ವಿದ್ಯಾರ್ಥಿಗಳ ಸಮಸ್ಯಾತ್ಮಕ ನಡವಳಿಕೆಗಳು

ವಿದ್ಯಾರ್ಥಿಗಳ ಸಮಸ್ಯಾತ್ಮಕ ನಡವಳಿಕೆಗಳು

ಅಧ್ಯಾಯ -೮

ಕರ್ನಾಟಕದಲ್ಲಿ ಪ್ರತಿವರ್ಷ ೮ ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೂ, ಆರು ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಗೂ ಕೂರುತ್ತಾರೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ. ೩೦ ಮಂದಿ, ಪಿಯುಸಿಯಲ್ಲಿ ಶೇ. ೫೦ ಮಂದಿ ಫೇಲಾಗುತ್ತಾರೆ. ಕಾಲೇಜಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ವರ್ಷ ವರ್ಷ ಏರುತ್ತಿದೆ. ವೃತ್ತಿಪರ ಕೋರ್ಸ್‌ಗಳಿಗೆ ಸೀಟ್ ಪಡೆಯಲು ವಿಪರೀತ ಸ್ಪರ್ಧೆ ಏರ್ಪಡುತ್ತಿದೆ. ಮೆರಿಟ್ ಕೋಟಾದಲ್ಲಿ ಸೀಟ್ ಪಡೆಯುವುದು ಬಹುತೇಕ ವಿದ್ಯಾರ್ಥಿಗಳ ಗುರಿ. ಈ ಸ್ಪರ್ಧೆಗೆ ಸಜ್ಜಾಗಲು ಪ್ರಯತ್ನಿಸುವಾಗ, ಈ ಕೆಳಕಾಣುವ “ಸಮಸ್ಯಾತ್ಮಕ ನಡವಳಿಕೆಗಳನ್ನು ಪ್ರಕಟಿಸುತ್ತಾರೆ. ಅವುಗಳಿಗೆ ಪರಿಹಾರ ಕಾಣದೆ ತಂದೆತಾಯಿಗಳು ಒದ್ದಾಡುತ್ತಾರೆ.

೧. ಶ್ರದ್ಧೆ ಶ್ರಮ ಆಸಕ್ತಿ ಇಲ್ಲ: ಕಲಿಯಲು ಶ್ರದ್ಧೆ ಇರಬೇಕು. ಆಸಕ್ತಿ ಇರಬೇಕು. ಹಾಗೆಯೇ ಶ್ರಮಪಟ್ಟು ಕಲಿಯುವ ಮನೋಭಾವವೂ ಬೇಕು. ಆದರೆ ಅನೇಕ ವಿದ್ಯಾರ್ಥಿಗಳಿಗೆ ‘ಡಿಗ್ರಿ ಮಾಡಲು’ ‘ವೃತ್ತಿಪರ ಕೋರ್ಸ್‌ಗಳಿಗೆ ಸೇರಲು ಆಸೆ, ಆತುರವಿರುತ್ತದೆ. ಡಿಗ್ರಿ ಪಡೆದರೆ, ವೃತ್ತಿಪರ ಕೋರ್ಸ್‌ಗಳನ್ನು ಮಾಡಿಕೊಂಡರೆ ಒಳ್ಳೆಯ ಉದ್ಯೋಗ, ಸ್ಥಾನಮಾನ ಸಿಗುತ್ತದೆ ಎಂಬ ಅರಿವಿರುತ್ತದೆ. ಆದರೆ ಅನೇಕ ವಿದ್ಯಾರ್ಥಿಗಳಿಗೆ ಕಲಿಯುವಿಕೆಯಲ್ಲಿ ಶ್ರದ್ಧೆ, ಆಸಕ್ತಿ ಇರುವುದಿಲ್ಲ. ಕಷ್ಟಪಡಲು ತಯಾರಿರುವುದಿಲ್ಲ. ಅವರಿಗೆ ಸುಲಭವಾಗಿ ಹೆಚ್ಚು ಕಷ್ಟ ಪಡದೇ ಪಾಸ್ ಮಾಡಲು ಹೆಚ್ಚಿನ ಮಾರ್ಕ್ಸ್‌ಗಳಿಸಲು ಒಳಮಾರ್ಗ. ಅಡ್ಡಮಾರ್ಗಗಳು ಬೇಕು! ಅವರ ಆಸಕ್ತಿ, ಶಕ್ತಿಯನ್ನು ಸಂಪನ್ಮೂಲವನ್ನು ಮನರಂಜನಾ ಚಟುವಟಿಕೆಗಳಿಗೆ ವಿನಿಯೋಗಿಸುತ್ತಾರೆ. ಯಾವಾಗ ಶ್ರದ್ಧೆ, ಶ್ರಮ, ಆಸಕ್ತಿ ಕಡಿಮೆಯೋ ಆಗ ಅವರು ಕ್ರಮವಾಗಿ ಕಾಲೇಜು ತರಗತಿಗಳಿಗೆ ಬರುವುದಿಲ್ಲ. ತರಗತಿಗಳಲ್ಲಿ ಕುಳಿತು ಗಮನವಿಟ್ಟು ಪಾಠ ಕೇಳುವುದಿಲ್ಲ. ಕ್ರಮಬದ್ಧವಾಗಿ ಅಧ್ಯಯನ ಮಾಡುವುದಿಲ್ಲ.

