ಆರೋಪ – ೧೨

ಆರೋಪ – ೧೨

ಚಿತ್ರ: ಜೆರಾರ್‍ಡ್ ಗೆಲ್ಲಿಂಗರ್‍

ಅಧ್ಯಾಯ ೨೩

ಪ್ರಭಾಕರ ರೆಡ್ಡಿ ಕೇಳಿದ : “ರಾಜಾರಾಮನಿಗೆ ಸ್ಟೇಟ್ಸ್ಗೆ ಹೋಗಲು ಪೋರ್ಡ್ ಫೌಂಡೇಶನ್ ನ ಹಣ ಕೊಡಿಸಿದ್ದಾರೆ ಗೊತ್ತೆ?”

ರೆಡ್ಡಿ ತುಂಬಾ ರೇಗಿಕೊಂಡಂತಿತ್ತು. ತನಗೆ ಗ್ರಾಂಟ್ ಸಿಗಲಿಲ್ಲವೆಂದಲ್ಲ. ರೆಡ್ಡಿಯನ್ನು ಅರಿತವರು ಯಾರೂ ಹಾಗೆ ತಿಳಿದುಕೊಳ್ಳುವುದು ಸಾಧ್ಯವಿರಲಿಲ್ಲ. ಎಲ್ಲ ಆಸೆ ಆಮಿಷಗಳನ್ನೂ ತೊರೆದ ಯೋಗಿಯಂತಹ ಮನುಷ್ಯ. ಸ್ವಾರ್ಥವೆಂಬುದೇ ಇರಲಿಲ್ಲ. ಅನೀತಿ ಅನ್ಯಾಯಗಳೆಂದರೆ ಸಿಡಿದೇಳುವವನು, ಇತರರ ಕಷ್ಟ ಕಾರ್ಪಣ್ಯಕ್ಕಾಗಿ ಮರುಗುವವನು, ಸಂಸ್ಥೆಯ ಸೀನಿಯರ್ ರಿಸರ್ಚ್ ಸ್ಟೂಡೆಂಟುಗಳಲ್ಲಿ ಒಬ್ಬನಾಗಿದ್ದ ರೆಡ್ಡಿಯ ವಯಸ್ಸು ಊಹಿಸುವುದು ಕಷ್ಟ. ಮೂವತ್ತು ಮತ್ತು ನಲವತ್ತರ ನಡುವೆ ಯಾವುದಾಗಿದ್ದರೂ ಇರಬಹುದು, ಮುಖದಲ್ಲಿ ಬಿದ್ದ ಅನೇಕ ಗೆರೆಗಳು ಅನೇಕ ದುಃಖಗಳನ್ನು ಸೂಚಿಸುತ್ತಿದ್ದುವು. ನಿರಾಡಂಬರ ಜೀವಿ, ಅರವಿಂದನಿಗೆ ಈ ಮನುಷ್ಯನನ್ನು ಕಂಡರೆ ಭಯ ಗೌರವ ಕರುಣೆ ಏಕ ಕಾಲದಲ್ಲಿ ಉಂಟಾಗುತ್ತಿದ್ದುವು.

“ಗೊತ್ತಿಲ್ಲ” ಎಂದ ಅರವಿಂದ.

ಸುದ್ದಿ ಹೊಸತಾದರೂ ಅವನಿಗೆ ಅಚ್ಚರಿಯೇನೂ ಅನಿಸಲಿಲ್ಲ. ರಾಜಾರಾಮ ತನ್ನದೇ ರೀತಿಯಲ್ಲಿ ಸಾಕಷ್ಟು ವರ್ಚಸ್ಸನ್ನು ಬೆಳೆಸಿಕೊಂಡ ವ್ಯಕ್ತಿ, ಅಕಡೆಮಿಕ್ ವಿಷಯಗಳಲ್ಲಿ ಅವನ ಹೆಸರು ಕೇಳಿಬರದಿರಬಹುದು, ಬುದ್ಧಿಯ ಮೂಲಕ ಸಾಗದುದನ್ನು ಹಣದ ಮೂಲಕ, ನಯವಿನಯದ ಮೂಲಕ ಸಾಧಿಸಬಹುದು ಎಂಬುದಕ್ಕೆ ಆತ ಜೀವಂತ ಉದಾಹರಣೆಯಾಗಿದ್ದ. ಎಲ್ಲರಿಗೂ ಬೇಕಾಗಿದ್ದ ವ್ಯಕ್ತಿ. ಯಾರನ್ನೂ ಯಾವ ಕಾರಣಕ್ಕೂ ಎದುರು ಹಾಕಿಕೊಂಡವನಲ್ಲ, ಬಹುಶಃ ಅವನ ಪಾರ್ಟಿಗಳಿಗೆ ಹೋಗದಿದ್ದ, ಅವನೊಂದಿಗೆ ಡ್ರಿಂಕ್ಸ್ ತೆಗೆದುಕೊಳ್ಳದಿದ್ದ ಮಂದಿ ಸಂಸ್ಥೆಯಲ್ಲಿ ಕಡಿಮೆ.

“ಯಾರಿಗೂ ಗೊತ್ತಿಲ್ಲ. ಅತ್ಯಂತ ಗುಪ್ತವಾಗಿ ನಡೆದಿದೆ. ಅದಕ್ಕೆ ಸಹಾಯಕವಾಗುವಂತೆ ಆತ ತನ್ನ ರಿಸರ್ಚ್ ಟಾಪಿಕ್ಕನ್ನೂ ಬದಲಾಯಿಸಿಕೊಂಡಿದ್ದಾನೆ, ಹೈಲೀ ಇರೆಗ್ಯುಲರ್!” ಎಂದ ರೆಡ್ಡಿ.

