ಪಾಂಡು ಪತ್ನಿಯರು

-ಹಿರಿಯನಾದ ಧೃತರಾಷ್ಟ್ರನ ಮದುವೆಯನ್ನು ರಾಜಕುಮಾರಿ ಗಾಂಧಾರಿಯೊಂದಿಗೆ ನೆರವೇರಿಸಿದರಾದರೂ ಆ ದಂಪತಿಗಳಲ್ಲಿ ಅನ್ನೋನ್ಯತೆಯ ಕೊರತೆಯಾಯಿತು. ಆದರೆ ಹಿರಿಯರಾರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಯುವರಾಜನಾದ ಪಾಂಡುವಿಗೂ ಅನುರೂಪಳಾದ ಹೆಣ್ಣನ್ನು ತಂದು ಮದುವೆ ಮಾಡಬೇಕೆಂದು ನಿಶ್ಚಯಿಸಿದರು. ಆದರೆ ಪಾಂಡುವು ಹುಟ್ಟಿನಿಂದಲೇ ದೋಷಪೂರಿತನಾಗಿದ್ದುದು ಮಾತ್ರವಲ್ಲದೆ ಅರಮನೆಯ ಅತಿಯಾದ ಭೋಗಲಾಲಸೆಗಳಲ್ಲಿ ಮುಳುಗಿ ತನ್ನ ಪುರುಷಶಕ್ತಿಯನ್ನೇ ಕಳೆದುಕೊಂಡಿದ್ದ ಸಂಗತಿ ಮಾತ್ರ ಯಾರಿಗೂ ತಿಳಿದಿರಲಿಲ್ಲ. ಪಾಂಡುವಿನಿಂದ ಕುರುವಂಶವನ್ನು ಬೆಳೆಸುವ ಹಂಬಲ ಮಾತ್ರ ಅಲ್ಲಿನ ಹಿರಿಯರದು-

ಯದುವಂಶದ ಅತಿ ಶೂರನೆನಿಸಿದ್ದ ಶೂರಸೇನ ಭೂಪತಿ ಅಂದು
ಮೊದಲನೆ ಮಗು ಹೆಣ್ಣಾಯಿತು ಎನ್ನುತ ಬೇಸರಪಟ್ಟನು ಮನನೊಂದು
ಗಂಡು ಸಂತತಿಯು ಬೇಕೆಂದೆನ್ನುತ ಹೆಣ್ಣು ಸಂತತಿಯ ಕಡೆಗಣಿಸಿ
ಅಂದು ಮೊದಲಾಗಿ ಸುಂದರ ಮಗುವನು ಬೇರೆಯವರಿಗೇ ಕೊಡಲೆಣಿಸಿ
ಮಕ್ಕಳಿಲ್ಲದಿಹ ಕುಂತಳದೇಶದ ಕುಂತಿಭೋಜನಿಗೆ ಮಗಳನ್ನು
‘ಸಾಕಿಕೊಳ್ಳು ನೀನೀ ಮಗುವನ್ನು’ ಎನ್ನುತ ಅವನಿಗೆ ನೀಡಿದನು
ಶೂರಸೇನನಿಗೆ ನಂತರ ಜನಿಸಿತು ಗಂಡುಮಗುವು ಕೋರಿಕೆಯಂತೆ
ವಸುದೇವನು ಎಂದೆನ್ನುತ ಕರೆಯುತ ಸಾಕಿದ ಕೊರತೆಯು ಇರದಂತೆ!

ಭೋಜರಾಜನೋ ಸಂತಸದಿಂದಲಿ ಸ್ವೀಕರಿಸಿ ಹೆಣ್ಣುಮಗುವನ್ನು
‘ಪೃಥೆ’ಯೆಂದವಳಿಗೆ ಹೆಸರನ್ನು ನೀಡುತ ಅಕ್ಕರೆಯಿಂದಲಿ ಸಾಕಿದನು
ಪ್ರೀತಿ ಮಮತೆಗಳ ಧಾರೆಯನೆರೆಯುತ ಸಲುಹಿದ ಅತ್ಯಾದರದಿಂದ
ಸಂಕಟವರಿಯದೆ ಸಂತಸದಿಂದಲಿ ಬೆಳೆದಳು ಕುವರಿಯು ಮುದದಿಂದ
ಕುಂತಳದೇಶದಿ ಬೆಳೆದಂತಹ ಪೃಥೆ ‘ಕುಂತಿ’ ಎಂದು ಹೆಸರಾಗಿರಲು
ಕುಂತೀಭೋಜನು ಆ ಮಗಳನ್ನೇ ಮುನಿಗಳ ಸೇವೆಗೆ ಮುಡಿಪಿಡಲು
ಮುನಿಗಳ ಸೇವೆಯನವಳು ಮಾಡಿದಳು ಯಾವುದೇ ಲೋಪ ಬರದಂತೆ
ಗುಣವತಿಯೆನ್ನುತ ಹೆಸರು ಗಳಿಸಿದಳು ಕೊರತೆಯೆಂಬುದೇ ಇರದಂತೆ
ಅತಿಕೋಪಿಷ್ಠನು ಮುನಿ ದುರ್ವಾಸನು ಅವಳ ಸೇವೆಗೊಲಿದವನಾಗಿ
ನೀಡಿದನವಳಿಗೆ ಮಕ್ಕಳ ಪಡೆಯುವ ಮಂತ್ರಗಳೆದನು ವರವಾಗಿ!