೨. ಶಾಲೆ, ಕಾಲೇಜಿಗೆ ಕ್ರಮವಾಗಿ ಬರುವುದಿಲ್ಲ: ತರಗತಿಯಲ್ಲಿ ಕೂರುವುದಿಲ್ಲ. ಪಾಠ ಕೇಳುವುದಿಲ್ಲ, ಚಕ್ಕರ್ ಹಾಕುತ್ತಾರೆ. ಶಿಕ್ಷಕರಿಗೆ, ಸಹಪಾಠಿಗಳಿಗೆ ಕಿರಿಕಿರಿ ಮಾಡುತ್ತಾರೆ. ಗಲಾಟೆ ಮಾಡುತ್ತಾರೆ. ಬಹುತೇಕ ಕಾಲೇಜುಗಳಲ್ಲಿ ‘ಹಾಜರಿ’ ಕಡ್ಡಾಯ. ಪರೀಕ್ಷೆಗೆ ಕೂಡಲು ಶೇ. ೭೫ ರಷ್ಟು ಅಟೆನ್‌ಡೆನ್ಸ್ ಇರಲೇಬೇಕು. ಇಲ್ಲದಿದ್ದರೆ, ಪರೀಕ್ಷೆಗೆ ಕಟ್ಟುವಂತಿಲ್ಲ. ಆದರೆ ಅನೇಕ ವಿದ್ಯಾರ್ಥಿಗಳು ತರಗತಿಗಳಿಗೆ ಲೇಟಾಗಿ ಬರುವುದು ಅಥವಾ ಚಕ್ಕರ್ ಹಾಕುವುದು ಮಾಡುತ್ತಾರೆ. ಪರೀಕ್ಷೆ ಸಮೀಪಿಸುತ್ತಿದ್ದಂತೆ ಅಟೆನ್ಡೆನ್ಸ್ ಶಾರ್ಟೇಜ್ ಇದ್ದರೆ ಟೀಚರ್ ಹೆಡ್‌ಮಾಸ್ಟರ್ ಅಥವಾ ಪ್ರಿನ್ಸಿಪಾಲರ ಮೇಲೆ ಒತ್ತಡ ಹೇರುತ್ತಾರೆ. ಶೇ. ೭೫ ರಷ್ಟು ಅಟೆಂಡೆನ್ಸ್ ಇದೆ. ಪರೀಕ್ಷೆಗೆ ಅನುಮತಿ ಕೊಡಿ ಎಂದು ದುಂಬಾಲು ಬೀಳುತ್ತಾರೆ. ಅಟೆನ್‌ಡನ್ಸ್ ಸರ್ಟಿಫಿಕೇಟ್ ಸಿಕ್ಕ ಮೇಲೆ ಕ್ಲಾಸಿಗೆ ಇರುವುದೇ ಇಲ್ಲ. ಕೆಲವು ವಿದ್ಯಾರ್ಥಿಗಳು ಕೇವಲ ಅಟೆನ್‌ಡೆನ್ಸ್‍ಗಾಗಿ ತರಗತಿಯಲ್ಲಿ ಕುಳಿತುಕೊಳ್ಳುತ್ತಾರೆ. ಆಸಕ್ತಿ ಇರಿಸಿ, ಗಮನವಿಟ್ಟು ಪಾಠ ಕೇಳುವುದಿಲ್ಲ. ಗಲಾಟೆ ಮಾಡುತ್ತಾ ಸಹಪಾಠಿಗಳಿಗೆ ಟೀಚರ್‌ಗಳಿಗೆ ತೊಂದರೆ ಕೊಡುತ್ತಾ ಕಾಲ ಕಳೆಯುತ್ತಾರೆ. ಮೊಬೈಲ್‌ನಲ್ಲಿ ಎಸ್.ಎಂ.ಎಸ್. ಕಳುಹಿಸುತ್ತಾ ಸ್ವೀಕರಿಸುತ್ತಾ, ಬಿಜಿಯಾಗಿರುತ್ತಾರೆ. ಕಥೆ, ಕಾದಂಬರಿ ಪತ್ರಿಕೆಗಳನ್ನು ಓದುತ್ತಾರೆ. ಚುಕ್ಕಿ ಆಟವಾಡುತ್ತಾರೆ!

