ಓ ಬೆಂಕಿ! ಸಾಗರದ ನೂರ್ಲಕ್ಷ ಅಲೆಗಳಿಗೆ
ಬೆಂಕಿ ಹೊತ್ತಿಸಿದಂತೆ ಕೆನ್ನಾಲಗೆಯನೆತ್ತಿ
ಹೊರಳಿಸಿದೆ! ಈಗಿನ್ನು – ಕಳೆದಿಲ್ಲ ಅರೆಗಳಿಗೆ!-
ದಡದ ಮರಳಿನ ಅಮಿತ ಸೇನೆಯನು ಹಿಂದೊತ್ತಿ,
ತಡಿಯೆಲ್ಲ ತನಗೆಂದು, ಮುನ್ಮುಂದೆ ಒತ್ತೊತ್ತಿ,
ಮೇಲೇರಿ, ಗರ್ಜಿಸುತ, ನೀಲಿಮಯ ಆಗಸಕೆ
ಸಾರಿ ತನ್ನದೆಯಾಸೆ, ಕೆರಳಿ, ತಡಿಯನು ಮುತ್ತಿ
ನೊರೆಯಾಗಿ ಹರಿದಾಡಿ, ಮುರಿದಿರಲು ಮನದೆಣಿಕೆ
ಹಿಂದೋಡಿ, ಮಗುದೊಮ್ಮೆ ಮೈಲಿಯತ್ತರದೊಂದು
ಹಾವಿನಾಕಾರದಿಂ ಬಂದು ಹೆದರಿಸಹೊರಟು
ದಡದೆಡೆಗೆ ಸರಿದಂತೆ, ಹೆಡೆ ಭೂಮಿಗಿಳಿತಂದು
ಬರಿಯ ಅಡಿ ನೀರಾಗಿ, ಎದೆಯಾಸೆ ಸುಳಿಮುರುಟು
ಸಸಿಯಾಗಿ- ದ್ವೇಷದಿಂ, ಕೋಪದಿಂ, ಉರಿಹತ್ತಿ,
ಸಾಗರವು ಉರಿಯುತಿದೆ-ಕಂಪಲೆಯ ಉರಿಬತ್ತಿ!
*****