ಚಿತ್ರ: ಒನ್ ಇಂಡಿಯಾ.ಕಾಂ
ಚಿತ್ರ: ಒನ್ ಇಂಡಿಯಾ.ಕಾಂ

ಮೂಡಬಿದಿರೆಯ ‘ಆಳ್ವಾಸ್ ನುಡಿಸಿರಿ- ೨೦೦೭’ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಪ್ರೊ ಜಿ. ವೆಂಕಟಸುಬ್ಬಯ್ಯ ಮಾಹಿತಿ ತಂತ್ರಜ್ಞಾನ ಕುರಿತಂತೆ ಆಡಿದ್ದು ಎರಡು ಮಾತು. ಒಂದು ಕನ್ನಡದ ಯುವ ತಂತ್ರಜ್ಞರು ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೆಚ್ಚು ದುಡಿಯಬೇಕು ಎನ್ನುವುದು, ಮತ್ತೊಂದು ಅವರು ಸಂಪಾದಿಸಿರುವ ‘ಇಂಗ್ಲಿಷ್- ಕನ್ನಡ ನಿಘಂಟು’ ಆಂತರ್ಜಾಲದಲ್ಲಿ ಗಳಿಸುತ್ತಿರುವ ಜನಪ್ರಿಯತೆಗೆ ಸಂಬಂಧಿಸಿದ ಮಾತು. ವೆಂಕಟಸುಬ್ಬಯ್ಯನವರ ಕರೆ ಹಾಗೂ ಖುಷಿ ಎರಡಕ್ಕೂ ಒಂದು ರೀತಿಯಲ್ಲಿ ಶೇಷಾದ್ರಿ ವಾಸು ಕಾರಣರು. ಪ್ರೊ ಜಿ.ವಿ. ಅವರ ‘ಇಂಗ್ಲಿಷ್- ಕನ್ನಡ ನಿಘಂಟು’ ಅಂತರ್ಜಾಲದಲ್ಲಿ ದೊರಕಲು ಕಾರಣರಾದವರೇ ವಾಸು. ನಿಘಂಟಿನ ಅಷ್ಟೂ ಪದಸಂಪತ್ತನ್ನು ಜಾಲತಾಣಕ್ಕೆ ಅಳವಡಿಸಿರುವ ಆವರು. ಇ-ನಿಘಂಟನ ಕೊಂಡಿಯನ್ನು ತಮ್ಮ ‘ಬರಹ’ ಜಾಲತಾಣದಲ್ಲಿ ನೀಡಿದ್ದಾರೆ. ಪ್ರತಿದಿನ ನೂರಾರು ಮಂದಿ ಈ ನಿಘಂಟಿನ (baraha.com/kannada) ಉಪಯೋಗ ಪಡೆಯುತ್ತಿದ್ದಾರೆ. ‘ಕನ್ನಡ ಕಸ್ತೂರಿ’ (kannadakasturi.com) ನಿಘಂಟಿನಂತೆ ‘ಬರಹ’ ದಲ್ಲಿನ ಜಿ.ವಿ. ಅವರ ಪದಕೋಶನವೂ ದಿನೇದಿನೇ ಜ್ರನಪ್ರಿಯಗೊಳ್ಳುತ್ತಿದೆ. ಅದರ ಮಾತು ಒತ್ತಟ್ಟಿಗಿರಲಿ; ವಾಸು ವಿಷಯಕ್ಕೆ ಬರೋಣ.

ಕನ್ನಡದ ಯುವಕರು ಗಣಕ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಕೆಲಸ ಮಾಡಬೇಕು ಎಂದು ‘ನುಡಿಸಿರಿ’ ಉತ್ಸವದಲ್ಲಿ ವೆಂಕಟಸುಬ್ಬಯ್ಯನವರು ಕರೆ ನೀಡಿದರಲ್ಲ; ಈ ಕರೆಗೆ ಹತ್ತು ವರ್ಷಕ್ಕೆ ಮೊದಲೇ, ಗಣಕದಲ್ಲಿ ಕನ್ನಡದ ಕಂಪು ಬಿತ್ತುವ ಕೆಲಸವನ್ನು ಸ್ವ ಆಸಕ್ತಿಯಿಂದ ಮಾಡುತ್ತಾ ಬಂದವರು ವಾಸು. ಕಳೆದ ಹತ್ತು ವರ್ಷದಿಂದಲೂ ಕಂಪ್ಯೂಟರ್‍ನಲ್ಲಿ ಕನ್ನಡ ಬಿತ್ತುವ ವಾಸು ಕೆಲಸ ನಿರಂತರವಾಗಿ ಮುಂದುವರಿದಿದೆ. ಅವರ ‘ಬರಹ’ ಉಚಿತ ತಂತ್ರಾಂಶ ಎಷ್ಟರಮಟ್ಟಿಗೆ ಜನಪ್ರಿಯತೆ ಗಳಿಸಿದೆಯೆಂದರೆ, ಅವರು ಇ-ಕನ್ನಡಿಗರ ನಡುವೆ ‘ಬರಹ ವಾಸು’ ಎಂದೇ ಜನಪ್ರಿಯರು.