೩. ಅವಿಧೇಯತನ, ತಿರಸ್ಕಾರ, ನೀತಿ ನಿಯಮಗಳನ್ನು ಭಂಗ ಮಾಡುವುದು, ಅಶಿಸ್ತಿನಿಂದ ವರ್ತಿಸುವುದು: ಶಿಕ್ಷಕರು, ಮುಖ್ಯೋಪಾಧ್ಯಾಯರು, ಪ್ರಿನ್ಸಿಪಾಲರು, ಆಡಳಿತ ಮಂಡಲಿಯ ಸದಸ್ಯರ ಮಾತುಗಳನ್ನು ನಿರೂಪಗಳನ್ನು ಸೂಚನೆಗಳನ್ನು ಪಾಲಿಸುವುದಿಲ್ಲ; ತಿರಸ್ಕರಿಸುತ್ತಾರೆ. ಶಿಕ್ಷಕವೃಂದದ ಬಗ್ಗೆ ಗೌರವ ತೋರಿಸುವುದಿಲ್ಲ. ಅವರ ಮಾತುಗಳನ್ನು, ಬುದ್ಧಿವಾದವನ್ನು ಪರಿಹಾಸ್ಯ ಮಾಡುತ್ತಾರೆ. ಅಶಿಸ್ತಿನ ಹಾಗು ಇತರರಿಗೆ ತೊಂದರೆಯನ್ನುಂಟು ಮಾಡುವ ರೀತಿಯಲ್ಲಿ ವರ್ತಿಸುತ್ತಾರೆ. ಶಾಲೆಯ ಅಥವಾ ಕಾಲೇಜಿನ ಅಧಿಕೃತ ಮತ್ತು ಸಂಪ್ರದಾಯಿಕ ನೀತಿನಿಯಮಗಳನ್ನು ಉಲ್ಲಂಘಿಸುತ್ತಾರೆ. ಉಲ್ಲಂಘನೆ ಮಾಡಿ ಖುಷಿಪಡುತ್ತಾರೆ! ಪಶ್ಚಾತ್ತಾಪದ ಧೋರಣೆಯಾಗಲೀ ತಾವು ತಪ್ಪು ಮಾಡುತ್ತಿದ್ದೇವೆಂಬ ಅರಿವಾಗಲೀ ಇರುವುದಿಲ್ಲ. ತಮ್ಮಿಷ್ಟ ಬಂದಂತೆ ಸ್ವಚ್ಛಂದತೆಯಿಂದ ವರ್ತಿಸುತ್ತಾರೆ. ಕಿರಿಯ ವಿದ್ಯಾರ್ಥಿಗಳಿಗೆ ದುರ್ಬಲ, ಮುಗ್ಧ ವಿದ್ಯಾರ್ಥಿಗಳಿಗೆ ಕೀಟಲೆ ಮಾಡಿ, ರ್‍ಯಾಗಿಂಗ್ ಮಾಡಿ ಗೋಳು ಹೊಯ್ದುಕೊಳ್ಳುತ್ತಾರೆ. ಅಧ್ಯಾಪಕರು, ಆಡಳಿತ ಮಾಡುವವರನ್ನು ಲಘುವಾಗಿ ಕಾಣುತ್ತಾರೆ. ಉಪೇಕ್ಷೆ ಮಾಡುತ್ತಾರೆ.

