ರಾವಣಾಂತರಂಗ – ೨೨

ರಾವಣಾಂತರಂಗ – ೨೨

ಮುಯ್ಯಿಗೆ ಮುಯ್ಯಿ

ಇಂದ್ರಜಿತುವು ಯಾಗವನ್ನು ಪೂರ್ಣಗೊಳಿಸಿ, ಅಮರತ್ವವನ್ನು ಪಡೆಯುತ್ತಾನೆಂದು ಕನಸು ಕಾಣತೊಡಗಿದೆ. ಎಡಗಣ್ಣು ಎಡಭುಜ ಹಾರತೊಡಗಿದವು. ಹಗಲಿನಲ್ಲಿ ಪ್ರಾಣಿಪಕ್ಷಿಗಳು ಬೇರಾಡ ತೊಡಗಿದವು. ಕಾಗೆಯೊಂದು ಹಾರಿಬಂದು ಮುಖಕ್ಕೆ ಹೊಡೆಯಿತು ಎಂದೂ ಇಲ್ಲದ ಭಯ! ಆತಂಕ! ಇಂದ್ರಜಿತು ಹೇಗಿರುವನೋ ಯಾಗ ಪೂರ್ತಿಯಾಯಿತೋ ಇಲ್ಲವೋ, ರಣರಂಗಕ್ಕೇನಾದರೂ ಹೋದನೆ ಇಲ್ಲ ಇಲ್ಲ. ನನಗೆ ಹೇಳದೆ ಹೋಗುವುದಿಲ್ಲ. ಆದರೂ ಶತ್ರುಗಳನ್ನು ನಂಬುವಂತಿಲ್ಲ. ಯಾವ ಕ್ಷಣದಲ್ಲಿ ಮೇಲೆ ಬೀಳುತ್ತಾರೋ ಸಂಜೆಯವರೆಗೆ ಶತಪಥ ತಿರುಗುವುದೇ ಆಯಿತು. ಊಟ, ನಿದ್ದೆ ಒಂದೂ ರುಚಿಸಲಿಲ್ಲ, ದಾಸಿಯರ ಸೇವೆಯೂ ಬೇಕೆನಿಸಲಿಲ್ಲ. ಎಷ್ಟು ಹೊತ್ತಿಗೆ ಇಂದ್ರಜಿತುವಿನ ಮುಖವನ್ನು ನೋಡುತ್ತೇನೆಯೋ ಬಾಚಿ ತಬ್ಬಿಕೊಳ್ಳುತ್ತೇನೆಯೇ ಎಂದು ಪರಿತಪಿಸತೊಡಗಿದೆನು. ಕ್ಷಣಗಳು ಯುಗಗಳಾದಾಗ ವಿಶೇಷ ಸುದ್ದಿಗಾರರು ಕಾಣಿಸಿಕೊಂಡರು ಅವರ ಮುಖ ಪೇಲವವಾಗಿತ್ತು. ಮಾತಾಡದೆ ಕಣ್ಣೀರು ಸುರಿಸುತ್ತಾ ನಿಂತಿದ್ದ ಅವರನ್ನು ಕಂಡು ದಿಗಿಲಾಯಿತು “ಹೇಳಿ ವಿಷಯವೇನು? ಯಾಕೆ ಕಲ್ಲಾಗಿ ನಿಂತಿರುವಿರಿ ಬೇಗ ತಿಳಿಸಿ” ಎಂದು ಗರ್ಜಿಸಲು ಅಳುಕುತ್ತಾ ಇಂದ್ರಜಿತುವಿನ ಮರಣವಾರ್ತೆಯನ್ನು ಕೇಳಿದಾಕ್ಷಣ ಸಿಡಿಲು ಬಡಿದ ವೃಕ್ಷದಂತೆ ತಟ್ಟನೆ ಧರೆಗುರುಳಿದೆನು. “ಆಯಿತು, ಇನ್ನಾಯಿತು ರಾವಣ ಸಾಮ್ರಾಜ್ಯದ ಸೂರ್ಯಾಸ್ತಮಾನ ಎಲ್ಲವೂ ಮುಗಿಯಿತು ಇನ್ನು ಉಳಿದಿರುವವನು ನಾನೊಬ್ಬನೇ “ಮಗು ಇಂದ್ರಜಿತು” ನೀನೇ ಹೋದ ಮೇಲೆ ಈ ರಾವಣನಿಗೆ ರಾಜ್ಯವೇಕೆ? ಕೋಶವೇಕೆ? ಧನಕನಕ ಸಂಪತ್ತುಗಳೇಕೆ? ಮಗನಾಗಿ ಹುಟ್ಟಿ ನಿನ್ನ ಕರ್ತವ್ಯವನ್ನು ಚೆನ್ನಾಗಿ ಮಾಡಿದೆ. ತಂದೆಯಾಗಿ ನಾನೇನು ಮಾಡಲಿಲ್ಲ. ತಮ್ಮ ಬಾಳಲ್ಲಿ ಸಂತೋಷ, ಆನಂದ ಸಿಗಲೆಂದು ಮಕ್ಕಳನ್ನು ಪಡೆಯುತ್ತಾರೆ. ಅವರ ಬಾಲಲೀಲೆಗಳಲ್ಲಿ ತಮ್ಮ ಕಷ್ಟವನ್ನು ಮರೆಯುತ್ತಾರೆ. ತಾವು ಮುಳ್ಳಲ್ಲಿ ಮಲಗಿ ಮಕ್ಕಳಿಗೆ ಹೂವಿನ ಹಾಸಿಗೆ ಹಾಸುತ್ತಾರೆ. ತಾವು ಗಂಜಿ ಕುಡಿದು ಮಕ್ಕಳಿಗೆ ಹಾಲು ಅನ್ನ ನೀಡುತ್ತಾರೆ. ತಮ್ಮ ಸರ್ವಸ್ವವನ್ನು ಧಾರೆಯೆರೆದು ಮಕ್ಕಳನ್ನು ಬೆಳೆಸುತ್ತಾರೆ. ಕೊನೆಗಾಲದಲ್ಲಿ ತಮ್ಮ ಮಕ್ಕಳು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಿ ಎಂಬ ಸ್ವಾರ್ಥದಿಂದಲ್ಲ, ಸಮಾಜದಲ್ಲಿ ಒಳ್ಳೆಯ ಪ್ರಜೆಯಾಗಲಿ ತಂದೆತಾಯಿಗಳಿಗೆ ಒಳ್ಳೆಯ ಹೆಸರನ್ನು ತರಲಿ ಎಂದು ಬಯಸುತ್ತಾರೆ. ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಏಳಿಗೆಗಾಗಿ ಅಹರ್ನಿಶಿ ಯೋಚಿಸುತ್ತಾರೆ. ತಮ್ಮ ವಂಶ ಬೆಳೆಯಬೇಕು, ಬೆಳಗಬೇಕು. ಮಕ್ಕಳು, ಮೊಮ್ಮಕ್ಕಳು ಕಣ್ಣೆದುರಿಗೆ ಸುಖ ಸಂತೋಷದಿಂದ ಬಾಳಬೇಕೆಂದು ಅನವರತ ಪ್ರಾರ್ಥಿಸುತ್ತಾರೆ. ಮಗನೇ ಇಂದ್ರಜಿತು ನಾನು ಬಯಸಿದ್ದು ಇದನ್ನೇ ನಿನ್ನ ಪ್ರಗತಿಯನ್ನು ಆದರೆ ಸಂದರ್ಭ ಸನ್ನಿವೇಶಗಳು ನನ್ನ ಕೈಕಟ್ಟಿ ಹಾಕಿದವು, ಪರಿಸ್ಥಿತಿಗನುಗುಣವಾಗಿ ನಡೆದುಕೊಂಡು ನಿಮ್ಮೆಲ್ಲರ ಬದುಕಿಗೆ ನಾನೇ ಮೃತ್ಯುವಾದೆ ನನ್ನನ್ನು ಯಾರೂ ಕ್ಷಮಿಸುವುದಿಲ್ಲ. ನಿನ್ನ ಹೆಂಡತಿ ಮಕ್ಕಳು ತಮ್ಮ ಸಾವಿನ ಅಂಚಿನವರೆಗೂ ನನ್ನನ್ನು ದ್ವೇಷಿಸುತ್ತಾರೆ. “ಕಂದಾ ಇಂದ್ರಜಿತು ಈ ಪಾಪಿ ತಂದೆಯನ್ನು ಕ್ಷಮಿಸಿಬಿಡು. ಇನ್ನು ಕೆಲವೇ ದಿನ ನಾನು ನಿನ್ನ ಹಾದಿಯನ್ನೇ ಹಿಡಿಯುತ್ತೇನೆ. ಈ ಅಪ್ಪನಿಗಾಗಿ ಕಾದಿರು ಮಗು, ಬಂದು ನಿನ್ನ ಸೇರಿಕೊಳ್ಳುತ್ತೇನೆ. ಮುಂದಿನ ಜನ್ಮವಿದ್ದರೆ ನಾನು ನಿನ್ನ ಮಗನಾಗಿ ಬಂದು ನಿನ್ನ ಋಣ ತೀರಿಸುತ್ತೇನೆ. ಅದಕ್ಕೆ ಮೊದಲು ನಿನ್ನ ಕೊಂದ ಆ ಸೌಮಿತ್ರಿಯ ಸೊಕ್ಕು ಮುರಿಯುತ್ತೇನೆ. ಅವನನ್ನು ಒಂದು ಕ್ಷಣವೂ ಭೂಮಿ ಮೇಲೆ ಇರಗೊಡುವುದಿಲ್ಲ ಎಂದು ಕೋಪ ದ್ವೇಷಗಳಿಂದ ಕೂಡಿದವನಾಗಿ ಸಕಲಶೂರ, ಸೇನಾ ಪರಿವಾರ ಸಮೇತವಾಗಿ ರಣರಂಗಕ್ಕೆ ಬಂದನು. ಆಂಜನೇಯ ಪ್ರಮುಖ ಕಪಿವೀರರೊಡನೆ ಲಕ್ಷ್ಮಣನು ಎದುರಾದನು. ಲಕ್ಷ್ಮಣನನ್ನು ಕಂಡೊಡನೆ ಹೊಟ್ಟೆಯೊಳಗಿನ ಬೆಂಕಿ ಜ್ವಾಲಾಮುಖಿಯಾಗಿ ಸಿಡಿಯಿತು. ಲಕ್ಷ್ಮಣ ಬಿಟ್ಟ ಬಾಣಗಳನ್ನು ತುಂಡರಿಸಿ, ಶಸ್ತ್ರಾಸ್ತ್ರವನ್ನು ಪ್ರಯೋಗಿಸಿದೆ. ಅದು ಲಕ್ಷ್ಮಣನ ಎದೆಯಲ್ಲಿ ಸೇರಿದಾಕ್ಷಣ ಕೆಳಗೆ ಬಿದ್ದನು. ಲಕ್ಷ್ಮಣ ಸತ್ತನೆಂದು ತಿಳಿದು ಆನಂದಾತಿರೇಖದಲ್ಲಿ ಉಬ್ಬಿಹೋಗಿ ಲಂಕೆಗೆ ಧಾವಿಸಿದೆನು. ಇನ್ನೊಂದು ಪ್ರಮುಖವಾದ ಕೆಲಸವಿತ್ತು. ನನ್ನ ಮಗನ ಸಾವಿಗೆ ಕಾರಣಕರ್ತೆ ಸೀತೆ. ಅವಳಿಂದಲೇ ಇಷ್ಟೆಲ್ಲಾ ಅನಾಹುತಗಳಾಗಿದ್ದು. ಅವಳಿಗಾಗಿ ತಾನೇ ರಾಮಲಕ್ಷ್ಮಣರು ಕೊಬ್ಬಿ ಮರೆಯುತ್ತಿರುವುದು. ಅವಳ ಬಿಡುಗಡೆಗಾಗಿ ತಾನೇ ರಕ್ಕಸ ಸೇನೆಯನ್ನು ಸದೆಬಡಿಯುತ್ತಿರುವುದು. ಅವಳನ್ನೇ ಇಲ್ಲವಾಗಿಸಿದರೆ ಏನು ಮಾಡುತ್ತಾರೆ. ಬಾಯಿ ಬಾಯಿ ಬಡಿದುಕೊಂಡು ಹಿಂದಿರುಗುತ್ತಾರೆ ಎಂದು ಅರಮನೆಗೆ ಹೋಗಿ ಚಂದ್ರಹಾಸವನ್ನು ಕೈಯಲ್ಲಿಡಿದು ಮರುಳನಂತೆ, ಆಶೋಕವನದತ್ತ ಧಾವಿಸಿದೆ. ಅವಸರವಸರವಾಗಿ ನಾನು ಬಂದುದನ್ನು ಕಂಡು ಕಾವಲಿನವರು ಹೆದರಿದರು. ತಲೆ ತಗ್ಗಿಸಿ ನಿಂತರು “ಎಲ್ಲಿ ಆ ಸೀತೆ ಎಲ್ಲಿ? ಏನು ಮಾಡುತ್ತಿರುವಳು?”