ದೇಶಕೋಶದ ಬೆನ್ನತ್ತಿ ವಿದೇಶಕ್ಕೆ ತೆರಳುವ ಯುವಕರಂತೆಯೇ ಶೇಶಾದ್ರಿ ವಾಸು ಕೂಡ ಅಮೇರಿಕಕ್ಕೆ ಹೋದರು. ಆದರೆ ಡಾಲರ್‌‍ಗಳ ರಿಂಗಣದ ನಡುವೆಯೂ ಅವರೊಳಗಿನ ಕನ್ನಡ ಡಿಂಡಿಮ ನುಡಿಯುತ್ತಲೇ ಇತ್ತು. ಆ ತುಡಿತದ ಪರಿಣಾಮವಾಗಿ ಮೂಡಿದ್ದು ‘ಬರಹ’ ತಂತ್ರಾಂಶ. ‘ಬರಹ’ ರೂಪು ಗೊಂಡದ್ದು ೧೯೯೮ರ ಜನವರಿ ತಿಂಗಳಲ್ಲಿ. ವಾಸು ಈ ತಂತ್ರಾಂಶ ರೂಪಿಸಿದಾಗ ಕಂಪ್ಯೂಟರ್‍ನಲ್ಲಿ ಕನ್ನಡದ ಅಕ್ಷರಗಳಿನ್ನೂ ಕಣ್ಣು ಬಿಡದ ಸಮಯ ಆಲ್ಲೊಬ್ಬ ಇಲ್ಲೊಬ್ಬ ಕನ್ನಡ ಪ್ರೇಮಿಗಳು ರೋಮನ್ ಲಿಪಿಯಲ್ಲಿ ಕನ್ನಡದ ಪದಗಳನ್ನು ಕೀಲಿಸುವ ಮೂಲಕ ಪುಳಕಪಡುತ್ತಿದ್ದನ್ನು ಬಿಟ್ಟರೆ ಅಂತರ್ಜಾಲದಲ್ಲಿ ಕನ್ನಡದ ಯಾವ ಲಿಪಿಯೂ ಲಭ್ಯವಿರದ ದಿನಗಳವು. ‘ಬರಹ’ ಹೊರಬಂದದ್ದು ಇಂಥ ಬರಗಾಲದಲ್ಲಿ ಇ-ಕನ್ನಡ ಮನಸ್ಸುಗಳು ಹಸಿದಿದ್ದ ಸಂದರ್ಭದಲ್ಲಿ.

ತಮ್ಮ ತಂತ್ರಾಂಶಕ್ಕೆ ವಾಸು ಶುಲ್ಕ ವಿಧಿಸಿದ್ದರೆ ಅವರು ಸುಲಭವಾಗಿ ಕೋಟಿಗಟ್ಟಲೆ ದುಡ್ಡು ಸಂಪಾದಿಸಬಹುದಿತ್ತು. ಆದರೆ, ಅವರು ‘ತಂತ್ರಾಂಶ’ ವನ್ನು ಉಚಿತವಾಗಿ ನೀಡಿದರು. ಎಲ್ಲ ಜನರಿಗೂ ‘ಬರಹ’ ಸುಲಭವಾಗಿ ಲಭ್ಯವಾಗಬೇಕು; ಕಂಪ್ಯೂಟರ್ನಲ್ಲಿ ಕನ್ನಡದ ಬಿತ್ತನೆ ಹುಲುಸಾಗಬೇಕು ಎನ್ನುವ ಹಂಬಲವೇ ಇದಕ್ಕೆ ಕಾರಣ. ವಾಸು ಅವರ ಹಂಬಲ ಇಂದು ನೆರವೇರಿದೆ. ಜಗತ್ತಿನಾದ್ಯಂತ ಲಕ್ಷಾಂತರ ಕಂಪ್ಯೂಟರ್ಗಳಲ್ಲಿ ಪ್ರಸ್ತುತ ‘ಬರಹ’ ಬಳಕೆಯಾಗುತ್ತಿದೆ. ಸಾವಿರಾರು ಮಂದಿ ತಮ್ಮ ಭಾವನೆಗಳನ್ನು ಅಕ್ಷರ ರೂಪದಲ್ಲಿ ವ್ಯಕ್ತಪಡಿಸಲು ‘ಬರಹ’ದ ಮೊರೆ ಹೊಕ್ಕಿದ್ದಾರೆ. ಅಂತರ್ಜಾಲದ ಹತ್ತಾರು ವೆಬ್‌ಸೈಟ್‌ಗಳು ‘ಬರಹ’ ಲಿಪಿಯನ್ನೇ ಬಳಸುತ್ತಿವೆ. ತಂತ್ರಾಂಶವೊಂದರ ಜನಪ್ರಿಯತೆಗೆ- ಸಾರ್ಥಕತೆಗೆ ಇನ್ನೇನು ಬೇಕು?