ವರಗಳ ಮಹಿಮೆಯ ಅರಿವ ಕುತೂಹಲ ಅವಳಲಿ ಮೊಳೆಯಿತು ಸಸಿಯಾಗಿ
ತಣಿಸುವ ಕಾತರ ಹೆಚ್ಚುತ ಬರುತಿರೆ ಉಸಿರಾಟವು ಅತಿ ಬಿಸಿಯಾಗಿ
ತನುಮನ ಒಪ್ಪಿಸಿ ಮುನಿಯನು ಪ್ರಶ್ನಿಸಿ ಉತ್ತರವವನಲಿ ಬಯಸಿದಳು
ತಿಳಿದುಕೊಳ್ಳುವುದು ತಪ್ಪೇನೆನ್ನುತ ತನ್ನ ಮನದಿ ತಳಮಳಿಸಿದಳು!
ಅರಿಯಬೇಕೆಂಬ ಅರೆಬರೆ ಜ್ಞಾನವು ಅವಳ ಕಾಡಿ ಅತೃಪ್ತಿಯಲಿ
ಮನವು ಚಡಪಡಿಸಿ ತನುವು ಸಹಕರಿಸಿ ಉತ್ತರ ಪಡೆದಳು ತೃಪ್ತಿಯಲಿ
ದುರ್ವಾಸನು ಅಂದವಳಿಗೆ ನೀಡಿದ ಮೊದಲನೇ ವರದ ಫಲವಾಗಿ
ಸೂರ್ಯನ ತೇಜದ ಮಗನನು ಪಡೆದಳು ಮದುವೆಗೆ ಮೊದಲೇ ಗುಟ್ಟಾಗಿ!

ಲೋಕಾಪವಾದಕ್ಕೆ ಹೆದರಿದ ಕುಂತಿಯು ಸೂರ್ಯನು ಉದಿಸುವ ಸಮಯದಲಿ
‘ದಿನಕರ ನೀನೇ ತಂದೆಯು ಮಗುವಿಗೆ’ ರಕ್ಷಿಸಿಕೋ ಎಂದೆನ್ನುತಲಿ
ಸಕ್ಕರೆ ನಗುವಿನ ಅಕ್ಕರೆ ಮಗುವನು ತಕ್ಷಣ ತೆಪ್ಪದ ಮೇಲಿಟ್ಟು
ಮೆತ್ತನೆ ಹಾಸಿಗೆ ಸುತ್ತಲೂ ಹಾಸಿ, ಸಿಹಿಮುತ್ತನು ಮಗುವಿಗೆ ಕೊಟ್ಟು
ಕರ್ಣಕುಂಡಲವ ಚಿನ್ನದಾಭರಣ ತುಂಬಿಸಿಟ್ಟು ಪಟ್ಟಿಗೆಯಲ್ಲಿ
ಆಭರಣದ ಜೊತೆ ಮಗುವನ್ನು ಮಲಗಿಸಿ ತೇಲಿಸಿಬಿಟ್ಟಳು ಗಂಗೆಯಲಿ!

