ಎಲ್ಲಿರುವೆ ವಾಣಿ, ಮರೆತೆಯ ಹೇಗೆ ಇಷ್ಟು ದಿನ
ನಿನ್ನ ಬಲಸತ್ವಗಳ ಉದ್ದೀಪಿಸುವ ಮೂಲ?
ಬೀಳುಕವಿತೆಗೆ ನೀಡಿ ರಸೋದ್ದೀಪನವನ್ನ,
ಸಣ್ಣದಕೆ ಬಣ್ಣಗಳ ತೀಡಿ ಬಾರಿಸಿ ತಾಳ?
ಮರಳಿ ಬಾ ಮರುಳೆ, ಮೈಗಳ್ಳತನದಲಿ ಕಳೆದ
ಕಾಲಕ್ಕೆ ಸಮನಾಗಿ ಮಧುರ ಕವಿತೆಯ ನುಡಿಸು,
ನಿನ್ನ ಬೆಲೆ ಬಲ್ಲ, ನಿನ್ನೆಲ್ಲ ಜಾಣ್ಮೆಗೆ ಕಲೆಗೆ
ಮೀಟು ಕೊಡಬಲ್ಲ ಹೃದಯಗಳನ್ನು ನೀ ಕುಣಿಸು.
ಏಳು ವಾಣಿಯೆ, ನನ್ನ ಪ್ರಿಯನ ಮಧುಮುಖದಲ್ಲಿ
ಕಾಲವೇನಾದರೂ ಗೆರೆ ಕೊರೆದಿದೆಯ ನೋಡು;
ಇದ್ದಲ್ಲಿ, ಕೊರಗು ಸೊರಗನ್ನೆ ಗೇಲಿಗೆ ತಳ್ಳಿ,
ಕೊಳ್ಳೆ ಹೊಡೆವನು ಕಾಲ ಎನುವುದನೆ ಹುಸಿಮಾಡು,
ಕಾಲನಿಗು ಬೇಗ ನನ್ನೊಲವ ಕೀರ್ತಿಯ ಬೆಳೆಸು,
ಅವನ ಕುಡುಗೋಲು ಕೊಡಲಿಗಳಿಂದ ರಕ್ಷಿಸು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 100
Where art thou, Muse, that thou forget’st so long