೪. ಕೆಟ್ಟ ಹವ್ಯಾಸ – ಚಟುವಟಿಕೆಗಳು, ಅನಾರೋಗ್ಯಕರ ಚಟ – ಅಭ್ಯಾಸಗಳು : ಧೂಮಪಾನ, ಮದ್ಯಪಾನ, ಮಾದಕ ವಸ್ತುಗಳ ಸೇವನೆ, ಜೂಜಾಟ, ಬೆಟ್ಸ್ ಕಟ್ಟುವುದು, ಇತರರನ್ನು ಟೀಕಿಸಿ, ರೇಗಿಸಿ, ಕೀಟಳೆಮಾಡಿ ನೋಯಿಸಿ, ಸಂತೋಷಪಡುವುದು, ಅಪಾಯಕಾರಿ ಚಟುವಟಿಕೆಗಳಾದ ವೇಗದಲ್ಲಿ ವಾಹನ ಚಲಿಸುವುದು, ಲೈಂಗಿಕ ಸ್ವೇಚ್ಛಾಚಾರದಲ್ಲಿ ತೊಡಗುತ್ತಾರೆ.

೫. ಗುಣ-ದೋಷ ಮತ್ತು ಸಮಾಜ ವಿರೋಧಿ ಚಟುವಟಿಕೆಗಳು : ದುರುದ್ದೇಶ ಸ್ವಾರ್ಥ ಮತ್ತು ಪರಪೀಡನೆಯ ಉದ್ದೇಶದಿಂದ ಸುಳ್ಳು ಹೇಳುವುದು, ಕಳ್ಳತನ ಮಾಡುವುದು, ಸಮುದಾಯ ಹಿತಾಸಕ್ತಿಯ ಚಟುವಟಿಕೆ ಕಾರ್ಯಕ್ರಮಗಳಿಗೆ ಅಡ್ಡಿಯನ್ನುಂಟು ಮಾಡುವುದು, ಅಸಹಕಾರವನ್ನು ತೋರುವುದು, ನಂಬಿಸಿ ಮೋಸ ಮಾಡುವುದು, ವಸ್ತು-ಆಸ್ತಿಪಾಸ್ತಿ ಹಾನಿಯನ್ನುಂಟು ಮಾಡುವುದು, ತಾವು ನಿಯಮಭಂಗ ಮಾಡಿ ಪರರಿಗೂ ನಿಯಮ ಭಂಗಮಾಡಲು ಪ್ರೇರೇಪಿಸುವುದು, ಪರೀಕ್ಷೆಯಲ್ಲಿ ಕಾಪಿ ಮಾಡುವುದು, ಪರೀಕ್ಷಕರಿಗೆ ಉಸ್ತುವಾರಿ ಸಿಬ್ಬಂದಿಗೆ ಬೆದರಿಕೆ ಹಾಕುವುದು, ಹಿಂಸಾಚಾರದಲ್ಲಿ ತೊಡಗುವುದು, ಗ್ಯಾಂಗ್ ಕಟ್ಟಿಕೊಂಡು ಬಡಿದಾಡುವುದು, ಇತರರನ್ನು ಬ್ಲಾಕ್‌ಮೇಲ್ ಮಾಡುವುದು, ವಿವಿಧ ರೀತಿಯ ಅಪರಾಧಗಳನ್ನು ಮಾಡುವುದು, ದ್ವೇಷ ಸಾಧಿಸುವುದು ಇತ್ಯಾದಿ.

೬. ಕಾಲೇಜು-ಕೋರ್ಸ್ ಬಿಡುವುದು, ಮತ್ತೆ ಮತ್ತೆ ಬದಲಿಸುವುದು : ಕೆಲವು ವಿದ್ಯಾರ್ಥಿಗಳು ತಾವು ಸೇರಿದ ಕಾಲೇಜುಕೋರ್ಸನ್ನು ಮತ್ತೆ ಮತ್ತೆ ಬದಲಿಸುತ್ತಾರೆ. ಕಾಲೇಜು ಬಿಟ್ಟು, ವಿದ್ಯಾಭ್ಯಾಸವನ್ನು ನಿಲ್ಲಿಸುತ್ತಾರೆ. ಕಾಲೇಜು ಬಿಟ್ಟ ಮೇಲೆ ಏನೂ ಮಾಡದೇ ಸುಮ್ಮನ ಕಾಲಹರಣ ಮಾಡುತ್ತಾರೆ. ಅಥವಾ ಮನೆಯೊಳಗೆ ಉಳಿಯಬಹುದು. ಮುಂದೇನು ಎಂದರೆ ಕಾಲ್ಪನಿಕ ಅವಾಸ್ತವಿಕ ಉಡಾಫೆಯ ಉತ್ತರಗಳನ್ನು ಕೊಡುತ್ತಾರೆ.

