ಅದನ್ನು ಅಳೆಯಬಹುದೇ? ಅದು ಒಂದು ಫೌಂಟನ್ ಪೇನಿಗಿಂತ ಉದ್ದವಿಲ್ಲವೆನ್ನುವವರಿವರು. ರಂಗಪ್ಪನೂ ವಾಸುವೂ ಗೆಳೆಯರು. ಅವರ ಗೆಳೆತನವೆಂದರೆ ಊರಲ್ಲೆಲ್ಲ ಹೆಸರಾದುದು. ಇಬ್ಬರೂ ದಿನದ ಇಪ್ಪತ್ತನಾಲ್ಕು ತಾಸುಗಳಲ್ಲಿಯೂ ಒಟ್ಟಿಗೆ ಇರುವರು. ಒಂದು ದಿನ ವಾಸುವಿಗೆ ರಂಗಪ್ಪನ ಮನೆಯಲ್ಲಿ ಊಟವಾದರೆ, ಮತ್ತೊಂದು ದಿನ ರಂಗಪ್ಪನಿಗೆ ವಾಸುವಿನ ಮನೆಯಲ್ಲಿ. ಇವರ ಸ್ನೇಹವು ಊರಲ್ಲಿ ನಿಜಕ್ಕೂ ಗಾದೆಯ ಮಾತಾಗಿ ಹೋಗಿದೆ.

ಒಂದು ದಿನ ವಾಸುವು ರಂಗಪ್ಪನಿಗೆ ಮೇರಿಪಿಕ್ ಫರ್ಡಳ ಚಿತ್ರವಿರುವ ಒಂದು ಪೋಸ್ಟ್ ಕಾರ್ಡನ್ನು ಪ್ರೇಮದಿಂದ, “ಬೇಡದೆ ಕೊಡಲು”, ರಂಗಪ್ಪನ ಪ್ರೇಮವು ಇಮ್ಮಡಿಯಾಗಿ ಉಕ್ಕಿ, “ವಾಸೂ-ನಮ್ಮ ಸ್ನೇಹವು ಜನ್ಮ ಜನ್ಮಕ್ಕೂ ಕಡಿದುಹೋಗಲಾರದು!” ಎಂದನು.

“ನವು ಮುಂದೆ ಎಲ್ಲಿಯಾದರೂ ಹುಳುಗಳಾಗಿ ಹುಟ್ಟಿದರೂ ಒಟ್ಟಿಗೇ ಹುಟ್ಟಿ-ಗೆಳೆತನದಿಂದಲೇ ಇರಬೇಕು!” ಎಂದನು ವಾಸು.

ಇಬ್ಬರೂ ಹೆಚ್ಚಿಗೇನೂ ಮಾತಾಡಲಾರದಾದರು, ಪ್ರೇಮದಿಂದ ಇಬ್ಬರ ಎದೆಗಳೂ ಉಬ್ಬಿ, ಉಸಿರಿಗೇ ಸ್ಥಳವಿರಲಿಲ್ಲ, ಕಂಠಗಳು ಪೂರ್ಣವಾಗಿದ್ದುವು.

ರಂಗಪ್ಪನ ಮನೆಯ ಆಸ್ತಿಯ ಲೆಕ್ಕಗಳನ್ನಿಡುವ ಕರಣೀಕನು ರಾಜಪ್ಪ. ಅವನಿಗೆ ರಂಗಪ್ಪನ ತಂದೆಯಿಂದ, ರಂಗಪ್ಪನಿಂದ, ರಂಗಪ್ಪನ ಸಂಬಂಧಿಕರಿಂದ, ಅತ್ತ ಇತ್ತ ಹೋಗುವಾಗ ತನ್ನನ್ನು ಪರಿಚಯದ ನಗುವಿನಿಂದ ಸನ್ಮಾನಿಸಿದವರಿಂದ ಸಾಲ ಬೇಡುವ ಅಭ್ಯಾಸ. ಅವನು ರಂಗಪ್ಪನ ತಂದೆಯಿಂದ ಪಡೆದ “ಅಡ್ವಾನ್ಸು”, ಅವನನ್ನು ಇನ್ನು ಮೂರು ವರ್ಷಗಳ ತನಕ ದುಡಿದು ಸಲ್ಲಿಸಬೇಕಾದ ಋಣಕಂಭಕ್ಕೆ ಬಂಧಿಸಿತ್ತು. ಅದರ ಮೇಲೆ ಅವನು ಮಾಡುತಿದ್ದುದೆಲ್ಲ “ಸಾಲ”. ರಂಗಪ್ಪನಿಗೆ ಅವನು ಕೊಡಬೇಕಾಗಿದ್ದುದು ಹನ್ನೆರಡಾಣೆಗಳು!