ನೂರು ನೂರು ಪಾಪ ತೊಳೆವ ಗಂಗಮ್ಮ ತಾಯೇ
ಪಾರು ಮಾಡಿ ಪಾಪುವನ್ನು ಕಾಯಮ್ಮ ತಾಯೇ
ನಿನ್ನ ಮಡಿಲ ಕಂದನೆಂದು ನೋಡು ತಾಯೆ ನೀನು
ನನ್ನ ಕರುಳು ಕೊಯ್ದುಕೊಟ್ಟೆ ಕರುಣೆದೋರು ನೀನು?
ಕನ್ಯೆಯೆಂಬ ಪಟ್ಟವನ್ನು ಕಳೆದುಕೊಳ್ಳಲಾರೆನು
ಕಾನೀನನನ್ನು ಬಳಿಯೇ ಉಳಿಸಿಕೊಳ್ಳಲಾರೆನು
ಕರುಣೆಯಿಂದ ಕಾಪಾಡಿ ನನ್ನ ಪುಟ್ಟ ಕಂದನ
ವರವ ನೀಡಬೇಕು ತಾಯಿ ಕೊಟ್ಟು ನಿನ್ನ ಚುಂಬನ

ತೇಲುತ ಸಾಗಿದ ತೆಪ್ಪವು ದೊರಕಿತು ಅಧಿರಥ ಎನ್ನುವು ಸೂತನಿಗೆ
ಪೆಟ್ಟಿಗೆಯೊಂದಿಗೆ ಮಗುವನು ಕಾಣುತ ಸಂತಸವಾಯಿತು ಆತನಿಗೆ
ಹಸ್ತಿನಾಪುರದ ಅರಮನೆ ರಥವನು ನಡೆಸುವ ಸಾರಥಿಯಾಗಿದ್ದ
ಹೊತ್ತು ಮೂಡುವ ವೇಳೆಗಾಗಲೇ ನದಿಯಲಿ ಜಳಕಕೆ ಹೋಗಿದ್ದ
ಸೂತನು ಸಡಗರದಿಂದಲಿ ಮಗುವನು ತಂದು ನೀಡಿದನು ಹೆಂಡತಿಗೆ
ದೇವರು ನೀಡಿದ ಉಡುಗೊರೆಯಾಯಿತು ಮಕ್ಕಳೇ ಇರದ ದಂಪತಿಗೆ
ಹೆಂಡತಿ ರಾಧೆಯು ಗಂಡುಮಗುವನ್ನು ಕಂಡು ಸಂತಸದಿ ನಲಿದಾಡಿ
ಮಕ್ಕಳ ಭಾಗ್ಯವು ಇಲ್ಲದ ತಾಯಿಯು ಸಿಕ್ಕಿದ ಮಗುವನು ಮುದ್ದಾಡಿ
ಕರ್ಣಕುಂಡಲಗಳೊಂದಿಗೆ ದೊರಕಿದ ಸುಂದರ ರೂಪದ ಮಗುವನ್ನು
‘ಕರ್ಣ’ನೆಂದು ಹೆಸರಿಟ್ಟು ಕರೆದರು, ಧಾರೆಯನೆರೆದರು ಪ್ರೀತಿಯನು
ಕುಂತಿಯ ಪುತ್ರನು ರಾಧೆಯ ಮಡಿಲಲಿ ಬೆಳೆಯಲು ಕರೆದರು ರಾಧೇಯ
ಕುಂತಿಯು ಮಗನನು ನೆನೆಯುತಲಿದ್ದಳು, ಆದರೆ ಮರೆತಳು ತರುವಾಯ!

ಇಂತಹ ಕುಂತಿಯು ಹೆಂಡತಿಯಾದಳು ಕುರುಯುವರಾಜನು ಪಾಂಡುವಿಗೆ
ಸಂತಸದಿಂದಲಿ ಬಂದಳು ಚೆಂದದ ಹಸ್ತಿನಾಪುರದ ಅರಮನೆಗೆ
ಧೃತರಾಷ್ಟ್ರನು ಕಣ್ಣಿಲ್ಲದ ಕಾರಣ ಪಾಂಡುವಾಗಿದ್ದ ಯುವರಾಜ
ಕುರುರಾಜ್ಯದ ವಿಸ್ತರಣೆಯ ಕಾರ್ಯಕೆ ಅವನೇ ಈಗ ಮಹಾರಾಜ!
ರಾಜಕುಮಾರನು ರಾಜಕಾರ್ಯದಲ್ಲಿ ಸದಾ ನಿರತನಾಗಿರುತಿದ್
ರೋಗಪೀಡಿತನು ಅವನಾಗಿದ್ದರೂ ಭೋಗಜೀವನವ ನಡೆಸಿದ್
ಅರಮನೆಯಲ್ಲಿನ ಭೋಗಭಾಗ್ಯವನ್ನು ಅವನಾಗಲೆ ಅನುಭವಿಸಿದ್ದ
ಅತಿಯಾದಂತಹ ಭೋಗಲಾಲಸೆಯ ಬಯಸಿ ಬದುಕಿನಲಿ ಎಡವಿದ್ದ
ಪಾಂಡುರಾಜನಲಿ ಪುರುಷಶಕ್ತಿಯೇ ಉಡುಗಿಹೋಗಿತ್ತು, ನಡುಗಿದ್ದ
ಗಂಡಸುತನವಿಲ್ಲದ ಗಂಡಾದೆನು ಎಂದು ಮನದಲ್ಲಿ ಕೊರಗಿದ್
ಹೆಸರಿಗೆ ಮಾತ್ರವೆ ಗಂಡನಾಗಿದ್ದ ಕುಂತಿಗೆ ಮಕ್ಕಳ ಫಲವಿಲ್ಲ
ಷಂಡನಾದ ಪತಿ ಪಾಂಡುವಿನಿಂದಲಿ, ಆಗುವ ಭರವಸೆ ಇರಲಿಲ್ಲ!

ಕುಂತಿಯು ಗರ್ಭವ ಧರಿಸಲಿಲ್ಲೆಂದು ಚಿಂತೆಯು ಬಂದಿತು ಭೀಷ್ಮನಿಗೆ
ಶಂತನು ವಂಶವು ಬೆಳೆಯದೆಹೋಯಿತು ಸತ್ಯವತಿಗೆ ಕೊರಗೊಳಗೊಳಗೆ
ಮೊಮ್ಮಗು ನೋಡುವ ಬಯಕೆಯು ಇದ್ದಿತು ಪಾಂಡು ತಾಯಿ ಅಂಬಾಲಿಕೆಗೆ
ತನ್ನ ಬದುಕಿನಲಿ ಸುಖವನ್ನು ಕಾಣದ ದುರಾದೃಷ್ಟೆ ಆ ಅಂಗನೆಗೆ
ಹೆಂಡತಿಯೆಂದರೆ ಅಷ್ಟಕ್ಕಷ್ಟೇ ಪಾಂಡುರಾಜನಿಗೆ ಮನದಲ್ಲಿ
ಹೆಂಗಸರೆಂದರೆ ಹೆದರಿಕೆಯಾಗುತ ನಡುಗುತ್ತಿದ್ದನು ಎದೆಯಲ್ಲಿ
ಪಾಂಡುವು ರಾಜ್ಯದ ಆಗುಹೋಗಿನಲಿ ತನ್ನ ಮನಸ್ಸನು ನೆಟ್ಟಿದ್ದ
ಸಾಮ್ರಾಜ್ಯದ ವಿಸ್ತರಣೆಗೆ ಅನುದಿನ ಹೆಚ್ಚಿನ ಗಮನವ ಕೊಟ್ಟಿದ್ದ!

ಗಾಂಧಾರಿಯ ಮನ ಹೊಂದಿಕೆಯಾಗದೆ ಧೃತರಾಷ್ಟ್ರನ ಜೊತೆ ಸರಸಕ್ಕೆ
ಮುಂದಿನ ದಾರಿಯ ತೆಗೆಯುತಲಿದ್ದಿತು ಅವನೊಂದಿಗೆ ಅತಿ ವಿರಸಕ್ಕೆ
ಕುರುಡು ಮಗನಿಗೂ ಸುಖ ಸಿಗದಾಯಿತು ಎನ್ನುವ ಚಿಂತೆಯು ಅಂಬಿಕೆಗೆ
ಬರಡು ಬದುಕಿನಲಿ ಮಗು ಬರಲೆಂದಿರೆ ಹೊಡೆತ ಬಿದ್ದಿತ್ತು ನಂಬಿಕೆಗೆ
ಹಸ್ತಿನಾಪುರದ ಅರಮನೆಯೊಳಗಡೆ ಮಕ್ಕಳಿಗೇ ಬರ ಮೊದಲಿಂದ
ಹೊಸ್ತಿಲು ದಾಟುವ ಕಂದನಿಗೋಸ್ಕರ ಕನವರಿಕೆಯು ಮನೆಯವರಿಂದ!

