬಿ.ಎ. ಆನರ್ಸ್ ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ಮಾಡಿಕೊಂಡಿದ್ದ ಕುವೆಂಪು ಅವರ್‍ಅ ಬೋಧನೆಯ ಟಪ್ಪಣಿಗಳ ಕೃತಿರೂಪ ‘ತರಗತಿಗಳಲ್ಲಿ ಕುವೆಂಪು’. ಷೇಕ್ಸ್‍ಪಿಯರ್, ವರ್ಡ್ಸ್‍ವರ್ತ್, ಮಿಲ್ಟನ್. ದಾಂಟೆಯಿಂದ ಹಿಡಿದು ಪಂಪ, ರನ್ನ, ಕುಮಾರವ್ಯಾಸರವರವರೆಗೆ ಪೂರ್ವ-ಪಶ್ಚಿಮಗಳ ಕಾವ್ಯರಸ ಕುವೆಂಪು ಪ್ರತಿಭೆಯ ಕನ್ನಡಿಯಲ್ಲಿ ಪ್ರಜ್ವಲಿಸಿರುವುದನ್ನು ಹಿಡಿದಿಡುವ ಮಹತ್ವದ ಪ್ರಯತ್ನ ಈ ಕೃತಿಯಲ್ಲಿ ನಡೆದಿದೆ. ಹಾಗೆಂದು ವೃಷಭೇಂದ್ರ ಸ್ವಾಮಿ ಅವರದು ಕೇವಲ ಲಿಪಿಕಾರನ ಕೆಲಸವಲ್ಲ. ಕುವೆಂಪು ಅವರ ಕಾವ್ಯ ಚಿಂತನೆ ವೃಷಬೇಂದ್ರ ಸ್ವಾಮಿ ಅವರ ಮೂಲಕ ಮರುಸೃಷ್ಟಿ ಪಡೆದಿದೆ. ಪುಸ್ತಕದಲ್ಲಿ ಅಲ್ಲಲ್ಲಿ ಕಾಣುವ ಅಡಿ ಟಿಪ್ಪಣಿಗಳು ಅವರ ಆಳ ಓದಿನ ಉದಾಹರಣೆಗಳು.

‘ತರಗತಿಗಳಲ್ಲಿ ಕುವೆಂಪು’ ಲೇಖಕರು ಹೇಳುವಂತೆ ಗುರುದಕ್ಷಿಣೆ ಇರಬಹುದಾದರೂ ಅದು ಮಾಮೂಲಿ ದಕ್ಷಿಣೆಯಲ್ಲ. ಇಂಥ ಕೃತಿ ಕನ್ನಡದಲ್ಲಿ ಮಾತ್ರವಲ್ಲ; ಇತರ ಭಾಷೆಗಳಲ್ಲೂ ಇರಲಿಕ್ಕಿಲ್ಲ.

ವೃಷಭೇಂದ್ರ ಸ್ವಾಮಿ ಅವರ ಬಗ್ಗೆ ಮಾತಾಡಲಿಕ್ಕೆ ಹೊರಟಾಗ ಕುವೆಂಪು ಅವರನ್ನು ನೆನಪಿಸಿಕೊಳ್ಳಲಿಕ್ಕೆ ಕಾರಣವಿದೆ. ಏಕೆಂದರೆ ಕುವೆಂವು ಅವರ ಗಾಢ ಹಾಗೂ ಆಪ್ತ ಪ್ರಭಾವಲಯದಲ್ಲಿ ಬೆಳೆದ ವೃಷಭೇಂದ್ರ ಸ್ವಾಮಿ, ಮಹಾಕವಿಯ ವಿಚಾರಗಳ ವಾರಸದಾರರೂ ಕೂಡ. ಆ ಕಾರಣದಿಂದಾಗಿ ಸ್ವಾಮಿ ಅವರ ಕುರಿತ ಮಾತು ಅಪರೋಕ್ಷವಾಗಿ ಕುವೆಂಪು ಕುರಿತ ಮಾತೇ ಆಗಿಬಿಡುವ ಸಾಧ್ಯತೆಯಿದೆ.

ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಅಯ್ಯನಹಳ್ಳಿಯಲ್ಲಿ ಜನಿಸಿದ (೧೯೨೮, ಸೆ.೧) ವೃಷಭೇಂದ್ರ ಸ್ವಾಮಿ ಅವರದು ಬಡ ಕಟುಂಬ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಆನರ್ಸ್ ವಿದ್ಯಾರ್ಥಿಯಾಗಿ ಸೇರಿಕೊಂಡಾಗ (೧೯೫೦-೫೩) ಅವರ ಜೊತೆಗಿದ್ದುದು ಇದೇ ಬಡತನ. ಸುತ್ತೂರಿನ ಉಚಿತ ವಿದ್ಯಾರ್ಥಿ ನಿಲಯದಲ್ಲಿ ಅವರೊಂದಿಗೆ ಕಳೆದ ವಿದ್ಯಾರ್ಥಿ ಜೀವನದ ದಿನಗಳ ಸವಿಯನ್ನು ಡಾ.ಎಂ.ಚಿದಾನಂದ ಮೂರ್ತಿ ಈಗಲೂ ಚಪ್ಪರಿಸುತ್ತಾರೆ. ‘ಇಬ್ಬರೂ ಕೂಡಿ ಆಡುತ್ತಿದ್ದೆವು, ಓದುತ್ತಿದ್ದೆವು, ಊಟ ಮಾಡುತ್ತಿದ್ದೆವು. ಆಳ್ತನದಲ್ಲಿ ಮಾತ್ರವಲ್ಲದೆ ಔದಾರ್ಯದಲ್ಲೂ ವೃಷಭೇಂದ್ರ ಸ್ವಾಮಿ ದೊಡ್ಡವನಾಗಿದ್ದ. ಆತ ಹಸನ್ಮುಖಿ, ಇತರರನ್ನೂ ನಗಿಸುತ್ತಿದ್ದ ಎಂದು ಚಿಮೂ ನೆನಪಿನ ಬುತ್ತಿ ಬಿಚ್ಚುತ್ತಾರೆ.

ಮಹಾರಾಜ ಕಾಲೇಜಿನಲ್ಲಿ ಕನ್ನಡ ವಿಭಾಗದ ಅಂದಿನ ಬಹುದೊಡ್ಡ ಆಕರ್ಷಣೆ ಕುವೆಂಪು. ಅವರ ವಿಧಾರ್ಥಿ ಅನ್ನಿಸಿಕೊಳ್ಳಬೇಕು ಎನ್ನುವ ಆಸೆಯಿಂದಲೇ ಕನ್ನಡ ವಿಭಾಗಕ್ಕೆ ಸೇರುತ್ತಿದ್ದ ವಿಧ್ಯಾರ್ಥಿಗಳೂ ಇದ್ದರು. ವೃಷಭೇಂದ್ರ ಸ್ವಾಮಿ ಅವರ ಬ್ಯಾಚ್ ಕಂಡರಂತೂ ಕುವೆಂಪು ಅವರಿಗೆ ಇನ್ನಿಲ್ಲದ ಅಕ್ಕರೆ. ಆವರಿಗೆ ಇಬ್ಬರು, ಮೂವರು, ಐದು ಜನ ಮಾತ್ರವಿರುತ್ತಿದ್ದ ಕನ್ನಡ ವಿಭಾಗದಲ್ಲಿ ಆ ವರ್ಷ ಬರೋಬ್ಬರಿ ಹನ್ನೆರಡು ಮಂದಿ ಇದ್ದುದೇ ಅಕ್ಕರೆಗೆ ಕಾರಣ.