ಕಾರಣಗಳು: ವಿದ್ಯಾರ್ಥಿಗಳಲ್ಲಿ ಈ ನಡವಳಿಕ ಸಮಸ್ಯೆಗಳು ಕಾಣಿಸಿಕೊಳ್ಳಲು ಅನೇಕ ಕಾರಣಗಳಿವೆ. ಕೆಲವು ವಿದ್ಯಾರ್ಥಿಗಳಲ್ಲಿದ್ದರೆ, ಕೆಲವು ಪಾಲಕ ಪೋಷಕರಲ್ಲಿ, ಕಾಲೇಜು ಶಿಕ್ಷಕರಲ್ಲಿ ಅಥವಾ ಕಾಲೇಜಿನ ಪರಿಸರದಲ್ಲಿ ಅಥವಾ ಸಮಾಜದಲ್ಲಿರುತ್ತದೆ ಎಂಬುದು ಗಮನಾರ್ಹ.

* ವಿದ್ಯಾರ್ಥಿಗಳಲ್ಲಿ

೧. ಬುದ್ಧಿಶಕ್ತಿ ಕಡಿಮೆ ಇರುವುದು, ನಿರ್ದಿಷ್ಟ ಕಲಿಕಾನ್ಯೂನತೆಗಳಿರುವುದು (ಉದಾ: ಗಣಿತ / ವಿಜ್ಞಾನ ಬರವಣಿಗೆಗೆ ಸಂಬಂಧಿಸಿದಂತೆ)
೨. ಆತ್ಮವಿಶ್ವಾಸದ ಕೊರತೆ ಕೀಳರಿಮೆ, ಪ್ರೇರಣೆ – ಕೊರತೆ
೩. ಮಾನಸಿಕ ತಳಮಳ – ಅಸ್ವಸ್ಥತೆ – ಭಾವೋದ್ವೇಗ
೪. ವ್ಯಕ್ತಿತ್ವದ ದೋಷ / ಕೊರತೆಗಳು
೫. ದೈಹಿಕ ಅನಾರೋಗ್ಯ ಅಥವಾ ಅಂಗವಿಕಲತೆ

* ಪಾಲಕ, ಪೋಷಕರಲ್ಲಿ

೧. ದಾಂಪತ್ಯ ವಿರಸ.
೨. ಮಗ – ಮಗಳ ಬಗ್ಗೆ ಅಸಡ್ಡೆ, ಪ್ರೀತಿಯ ಕೊರತೆ.
೩. ವ್ಯಕ್ತಿತ್ವ ದೋಷ / ಕೊರತೆ
೪. ಮದ್ಯ, ಮಾದಕ ವಸ್ತುಗಳ ವ್ಯಸನ
೫. ಮಾನಸಿಕ ಕಾಯಿಲೆಗಳು
೬. ದೈಹಿಕವಾದ ಕಾಯಿಲೆಗಳು
೭. ಸಂಪನ್ಮೂಲಗಳ ಕೊರತೆ
೮. ಮಾನಸಿಕ ಒತ್ತಡ / ಭಾವೋದ್ವೇಗಗಳು

* ಶಿಕ್ಷಕ – ಕಾಲೇಜು ಪರಿಸರದಲ್ಲಿ

೧. ತರಬೇತಿ ಇಲ್ಲದ, ಅನುಭವದ ಕೊರತೆ – ಅತೃಪ್ತಿಯ ಜೀವನ.
೨. ವಾಣಿಜ್ಯೀಕರಣಗೊಂಡ ಕಾಲೇಜು ಆಡಳಿತ, ಅರಾಜಕತೆ.
೩. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಸುಮಧುರ ಸಂಬಂಧ ಇಲ್ಲದಿರುವುದು.
೪. ಅಕಾಡೆಮಿಕ್ ವಾತಾವರಣವಿಲ್ಲದಿರುವುದು.
೫. ಬಹುಮಾನ – ಶಿಕ್ಷೆ ವಿಧಾನಗಳು ಅಸಮರ್ಪಕವಾಗಿರುವುದು.
೬. ವಿದ್ಯಾರ್ಥಿ ಸಮುದಾಯದಲ್ಲಿ ಅತೃಪ್ತಿ – ಅಸಮಾಧಾನಗಳಿರುವುದು.

