ಹೃದಯ ಆರಿಸುತ್ತಲಿದೆ
ಒಂದು ಆಸರೆಗಾಗಿ ಈ
ಧೂಳು ತುಂಬಿದ ಓಣಿಯಲಿ
ಹೆಜ್ಜೆ ಸಪ್ಪಳಗಳೇ ಕೇಳಿಸುತ್ತಿಲ್ಲ |
ಈ ಜೀವನ ಕೊಟ್ಟವನೇ ಕೇಳು
ಪರಿತಪಿಸುತಲಿದೆ ಹೃದಯ ಒಂದು
ಒಲವಿನ ಭೇಟಿಗಾಗಿ
ಅಂತರಾಳದ ಮೂಕ ರಾಗ ಕೇಳಿಸುತ್ತಿಲ್ಲವೇ?
ಎಲ್ಲೆಲ್ಲೋ ಹರಿದಾಡಿದ ಮನಸ್ಸು
ಕೇಳುತಿದೆ ಒಂದು ಒಲವಿನ ಸ್ಪರ್ಶ
ಎಲ್ಲಿಯೂ ಒಂದು ಧ್ವನಿ
ಈ ಸಂತೆಯಲಿ ಹೊರಟವರಿಗೆ ಕೇಳಿಸುತ್ತಿಲ್ಲ |
ಹೊತ್ತಿ ಉರಿಯುವ ಹೃದಯಕೆ
ಶಾಂತ ಸರಳವಾದ ಒಂದು ಹಾಡು
ಹೊರಗೆ ಹಸುರಿನ ಬಯಲು
ಒಳಗೆ ಒಂದು ಮರ್ಮರ ಕೇಳಿಸುತ್ತಿಲ್ಲ |
ಬರೀ ಯಾತನೆಯ ನರಳಾಟ
ರಾತ್ರಿಯ ಪಹರಿಗೆ ಬೆಳದಿಂಗಳು
ಬಿಕ್ಕುಗಳು ಹರಡಿದ ಹಾಸಿಗೆ
ಆ ದಿನಗಳು ನೆನಪಿಗೆ ಬರುವದಿಲ್ಲ |
ಎಲ್ಲಿ ಹೋದರೂ ಮತ್ತೆ ಮಳೆಯ
ರಾತ್ರಿ ನೀ ಮರಳಿ ಬರುವೆಯಾ
ಎಲ್ಲಾ ಕನಸುಗಳೆ ನೆರಳ ಸವರಿ
ಆದರೂ ಯಾವುದೂ ಅಚ್ಚಾಗುವುದೇ ಇಲ್ಲ?
*****