“ಏನು ಮಾಡುವುದಕ್ಕಾಗುತ್ತದೆ ?”

ಅರವಿಂದ ಕೇಳಿದ. ಅದರ ಹುಸಿ ಗೊತ್ತಿತ್ತು. ಅದಕ್ಕೆ ರೆಡ್ಡಿಯ ಉತ್ತರವೇನೆಂಬುದನ್ನೂ ಅವನು ಊಹಿಸಬಲ್ಲ. ಇತಿಹಾಸದಲ್ಲಿ ಅತ್ಯುಚ್ಚ ಮಟ್ಟದ ಸಂಶೋಧನೆಯನ್ನು ನಡೆಸಲೆಂದು ಸ್ಥಾಪಿತವಾದ ಸಂಸ್ಥೆ ದೇಶದ ಪ್ರತಿಭಾವಂತರನ್ನು ಆಕರ್ಷಿಸಬೇಕಾಗಿತ್ತು. ಅದಕ್ಕೆ ಬದಲು ಇದೀಗ ಮೀಡಿಯೊಕರ್‌ ಮನುಷ್ಯರ ಆಶ್ರಯ ಸ್ಥಾನವಾಗಿದೆ. ಈ ಸಂಸ್ಥೆಗೆಂದು ರಾಷ್ಟ್ರದ ಬೊಕ್ಕಸದಿಂದ ಅಪಾರವಾದ ಹಣ ವ್ಯಯವಾಗುತ್ತಿದೆ. ಆದರೆ ರಾಷ್ಟ್ರಕ್ಕೆ ಸಂಸ್ಥೆಯ ಕೊಡುಗೆಯೇನು ?

“ಪ್ರತಿಭಟಿಸಬೇಕು” ಎಂದ ರೆಡ್ಡಿ.

ಆತ ನಕ್ಕುದನ್ನು ಯಾರೂ ನೋಡಿದವರಿಲ್ಲ. ಹಿಂದೊಮ್ಮೆ ಕಮ್ಯುನಿಸ್ಟ್ ಪಾರ್ಟಿಯ ಸದಸ್ಯನಾಗಿದ್ದು ಅಲ್ಲೂ ಅನ್ಯಾಯವನ್ನೆದುರಿಸಿ ಹೊರಬಂದಿದ್ದ. ಇವನೊಂದಿಗೆ ಬದುಕಲಾರದೆ ಹೆಂಡತಿ ತವರುಮನೆಗೆ ಹೊರಟುಹೋಗಿದ್ದಳು. ರೆಡ್ಡಿ ಈಗ ಒಂಟಿಯಾಗಿ ನಗರದ ಹಳೆವಠಾರದಲ್ಲಿ ವಾಸಿಸುತ್ತಿದ್ದ. ಸದಾ ಬಿಳಿ ಪೈಜಾಮ ಜುಬ್ಬಾ ಧರಿಸಿ ಓಡಾಡುತ್ತಿದ್ದ ರೆಡ್ಡಿ ಮಾತಿನಲ್ಲಿ ಎಷ್ಟು ಕಟುವೋ ವರ್ತನೆಯಲ್ಲಿ ಅಷ್ಟೇ ಮಿದು,

“ರಾಜಾರಾಮ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾನೆ.”

“ಆದರೆ ಈ ಅನ್ಯಾಯಗಳು…. ಇವುಗಳನ್ನು ಕಂಡು ಸುಮ್ಮನಿರುವುದಕ್ಕಾಗುತ್ತದೆಯೆ ? ಇಲ್ಲಿನ ರಿಕ್ರೂಟ್‌ಮೆಂಟ್, ಫೆಲೊಶಿಪ್ ವಿತರಣೆ ಪಾಲಿಸಿಗಳನ್ನು ನೋಡಿ !”

ಅರವಿಂದ ಅವನನ್ನು ತಡೆಯಲು ಯತ್ನಿಸಿದ.

ಆದರೆ ರೆಡ್ಡಿ-ದುರಂತ ಅವನ ಮುಖದ ಮೇಲಿತ್ತು. ಅದನ್ನು ಯಾರೂ ತಡೆಯುವಂತಿರಲಿಲ್ಲ. ಕೆಲವೇ ದಿನಗಳಲ್ಲಿ ಸಂಸ್ಥೆಯ ಕುರಿತು ಸುಪ್ರಸಿದ್ಧ ಇಂಗ್ಲಿಷ್ ದೈನಿಕವೊಂದರಲ್ಲಿ ಅವನ ಲೇಖನ ಪ್ರಕಟವಾಯಿತು. ಕೆಲವು ವರ್ಷಗಳ ಕಾಲ ಪತ್ರಿಕಾಕರ್ತನಾಗಿ ದುಡಿದಿದ್ದ ರೆಡ್ಡಿ ಅಂಕೆ ಸಂಖೆಗಳ ಆಧಾರ ಸಹಿತ ತನ್ನ ವಾದ ವನ್ನು ಮಂಡಿಸಿದ್ದ.