* ಸಮಾಜದಲ್ಲಿ

೧. ಮೌಲ್ಯಗಳಿಲ್ಲ, ಹಣ ಅಧಿಕಾರಕ್ಕೆ ಹೆಚ್ಚು ಮಾನ್ಯತೆ.
೨. “ಮೆರಿಟ್” – ಪ್ರತಿಭೆಗೆ ಪ್ರೋತ್ಸಾಹವಿಲ್ಲ.
೩. ಕೆಟ್ಟ ಮಾದರಿಯಾಗುವ ಅಧಿಕೃತ / ಅನಧಿಕೃತ ನಾಯಕರು
೪. ಕೌತುಕತೆ / ಮನರಂಜನೆ / ಪ್ರಚೋದನೆಗಳಿಗೆ ಒತ್ತು ಕೊಡುವ ಸಾಮಾಜಿಕ ಬದ್ಧತೆ ಇಲ್ಲದ ‘ಮಾಧ್ಯಮ’ಗಳು.
೫. ಭ್ರಷ್ಟ ಹಾಗು ದುರ್ಬಲ ಸರ್ಕಾರ ಮತ್ತು ಆಡಳಿತ ಯಂತ್ರ.
೬. ಬಿಗಿ ಇಲ್ಲದ ಕಾನೂನು ಪಾಲನಾ ವ್ಯವಸ್ಥೆ.
೭. ಹಿಂಸೆ – ಆಕ್ರಮಣಶೀಲತೆಗೆ ಒತ್ತು. ಸಾತ್ವಿಕತೆ / ಪ್ರಾಮಾಣಿಕತೆಗೆ ಬೆಲೆ ಇಲ್ಲದಿರುವುದು.

ಪರಿಹಾರ: ಆಪ್ತಸಲಹೆ ಮತ್ತು ಮಾರ್ಗದರ್ಶನ

ತಂದೆ-ತಾಯಿ, ಶಿಕ್ಷಕರು, ವಿದ್ಯಾರ್ಥಿಯ ಆತ್ಮೀಯರು, ವಿದ್ಯಾರ್ಥಿಯ ನಡೆವಳಿಕೆ ಸಮಸ್ಯೆಯಿಂದ ನಿರಾಶರಾಗಬಾರದು, ಕೋಪಿಸಿಕೊಳ್ಳಬಾರದು. ವಿದ್ಯಾರ್ಥಿಗೆ ಶಿಕ್ಷೆ ನೀಡಲು ಮುಂದಾಗಬಾರದು. ನಡವಳಿಕೆ ಸಮಸ್ಯೆಯನ್ನು ಗಮನಿಸಿ, ವಿದ್ಯಾರ್ಥಿಯೊಂದಿಗೆ ಆತ್ಮೀಯವಾಗಿ, ಸ್ನೇಹಪೂರ್ಣವಾಗಿ ಮಾಡನಾಡಬೇಕು, ನಡವಳಿಕೆಯನ್ನು ಸುಧಾರಿಸಲು ಕ್ರಮಕೈಗೊಳ್ಳಬೇಕು.

ಏಕಾಗ್ರತೆ – ಕಲಿಕೆ, ನೆನಪು ಉತ್ತಮಗೊಳ್ಳಲು ನೆರವಾಗಿ.

* ವಿದ್ಯೆಯ ಮಹತ್ವವನ್ನು ವಿವರಿಸಿ, ಓದುವ ವಯಸ್ಸಿನಲ್ಲಿ ಗರಿಷ್ಠಮಟ್ಟದ ಅಧ್ಯಯನ ‘ಯಶಸ್ವಿ ಬದುಕಿನ ಅಡಿಪಾಯ’ ಎಂಬುದನ್ನು ಮನದಟ್ಟು ಮಾಡುವುದು.

* ಅಧ್ಯಯನ ಮಾಡಲು ನಿರ್ದಿಷ್ಟ ಸಮಯ, ಸ್ಥಳವನ್ನು ಆಯ್ಕೆ ಮಾಡಲಿ.