“ಪ್ರಭು ಆಕೆ ಎಲ್ಲರಂತಲ್ಲ. ಅಹರ್ನಿಶಿ ರಾಮಧ್ಯಾನದಲ್ಲೇ ಕಾಲ ಕಳೆಯುತ್ತಿದ್ದಾಳೆ. ನಾವೆಷ್ಟು ಮನಸ್ಸನ್ನು ಬದಲಾಯಿಸಲೆತ್ನಿಸಿದರೂ ಸಾಧ್ಯವಾಗುತ್ತಿಲ್ಲ. ತಮ್ಮ ಹೆಸರೆತ್ತಿದರೆ ಸಾಕು ಉರಿದು ಬೀಳುತ್ತಾಳೆ, ಕೆಂಡ ಕಾರುತ್ತಾಳೆ”

“ಮಹಾಪತಿವ್ರತೆ! ಆ ದಿನ ಏನು ಹೇಳಿದ್ದೆ ನನ್ನ ತಲೆಯನ್ನು ಕಡಿದು ತುಳಿದು ಆ ಮೇಲೆ ಮೈ ತೊಳೆಯುತ್ತೇನೆ. ಎಂದೆಯಲ್ಲ ನೋಡು ನಿನ್ನ ಪ್ರಾಣನಾಥನನ್ನು ನೋಡು ಮೈಧುನನನ್ನು ರಣರಂಗದಲ್ಲಿ ಕತ್ತರಿಸಿ ಬಂದಿದ್ದೇನೆ. ನೀನಾಗಿ ಒಪ್ಪಿ ಮದುವೆಯಾದರೆ ಕ್ಷೇಮ ಇಲ್ಲ ಈ ಖಡ್ಗಕ್ಕೆ ನಿನ್ನ ಬಲಿಯಾಗಿಸುತ್ತೇನೆ.” ಎಂದೆ ಒಂದೂ ಮಾತಾಡದೆ ತಲೆತಗ್ಗಿಸಿ ನಿಂತ ಅವಳನ್ನು ಕಂಡು ಪಿತ್ತ ಕೆರಳಿತು. ಇವಳು ಒಳ್ಳೆಯ ಮಾತಿಗೆ ಬಗ್ಗುವವಳಲ್ಲ. “ದಂಡು ದಶಗುಣಂ” ಎಂದವನೇ ಈ ಹೆಂಗಸನ್ನು ಕೊಂದು ಹಾಕಿದರೇನೆ ನನ್ನ ಮನಸ್ಸಿಗೆ ಶಾಂತಿ, ನೆಮ್ಮದಿ ಎಂದು ಖಡ್ಗವನ್ನೆತ್ತಿದೆನು. ಯಾವು ಮಾಯಾದಿಂದಲೋ ಅಲ್ಲಿಗೆ ಬಂದ ಮಂಡೋದರಿ “ಆಹಾಹಾ! ಮರುಳನಾದ ರಕ್ಕಸರಾಜ! ನಿನ್ನ ಶೌರ್ಯ ಪರಾಕ್ರಮಕ್ಕೆ ಸರಿಯಾದ ಕೆಲಸವನ್ನೇ ಮಾಡುತ್ತಿರುವೆ ಹೆಂಗಸನ್ನು ಕೊಲ್ಲುವ ನಿನ್ನ ಕಾರ್ಯ ಯೋಗ್ಯವಾದದ್ದು. ನಿನ್ನ ಹೆತ್ತ ಹೊಟ್ಟೆ ತಂಪಾಯಿತು. ನಿನ್ನ ಕಟ್ಟಿಕೊಂಡ ನನ್ನ ಜನ್ಮ ಧನ್ಯವಾಯಿತು. ನಿನ್ನ ಈ ಕೃತಿಯನ್ನು ನೋಡಿ ಜಯಲಕ್ಷ್ಮಿ ನಗೆ ಬಿಡುವಳೇ ನಿನ್ನ ಪೂರ್ವಿಕರು ತಲೆತಗ್ಗಿಸುವುದಿಲ್ಲವೇ ನಿನ್ನ ಕೀರ್ತಿಗೆ ನಿನ್ನ ಪೌರುಷಕ್ಕೆ ಭೂಷಣವಾದ ಕೆಲಸವೇ ಇದು, ಇಷ್ಟು ಕೀಳು ಮಟ್ಟಕ್ಕೆ ಇಳಿಯುವಿರೆಂದು ನಾನೆಣಿಸಿರಲಿಲ್ಲ ಧಿಕ್ಕಾರ ನಿಮ್ಮ ಶೌರ್ಯಕ್ಕೆ”