ಮಗುವೊಂದಾದರೂ ಮನೆಯಂಗಳದಲಿ ಕಾಣಿಸಿಕೊಳ್ಳದೆ ಮರುಗಿದರು
ಮುಂದೇನೆಂಬುವ ಯೋಚನೆಯಲ್ಲಿಯೆ ಅರಮನೆ ಮಂದಿಯು ಮುಳುಗಿದರು
ಧೃತರಾಷ್ಟ್ರನ ಸತಿ ಗಾಂಧಾರಿಯಲೂ ಮಕ್ಕಳಾಗಿಲ್ಲ ಮನೆಯಲ್ಲಿ
ಪಾಂಡು ಪತ್ನಿ ಕುಂತಿಯ ಬಸುರಲ್ಲೂ ಚಿಗುರು ಮೂಡಿಲ್ಲ, ನಗುವೆಲ್ಲಿ?

ಕಾಲಿನಲ್ಲಿ ಗೆಜ್ಜೆ ತೊಟ್ಟು ಮುಟ್ಟ ಪುಟ್ಟ ಹೆಜ್ಜೆಯಿಟ್ಟು
ತೋಳಿನಲ್ಲಿ ಆಡುವಂಥ ಪುಟ್ಟ ಕಂದ ಲಗ್ಗೆಯಿಟ್ಟು
ಬಾಳಿನಲ್ಲಿ ಹರುಷವನ್ನು ಬಿಡದೆ ಮನಕೆ ತಂದುಕೊಟ್ಟು
ನಾಳಿನೆಲ್ಲ ಬದುಕಿನಲ್ಲಿ ನಲಿಯಬೇಕು ಎಲ್ಲ ಒಟ್ಟು
ಬಾಳಿಗೊಂದು ಅಂದ ಕೊಟ್ಟು ಕಂದ ಬರುವನೆಂದಿಗೆ
ತೋಳಿನಿಂದ ಬಳಸುವಂಥ ಮಗುವು ಬರುವುದೆಂದಿಗೆ?
ಕೇಳಿಕೊಂಡು ಬಂದುದಿಷ್ಟೆ ಎಂಬ ಭಾವ ಮನಸಿಗೆ
ತಾಳಿಕೊಂಡು ಬಾಳಬೇಕು ಹೆದರಬೇಡ ಮುನಿಸಿಗೆ!

ಭೀಷ್ಮನು ಎರಡನೆ ಮದುವೆಯ ಮಾಡಲು ಚಿಂತನೆ ನಡೆಸಿದ ಪಾಂಡುವಿಗೆ
ಸತ್ಯವತಿಯ ಜೊತೆ ಚರ್ಚೆಯ ಮಾಡುತ ಒಪ್ಪಿಗೆ ಪಡೆದನು ಮರುಘಳಿಗೆ
ರಾಜ್ಯಕೆ ಮುಂದಿನ ವಾರಸುದಾರನು ಬೇಕಾಗಿದ್ದನು ಹಿರಿಯರಿಗೆ
ರಾಜ್ಯ ಅನಾಯಕವಾಗದಿರಲೆಂಬ ದೂರದ ಆಸೆಯು ಎಲ್ಲರಿಗೆ
ಆದುದರಿಂದಲಿ ಪಾಂಡುರಾಜನಿಗೆ ಮರುಮದುವೆಗೆ ಸಿದ್ಧತೆಯಾಯ್ತು
ಅರಮನೆಯೊಳಗೂ ಹೊರಗೂ ಎಲ್ಲೆಡೆ ಮದುವೆಯ ಸುದ್ದಿಯು ಬೆಳೆದಾಯ್ತು
ಕುಂತಿಯು ಏಕೋ ಬೇಡೆನದಿದ್ದಳು ಗೊತ್ತಿತ್ತವಳಿಗೆ, ಇದು ವ್ಯರ್ಥ
ಆದರೆ, ಎದುರಾಡದೆ ಅವಳಿದ್ದಳು ತಿಳಿದಿತ್ತವಳಿಗೆ ಅದರರ್ಥ!
ಮದ್ರದೇಶದಲಿ, ರಾಜ ಶಲ್ಯನಿಗೆ ತಂಗಿ ‘ಮಾದ್ರಿ’ ಹೆಸರಿದ್ದವಳು
ಭುವನಸುಂದರಿಯು ಎನ್ನುವ ಖ್ಯಾತಿಯ ಬಾಲ್ಯದಿಂದ ಪಡೆದಿದ್ದವಳು
ಹದಿಹರೆಯದ ಮಾದ್ರಿಯ ಬಯಸಿದ್ದರು ರಾಜಕುಮಾರರು ಮುದದಿಂದ
ಅವಳನು ವರಿಸಲು ತುದಿಗಾಲಲ್ಲಿಯೇ ನಿಂತಿದ್ದರು ಕೆಲದಿನದಿಂದ
ಭೀಷ್ಮನು ನೀಡಿದ ಮದ್ರರಾಜನಿಗೆ ಅಗಣಿತ ರಾಶಿಯ ಧನಕನಕ
ಬಳಿಕ ಹೇಳಿದನು ಅದುವೇ ಅವನಿಗೆ ಕೊಡಮಾಡುವ ಕನ್ಯಾಶುಲ್ಕ!

ಮದ್ರರಾಜನವನೆಂದೂ ಕಾಣದ ರಾಶಿ ಹೊನ್ನು ಅವನೆದುರಲ್ಲಿ
ತನ್ನ ಕಣ್ಣನ್ನು ತಾನೇ ನಂಬದೆ ಮೂಕನಾಗಿದ್ದ ಅವನಲ್ಲಿ
ಮದ್ರರಾಜನಿಗೆ ಸಂತಸವಾಯಿತು ಕಂಡು ರಾಶಿರಾಶಿಯ ಹೊನ್ನು
ಕೂಡಲೆ ಒಪ್ಪಿದ ಪಾಂಡುರಾಜನಿಗೆ ಕೊಡಲು ತನ್ನ ಸೋದರಿಯನ್ನು
ಪುಟ್ಟದೊಂದು ಸಂಸ್ಥಾನದ ರಾಜನು ಹೆಸರಿಗೆ ಮಾತ್ರವೆ ಅಧಿಪತಿಯು
ಭೀಷ್ಮ ಕೇಳಿದರೆ ಆಗದು ಎನ್ನುವ ಸಾಹಸವಿರದಂತಹ ಸ್ಥಿತಿಯು
ಇಷ್ಟವು ಇರದಿರೆ ಕಷ್ಟವು ತಪ್ಪದು ಒಪ್ಪಿಕೊಳ್ಳದಿರೆ ಆಪತ್ತು
ಇಲ್ಲದೆ ಹೋದರೆ ಹೊತ್ತುಹೋಗುವನು ಭೀಷ್ಮನು ಎಂಬುದು ಗೊತ್ತಿತ್ತು
ಅಣ್ಣನು ಒಪ್ಪಿದ ಮೇಲೇನಿರುವುದು ತಂಗಿಯು ಒಪ್ಪಲೆಬೇಕಲ್
ಆದರೆ, ಎರಡನೆ ಹೆಂಡತಿಯಾಗಲು ಅವಳಿಗೂ ಇಷ್ಟವಿರಲಿಲ್ಲ
ಮಾದ್ರಿಯು ಕಂಡಂತಹ ಕನಸೆಷ್ಟೋ ನನಸಾಗದು ಎಂಬರಿವಿತ್ತು
ಕನಸನು ಕಾಣಲು ಹಣ ಕೊಡಬೇಕೆ? ಅವಳಿಗೆ ಕೂಡಾ ಗೊತ್ತಿತ್ತು
ಅಣ್ಣನು ನಿಶ್ಚಯ ಮಾಡಿದನೆಂದರೆ ಅಲ್ಲಿಗೆ ಎಲ್ಲಾ ಕೊನೆಯಾಯ್ತು
ಅಣ್ಣನೇ ಅವಳ ಬಾಳಿಗೆ ದಾರಿಯ ತೋರುವನೆಂಬುದು ತಿಳಿದಿತ್ತು
ಅಣ್ಣನ ಮಾತಿಗೆ ಎದುರು ನುಡಿಯುವುದು ಬೇಡವೆಂದು ಅವಳೊಪ್ಪಿದಳು
ಒಪ್ಪದಿದ್ದರೂ ಮದುವೆ ಮಾಡುವರು ಎಂಬ ಸತ್ಯ ಅರಿತಿದ್ದವಳು
ಹೆಣ್ಣಿನ ಇಷ್ಟಾನಿಷ್ಟವ ತಿಳಿಯುವ ಕಾಲವು ಬಂದೂ ಇರಲಿಲ್ಲ
ಹೆಣ್ಣನು ಸುಮ್ಮನೆ ಕೇಳುವುದೇತಕೆ? ಎಂದು ಬಗೆದಿತ್ತು ಜಗವೆಲ್ಲ!
ಮದ್ರದೇಶದಲಿ ಸುರಸುಂದರಿಯರು ಇದ್ದರು ಎಲ್ಲಾ ಕಡೆಯಲ್ಲೂ
ಭೂಮಂಡಲದಲಿ ಹೆಸರಾಗಿದ್ದಿತು ಕಾಣುತಿತ್ತು ನಡೆನುಡಿಯಲ್ಲೂ
ರಾಜಕುಮಾರಿಯು ಮಾದ್ರಿಯ ಚೆಲುವು ಎಲ್ಲರ ಮನೆಮಾತಾಗಿತ್ತು
ಇಂತಹ ಚೆಲುವೆಯು ಇನ್ನಿಲ್ಲೆನ್ನುವ ಮಾತೂ ಎಲ್ಲೆಡೆ ಹರಡಿತ್ತು
ರಾಜಕುಮಾರಿಗೆ ಕುರುಯುವರಾಜನು ಸರಿದೊರೆ ಎಂದಿತು ಜಗವೆಲ್ಲ
ಆದರೆ, ಎರಡನೆ ಮದುವೆಯು ಎನ್ನುತ ಮಾದ್ರಿಯ ಮೊಗದಲಿ ನಗುವಿಲ್ಲ
ತನ್ನ ಮನಸ್ಥಿತಿ ಹೇಳಿಕೊಂಡರೂ ಕೇಳುವವರು ಅಲ್ಲಿರಲಿಲ್ಲ
ಹೇಳಿಕೊಂಡರೂ ಕೇಳಿಕೊಂಡರೂ ತಡೆಯುವವರು ಯಾರೂ ಇಲ್ಲ
ಭೀಷ್ಮನು ಕನ್ಯಾಶುಲ್ಕವ ಕಳಿಸಿದ ದಿನವೇ ಸಿದ್ಧತೆ ಮೊದಲಾಯ್ತು
ಪಾಂಡುರಾಜನಿಗೆ ಎರಡನೆ ಹೆಂಡತಿಯಾಗಲು ಅದು ವೇದಿಕೆಯಾಯ್ತು!