* ಅಧ್ಯಯನ ಶುರು ಮಾಡುವ ಮೊದಲು ಧ್ಯಾನ, ಪ್ರಾಣಾಯಾಮವನ್ನು ಮಾಡಲಿ, ಆರಾಮವಾಗಿ ಕುಳಿತುಕೊಳ್ಳಲಿ, ಕಣ್ಣುಮುಚ್ಚಿ ಆಳವಾಗಿ ಉಸಿರನ್ನು ಒಳಗೆಳೆದುಕೊಳ್ಳಲಿ, ನಂತರ ನಿಧಾನವಾಗಿ ಉಸಿರನ್ನು ಹೊರಬಿಡುತ್ತಾ ಓಂಕಾರ ಹೇಳಲಿ. ಈ ರೀತಿ ೫ ರಿಂದ ೧೦ ನಿಮಿಷ ಪ್ರಾಣಾಯಾಮ ಮಾಡಲಿ.

* ಅಧ್ಯಯನ ಸಮಯದಲ್ಲಿ ಏಕಾಗ್ರತೆಗೆ ಭಂಗ ಬರುವಂತಹ ಆಕರ್ಷಣೆ, ವಿಕರ್ಷಣೆಗಳನ್ನು ದೂರ ಮಾಡಲಿ.

* ಗಟ್ಟಿಯಾಗಿ ಓದಲಿ. ಕಣ್ಣು-ಕಿವಿ ಎರಡು ಪಂಚೇಂದ್ರಿಯಗಳ ಮೂಲಕ ಮಾಹಿತಿ ಮಿದುಳಿಗೆ ಸೇರಲಿ.

* ಓದುವಾಗ ಚಿಕ್ಕ ಟಿಪ್ಪಣಿ ಮಾಡಿ ಬರೆಯಲಿ.

* ೩೦ ನಿಮಿಷಗಳ ಓದಿನ ನಂತರ, ಪುಸ್ತಕವನ್ನು ಮುಚ್ಚಿಟ್ಟು ಓದಿದ್ದೇನೆಂದು ನೆನಪಿಸಿಕೊಳ್ಳಲು ಮಾಹಿತಿಯನ್ನು ಮೆಲಕು ಹಾಕಿರಿ.

* ಓದಿದ ಅಧ್ಯಾಯದ ವಿಷಯದ ಬಗ್ಗೆ ಪ್ರಶ್ನೆಗಳಿಗೆ ಕಾಲಮಿತಿಯಲ್ಲಿ ಉತ್ತರ ಬರೆಯಲಿ.

* ಸಹಪಾಠಿಗಳೊಂದಿಗೆ ಚರ್ಚಿಸಲಿ.

* ಕಷ್ಟಕರವಾದ, ಅರ್ಥವಾಗದ ವಿಷಯಗಳನ್ನು ಶಿಕ್ಷಕರೊಂದಿಗೆ ಚರ್ಚಿಸಿ ಅರಿಯಲಿ.

* ಒಂದೇ ಸಮ, ವಿರಾಮ ಪಡೆಯದೇ ಅಧ್ಯಯನ ಬೇಡ. ಮಧ್ಯ ಮಧ್ಯೆ ಐದು ಹತ್ತು ನಿಮಿಷಗಳ ವಿರಾಮ ಪಡೆಯಲಿ. ಸಂಗೀತ ಶ್ರವಣ, ಕ್ರೀಡೆ, ಹವ್ಯಾಸಗಳಿಗೆ ದಿನದ ೩೦ ರಿಂದ ೬೦ ನಿಮಿಷಗಳನ್ನು ವಿನಿಯೋಗಿಸಲಿ.

* ವಿದ್ಯಾರ್ಥಿಯ ಶ್ರದ್ಧೆ ಮತ್ತು ಶ್ರಮವನ್ನು ಪೋಷಕರು, ಶಿಕ್ಷಕರು ಮೆಚ್ಚಿ ಶ್ಲಾಘಿಸಲಿ.

ಆಪ್ತಸಲಹೆ

ವಿದ್ಯಾರ್ಥಿಯ ಅನಿಸಿಕೆ, ಅಭಿಪ್ರಾಯ, ಬೇಕು ಬೇಡಗಳು, ತಂದೆ ತಾಯಿ, ಶಿಕ್ಷಕರು, ಕಾಲೇಜಿನ ಬಗ್ಗೆ ದೂರುಗಳು, ಅಸಮಾಧಾನಗಳು, ಧೋರಣೆಗಳನ್ನು ಕೇಳಿ ತಿಳಿದುಕೊಳ್ಳಬೇಕು. ಮುಕ್ತವಾಗಿ ಮಾತನಾಡಲು ಪ್ರೇರೇಪಿಸಬೇಕು. ಭಾವನೆಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸಬೇಕು.