ನನ್ನನ್ನು ತಡೆಯಬೇಡ ಮಂಡೋದರಿ, ಲಂಕೆಯಲ್ಲಾದ ಅನರ್ಥಗಳಿಗೆ ಇವಳೇ ಕಾರಣ. ನನ್ನ ಮನಸ್ಸನ್ನು ಕೆಡಿಸಿದಳು. ನನ್ನ ವಿವೇಕವನ್ನು ಕೊಂದಳು. ನನ್ನ ವಿಚಾರಗಳನ್ನು ಆದರ್ಶವನ್ನು ಮಣ್ಣು ಪಾಲು ಮಾಡಿದಳು. ನನ್ನ ಇಂದಿನ ಸ್ಥಿತಿಗೆ ಇವಳೇ ಕಾರಣ. ಇವಳನ್ನು ಕೊಂದರೇನೇ ನನ್ನ ಮಗನ ಆತ್ಮಕ್ಕೆ ಶಾಂತಿ ನನ್ನ ಮನಸ್ಸಿಗೆ ನೆಮ್ಮದಿ” “ಸಾಕು ಮಾಡಿ ಪ್ರಲಾಪವನ್ನು ನಿಮ್ಮ ಬುದ್ಧಿಯನ್ನು ನಿಮ್ಮ ಅಧೀನದಲ್ಲಿಟ್ಟುಕೊಳ್ಳದೆ ಪರರನ್ನೇಕೆ ದೂಷಿಸುತ್ತೀರಿ? ಮನುಷ್ಯನಿಗೆ ಮೆದುಳನ್ನು, ಮನಸ್ಸನ್ನು ಕೊಟ್ಟಿರುವುದು ಒಳ್ಳೆಯ ವಿಚಾರ ಮಾಡುವುದಕ್ಕೆ. ಮಂಗನಿಗೆ ಮಾಣಿಕ್ಯವನ್ನು ಕೊಟ್ಟಂತೆ, ಹೃದಯ ಮನಸ್ಸುಗಳನ್ನು ಅಂಕೆಯಲ್ಲಿಟ್ಟುಕೊಳ್ಳದೆ ಪಂಚೇಂದ್ರಿಯಗಳಿಗೆ ದಾಸನಾಗಿ ಅರಿಷಡ್ವರ್ಗಗಳನ್ನು ಮೆಟ್ಟಿ ನಿಲ್ಲದೆ ನಿಮ್ಮ ಇಷ್ಟ ಬಂದಂತೆ ವರ್ತಿಸಿ ತಾವು ಹಾಳಾಗಿದ್ದಲ್ಲದೆ ನಿಮ್ಮನ್ನು ನಂಬಿದವರನ್ನು ಹಾಳು ಮಾಡಿದಿರಿ. ಈಗ ಹುಚ್ಚುಹುಚ್ಚಾಗಿ ಹೆಂಗಸನ್ನು ಕೊಲ್ಲಲು ಬಂದ ನಿಮ್ಮ ಅವಿವೇಕಕ್ಕೆ ಏನನ್ನಬೇಕು. ಇವಳು ಅಬಲೆ, ನಿಸ್ಸಹಾಯಕಳಾದರೂ ಪರಮ ಪುರುಷೋತ್ತಮನ ಪುಣ್ಯ ವಧು. ಇವಳನ್ನು ಕೊಂದು ಈ ಜನ್ಮದಲ್ಲಿ ಅನುಭವಿಸುವುದಲ್ಲದೆ ಏಳೇಳು ಜನ್ಮಕ್ಕಾಗುವಷ್ಟು ಪಾಪ ಕಟ್ಟಿಕೊಳ್ಳಬೇಡಿ, ಬುದ್ಧಿ ವಿಕಲ್ಪರಾಗಿ ನಾಚಿಕೆಗೇಡಿತನದ ಕೆಲಸಬಿಟ್ಟು ಅರಮನೆಯೊಳಗೆ ಹೋಗಿ ಮನಬಂದಂತೆ ಕುಡಿದು ತಿಂದು, ಸಂತೋಷದಿಂದ ಬಿದ್ದುಕೊಳ್ಳಿ. ನನ್ನ ಮಗನನ್ನು ಬಲಿಕೊಟ್ಟಿದ್ದಕ್ಕೆ ಹೊಟ್ಟೆ ತುಂಬಾ ಹಾಲು ಕುಡಿದು ನಿಮ್ಮ ಪ್ರತಿಷ್ಠೆ ಒಣಗೌರವವನ್ನು ಇನ್ನಷ್ಟು ಹೆಚ್ಚು ಮಾಡಿಕೊಳ್ಳಿ” ಎಂದವಳೇ ಚಂದ್ರಹಾಸವನ್ನು ಕಿತ್ತೆಸೆದು ಕ್ಷಣಮಾತ್ರವೂ ನಿಲ್ಲದೇ ಹೊರಟೇ ಹೋದಳು. ಮಗನ ಸಾವಿನಿಂದ ಕಂಗೆಟ್ಟು, ಮತಿಗೆಟ್ಟು ಹಾಸಿಗೆ ಹಿಡಿದಿರುತ್ತಾಳೆಂದುಕೊಂಡಿದ್ದೆ. ವೀರಾವೇಶದಿಂದ ಬಂದು ನಾ ಮಾಡುವ ಅಕೃತ್ಯ ಅನಾಚಾರವನ್ನು ತಡೆದಳಲ್ಲ. ಅಯ್ಯೋ ಎಂತಹ ಕೆಲಸ ಮಾಡುತ್ತಿದ್ದೆ. ಮಂಡೋದರಿ ಬಾರದಿರುತ್ತಿದ್ದರೆ ಸ್ತ್ರೀ ಹತ್ಯಾದೋಷವನ್ನು ಕಟ್ಟಿಕೊಂಡು ನರಕದಲ್ಲಿ ಬೀಳುತ್ತಿದ್ದೆ. ಪರಮೇಶ್ವರನ ಭಕ್ತನಾದ ನಾನು ಒಂದು ಅಬಲೆ, ಅಸಹಾಯ ಹೆಣ್ಣಿನ ಮೇಲೆ ಪರಾಕ್ರಮ ತೋರುವಷ್ಟು ಕೀಳುಮಟ್ಟಕ್ಕೆ ಇಳಿದೆನಲ್ಲಾ. ಏನಾಗಿದೆ ನನಗೆ ಎಲ್ಲವೂ ಅಯೋಮಯ! ನನ್ನ ಬುದ್ಧಿಯೇ ಸ್ಥಿಮಿತದಲ್ಲಿಲ್ಲ ಮಾಡಬಾರದ ಅನರ್ಥಗಳನ್ನು ಒಂದರ ಮೇಲೊಂದು ಮಾಡುತ್ತಿರುವೆ. ನನ್ನ ಅಟ್ಟಹಾಸ ಅನೀತಿಗೆ ಕೊನೆಯಿಲ್ಲವೆಂದೇ ಕಾಣುತ್ತದೆ. ಇಲ್ಲಿ ಕೊನೆಯಾಗುತ್ತದೆ. ನನ್ನ ಅವಸಾನದೊಂದಿಗೆ ಸಾಯುವ ಮನುಷ್ಯನಿಗೆ ಯಾವ ಔಷಧವೂ ರುಚಿಸುವುದಿಲ್ಲವಂತೆ. ವಿವೇಕಹೀನನಾದ ನನಗೆ ಯಾರ ಮಾತುಗಳು ರುಚಿಸುತ್ತಿಲ್ಲ. ಮನವರಿಕೆಯಾಗುತ್ತಿಲ್ಲ. ದೀಪ ಆರಿಹೋಗುವ ಮೊದಲು ಜೋರಾಗಿ ಉರಿಯುತ್ತದೆಯಂತೆ ಹಾಗೆ ನಾನು ಅಪರಿಮಿತ ಅಟ್ಟಹಾಸದಿಂದ, ಅಹಂಕಾರದಿಂದ ಮರೆಯುತ್ತಿರುವೆ. ನನ್ನ ಈ ರೋಗಕ್ಕೆ ರಾಮ ಬಾಣವೇ ದಿವ್ಯ ಔಷಧವೆಂದು ಕಾಣುತ್ತದೆ. ಹೀಗೆ ಮುಖಭಂಗಿತನಾಗಿ ಮುಖವೆತ್ತಿ ತಿರುಗಾಡುವುದಕ್ಕಿಂತ ಮರಣವೇ ಮೇಲಲ್ಲವೇ. ಮಂಡೋದರಿಯ ಅವಹೇಳನಕ್ಕೆ ಗುರಿಯಾಗಿ ರಾತ್ರಿಯೆಲ್ಲಾ ಜಾಗರಣೆ ಮಾಡಿದೆ. ಶತ್ರು ಪಾಳಯದಲ್ಲೇನಾಯಿತು? ಕೆಳಗೆ ಬಿದ್ದ ಲಕ್ಷ್ಮಣನು ಬದುಕಿದನೋ ಸತ್ತನೋ ಗೊತ್ತಾಗಲಿಲ್ಲ. ಲಕ್ಷ್ಮಣನು ಸಾಯುವುದಿಲ್ಲ. ಹಾಗೇನಾದರೆ, ಅಧರ್ಮಕ್ಕೆ ಜಯಸಿಕ್ಕಂತೆ. ಶ್ರೀರಾಮನು ತಮ್ಮನನ್ನು ಸಾಯಲು ಬಿಡುವುದಿಲ್ಲ. ಒಂದ ಪಕ್ಷ ಲಕ್ಷ್ಮಣನು ಮರಣಿಸಿದ್ದರೆ ತಮ್ಮನನ್ನು ಕಳೆದುಕೊಂಡ ರಾಮನು ಕಂಗಾಲಾಗಿ ಕಣ್ಣೀರಿಡುತ್ತಿರಬಹುದೇ. ಗೊತ್ತಾಗಲಿ, ಅನುಭವಿಸಲಿ ತನ್ನವರನ್ನು ಕಳೆದುಕೊಂಡಾಗ ಆಗುವ ವೇದನೆ ದುಃಖ ಅರಿವಾಗಲಿ ನನ್ನ ತಮ್ಮಂದಿರನ್ನು ಪ್ರೀತಿಯ ಮಕ್ಕಳನ್ನು ಕಳೆದುಕೊಂಡು ನಾನೆಷ್ಟು ಸಂಕಟ ಅನುಭವಿಸಬೇಕು. ಯೋಚನೆಗಳ ಸರಮಾಲೆ ಹಾದು ಹೋಗುತ್ತಿರುವಾಗ “ಮಹಾರಾಜ ಪರಾಂಬರಿಸಬೇಕು” ಗುಪ್ತವರದಿಗಾರರು ಕರೆದಾಗ ಬೆಚ್ಚಿ ಕಣ್ಣು ತೆರೆದೆ. ಏನು? ಏನು? ತಲೆಯೆತ್ತಿ ನೋಡಿದೆ.

