ಹುಚ್ಚು ಹಿಡಿದಿದೆ ನನಗೆ
ಹುಚ್ಚು ಹಿಡಿದಿದೆ

ಕನ್ನೆಯರೆದೆ ಕಳ್ಳನ
ಬೆಣ್ಣೆ ಸೂರೆಗೊಳುವನ
ಕಣ್ಣು ಹೊಡೆದು ಜಡೆಯನೆಳೆದು
ಸಣ್ಣನಗುವ ಮಳ್ಳನ
ಹುಚ್ಚು ಹಿಡಿದಿದೆ

ಮುನಿಸಿಕೊಂಡ ಹೆಣ್ಣಿನ
ಮನ ಬದಲಿಸಿ, ಕಣ್ಣಿನ
ಮಿಂಚು ಹರಿಸಿ ನಮ್ಮ ಮನವ
ಲೂಟಿ ಹೊಡೆವ ಚಿಣ್ಣನ
ಹುಚ್ಚು ಹಿಡಿದಿದೆ

ಈ ಸೃಷ್ಟಿಯ ಸಾರನ
ಶೃಂಗಾರದ ಮಾರನ
ಮಾಯೆಯಲ್ಲಿ ಕೆಡವಿ ಜಗವ
ಕುಣಿಸುವಂಥ ಧೀರನ
ಹುಚ್ಚು ಹಿಡಿದಿದೆ

ಗೋಕುಲದ ಸೂರ್ಯನ
ಬೃಂದಾವನ ಚಂದ್ರನ
ಕಾನು ಮಲೆ ಪ್ರಾಣಿ ಪಕ್ಷಿ
ಪ್ರಜ್ಞೆಯಾಳ್ವ ಬ್ರಹ್ಮನ
ಹುಚ್ಚು ಹಿಡಿದಿದೆ
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)