ರೇ ಚುರುಕಾದರು, ರೆಡ್ಡಿಯ ಹಿನ್ನೆಲೆಯನ್ನು ತಿಳಿದುಕೊಂಡಿದ್ದ ಅವರು ಸಾಧ್ಯವಿರುತ್ತಿದ್ದರೆ ಅವನಿಗೆ ಸಂಸ್ಥೆಗೆ ಪ್ರವೇಶವನ್ನೇ ಕೊಡುತ್ತಿರಲಿಲ್ಲ. ಅದರೆ ರೆಡ್ಡಿ ಒಂದೆರಡು ಪುಸ್ತಕಗಳ ಕರ್ತೃ, ಪ್ರವೇಶನಕ್ಕೆ ಬೇಕಾದ ಅರ್ಹತೆಗಳೆಲ್ಲವೂ ಇದ್ದುವು. ಅವನ ರಾಜಕೀಯ ಒಲವುಗಳನ್ನು ಕಾರಣ ಮಾಡಿ ಪ್ರವೇಶ ನಿರಾಕರಿಸುವಂತಿರಲಿಲ್ಲ.

ಸಂಸ್ಥೆಯಲ್ಲಿದ್ದುಕೊಂಡೇ ಅದಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದವನನ್ನು ಎದುರಿಸಲು ರೇ ತಯಾರಾದರು.

– ನಿರಂಜನ್‌ರೇ ಗೆ ಇಂಥ ಪ್ರಸಂಗಗಳೇನೂ ಹೊಸತಲ್ಲ. ಪೂರ್ವ ಬಂಗಾಲ ದಿಂದ ಮನೆಮಠ ಕಳೆದುಕೊಂಡು ಬಂದು ಹೋರಾಡುತ್ತಲೇ ಮುಂದೆ ಬಂದ ವ್ಯಕ್ತಿ ಅವರು. ಅಕಡಮಿಕ್ ಆಗಿ ಹೆಸರಿಲ್ಲದೇ ಇದ್ದರೂ ಒಳ್ಳೆಯ ಆಡಳಿತಗಾರನೆಂಬ ಪ್ರಸಿದ್ದಿಯಿತ್ತು. ಎಲ್ಲೆಲ್ಲಿ ಗಲಭೆಯಿತ್ತೊ ಅಲ್ಲಿಗೆ ಕೇಂದ್ರ ಸರಕಾರ ಕಳಿಸುತ್ತಿದ್ದುದು ರೇಯನ್ನೇ, ಹಾಗೆ ನೋಡಿದರೆ ಇತಿಹಾಸ ಸಂಶೋಧನ ಸಂಸ್ಥೆಯಲ್ಲಿ ಅಂತಹ ಗಲಭೆಯೇನೂ ಇಲ್ಲ. ಅನೇಕ ವಿಶ್ವವಿದ್ಯಾಲಯಗಳ ರೆಜಿಸ್ಟಾರರಾಗಿ, ಉಪಕುಲಪತಿಯಾಗಿ ಕೆಲಸ ನಿರ್ವಹಿಸಿದ ರೇಗೆ ಇಲ್ಲಿ ಚ್ಯಾಲೆಂಜುಗಳೇ ಇರಲಿಲ್ಲ.

ರೆಡ್ಡಿಯನ್ನು ಬರಹೇಳಿದರು.
“ಕೂತುಕೊಳ್ಳಿ.”
ರೆಡ್ಡಿ ಡೈರಕ್ಟರರ ಚೇಂಬರಿಗೆ ಹೋದುದು ಅದೇ ಮೊದಲ ಸಲ, ನೆಲದ ಮೇಲೆ ಗುಲಾಬಿ ಬಣ್ಣದ ರತ್ನಗಂಬಳಿ ಕೊನೆಯಿಂದ ಕೊನೆಗೆ ಹಾಸಿತ್ತು. ತಿಕ್ಕಿ ಪಾಲಿಶ್ ಮಾಡಿದ ಅಗಲವಾದ ಮೇಜು, ಅದರ ಹಿಂದೆ ಆತ್ಮವಿಶ್ವಾಸವೇ ಮೂರ್ತಿವೆತ್ತಂತೆ ಕುಳಿತ ನಿರಂಜನ್ ರೇ.

ಕುಳಿತುಕೊಳ್ಳ ಹೇಳಿದರು. – ಪೋಪ್ ರಬ್ಬರು ಹಾಕಿದ ಕುರ್ಚಿ ಕುಳಿತಾಗ ಎರಡಿಂಚು ಇಳಿದ ಹಾಗಾಯಿತು.

“ಮಿಸ್ಟರ್ ರೆಡ್ಡಿ”

ರೆಡ್ಡಿ ಆ ಹೊಳೆಯುವ ಚಿಕ್ಕ ಕಣ್ಣುಗಳನ್ನು ನೋಡಿದ. ಅವನಿಗೆ ಯಾವ ಭಯವೂ ಇರಲಿಲ್ಲ. ಯಾವ ರತ್ನಗಂಬಳಿಯ, ಯಾವ ಮೆತ್ತಗಿನ ಕುರ್ಚಿಯು ಅವನ ನಂಬಿಕೆಯನ್ನು ಅಲುಗಾಡಿಸಲಾರವು.