“ರಾವಣೇಶ್ವರಾ ತಮ್ಮನು ಮೂರ್ಚಿತನಾಗಿ ಬಿದ್ದುದ್ದನ್ನು ಕಂಡು ಶ್ರೀರಾಮನು ಪರಿಪರಿಯಾಗಿ ಪ್ರಲಾಪಿಸುತ್ತಿರಲು ವೈದ್ಯನಾದ ಸುಶೇಷಣನು ಲಕ್ಷ್ಮಣನನ್ನು ಅಮೂಲಾಗ್ರವಾಗಿ ಪರೀಕ್ಷಿಸಿದನು. ವಿಭೀಷಣನು ನಾನಾ ವಿಧವಾಗಿ ರಾಮನನ್ನು ಸಂತೈಸಿದನು. ಸುಗ್ರೀವ ಜಾಂಬವಂತ ಅಂಗದ ಹನುಮಂತ, ಕಪಿವೀರರೆಲ್ಲರೂ ಶೋಕಸಾಗರದಲ್ಲಿ ಮುಳುಗಿದರು.

ಸಶೇಣನು ಲಕ್ಷ್ಮಣನು ಸತ್ತಿಲ್ಲ. ಜೀವಕಳೆಯಿದೆ. ಸಂಜೀವಿನಿಯಿಂದ ಲಕ್ಷ್ಮಣನಿಗೆ ಜೀವ ಬರುತ್ತದೆಂದು ಹೇಳಲು, ಈಗ ಯಾರಾದರೂ ಬೇಗ ಹೋಗಿ ಹಿಮಾಲಯದ ತಪ್ಪಲಲ್ಲಿರುವ ಸಂಜೀವಿನಿ ಪರ್ವತವನ್ನು ತರಬೇಕು. ಈ ಕೆಲಸ ಮಾಡಲು ಹನುಮಂತನೊಬ್ಬನೇ ಶಕ್ತನು ಶ್ರೀರಾಮನ ಆಜ್ಞೆಯಂತೆ ಮಾರುತಿಯು ಆಕಾಶಕ್ಕೆ ಹಾರಿ ಹಿಮಾಲಯ ತಪ್ಪಲಲ್ಲಿರುವ ದ್ರೋಣ ಗಿರಿಯತ್ತ ಸಾಗಿದನು. ಆಗ ನಿಮ್ಮ ಸ್ನೇಹಿತನಾದ ಕಾಲನೇಮಿಯೆಂಬ ರಕ್ಕಸನು ಮುನಿವೇಷವನ್ನು ತಾಳಿ ಜಪಮಾಡುತ್ತಾ ಕುಳಿತಿದ್ದನು. ಆಕಾಶಮಾರ್ಗದಲ್ಲಿ ಹೋಗುತ್ತಿರುವ ಮಾರುತಿಯನ್ನು ತಡೆದು ನಿಲ್ಲಿಸಿ, ಸ್ವಲ್ಪ ಉಪಹಾರ ಸೇವಿಸಿಕೊಂಡು ಹೋಗಬೇಕೆಂದು ಆಗ್ರಹಪಡಿಸಿದನು. ಅವನ ಬಲವಂತಕ್ಕೆ ಒಪ್ಪಿ ಅವನ ಆದೇಶದಂತೆ ಸರೋವರದಲ್ಲಿ ಕಾಲು ತೊಳೆಯಲು ಇಳಿದಾಗ ರಕ್ಕಸನ ತಂತ್ರದಿಂದ ಅದರಲ್ಲಿದ್ದ ಮೊಸಳೆ ಮಾರುತಿಯನ್ನು ನುಂಗಿಬಿಟ್ಟಿತು. ಅನಾಹುತವಾಯಿತೆಂದು ಮಾರುತಿಯು ಈ ಮಾಯಾ ಮೊಸಳೆಯನ್ನು ಮುಗಿಸಬೇಕೆಂದು ಅದ್ಭುತಾಕಾರವಾಗಿ ಬೆಳೆದು ಆ ಮಕರದ ಹೊಟ್ಟೆಯನ್ನು ಸೀಳಿ ಹೊರಬಂದನು. ಮಾಯಾಮೊಸಳೆಯು ಅಪ್ಸರಾ ಸ್ತ್ರೀಯಾಗಿ ಆಕಾಶದಲ್ಲಿ ನಿಂತು “ಮಾರುತಿ ನಿನ್ನ ಪುಣ್ಯದಿಂದ ಶಾಪದಿಂದ ಮುಕ್ತಳಾದೆ. ಇಲ್ಲಿರುವ ಮುನಿವೇಷಧಾರಿಯಾದ ಕಾಲನೇಮಿಯಂಬುವನು ರಾವಣನ ಮಿತ್ರನು. ನಿನ್ನನ್ನು ಸಾಯಿಸಲು ಹೊಂಚು ಹಾಕುತ್ತಿದ್ದಾನೆ. ಅವನಿಗೆ ಸರಿಯಾದ ಪಾಠ ಕಲಿಸಿ ರಾಮಕಾರ್ಯದಲ್ಲಿ ನಿರತನಾಗು” ಎಂದು ಹೇಳಿ ಅದೃಶ್ಯಳಾದಳು. ಆಗ ಮಾರುತಿ ಮೇಲೆ ಬಂದು ತನ್ನ ಗದೆಯಿಂದ ಕಪಟ ಮುನಿಯ ತಲೆಯ ಮೇಲೆ ಕಟ್ಟಲು ಒಂದೇ ಏಟಿಗೆ ಮುನಿಯು ರಕ್ತ ಕಾರುತ್ತಾ ಸತ್ತು ಬಿದ್ದನು. ನಂತರ ಮಾರುತಿಯು ದ್ರೋಣಗಿರಿಗೆ ಹೋಗಿ ಸಂಜೀವಿನಿ ಹುಡುಕುತ್ತಾ ನಿಂತರೆ ಸಮಯ ಮೀರುವುದೆಂದು ಸೂರ್ಯೋದಯಕ್ಕೆ ಮುನ್ನವೇ ಸಂಜೀವಿನಿ ತರಬೇಕೆಂಬ ಸುಶೇಷಣನ ಮಾತನ್ನು ನೆನೆದು ಇಡೀ ದೋಣಪರ್ವತವನ್ನು ಕಿತ್ತು ತಂದನು. ಅದರಲ್ಲಿದ್ದ ಮೂಲಿಕೆಗಳ ಬೆಳಕು ಇಡೀ ಭೂಮಂಡಲವನ್ನೇ ವ್ಯಾಪಿಸಿತು. ರಾಮನು ಅಯ್ಯೋ ಸೂರ್ಯೋದಯವಾದರೆ ಗತಿಯೇನೆಂದು ದಿನಕರನನ್ನು ನಿಂದಿಸತೊಡಗಿದನು. ಸುಶೇಷಣನು “ಸೂರ್ಯೋದಯಕ್ಕೆ ಇನ್ನು ಸಮಯವಿದೆ. ಈ ಬೆಳಕು ಸಂಜೀವಿನಿ ಮೂಲಿಕೆಯ ಪ್ರಭಾವ” ಎಂದು ರಾಮನನ್ನು ಸುಮ್ಮನಿರಿಸಿದನು. ಮೂಲಿಕೆಗಳ ವಾಸನೆಯಿಂದಲೇ ಮೃತರಾಗಿದ್ದ ಸಕಲಕಪಿಗಳು ಜೀವಂತರಾದರು. ಜಾಂಬವಂತನು ಸಂಜೀವಿನಿ ಮೂಲಿಕೆಯನ್ನು ಲಕ್ಷ್ಮಣನ ನಾಸಿಕಕ್ಕೆ ಹಿಡಿಯಲು, ಲಕ್ಷ್ಮಣನು ನಿದ್ದೆಯಿಂದ ಎದ್ದವನಂತೆ ಎದ್ದು ಕುಳಿತನು. ಮಾರುತಿಯು ಮತ್ತೆ ಧ್ರೋಣಾದ್ರಿಯನ್ನು ಹಿಮಾಲಯದ ತಪ್ಪಲಲ್ಲಿಟ್ಟು ಬಂದನು. ಶತ್ರುಪಾಳಯದಲ್ಲಿ ಮತ್ತೆ ಸಂತಸ, ಸಂಭ್ರಮ ತುಳುಕಾಡುತ್ತಿದೆ” ಎಂದುಸುರಿದರು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಳ ಸಂಪಿಗೆ
Next post ಎಲ್ಲಿರುವೆ ವಾಣಿ, ಮರೆತೆಯ ಹೇಗೆ ಇಷ್ಟು ದಿನ

ಸಣ್ಣ ಕತೆ

 • ಮರೀಚಿಕೆ

  ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

 • ಆ ರಾಮ!

  ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

 • ಮಿಂಚು

  "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

 • ಬಿರುಕು

  ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

 • ಏಡಿರಾಜ

  ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

cheap jordans|wholesale air max|wholesale jordans|wholesale jewelry|wholesale jerseys