‘ಬರಹ’ ಕನ್ನಡಕ್ಕಷ್ಟೇ ಮೀಸಲಾದ ತಂತ್ರಾಂಶವಲ್ಲ. ಇತರ ಭಾರತೀಯ ಭಾಷೆಗಳಿಗೂ ವಾಸು ‘ಬರಹ’ದ ವ್ಯಾಪ್ತಿಯನ್ನು ವಿಸ್ತರಿಸಿದ್ದಾರೆ. ಹೀಗಾಗಿ ಲಕ್ಷಾಂತರ ಭಾರತೀಯರು ತಂತಮ್ಮ ಭಾಷೆಗಳಲ್ಲಿಯೇ ಅಂತರ್ಜಾಲದ ಮೂಲಕ ಸಂವಹನ ನಡೆಸುವುದು ಸಾಧ್ಯವಾಗಿದೆ. ವಿದೇಶಗಳಲ್ಲಿನ ಭಾರತೀಯರ ಸಂಘಟನೆಗಳು ದೇಸೀ ಭಾಷೆಯಲ್ಲಿಯೇ ತಂತಮ್ಮ ವಾರ್ತಾಪತ್ರಿಕೆಗಳನ್ನು ಮುದ್ರಿಸುತ್ತಿವೆ. ‘ಬರಹ’ ತಂತ್ರಾಂಶಕ್ಕೆ ಯೂನಿಕೋಡ್ ಸ್ಪರ್ಶ ನೀಡುವ ಮೂಲಕ ವಾಸು ತಂತ್ರಾಂಶದ ಸಾಧ್ಯತೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

ಬೆರೆಳ್ಗಣ್ಣರಿಗಾಗಿ ವಾಸು ‘ಬರಹ-ಬ್ರೈಲ್’ ತಂತ್ರಾಂಶವನ್ನೂ ರೂಪಿಸಿದ್ದಾರೆ. ಎಂದಿನಂತೆ ಇದು ಕೂಡ ಉಚಿತ. ಬರಹ ಹೊರತುಪಡಿಸಿದರೆ ಬ್ರೈಲ್‌ಗೆ ಸಂಬಂಧಸಿದ ಇತರ ತಂತ್ರಾಂಶಗಳಿಗೆ ದುಡ್ಡು ತೆರಬೇಕು.

ವಾಸು ಸಾಹಿತ್ಯ ಪ್ರೇಮಿಯೂ ಹೌದು. ಓದುವ ಸಂಸ್ಕೃತಿ ಪಸರಿಸಲಿಕ್ಕೆ ಕಾರಣರಾದ ಅ.ನ.ಕೃಷ್ಣರಾಯರು ಅವರ ಇಷ್ಟದ ಸಾಹಿತಿ. ಈ ಇಷ್ಟದಿಂದಲೇ ‘ಬರಹ’ ತಂತ್ರಾಂಶವನ್ನು ಕೃಷ್ಣರಾಯರಿಗೆ ಅರ್ಪಿಸಿದ್ದಾರೆ. ಈಚಿನ ದಿನಗಳಲ್ಲಿ ಇತರ ಕನ್ನಡ ವೆಬ್‌ಸೈಟ್ಗಳ ಕುತೂಹಲಕರ ಕೊಂಡಿಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ ವಾಸು ತಮ್ಮ ಜಾಲತಾಣವನ್ನು (baraha.com) ಕನ್ನಡಿಗರ ಸಂವಹನ ಕೇಂದ್ರವನ್ನಾಗಿಯೂ ರೂಪಿಸುತ್ತಿದ್ದಾರೆ.
*****