ರಾಜಕುಮಾರಿಯ ಮದುವೆಯ ದಿಬ್ಬಣ ಸಾಗಿತು ಹಸ್ತಿನಪುರದೆಡೆಗೆ
ಶಲ್ಯನು ತಾನೇ ಮುಂದೆ ಸಾಗಿದನು, ಹಿಂದೆಯೇ ತಂಗಿಯ ಮೆರವಣಿಗೆ
ಕೆಲದಿನ ಪಯಣವು ಸಾಗಿದ ನಂತರ ಹಸ್ತಿನಾಪುರವ ತಲುಪಿದರು
ಅಲ್ಲಿಯೇ ಮದುವೆ ನಡೆಯುವುದೆನ್ನುವ ಭೀಷ್ಮನ ತೀರ್ಮಾನದ ಖದರು
ಮಾದ್ರಿಯು ಅರೆಬರೆ ಇಷ್ಟದಿಂದಲೇ ಇದ್ದದ್ದಂತೂ ಕಟುಸತ್ಯ
ಇಷ್ಟಾನಿಷ್ಟವು ಏನೇ ಇದ್ದರೂ ಚರ್ಚೆ ಮಾಡುವುದು ಅನಗತ್ಯ!
ಮಾದ್ರಿಯನ್ನು ಕರೆತಂದು ಮಾಡಿದರು ಪಾಂಡುರಾಜನಿಗೆ ಸತಿಯಾಗಿ
ವಿಧಿಯಿಲ್ಲದೆ ಅವಳೊಪ್ಪಿದಳವನನು ತನ್ನ ಬಾಳಿನಲಿ ಪತಿಯಾಗಿ
ಕುರುಯುವರಾಜನು ನೋಡಲು ಸುಂದರ ತೀಡಿ ತಿದ್ದಿದಂತಹ ರೂಪ
ಮಿರುಗುವ ಕತ್ತಿಯ ತೆರದಲ್ಲಿದ್ದನು ಇಂಥವರಿರುವುದು ಅಪರೂಪ
ಪಾಂಡು-ಮಾದ್ರಿಯರ ಜೋಡಿಯ ಕಂಡು ಸಂತಸಪಟ್ಟಿತು ನಾಡೆಲ್ಲ
ಅಂದು ಅವರೆಲ್ಲ ಆಡಿಕೊಂಡದ್ದು- ‘ಇಂತಹ ಜೋಡಿಯು ಇನ್ನಿಲ್ಲ!’
ರಾಜರಾಣಿಯರ ಸೊಬಗಿನ ವೈಭವ ಕಾಣುವುದೇನೇ ಪ್ರಜೆಗೆ ಹಿತ
ರಾಜನ ಸುಖವೇ ನಮ್ಮಯ ಸುಖವು ಎನ್ನುವುದೇನೇ ಪ್ರಜಾಮತ!!