ಕಾಲೇಜಿನಲ್ಲಿ ಮಾತ್ರವಲ್ಲ ಕುವೆಂಪು ಮನೆಗೆ ಕೂಡ ಕೋ.ಚನ್ನಬಸಪ್ಪ ಅವರೊಂದಿಗೆ ವೃಷಭೇಂದ್ರ ಸ್ವಾಮಿ ಆಗಾಗ ಹೋಗಿಬರತ್ತಿದ್ದುದುಂಟು. ಬಿ.ಎ. ವಿಧ್ಯಾರ್ಥಿಯಾಗಿದ್ದ ಸಮಯದಲ್ಲಿಯೇ ವೃಷಭೇಂದ್ರ ಸ್ವಾಮಿ, ಚನ್ನಬಸಪ್ಪ ಮತ್ತೊಬ್ಬ ವಿಧ್ಯಾರ್ಥಿಯೊಂದಿಗೆ ಸೇರಿಕೊಂಡು ‘ಕುವೆಂಪು ಸಂದರ್ಶನ’ ಎನ್ನುವ ಪುಸ್ತಕ ಪ್ರಕಟಸಿದ್ದರು. ‘ರಕ್ತಾಕ್ಷಿ’ ನಾಟಕದಲ್ಲಿ ತಿಮ್ಮಜಟ್ಟಿ ಪಾತ್ರ ವಹಿಸಿದ್ದ ಸ್ವಾಮಿ ತಮ್ಮ ಗುರುಗಳಾದ ಕುವೆಂವು ಅವರಿಂದ ಬೆನ್ನು ತಟ್ಟಸಿಕೊಂಡಿದ್ದರು.

ಎಂ.ಎ. ವಿದ್ಯಾಭ್ಯಾಸದ ನಂತರ ಬಳ್ಳಾರಿಗೆ ಹಿಂತಿರುಗಿದ ವೃಷಭೇಂದ್ರ ಸ್ವಾಮಿ ಮೇಷ್ಟ್ರ ಕೆಲಸಕ್ಕೆ ಸೇರಿಕೊಂಡರು. ಕೆಲ ಸಮಯದ ನಂತರ ಧಾರವಾಡಕ್ಕೆ ತೆರಳಿದ ಆವರು ‘ಕರ್ನಾಟಕ ವಿ.ವಿ.’ಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇರ್ಪಡೆಯಾದರು. ಅಂದಿನಿಂದ ಧಾರವಾಡವೇ ಅವರ ಕರ್ಮಭೂಮಿ. ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಭಾಗ ಪ್ರಾರಂಭವಾಗುವಲ್ಲಿ ವೃಷಭೇಂದ್ರ ಸ್ವಾಮಿ ಮಹತ್ವದ ಪಾತ್ರ ವಹಿಸಿದ್ದರು.

ಕುವೆಂಪು, ಡಿ.ಎಲ್.ನರಸಿಂಹಾಚಾರ್, ತ.ಸು.ಶಾಮರಾವ್, ಎಸ್.ವಿ.ಪರಮೇಶ್ವರ ಭಟ್ಟ, ಎಸ್.ಶ್ರೀಕಂರ ಶಾಸ್ತ್ರಿಗಳಂಥ ಘಟಾನುಘಟಿಗಳ ಗರಡಿಯಲ್ಲಿ ಪಳಗಿದ ವೃಷಭೇಂದ್ರ ಸ್ವಾಮಿ ‘ಕನ್ನಡ ಮೇಷ್ಟ್ರು’ಗಳ ಶ್ರೀಮಂತ ಪರಂಪರೆಯ ಒಂದು ಕೊಂಡಿಯೂ ಹೌದು. ಮೂರು ದಶಕಗಳಿಗೂ ಹೆಚ್ಚು ಕಾಲ ಪಾಠ ಹೇಳಿರುವ, ನಿವೃತ್ತಿಯ ನಂತರವೂ ಪಾಠ ಹೇಳುತ್ತಿರುವ ಅವರು ನೂರಾರು ವಿದ್ಯಾರ್ಥಿಗಳಲ್ಲಿ ಕಾವ್ಯಪ್ರೀತಿಯ ಬಿತ್ತಿದ್ದಾರೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ‘ಬೆಳಗೊಳದ ತೆನೆಜೋಳ’ ಎಂದು ಅಭಿಮಾನಿಗಳು ಅವರನ್ನು ಪ್ರೀತಿಯಿಂ ಕರೆಯುವುದುಂಟು.