ಆತನ ಸಮಸ್ಯೆಗಳ ಪಟ್ಟಿ ಮಾಡಿ, ಆ ಸಮಸ್ಯೆಗಳ ಪರಿಹಾರ ಹೇಗೆ ಎಂಬುದನ್ನು ಆತನೊಂದಿಗೆ / ಆಕೆಯೊಂದಿಗೆ ಮಾತನಾಡಬೇಕು. ಸಮಸ್ಯೆ ಪರಿಹಾರಕ್ಕಾಗಿ ಆತ/ಆಕೆ ಮಾಡಿದ ಪ್ರಯತ್ನಗಳು ಮತ್ತು ಫಲಿತಾಂಶ ಏನಾಯಿತೆಂದು ವಿವರಿಸಬೇಕು. ಹೊಸ ಪರಿಹಾರ ಮಾರ್ಗಗಳ ಬಗ್ಗೆ ಮಾರ್ಗದರ್ಶನ ಮಾಡಬೇಕು.

ತಪ್ಪು ಹವ್ಯಾಸಗಳು, ಅನಾರೋಗ್ಯಕಾರಿ, ಅಪಾಯಕಾರಿ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಬೇಕು. ಅವನ್ನು ಬಿಡಲು ಅಥವಾ ಅವುಗಳಿಂದ ದೂರವಿರಲು ಮಾರ್ಗೋಪಾಯಗಳನ್ನು ಸೂಚಿಸಬೇಕು. ಅಗತ್ಯವಿದ್ದರೆ ಮನಃಶಾಸ್ತ್ರಜ್ಞರ ಮನೋವೈದ್ಯರ ನೆರವನ್ನು ಪಡೆಯಬೇಕು.

ಸಮಾಜ ವಿರೋಧಿಯಾದ, ಅನೈತಿಕ, ನಿಯಮಬಾಹಿರ, ಇತರರಿಗೆ ನೋವು, ಸಂಕಟವನ್ನುಂಟು ಮಾಡುವ ಚಟುವಟಿಕೆ ಕಾರ್ಯಗಳನ್ನು ಮಾಡದಿರಲು ವಿದ್ಯಾರ್ಥಿಯ ಮನ ಒಲಿಸಬೇಕು. ಅದಕ್ಕಿರುವ ಸಾಮಾಜಿಕ ಮತ್ತು ಕಾನೂನಿನ ಶಿಕ್ಷೆಯ ಬಗ್ಗೆ ಅರಿವು ಮೂಡಿಸಬೇಕು.

ವೃತ್ತಿಪರ ಆಪ್ತಸಲಹಾ ಸಮಾಲೋಚಕರ ಬಳಿಗೆ, ವಿದ್ಯಾರ್ಥಿಯನ್ನು ಕಳುಹಿಸುವ ಏರ್ಪಾಟು ಮಾಡಬೇಕು. ಮಾನಸಿಕ ಅಸ್ವಸ್ಥತೆಯ ಲಕ್ಷಣಗಳಿದ್ದರೆ, ಮನೋವೈದ್ಯರ ನೆರವನ್ನು ತಡೆಯಲು ಹಿಂಜರಿಯಬಾರದು.

ವಿದ್ಯಾರ್ಥಿಯ ಆತ್ಮವಿಶ್ವಾಸವನ್ನು ಹೆಚ್ಚಿಸಲು, ಆತನ/ಆಕೆಯ ಒಳ್ಳೆಯ ಮಾತು/ವರ್ತನೆ / ಜಾಣ್ಮೆ / ಪ್ರತಿಭೆಗಳನ್ನು ಇತರರ ಮುಂದೆ ಶ್ಲಾಘಿಸಬೇಕು. ಸಣ್ಣಪುಟ್ಟ ಜವಾಬ್ದಾರಿಗಳನ್ನು ನಿರ್ವಹಿಸಲು ಅವಕಾಶ ಮಾಡಿಕೊಟ್ಟು ಆತ / ಆಕೆ ಅದನ್ನು ಮಾಡಿದಾಗ ಭೇಷ್ ಎನ್ನಬೇಕು. ಮತ್ತಷ್ಟನ್ನು ಸಾಧಿಸಲು ಪ್ರೋತ್ಸಾಹಿಸಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸನ್ನೆ
Next post ಸೋನೆ

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…