“ನಿಮ್ಮ ಲೇಖನ ಓದಿದೆ,” ಎಂದರು.
“ಯಾದ ಲೇಖನ ?”
“ಸಂಸ್ಥೆಯ ಬಗ್ಗೆ ಬರೆದಿದ್ದಿರಲ್ಲ.”
ಸಿಗರೇಟ್ ಪ್ಯಾಕನ್ನು ಮುಂದೆ ಮಾಡಿದರು.
“ಥ್ಯಾಂಕ್ಸ್, ನನಗೆ ಅಭ್ಯಾಸವಿಲ್ಲ.”
“ಸಂಸ್ಥೆಯ ಬಗ್ಗೆ ನಿಮಗಿರೋ ಕಾಳಜಿ ಕಂಡು ನನಗೆ ನಿಜಕ್ಕೂ ಖುಷಿಯಾಗಿದೆ. ಅಂದರೆ ನಿಮ್ಮ ಎಲ್ಲ ಅಭಿಪ್ರಾಯಗಳನ್ನು ನಾನು ಒಪ್ಪುತ್ತೇನೆ ಎಂದಲ್ಲ. ಕೆಲವು ಆಪಾದನೆಗಳನ್ನು ಮಾಡಿದ್ದೀರಿ. ಇದರ ಬಗ್ಗೆ ವಿಚಾರಿಸಿ ತಪ್ಪಿದ್ದರೆ ಸರಿಪಡಿಸುತ್ತೇನೆ. ಈಗ ನಿಮ್ಮನ್ನು ಕರೆಸಿದ ವಿಷಯ….”

ರೇ ಸಿಗರೇಟು ಹಚ್ಚಿ ಹೇಳಿದರು :
“ಎಕಡೆಮಿಕ್ ಕೌನ್ಸಿಲ್‌ಗೆ ವಿದ್ಯಾರ್ಥಿ ಪ್ರತಿನಿಧಿಯಾಗಿ ನಿಮ್ಮನ್ನ ನಾಮಿ ನೇಟ್ ಮಾಡಬೇಕೆಂದಿದ್ದೇನೆ.”
“ನನ್ನನೇ ಯಾಕೆ ?”
“ನೀವೊಬ್ಬರು ಸೀನಿಯರ್ ವಿದ್ಯಾರ್ಥಿ. ಹೊಸ ಹೊಸ ವಿಚಾರಗಳಿವೆ…”
“ಇನ್ನು ಯಾರನ್ನಾದರೂ ಆರಿಸಿಕೊಳ್ಳಬಹುದಲ್ಲ.”
“ಯಾಕೆ ?”
“ಈಗ ನಾನು ಈ ನಾಮಿನೇಶನ್ ಸ್ವೀಕರಿಸಿದರೆ ಅದಕ್ಕೆಂದೇ ಆಪಾದನೆಗಳನ್ನು ಮಾಡಿದ್ದೇನೆ ಎಂದಾಗುತ್ತದೆ. ನನಗೆ ತತ್ವಗಳು ಮುಖ್ಯ.”

“ಕೆಲಸ, ಜವಾಬ್ದಾರಿ ಕೂಡ ಮುಖ್ಯವಲ್ಲವೆ ? ಜವಾಬ್ದಾರಿಯಿಂದ ನೀವು ತಪ್ಪಿಸಿಕೊಂಡ ಹಾಗಾಗುವುದಿಲ್ಲವೆ?”
ರೇಯ ಹಿಂದೆ ಗೋಡೆಯ ಮೇಲೆ ಗಾಂಧೀ ನೆಹರೂ ಪೋಟೋಗಳಿದ್ದುವು. ಇದರಿಂದ ಗಾಂಧೀ ನೆಹರೂ ರೇಯ ಬೆಂಬಲಕ್ಕಿದ್ದಂತೆ ಅನಿಸಬೇಕು ನೋಡುವವರಿಗೆ, ಸರಕಾರೀ ಮರ್ಜಿಯ ರಹಸ್ಯ.

“ಕ್ಷಮಿಸಿ, ನನಗೆ ಈ ನಾಮಿನೇಶನ್ ಬೇಡ,” ಎಂದ ರೆಡ್ಡಿ.
“ಯೋಚಿಸಿ ಹೇಳಿ” ಎಂದರು ರೇ.
“ಯೋಚಿಸುವುದಕ್ಕೇನೂ ಇಲ್ಲ.”
– ಡೈರೆಕ್ಟರರ ಚೇಂಬರಿನಿಂದ ಹೊರಬಂದಾಗ ಸ್ವಾತಂತ್ರ್ಯದ ಕಡೆ ಬಂದ ಹಾಗೆ ಅನಿಸಿತು. ಸ್ವಾತಂತ್ರ್ಯಕ್ಕೂ ಅಡಿಯಾಳುತನಕ್ಕೂ ಎಷ್ಟು ಕಡಿಮೆ ಅಂತರ ! ಈ ಬಾಗಿಲಿನಷ್ಟು ಮಾತ್ರ. ಹಿಂದೆ ತಾನು ಜೈಲಿನಿಂದ ಬಿಡುಗಡೆಗೊಂಡು ಬಂದ ನೆನಪಾಯಿತು. ವಾರ್ಡನ್ ಅವನ ಬಟ್ಟೆಬರೆ, ಚಿಲ್ಲರೆ ಹಣ ವಾಪಸು ಕೊಡುತ್ತ, ಕೀಟಲೆಗೆಂದು ಕೇಳಿದ : “ಇನ್ನು ಭೇಟಿ ಯಾವಾಗ?” ಅದೀಗ ಬಹಳ ಹಿಂದಿನ ಮಾತು, ಪಕ್ಷಪಂಗಡಗಳ ರಾಜಕೀಯದಿಂದ ಮನಸ್ಸು ರೋಸಿಹೋಗಿತ್ತು. ಅದಕ್ಕೊಸ್ಕರ ಅವನು ಎಲ್ಲವನ್ನೂ ಕಳೆದುಕೊಂಡಿದ್ದ-ಹೆಂಡತಿ ಮಕ್ಕಳನ್ನೂ, ಯೌವನವನ್ನೂ, ಕೆಲಸವನ್ನೂ.

