ಹತ್ತು  ದಿವಸದಾಕಾರ ಮೊಹೋರುಮ
ಗೊತ್ತನರಿಯದಾದರೆ ಕತ್ತೆ                |ಪ|

ಮತ್ತೆ ಬೊಗಳುವಾ ಶ್ವಾನಕವಿ ಯಾ-
ವತ್ತು ರಿವಯತು ಹೇಳುತಿಹ             |ಅ-ಪ.|

ಮೇದಿನಿಯೊಳು ಬೈದಾಡೋ ಸವಾಲೊಂದು
ಹೋದ ವರುಷ ಹೇಳಿದಿ ಬಂದು
ವಾದ ಬಿಡೋ ಈ ವರುಷ ಐಸುರದಿ
ಭೇದನರಿಯದಾದೆಲೆ ಕತ್ತೆ               |೧|

ಬೆಲ್ಲ ಓದಿಸುವ ಬಿಸ್ಮಿಲ್ಲನರಿಯದೆ
ಮುಲ್ಲನೊಲವಿಗೊಲ್ಲರ ಕತ್ತೆ
ಮುಲ್ಲ ಖಾಜಿ ಖತೀಬ ಮುಸಲ್ಮಾನ
ಹುಲ್ಲು ಹೇರುವ ಗೊಲ್ಲರ ಕತ್ತಿ           |೨|

ದುಡ್ಡಿಗೆ ಬಡ್ಡಿ ತಿಂಬುವ ತುರುಕರು
ದಡ್ಡತನದಿ ಒಡ್ಡರ ಕತ್ತೆ
ಗಡ್ಡ ಬಿಟ್ಟು ಸುಳ್ಳಾಡು ಮುಸಲ್ಮಾನ
ಮಡ್ಡಕೊರವರ‍್ಹೇ‍ರ‍್ಯಾಡೋ ಕತ್ತೆ         |೩|

ದುಡ್ಡು ಕಾಸಿಗೆ ತಿರಕೊಂಬುವ ಫಕೀರರು
ವೇಷತಾಳಿ ತಿರುಗುವ ಕತ್ತೆ
ವಸುಧಿಗೆ ಶಿಶುನಾಳಧೀಶನೊಳು
ಧ್ಯಾಸವಿಲ್ಲದ ಹೇಸರಗತ್ತೆ               |೪|
*****