ಕುರುಡನಾಗಿದ್ದ ಧೃತರಾಷ್ಟ್ರನು ಇದನೆಲ್ಲ ಕೇಳಿ ಒಳಗೇ ಕುದಿದ
ಕುರುಡನಾಗಿ ಹುಟ್ಟಿದ್ದರಿಂದಲೇ ಭಾಗ್ಯವಿಲ್ಲವೆಂದೇ ಬಗೆದ
ಹಿರಿಯನಾದ ತಾನೇ ಯುವರಾಜ, ಆದರೆ ಕಡೆಗಣಿಸಿದರೆನ್
ಕುರುಯುವರಾಜನು ತಾನಾಗಿದ್ದರೆ ಮೊಗೆಯಬಹುದಿತ್ತು ಸುಖವನ್ನ
ಹೆಸರಿಗೆ ಮಾತ್ರವೆ ಹಿರಿಯನಾಗಿರುವೆ ಗಾಂಧಾರಿಯ ಕೈ ಹಿಡಿದಿರುವೆ
ಆದರೆ ಮಡದಿಯ ಮನವನು ಗೆಲ್ಲಲು ಸಾಧ್ಯವಾಗದೆಂದರಿತಿರುವೆ
ಎನ್ನುತ ಮನದಲಿ ಕೊರಗುತ ನಿತ್ಯವೂ ನಿದ್ದೆಯಿರದೆ ಒದ್ದಾಡಿದ್ದ
ದುರಾದೃಷ್ಟವನ್ನು ಹಳಿಯುತಲಿದ್ದನು ಒಳಗೊಳಗೇ ಗೊಣಗುತ್ತಿದ್ದ!

ಹಲ್ಲಿದ್ದವರಿಗೆ ಕಡಲೆಯು ಇಲ್ಲ ಕಡಲೆಯು ಇದ್ದರೆ ಹಲ್ಲಿಲ್ಲ
ಹಲ್ಲುಗಳಿದ್ದೂ ಅಗಿಯದೆ ಸುಮ್ಮನೆ ಕುಳಿತುಕೊಂಡಿರಲು ಫಲವಿಲ್ಲ
ಎಲ್ಲಾ ಕಾಲಕೆ ಇಂತಹ ನುಡಿಗಳು ಅನ್ವಯಿಸುತ್ತವೆ ಸುಳ್ಳಲ್ಲ
ಬಲ್ಲವರ ಮಾತು ಬಲ್ಲೆ ತಾನೆಂದು ತಳ್ಳಿಹಾಕುವುದು ತರವಲ್ಲ

ಭೀಷ್ಮ, ಸತ್ಯವತಿ, ಅಂಬಾಲಿಕೆಯರು ಹರಸಿದ್ದರು ನವಜೋಡಿಯನು
ವಂಶೋದ್ಧಾರಕ ಉದಿಸಿ ಬರಲೆಂದು ಹಾರೈಸಿದ್ದರು ಇಬ್ಬರನೂ
ಅದರೆ ಮಕ್ಕಳ ಭಾಗ್ಯವು ದೊರಕಿತೆ? ಹೆಸರಿಗೆ ಮಾದ್ರಿಯು ಹೆಂಡತಿಯು
ಕುಂತಿಯ ಸವತಿಯು ತಾನಾಗಿದ್ದಳು ಕಪಟವಿರದ ಸಾದ್ವೀಮಣಿಯು
ಪತಿಯೆನಿಸಿದ ಆ ಪಾಂಡುರಾಜನಲಿ ಸುಖಪಡುವುದು ಬರಿ ಕನಸಾಯ್ತು
ವಂಶ ಬೆಳೆಯುವುದು ಸಾಧ್ಯವಾಗುವುದೆ? ಇಬ್ಬರ ಬದುಕೂ ಬರಡಾಯ್ತು!
ಕುಂತಿ, ಮಾದ್ರಿಯರು ಚಿಂತೆ ಮಾಡಿದರು ಮುಂದೆ ಮಾಡುವುದು ಏನೆಂದು
ಸಂತೆಯಲ್ಲಿ ಸಿಗುವಂಥ ವಸ್ತುವೆ ತಂದುಕೊಳಲು ಆರಿಸಿ, ಕೊಂಡು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೀರ್ಘ ಪ್ರಾರ್ಥನೆ
Next post ವಚನ ವಿಚಾರ – ಹಸಿವು, ಸುಳ್ಳು, ಅನಿವಾರ್ಯ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…