ಡೈರೆಕ್ಟರರ ಭೇಟಿಗೆಂದು ಹೊರಗೆ ಕಾಯುತ್ತಿದ್ದವರು ಅವನನ್ನು ತಳ್ಳಿ ಕೊಂಡು ಒಳಕ್ಕೆ ಧಾವಿಸಿದರು.
*****

ಅಧ್ಯಾಯ ೨೪

ದೆಹಲಿಯಲ್ಲಿ ನಡೆಯಲಿದ್ದ ಅಖಿಲ ಭಾರತ ಇತಿಹಾಸಜ್ಞರ ಸಮ್ಮೇಳನದಲ್ಲಿ ಭಾಗವಹಿಸಲು ಅರವಿಂದನಿಗೆ ಸಂಸ್ಥೆಯ ವತಿಯಿಂದ ಡೆಪ್ಯುಟೇಶನ್ ದೊರಕಿತ್ತು. ಸ್ವತಃ ವೈಶಾಖಿಯವರೇ ಅವನ ಹೆಸರನ್ನು ಶಿಫಾರಸು ಮಾಡಿದ್ದರು. ಅರವಿಂದ ಇದು ತನಕ ದೆಹಲಿ ನೋಡಿದವನಲ್ಲ. ಯಾವುದೇ ಸಮ್ಮೇಳನದಲ್ಲಿ ಭಾಗವಹಿಸಿದವನೂ ಅಲ್ಲ. ಎರಡೂ ಒಮ್ಮೆಲೇ ಅಗುವುದಿದ್ದರೆ ಯಾಕೆ ಬೇಡ ಎಂದು ಒಪ್ಪಿದ್ದ. ಸಮ್ಮೇಳನದಲ್ಲಿ ಓದುವ ಪ್ರಬಂಧದ ಅಬ್‌ಸ್ಟ್ರಾಕ್ಟ್ ತಯಾರಿಸಿ ಕಳಿಸಬೇಕಿತ್ತು. ಅಬ್‌ಸ್ಟ್ರಾಕ್ಟ್ ಬರೆದ ಮೇಲೆ ಈ ವಿಷಯದಲ್ಲಿ ಶಕುಂತಳೆ ತುಂಬಾ ಓದಿಕೊಂಡಿದ್ದಾಳೆ ಎಂದು ನೆನಪಾಗಿ ಅವಳಿಗೆ ತೋರಿಸಲೆಂದು ಹುಡುಕಿಕೊಂಡು ಹೋದ.

ಲೈಬ್ರರಿಯ ಸ್ಟಾಕುಗಳ ನಡುವೆ ನಿಂತು ಏನೋ ಪುಸ್ತಕ ನೋಡುತ್ತಿದ್ದಳು ಶಕುಂತಳೆ, ಎಂದಿನ ಲವಲವಿಕೆಯಿರಲಿಲ್ಲ. ಕಂದಿದ ಮುಖ ಅರವಿಂದನನ್ನು ಕಂಡು ಸಣ್ಣಗೆ ಮುಗುಳ್ಳಕ್ಕಳು.

“ಈ ಅಬ್‌ಸ್ಟ್ರಾಕ್ಟ್ ಒಂದಿಷ್ಟು ನೋಡಿ. ನಿಮ್ಮ ವಿಷಯಕ್ಕೆ ಸಂಬಂಧಿಸಿದುದು-ದೆಹಲಿ ಕಾನ್ಫರೆನ್ಸ್‌ಗೆ,” ಎಂದ.

ಶಕುಂತಳೆ ಅಬ್‌ಸ್ಟ್ರ್‍ಆಕ್ಟ್ ಓದಿ, “ಚೆನ್ನಾಗಿದೆ,” ಎಂದು ಹಿಂತಿರುಗಿಸಿದಳು, ಅವಳು ಅರ್ಥಮಾಡಿಕೊಂಡಳೆ ? ಇಲ್ಲವೆ ? ಕೇವಲ ಮರ್ಯಾದೆಗೆಂದು ಹಾಗೆ ಹೇಳಿದಳೆ ? ನಾಗಾರ್ಜುನ ಸಾಗರದ ಘಟನೆಯ ನಂತರ ಶಕುಂತಳೆ ಬಹಳ ಏಕಾಂತವಾಗಿಬಿಟ್ಟಂತೆ ಕಂಡಿತು.

“ಅರವಿಂದ್, ನಿಮ್ಮಲ್ಲಿ ಸ್ವಲ್ಪ ಮಾತಾಡಬೇಕಾಗಿದೆ,” ಎಂದು ಅವಳು ಹೇಳಿದಾಗ ಅರವಿಂದನಿಗೆ ಆಶ್ಚರ್ಯವಾಗಲಿಲ್ಲ.

“ಹೇಳಿ,” ಎಂದ.
ಶಕುಂತಳೆ ಒಂದು ಕ್ಷಣ ಯೋಚಿಸಿ, “ಇಲ್ಲಿ ಬೇಡ,” ಎಂದಳು.
ಇಬ್ಬರೂ ಹೂದೋಟಕ್ಕೆ ಬಂದರು.
ಶಕುಂತಳೆ ಗೊಂದಲದಲ್ಲಿದ್ದಂತೆ ತೋರಿತು, ಸ್ವಲ್ಪ ಹೊತ್ತು ಏನೇನೋ ಮಾತಾಡಿದಳು. ದೆಹಲಿ ಕಾನ್ಫರೆನ್ಸ್ ಯಾವಾಗ ಎಂದು ಮುಂತಾಗಿ.

