ಹಕ್ಕೀ ಹಾಗೇ ನಾನೂನೂ
ರೆಕ್ಕೆ ಬಿಚ್ಕೊಂಡು
ಹಾರಾಡ್ಬೇಕು ಮೋಡದ ನಡುವೆ
ಭೂಮಿ ನೋಡ್ಕೊಂಡು!

ಮೀನಿನ ಹಾಗೇ ನಾನೂ ಪಿಳ ಪಿಳ
ಕಣ್ಣನ್ ಬಿಟ್ಕೊಂಡು
ಈಜ್ತಿರಬೇಕು ಮೈಮಿಂಚಸ್ತ
ನೀರನ್ ಸೀಳ್ಕೊಂಡು!

ಪುಟಾಣಿ ಕರುವಿನ ಹಾಗೇ ನಾನೂ
ಬಾಲ ಎತ್ಕೊಂಡು
ಓಡ್ತಿರಬೇಕು ನಾಗಾಲೋಟ
ಹಾರ್‍ಕೊಂಡ್ ಹಾರ್‍ಕೊಂಡು!

ಇರುವೆ ಹಾಗೆ ಸದಾ ಕೆಲ್ಸ
ಮಾಡ್ತಾ ಇರ್‍ಬೇಕು
ಶಿಸ್ತಿನಿಂದ ಸಾಲಾಗ್ ಹೋಗೋ
ನಡತೇ ಕಲಿಬೇಕು!

ಹಕ್ಕಿ ಪ್ರಾಣಿ ಯಾವ್ದೂ ನಮ್ಗೆ
ಕಡಮೆ ಏನಲ್ಲ
ಅದನ್ನ ನೋಡಿ ನಾವೇ ಕಲಿಯೋದ್
ಎಷ್ಟೋ ಇದೆ ಅಲ್ವ?
*****

Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)