ರಂಗಪ್ಪನು ಆ ಹನ್ನೆರಡು ಆಣೆಗಳಿಗಾಗಿ ಹನ್ನೆರಡು ಯುಗ (ತಿಂಗಳು; – ತಿಂಗಳನ್ನು ರಂಗಪ್ಪನು, ತನ್ನನ್ನಾರಾದರೂ ದುಃಖಗೊಟ್ಟು ಪೀಡಿಸಿದರೆ ‘ಯುಗ’ವೆಂದು ನಾಮಕರಣ ಮಾಡುವನು.) ಪೇಚಾಡಿದನು. ಕೊನೆಗೆ, ಉಪಾಯಗಾಣದೆ, ರಾಜಪ್ಪನಿಗೆ ಬುದ್ಧಿಗಲಿಸಬೇಕೆಂದು, ಆತನ “ವಾಟರ್
ಮೇನ್” ಪೇನನ್ನು ಮೆಲ್ಲನೆ ಎತ್ತಿಬಿಟ್ಟನು.

“ಭದ್ರವಾಗಿಡು!” ಎನ್ನುತ್ತ ರ೦ಗಪ್ಪನು, ಅದನ್ನು ವಾಸುವಿನ ಕೈಯಲ್ಲಿ ಕೊಟ್ಟನು. ಗೆಳೆತನದ ಪ್ರಕಾಶವೆಲ್ಲವೂ ವಾಸುವಿನ ಮುಖದ ಮೇಲೆ ಮಿನುಗಿತು.

‘ಹಣದ ತಗಾದೆ’ ಎನ್ನುತ್ತಿರಲ್ಲ- ಅದು ಹೇಗೆ ಉಂಟಾಗುತ್ತದೆ ಎಂಬುದನ್ನು ಹೇಳುವುದು ತೀರ ಅನಾವಶ್ಯಕ. ನೀವೆಲ್ಲರೂ ಅದನ್ನು ಚೆನ್ನಾಗಿ ಬಲ್ಲಿರಿ; ಅನುಭವಿಸಿರುವಿರಿ. ಹೋಟೇಲಿನ ರಾಮಣ್ಣನು ವಾಸುವನ್ನು ಒಂದು ದಿನ ಹಣಕ್ಕಾಗಿ ಪೀಡಿಸಲು ವಾಸುವ ದಿಕ್ಕುಗೆಟ್ಟು, ಆ ಫೌಂಟನ್ ಪೇನನ್ನು ರಾಮನಾಯಕನೆಂಬಲ್ಲಿ ಒಂದು ರೂಪಾಯಿಗೆ ಒತ್ತೆ ಇಟ್ಟು, ಸಂಕಷ್ಟದಿಂದ ಪಾರಾದನು. ಅಂದೇ, ರಂಗಪ್ಪನು ಬಂದು, “ವಾಸೂ, ಆ ಫೌಂಟೆನ್‍ಪೇನ್ ಎಲ್ಲಿದೆ?” ಎಂದನು.

ಇಂತಹ ಸ್ಥಿತಿಯಲ್ಲಿ ನೀವೇನು ಮಾಡುವಿರಿ?

“ಮಿತ್ರಾ!”-ವಾಸುವಿನ ಕಂಠವು ಗದ್ಗದಿತವಾಯಿತು, “ಮಿತ್ರಾ! ಹೇಳಿದರೆ ನೀನು ನಂಬುವಿಯೋ ಇಲ್ಲವೋ! ಕೊಡಿ ಯಾಲಬೈಲಿನ ಆ ದೊಡ್ಡ ಹಳ್ಳದ ಮೇಲಿನ ಸಂಕವಿಲ್ಲವೇ? ನಿನ್ನೆ ಅದರ ಮೇಲೆ ನಿಂತು ಬಾಗಿ, ನೀರನ್ನು ನೋಡುತಿದ್ದಾಗ….. ‘ಕ್ಲಿಪ್ಪು’ ಸಿಕ್ಕಿಸಿರಲಿಲ್ಲ ಮಿತ್ರಾ… ಅಯ್ಯೋ ದೇವ… ನೀರಿಗೆ ಬಿದ್ದುದನ್ನು ಒಂದು ತಾಸು ಹುಡುಕಿದರೂ ಸಿಕ್ಕಲಿಲ್ಲ!” ಮಂದಾರ ಪುಷ್ಪವನ್ನು ಕಳಕೊಂಡ ಬಕಾವಲಿಯ ಚರ್ಯೆಗಿಂತಲೂ ಕರುಣಾಜನಕ ವಾದ ಚರ್ಯೆಯು ವಾಸುವಿನದು!

ರಂಗಪ್ಪನು ತನ್ನ ಕಿಸೆಯಿಂದ ಫೌಂಟನ್‌ಪೇನನ್ನು ವಾಸುವಿನ ಮುಂದೆ ಹಿಡಿದು ಸ್ಥಿರದೃಷ್ಟಿಯಿಂದ ಅವನನ್ನು ನೋಡುತ್ತ – “ದೇವರು ದೊಡ್ಡವನು; ಮಹಾ ಜಲಧಿಯಿಂದ ಇದನ್ನುದ್ಧರಿಸಿದನು, ರಾಮನಾಯಕನ ಕೈಯಿಂದ ಇದು ನನಗೆ ಸಿಕ್ಕಿತು. ನನ್ನ ಗೆಳೆತನದ ಬೆಲೆ ತಿಳಿಯಿತೇ?”

ವಾಸುವು ಮೌನ!

“ಒಂದು ರೂಪಾಯಿ!”
*****