ನಂತರ ತಟ್ಟನೆ,
“ಕವಿತಳನ್ನು ನೀವು ಪ್ರೀತಿಸುತ್ತೀರಲ್ಲವೆ ?” ಎಂದು ಕೇಳಿದಳು.
ಅರವಿಂದ ನಕ್ಕ.
“ನಿಮಗೆ ಯಾರು ಹೇಳಿದರು ?”
“ನೀವು ಜತೆ ಜತೆಯಾಗಿ ಇರುತ್ತೀರ.”
“ಇದ್ದೆವು. ಈಗಿಲ್ಲ. ಜತೆಯಾಗಿದ್ದಾಗಲೂ ನಮ್ಮ ನಡುವೆ ಅಂಥ ಸಂಬಂಧವೇನೂ ಇರಲಿಲ್ಲ….”

“ನೀವಾಕೆಯನ್ನು ಪ್ರೀತಿಸೋದಿಲ್ವೆ?”
ಶಕುಂತಳೆ ಕಾತರದಿಂದ ಕೇಳಿದಳು,
“ಯಾಕೆ ಆ ಮಾತು?”
ಶಕುಂತಳೆ ಒಮ್ಮೆಲೆ ಹತಾಶಳಾದವಳಂತೆ ಹೇಳಿದಳು :
“ಅರವಿಂದ್‌ ! ನಾನು ಕಷ್ಟದಲ್ಲಿದ್ದೇನೆ…. ರಾಜಾರಾಮ್ ಮತ್ತು ನನ್ನ ಸಂಬಂಧ ನಿಮಗೆ ಗೊತ್ತಿರಬಹುದು. ಎಲ್ಲರಿಗೂ ಗೊತ್ತಿದೆ, ಇದನ್ನು ಮುಚ್ಚಿಡಲು ನಾನೆಂದೂ ಪ್ರಯತ್ನಿಸಿದವಳಲ್ಲ. ಈಗ ಕವಿತ ನಮ್ಮಿಬ್ಬರ ನಡುವೆ ಕಾಲಿರಿಸಿದ್ದಾಳೆ, ರಾಜಾರಾಮ್‌ನನ್ನು ಆಕರ್ಷಿಸಿಕೊಂಡಿದ್ದಾಳೆ, ರಾಜಾರಾಮ್ ನನ್ನನ್ನು ಪ್ರೀತಿಸುತ್ತಿದ್ದ, ನನಗೋಸ್ಕರ ಸಂಪ್ರದಾಯಗಳನ್ನು ಧಿಕ್ಕರಿಸಲು ತಯಾರಿದ್ದ.

“ರಾಜಾರಾಮ ನಿಜಕ್ಕೂ ನಿಮ್ಮನ್ನ ಪ್ರೀತಿಸೋದಾದರೆ ಕವಿತ ಏನು ಮಾಡಲುಸಾಧ್ಯ?”

“ನಿಮಗೆ ಹೆಂಗಸರು ಬೀಸುವ ಬಲೆ ಗೊತ್ತಿಲ್ಲ,” ಎಂದಳು ಶಕುಂತಳೆ ನೀರಸವಾಗಿ.

“ರಾಜಾರಾಮ ಕವಿತಳನ್ನು ಪ್ರೀತಿಸುತ್ತಾನೆ ಅಂತ ನನಗನಿಸೋದಿಲ್ಲ.” ಎಂದ ಆರವಿಂದ.

“ಯಾಕೆ?”
ಶಕುಂತಳೆಯ ದನಿಯಲ್ಲಿದ್ದ ಆಸೆಯನ್ನು ಚಿವುಟುತ್ತ ಹೇಳಿದ :
“ಪ್ರೀತಿಸೋದಕ್ಕೆ ಆತ ಇಂಕೇಪೇಬಲ್, ಅಂಥವರು ತಮ್ಮ ಕೆರೀಯರ ನಲ್ಲದೆ ಇನ್ನೇನನ್ನೂ ಪ್ರೀತಿಸೋದು ಸಾಧ್ಯವಿಲ್ಲ…. ನಿಮಗೆ ಗೊತ್ತಿಲ್ಲ ಆತ ಸದ್ಯದಲ್ಲೇ ಸ್ಟೇಟ್ಸ್ಗೆ ಹೊರಟುಹೋಗುವವನು.”

ಶಕುಂತಳೆ ಅಚ್ಚರಿಗೊಂಡಿದ್ದರೆ ಅದನ್ನು ತೋರಿಸಿಕೊಳ್ಳಲಿಲ್ಲ. ಮಾತಾಡದೆ ಕುಳಿತಳು. ಅರವಿಂದ ಹೇಳಿದ.

“ಫರ್ಗೆಟ್ ಹಿಮ್, ನೀವು ಇಂಟೆಲಿಜೆಂಟ್ ಇದ್ದೀರಿ. ಇಡಿಯ ಭವಿಷ್ಯವೇ ನಿಮ್ಮ ಮುಂದಿರೋವಾಗ ಹೀಗೆ ಹತಾಶರಾಗೋದರಲ್ಲಿ ಅರ್ಥವಿಲ್ಲ. ಮನುಷ್ಯರು ಇಂದು ಬೆರೆಯುತ್ತಾರೆ, ನಾಳೆ ಬೇರಾಗುತ್ತಾರೆ. ಇಂದು ಕೊಟ್ಟ ಮಾತು ನಾಳೆ ಇರೋದಿಲ್ಲ….”

ಆಕೆಯ ಮಾವನೋ ಚಿಕ್ಕಪ್ಪನೋ ಮಾತಾಡಬಹುದಾದಂತೆ ಮಾತಾಡುತ್ತಿದ್ದ. ಆದರೆ ಅವಳು ಮಾತ್ರ ತನ್ನದೇ ಚಿಂತೆಯಲ್ಲಿದ್ದಂತೆ ಕಂಡುಬಂದಳು, ಕೊನೆಗೆ ಇಟ್ ಈಸ್ ಟೂ ಲೇಟ್,” ಎಂದಳು.

“ಯಾವುದಕ್ಕೂ ತಡವಾಗಿಲ್ಲ,” ಎಂದ ಅರವಿಂದ,
“ಕೆಲವೊಂದು ಸಂಗತಿಗಳಲ್ಲಿ ಹಿಂದೆ ಸರಿಯುವುದು ಕಷ್ಟವಾಗುತ್ತದೆ,” ಎಂದಳು ಶಕುಂತಳೆ.

ಇದಾದ ಎರಡು ದಿನಗಳ ನಂತರ ಅರವಿಂದ ರಾಜಾರಾಮನನ್ನು ಕಂಡು ಮಾತಾಡಿದ.
“ಶಕುಂತಳೆ ನಿನ್ನನ್ನು ಪ್ರೀತಿಸುತ್ತಿದ್ದಾಳೆ.”
“ಗೊತ್ತು”
“ನೀನೂ ಅವಳನ್ನು ಪ್ರೀತಿಸುತ್ತಿ ಎಂದು ತಿಳಿದುಕೊಂಡಿದ್ದಾಳೆ.”
“ಅದಕ್ಕೆ ?”
“ಶಕುಂತಳೆ ಇದನ್ನು ಸೀರಿಯಸ್ಸಾಗಿ ತೆಗೆದುಕೊಂಡಿದ್ದಾಳೆ. ನೀನವಳ ಕೈ ಬಿಟ್ಟರೆ ಅವಳೇನಾದರೂ ಮಾಡಿಕೊಳ್ಳಬಹುದು.”

“ಆತ್ಮಹತ್ಯೆ, ಎಲ್ಲ ನನಗಾಗಲೆ ಹೇಳಿಬಿಟ್ಟಿದ್ದಾಳೆ. ಇದಕ್ಕೆಲ್ಲ ತಲೆಕೆಡಿಸಿ ಕೊಳ್ಳುವವನಲ್ಲ ನಾನು. ನಾನಂದುಕೊಂಡೆ ಕವಿತಳ ಬಗ್ಗೆ ಜಗಳ ತೆಗೆಯೋದಕ್ಕೆ ನೀನು ಬಂದ್ದಿದ್ದೀ ಅಂತ. ಅವಳು ನಿನ್ನ ಸ್ವೀಟ್ ಹಾರ್ಟ್ ಅಲ್ಲವೆ?”

“ನನಗೆ ಯಾವ ಸ್ವೀಟ್ ಹಾರ್ಟೂ ಇಲ್ಲ,”
“ಇಲ್ಲವೆ ? ನನಗದು ಗೊತ್ತು, ಒಂದು ರೀತಿಯಲ್ಲಿ ನಾವಿಬ್ಬರೂ ಒಂದೇ ವಂಶದವರು ಕಣೋ, ನನ್ನ ಬಗ್ಗೆ ಕೇಳು, ದಡ್ಡನೆಂದು ಚಿಕ್ಕಂದಿನಿಂದಲೇ ಎಲ್ಲರಿಂದಲೂ ಅನಾದರಿಸಲ್ಪಟ್ಟವನು ನಾನು, ಈ ನೆಲೆಗೆ ಬಂದೆ. ಹೇಗೆಂದು ಕೇಳ ಬೇಡ, ಈಗ ಸ್ಟೇಟ್ಸ್‌ಗೆ ಹೋಗುತ್ತಿದ್ದೇನೆ, ಅಲ್ಲೇ ಡಾಕ್ಟರೇಟ್ ಕೂಡ
ಮಾಡುತ್ತೇನೆ ನೋಡುತ್ತಿರು!” ಎಂದ ರಾಜಾರಾಮ.

ರಾಜಾರಾಮ ಸ್ಟೇಟ್ಸ್ಗೆ ಹೊರಡುವ ದಿನ ಅವನನ್ನು ಬೀಳ್ಕೊಡಲು ವಿಮಾನ ನಿಲ್ದಾಣದಲ್ಲಿ ಅವನ ಹಿರಿಯರು, ಬಂಧು ಮಿತ್ರರು, ಸಂಸ್ಥೆಯ ಬಳಗದವರು ಸೇರಿದ್ದರು. ಅವನು ಮುಂಬಯಿಗೆ ಹೋಗಿ ಅಲ್ಲಿಂದ ಅಮೇರಿಕೆಗೆ ತೆರಳುವವನಿದ್ದ. ಯೂನಿವರ್ಸಿಟಿ ಪ್ರವೇಶನ, ವಸತಿ ಸೌಕರ್ಯ ಎಲ್ಲವೂ ಸುಗಮವಾಗಿ ಏರ್ಪಾಟಾಗಿತ್ತು. ಖುಷಿಯಿಂದ ರಾಜಾರಾಮ ಬಿಮ್ಮನೆ ಬೀಗಿದ್ದ.

ಎಲ್ಲರೆದುರು ಕವಿತ ದೇಶಪಾಂಡೆ ಅವನ ಕೋಟಿಗೆ ಕೆಂಪುಗುಲಾಬಿ ಹೂವೊಂದನ್ನು ಸಿಕ್ಕಿಸಿ
“ಅಲ್ಲಿಗೆ ಹೋದ ಮೇಲೆ ಇಲ್ಲಿನವರನ್ನು ಮರೆಯಬಾರದು,” ಎಂದು ಅವನ ಮುಂಗೈಯನ್ನು ಮಿದುವಾಗಿ ಹಿಸುಕಿದಳು.

“ಎಲ್ಲಾದರೂ ಉಂಟೆ!” ಎಂದ ರಾಜಾರಾಮ.

ವಿಮಾನ ಹೊರಟುಹೋದ ಮೇಲೆ ಡೆಕ್ಕಿನಲ್ಲಿ ಕೋಕ್ ಹೀರುತ್ತ ಕವಿತ ಅರವಿಂದನಿಗೆ ಹೇಳಿದಳು :

“ಇದು ರಾಜಾರಾಮ್‌ನ ಮೊತ್ತಮೊವಲ ವಿದೇಶ ಪ್ರಯಾಣ, ಅಮೇರಿಕಾದಲ್ಲಿ ಅವನಿಗೇನೂ ತೊಂದರೆಯಾಗೋದಿಲ್ಲ. ವಿಮಾನ ನಿಲ್ದಾಣದಲ್ಲಿ ಬಂದು ಅವನನ್ನು ಕರೆದೊಯ್ಯಲು ನಾನು ನನ್ನ ಭಾವನಿಗೆ ಬರೆದಿದ್ದೇನೆ… ಆದರೂ ರಾಜಾರಾಮ್ ತುಂಬಾ ನರ್ವಸ್ ಆಗಿಬಿಟ್ಟಿದ್ದಾನೆ. ಟೈ ಕಟ್ಟಿಕೊಳ್ಳುತ್ತಿರುವಾಗ ಅವನ ಕೈಗಳು ನಡುಗುತ್ತಿದ್ದುವು. ನಾನೇ ನಾಟ್ ಸರಿಮಾಡಿಕೊಟ್ಟೆ, ಪಾಪ ! ಎಷ್ಟಾದರೂ ಸ್ವದೇಶವನ್ನು ಬಿಟ್ಟು ಹೋಗುವುದೆಂದರೆ ಸುಲಭವಲ್ಲ….”

ಬಹಳ ದಿನಗಳ ನಂತರ ಕವಿತ ಅವನೊಂದಿಗೆ ಮಾತಾಡಿದುದು ಅದೇ ಮೊದಲ ಸಲ. ಕಾರಿನಲ್ಲಿ ಡ್ರಾಪ್ ಕೊಡುತ್ತೇನೆ ಬರುತ್ತೀಯಾ ಎಂದು ಕೇಳಿದಳು, ಅರವಿಂದ ತಾನು ನಡೆದುಕೊಂಡೇ ಹೋಗುತ್ತೇನೆ ಎಂದ ಮೇಲೆ ಭುಜ ಕುಣಿಸಿ ಹೊರಟುಹೋದಳು.

ಅರವಿಂದ ವಿಮಾನ ನಿಲ್ದಾಣದಿಂದ ಅಷ್ಟು ದೂರವನ್ನೂ ನಡೆದುಕೊಂಡೇ ಹೋದ. ರಾಜಾರಾಮನನ್ನು ಕಳಿಸಿಕೊಡಲು ಶಕುಂತಳೆ ಬಂದಿರಲಿಲ್ಲ. ಕೆಲವು ದಿನಗಳಿಂದ ಆಕೆಯ ಸುದ್ದಿಯೇ ಇಲ್ಲವಲ್ಲ ಅಂದುಕೊಂಡ.

ಶಕುಂತಳೆ ಸಂಸ್ಥೆಗೆ ಬರುವುದೇ ಅಪರೂಪವಾಯಿತು. ಆಕೆ ಎಲ್ಲೋ ಕೆಲಸ ಹುಡುಕುತ್ತಿದ್ದಾಳೆಂಬ ಸುದ್ದಿಯಿತ್ತು. ಅವಳನ್ನು ಕಂಡು ಮಾತಾಡಬೇಕೆನಿಸಿದರೂ ಅರವಿಂದನಿಗೀಗ ಸಮಯವಿರಲಿಲ್ಲ. ಅವನೀಗ ದೆಹಲಿ ಕಾನ್ಫರೆನ್ಸ್‌ನ ಪ್ರಬಂಧವನ್ನು ತಯಾರಿಸುವುದರಲ್ಲಿ ತಲ್ಲೀನನಾದ. ಅದರಲ್ಲಿ ಅವನಿಗೆ ತುಂಬಾ ಸಹಕರಿಸಿದವನು ಪ್ರಭಾಕರ ರೆಡ್ಡಿ, ಡ್ರಾಫ್ಟುಗಳನ್ನು ತಯಾರಿಸುವುದು, ರೆಡ್ಡಿಗೆ ತೋರಿಸುವುದು, ಮತ್ತೆ ತಿದ್ದುವುದು -ಹೀಗೆಯೆ ದಿನಗಳು ಕಳೆದುವು. ಅಷ್ಟರಲ್ಲಿ ಕಾನ್‍ಫರನ್ಸ್ನ ದಿನವೂ ಸಮೀಪಿಸಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಜಾವಾಣಿ
Next post ನಸುಬೆಳಕಲಿ ಮುತ್ತಿತು ಚಂದ್ರನ ರಾಹು

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…