ಬರಹಗಾರರಾಗಿಯೂ ವೃಷಭೇಂದ್ರ ಸ್ವಾಮಿ ಅವರ ಸಾಧನೆ ಗಮನ ಸೆಳೆಯುವಂತಿದೆ. ಕಾವ್ಯ ಚಿಂತನೆ, ವಚನ ಸಾಹಿತ್ಯ ಅವರ ಆಸಕ್ತಿಯ ಕ್ಷೇತ್ರಗಳು. ‘ಕನ್ನಡ ಸಾಹಿತ್ಯದಲ್ಲಿ ಅಲ್ಲಮ ಪ್ರಭುದೇವ’ ಅವರ ಪಿ‌ಎಚ್.ಡಿ ಪ್ರೌಢ ಪ್ರಬಂಧ. ‘ಬರೆಯುವ ದಾರಿ’, ’ಸಂಶೋಧನಾ ಪ್ರಬಂಧಗಳು’ ಸೇರಿದಂತೆ ೨೫ ಕೃತಿಗಳನ್ನು ರಚಿಸಿದ್ದಾರೆ.

ವೃಷಭೇಂದ್ರ ಸ್ವಾಮಿ ಅವರಿಗೀಗ ೭೮ ವರ್ಷ. ಬರೆಯುವ, ಪಾಠ ಹೇಳುವ ಉತ್ಸಾಹವನ್ನು ಇನ್ನೂ ಉಳಿಸಿಕೊಂಡಿರುವ ಈ ಮೇಷ್ಟ್ರೀಗೀಗ ‘ಚಿದಾನಂದ ಪ್ರಶಸ್ತಿ’ಯ ಗೌರವ ಸಂದಿದೆ. ಚಿಮೂ ಹಾಗೂ ಸ್ವಾಮಿ ಏಕವಚನದ ಗೆಳೆಯರು. ತಮ್ಮ ಹೆಸರಿನ ಪ್ರಶಸ್ತಿ ಗೆಳೆಯನಿಗೆ ಸಂದಿರುವ ಕುರಿತು ಚಿಮೂ ಅವರಿಗೆ ಸಂತಸವಿದೆ. ಈ ಮೂಲಕ ಪ್ರಶಸ್ತಿಯ ಗೌರವ ಹೆಚ್ಚಾಗಿದೆ ಎನ್ನುತ್ತಾರವರು.

ತಮ್ಮ ದಿನಚರಿಯಲ್ಲಿ ಮೂಡಿದ ಕುವೆಂಪು ನೆನಪುಗಳನ್ನು ಕೃತಿರೂಪದಲ್ಲಿ ಪ್ರಕಟಿಸುವ ಆಸೆಯನ್ನು ‘ತರಗತಿಗಳಲ್ಲಿ ಕುವೆಂವು’ ಕೃತಿಯಲ್ಲಿ ವೃಷಭೇಂದ್ರ ಸ್ವಾಮಿ ಹೇಳಿಕೊಂಡಿದ್ದಾರೆ. ‘ಶ್ರೀ ಕುವೆಂಪು ದೋಣಿಯ ನೆನಪುಗಳು’ ಕೃತಿಯ ಮೂಲಕ ವೃಷಭೇಂದ್ರ ಸ್ವಾಮಿ ಮತ್ತೊಮ್ಮೆ ಸಹೃದಯರನ್ನು ಆವರಿಸಿಕೊಳ್ಳಲಿ. ಆ ಮೂಲಕ ಅವರನ್ನು ಅಭಿನಂದಿಸಲು ಮತ್ತೊಂದು ನೆಪ ಸಹೃದಯರಿಗೆ ದೊರಕಲಿ.
(ವೃಷಭೇಂದ್ರ ಸ್ವಾಮಿ ಅವರಿಗೆ ೨೦೦೬ನೇ ಸಾಲಿನ ‘ಚಿದಾನಂದ ಪ್ರಶಸ್ತಿ’ ದೊರೆತ ಸಂದರ್ಭದಲ್ಲಿ ಬರೆದ ಲೇಖನ)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನು ಮಾಡಬೇಕು
Next post ಕುತ್ತಿಗ್ಗೊಯ್ಕ

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys