ಹುಗಲಿಲ್ಲ ಬಿಯದರಿಗೆ

ಇಲ್ಲಿ ನಿನಗೆ ಹುಗಲಿಲ್ಲ
ಓ ಬಿಯದ ! ಇದು ಪಕ್ಷಿ ಕಾಶಿ
– ಕುವೆಂಪು

ಝೆನ್ ಬುದ್ಧತತ್ವದ ನಂತರ ಬಂದವನು ಜಪಾನಿನ ತತ್ವಶಾಸ್ತ್ರಜ್ಞ ನಿಶಿದಾ. ಅವನನ್ನು ಓದುತ್ತಿರುವಾಗ ಬಂಜಗೆರೆ ಜಯಪ್ರಕಾಶರ ಕಾವ್ಯ ನೆನಪಾಗಿದ್ದು ಎಂದುಸಾಮ್ಯತೆಯ ಎಳೆಯಲ್ಲಿ. ನಿಶಿದಾ ‘topos of nothingness’ ತತ್ವಕ್ಕೆ ಹೆಸರಾದವನು. ಅವನು ವಿವರಿಸುವಂತೆ ಅವನ ತತ್ವವು ಆಕಾರ ರಹಿತವಾದ ಆಕಾರವನ್ನು ನೋಡುವುದು ಅಥವಾ ನಿಶ್ಶಬ್ಬದ ಶಬ್ಬವನ್ನು ಆಲಿಸುವುದನ್ನು ಕುರಿತು ಹೇಳುತ್ತದೆ. ‘ಹಕ್ಕಿ ಹಾಡಿತು ಬೆಟ್ಟ ಶಾಂತ ನಿಶ್ವಲವಾಗಿದೆ’ ಎನ್ನುವ ಹಾಯ್ಕುವಿನೊಂದಿಗೆ ಇದನ್ನು ವಿವರಿಸುವ ನಿಶಿದಾ ಹಕ್ಕಿಯ ಕೂಗು ನಿಶ್ಶಬ್ಬದ ಎದುರು ಕ್ರಿಯೆಯಾದರೂ ಅದನ್ನು ತನ್ನೊಳಗೆ ಬಿಂಬಿಸುತ್ತದೆ ಅಥವಾ ಬೆಟ್ಟದ ಶಾಂತತೆಯು ಹಕ್ಕಿಯೊಳಗೆ ಪ್ರತಿಫಲಿಸುತ್ತದೆ ಯೆಂದು ಹೇಳುತ್ತಾನೆ. ಶಬ್ಬನಿಶ್ಶಬ್ಬಗಳು ಬೇರೆ ಬೇರೆ ಎನ್ನುವಂತೆ ಇದ್ದರೂ ಒಂದುದೊಡ್ಡ ವಾಸ್ತವದಲ್ಲಿ ಪರಸ್ಪರ ಪೂರಕಗಳು. ಒಂದು ಇನ್ನೊಂದರೊಳಗೆ ಇದ್ದು ಪೂರೈಸುವಂತವು. ಇಲ್ಲಿರುವ ಪೂರಕ ಪ್ರಜ್ಞೆ, ಅವಿನಾ ಸಂಬಂಧವನ್ನು ನಿಶಿದಾ ವಿವರಿಸುವ ಧಾಟಿ ಜೆ.ಪಿ ಯವರ ಕಾವ್ಯದಲ್ಲೂ ಇದ್ದಂತೆ ತೋರಿದ್ದರಿಂದ ಅವರಿಬ್ಬರು ಒಟ್ಟಿಗೆ ನೆನಪಾಗಿದ್ದಿರಬಹುದು. ಅಲ್ಲದೆ ಬಂಜಗೆರೆಯವರ ಕಾವ್ಯವು ಹೀಗೆ ಭಿನ್ನತೆಗಳನ್ನು ಗುರುತಿಸುತ್ತಲೇ ಪರಸ್ಪರ ಪೂರಕವಾದ ವಿರೋಧಿ ನೆಲೆಗಳನ್ನು ಒಂದುಗೂಡಿಸುವ ತಾತ್ವಿಕ ರಚನೆಗೆ ಹತ್ತಿರವಾಗಿದೆ ಮತ್ತು ಆ ಮೂಲಕ ಅರಿವಿನ ವಿಕಾಸವನ್ನು ನಿರೀಕ್ಷಿಸುವ ಆಕಾಂಕ್ಷೆಉಳ್ಳದ್ದು. ಬಹುಶಃ ಈ ಕಾರಣದಿಂದ ನನಗೆ ಅವರು ಸಾಮಕಾಲೀನ ಕವಿಗಳಿಗಿಂತ ಭಿನ್ನವಾಗಿ ಕಾಣುತ್ತಾರೆ.

ಬಂಜಗೆರೆಯವರನ್ನು ಹತ್ತಿರದಿಂದ ಬಲ್ಲವರಿಗೆ ಅವರ ಎಡಪಂಥೀಯ ನಿಲುವಿನ ಬಗ್ಗೆ ಹಾಗೂ ಅವರು ತೊಡಗಿಕೊಂಡಿದ್ದ ಚಳವಳಿ ಹೋರಾಟಗಳ ಬಗ್ಗೆ ತಿಳಿದಿರುತ್ತದೆ. ಹೀಗಾಗಿ ಅವರನ್ನು ಹೋರಾಟಗಾರ ಎಂದು ಲೇಬಲ್ಲು ಹಚ್ಚಿ ನೋಡುವುದು ಸುಲಭ. ಕವಿಯಾಗಿ ಅವರು ಪ್ರವರ್ಧಮಾನಕ್ಕೆ ಬಂದಾಗ ಬಂಡಾಯದ ಕಾಲ. ಬಂಡಾಯದ ಮನೋಧರ್ಮ ಅವರಿಗೆ ಇದ್ದುದರಿಂದ ಅವರನ್ನು ‘ಬಂಡಾಯಕವಿ’ ಎಂತಲೂ ಕೆಲವರು ಗುರುತಿಸುವುದುಂಟು. ಆದರೆ ವಾದಕ್ಕೆ ಬದ್ಧರಾಗಿ ಜೆ. ಪಿ. ಕಾವ್ಯ ಬರೆಯುತ್ತಿದ್ದರೆ ಅದು ಆಷ್ಟಾಗಿ ಗಮನ ಸೆಳೆಯುತ್ತಿರಲಿಲ್ಲವೇನೋ (ಕಳೆದ ಕಾಲದ ಪ್ರೇಯಸಿಯರಿಗೆ-ಪುಸ್ತಕಕ್ಕೆ ಮುನ್ನುಡಿ ಬರೆಯುವಾಗ ನಟರಾಜ್ ಹುಳಿಯಾರ್ ಪಾರ್ಟೀನೋಸ್ಟ್ ಕವಿತೆಗಳ ಮಿತಿಯನ್ನು ಪ್ರಸ್ತಾಪಿಸಿದ್ದಾರೆ). ರಕ್ತಸಿಕ್ತ ಕ್ರಾಂತಿ ಕವಿಯವೇಷ ಧರಿಸುವುದು ಜೆ.ಪಿ ಅವರಿಗೆ ಸುಲಭವಾಗಿದ್ದಾಗ, ಅವರೇಕೆ ರಮ್ಯವಾಗಿ ಕಳೆದ ಕಾಲದ ಪ್ರೇಯಸಿಯರಿಗೆ ಬಿನ್ನವಿಸಿಕೊಳ್ಳುತ್ತಾರೆ?- ಇದು ಕುತೂಹಲ ಹುಟ್ಟಿಸುವ ಪ್ರಶ್ನೆಯೂ ಆಗಿದೆ.

ಹಾಗೆ ನೋಡಿದರೆ ಯಾವುದೇ ಕಾವ್ಯ ಆಥವಾ ಬರವಣಿಗೆ ಎನ್ನುವುದು ಬಂಡಾಯದ ಮನೋಧರ್ಮವೇ ಆಗಿದೆ. ಜೆ-ಪಿ. ಸಾಕಷ್ಟು ಹೋರಾಟಗಳಲ್ಲಿ ತೊಡಗಿಕೊಂಡಿದ್ದವರಾದರೂ ತಮ್ಮೆಲ್ಲ ಹೋರಾಟಗಳಿಗಿಂತ ಕಾವ್ಯವು ಅತ್ಯಂತ ಶಕ್ತಿಶಾಲಿಯಾದ ಅಭಿವ್ಯಕ್ತಿಯೆನಿಸಿ ಅದರಲ್ಲೇ ತಮ್ಮ ಹೋರಾಟದ ನೆಲೆಗಳನ್ನು ಕೇಂದ್ರೀಕರಿಸಿಕೊಳ್ಳುತ್ತಾರೆ. ಕಾವ್ಯದ ಶೋಧವು ಪಠ್ಯಗಳಲ್ಲಿ ಮಾತ್ರವಲ್ಲದೆ ಅದಕ್ಕೆ ಮೀರಿದ ಸಾಧ್ಯತೆಗಳನ್ನು ಕಾಣುವಂತದ್ದು. ಹೀಗಾಗಿ ಅವರಿಗೆ ಕಾವ್ಯದ ಮಾಧ್ಯಮ ಹೆಚ್ಚು ಪ್ರಶಸ್ತವೂ ಕಂಡಿದ್ದಿರಬಹುದು.

ಎಡಪಂಥೀಯ ದೃಷ್ಟಿಕೋನಗಳಿರುವ ಬಂಜಗೆರೆಯವರಂತೆಯೇ ಅವರ ಕಾವ್ಯವು ರಾಜಕೀಯ ಎಲಿಮೆಂಟುಗಳನ್ನು ಹೊಂದಿದೆ. ಪ್ರಧಾನ ಧಾರೆಗಳನ್ನು ಪರಿಶೀಲಿಸುವ, ಪ್ರಜಾಪ್ರಭುತ್ವದ ಮಾದರಿಗಳನ್ನು ಅನುಮಾನಿಸಿ ನೋಡುವ ಶೈಲಿಯೂ ಎಡಪಂಥೀಯ ವಿಚಾರಧಾರೆಗೆ ಹತ್ತಿವಿರುವಂತದ್ದು. ಮುಖ್ಯವಾಗಿ ಬಂಜಗೆರೆಯವರ ಕಾವ್ಯ ವಸಾಹತುಶಾಹಿ, ಪ್ರಭುತ್ವ, ವರ್ಗಶಾಹಿ ಧೋರಣೆಗಳಿಂದ ಹುಟ್ಟುವ ಶೋಷಣೆ, ಅನ್ಯಾಯಗಳನ್ನು ವಿರೋಧಿಸುವ ಪ್ರತಿಭಟನಾತ್ಮಕ ದನಿಯಾಗಿ ಹುಟ್ಟುತ್ತದೆ. ಇದಕ್ಕೆ ಬಹುಶ್ರುತವಾದ ಚರಿತ್ರೆಯ ಹಿನ್ನೆಲೆಯಿದೆ. ಆಫ್ರಿಕಾ, ಇಥಿಯೋಪಿಯಾ, ಪ್ಯಾಲಸ್ಟೇನ್ ಮುಂತಾದ ದೇಶಗಳು ಚರಿತ್ರೆಯನ್ನು ನಲುಗಿ ಹೋದ ದೇಶಗಳು. ಅವುಗಳ ಚರಿತ್ರೆಯು ಇಲ್ಲಿ ನಿರೂಪಿಸಲಾಗಿದೆ. ಇದರ ಉದ್ದೇಶ ಮೊದಲು ಶೋಷಿತರ ಅನುಭವಗಳನ್ನು ಗುರುತಿಸಿಕೊಳ್ಳುವುದು ನಂತರ ಚಿಕಿತ್ಸಕ ನೆಲೆಗಳನ್ನು ಹುಡುಕುವುದು. ಈ ಎರಡೂ ವಿನ್ಯಾಸಗಳಲ್ಲಿ ಜೆ. ಪಿ. ಕಾವ್ಯ ಹರಿದಾಡುತ್ತದೆ.

ಸಮುದಾಯಗಳಿಗೊದಗಿದ ಬಹುಪಾಲು ಅನ್ಯಾಯ, ಅಕ್ರಮಗಳು ಪ್ರಭುತ್ವದ ದೆಸೆಯಿಂದ ಉಂಟಾದವು. ಆಧುನಿಕ ಕಾಲದಲ್ಲಿ ಪ್ರಭುತ್ವವು ವಸಾಹತುಶಾಹಿಯಾಗಿ ಬಂದಾಗ ಅನ್ಯಾಯವು ಸಂಸ್ಕೃತಿಯನ್ನೇ ಇಲ್ಲವಾಗಿಸುವ ರೀತಿಯದಾಗುತ್ತದೆ. ಮುಂದೆ ವಸಾಹತ್ತೋತ್ತರ ಕಾಲದಲ್ಲಿ ವಸಾಹತುಶಾಹಿಯ ಪಳೆಯುಳಿಕೆಗಳನ್ನು ಹೊಂದಿದ ಪ್ರಭುತ್ವಗಳು ಆಧೀನರ ಸಂಸ್ಕೃತಿಗಳನ್ನು ನಾಶಪಡಿಸುವ ಕೆಲಸವನ್ನು ತುಂಬ ವ್ಯವಸ್ಥಿತವಾಗಿ ಮಾಡುತ್ತ ಹೋಗುತ್ತವೆ. ಇದನ್ನು ಕಾಣಿಸುವ ನಿಟ್ಟಿನಲ್ಲಿ ಜೆ. ಪಿ. ಕಾವ್ಯ ವಸಾಹತು ಮತ್ತು ವಸಾಹತೋತ್ತರ ಕಾಲಗಳೆರಡಲ್ಲೂ ದಮನಲ್ಲೊಳಗಾದವರ ಚಾರಿತ್ರಿಕ ದಾಖಲೆಗಳನ್ನು ಒಂದುಸರಳ ವಿನ್ಯಾಸದಲ್ಲಿ ತರುತ್ತದೆ.
ಚೂರು ನಾಚಿಕೆಯಿಲ್ಲ
ಹೇಗೆ ಸಾಲುಗಟ್ಟಿದ್ದಾರೆ ತಲೆ ಹಿಡಿಯುವುದಕ್ಕೆ
ನಾಲಿಗೆಯ ಮೆಟ್ಟಿನಟ್ಟಿ ಮಾಡಿ
ಕಷ್ಟಪಟ್ಟಿದ್ದೇನೆ ಚಕ್ರಾಧಿಪತಿಗೆ ಆಯ್ಯೋ ನನ್ನಿಂದ ಮಾತಿಲ್ಲ…
ಹಳೆಯ ಕಾಲದ್ದು ಈ ಕಿಲುಬುಕಾಸು
ನಿಮ್ಮ ಆಂಗಡಿಯಲ್ಲಿ ನಡೆಯುವುದಿಲ್ಲ
ನನ್ನ ದುಃಖದೇಶದ ಪಾಸ್‍ಪೋರ್ಟ್‍ಗಳಿಗೆ
ನಿಮ್ಮ ಕಛೇರಿ ಮುದ್ರೆಯಂಕಿತ ಬಿದ್ದಿಲ್ಲ
(ನನ್ನಿಂದ ಮಾತಿಲ್ಲ)
ಈ ಸಾಲುಗಳಲ್ಲಿ ವ್ಯಕ್ತವಾಗುವ ವಸಾಹತುಶಾಹಿಯ ಅನುಭವ ನೋಡಿ. ‘ಚಕ್ರಾಧಿಪತಿ’, ‘ಕಷ್ಟ’, ‘ಕಛೇರಿ ಮುದ್ರೆ’ಯಂತಹ ಪದಗಳು ಆ ಅನುಭವಗಳಿಗೆ ಸಾಂದ್ರತೆಯನ್ನೊದಗಿಸುತ್ತವೆ. ಟೀಪು ಎನ್ನುವ ಕವಿತೆಯಲ್ಲಿ ‘ಅವಿಶ್ರಾಂತ ಪಶ್ಚಿಮದ ಕಡಲು’ ಎಂಬ ಪದಪುಂಜವು ವಸಾಹತುಶಾಹಿಯ ನಿಲ್ಲದ ಆಕ್ರಮಣಶೀಲತೆಯನ್ನು ಸೂಚಿಸಿ ಆದನ್ನು ಇನ್ನಷ್ಟು ಸ್ಪಷ್ಟದಾಗಿ ಗುರುತಿಸುತ್ತಾರೆ.
ಪೂರ್ವದ ಸೂರ್ಯನಾಗಲೇ ಉರುಳುತ್ತಿದ್ದ
ಪಶ್ಚಿಮದ ಕಡಲಿಗೆ

ಟೀಪು ಚರಿತ್ರೆಯಲ್ಲಿ ವಸಾಹತುಶಾಹಿಯ ವಿರುದ್ದ ಸೆಣಸಿದವನು. ಮಂಡೇಲ ಅವನ ಮುಂದುವರೆದ ಭಾಗ. ಹಾಗೆಯೇ ಬೆಂಜಮಿನ್ ಮೊಲಾಯಿಸ್, ಶಂಕರ್ ಗುಹಾನಿಯೋಗಿ ಮುಂತಾದವರು ಪ್ರಭುತ್ವದ ದಬ್ಬಾಳಿಕೆಯ ವಿರುದ್ದ ಸೆಣಸಿದವರು. ಇವರೆಲ್ಲ ಸಮುದಾಯದ ಪ್ರತಿನಿಧಿಗಳೂ ಹೌದು. ಇವರೆಲ್ಲ ನಡೆಸಿದ ಪ್ರಭುತ್ವ ವಿರೋಧಿ ಹೋರಾಟಗಳನ್ನು ದಾಖಲಿಸುವುದರೊಂದಿಗೆ ಒಟ್ಟು ದಮನಿತರೆಲ್ಲ ಒಂದುನೇಯ್ಗೆಯಲ್ಲಿ ಬರುವಂತೆ ಮಾಡುತ್ತಾರೆ ಜೆ.ಪಿ. ಇದು ಅವರ ಕಾವ್ಯದ ಮುಖ್ಯದಾಟು.

ನಾಗರಿಕಗೊಳಿಸುವ ಕಾರ್ಯಾಚರಣೆಯನ್ನು ತಲೆ ಮೇಲೆ ಹೊತ್ತುಕೊಳ್ಳುವಂತೆ ಆಡುವ ವಸಾಹತುಶಾಹಿಯ ಕ್ರೌರ್ಯದ ನಡೆಗಳಾಗಲಿ ಅಥವಾ ಅವುಗಳ ಮುಂದುವರಿಕೆಯಂತೆ ಬರುವ ಪ್ರಭುತ್ವಗಳಾಗಲಿ ಪ್ರಗತಿಯ ಹಣೆಪಟ್ಟಿಯ ಕೆಳಗೆ ನಾಜೂಕಾಗಿ ಜೀವನ ವಿಧಾನಗಳನ್ನು ಬದಲಾಯಿಸುತ್ತಿರುತ್ತವೆ. ಜೆ.ಪಿ.ಯವರ ‘ಮಹೂವಾ’ ಪದ್ಯವು ಆಕ್ರಮಣಶೀಲತೆಯನ್ನು ಪರಿಚಯಿಸುವ, ಆ ಮೂಲಕ ಜೀವನವಿಧಾನಯೊಂದು ನಿಧಾನಕ್ಕೆ ನಾಶವಾಗುತ್ತಿರುವ ಪ್ರಕ್ರಿಯೆಯನ್ನು ತೋರಿಸುತ್ತದೆ. ಆದಿವಾಸಿಗಳ ಬದುಕಿನ ಬಗ್ಗೆ ಬ್ರಿಟಿಷರ ಧೋರಣೆಗಳನ್ನು ಮತ್ತು ನಡೆದುಕೊಂಡ ವಿಧಾನಗಳೇನಿದ್ದವೋ ಅವನ್ನೆ ಇಂದಿನ ಪ್ರಭುತ್ವವೂ ಅನುಸರಿಸುತ್ತದೆ. ಅವರನ್ನು ಅವರ ಜಾಗೆಗಳಿಂದ ಒಕ್ಕಲೆಬ್ಬಿಸುವುದು, ಆಮೇಲೆ ಅವರಿಗೆ ಪುನರ್ವಸತಿಯನ್ನು ನೀಡುವ ಭರವಸೆ ನೀಡುವುದು – ಎಲ್ಲವೂ ವಸಾಹತುಶಾಹಿಯ ಕ್ರಮಗಳೇ ಆಗಿವೆ. ಮೇಲಾಗಿ ಶೋಷಣೆ ಮಾಡುವುದು ಅಥವಾ ಕರುಣೆ ತೋರಿಸುವುದು ಎರಡೂ ವಸಾಹತುಶಾಹಿಯ ವಿಭಿನ್ನ ಧೋರಣೆಗಳಷ್ಟೆ. ಆದಿವಾಸಿಗಳ ಬದುಕನ್ನೂ ಅವರ ಮೂಲಭೂತ ಹಕ್ಕುಗಳನ್ನೂ ಕಿತ್ತುಕೊಳ್ಳುವ ಆಕ್ರಮಣಕಾರರು ತಮ್ಮ ಆಕ್ರಮಣಶೀಲತೆಯನ್ನು ಫ್ರಭುತ್ವದ ನೀತಿಯನ್ನಾಗಿ ರೂಪಿಸುತ್ತಾರೆ. ಜೆ. ಪಿ. ಯವರಲ್ಲಿ ಪ್ರಭುತ್ವ ಮತ್ತು ಸಮುದಾಯಗಳ ನಡುವಿನ ಸಂಘರ್ಷಗಳು ಗುರುತಿಸಿಕೊಳ್ಳುವಿಕೆಯ ಅಂಗವಾಗಿ ಬರುತ್ತವೆ ಎನ್ನುವುದಿಲ್ಲಿ ಮುಖ್ಯವಾಗುತ್ತದೆ.

ಭಾಷೆ ಮತ್ತು ಸಂಕೃತಿಗಳ ನಾಶವನ್ನು ವಸಾಹತುಶಾಹಿ ಕ್ರಮವಾಗಿ ಮಾಡಿ ಮುಗಿಸುತ್ತದೆ. ಅಧೀನ ಪರಂಪರೆಂದುಳ್ಳ ಸಮುದಾಯಗಳು ಆಕ್ರಮಣವನ್ನು ಎದುರಿಸುವ, ಸೋತು ಶರಣಾಗುವ ಕ್ರಿಯೆಗಳಲ್ಲಿ ತೊಡಗುವುದು ಸಾಮಾನ್ಯ. ವಸಾಹತುಶಾಹಿ ಬಳಸುವ ಭಾಷೆ, ಸಂಸ್ಕೃತಿಗಳೇ ನಿರ್ದೇಶನದ ಅಂಶಗಳಾಗಿ ಆಧೀನ ಸಮುದಾಯವನ್ನು ನಿಯಂತ್ರಿಸಿ, ವಶಪಡಿಸಿಕೊಳ್ಳುತ್ತೇವೆ. ಪ್ರತಿಭಟನಾತ್ಮಕವಾಗಿ ಆಧೀನ ಸಮುದಾಯಗಳು ತಮ್ಮ ಭಾಷೆ, ಸಂಸ್ಕೃತಿಗಳಿಗೆ ನಿಷ್ಠರಾಗಿ ಉಳಿಯುವುದು ಇನ್ನೊಂದು ರೀತಿಯದು. ಇಂಥ ಸೊಲ್ಲುಗಳನ್ನು ಕೇಳಿಸುವ ಜಯಪ್ರಕಾಶರು ‘ಮಾಮೋಟ್‍ನಾಟ್’, ‘ಏನ್ಕೋಸಿ ಸಿಕಲೆಲೆ ಆಫ಼್ರಿಕಾ’ ಮುಂತಾದ ಪದ ಪ್ರಯೋಗಗಳನ್ನು ಪ್ರಜ್ಞಾಪೂರ್ವಕವಾಗಿಯೇ ಬಳಸಿದ್ದಾರೆ ಎನ್ನಬಹುದು. ಅದನ್ನು ಬಹುಸಂಖ್ಯಾತರ ದನಿಯೆಂದು ನಿರೂಪಿಸುವುದು ಇನ್ನೊಂದು ಮೀಟು.

ವಸಾಹತೋತ್ತರ ಅನುಭವಗಳಲ್ಲಿ ಗಮನೀಯವಾದುದೆ೦ದರೆ, ವಸಾಹತುಶಾಹಿ ಬಿಟ್ಟು ಹೋದ ನಿಯಮ ಮತು ಪಠ್ಯಗಳನಿಟ್ಟುಕೊಂಡು ಅಧಿಕಾರ ನಡೆಸುವ ಪ್ರಭುತ್ವದ ಧೋರಣೆಗಳು ಮೊದಲಿಗಿಂತ ಹೆಚ್ಚು ಬಲಶಾಲಿಯಾಗಿರುತ್ತವೆ. ಎಡ್ವರ್ಡ್‍ಸೈದ್ ಹೇಳುವಂತೆ ವಸಾಹತುಶಾಹಿಯ ಅನುಭವಗಳಲ್ಲಿ ಅಧಿಕಾರಶಾಹಿಯ ಅನುಭವಗಳೂ ಸೇರುತ್ತವೆ. ಅವುಗಳ ಹುನ್ನಾರಗಳ ಬಗೆಗೆ ಪರ್ಯಾಯವು ಸದಾ ಎಚ್ಚಿರಿಕೆಯಿಂದ ಇರಬೇಕೆಂದು ಈ ಬಲಾಢ್ಯರ ಬರಹಗಳನ್ನು ವಿರೋಧಿಸುತ್ತಿರಬೇಕೆಂದೂ ಅವನು ಹೇಳುತ್ತಾನೆ. ನಿರ್ವಸಾಹತೀಕರಣದ ಮೊದಲ ಹಂತದಲ್ಲಿ ಗುರುತಿಸಿಕೊಳ್ಳುವಿಕೆ ಮುಖ್ಯವಾಗಿದೆ. ಚಿಟಗುಬ್ಬಿಯೊಂದನ್ನು ಕಬಳಿಸುತ್ತಿರುವ ಕೇರೆಹಾವಿನ ವಿವರ ಜೆ.ಪಿ ಅವರ ‘ನನ್ನಿಂದ ಮಾತಿಲ್ಲ’ ಕವಿತೆಯಲ್ಲಿ ಬರುತ್ತದೆ. ಇದೊಂದು ಉತ್ತಮ ರೂಪಕವಾಗಿ ವಸಾಹತ್ತೋತ್ತರ ಅನುಭವಗಳು ವಸಾಹತುಶಾಹಿಯ ಮುಂದುವರಿಕೆಯೆನ್ನುವುದನ್ನು ತೋರಿಸುವಂತಿದೆ. ನಾಗರಹಾವು ಅಥವಾ ಕೇರೆ ಹಾವು ಎರಡೂ ಕಬಳಿಸುವುದು ಗುಬ್ಬಿಯನ್ನೇ. ಕಬಳಿಸುವ ಕ್ರಿಯೆ ಭಿನ್ನವಲ್ಲ, ಹಕ್ಕಿ ನಾಶದ ಖಚಿತತೆಯನ್ನು ಗುರುತಿಸುವುದನ್ನು ಇಲ್ಲಿ ಕಾಣಬಹುದು.

ವ್ಯಕ್ತಿ ಸಮುದಾಯಗಳ ಸಂಕೀರ್ಣ ಅನುಭವಗಳನ್ನು ಶೋಧಿಸಲು ಮಿಥ್‍ಗಳನ್ನು ಬಳಸುವ ಪರಂಪರೆ ಇದೆ. ಜೆ. ಪಿ. ಯವರ ಕಾವ್ಯದಲ್ಲಿ ಎದ್ದು ಕಾಣುವುದು ಮಿಥ್‍ಗಳ ಬಳಕೆ. ಪುರಾಣ ಪಾತ್ರಗಳನ್ನು ಆಗ್ಗಿಂದಾಗ್ಗೆ ಅವರು ಎತ್ತಿಕೊಳ್ಳುವ ರೀತಿ ಕೂಡ ವಿಶೇಷವಾಗಿದೆ. ಇತಿಹಾಸ ಎನ್ನುವುದು ನಿರಚನೆಗೊಳ್ಳುತ್ತ ರೂಪುಗೊಳ್ಳಬೇಕಾದ ಒಂದು ವಿಷಯ. ನಿರಚನೆ ಮಾಡಿಕೊಳ್ಳುವ ಪ್ರಕ್ರಯೆಯಲ್ಲಿ ಜೆ. ಪಿ. ಯವರಿಗೆ ನೆರವಾಗುವುದು ಮಿಥ್‍ಗಳು.

ಜೆ.ಪಿ ಯವರು ಬಳಸುವ ಮಿಥ್‍ಗಳಲ್ಲಿ ಬಹುತೇಕವು ವಸಾಹತುಶಾಹಿ ಮತ್ತು ಪ್ರಭುತ್ವದ ಅನುಭವಗಳನ್ನು ಮತ್ತೊಮ್ಮೆ ನಿರಚನೆಯಿಂದ ಕಟ್ಟಿಕೊಳ್ಳುವುದಕ್ಕಾಗಿ ಬಳಕೆಯಾಗುತ್ತದೆ. ಅಮೇರಿಕಾದ ಎರಡು ವಾಣಿಜ್ಯ ಗೋಪುರಗಳು ಕೆಳಗುರುಳಿದ್ದನ್ನು ಸಂಕೇತಿಸುವ ಪಾಂಡುಮಾದ್ರಿಯವರ ಮಿಥ್ ‘ಗರಿಗೆದರಿದ ಪಾಂಡು’ ಕವಿತೆಯಲ್ಲಿ ಬರುತ್ತದೆ. ಎಲ್ಲಕ್ಕಿಂತ ಅವರಿಗೆ ಫೇವರಿಟ್ ಮಿಥ್ ಎಂದರೆ ಶುನಃಶೇಫನದು. ಹರಿಶ್ಚಂದ್ರ ಬಲಿಕೊಡುವ ಈ ಹುಡುಗನ ಬಲಿದಾನದ ಮಿಥ್ ಅನ್ನು ಶೋಷಿತ ಸಮುದಾಯ/ವ್ಯಕ್ತಿಗಳ ಮೂಕ ನೋವಿನ ಜೊತೆ ಸಮೀಕರಿಸಿ ನೋಡುತ್ತಾರೆ. ಹರಿಶ್ಚಂದ್ರ ಪ್ರಧಾನಧಾರೆಯಲ್ಲಿ ‘ಸತ್ಯವಂತ’. – ಶುನಃಶೇಷ ಅಲ್ಲಿ ಫೋಕಸ್ ಆಗುವುದಿಲ್ಲ. ಅಂದರೆ ಶುನಃಶೇಫನಂತ ಬಲಿಪಶುವಿನ ಆಕ್ರಂದನಗಳು ದಾಖಲಾಗುವುದಿಲ್ಲ. ಅವನ ಅನುಭವಗಳು ಅಪೀಲಾಗುವುದೂ ಅಲ್ಲಿ ಅಸಂಭವ. ಅಸಹಾಯಕತೆ, ಅನ್ಯಾಯಗಳನ್ನು ಸಹಿಸಿಕೊಂಡು ಅವುಗಳನ್ನು ಆನುಭವಿಸಲೇಬೇಕಾದ ಪರಿಸ್ಥಿತಿಗೆ ತಳ್ಳುವ ವ್ಯವಸ್ಥೆಯ ಬಗ್ಗೆ ಸಹಜವಾಗಿ ಆಕ್ರೋಶ ಹುಟ್ಟುತ್ತದೆ. ಇದನ್ನು ವ್ಯಂಗ್ಯ ಮತ್ತು ಆಕ್ರೋಶಗಳಿಂದ ಹೇಳುತ್ತಾರೆ ಕವಿ.

ಯಾಕಳುವೆ ಎಲೆ ಕಂದ
ಮೂಕ ಶುನಃ ಶೇಘ
ಕಣ್ಣೊರೆಸಿಕೋ ನಗಬೇಕು, ಧನ್ಯ
ದೇವರಿಗಾಗಿ ಬಲಿಗೆ
ಇತರರ ಖುಷಿಗೆ ಅಥವಾ ಹಿಂಸೆಗೆ

ಸೌಗಂಧಿಕಾ ಪುಷ್ಪದ ಕತೆಯು ಬಳಕೆಯಾಗುವ ವಿಧಾನವೂ ನಿರಚನೆಯ ಕ್ರಮದಲ್ಲೇ ಅಭಿವ್ಯಕ್ತ ಗೊಳ್ಳುತ್ತವೆ. ಇಡೀ ಸೌಗಂಧಿಕಾ ಪುಷ್ಟ ಪ್ರಸಂಗದಲ್ಲಿರುವ ಮಾರ್ದವ ಭಾವವನ್ನು ಅಳಿಸಿ ಹಸಿವಿನ ಆಕ್ರೋಶದ ದ್ರೌಪದಿಯನ್ನು ಪ್ರತಿಷ್ಠಾಪನೆಯಾಗುವಂತೆ ಮಾಡುವುದು ಸೌಯರ್ಯ ಮೀಮಾಂಸೆಯ ಪರಿಕಲ್ಪನೆಗಳನ್ನು ಬದಲಾಯಿಸುವಂತದ್ದು. ಚಿಂದಿಯುಟ್ಟು ದ್ರೌಪದಿ ಕೇಳುವ ಹೂವು ಸೌಂದರ್ಯಕ್ಕಾಗಲಿ, ವಾಸನೆಯಾಗಾಗಲಿ
ಅಲ್ಲ -‘ಉದರ ಮೂಲದ್ದು, ಕಂಗೆಟ್ಟ ಕರುಳಬಳ್ಳಿ ಕಣ್ಣೀರಿಂದ ಚಿಗುರಿದ್ದು’, ಇದು ಬಿಡಿಸಿಕೊಳ್ಳುವ ಕ್ರಿಯೆಂದೂ ಆಗಿದೆ. ಗುರುತಿಸಿಕೊಳ್ಳುವಿಕೆಯಲ್ಲಿ ಇರುವ ಅನನ್ಯತೆಯ ಭಾವವನ್ನು ಜೆ.ಪಿ ಕಾವ್ಯ ಗ್ರಹಿಸುತ್ತದೆ. ಸೈದ್‍ನ ಭಾಷೆಯಲ್ಲಿ ಇದನ್ನು ಅನ್ಯಗೊಳಿಸಿಕೊಳ್ಳುವಿಕೆ (othering) ಎನ್ನಬಹುದು ಎಂದು. ಸಮುದಾಯ ಅಥವಾ ವ್ಯಕ್ತಿ ಬೇರೆ ಬೇರೆ ಕಾರಣಗಳಿಂದ ಅನ್ಯಗೊಳ್ಳುತ್ತಾ ಹೋಗುವುದು. ಸಮುದಾಯಗಳನ್ನು ಒಡೆಯುವ ಭೇದಗಳನ್ನು ಸೃಷ್ಟಿಸುವುದು- ಉದಾಹರಣೆಗೆ ಸ್ವದೇಶಿ, ವಿದೇಶಿ, ಹಿಂದೂ, ಮುಸ್ಲಿಂ, ಸ್ಥಳೀಯ, ಪರಕೀಯ ಇತ್ಯಾದಿ ಭೇದಗಳು ಅನ್ಯಗೊಳಿಸುವ ಕ್ರಿಯೆಯ ಪರಿಣಾಮಗಳು. ಇದು ಸೃಷ್ಟಿಸುವ ಪರಕೀಯಪ್ರಜ್ಞೆಯ ಅನಾವರಣ ಜೆ.ಪಿ ಕಾವ್ಯದಲ್ಲಿ ಆಗುತ್ತದೆ. ಅವರು ಗುರುತಿಸುವಂತೆ ಬಾಬರಿಮಸೀದಿ ಒಡೆದು ಮುಸ್ಲಿಮರನ್ನು ಅನ್ಯಗೊಳಿಸುವುದು, ಪ್ಯಾಲಷ್ಟೇನ್ನೇನಿಯರನ್ನು ಅವರು ವಾಸಿಸುವ ಪ್ರದೇಶಗಳಿಂದ ದೂರ ಓಡಿಸುವುದು, ಆದಿವಾಸಿಗಳನ್ನು ಅವರ ಹಾಡಿಗಳಿಂದ ಒಕ್ಕಲೆಬ್ಬಿಸುವುದು- ಇವೆಲ್ಲಾ ಅನ್ಯಗೊಳಿಸುವಿಕೆಯ ಕ್ರಿಯೆಗಳೇ ಆಗಿವೆ. ಹೀಗೆ ಮಾಡುವುದರಿಂದ ಎರಡು ರೀತಿಯ ಪರಿಣಾಮಗಳು ಸಾಧ್ಯ ಇವೆ. ಒಂದು; ಅನ್ಯಗೊಳಿಸುವಿಕೆಯಿಂದ ಒಬ್ಬರಲ್ಲಿ ಹೀನಾಯಭಾವ ಮೂಡಿಸುವುದು ; ಇನ್ನೊಂದು ಪ್ರತಿಯೊಂದು ಗುಂಪು ತನ್ನ ಹಳೆಯ ಕಾಲದ ಚಾರಿತ್ರಿಕ, ಪೌರಾಣಿಕ ಸಂಗತಿಗಳನ್ನು ವೈಭವೀಕರಿಸುತ್ತಾ ಮೈಮರೆಯುವುದು. ಫ್ಯಾನನ್ ಹೇಳುವಂತೆ ಬೂರ್ಶ್ವಾ ರಾಷ್ಟ್ರೀಯತೆಯು ಈಗ ಜನಾಂಗೀಯವಾದ ಮತ್ತು ಪ್ರತ್ಯೇಕತಾವಾದವಾಗಿ ರೂಪಾಂತರಗೊಂಡಿದೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಸ್ವಲ್ಪ ಎಚ್ಚರ ತಪ್ಪಿದರೂ ಭೂತಕ್ಕೆ ಹಿಂತಿರುಗಿ, ಅದನ್ನು ಆರಾಧಿಸುವ ಪ್ರವೃತ್ತಿಗೊಳಗಾಗುವ ಅಪಾಯ ಇದೆ ಎಂಬುದನ್ನು ಗಮನಿಸಬೇಕಾಗುತ್ತದೆ.

ಬಂಜಗೆರೆಯವರಲ್ಲಿ ಗುರುತಿಸುವಿಕೆ ಎಷ್ಟು ಮುಖ್ಯ ಅಂಶವೋ ಆಷ್ಟೇ ಮುಖ್ಯ ಅಂಶ ಪ್ರತ್ಯೇಕತೆಯಿಂದ ಉಂಟಾಗಬಹುದಾದ ಸಾಧ್ಯತೆಗಳ ಬಗೆಗಿನ ಎಚ್ಚರ. ಗುರುತಿಸುವಿಕೆಯ ನಂತರ ಮುಂದೇನು ಎಂಬ ಪ್ರಶ್ನೆಯು ಉಳಿದಿರುವಂತೆ ದೇಶಿಯತೆಗೆ ಹಿಂತಿರುಗುವ ಸೂಚನೆಗಳು ಅಲ್ಲಲ್ಲಿ ಸಿಗುತ್ತವೆ. ‘ಋತುಸಂಹಾರ’ ಕವಿತೆಯಲ್ಲಿ ಅವರು ವ್ಯಕ್ತಪಡಿಸುವಂತೆ ಅದಕ್ಕೇ ನಾನು ಹಂಬಲಿಸುತ್ತೇನೆ
ಹೂವು ಹಕ್ಕಿಯ ಗೂಡ
ಹಣ್ಣು ಜೇನು ಗೊಂಚಲು
ಮರಕೋತಿ ಆಡಲು ನೆರಳಿದ್ದ
ಹಳ್ಳಿಮರವನ್ನು
ರಮ್ಯತೆಯ ಭಾವವೊಂದು ಇಲ್ಲಿ ಸುಳಿದಾಡಿದಂತೆ ಕಂಡರೂ ಈ ಹಿಂದಿರುಗುವಿಕೆಯ ಅಭಿಯಾನವನ್ನು ಕವಿ ಎಚ್ಚರದಿಂದ ಗಮನಿಸುತ್ತಾರೆನ್ನುವುದು ಮುಖ್ಯ.
ಅಯ್ಯಾ ತಾಳು
ಹೇಳು ಅದು ಬೆಳೆಯುತ್ತಿದೆಯಾ
ಬಲಿಯುತ್ತಿದೆಯಾ
ಉದುರಲು ರೆಡಿಯಾಗಿದೆಯಾ
ಚಿಗುರಲು ಮೊದಲಾಗಿದೆಯಾ?
(ಋತುಸಂಹಾರ)
ರಮ್ಯತೆಯ ಅಭಿಯಾನವನ್ನು ಸಂಕೇತಿಸುವ ಅವರ ‘ಕಳೆದ ಕಾಲದ ಪ್ರೇಯಸಿಯರಿಗೆ’ ಕವಿತೆ ಬಿಂಬಿಸುತ್ತದೆ. ಕಳೆದ ಕಾಲವನ್ನು ಬೆನ್ನುಹತ್ತಿ ಹೋಗುವ ಕವಿ ರೆನಸಾನ್ಸ್ ಕಾಲದ ಜ್ಞಾನೋದಯಕೊಳಗಾದವನು; ‘ನನ್ನೊಳಗಿನ ಸತ್ಯಕ್ಕೆ ಎಚ್ಚರವಾಗುತ್ತಿರುವ ಮಾನವ’ ಎನ್ನುವ ರೀತಿಯದ್ದು. ದೇಶಭಕ್ತಿ, ಸಾಹಸ, ಪ್ರೀತಿಯ ಪರಿಕಲ್ಪನೆಗಳು ರಮ್ಯತೆಯನ್ನು ಪೋಷಿಸುವ ಸಂಗತಿಗಳು. ಇವುಗಳ ಬಗ್ಗೆ ಮೃದುಭಾವ ಇರುವಂತೆ ತೋರಿದರೂ ಜೆ.ಪಿ. ಇಂಥ ಕಡೆ ಜಾಗೃತರು. ‘ಎಚ್ಚರಕ್ಕಾಗಿ ಕಣ್ಣುಗಳನ್ನು ಉಳಿಸಿಕೋ’ ಎನ್ನುವ ಸಾಲು ಎಚ್ಚರವನ್ನು ಉಳಿಸಿಕೊಳ್ಳುವ ಹಂಬಲವನ್ನು ಪ್ರಸ್ತುತಗೊಳಿಸುತ್ತದೆ.

ರಮ್ಯಯತೆಯನ್ನು ಜಯಪ್ರಕಾಶರು ಬಳಸಿಕೊಳ್ಳುವುದು ವಿಶಾಲಾರ್ಥದಲ್ಲಿ. ಆದರ್ಶಗಳನ್ನು ನಿಜಗೊಳಿಸಿಕೊಳ್ಳುವ, ವಿಸ್ತೃತಗೊಳ್ಳುವ ಜಗತ್ತಿನ ಕಾಣ್ಕೆಯು ಅಲ್ಲಿದೆ- ಗಡಿಗಳನ್ನು ಮೀರಿ ಆಕ್ರಮಿಸುವ ಆಕ್ರಮಣಶೀಲ ಪ್ರವೃತ್ತಿ ಮತ್ತು ರಾಜನೀತಿಗಳ ಪರಿಶೀಲನೆಯಲ್ಲಿ ಅನ್ಯಗೊಳಿಸುವ ಕ್ರಿಯೆಯ ಬಗ್ಗೆ ಎಚ್ಚರದಾಳುವ ಕವಿ ಮುಟ್ಟಲು ಬಯಸುವುದು ಗಡಿಗಳನ್ನು ಮೀರುವ ಪ್ರೀತಿಯ ಜಗತ್ತನ್ನು. ಅದಕ್ಕೆ ಪ್ರಾದೇಶಿಕ ಮಿತಿಗಳಾಗಲೀ, ಜಾತಿ, ಬಣ್ಣ, ಧರ್ಮ ಇತ್ಯಾದಿಗಳ ಹಂಗಾಗಲೀ ಇಲ್ಲ.

ವಲಸೆಯೆನ್ನುವುದು ವಿಶಾಲಾರ್ಥದಲ್ಲಿ ಒಪ್ಪಿತವಾಗುತ್ತದೆ. ಆಗಸದ ಅತಿಥಿಗಳೆಂದು ಹಕ್ಕಿಗಳನ್ನು ಕುರಿತು ಬರೆಯುವಾಗ ವಲಸೆಯನ್ನು ಸಮರ್ಥಿಸಿಕೊಳ್ಳುವ ನೀಲಿ ಆಕಾಶದ ಅನಂತತೆಯಲ್ಲಿ ಜೀವಿಗಳನ್ನು ನೋಡುವ ಆಶಯ ಇದೆ. ಅನನ್ಯತೆಯೆಂಬುದು ಭ್ರಮೆಯ ವಿಂಗಡಣೆಯೆನ್ನುವುದನ್ನು ನಿರೂಪಿಸುವುದು ಕೂಡ ಅವರ ಉದ್ದೇಶವಿದ್ದಂತಿದೆ. ನಟರಾಜ್ ಹುಳಿಯಾರ್ ಹೇಳುವಂತೆ, ಹಕ್ಕಿಗಳು ಸವಕಲು ರಮ್ಯವರ್ಣನೆಯಾದರೂ, ಅದರ ಉದ್ದೇಶ ಸೀಮೋಲ್ಲಂಘನೆ ಮಾಡಿ ಬರುವ ಹಕ್ಕಿಗಳ ಚಿತ್ರ ವಿಶಾಲಾರ್ಥದಲ್ಲಿ ಧ್ವನಿಸುತ್ತದೆ. ಹಕ್ಕಿಗಳನ್ನು ಒಂದುಕಡೆ ‘ಮಾತರಿಯದ ಹ್ಯುಯನೆತ್ಸಾಂಗಗಳೇ?’ ಎನ್ನುವಾಗ ದೇಶಗಳನ್ನು ದಾಟಿ ಬರುವ ಯಾತ್ರಿಕನ ನಿರ್ಮಲ ಚಿತ್ರ ಕಣ್ಣಿನ ಮುಂದೆ ಬರುತ್ತದೆ. ಖ೦ಡಾಂತರಗಳನ್ನು ದಾಟಿ ಬರುವ ಪಕ್ಷಿಗಳು ವಿಶ್ವದೆಲ್ಲೆಗಳ ನೇಯುವ ಜೀವದೆಳೆಗಳು. ಇದು ಅವರ ಮೂಲ ಆಶಯ.

ಈ ಮೂಲಕ ತಮ್ಮ ಕಾವ್ಯದಲ್ಲಿ ನೊಂದವರನ್ನು ಗುರುತಿಸಿಕೊಳ್ಳುವ ಕವಿ, ವಲಸೆಯ ಮೂಲಕ ಗಡಿಗಳ ಹಂಗಿಲ್ಲದೆ ಇರುವ ಮಾನವೀಯ ಪ್ರಜ್ಞೆಯೊಂದರ ಅನಾವರಣವನ್ನು ಕಾಣಲೆತ್ನಿಸುತ್ತಾರೆ. ಇದನ್ನು ಸ್ವಲ್ಪ ಮಟ್ಟಿಗೆ ನಿರ್ವಸಾಹತೀಕರಣದ ಪ್ರಕ್ರಿಯೆ ಎಂದು ಗುರುತಿಸಬಹುದಾದರೂ ಅದಕ್ಕು ಮು೦ದೆ ಒಂದು ಮಾನನೀಯಪ್ರಜ್ಞೆಯ ವಿಕಾಸ ಮತ್ತು ವಿಶ್ವಾತ್ಮಕ ನೆಲೆಗಳಲ್ಲಿ ಗುರುತಿಸಿಕೊಳ್ಳುವಿಕೆಯ ರೀತಿ ಇಲ್ಲಿ ‘ಆಗುವಿಕೆಯ’ ಪ್ರಕ್ರಿಯೆಯೇ ಆಗಿದೆ. ಇಂದು ವಿಮರ್ಶಕರು ಗುರುತಿಸುವಂತೆ ಕುವೆಂಪು ಅವರ ಅನಿಕೇತನ ಅಥವಾ ವಿಶ್ವಾಮಾನವ ಪ್ರಜ್ಞೆಗೂ ಸೈದನ ‘ಎಕ್ಸಿಲಿಕ್’ ಪ್ರಜ್ಞೆಗೂ ಸಾಕಷ್ಟು ಹೋಲಿಕೆಯಿದೆ. ಜೆ. ಪಿ. ಯವರ ಕಾವ್ಯ ನಿರ್ವಸಾಹತೀಕರಣದಲ್ಲಿ ಆಸಕ್ತವಾದ ಕಾವ್ಯವೆನ್ನಬಹುದಾದರೂ, ಕುವೆಂಪು ಪರಂಪರೆಯನ್ನೇ ಮುಂದುವರೆಸುವ ಮಾನವೀಯ ನೆಲೆಗಳನ್ನು ಉನ್ನತೀಕರಿಸಿಕೊಳ್ಳುವ ಗುರಿಯುಳ್ಳ ಕಾವ್ಯ ಎಂದೂ ಗುರುತಿಸಬಹುದು.

‘ಕಟ್ಟುವಿಕೆ’ಯಲ್ಲಿ ಆಸಕ್ತಿ ಹೊಂದಿದ ಕವಿ, ಈ ನೆಲದ ಮಾದರಿ ಉದಾಹರಣೆಯಾದ ಬುದ್ಧನನ್ನು ತಮ್ಮ ಕಾವ್ಯದಲ್ಲಿ ತರುತ್ತಾರೆ. ಬುದ್ಧನ ಬಗ್ಗೆ ಸಾಕಷ್ಟು ಕವಿತೆಗಳನ್ನು ಬರೆಯುವ ಮೂಲಕ ಬದ್ಧತೆಯನ್ನು ವ್ಯಕ್ತಪಡಿಸುವ ಅವರು ಬುದ್ಧನ ಮೋಕ್ಷಮಾರ್ಗವನ್ನು ಆರಿಸಿಕೊಳ್ಳುವುದಿಲ್ಲ. ‘ಯಶೋಧರಾ ಕನವರಿಕೆ’ ಪದ್ಯದಲ್ಲಿ ಬುದ್ಧನನ್ನು ತರಾಟೆಗೆ ತೆಗೆದುಕೊಳ್ಳುವ ಆವರು
ಮುಕ್ತಿ ಕಾಣಲು ಎಲ್ಲ
ಕಾಡು ಹೋಗುವುದಾದರೆ
ಊರು ಕಟ್ಟುವುದಾರ ಕರ್ಮ
ಎಂದು ಕೇಳುತ್ತಾರೆ. ಮೋಕ್ಷ ಎಂದು ನಿರ್ಬೀಜೀಕರಣದ ತತ್ವ. ಇದರಲ್ಲಿ ನಂಬಿಯಿಡುವುದಕ್ಕಿಂತ ಊರು ಕಟ್ಟುವಂತಹ ಲೌಕಿಕ ಕ್ರಿಯೆಗಳು ಮೇಲು ಎನ್ನಿಸುವ ಭೌತವಾದದ ಛಾಯೆ ಇಲ್ಲಿದೆ. ಆದರೆ ಕಟ್ಟುವ ಕ್ರಿಯೆ ಲೌಕಿಕದಲ್ಲಿ ಸಾಂಗವಾಗಿ ನಡೆಯಬೇಕೆನ್ನುವುದರಲ್ಲಿ ಬುದ್ಧನ ಮೈತ್ರಿ ಕರುಣೆಗಳ ಅರಿವಿನ ತತ್ವ ಬೇಕೆಂಬುದನ್ನು ಅವರು ಬಲ್ಲರು. ವಿಶ್ವಾತ್ಮಕವಾದ ಪ್ರಜ್ಞೆಯ ವಿಕಸನವು ಅರಿವಿನಿಯಲೇ ಆಗುವಂತದ್ದು. ಜಾತಿ ಮತಗಳ ಹಂಗಿಲ್ಲದೆ ಬೆಳೆಯುವ ‘ಬುದ್ಧಪ್ರಜ್ಞೆ’ಯು ಅವರಿಗೆ ತಮ್ಮೆಲ್ಲ ಹೋರಾಟಗಳ ಅರಿವಿನಂತೆ ಕಾಣುತ್ತದೆ.

ಬುದ್ಧನ ಅರಿವಿನ ಮಾರ್ಗವು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ಮಾರ್ಗವೆಂದು. ಜೆ.ಪಿ. ನಂಬುವುದರಿಂದ ‘ಶ್ಯಾಕರು ಮತ್ತು ಕೊಲೀಯರು’ ತರಹದ ಕವಿತೆಗಳು ಅವರಲ್ಲಿ ಹುಟ್ಟುತ್ತವೆ. ನದಿನೀರಿಗಾಗಿ ಕಾದಾಡುತ್ತ ಇರುವ ಎರಡು ಗುಂಪಿನವರಿಗೆ ಪರಿಹಾರ ಸೂಚಿಸುವುದು ಬುದ್ಧಮಾರ್ಗ. ಸಾಮಾಜಿಕ ನ್ಯಾಯದ ನಂಬಿಕೆಯನ್ನು ಬಲಗೊಳಿಸುತ್ತ, ಅರಿವಿನಿಂದ ವಿಸ್ತಾರಗೊಳ್ಳುವ ಜಗತ್ತು ಹೇಗೆ ಎಲ್ಲರನ್ನೂ ಒಳಗೊಳ್ಳುತ್ತದೆ ಎಂಬುದನ್ನು ತೋರಿಸುವ ಆಶಯವೇ ಇಲ್ಲಿ ಬಿಂಬಿತವಾಗಿದೆ.

ಬುದ್ಧಮಾರ್ಗವನ್ನು ನಂಬುವ ಕವಿ ಎಡಪಂಥೀಯಚಿಂತನೆಯಲ್ಲಿ ಪ್ರಧಾನವಾಗಿರುವ ಹಿಂಸೆಯಲ್ಲಿ ನಂಬಿಕೆಯಿಡುವುದು ಸಾಧ್ಯವಿಲ್ಲ. ಹೋರಾಟದ ಅಂತಃ ಸತ್ಯವುಳ್ಳ ಕವಿತೆಗಳನ್ನು ಬರೆದರೂ ಅವು ಮೂಲಭೂತವಾಗಿ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ. ಪ್ರಭುತ್ವ ವಿರೋಧಿ ಧೋರಣೆಗಳು ಹಿಂಸೆಯಿಂದ ಕೊನೆಗಾಣುವುದು ಸಾಧ್ಯವಿಲ್ಲವೆಂಬ ನಿಲುವು ಇಲ್ಲಿ ರೂಪುಗೊಳ್ಳುತ್ತಾ ಹೋಗುತ್ತದೆ. ಹೋರಾಟಗಳನ್ನು ಬೆಂಬಲಿಸುವ ಮಾರ್ಕ್ಸಿಸ್ಟ್ ಚಿಂತಕ ಫ್ಯಾನನ್ ಪ್ರಕಾರ ಹಿಂಸೆ ಆನಿವಾರ್ಯವಾದುದು. ಅವನ ಪ್ರಕಾರ ಈಗ ಅಧಿಕಾರದ ಅಂಚಿನಲ್ಲಿರುವವರಿಗೆ ಆದ್ಯತೆ ಬರಬೇಕಾದರೆ ಈ ಇಬ್ಬರು ಎದುರಾಳಿಗಳ ನಡುವೆ ನಡೆಯುವ ನಿರ್ಣಾಯಾತ್ಮಕ ಮತ್ತು ಮಾರ್ಗಗಳನ್ನು ಹಿಂಸಾತ್ಮಕ ಮಾರ್ಗಗಳನ್ನೂ ಕೂಡ ನಾವು ದುಡಿಸಿಕೊಂಡಾಗ ಮಾತ್ರ ಯಶಸ್ಸು ನಮ್ಮದಾಗುತ್ತದೆ. ಅಲ್ಲದೆ ಅಹಿಂಸಾತ್ಮಕ ಧೋರಣೆ ಪರೋಕ್ಷವಾಗಿ ಇರುವ ವ್ಯವಸ್ತೆಯನ್ನೇ ಬಲಪಡಿಸುತ್ತದೆ. ಈ ಹಿನ್ನೆಲೆಯಲ್ಲಿ ಜೆ. ಪಿ. ಯವರ ಕಾವ್ಯವು ಹಿಂಸಾತ್ಮಕ ಕ್ರಮಗಳಿಗಿಂತ ಬುದ್ಧನ ಮೈತ್ರಿ ಕರುಣೆಗಳ ಕ್ರಮಗಳೇ ಒಳ್ಳೆಯದೆಂಬ ನಿಲುವನ್ನು ವ್ಯಕ್ತಪಡಿಸುತ್ತದೆ. ಇದು ಬಹಳ ಮುಖ್ಯವಾದುದು. ಕಟ್ಟುವ ಕ್ರಿಯೆ ರಚನಾತ್ಮಕವಾದುದು. ಇದಕ್ಕಾಗಿ ಬಳಸುವ ಪರಿಕರಗಳ ಬಗ್ಗೆ ಎಚ್ಚರದಿಂದಿರುವುದು ಅಗತ್ಯ. ಆಗ ಮಾತ್ರ ನಾವು ಕಟ್ಟುವಿಕೆಯ ಕ್ರಿಯೆ ವಿಶಾಲಾರ್ಥದಲ್ಲಿ ಸಾಧಿತವಾಗುತ್ತದೆ. ಈ ಸಂದಿಗ್ದವನ್ನು ಎದುರಿಸಿದ್ದರಿಂದಲೇ ಜೆ. ಪಿ. ಕಾವ್ಯಕ್ಕೆ ಮೊರೆ ಹೋದರೆ?
ಜೀವಕ್ಕೆ ಒಂದು ಪ್ರೀತಿ
ಒಂದು ಗುಟುಕು ನೀತಿ
ಗೂಡು ಕಟ್ಟಲೊಂದು ಮರ
ಜೊತೆ ಉಳಿಯಬಿಡಿ
(ಬಂಧಿ ಹಕ್ಕಿಯ್ ಅಆಸೆ)

ಈ ಆಶಯ ಪುನರಾವರ್ತನೆಯಾಗಿ ಕಾಡುವುದು. ಪ್ರಪಂಚದ ಎಲ್ಲಾ ಹೋರಾಟಗಾರರ ಆಶಯವೂ ಇದೇ ಎನ್ನುವುದು ಗಮನಿಸಬೇಕಾದ ಆಂಶ.

ನಿರ್ವಸಾಹತೀರಣದ ಪ್ರಕ್ರಿಯೆ ಜೆ.ಪಿ ಕಾವ್ಯದ ಪ್ರಧಾನ ನೋಟ ಎಂದು ಭಾವಿಸಬಹುದಾದರೂ ಈಗಾಗಲೇ ಹೇಳಿದಂತೆ ಕುವೆಂಪು ವಿಕಾಸವನ್ನೆ ಅಲ್ಲಿ ಗುರುತಿಸಬಹುದು. ಸಾಮಾಜಿಕ ಕಾಳಜಿಗಳು ರೂಪುಗೊಳ್ಳುವ ವಿಶ್ವಮಾನವ ಪ್ರಜ್ಞೆಗೆ ಜೆ.ಪಿ. ಹತ್ತಿರವಿದ್ದಾರೆ. ಇದರಲ್ಲಿ ಶಿಷ್ಟ ಪರಂಪರೆಯ ದನಿಯಷ್ಟೇ ಅಲ್ಲದೆ, ಜನಪದ ಪರಂಪರೆಯ ದನಿಯೂ ಅಡಗಿದೆ. ಸಾವುನೋವುಗಳನ್ನು ಅಷ್ಟಾಗಿ ಇಚ್ಛಿಸದ ಜಾನಪದರು, ಮದುವೆ, ಪ್ರೇಮದಂತಹ ಫಲವಂತಿಕೆಯ ಸಂಗತಿಗಳನ್ನು ಇಚ್ಛಿಸುತ್ತಾರೆ ಎಂದು ಕೃಷ್ಣಮೂರ್ತಿ ಹನೂರರು ಹೇಳುತ್ತಾರೆ. ಅದರಂತೆ ಸಾವು, ಹಿಂಸೆಗಳೆನ್ನುವುದು ಜೀವವಿರೋಧಿ ಧೋರಣೆಗಳಾಗಿ, ಜೀವಪರ ನಿಲುವುಗಳನ್ನು ತಳಿಯಲು ಪ್ರೇರೇಪಿಸುವ ನೆಲದ ಸಂಸ್ಕೃತಿಯನ್ನು ಜೆ.ಪಿ ಮುಂದುವರೆಸುತ್ತಾರೆ ಅನ್ನಿಸುತ್ತದೆ. ‘ನಾನೊಬ್ಬ ಸೈನಿಕ/ಸಾವಲ್ಲ ನನ್ನ ಗುರು’ ಎಂದು ಇಲ್ಲಿ ಹೇಳುವ ಸೈನಿಕನ ದೃಷ್ಟಿ ಜೀವಪರವಾದುದು. ಈ ದೃಷ್ಟಿಯಿಂದ ಹಾಗೂ ಮಿಲ್ಪನ್ ಹೋಮರ್ ವೆಂಕಣ್ಣಯ್ಯನವರನ್ನೆಲ್ಲ ತಮ್ಯ ಕಾವ್ಯದಲ್ಲಿ ಒಂದು ಬಿಂದುವಿನಲ್ಲಿ ಗುರುಸ್ಥಾನದಲ್ಲಿ ತ೦ದು ನಿಲ್ಲಿಸುವ ಶ್ರೀರಾಮಾಯಣದರ್ಶನಂ ಕೃತಿಯ ಕುವೆಂಪು ಘೋಷಿಸಿದ ಅನಿಕೇತನ ಸ್ವರೂಪದ ದೃಷ್ಟಿಯನ್ನು ನೆಲದ ಸತ್ವವಾಗಿ ಜೆ.ಪಿ ಮುಂದುವರೆಸುತ್ತಾರೆ. ಎಲ್ಲ ಹೋರಾಟಗಾರರು ಇಲ್ಲಿ ಒಂದುದನಿಯಾಗಿ, ನೇಯ್ಗೆಯ ವಿನ್ಯಾಸದಲ್ಲಿ ಇಲ್ಲಿ ಒಂದು ಅನಿಕೇತನ ಪ್ರಜ್ಞೆಯನ್ನು ಬಿಂಬಿಸುವುದು ಜೆ.ಪಿ ಕಾವ್ಯದ ಒಲವು ಮತ್ತು ಧೋರಣೆಯಾಗಿದೆ.

ಇಡಿಯಾದ. ಕಾವ್ಯದಾರಿಯಲ್ಲಿ ಜೆ.ಪಿ ಬಿಕ್ಕಟ್ಟುಗಳನ್ನು ಎದುರಿಸಿಲ್ಲ ಎಂದು ಹೇಳುವ೦ತಿಲ್ಲ. ಸಾಮಾಜಿಕ ಕಾಳಜಿಗಳೇ ಪ್ರಧಾನವಾದಂತಹ ಸಂದರ್ಭದಲ್ಲಿ ಕೃತಕತೆ ಇಣುಕುವ ಅಪಾಯವನ್ನು ಕವಿ ಎದುರಿಸಬೇಕಾಗುತ್ತದೆ. (ವೈಯಕ್ತಿಕ ಸಂಕಟವನ್ನು ಬರೆಯಬಹುದು, ಆದರೆ ಸಾಮಾಜಿಕ ಸಂಕಟವನ್ನು ಬರೆಯುವುದು ಕಷ್ಟ ಎಂದು ಅನಂತಮೂರ್ತಿ ಹೇಳುವುದನ್ನಿಲ್ಲಿ ನೆನೆಯಬಹುದು) ಕ್ಯಾನ್ವಾಸ್ ದೊಡ್ಡದಾದಂತೆ ಎಳೆಗಳ ನಿರ್ವಹಣೆಯು ಕೆಲವೊಮ್ಮೆ ಜಾಳಾಗುವ ಸಾಧ್ಯತೆ ಇದೆ. ಯಾವ ಕಾಲಕ್ಕೂ ಹೋರಾಟಗಳ ಹುರುಪು ಹಾಗೆಯೇ ಉಳಿದಿರುತ್ತದೆಯೆಂದು ಹೇಳಲು ಬರುವುದಿಲ್ಲ. ಆಗ ಏಕತಾನತೆಯ ಶಾಪವೂ ತಟ್ಟುವ ಸಾಧ್ಯತೆಯಿದೆ. ವ್ಯವಸ್ಥೆಯನ್ನು ಬದಲಾಯಿಸುವ ಕೆಚ್ಚು ಕ್ರಮೇಣ ಸಿನಿಕತೆಯನ್ನು ತಳೆಯಬಹುದು. ಇಂಥ ಅನೇಕ ಹೊರಳುಗಳನ್ನು ಜೆ. ಪಿ. ಯವರ ಕಾವ್ಯವು ಅನುಭವಿಸುತ್ತಲೇ ತನ್ನದಾದ ಎಂದು ದಾರಿಯನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಿಯಾಶೀಲವಾಗುತ್ತದೆ. ಜೆ.ಪಿ ಯವರ ಪ್ರೀತಿಯ ಕವಿ ನೆರೂಡಾನಂತೆ ಬದಲಾದ ಸನ್ನಿವೇಶಗಳಿಗೆ ನುಡಿಗಟ್ಟುಗಳನ್ನು ರೂಪಿಸಿಕೊಳ್ಳುವ ಅವರು ‘ಕವಿಸಮಯಗಳ ಗರ್ಭಪಾತವಾಗಿದೆ’ ಎಂದು ಘೋಷಿಸುತ್ತಾರೆ. ಆ ಮೂಲಕ ನೆಲದ ಒಡಲಿನ ಪ್ರತಿಮೆಗಳಿಗೆ ಜೀವ ಕೊಡುವ ಪ್ರಯತ್ನವನ್ನು ಮಾಡುತ್ತಾರೆ. ಇದರಿಂದ ಕೂಡ ಅವರ ಕಾವ್ಯ ಆಸಕ್ತಿ ಹುಟ್ಟಿಸುತ್ತದೆ.

ಜಗತ್ತಿನ ಮಹಾಘನ ಮೌನಕ್ಕೆ ಪ್ರತಿಯಾಗಿ ಚರಿಸುವ ಜೀವಗಳ ಪ್ರತಿಫಲನ ವ್ಯಷ್ಟಿ ಮತ್ತು ಸಮಷ್ಟಿಯಪೂರಕ ಪ್ರಜ್ಞೆಯಂತೆ. ಅದನ್ನು ವಿಶ್ವಾತ್ಮಕ ನೆಲೆಯಲ್ಲಿಟ್ಟು ನೋಡುವ ತಾತ್ವಿಕ ದೃಷ್ಟಿಕೋನ ಜೆ. ಪಿ. ಕಾವ್ಯದಲ್ಲಿದೆ. ಹೀಗಾಗಿ ಅದನ್ನು ಓದುವುದೆಂದರೆ ಓದು ಮಾತ್ರ ಅಲ್ಲ ಪ್ರಜ್ಞೆಯವಿಕಾಸವೂ ಹೌದು. ಅವರ ಪದ್ಯದ ಸಾಲುಗಳೇ ಈ ಲೇಖನಕ್ಕೆ ಸಮಾಪ್ತಿ ಒದಗಿಸುವಂತಿವೆಯಾದ್ದರಿಂದ ಅವುಗಳನ್ನು ಇಲ್ಲಿ ಕೊಡುತ್ತಿದ್ದೇನೆ.
ಶಬ್ಬ ಶಬ್ಬದ ನಡುವೆ ನಿಶ್ಶಬ್ಬ
ಅದೇ ಮೌನದೊಳಗಿನ ಮಾತು
ಜಾದೂಗಾರನ ಹ್ಯಾಟಿನೊಳಗಿನ ಬಾತು.
(ಸಂಕ್ರಮಣ)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹತ್ತು ದಿವಸದಾಕಾರ ಮೊಹೋರುಮ
Next post ಸೈಬರ್ನಾಟಕ ಮಾತೆ

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

cheap jordans|wholesale air max|wholesale jordans|wholesale jewelry|wholesale jerseys